Advertisement
Opinion

ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.

Share

ರಾಮ ನಾಮವ ಜಪಿಸೋ,ಹೇ ಮನುಜ,
ರಾಮ ನಾಮವ ಜಪಿಸೋ….
ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ, ಬಾಯಿ ಚಪ್ಪರಿಸೋ…… ಹೀಗೆ ರಾಮ ಭಕ್ತಿಯ ಭಾವ ಗೀತೆಗಳು ಜನಮಾನಸದಲ್ಲಿ ಪ್ರಚಲಿತವಾಗಿದೆ. ಇಂದು ರಾಮನವಮಿ(Ramanavami). ಇದೇ ವರ್ಷದಲ್ಲಿ ಬಹಳ ದೀರ್ಘ ವಿವಾದಾತ್ಮಕ ಹೋರಾಟದ ನಂತರ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ(Ayodya) ಬಾಲ ರಾಮನ(Bala Rama) ಪ್ರಾಣ ಪ್ರತಿಷ್ಠಾಪನೆಯಾಗಿದೆ….. ಕೆಲವು ಸಂಪ್ರದಾಯವಾದಿಗಳಲ್ಲಿ ಇದು ಒಂದು ಹೆಮ್ಮೆ ಎಂಬಂತೆ ಬಿಂಬಿತವಾಗಿದೆ. ಕೆಲವರಿಗೆ ಮಸೀದಿ(Mosque) ಒಡೆದು ನಿರ್ಮಿಸಿರುವುದು ತಪ್ಪು ಎಂಬ ಅಭಿಪ್ರಾಯವೂ ಇದೆ……

Advertisement
Advertisement
Advertisement

ವಿಷಯ ಏನೇ ಇರಲಿ, ಆದರೆ ಈಗ ಆಗಬೇಕಾಗಿರುವುದು ಕೇವಲ ಭಕ್ತಿ ಮಾತ್ರವಲ್ಲದೆ ವಾಸ್ತವವಾದ ಆಚರಣೆಗಳ ಅಗತ್ಯವಿದೆ. ದೈವ ಭಕ್ತಿ ಅಥವಾ ದೈವ ಶಕ್ತಿ ಕೇವಲ ಹಾಡುಗಳಲ್ಲಿ, ಬರಹಗಳಲ್ಲಿ, ಭಾಷಣಗಳಲ್ಲಿ ಮಾತ್ರ ಆಚರಣೆಯಲ್ಲಿದ್ದರೆ ಅದಕ್ಕೆ ಯಾವುದೇ ಅರ್ಥವೂ ಇರುವುದಿಲ್ಲ. ಅದೊಂದು ಮಾನಸಿಕ ಸಮಾಧಾನಕರ ಸ್ಥಿತಿ ಮಾತ್ರ. ಆದರೆ ಅದು ನಡವಳಿಕೆಯಾಗಿ ಸಮಾಜದಲ್ಲಿ ಆಚರಣೆಗೆ ಬಂದಾಗ ಮಾತ್ರ ಆ ಭಕ್ತಿಗೆ ಒಂದು ಪ್ರಾಮುಖ್ಯತೆ ಮತ್ತು ಅರ್ಥ ಸಿಗುತ್ತದೆ. ಇಲ್ಲದಿದ್ದರೆ ಅದನ್ನು ಪ್ರಜ್ಞಾವಂತ ಸಮೂಹ ಸದಾ ಪ್ರಶ್ನಿಸುತ್ತಲೇ ಇರುತ್ತದೆ…..

Advertisement

ಆ ಕಾರಣದಿಂದ ಅದು ಕಾಲ್ಪನಿಕವೇ ಆಗಿದ್ದರು, ರಾಮ ಕೃಷ್ಣರ ನಿಜವಾದ ಆದರ್ಶಗಳನ್ನು ಮೆಚ್ಚುವವರು, ಪೂಜಿಸುವವರು, ಒಪ್ಪಿದವರು ನೀವಾಗಿದ್ದರೆ ಕನಿಷ್ಠ ಈ ರಾಮನವಮಿಯ ದಿನದಿಂದಲಾದರು ನಿಮ್ಮೊಳಗಡೆ ಈ ರೀತಿಯ ಬದಲಾವಣೆ ಸಾಧ್ಯವಾಗಬೇಕು ಎಂಬ ನಿರೀಕ್ಷೆ ನಮ್ಮದು….. ಅಂದಿನ ಕಾಲದ ಆ ಮಹಾ ಗ್ರಂಥಗಳ ರಾಮ – ಕೃಷ್ಣರ ಆದರ್ಶಗಳಲ್ಲಿ ಕೆಲವು ಇಂದಿಗೂ ಪ್ರಸ್ತುತ, ಮತ್ತೆ ಕೆಲವು ಅಪ್ರಸ್ತುತ, ಮತ್ತೊಂದಿಷ್ಟು ಅನುಸರಣೆಗೆ ಯೋಗ್ಯವೂ ಅಲ್ಲ. ಇಂದಿನ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಆದರ್ಶಗಳ ಕೆಲವು ಒಳ್ಳೆಯ ಅಂಶಗಳನ್ನು ನಾವು ಅಳವಡಿಸಿಕೊಳ್ಳಲು ಸಾಧ್ಯವಾಗುವುದಾದರೆ……

ಮುಖ್ಯವಾಗಿ ಭಾರತ ದೇಶದ ಈ ನೆಲ ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದೆ. ರಾಮ – ಕೃಷ್ಣ ಭಕ್ತರು ಆ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲು ಎಲ್ಲಾ ಕ್ಷೇತ್ರಗಳ ಎಲ್ಲಾ ಜನರು ನಿರಂತರ ಪ್ರಯತ್ನಿಸಬೇಕಾಗಿದೆ. ಆ ದಂಡಕಾರಣ್ಯ ಅಥವಾ ಆಗಿನ ಆ ಶಕ್ತಿಯುತ ಮಾನಸಿಕ – ದೈಹಿಕ ವ್ಯಕ್ತಿತ್ವ ಅಥವಾ ಆಗಿನ ಕಾಲದ ನೀರಿನ ಸಂಪನ್ಮೂಲಗಳಾಗಲಿ ಎಲ್ಲವೂ ಕೂಡ ಈಗಲೂ ಹಾಗೆಯೇ ಇದೆ. ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ನಾವು ವಿಫಲರಾಗಿ ಅದನ್ನು ಮಲಿನಗೊಳಿಸುತ್ತಿದ್ದೇವೆ. ಅದು ನಿಜಕ್ಕೂ ಆ ಪಾತ್ರಗಳಿಗೆ ನಾವು ಮಾಡುತ್ತಿರುವ ಬಹುದೊಡ್ಡ ದ್ರೋಹವಾಗುತ್ತದೆ. ಪ್ರಕೃತಿ ಇಲ್ಲದೆ, ಮನುಷ್ಯನ ಆರೋಗ್ಯವಿಲ್ಲದೆ ಯಾವ ಭಕ್ತಿ ಆದರ್ಶಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ನಾವು ಮತ ಹಾಕುವ ಮುನ್ನ ಈ ಪರಿಸರವನ್ನ ಉಳಿಸುವ ನಿಟ್ಟಿನಲ್ಲಿ ಯಾರು ಹೆಚ್ಚು ಕೆಲಸ ಮಾಡುತ್ತಾರೆ ಅಂತವರನ್ನು ಗುರುತಿಸಿ ಮತ ಹಾಕಬೇಕು. ಜೊತೆಗೆ ನಮ್ಮ ನಮ್ಮ ವ್ಯಾಪ್ತಿಯಲ್ಲಿ ಪ್ರಕೃತಿಯನ್ನು, ಈ ಭೂಮಿಯನ್ನು ಉಳಿಸುವ ಕೆಲಸವನ್ನು ಮಾಡುವುದೇ ಕೃಷ್ಣ ಮತ್ತು ರಾಮರ ಆದರ್ಶಗಳಿಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ಗೌರವ…….

Advertisement

ಎರಡನೆಯದಾಗಿ, ಇಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ, ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯು ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದಾರೆ. ಯಾವುದೇ ಕಾರಣಕ್ಕೂ ಹುಟ್ಟಿನಿಂದಾಗಲಿ, ಹಣದಿಂದಾಗಲಿ, ವಿದ್ಯೆಯಿಂದಾಗಲಿ, ಪ್ರದೇಶಗಳಿಂದಾಗಲಿ, ವರ್ಣಗಳಿಂದಾಗಲಿ, ದೈಹಿಕ ರಚನೆಗಳಿಂದಾಗಲಿ, ಜಾತಿ ಭಾಷೆಗಳಿಂದಾಗಲಿ ಭೇದ ಭಾವವನ್ನು ಮಾಡಬಾರದು. ಎಲ್ಲರೂ ಸಮಾನರು ಎಂಬ ಆದರ್ಶಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ಅಂದು ರಾಮ – ಕೃಷ್ಣರ ಕಾಲದಲ್ಲಿ ವರ್ಣಾಶ್ರಮ ವ್ಯವಸ್ಥೆ ಇದ್ದಿರಬಹುದು, ಸಾಮಾಜಿಕ ಅಸಮಾನತೆ ಇದ್ದಿರಬಹುದು, ಆದರೆ ಆ ಆದರ್ಶಗಳನ್ನು ಇಂದಿಗೆ ಪರಿವರ್ತಿಸಿದರೆ ಸಮ ಸಮಾಜದ ಕನಸೇ ಆ ರಾಮಕೃಷ್ಣರ ಆಶಯವು ಆಗಿದ್ದಿರಬೇಕು. ಆದ್ದರಿಂದ ಈಗ ನಾವು ಜಾತಿ ಪದ್ಧತಿಯ, ಮೇಲು ಕೀಳಿನ, ಬಡವ ಶ್ರೀಮಂತರ, ಕಪ್ಪು ಬಿಳುಪಿನ, ಯಾವುದೇ ತಾರತಮ್ಯವನ್ನು ಮಾಡಬಾರದು. ಸಹಜವಾಗಿಯೇ ಪ್ರಕೃತಿಯ ಕೊಡುಗೆಗಳನ್ನು, ವೈವಿಧ್ಯತೆಯನ್ನು ಹಾಗೆಯೇ ಸ್ವೀಕರಿಸಿ ಸಮಾನತೆಯನ್ನು ಸ್ಥಾಪಿಸಲು ಸಾಧ್ಯವಾಗುವುದಾದರೆ ಮಾತ್ರ ರಾಮ – ಕೃಷ್ಣರ ಆದರ್ಶಗಳಿಗೆ ಒಂದು ಅರ್ಥವಿರುತ್ತದೆ. ಇಲ್ಲದಿದ್ದರೆ ಎಲ್ಲವೂ ಕಪಟ ನಾಟಕವಾಗುತ್ತದೆ…….

ಮೂರನೆಯದಾಗಿ, ಇಡೀ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಅತ್ಯಂತ ಭ್ರಷ್ಟಾತಿ ಭ್ರಷ್ಟವಾಗಿದೆ. ಬಹಳಷ್ಟು ಜನರು ಹಣಕ್ಕಾಗಿ ತಮ್ಮ ಎಲ್ಲಾ ಮೌಲ್ಯಗಳನ್ನು, ಪ್ರತಿಭೆಗಳನ್ನು, ಆದರ್ಶಗಳನ್ನು, ನಂಬಿಕೆಗಳನ್ನು ಸಾರ್ವಜನಿಕವಾಗಿಯೇ ಹರಾಜು ಹಾಕುತ್ತಿದ್ದಾರೆ. ದುಡ್ಡಿಗಾಗಿ ಯಾವ ನೀಚ ಕೆಲಸಕ್ಕೂ ಕೆಲವು ಜನರು ಸಿದ್ಧರಾಗಿದ್ದಾರೆ. ಭಾರತೀಯ ಮೌಲ್ಯಗಳ ಬೆನ್ನಿಗೆ, ಹೃದಯಕ್ಕೆ ಪ್ರತಿದಿನ ಚುಚ್ಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಷ್ಟೇ ರಾಮಮಂದಿರಗಳು, ಕೃಷ್ಣಮಂದಿರಗಳು, ಮಸೀದಿಗಳು, ಚರ್ಚುಗಳು ಮುಂತಾದ ಧಾರ್ಮಿಕ ಸ್ಥಳಗಳಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ಈ ರಾಮನವಮಿಯಿಂದ ಕನಿಷ್ಠ ನಮ್ಮದಲ್ಲದ ಆಸ್ತಿ ಅಧಿಕಾರ ಅಂತಸ್ತುಗಳಿಗೆ ಆಸೆಪಡದೆ, ಅದನ್ನು ಗಳಿಸಲು ವಾಮ ಮಾರ್ಗಗಳನ್ನು ಅನುಸರಿಸದೇ, ಶ್ರಮಕ್ಕೆ ತಕ್ಕ ಫಲವನ್ನಷ್ಟೇ ನಿರೀಕ್ಷೆ ಮಾಡಿ, ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಮುಖಾಂತರ ರಾಮನ ಆದರ್ಶಗಳನ್ನ ವಾಸ್ತವಿಕಕ್ಕೆ ತರಬೇಕಾಗಿದೆ…..

Advertisement

ನಾಲ್ಕನೆಯದಾಗಿ, ಇಂದು ಹಣ ಕೇಂದ್ರಿತ ವ್ಯವಸ್ಥೆಯಲ್ಲಿ ಮಾನವೀಯ ಸಂಬಂಧಗಳು ಸಂಪೂರ್ಣ ವ್ಯಾಪಾರಿಕರಣವಾಗಿದೆ. ಕೇವಲ ಗ್ರಾಹಕರು, ವೀಕ್ಷಕರು, ಓದುಗರು, ಕೇಳುಗರು, ಕಕ್ಷಿದಾರರು, ಭಕ್ತರು, ರೋಗಿಗಳು ಮುಂತಾದ ಸಂಬಂಧಗಳು ಮಾತ್ರವಲ್ಲದೆ, ರಕ್ತ ಸಂಬಂಧಗಳು ಸಹ ಬಹುತೇಕ ಶಿಥಿಲಾವಸ್ಥೆ ತಲುಪಿದೆ. ಹಣ, ಜಮೀನಿನ ಕಾರಣಕ್ಕೆ ಮನುಷ್ಯ ಮನಸ್ಸುಗಳು ಒಡೆದು ಚೂರು ಚೂರಾಗಿದೆ. ನ್ಯಾಯಾಲಯಗಳು ತುಂಬಿ ತುಳುಕುತ್ತಿದೆ. ಈ ಎಲ್ಲವೂ ಕೂಡ ಆದರ್ಶಗಳನ್ನು ಮರೆತು ಕೇವಲ ಆಚರಣೆಗೆ ಮಾತ್ರ ನಮ್ಮ ದೈವಭಕ್ತಿಯನ್ನು ಸೀಮಿತಗೊಳಿಸಿದ ಪರಿಣಾಮದಿಂದ ಆಗುತ್ತಿದೆ. ಅದನ್ನು ನಿಗ್ರಹಿಸಿಕೊಳ್ಳದಿದ್ದರೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಯಾವುದೇ ಅರ್ಥವು ಇರುವುದಿಲ್ಲ……

ಐದನೆಯದಾಗಿ, ಚುನಾವಣಾ ಸಂದರ್ಭದಲ್ಲಿ ಈ ದೇಶದ ಸುಮಾರು 100 ಕೋಟಿ ಮತದಾರರಲ್ಲಿ, ಅದರಲ್ಲೂ ಚಲಾವಣೆಯಾಗಬಹುದಾದ ಸುಮಾರು 70 ಕೋಟಿ ಮತದಾರರಲ್ಲಿ, ಒಂದು ಅಂದಾಜಿನ ಪ್ರಕಾರ ಕನಿಷ್ಠ ಶೇಕಡ 50% ರಷ್ಟು ಜನರಾದರು ಯಾವುದೋ ಒಂದು ಪಕ್ಷದಿಂದ ಲಂಚದ ರೂಪದಲ್ಲಿ ಹಣವೋ, ವಸ್ತುವೋ, ಧಾರ್ಮಿಕ ನಂಬಿಕೆಯೋ, ಜಾತಿಯ ದಾಳವೋ ಒಟ್ಟಿನಲ್ಲಿ ಭ್ರಷ್ಟತೆಯನ್ನು ಸ್ವೀಕರಿಸುತ್ತಾರೆ ಅಥವಾ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಅದಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ರಾಮ – ಕೃಷ್ಣರ ಆದರ್ಶಗಳಿಗೆ ಬೆಲೆ ಏನು ? ಕೃಷ್ಣ ಧರ್ಮಸಂಸ್ಥಾಪನೆಗಾಗಿ ಕೆಲವು ತಂತ್ರ ಕುತಂತ್ರಗಳನ್ನು ಮಾಡಿದ್ದರು ಕೂಡ ಅದರ ಮೂಲ ಉದ್ದೇಶ ಒಳ್ಳೆಯದೇ ಆಗಿರುತ್ತದೆ. ಆದರೆ ಇಂದು ಅಧರ್ಮ ರಾಜ್ಯದ ಸ್ಥಾಪನೆಗಾಗಿ ಧರ್ಮವನ್ನೇ, ಸಾಂವಿಧಾನಿಕ ಮೌಲ್ಯಗಳನ್ನೇ ಬಲಿಕೊಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಒಂದು ಪಕ್ಷದಿಂದ ಗೆದ್ದು ಆ ಮಾತೃ ಪಕ್ಷದ ಬೆನ್ನಿಗೆ ಚೂರಿ ಹಾಕಿ ಹಣ ಪಡೆದು ಇನ್ನೊಂದು ಪಕ್ಷಕ್ಕೆ ಹಾರುವುದು, ಕೆಲವು ರಾಜಕೀಯ ಪಕ್ಷಗಳು ಹಣ ಅಥವಾ ಇತರೆ ಸಂಸ್ಥೆಗಳಿಂದ ಬೆದರಿಕೆ ಒಡ್ಡಿ ಶಾಸಕರನ್ನು ಖರೀದಿ ಮಾಡಿ, ಬಹುಮತದಿಂದ ಆಯ್ಕೆಯಾಗಿರುವ ಸರ್ಕಾರಗಳನ್ನು ಕೆಡವುತ್ತಿರುವುದು, ಅಧರ್ಮಕ್ಕಾಗಿ ಧರ್ಮದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಡೆಯುತ್ತಿದೆ. ಮತದಾರರ ಸಾಕ್ಷಿ ಪ್ರಜ್ಞೆಗೆ ಇದು ತಟ್ಟಬೇಕು…….

Advertisement

ಸರ್ಕಾರದ ಮುಖ್ಯಸ್ಥರು ಇಂದು ಕಳ್ಳತನ ಮೋಸ ವಂಚನೆಗಳು ಸಹಜವಾಗಿ ಇಡೀ ಸಮಾಜವನ್ನು ವ್ಯಾಪಿಸಿರುವಾಗ ಆದರ್ಶಗಳ ಬಗ್ಗೆ ಮಾತನಾಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಶ್ರೀ ರಾಮನವಮಿಯ ಹಬ್ಬದಂದು ಇದನ್ನು ಮತ್ತೆ ಮತ್ತೆ ನೆನಪಿಸಲು ಕಾರಣ ಸಮಾಜದ ತಿಳುವಳಿಕೆಗಳು ಕೇವಲ ಪ್ರದರ್ಶನದ ಬೊಂಬೆಗಳಾಗದೆ, ಆತ್ಮ ವಂಚನೆಯ ದಾರಿಗಳಾಗದೆ, ಅದು ನಮ್ಮ ನೈಜ ಮತ್ತು ಸಹಜ ನಡವಳಿಕೆಗಳಾಗಬೇಕು. ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆಗಳಾಗಬೇಕು. ಆಗ ಮಾತ್ರ ಈ ರೀತಿಯ ಹಬ್ಬಗಳಿಗೆ ಅರ್ಥವಿರುತ್ತದೆ. ಇಲ್ಲದಿದ್ದರೆ ಶತಶತಮಾನಗಳಾದರು ಸಮಾಜದಲ್ಲಿ ಹಣ, ತಂತ್ರಜ್ಞಾನ, ಒಳ್ಳೆಯ ರಸ್ತೆಗಳು, ಒಳ್ಳೆಯ ಕಟ್ಟಡಗಳು, ಒಳ್ಳೆಯ ವಾಹನಗಳು, ಒಳ್ಳೆಯ ಮೊಬೈಲ್ ಗಳು, ಒಳ್ಳೆಯ ಶಾಲೆಗಳು, ಒಳ್ಳೆಯ ಆಸ್ಪತ್ರೆಗಳು, ಒಳ್ಳೆಯ ಬಟ್ಟೆಗಳು, ಒಳ್ಳೆಯ ಶೂಗಳು, ಬರಬಹುದಷ್ಟೇ. ಆದರೆ ಒಳ್ಳೆಯ ಮನುಷ್ಯರು ತೀರಾ ಅಪರೂಪವಾಗುತ್ತಾರೆ. ನಾವು ಬದುಕಬೇಕಾಗಿರುವುದು ಬಹುತೇಕ ಮನುಷ್ಯರ ಜೊತೆಯೇ ಹೊರತು ವಸ್ತುಗಳ ಜೊತೆಗಲ್ಲ. ವಸ್ತುಗಳು ನಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡಿದ್ದು. ವಸ್ತುಗಳಿಲ್ಲದೆಯೂ ಬದುಕಬಹುದು. ಆದರೆ ಮನುಷ್ಯರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಅದ್ದರಿಂದ ರಾಮನವಮಿಯ ಸಂದರ್ಭದಲ್ಲಿ ನಿಜ ಮನುಷ್ಯರ ಹುಡುಕಾಟದಲ್ಲಿ…….

ಬರಹ :
ವಿವೇಕಾನಂದ. ಎಚ್. ಕೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

22 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

22 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

1 day ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

2 days ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

2 days ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago