ಮಧುಮೇಹ ದಿನ | ಗಡಿಬಿಡಿ ಬೇಡ ಶುಗರ್‌ಗೆ, ಇರಲಿ ಎಚ್ಚರಿಕೆ |

November 14, 2021
11:03 AM

ಅಂದು ನಮ್ಮ ಕೆಂಪಿ ಕೆಲಸಕ್ಕೆ ಬಂದಿರಲಿಲ್ಲ. ಅವಗಾವಾಗ ರಜೆ ಮಾಡುತ್ತಿದ್ದುದರಿಂದ ನಾವಷ್ಟು ಗಮನಿಸಲಿಲ್ಲ. ಸುಮಾರು ಹದಿನೈದು ದಿನವಾದರೂ ಕೆಲಸಕ್ಕೆ ಅವಳು ಬರಲಿಲ್ಲ. ಯಾಕೆಂದು ವಿಚಾರಿಸಲಾಗಿ ಆಕೆಗೆ ಟೈಪೈಡ್ ಆಗಿದೆ ವಿಶ್ರಾಂತಿ ತೆಗೆದು ಕೊಳ್ಳುತ್ತಿದ್ದಾಳೆ ಎಂಬ ಉತ್ತರ ಸಿಕ್ಕಿತು. ಮತ್ತೆರಡು ದಿನಕ್ಕೆ ಅವಳಿಗೆ ಡೆಂಗ್ಯು ಆಗಿದೆಯಂತೆ , ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಆಕೆಯ ಪಕ್ಕದ ಮನೆಯವರು ಹೇಳಿದರು.‌ ಇದೆಲ್ಲಾ ಆಗಿ ಒಂದೆರಡು ತಿಂಗಳು ಕಳೆದ ಮೇಲೆ ನಮ್ಮಲ್ಲಿಗೆ ಬಂದ ಕೆಂಪಿ ಬಹಳ ಇಳಿದು ಹೋಗಿದ್ದಳು. ಮೊದಲಿನ ದಷ್ಟಪುಷ್ಟ ದೇಹ ಅರ್ಧಕರ್ಧ ಆಗಿ ಹೋಗಿದ್ದಳು. ಏನೇನಾಯಿತು ಎಂದು ಅವಳು‌ ಹೇಳ ತೊಡಗಿದರೆ ನಮ್ಮ ಕಣ್ಣಲ್ಲಿ ನೀರೇ ಬಂತು. ಎಂಕ್ ಶುಗರ್ ಉಂಡುಗೆ. ಟೆಸ್ಟ್ ಮಾಲ್ತ್ ಪಂಡೆರ್. ಇದೂ ಬಂತಾ ಎಂದು ತಲೆ ಮೇಲೆ ಕೈ ಇಡುವ ಹಾಗನ್ನಿಸಿತು. ನಿತ್ಯ ದುಡಿದು ಉಣ್ಣುವ ಜನರಿಗೆ ಮಧುಮೇಹ ದುಬಾರಿಯಾಗಿ ಪರಿಣಮಿಸುತ್ತದೆಂದರೆ ತಪ್ಪಲ್ಲ.‌

ನಮಗೆ ತುಂಬಾ ಪರಿಚಯಸ್ಥರು. ಮೈ ಬಗ್ಗಿಸಿ ದುಡಿಯುತ್ತಿದ್ದವರು. ದಿನದಿಂದ ದಿನಕ್ಕೆ ಕೃಶರಾಗುತ್ತಿದ್ದರು. ಪ್ರತಿ ಬಾರಿ ಅವರೊಂದಿಗೆ ಮಾತನಾಡುವಾಗ ಯಾಕೆ ಹೀಗಿದ್ದೀರಾ ಕೇಳೋಣವೆಂದು ಅಂದು ಕೊಂಡರು ಕೇಳಿರಲಿಲ್ಲ. ಎಷ್ಟೋ ದಿನಗಳ ಮೇಲೆ ಆಸ್ಪತ್ರೆಗೆ ಸೇರಿಸಿದಾಗಲೇ ಮಧುಮೇಹ ಉಲ್ಬಣಗೊಂಡಿದೆಯೆಂದು. ಅವರಿಗೇ ಗೊತ್ತಾಗಿರಲಿಲ್ಲ ಶುಗರ್ ಬಂದಿದೆಯೆಂದು.
ಡಯಾಬಿಟಿಸ್ ಬಂದಿದೆ ಎಂದರೆ ಜೀವನ ಮುಗಿಯಿತೆಂಬ ಭಾವನೆ ಜನ ಸಾಮಾನ್ಯರ ಮನಸ್ಸಿನಲ್ಲಿ ತಲೆದೋರುತ್ತದೆ. ಆದರೆ ವೈದ್ಯರು ಹೇಳುತ್ತಾರೆ , ಹಾಗಲ್ಲ. ಇದು ಜೀವನದ ಆರಂಭ. ಅಶಿಸ್ತಿನ ಜೀವನ ಶೈಲಿಗೆ ವಿದಾಯ ಹೇಳಿ ,ಶಿಸ್ತುಬದ್ಧ ಜೀವನ ಶೈಲಿಯ ಮುನ್ನುಡಿಗೆ ನಾಂದಿ. ‌ ಇಲ್ಲಿ ಆಹಾರ ಕ್ರಮವೊಂದೇ ಪ್ರಮುಖ ಪಾತ್ರ ವಹಿಸುತ್ತಿಲ್ಲ. ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಾಯಾಮವೂ ಮಧುಮೇಹದ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊತ್ತಿಗೆ ಸರಿಯಾಗಿ ಆಹಾರ , ವ್ಯಾಯಾಮ, ನಿದ್ದೆ‌ ಎಲ್ಲವೂ ಮುಖ್ಯವೇ. ಸಮತೋಲಿತ ಜೀವನಶೈಲಿಯದೇ ಮುಖ್ಯ ಪಾತ್ರ.

ಡಾ. ಬಿ.ಎಂ . ಹೆಗ್ಡೆಯವರು ಸಂದರ್ಶನದಲ್ಲಿ ಒಂದು ಮಾತು ಹೇಳುತ್ತಾರೆ. ಮಾವಿನ ಹಣ್ಣು ಅಮೃತ ಸಮಾನ. ಮಧುಮೇಹವಿದ್ದವರೂ ಮಾವಿನಹಣ್ಣನ್ನು ತಿನ್ನಬಹುದು, ಆದರೆ ೨ಹೋಳು ಮಾತ್ರ. ಅದರಲ್ಲಿ ಹಲವು ಅಗತ್ಯ ಪೋಷಕಾಂಶಗಳಿವೆ. ಒಳ್ಳೆಯದೆಂದು ಹೊಟ್ಟೆ ತುಂಬಾ ಯಾವುದನ್ನೂ ತಿನ್ನಬಾರದು. ಎಳೆಯ ಹಲಸಿನಕಾಯಿ( ಗುಜ್ಜೆ) ಒಳ್ಳೆಯದು ಆದರೆ ಸಕ್ಕರೆಯ ಅಂಶ ತೀರಾ ಕಡಿಮೆಯಾಗುತ್ತದೆ ಹಾಗಾಗಿ ಮಧುಮೇಹ ಇರುವವರು ತುಂಬಾ ಜಾಗರೂಕತೆಯಿಂದ ಆಹಾರ ಸೇವಿಸುವುದು ಬಹಳ ಅಗತ್ಯವೆಂದು ಅವರು ಸೂಚಿಸುತ್ತಾರೆ.

ಜನಸಾಮಾನ್ಯರಲ್ಲಿ ಮಧುಮೇಹದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡ ಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡ ಬೇಕಾಗಿದೆ ಬಂತೆಂದು ಮಾನಸಿಕವಾಗಿ ಕುಗ್ಗ ಬೇಕಾಗಿಲ್ಲ. ಸರಿಯಾದ ಆಹಾರ ಕ್ರಮ , ದಿನನಿತ್ಯ ವ್ಯಾಯಾಮಗಳನ್ನು ಮಾಡುತ್ತಾ ಶಿಸ್ತು ಬದ್ಧ ಜೀವನ ಕ್ರಮವನ್ನು ಅನುಸರಿಸಿದಾಗ ಸಾಮಾನ್ಯ ಆರೋಗ್ಯವಂತರಂತೆ ಜೀವನ ಸಾಗಿಸ ಬಹುದು.
ನವೆಂಬರ್ 14 ಮಧುಮೇಹ ದಿನ.

1991 ರಿಂದ ವಿಶ್ವ ಮಧುಮೇಹ ದಿನಾಚರಣೆಯ ಆಚರಣೆ ಆರಂಭ. ಮಧುಮೇಹದ ಕುರಿತು ಜನರ ಮನದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ. IDF ( ಇಂಟರ್ ನ್ಯಾಶನಲ್ ಫೆಡರೇಶನ್) ನೇತೃತ್ವದಲ್ಲಿ ಆಚರಿಸಲಾಗುತ್ತದೆ. ನವೆಂಬರ್ 14 ಸರ್ ಫೆಢ್ರಿಕ್ ಬೆಂಟಿಂಗ್ ರವರ ಜನುಮದಿನ. ಅವರು ಇನ್ಸುಲಿನ್ ಕಂಡು ಹಿಡಿದವರು. ಮಧುಮೇಹದ ನಿಯಂತ್ರಣದಲ್ಲಿ ಇನ್ಸ್ಯುಲಿನ್ ಪಾತ್ರ ಮಹತ್ವದ್ದು. ಹಾಗಾಗಿ ಅವರ ಕೊಡುಗೆಯ 160  ದೇಶಕ್ಕೂ ಹೆಚ್ಚಿನೆಡೆ ಆಚರಿಸಲಾಗುತ್ತದೆ.ನೀಲಿ ಬಣ್ಣ ಈ ದಿನವನ್ನು ಪ್ರತಿನಿಧಿಸುತ್ತದೆ.

ಮಾಸಿಕ ಒತ್ತಡ, ನಿರ್ಜಲೀಕರಣ, ಹಾಗೂ ಅನುವಂಶೀಯ ಮೊದಲಾದ ಕಾರಣದಿಂದಾಗಿ ಮಧುಮೇಹ ನಮಗೆ ಬರುತ್ತದೆ. ಒಮ್ಮೆ ಆರಂಭವಾದರೆ ಅದರೊಂದಿಗೆ ಇತರ ಕಾಯಿಲೆಗಳ ಮಾರ್ಗ ಸುಗಮವಾಗುತ್ತದೆ. ದೃಷ್ಟಿ ದೋಷ, ನರಹಾನಿ, ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡ ಸಮಸ್ಯೆಗಳು ಆರಂಭವಾಗುತ್ತವೆ. ವೈದ್ಯರ ಮಾರ್ಗದರ್ಶನದಂತೆ ಜೀವನ ಶೈಲಿಯನ್ನು ಹೊಂದಿಸಿ ಕೊಳ್ಳುವುದಷ್ಟೇ ನಮ್ಮ ಮುಂದಿರುವ ಆಯ್ಕೆ. ಕುಗ್ಗುವುದು ಬೇಡ, ಜಾಗರೂಕರಾಗೋಣ. ಧೈರ್ಯದಿಂದ ಎದುರಿಸೋಣ. ಬದುಕು ಸುಂದರವಾಗಿರುತ್ತದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಎಪ್ರಿಲ್‌ನಲ್ಲಿ ಶುಕ್ರನು 9 ರಾಶಿಗಳಲ್ಲಿ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು
March 12, 2025
6:47 AM
by: ದ ರೂರಲ್ ಮಿರರ್.ಕಾಂ
ನಿಯಮಗಳು ಇದ್ದರೂ ಅಭದ್ರತೆ ಕಟ್ಟಿಟ್ಟದ್ದು….!
March 11, 2025
7:51 AM
by: ರಮೇಶ್‌ ದೇಲಂಪಾಡಿ
3 ರಾಶಿಗಳಿಗೆ ಅದೃಷ್ಟ, ರಾಜಯೋಗ ಮತ್ತು ಸಂಪತ್ತಿನ ದೃಷ್ಟಿಯಿಂದ ಅತ್ಯುತ್ತಮ ಸಮಯ
March 11, 2025
6:33 AM
by: ದ ರೂರಲ್ ಮಿರರ್.ಕಾಂ
ಪಂಚಗ್ರಹಿ ಯೋಗವು ಕೆಲವು ರಾಶಿಗಳಿಗೆ ವಿಶೇಷ ಅನುಕೂಲ
March 10, 2025
11:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror