ಇಂದು ಹೊಸತೇನು ಕಲಿತೆ ?

December 25, 2025
9:35 PM
ಶಾಲೆಯಿಂದ ಮಗು ಹಿಂದಿರುಗಿದಾಗ “ಇಂದು ಹೊಸತೇನಾದ್ರೂ ಕಲಿತೆಯಾ?” ಎಂದು ಹೆತ್ತವರು ಕೇಳಬೇಕು. ಅದಕ್ಕೆ ಉತ್ತರವಾಗಿ ಮಗು ತನ್ನ ಹೊಸತಾದ ತಿಳಿವನ್ನು ವಿವರಿಸಬೇಕು. ಅದನ್ನು ಕೇಳಿದ ಹೆತ್ತವರು ಮಗುವಿನ ಗಳಿಕೆಯ ಬಗ್ಗೆ ಶಹಬ್ಬಾಸ್ ನೀಡಬೇಕು. ಇದು ದಿನಾಲೂ ಸಂಜೆಯ ಮಾತುಕತೆಯಾಗಬೇಕು. ಇದು ಕೇವಲ ಒಂದು ಆದರ್ಶಮಯ ಚಿತ್ರಣವಲ್ಲ. ಮನೆಗಳಲ್ಲಿ ನಡೆಯಲೇ ಬೇಕಾದ ಒಂದು ಚಟುವಟಿಕೆ. ಅಪ್ಪ ಅಥವಾ ಅಮ್ಮ ಹೀಗೆ ಕೇಳುತ್ತಾರೆಂಬ ನಿರೀಕ್ಷೆ ಮಗುವಿಗೂ ಇರಬೇಕು. ಅದರ ನಿರೀಕ್ಷೆ ಹುಸಿಯಾಗಬಾರದು. ಏಕೆಂದರೆ ಮಗು ಅಂದು ತಾನು ತಿಳಿದುಕೊಂಡಿರುವ ಹೊಸ ಜ್ಞಾನವನ್ನು ವಿವರಿಸಲು ಸಿದ್ಧವಾಗಿ ಬಂದಿರುತ್ತದೆ. ಆದರೆ ಹೆತ್ತವರು ಏನೂ ಕೇಳದಿದ್ದರೆ ನಿರಾಶೆಗೊಳ್ಳುತ್ತದೆ. ಹಾಗಾಗಿ ಈ ದಿನಚರಿ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿರಬೇಕು. ಇದು ಮಕ್ಕಳ ಶಿಕ್ಷಣದ ಸಫಲತೆಗಾಗಿ ಮನೆಯಲ್ಲಿ ಮಾಡುವ ಒಂದು ಉಪಾಯ.
ಈ ಉಪಾಯದ ಅರಿವು ಶಾಲೆಯಲ್ಲಿ ಶಿಕ್ಷಕರಿಗೂ ಇರಬೇಕು. ಹಾಗಾಗಿ ಅವರು ದಿನದ ಕಲಿಕೆಯಲ್ಲಿ ಏನು ಹೊಸತು ಸೇರಿದೆ ಎಂಬುದನ್ನು ಮಕ್ಕಳ ಗಮನಕ್ಕೆ ತರಬೇಕು. ಉದಾಹರಣೆಗೆ ಸ್ವಚ್ಛತೆಯ ಕುರಿತಾಗಿ ಮಗುವಿಗೆ ಶಾಲೆಯಲ್ಲಿ ಹೇಳಿ ಕೊಟ್ಟಿದ್ದರೆ ಮನೆಯಲ್ಲಿ ಕಸ ಹೆಕ್ಕುವ ಚಟುವಟಿಕೆಯನ್ನು ನಡೆಸಲು ಸೂಚನೆ ನೀಡಬೇಕು. ಮನೆಗೆ ಬಂದ ಮಗು ಕಸ ಹೆಕ್ಕಲು ಕಲಿತೆ ಎಂದು ಹೇಳಿದರೆ ಅದನ್ನು ಪೋಷಕರು ಮೆಚ್ಚಿ ತಾವೂ ಅದನ್ನು ಪ್ರೋತ್ಸಾಹಿಸಬೇಕು. ಹಕ್ಕಿಗಳ ಬಗ್ಗೆ ಪಾಠ ಮಾಡಿದರೆ ಮನೆಯ ಹತ್ತಿರ ಬರುವ ಹಕ್ಕಿಗಳನ್ನು ಗಮನಿಸಲು ಹೇಳಬೇಕು. ಅವುಗಳ ಬಣ್ಣ, ಹಾರುವ ಕ್ರಮ, ಕಾಳುಗಳನ್ನು ಹುಡುಕಿ ಕೊಕ್ಕಿನಲ್ಲಿ ಸೆಳೆದು ನುಂಗುವ ವಿಧಾನಗಳನ್ನು ಗಮನಿಸಲು ಹೇಳಬೇಕು. ಶಾಲೆಯಲ್ಲಿ ಸೂಚಿಸಿದ ಚಟುವಟಿಕೆಗಳನ್ನು ಮಾಡಲು ಮನೆಯಲ್ಲಿ ಅವಕಾಶ ನೀಡಬೇಕು. ಪರಿಸರ ವಿಜ್ಞಾನ ಪಠ್ಯದ ಅನೇಕ ವಿಷಯಗಳನ್ನು ನೋಡಿ, ಮುಟ್ಟಿ, ಎತ್ತಿ, ಮೂಸಿ ವಿವರಗಳನ್ನು ಹೇಳಲು ಕಲಿಸಿದರೆ ಅದನ್ನೇ ಮನೆಯಲ್ಲಿಯೂ ಮಾಡಿ ನೋಡಿ ವಿವಿಧ ವಸ್ತುಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಹೇಳಬೇಕು. ಹೀಗೆ ಚಟುವಟಿಕೆ ಆಧಾರಿತವಾಗಿ ಕಲಿಯುವ ಲಾಭದೊಂದಿಗೆ  ಹೊಸ ಮಾಹಿತಿಯನ್ನು ಪಡೆದದ್ದು ಮನಸ್ಸಿನಲ್ಲಿ ದಾಖಲಾಗುತ್ತದೆ. ಇಂತಹ ದಾಖಲಾತಿಯು ಮಾಹಿತಿಯನ್ನು  ಜ್ಞಾನವಾಗಿಸುತ್ತದೆ ಹಾಗೂ ಅದು ಮೆದುಳಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಮುಂದೆ ಅದನ್ನು ಸ್ಮರಣೆಗೆ ತಂದುಕೊಂಡು ಇತರ ಮಾಹಿತಿಗಳೊಂದಿಗೆ ಹೋಲಿಸುವುದರ ಮೂಲಕ ಹೆಚ್ಚು ನಿಖರವಾಗಿಸಿಕೊಳ್ಳಲು ಮಗುವಿಗೆ ಅನುಕೂಲವಾಗುತ್ತದೆ.
“ಮನೆಯಲ್ಲಿ ಏನು ವಿಶೇಷ ಕಂಡಿರಿ?” ಎಂದು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕೇಳಿಯೇ ತರಗತಿಯನ್ನು ಆರಂಭಿಸಬೇಕು. ಈ ಪ್ರಶ್ನೆಗೆ ಕೆಲವು ಮಕ್ಕಳು ಉತ್ತರಿಸಬಹುದು, ಇನ್ನು ಕೆಲವರು ಸುಮ್ಮನಿರಬಹುದು. ಆದರೆ ಒಂದು ದಿನ ಸುಮ್ಮನಿದ್ದ ಮಕ್ಕಳು ಮರುದಿನ ಬಾಯಿ ತೆರೆಯುತ್ತಾರೆ. ಅಂದರೆ ಅವರು ಮನೆಯಲ್ಲಿ ಏನಾದರೂ ನೋಡಿಕೊಂಡು ಬಂದಿರುತ್ತಾರೆ. ಆದರೆ ಆ ದಿನ ಶಿಕ್ಷಕರು ಹಿಂದಿನ ದಿನದಂತೆ “ಮನೆಯಲ್ಲಿ ಏನು ವಿಶೇಷ ಕಂಡಿರಿ” ಎಂಬ ಪ್ರಶ್ನೆ ಕೇಳದಿದ್ದರೆ ವಿದ್ಯಾರ್ಥಿಗೆ ತನ್ನ ತಯಾರಿ ವ್ಯರ್ಥವೆನ್ನಿಸುತ್ತದೆ. ಹಾಗಾಗಿ ಶಿಕ್ಷಕರು ಈ ಪ್ರಶ್ನೆ ಕೇಳುವುದನ್ನು ಮರೆಯಬಾರದು. ಕೆಲವೊಮ್ಮೆ ಎಲ್ಲಾ ವಿದ್ಯಾರ್ಥಿಗಳು ಉತ್ತರಿಸದೆ ಕುಳಿತರೂ ಮತ್ತೊಂದು ದಿನ ಉತ್ತರಿಸುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಯೇ ಸೃಜನಶೀಲ ಶಿಕ್ಷಣದ ತಳಹದಿಯಾಗಿದೆ.
ಪ್ರತಿಯೊಂದು ಮನೆಯಲ್ಲಿಯೂ ಪ್ರತಿನಿತ್ಯ ವಿಶೇಷವಿರಲಾರದು. ಆದರೆ ಎಲ್ಲಿ ಇರುತ್ತದೆಯೋ ಅಲ್ಲಿ ಅದರ ಬಗ್ಗೆ ಹೇಳಲು ಮಗುವಿನಲ್ಲೇ ಒಂದು ವಿವರಣೆ ಇರುತ್ತದೆ. ಹೊಸ ತಿಂಡಿ ಮಾಡಿದ್ದು, ಟಿ.ವಿ. ತಂದದ್ದು, ಹೊಸ ಡ್ರೆಸ್ ಖರೀದಿಸಿದ್ದು, ಯಾರಾದರೂ ನೆಂಟರು ಬಂದದ್ದು, ವಿಶೇಷ ಪೂಜೆ ಮಾಡಿದ್ದು ಮುಂತಾಗಿ ಮನೆಗಳಲ್ಲಿ ವಿಶೇಷಗಳು ನಡೆಯುತ್ತವೆ. ಇವುಗಳ ಉಸಾಬರಿ ತರಗತಿಯಲ್ಲಿ ಯಾಕೆ ಎಂತ ಪ್ರಶ್ನೆ ಮೂಡಬಹುದು. ಆದರೆ ವಿದ್ಯಾರ್ಥಿಗಳಲ್ಲಿ ವಿವರಿಸುವ ಶಕ್ತಿ ಬೆಳೆಸಲು ಇಂತಹ ಸರಳ ಟಾಪಿಕ್‍ಗಳೇ ಉಪಯುಕ್ತವಾಗುತ್ತವೆ.
ಇಂತಹ ಮಾತುಕತೆಯ ಪ್ರಯೋಜನವೇನು? ಮುಖ್ಯವಾದ ಪ್ರಯೋಜನವೆಂದರೆ ಎಳವೆಯಲ್ಲಿ ಮಾತುಗಾರರಾಗಿದ್ದ ಮಕ್ಕಳು ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿ ಮಾತುಕತೆಯನ್ನು ಕಡಿತಗೊಳಿಸುವುದಿಲ್ಲ. ಸಾಮಾನ್ಯವಾಗಿ ಬಾಲವಾಡಿಯಿಂದ ಎರಡು-ಮೂರನೇಯ ತನಕ ಸಹಜವಾಗಿ ಮಾತಾಡುತ್ತಿದ್ದ ಮಕ್ಕಳು ಮುಂದಿನ ಹಂತಗಳಲ್ಲಿ ತಮ್ಮ ಮಾತುಕತೆಯನ್ನು ಗೆಳೆಯ ಗೆಳತಿಯರಿಗಷ್ಟೇ ಸೀಮಿತಗೊಳಿಸುತ್ತಾರೆ. ಶಾಲೆಯಲ್ಲಿ ಏನು ಕಲಿಸಿದರೆಂಬುದನ್ನು ಮನೆಗೆ ಬಂದು ಅಪ್ಪ-ಅಮ್ಮನಲ್ಲಿ ಹೇಳುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಶಾಲೆಯಲ್ಲಿ ಜರಗಿದ ಮಹತ್ವಪೂರ್ಣ ಕಾರ್ಯಕ್ರಮಗಳೂ ಹೆತ್ತವರಿಗೆ ಗೊತ್ತಿರುವುದಿಲ್ಲ. ಏಕೆಂದರೆ ಶಾಲೆಯಲ್ಲಿ ಏನು ನಡೆಯುತೆಂದು ಕೇಳುವ ಅಭ್ಯಾಸವನ್ನು ಹೆತ್ತವರೂ ಬಿಟ್ಟಿರುತ್ತಾರೆ. ಮಕ್ಕಳು ತಾವಾಗಿ ಹೇಳಲೂ ಮರೆಯುತ್ತಾರೆ. ಇದರಿಂದಾಗಿ ಈಗ ಶಾಲೆ ಮತ್ತು ಮನೆಯ ನಡುವೆ ಇರಬೇಕಾದ ಸಂಬಂಧ ದುರ್ಬಲವಾಗಿದೆ.
“ಇಂದು ಹೊಸತೇನಾದರೂ ಕಲಿತೆಯಾ?” ಎಂದು ಮನೆಯಲ್ಲಿ ಅಪ್ಪ-ಅಮ್ಮ ಕೇಳುವುದರಿಂದ ಇನ್ನೊಂದು ಪ್ರಯೋಜನವಿದೆ. ಐದನೇ – ಆರನೇ ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಿಗೆ ಹೋದ  ಮಕ್ಕಳಿಗೆ “ಸಾಹಿತ್ಯ, ಸಮಾಜ, ವಿಜ್ಞಾನ ಮತ್ತು ಗಣಿತದಲ್ಲಿ ಕಲಿಸಿದ್ದನ್ನು ಇವರಿಗೆ ಹೇಗೆ ಹೇಳುವುದು” ಎಂತ ಅನ್ನಿಸುತ್ತದೆ. ಇವರಿಗೆ ಏನು ಅರ್ಥವಾದೀತು ಎಂಬ ಸಂಶಯವೇ ಇದಕ್ಕೆ ಕಾರಣ. ಆದರೆ ಈ ಸಂಶಯಕ್ಕೂ ಒಂದು ಕಾರಣವಿದೆ. ಅದೇನೆಂದರೆ ಮೇಲಿನ  ತರಗತಿಗಳಿಗೆ ಮಕ್ಕಳು ಹೋಗುತ್ತಿದ್ದಂತೆ ಶಾಲೆಯ ವಿಷಯವನ್ನು ಮಾತಾಡುವ ಅಭ್ಯಾಸ ನಿಲ್ಲಿಸಿದ ಬಳಿಕ ಅಪ್ಪ-ಅಮ್ಮನಿಗೆ ಯಾವ ವಿಷಯದಲ್ಲಿ ಎಷ್ಟು ಜ್ಞಾನವಿದೆಯೆಂಬುದರ ಪರಿಚಯವೂ ಮಕ್ಕಳಿಗೆ ಇರುವುದಿಲ್ಲ. ಉದಾಹರಣೆಗೆ ಸಾಹಿತ್ಯದಲ್ಲಿ ಡಿ.ವಿ ಗುಂಡಪ್ಪನವರ “ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ, ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ, ಜಸವು ಜನಜೀವನಕೆ ಮಂಕುತಿಮ್ಮ” ಎಂಬ ಪದ್ಯವನ್ನು ಶಾಲೆಯಲ್ಲಿ ಕಲಿಸಿದ ದಿನ ಹೊಸತೇನನ್ನು ಕಲಿತೆ ಎಂಬ ಪ್ರಶ್ನೆಗೆ ಉತ್ತರಿಸಲು ಮಗುವಿನಲ್ಲಿ ಒಂದು ವಿಷಯವಿರುತ್ತದೆ. ಅದಕ್ಕೆ ಹೆತ್ತವರು ತಮಗೆ ಗೊತ್ತಿರುವ ರೀತಿಯಲ್ಲಿ ಸ್ಪಂದಿಸಬಹುದು. ಅಥವಾ ಅವರಿಗೆ ಗೊತ್ತೇ ಇಲ್ಲದಿದ್ದರೆ ಶಿಕ್ಷಕರು ಏನೆಂದು ವಿವರಿಸಿದರು ಎಂಬುದನ್ನು ಹೇಳುವುದರ ಮೂಲಕ ಮಗುವು ಆ ಪದ್ಯದ ಸ್ಮರಣೆ ಮತ್ತು ವಿವರಣೆಯ ಮೂಲಕ ಒಂದು ಸ್ವಾಧ್ಯಾಯದ ಲಾಭವನ್ನು ಪಡೆಯಬಹುದು. ಅದೇ ರೀತಿ ಸಮಾಜ ಪಾಠದಲ್ಲಿ ಬರುವ ಅನೇಕ ವಿಷಯಗಳನ್ನು ಹೆತ್ತವರಲ್ಲಿ ಚರ್ಚಿಸುವ ಮೂಲಕ ಅವುಗಳು ಬದುಕಿನಲ್ಲಿ ಎಷ್ಟು ಮಹತ್ವವಾಗಿವೆ ಎಂಬುದನ್ನು ಮಕ್ಕಳು ಅರಿತುಕೊಳ್ಳಬಹುದು. ಉದಾಹರಣೆಗೆ ಸ್ವಾತಂತ್ರ್ಯ ಪೂರ್ವದ ಜೀವನ, ಸ್ವಾತಂತ್ರ್ಯ ಬಂದಾಕ್ಷಣ ಎದುರಿಸಿದ ಸವಾಲುಗಳು, ಸ್ವತಂತ್ರ ಭಾರತದಲ್ಲಿ ಆಗಿರುವ ಬದಲಾವಣೆಗಳು ಪಾಠದಲ್ಲಿ ಬಂದಿರುವುದಕ್ಕಿಂತ ನಿಖರವಾಗಿ ಮನೆಯಲ್ಲಿ ನಡೆಯುವ ಚರ್ಚೆಗಳಲ್ಲಿ ಮಕ್ಕಳು ತಿಳಿದುಕೊಳ್ಳಬಹುದು. ಏಕೆಂದರೆ ಸಂಕೀರ್ಣವಾದ ಸಮಾಜದಲ್ಲಿ ಆಗಿರುವ ಬೆಳವಣಿಗೆಗಳು ಪಾಠಗಳಲ್ಲಿ ಇದ್ದಷ್ಟು ಆದರ್ಶಮಯವಾಗಿರುವುದಿಲ್ಲ. ಇಂತಹ ಚಿಂತನೆಯಿಂದ ಮಕ್ಕಳಲ್ಲಿ ಯಾವುದೇ ವಿಷಯದ ವಿಶ್ಲೇಷಣೆಯನ್ನು ಮಾಡುವ ಸಾಮರ್ಥ್ಯ ಬೆಳೆಯುತ್ತದೆ. ಇನ್ನು ವಿಜ್ಞಾನ ಪಾಠಗಳಲ್ಲಿ ಕಲಿಯುವ ಅನೇಕ ವಿಷಯಗಳು ನಮ್ಮ ಜೀವನದ ಸೌಲಭ್ಯಗಳನ್ನು ಒದಗಿಸುವಲ್ಲಿ ಎಂತಹ ಪಾತ್ರವನ್ನು ವಹಿಸಿವೆ ಎಂಬುದನ್ನು ತಿಳಿಸುತ್ತವೆ. ನಮ್ಮ ಮನೆಗಳಲ್ಲಿಯೂ ಯಂತ್ರಗಳ ಉಪಯೋಗದಿಂದ ಸಮಯದ ಸದುಪಯೋಗ, ದುಡಿಮೆಯ ಕ್ರಮದಲ್ಲಿ ವ್ಯತ್ಯಾಸ, ಕೃಷಿಯೇತರ ಉದ್ಯೋಗಗಳಲ್ಲಿ ಅಂದರೆ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಉದ್ಯೋಗ ಹಾಗೂ ಆದಾಯ, ಕಾರ್ಮಿಕ ಸಂಘಟನೆಗಳು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಮನೆಯಲ್ಲಿ ಅರಿವನ್ನು ನೀಡಬಹುದು.
ತರಗತಿಯೊಳಗಿನ ಪಾಠಗಳ ವಿವರಗಳಂತೆಯೇ ತರಗತಿಯ  ಹೊರಗಿನ ಚಟುವಟಿಕೆಗಳ ಕುರಿತಾಗಿಯೂ ಚರ್ಚೆ ಮುಂದುವರಿಯುವ ಅಗತ್ಯವಿದೆ. ಉದಾಹರಣೆಗೆ ಚಿತ್ರಕಲೆ, ನೃತ್ಯ-ಹಾಡು ನಾಟಕಗಳ ಕಲೆ, ಕತೆಕವನ ಬರೆಯುವುದು, ಯಂತ್ರಗಳ ತಾಂತ್ರಿಕ ಸಂಶೋಧನೆಯಲ್ಲಿ ಆಸಕ್ತಿ, ಕೃಷಿ-ಸಸ್ಯಗಳ ಕುರಿತಾಗಿ ತಿಳಿಯುವ ಆಸಕ್ತಿ, ಸಮಾಜ ಸೇವೆಯ ಚಿಂತನೆಗಳು ಇತ್ಯಾದಿ ವಿಚಾರಗಳಲ್ಲದೆ ಮಹಾಪುರುಷರ ಜೀವನ ಚರಿತ್ರೆ, ಸಂದೇಶಗಳು, ಸೂಕ್ತಿಗಳು, ಪತ್ರಿಕೆಗಳ ಓದು, ಸಾಮಾಜಿಕ-ರಾಜಕೀಯ ವಿದ್ಯಮಾನಗಳ ವಿಶ್ಲೇಷಣೆ ಮುಂತಾಗಿ ವೈವಿಧ್ಯಮಯ ವಿಷಯಗಳು ಚರ್ಚೆಗೆ ಬಂದರೆ ಸಹಜವಾಗಿ ಹೆತ್ತವರಿಗೆ ಮಕ್ಕಳ ಒಲವು ಯಾವ ಕಡೆಗೆ ಇದೆ ಎಂಬುದು ತಿಳಿಯುತ್ತದೆ. ಆಗ ಅವರು ವೈದ್ಯನಾಗು, ಇಂಜಿನಿಯರ್ ಆಗು ಎಂತ ಒತ್ತಾಯಿಸುವ ಸಾಧ್ಯತೆ ಇಲ್ಲ. ಬದಲಾಗಿ ಮಕ್ಕಳಿಗೆ ಆಸಕ್ತಿ ಇರುವ ಅಧ್ಯಯನ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಅನುಕೂಲ ಮಾಡಿಕೊಡಬಹುದು. ಅದಕ್ಕಾಗಿ ಹೊಸ ಹೊಸ ಕಲಿಕೆಯ ಬಗ್ಗೆ ಸಾಹಾರ್ದಯುತವಾದ ಶೇರಿಂಗ್ ಮನೆಯಲ್ಲಿ ನಡೆಯುತ್ತಿರಬೇಕು.
ಮಕ್ಕಳೊಂದಿಗೆ ಸಂವಾದ ಮಾಡಿದ ಅನೇಕ ಕುಟುಂಬಗಳು ನಮ್ಮ ಮಧ್ಯೆ ಇರಬಹುದು. ಅವರಿಗೆ ಅನೇಕ ಹೊಸ ವಿದ್ಯಮಾನಗಳ ಮತ್ತು ಪ್ರಗತಿಗಳ ಬಗ್ಗೆ ತಿಳಿದಿರಬಹುದು. ಅಲ್ಲದೆ ಅವರು ಹೊಸ ವಿಚಾರಗಳ ಸ್ಪಷ್ಟತೆಗಾಗಿ ಕೆಲವೊಂದು ಪುಸ್ತಕಗಳನ್ನು ತರಿಸಿಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಂಡಿರಬಹುದು. ಇವೆಲ್ಲವೂ ಹೊಸ-ಹೊಸತು ಕಲಿಯುವುದರ ಲಾಭ ಎನ್ನುವುದರಲ್ಲಿ ಅನುಮಾನವಿಲ್ಲ. ಅಂತಹ ಲಾಭಗಳನ್ನು ಪ್ರತಿಯೊಂದು ಕುಟುಂಬವೂ ಪಡೆಯಲು ಮಕ್ಕಳೊಂದಿಗೆ ನಿತ್ಯ ಸಂವಾದ ನಡೆಸುವುದು ಅಗತ್ಯ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
“ಅಡಿಕೆ ಹಾನಿಕಾರಕ” ಅಪವಾದದ ವಿರುದ್ಧ ಧ್ವನಿ ಎತ್ತಿದರೆ “ಅಡಿಕೆ’ ಉಳಿಯಬಹುದು…!
January 2, 2026
11:06 AM
by: ಪ್ರಬಂಧ ಅಂಬುತೀರ್ಥ
ಕನ್ನಡ ಅನ್ನದ ಭಾಷೆ ಅಲ್ಲ ಎಂಬ ಮಿಥ್ಯೆ
January 1, 2026
6:05 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror