ಜ್ಞಾನಿಗಳ ಮಾತೊಂದು ನೆನಪಾಯಿತು. ಕುದುರೆ ಲಾಯ ಅನ್ನುತ್ತಾರೆ. ಕುರಿದೊಡ್ಡಿ ಅನ್ನುತ್ತಾರೆ. ಕೋಳಿ ಗೂಡು ಅನ್ನುತ್ತಾರೆ. ಆದರೆ ಗೋವಿಗೆ ಮಾತ್ರ ಗೋಶಾಲೆ ಅನ್ನುತ್ತಾರೆ….!
ದನಗಳು ಸಹಜವಾಗಿ ಇದ್ದರೆ ಮಾತ್ರ ಈ ಪಾಠ ನಮಗೆ ಅರ್ಥ ಆಗುತ್ತದೆ. ನಾನು ಶಿವಸುಬ್ರಹ್ಮಣ್ಯರ ಮನೆಯಿಂದ ತಂದ ಕರು ಸಮೇತ ದನವನ್ನು( 6 ತಿಂಗಳ ಕರು ) ಮೊದಲಾಗಿ ಕರುವನ್ನ ಇಳಿಸಿ ಹಟ್ಟಿಯೊಳಗೆ ಕಟ್ಟಿದೆ. ಅಷ್ಟೊತ್ತಿಗೆ ನಮ್ಮ ವಾಹನದ ಡ್ರೈವರು ದನದ ಹಗ್ಗವನ್ನು ಬಿಚ್ಚಿ ನಮಗೆ ಉಪಕಾರ ಮಾಡಲು ಹೊರಟ. ಬಿಚ್ಚಿದ್ದೇ ತಡ ಛಂಗನೆ ವಾಹನದಿಂದ ಹಾರಿದ ದನ ಮಾರ್ಗದಲ್ಲಿ ನಾಗಾಲೋಟದಲ್ಲಿ ಓಡ ಹತ್ತಿತು.ಕಳ್ಳನನ್ನು ಹಿಡಿಯಲು ಪೊಲೀಸ್ ಓಡಿದಂತೆ ನಾವು ಮೂರು ಜನ ಅದರ ಹಿಂದೆ ಓಡಿದೆವು. ಅಯ್ಯಪ್ಪೋ ಅದರ ಚುರುಕುತನವೇ…! ಪುಣ್ಯಕ್ಕೆ ಪೇಟೆಯ ಕಡೆ ಓಡದೆ ಇನ್ನೊಂದು ಬದಿಯಿಂದ ಸುತ್ತುಬಳಸಿ ತೋಡಿಗಿಳಿದು ಧರೆಹತ್ತಿ ತೋಟದ ಕಣಿಗಳನ್ನು ಲಂಘಿಸಿ ಹಟ್ಟಿಯ ಬಾಗಿಲಲ್ಲಿ ಏನೂ ಆಗದಂತೆ ಬಂದು ನಿಂತಿತ್ತು.
ನಾವು ಮೂರು ಜನ ಓಡಿದವರು ಏದುಸಿರುಬಿಡುತ್ತಾ ದನವನ್ನು ತಂದು ಒಳಗೆ ಕಟ್ಟಿದೆವು. (ಮನಸ್ಸಿನಲ್ಲೇ ಅಂದುಕೊಂಡೆ ಇನ್ನು ನಿನಗೆ ಬಿಡುಗಡೆ ಇಲ್ಲ ) ತನ್ನ ಕಾಲಿನ ಮೇಲೆ ದೇಹತೂಕವನ್ನು ಸರಿಯಾಗಿ ಹೊರಲಾರದ ದನಗಳನ್ನು ನೋಡಿದ ನನಗೆ ಚಿಕ್ಕಪ್ರಾಯದಲ್ಲಿ ತೋಟಕ್ಕೆ ಬಂದ ದನಗಳನ್ನು ಓಡಿಸಿದ ನೆನಪು ಪುನಹ ಬಂತು. ಮನೆಬಳಕೆಗೆ ಹಾಲು ಕಡಿಮೆಯಾಗುವ ಕಾರಣ ಮತ್ತೆ ಮೂರು ದನಗಳು ಬಂದುವು. ತಳಿ ಶುದ್ಧತೆಯನ್ನು ಕಾಪಾಡುದಕೋಸ್ಕರ ಹೋರಿಯು ಬಂತು. ಜೋಡಿ ಮಾಡಿಸುವುದಕ್ಕೋಸ್ಕರ ಎಡೆಬೇಲಿ ನಿರ್ಮಾಣ ಆಯಿತು. ಹೀಗೆ ಒಂದು ವರ್ಷ ಬಂಧನದಲ್ಲಿಯೇ ಕಳೆಯಿತು.
ಒಂದು ದಿನ ನಮ್ಮ ಕಥಾನಾಯಕಿ ದನ ಹುಲ್ಲು ತಿನ್ನಲೊಲ್ಲದು. ಕೆಲವು ದಿನ ಹೀಗೆ ಮುಂದುವರೆಯಿತು. ಒಂದು ವರ್ಷದಿಂದ ಬಾರದ ಡಾಕ್ಟರು ಪುನಹ ಬರಬೇಕಾಯಿತು. ಆದರೂ ದನ ಹುಷಾರ್ ಆಗಲೊಲ್ಲದು ಮತ್ತು ಏಳಲು ಕಷ್ಟ ಪಡುತ್ತಿತ್ತು. ಕಷ್ಟಪಡುವ ದನವನ್ನು ಮೆಲ್ಲನೆ ಹೊರಗೆ ತಂದು ಅಂಗಳದಲ್ಲಿ ಮೇಯಲು ಬಿಟ್ಟೆ. ಪ್ರಾಣತ್ಯಾಗ ಮಾಡಿದರೆ ಗುಂಡಿಗೆ ಹಾಕುವುದು ಸುಲಭ ಎಂಬ ದೃಷ್ಟಿಯಲ್ಲಿ. ಹೊರಗೆ ಬಿಟ್ಟ ದನ ಒಂದೆರಡು ದಿವಸದಲ್ಲಿ ಮೆಲ್ಲನೆ ಏಳಲು ಹೊರಟಿತು. ಸ್ವಲ್ಪ-ಸ್ವಲ್ಪ ಹುಲ್ಲು ತಿನ್ನಲು ಆರಂಭಿಸಿತು. ಒಂದು ವಾರದಲ್ಲಿ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಪುನಹ ಬಂಧನಕ್ಕೊಳಗಾಯಿತು.
ಒಂದು ತಿಂಗಳಾಗಬೇಕಾದಲ್ಲಿ ಪುನಹ ಹುಲ್ಲು ತಿನ್ನಲೊಲ್ಲದು. ಮತ್ತು ಅದೇ ಸಮಸ್ಯೆಗಳು. ಹೊರಗೆ ತಂದೆ ಆಶ್ಚರ್ಯ..! ಒಂದು ವಾರದಲ್ಲಿ ಸಂಪೂರ್ಣ ಚೇತರಿಸಿಕೊಂಡಿತು. ಈಗ ಮನದಟ್ಟಾಯಿತು. ಕಟ್ಟಿ ಹಾಕಿ ಸಾಕುವೆನೆಂಬ ನನ್ನ ಅಹಂಕಾರ ಇಳಿಯಿತು. ಹೊರಗೆ ಎಲ್ಲಿ ಬಿಡಲು, ಆ ಗಿಡಗಳು, ಈ ಗಿಡಗಳು, ಅಡಿಕೆ ಗಿಡ, ಬಿಡಲು ಜಾಗ ಇಲ್ಲ ಹಾಗಾಗಿ ಯಾವ ಕಾರಣಕ್ಕೂ ಬಿಟ್ಟು ಸಾಕಲಾರೆ ಎಂದು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದ ನಾನು ಬಿಡಲು ಜಾಗ ಹುಡುಕಿದೆ. ಹಟ್ಟಿಯ ಸಮೀಪದ ಒಂದೆಕರೆ ತೆಂಗಿನ ತೋಟವನ್ನು ಆಯ್ಕೆ ಮಾಡಿಕೊಂಡೆ. (ಆಲೋಚನೆ ಮಾಡಿದರೆ ಅಸಾಧ್ಯ ಎಂಬುದಿಲ್ಲ ) ಮಳೆಗಾಲದ ನೀರು ಹೋಗುವ ಒಂದು ಕಣಿ ಮತ್ತೆ ಒಂದು ಬದಿ 15 ಅಡಿ ಆಳದ ಬರೆ . ಬರೆಯ ಬದಿಗೆಲ್ಲ ಬೇಲಿ ನಿರ್ಮಿಸಿ ದನವನ್ನು ಹೊರಗಡೆ ಬಿಡಲು ಆರಂಭಿಸಿದೆ. ದಿನಾ ಬೆಳಿಗ್ಗೆ 3 ಗಂಟೆ ಹೊತ್ತು ಹೊರಗಡೆ ವ್ಯಾಯಾಮ.
ತೆಂಗಿನ ತೋಟದಲ್ಲಿ ಹುಲುಸಾಗಿ ಬೆಳೆದಿದ್ದ ಹುಲ್ಲು ಒಂದು ತಿಂಗಳಾಗುವಷ್ಟರಲ್ಲಿ ಅಡಿಕೆ ಒಣಗಿಸುವ ಅಂಗಳದಂತೆ ಒಂದು ಚೂರು ಇಲ್ಲದಂತೆ ಮುಗಿಸಿದ್ದವು. ಆವರಣದ ಗೇಟು ತೆರೆದಂತೆ ತಮ್ಮ ತಮ್ಮ ಜಾಗಕ್ಕೆ ಬಂದು ನಿಲ್ಲುತ್ತಿದ್ದ ದನಗಳಲ್ಲಿ ಒಂದು ಥಾರ್ ಪಾರ್ಕರ್ ಜಾತಿಯ ದನ ಬರಲಿಲ್ಲ. ಎಲ್ಲಾ ದನಗಳನ್ನ ಬಂದಿಸಿ ಮತ್ತೆ ಆ ದನನ್ನು ಹುಡುಕುತ್ತಾ ಹೋಗುವಾಗ “ಅಕಟಕಟಾ ಕಾಲಪುರುಷಂಗೆ ಗುಣ ಮಣಮ್ ಇಲ್ಲoಗಡಾ ” ನೀರು ಹೋಗುವ ಕಣಿಯಲ್ಲಿ ಬಿದ್ದ ದನ ಪ್ರಾಣತ್ಯಾಗ ಮಾಡಿತ್ತು. ಹೊರಗಡೆ ಬಿಟ್ಟಾಗ ತಗ್ಗು ಎತ್ತರ ಗುಂಡಿ ಇವುಗಳನ್ನೆಲ್ಲ ನೋಡಿಕೊಳ್ಳುತ್ತವೆ ಎಂದು ಯೋಚಿಸಿದ್ದ ನನಗೆ ಸಣ್ಣ ಜಾಗದಲ್ಲಿ ಗುಂಪಾಗಿ ಬಿಟ್ಟಾಗ ಹಾಗೆ ಆಗದು ಎಂಬ ಯೋಚನೆ ಬರಲಿಲ್ಲ. ಈಗ ಕಣಿಯನ್ನು ಅಗಲ ಮಾಡಿಸಿ ಸಮಸ್ಯೆಯಿಂದ ಪಾರು ಮಾಡಿಕೊಂಡಿದ್ದೇನೆ.
ದನಗಳನ್ನು ತೋಟಕ್ಕೆ ಬಿಟ್ಟರೆ ಅವು ಏನು ತೊಂದರೆ ಮಾಡುವುದಿಲ್ಲ ಎಂದು ಅನುಭವಿ ಮಿತ್ರರು ಕೆಲವರು ಹೇಳುತ್ತಿದ್ದರು. ಆದರೆ ಮನಸ್ಸು ಒಪ್ಪಿರಲಿಲ್ಲ.ಎರಡು ವರ್ಷದ ಹಿಂದೆ ಅದನ್ನು ಆರಂಭಿಸಿದೆ.ತೋಟದಿಂದ ಹೊರಹೋಗದಂತೆ ಬೇಲಿ ಮಾಡಿದೆ. ನಾವು ಚಿಕ್ಕವರಿದ್ದಾಗ ಬೇರೆ ದನಗಳು ನಮ್ಮ ತೋಟಕ್ಕೆ ಬಾರದಂತೆ ಬೇಲಿ.ಈಗ ನಮ್ಮ ತೋಟದಿಂದ ಹೊರಹೋಗದಂತೆ ಬೇಲಿ. ಪರಮಾಶ್ಚರ್ಯ! ಹುಲ್ಲು ತುಂಬಾ ಇರುವಲ್ಲಿಯವರೆಗೆ ಅಡಿಕೆ ಗಿಡವನ್ನಾಗಲಿ ಬಾಳೆಯನ್ನಾಗಲಿ ಮುಟ್ಟುವುದಿಲ್ಲ. ಆದರೆ ಹುಲ್ಲು ಕಡಿಮೆಯಾದಂತೆ ಬಾಳೆಯ ಕುರುಳೆಗಳನ್ನು ತಿನ್ನಲು ಆರಂಭಿಸುತ್ತಾವೆ. ಮತ್ತೆ ಬಾಯಿ ಹಾಕುವುದು ಅಡಿಕೆಯ ಗಿಡಕ್ಕೆ.
ನಾನು ಕಂಡುಕೊಂಡ ಎಚ್ಚರಿಕೆಗಳು.
1. ಹುಲ್ಲು ಕಡಿಮೆಯಾದಂತೆ ತೋಟಕ್ಕೆ ಬಿಡುವುದನ್ನು ನಿಲ್ಲಿಸಬೇಕು. ಹದಿನೈದರಿಂದ ಇಪ್ಪತ್ತು ದಿನ ಬಿಡು ಕೊಟ್ಟಲ್ಲಿ ಮತ್ತೆ ಚಿಗುರಿ ಬರುತ್ತದೆ.
2. ದಿನಕ್ಕೆ 3 ಗಂಟೆಯಿಂದ ಜಾಸ್ತಿ ಹೊತ್ತು ತೋಟಕ್ಕೆ ಬಿಡಬಾರದು ಹೊಟ್ಟೆ ತುಂಬಿದ ಕೂಡಲೇ ಹೊರಗಡೆ ಮೃಷ್ಟಾನ್ನಭೋಜನ ಬೇರೆ ಏನು ಉಂಟು ಎಂದು ಬೇಲಿ ಮುರಿಯಲು ಪ್ರಯತ್ನಿಸುತ್ತವೆ.
3.ಬೇಸಿಗೆಯಲ್ಲಿ ಬಿಡದೆ ಇರುವುದು ಒಳ್ಳೆಯದು ಪದಾಘಾತಕ್ಕೆ ಸ್ಪಿಂಕ್ಲರ್ ಪಾಯಿಂಟ್ಗಳು ಮುರಿದು ಹೋಗುತ್ತವೆ.
4. ಕೊಕ್ಕೋ ಕಾಯಿಗಳು ಸ್ವಲ್ಪ ಮುಗಿದಮೇಲೆ ಬಿಡುವುದು ಒಳ್ಳೆಯದು ಕಾಯಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತವೆ.
5. ಬಾಳೆ ಗಿಡಗಳಿಗೆ ಬಾಯಿ ಹಾಕುತ್ತವೆ ಅಂದರೆ ಅವಕ್ಕೆ ತೃಪ್ತಿಯಾಗುವಷ್ಟು ಹುಲ್ಲು ಇಲ್ಲ ಎಂದು ಅರ್ಥ.
ಹೀಗೆ ಗೋಶಾಲೆಯನ್ನು ನಿರ್ಮಿಸಿದ ನಾನು ಶಿಷ್ಯ ಗುರುವಿಗೆ ಒಪ್ಪಿಸಿದಂತೆ ನಾ ಕಲಿತ ಪಾಠವನ್ನು ಮುಂದೊಂದು ಒಪ್ಪಿಸಲು ಪ್ರಯತ್ನಪಡುತ್ತೇನೆ.
# ಎ.ಪಿ.ಸದಾಶಿವ ಮರಿಕೆ
(ಸಂಪರ್ಕ : 9449282892 – ಸಂಜೆ 7 ಗಂಟೆ ನಂತರ ಕರೆ ಮಾಡಿ )
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…