ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಜನರಿಂದಲೇ ನಿರ್ಮಾಣವಾದ ಕಾಲು ಸಂಕ ಗ್ರಾಮಸೇತು ಮೇಲೆ ಹಣತೆ ಬೆಳಗಿ ದೀಪಾವಳಿಯನ್ನು ಬುಧವಾರ ರಾತ್ರಿ ಆಚರಣೆ ಮಾಡಲಾಯಿತು.
ಊರಿನ ಜನರು ಸೇತುವೆಯ ಮೇಲೆ ಹಣತೆ ಬೆಳಗಿದರು. ಗ್ರಾಮದಲ್ಲಿ ಅಭಿವೃದ್ಧಿಯ ಬೆಳಕು ಹರಿಯಲಿ ಹಾಗೂ ಮೊಗ್ರದಲ್ಲಿ ಶಾಶ್ವತವಾದ ಸೇತುವೆ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದ ಬಳಿಕ ವೀಕ್ಷಿತ್ ಕುತ್ಯಾಳ ಹಾಗೂ ಉಜಿತ್ ಶ್ಯಾಂ ಚಿಕ್ಮುಳಿ ಅವರಿಂದ ಹಾಡು ಹಾಗೂ ಕೊಳಲು ವಾದನ ನಡೆಯಿತು.ಗ್ರಾಮಭಾರತ ತಂಡ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೇಸಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಶಶಿಧರ ಪಳಂಗಾಯ ಮಾತನಾಡಿ,” ಬೆಳಕಿನ ಮಹತ್ವ ದೀಪಾವಳಿಯಂದು ತಿಳಿಯುತ್ತದೆ. ಈ ದಿನ ಬೆಳಕಿನ ಮಹತ್ವ ತಿಳಿದುಕೊಳ್ಳಬೇಕಾದ್ದು ಅಗತ್ಯವೂ ಹೌದು. ದೀಪಾವಳಿಯಂದು ನರಕಚತುರ್ದಶಿ ಕೂಡಾ ಮಹತ್ವ ಪಡೆದಿದೆ, ಅಂದು ನರಕಾಸುರನನ್ನು ಸಂಹಾರ ಮಾಡಿದ ದಿನ ಎಂದು ಕರೆಯಲಾಗುತ್ತದೆ. ಅಸುರ ಎಂದರೆ ಋಣಾತ್ಮಕ ಅಂಶಗಳು ನೆನಪಿಗೆ ಬರುತ್ತವೆ. ಇಂದು ಋಣಾತ್ಮಕ ಅಂಶಗಳಲ್ಲಿ ಅವಿಶ್ವಾಸ, ನಂಬಿಕೆದ್ರೋಹ, ಹೇಳಿದಂತೆ ನಡೆದುಕೊಳ್ಳದೇ ಇರುವುದು ಎಲ್ಲವೂ ಬರುತ್ತದೆ. ಇದೆಲ್ಲಾ ಅಸುರ ಶಕ್ತಿಗಳು ಎಂದು ಪರಿಗಣಿಸಬಹುದು. ಇದೆಲ್ಲಾ ಮೆಟ್ಟಿ ನಿಂತು ಜನರು ಒಂದಾಗಿ ಕಿರು ಕಾಲುಸಂಕ ನಿರ್ಮಾಣ ಮಾಡಿರುವುದು ಅಭಿನಂದನಾರ್ಹವಾಗಿದೆ. ಮುಂದೆ ಸಮರ್ಪಕ ಸೇತುವೆಯಾಗಲಿ ಎಂದು ಹಾರೈಸಿದರು. ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾರ ಶಕ್ತಿ ಇದೆ, ಜನಸಾಮಾನ್ಯ ಕೂಡಾ ಈ ದೇಶದ ಪ್ರಧಾನಿಯಾಗಬಹುದು ಎಂದು ತೋರಿಸಿದ ದೇಶ” ಎಂದರು.
ಗ್ರಾಮ ಭಾರತ ತಂಡದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಮಾತನಾಡಿ, “ಒಂದು ಒಳ್ಳೆಯ ದಿನ ಎಲ್ಲರೂ ಜೊತೆಯಾಗಿ ಸೇರುವುದು ಉತ್ತಮ ಸಂಪ್ರದಾಯ. ಬದುಕಿನದ್ದಕ್ಕೂ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ನಾವೆಲ್ಲಾ ಮುಂದಿನ ದಿನಗಳಲ್ಲಿಯೂ ಜನಪರವಾಗಿ ಹೆಜ್ಜೆ ಇಡಬೇಕಾಗಿದೆ” ಎಂದರು.
ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀಶ ಗಬ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, “ದೀಪಾವಳಿ ಹಬ್ಬದ ಮೊದಲ ದಿನ ನರಕಾಸುರ ಸಂಹಾರ ಮಾಡಿದ ದಿನವಾದರೆ, ಇನ್ನೊಂದು ದೀಪಗಳ ಮೂಲಕ ಬೆಳಗುವುದು. ಬೆಳಕು ಎಂದರೆ ಜ್ಞಾನವೂ ಹೌದು. ಕತ್ತಲು ದೂರವಾಗಿ ಬೆಳಗಬೇಕಾದ ದಿನಗಳು ಬಂದಿವೆ” ಎಂದರು.
ಗ್ರಾಮ ಭಾರತ ತಂಡದ ಸಂಚಾಲಕ ಸುಧಾಕರ ಮಲ್ಕಜೆ ಸ್ವಾಗತಿಸಿದರು. ಗ್ರಾಮ ಭಾರತ ತಂಡದ ಕಾರ್ಯದರ್ಶಿ ಮಂಜುನಾಥ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಭಾರತ ತಂಡವು ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು.