ಕೃಷಿಕರು ಒಗ್ಗಟ್ಟಾಗುವುದಿಲ್ಲ, ರಾಜಕೀಯದಾಚೆಗೆ ಬರಲಾರರು; ಆದರೆ ಕಾಡಾನೆಗಳಿಗೆ ಯಾವುದೇ ಗಡಿ ಇಲ್ಲ..! ದಕ್ಷಿಣ ಕನ್ನಡದ ಕೃಷಿ ಬದುಕು ಉಳಿಯಬೇಕಾದರೆ ಈಗಲಾದರೂ ಜಿಲ್ಲೆಯ ರೈತರು ಒಂದಾಗಬೇಕಿದೆ.
ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಕಾಡಾನೆಯ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಈ ಘಟನೆ ಕೇವಲ ಮತ್ತೊಂದು ಕಾಡಾನೆ ದಾಳಿ ಎಂಬಂತೆ ನೋಡಬೇಕಾದ ವಿಚಾರವಲ್ಲ. ಇದು ಜಿಲ್ಲೆಯ ಕೃಷಿಕರ ಬದುಕಿನ ಮುಂದೆ ನಿಂತಿರುವ ಗಂಭೀರ ಎಚ್ಚರಿಕೆಯ ಗಂಟೆ.
ಕಳೆದ ಕೆಲವು ದಿನಗಳಿಂದ ಬೆಳ್ತಂಗಡಿ ಸೇರಿದಂತೆ ಕಾಡಾನೆ ಹಾವಳಿಗೆ ಒಳಗಾದ ಪ್ರದೇಶಗಳ ಕೃಷಿಕರಲ್ಲಿ ಪ್ರತಿಭಟನೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಪ್ರಶ್ನೆ ಇಂದು ಬೆಳ್ತಂಗಡಿಯದ್ದಷ್ಟೇ ಅಲ್ಲ. ಮಂಡೆಕೋಲು, ತೊಡಿಕಾನ, ಪೂಮಲೆ, ಮರ್ಕಂಜ, ಕಡಬ, ಕಾವು, ಪೆರ್ನಾಜೆ, ನೋಜಿಬೈಲು ಸೇರಿದಂತೆ ದಕ್ಷಿಣ ಕನ್ನಡದ ಹಲವು ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿ ತೋಟಗಳಿಗೆ ದಾಳಿ ಮಾಡುತ್ತಿವೆ.
ವಿಶೇಷವಾಗಿ ಸುಳ್ಯ, ಕಡಬ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕುಗಳ ಅನೇಕ ಗ್ರಾಮಗಳಲ್ಲಿ ಕೃಷಿಕರು ವರ್ಷಗಳಿಂದ ಕಾಡಾನೆಗಳ ಭಯದಲ್ಲೇ ಬದುಕುತ್ತಿದ್ದಾರೆ. ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಸೇರಿದಂತೆ ಹಲವು ಬೆಳೆಗಳ ನಷ್ಟದ ಜೊತೆಗೆ, ಈಗ ಕೃಷಿಕರ ಜೀವಕ್ಕೂ ಅಪಾಯ ಎದುರಾಗಿದೆ. ಈಚೆಗಷ್ಟೇ ಕಾಡಾನೆಯ ಕಾರಣದಿಂದ ಶಾಲೆಗೇ ರಜೆ ನೀಡಲಾಗಿತ್ತು..!.
ಆದರೆ ಇಲ್ಲಿ ಮತ್ತೊಂದು ಸತ್ಯವನ್ನು ಕೃಷಿಕ ಸಮಾಜವೇ ಒಪ್ಪಿಕೊಳ್ಳಬೇಕಿದೆ. ಕೃಷಿಕರು ಪಾಠ ಕಲಿಯುವುದಿಲ್ಲ. ಕೃಷಿಕರು ಒಗ್ಗಟ್ಟಾಗುವುದಿಲ್ಲ. ಕೃಷಿಕರು ರಾಜಕೀಯ ಬಿಡುವುದಿಲ್ಲ…!
ಒಂದು ಪ್ರದೇಶದಲ್ಲಿ ದಾಳಿ ನಡೆದಾಗ ಆ ಪ್ರದೇಶದ ಜನರು ಮಾತ್ರ ಧ್ವನಿ ಎತ್ತುತ್ತಾರೆ. ಇನ್ನೊಂದು ಪ್ರದೇಶದಲ್ಲಿ ಸಮಸ್ಯೆ ಎದುರಾದಾಗ ಉಳಿದವರು ಅದನ್ನು ತಮ್ಮ ಸಮಸ್ಯೆಯೆಂದು ಪರಿಗಣಿಸುವುದಿಲ್ಲ. ಸಮಸ್ಯೆ ತನ್ನ ಮನೆಯ ಬಾಗಿಲಿಗೆ ಬರುವವರೆಗೆ ಕಾಯುವ ಮನೋಭಾವ ಮುಂದುವರಿದರೆ, ಒಂದೊಂದೇ ಗ್ರಾಮ ಕೃಷಿ ನಕ್ಷೆಯಿಂದ ಮರೆಯಾಗುವ ಅಪಾಯವಿದೆ.
ಹಿಂದೆ ಅವಕಾಶವಿತ್ತು; ಆದರೆ ಕೃಷಿಕರು ಒಂದಾಗಲಿಲ್ಲ : ಕಾಡಾನೆಗಳಿಂದ ಸಂತ್ರಸ್ತರಾಗಿರುವ ಸುಳ್ಯ, ಕಡಬ, ಪುತ್ತೂರು ಹಾಗೂ ಬೆಳ್ತಂಗಡಿ ಭಾಗದ ಕೃಷಿಕರನ್ನು ಒಗ್ಗೂಡಿಸಿ ಸಮಾಲೋಚನೆ ಮತ್ತು ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸುವ ಪ್ರಯತ್ನಗಳು ನಡೆದಿದ್ದವು. ಅರಣ್ಯ ಇಲಾಖೆಯ ಮುಂದೆ ಪರಿಣಾಮಕಾರಿ ಪರಿಹಾರಕ್ಕೆ ಒತ್ತಾಯಿಸಲು, ವಿಧಾನ ಪರಿಷತ್ ಸದಸ್ಯರ ಮೂಲಕ ಅರಣ್ಯ ಖಾತೆ ಸಚಿವರನ್ನು ಭೇಟಿ ಮಾಡಿ, ಕನಿಷ್ಠ 80 ಮಂದಿಯ ಸಮರ್ಥ ಇಟಿಎಫ್ ತಂಡವನ್ನು ರಚಿಸಿ ಕಾಡಾನೆಗಳನ್ನು ಕಾಡಿಗೆ ಮರಳಿಸುವ ಕಾರ್ಯಾಚರಣೆ ನಡೆಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿತ್ತು. ಆಸಕ್ತ ಕೃಷಿಕರು ಪ್ರತಿನಿಧಿಗಳನ್ನು ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕೃಷಿಕರಿಂದ ಸ್ಪಂದನೆ ಬರಲಿಲ್ಲ.
ಕಾಡಾನೆ ಸಮಸ್ಯೆಯಿಂದ ನೇರವಾಗಿ ಬಳಲದಿದ್ದರೂ ಕೃಷಿ ರಕ್ಷಣೆಯ ಕಾಳಜಿಯಿಂದ ಕೆಲವರು ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ತೆರಳಿ ಅರಣ್ಯ ಸಚಿವರೊಂದಿಗೆ ಚರ್ಚಿಸಿದ್ದರು. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿಯೂ ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಧ್ವನಿ ಎತ್ತಿದ ಪರಿಣಾಮ ಕೆಲವು ಕ್ರಮಗಳ ಘೋಷಣೆಗಳೂ ಆಗಿವೆ.
ಆದರೆ ಪ್ರಶ್ನೆ ಇನ್ನೂ ಉಳಿದಿದೆ. ನಾಲ್ಕು ತಾಲೂಕುಗಳ ಸಮಸ್ಯೆಯನ್ನು 20–25 ಮಂದಿಯ ಸಣ್ಣ ತಂಡದಿಂದ ಹೇಗೆ ನಿಭಾಯಿಸಲು ಸಾಧ್ಯ? ಇಟಿಎಫ್ ತಂಡಕ್ಕೂ ಜೀವಭಯ. ಇದಕ್ಕಾಗಿ ಸ್ಥಳೀಯ ಯುವಕರನ್ನು ಆಯ್ಕೆ ಮಾಡಿ ಅವರಿಗೆ ಸೀಮಿತ ತರಬೇತಿ ನೀಡಿ, ಟಾರ್ಚ್ ಮತ್ತು ಪಟಾಕಿಗಳೊಂದಿಗೆ ಕಾಡಾನೆಗಳನ್ನು ಓಡಿಸುವ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. ಆದರೆ ಅವರ ಸುರಕ್ಷತೆಯ ಪ್ರಶ್ನೆ ಗಂಭೀರವಾಗಿದೆ.
ಸರಿಯಾದ ವಾಹನಗಳಿಲ್ಲ. ಸ್ವರಕ್ಷಣೆಗೆ ಅಗತ್ಯವಾದ ವ್ಯವಸ್ಥೆಗಳಿಲ್ಲ. ಕಾಡಾನೆಗಳನ್ನು ನಿಯಂತ್ರಿಸುವ ಕಾರ್ಯಕ್ಕೆ ಬೇಕಾದ ಸುರಕ್ಷತಾ ಉಪಕರಣಗಳ ಕೊರತೆಯಿದೆ. ಜೀವದ ಹಂಗು ತೊರೆದು ಕೆಲಸ ಮಾಡುವ ಗುತ್ತಿಗೆ ಆಧಾರದ ಇಟಿಎಫ್ ಸಿಬ್ಬಂದಿಗೆ ಅನಿರೀಕ್ಷಿತ ಅಪಘಾತ ಸಂಭವಿಸಿದರೆ ಸಿಗುವ ಪರಿಹಾರವೂ ಸಮರ್ಪಕವಾಗಿರಬೇಕಿದೆ.
ಕಾಡಾನೆ ನಿಯಂತ್ರಣ ಕಾರ್ಯದಲ್ಲಿ ನೇರವಾಗಿ ಭಾಗವಹಿಸುವ ಸಿಬ್ಬಂದಿಗೆ ಕನಿಷ್ಠ ₹1 ಕೋಟಿ ಮಟ್ಟದ ವಿಮಾ ರಕ್ಷಣೆ, ಅಗತ್ಯವಾದ ತರಬೇತಿ, ಸುರಕ್ಷತಾ ಸಾಧನಗಳು, ಸೂಕ್ತ ವಾಹನಗಳು ಮತ್ತು ಕಾನೂನುಬದ್ಧವಾಗಿ ಅನುಮತಿಸಲಾದ ರಕ್ಷಣಾ ವ್ಯವಸ್ಥೆಗಳನ್ನು ಒದಗಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ಇದು ಸಿಬ್ಬಂದಿಯ ರಕ್ಷಣೆಯಷ್ಟೇ ಅಲ್ಲ; ಕೃಷಿಕರ ರಕ್ಷಣೆಯ ಪ್ರಶ್ನೆಯೂ ಹೌದು.
ಕಾಡಾನೆಗಳಿಗೆ ತಾಲೂಕು ಗಡಿ ಗೊತ್ತಿಲ್ಲ. ಸುಳ್ಯದಲ್ಲಿ ಸಮಸ್ಯೆ… ಕಡಬದಲ್ಲಿ ಸಮಸ್ಯೆ… ಪುತ್ತೂರಿನಲ್ಲಿ ಸಮಸ್ಯೆ… ಬೆಳ್ತಂಗಡಿಯಲ್ಲಿ ಸಮಸ್ಯೆ… ಆದರೆ ಕಾಡಾನೆಗಳಿಗೆ ಈ ತಾಲೂಕುಗಳ ಗಡಿ ಗೊತ್ತಿಲ್ಲ. ಮನುಷ್ಯರು ಆಡಳಿತದ ಅನುಕೂಲಕ್ಕಾಗಿ ಗಡಿಗಳನ್ನು ಮಾಡಿಕೊಂಡಿದ್ದಾರೆ. ಕಾಡುಪ್ರಾಣಿಗಳಿಗೆ ಆ ಗಡಿಗಳ ಪರಿಚಯವೂ ಇಲ್ಲ, ಅವಶ್ಯಕತೆಯೂ ಇಲ್ಲ. ಹೀಗಿರುವಾಗ ತಾಲೂಕುವಾರು ಸಣ್ಣ ಪ್ರತಿಭಟನೆಗಳನ್ನು ನಡೆಸುವುದರಿಂದ ಮಾತ್ರ ಶಾಶ್ವತ ಪರಿಹಾರ ಸಾಧ್ಯವೇ?
ಇಂದು ಒಂದು ಗ್ರಾಮದಲ್ಲಿ ಆನೆ ಓಡಿಸಿದರೆ ಅದು ನಾಳೆ ಇನ್ನೊಂದು ಗ್ರಾಮಕ್ಕೆ ಹೋಗಬಹುದು. ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಚಲಿಸಬಹುದು. ಹೀಗಾಗಿ ಪರಿಹಾರವೂ ಜಿಲ್ಲಾ ಮಟ್ಟದಲ್ಲೇ ಸಮಗ್ರವಾಗಿರಬೇಕು.
ಸಹಕಾರಿ ರಂಗ ಈಗ ಧ್ವನಿ ಎತ್ತಬೇಕಲ್ಲವೇ? : ಇಲ್ಲಿ ದಕ್ಷಿಣ ಕನ್ನಡದ ಸಹಕಾರಿ ವ್ಯವಸ್ಥೆಯ ಜವಾಬ್ದಾರಿಯ ಪ್ರಶ್ನೆಯೂ ಎದುರಾಗುತ್ತದೆ.
ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರ ಬೆವರಿನಿಂದ ಆರಂಭಗೊಂಡು ಇಂದು ಬೃಹತ್ ಸಂಸ್ಥೆಗಳಾಗಿ ಬೆಳೆದಿರುವ ಕ್ಯಾಂಪ್ಕೋ ಮತ್ತು ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಸೇರಿದಂತೆ ಜಿಲ್ಲೆಯ ಸಹಕಾರಿ ವ್ಯವಸ್ಥೆ ಕೃಷಿಕರ ಸಂಕಷ್ಟದ ಸಂದರ್ಭದಲ್ಲಿ ಇನ್ನಷ್ಟು ಗಟ್ಟಿಯಾಗಿ ಧ್ವನಿ ಎತ್ತಬೇಕಾದ ಸಮಯ ಇದು.
ಅಡಿಕೆ, ತೆಂಗು, ಕಾಳುಮೆಣಸು, ಕಾಫಿ ಸೇರಿದಂತೆ ಕೃಷಿಯನ್ನು ಅವಲಂಬಿಸಿ ಬದುಕುತ್ತಿರುವ ಜನರೇ ಈ ಸಹಕಾರಿ ವ್ಯವಸ್ಥೆಯ ಬೆನ್ನೆಲುಬು. ಕೃಷಿಕರು ಸಂಕಷ್ಟದಲ್ಲಿದ್ದಾಗ ಅವರ ಬೆಳೆ ಸಾಲ ನಡೆಯಬೇಕು, ಕೃಷಿ ಸಾಲ ಸಿಗಬೇಕು, ಹಣಕಾಸಿನ ವ್ಯವಹಾರಗಳು ನಡೆಯಬೇಕು ಎಂಬುದು ಸಹಜ. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಇದೆ, ಕೃಷಿಕನೇ ಉಳಿಯದಿದ್ದರೆ ಸಹಕಾರಿ ವ್ಯವಸ್ಥೆ ಯಾರಿಗಾಗಿ? ಕೃಷಿಭೂಮಿ ಉಳಿಯದಿದ್ದರೆ ಕೃಷಿ ಆಧಾರಿತ ಸಹಕಾರಿ ಆರ್ಥಿಕ ವ್ಯವಸ್ಥೆಯ ಭವಿಷ್ಯವೇನು?
ಕಾಡಾನೆಗಳ ಹಾವಳಿಯಿಂದ ಕೃಷಿಕರು ಕೃಷಿಯನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದರೆ, ಅದರ ಪರಿಣಾಮ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗುವುದಿಲ್ಲ. ಗ್ರಾಮೀಣ ಆರ್ಥಿಕತೆ, ಸಹಕಾರಿ ಸಂಘಗಳು, ಕೃಷಿ ಮಾರುಕಟ್ಟೆ, ಉದ್ಯೋಗ, ವ್ಯಾಪಾರ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.
ಆದ್ದರಿಂದ ಕ್ಯಾಂಪ್ಕೋ, ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಗ್ರಾಮಮಟ್ಟದ ಸಹಕಾರಿ ಸಂಸ್ಥೆಗಳು ಈ ಪ್ರಶ್ನೆಯನ್ನು ಕೇವಲ ಕೃಷಿಕರ ವೈಯಕ್ತಿಕ ಸಮಸ್ಯೆಯೆಂದು ನೋಡಬಾರದು.
ಇದು ದಕ್ಷಿಣ ಕನ್ನಡದ ಕೃಷಿ ಆರ್ಥಿಕತೆಯ ಪ್ರಶ್ನೆ : ಸರ್ಕಾರದ ಗಮನ ಸೆಳೆಯಲು, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲು, ಜಿಲ್ಲೆಯ ಕೃಷಿಕರನ್ನು ಒಗ್ಗೂಡಿಸಲು ಮತ್ತು ಅಗತ್ಯವಿದ್ದರೆ ದೊಡ್ಡ ಮಟ್ಟದ ಹೋರಾಟಕ್ಕೆ ಸಹಕಾರ ನೀಡಲು ಸಹಕಾರಿ ರಂಗ ಮುಂದಾಗಬೇಕಿದೆ.
60–70 ಗ್ರಾಮಗಳು ಕೃಷಿ ಕಳೆದುಕೊಳ್ಳುವ ಅಪಾಯ : ಕಾಡಾನೆಗಳ ಹಾವಳಿಯ ಸಮಸ್ಯೆ ಮುಂದಿನ ಐದಾರು ವರ್ಷಗಳಲ್ಲೂ ಇದೇ ರೀತಿ ಮುಂದುವರಿದರೆ, ಸುಮಾರು 60–70 ಗ್ರಾಮಗಳ ಕೃಷಿಕರು ಕೃಷಿಭೂಮಿಯನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಕೃಷಿಕ ವಲಯದಲ್ಲಿದೆ. ಇದನ್ನು ಅತಿಶಯೋಕ್ತಿಯೆಂದು ತಳ್ಳಿಹಾಕುವ ಮೊದಲು ಒಂದು ಪ್ರಶ್ನೆ ಕೇಳಿಕೊಳ್ಳಬೇಕು, ಜೀವ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕೃಷಿಕನು ತೋಟದಲ್ಲಿ ಉಳಿಯುತ್ತಾನೆಯೇ?.
ಕೃಷಿ ಎಂದರೆ ಕೇವಲ ಬೆಳೆ ಅಲ್ಲ. ಅದು ಒಂದು ಕುಟುಂಬದ ಬದುಕು, ಒಂದು ಗ್ರಾಮದ ಆರ್ಥಿಕತೆ, ಒಂದು ಪ್ರದೇಶದ ಆಹಾರ ವ್ಯವಸ್ಥೆ ಮತ್ತು ಒಂದು ಪೀಳಿಗೆಯ ಪರಂಪರೆ. ಕಾಡಾನೆಗಳ ಭಯದಿಂದ ಕೃಷಿಕನು ರಾತ್ರಿ ತೋಟಕ್ಕೆ ಹೋಗಲು ಹೆದರಿ, ಬೆಳೆ ರಕ್ಷಿಸಲು ಸಾಧ್ಯವಾಗದೆ, ಕೊನೆಗೆ ಜಮೀನು ಬಿಟ್ಟು ನಗರಕ್ಕೆ ತೆರಳಬೇಕಾದರೆ ಅದು ಕೇವಲ ವನ್ಯಜೀವಿ–ಮಾನವ ಸಂಘರ್ಷವಲ್ಲ.
ಈಗ ಬೇಕಿರುವುದು ಜಿಲ್ಲಾ ಮಟ್ಟದ ಒಗ್ಗಟ್ಟು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಕಾಡುಪ್ರಾಣಿ ಹಾವಳಿಯಿಂದ ಬಳಲುತ್ತಿರುವ ಕೃಷಿಕರು ಒಂದೇ ವೇದಿಕೆಯಲ್ಲಿ ಸೇರಬೇಕಾಗಿದೆ. ಕಾಡಾನೆ ಮಾತ್ರವಲ್ಲ; ಕಾಡೆಮ್ಮೆ, ಕಡವೆ, ಮಂಗ ಸೇರಿದಂತೆ ವಿವಿಧ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಒಟ್ಟಾಗಿ ಚರ್ಚಿಸಬೇಕು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಕೃಷಿಕ ಸಂಘಟನೆಗಳು, ಸಹಕಾರಿ ಸಂಸ್ಥೆಗಳು, ಅರಣ್ಯ ಇಲಾಖೆ, ತಜ್ಞರು ಹಾಗೂ ನೇರವಾಗಿ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಗ್ರ ಚಿಂತನಾ ಸಭೆ ನಡೆಯಬೇಕು.
ರಾಜಕೀಯದಾಚೆಗೆ ಕೃಷಿಕರ ಒಗ್ಗಟ್ಟು ಬೇಕು. ಕೃಷಿಕರು ಯಾವ ಪಕ್ಷದವರು ಎಂಬುದಕ್ಕಿಂತ ಮೊದಲು ಅವರು ಕೃಷಿಕರು. ಕಾಡಾನೆ ದಾಳಿ ಮಾಡುವಾಗ ಪಕ್ಷದ ಬಣ್ಣ ನೋಡುವುದಿಲ್ಲ. ಕಾಡೆಮ್ಮೆ ತೋಟಕ್ಕೆ ಬರುವಾಗ ಜಾತಿ ನೋಡುವುದಿಲ್ಲ. ಕಾಡುಪ್ರಾಣಿ ಜೀವ ತೆಗೆಯುವಾಗ ಮತಕ್ಷೇತ್ರದ ಗಡಿ ನೋಡುವುದಿಲ್ಲ. ಹಾಗಿರುವಾಗ ಕೃಷಿಕರು ಮಾತ್ರ ಏಕೆ ವಿಭಜಿತರಾಗಬೇಕು? ಕೃಷಿಕರ ಬದುಕಿನ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಕೃಷಿ ಮುಖ್ಯವಾಗಬೇಕು. ಇದು ಯಾರನ್ನೂ ಆರೋಪಿಸುವ ಪ್ರಯತ್ನವಲ್ಲ. ಇದು ಎಚ್ಚರಿಕೆಯ ಮಾತು.
ಕೃಷಿಕರು ಒಗ್ಗಟ್ಟಾಗದಿದ್ದರೆ ಸಮಸ್ಯೆ ಮುಂದುವರಿಯುತ್ತದೆ. ಸಹಕಾರಿ ಸಂಸ್ಥೆಗಳು ಧ್ವನಿ ಎತ್ತದಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಜನಪ್ರತಿನಿಧಿಗಳು ನಿರಂತರವಾಗಿ ಒತ್ತಡ ಹಾಕದಿದ್ದರೆ ಕ್ರಮಗಳು ಘೋಷಣೆಯಲ್ಲೇ ಉಳಿಯಬಹುದು. ಸರ್ಕಾರ ಸಮಗ್ರ ಯೋಜನೆ ರೂಪಿಸದಿದ್ದರೆ ಸಂಘರ್ಷ ಮುಂದುವರಿಯುತ್ತದೆ. ಆದ್ದರಿಂದ ಈಗ ಅಗತ್ಯವಿರುವುದು ಜಿಲ್ಲಾ ಮಟ್ಟದ ಸಮಗ್ರ ಮಾನವ–ವನ್ಯಜೀವಿ ಸಂಘರ್ಷ ನಿರ್ವಹಣಾ ಯೋಜನೆ.
ಕಾಡಾನೆಗಳ ಚಲನವಲನದ ವೈಜ್ಞಾನಿಕ ಅಧ್ಯಯನ, ಶಾಶ್ವತ ತಡೆ ವ್ಯವಸ್ಥೆಗಳು, ತ್ವರಿತ ಪ್ರತಿಕ್ರಿಯಾ ತಂಡಗಳು, ತರಬೇತಿ ಪಡೆದ ಸಿಬ್ಬಂದಿ, ಸುರಕ್ಷಿತ ವಾಹನಗಳು, ಅಗತ್ಯ ತಾಂತ್ರಿಕ ವ್ಯವಸ್ಥೆ, ತ್ವರಿತ ಪರಿಹಾರ, ಬೆಳೆ ನಷ್ಟದ ನ್ಯಾಯಯುತ ಮೌಲ್ಯಮಾಪನ ಹಾಗೂ ಕೃಷಿಕರ ಜೀವ ರಕ್ಷಣೆಗೆ ಆದ್ಯತೆ ಇವೆಲ್ಲವೂ ಒಂದೇ ಯೋಜನೆಯ ಭಾಗವಾಗಬೇಕು.
ಇಂದು ಕಾಡಾನೆಗಳಿಂದ ತೋಟ ಕಳೆದುಕೊಳ್ಳುತ್ತಿರುವ ಕೃಷಿಕ, ನಾಳೆ ತನ್ನ ಕೃಷಿಭೂಮಿಯನ್ನೇ ಕಳೆದುಕೊಳ್ಳುವ ಸ್ಥಿತಿ ಬರಬಹುದು. ಕೃಷಿ ಉಳಿದರೆ ಗ್ರಾಮ ಉಳಿಯುತ್ತದೆ. ಗ್ರಾಮ ಉಳಿದರೆ ಸಹಕಾರಿ ವ್ಯವಸ್ಥೆ ಉಳಿಯುತ್ತದೆ. ಕೃಷಿಕ ಉಳಿದರೆ ದಕ್ಷಿಣ ಕನ್ನಡದ ಕೃಷಿ ಆರ್ಥಿಕತೆ ಉಳಿಯುತ್ತದೆ. ಆದ್ದರಿಂದ ಇದು ಕೇವಲ ಕಾಡಾನೆಗಳ ಸಮಸ್ಯೆಯಲ್ಲ. ಇದು ದಕ್ಷಿಣ ಕನ್ನಡದ ಕೃಷಿಕರ ಬದುಕುಳಿಯುವ ಹೋರಾಟ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Human–wildlife conflict is emerging as a serious threat to agriculture and rural livelihoods in Dakshina Kannada, with repeated elephant attacks affecting farmers across several villages in Sullia, Kadaba, Puttur and Belthangady. The issue cannot be solved through small, taluk-level protests or a limited response force alone. Farmers need to come together beyond political divisions, while cooperative institutions such as CAMPCO, DCC Bank and primary agricultural cooperatives must recognise that protecting farmers and agricultural land is also essential to protecting the rural economy. A district-wide, scientifically planned human–wildlife conflict management strategy, stronger rapid-response teams, adequate safety measures and meaningful government intervention are urgently required.
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…
ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…
ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…
ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…
ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್, ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…