ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಎಲ್ಲಾ ಪೋಷಕರಿಗೆ ಒಂದು ಪ್ರಶ್ನೆ. ನೀವೆಲ್ಲಾ ಶಾಲೆಗೆ ಹೋದಾಗ ನೀವು ನಿಮ್ಮ ಶಾಲಾ ಕೊಠಡಿಗಳನ್ನು ಸ್ವಚ್ಛ ಮಾಡಿಲ್ಲವೇ..? ಶಿಕ್ಷಕರು ಈ ರೀತಿ ಸ್ವಚ್ಚ ಮಾಡಿಸಿದ್ದಕ್ಕೆ ನಿಮ್ಮ ಪೋಷಕರು ಎಂದಾದರು ಶಿಕ್ಷಕರನ್ನು ಬೈದಿದ್ದು ಇದೆಯಾ..? ಹಾಗೆ ನೀವು ಮಾಡಿದ ಸ್ವಚ್ಚತಾ ಕಾರ್ಯವನ್ನು ಈಗ ನಿಮ್ಮ ಮಕ್ಕಳು ಮಾಡಬಾರದೆ..? ಮಾಡಿದ್ರೆ ಅದು ತಪ್ಪಾಗುತ್ತದಾ..? ಈ ಬಗ್ಗೆ ಪತ್ರಕರ್ತ ರಾಜೀವ್ ಹೆಗ್ಡೆ ಬಹಳ ಅರ್ಥಪೂರ್ಣವಾದ ಚಿಂತನೆಯೊಂದನ್ನು ಬರೆದಿದ್ದಾರೆ. ಎಲ್ಲಾ ಪೋಷಕರು ಓದಲೇ ಬೇಕು.
ಕೇವಲ ಎರಡು ದಶಕಗಳ ಹಿಂದಿನ ಮಾತು. ನಾವು ಓದುತ್ತಿದ್ದ ಶಾಲೆಯಲ್ಲಿ ನೀರಿನ ಟ್ಯಾಂಕ್, ಬಾವಿ, ಕೊಳ ಸೇರಿ ಯಾವುದೇ ಸೌಕರ್ಯ ಇರಲಿಲ್ಲ. ನಾವೇ ಶಾಲೆಯ ಪ್ರತಿ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದೆವು. ಪ್ರತಿ ದಿನ ವರಾಂಡಕ್ಕೆ ನೀರು ಹಾಕಿ ತೊಳೆಯುತ್ತಿದ್ದೆವು. ನೀರಿನ ಡ್ರಮ್ ಸ್ವಚ್ಛಗೊಳಿಸಿ ಕುಡಿಯುವ ನೀರು ತುಂಬಿಡುತ್ತಿದ್ದೆವು. ಶಾಲೆಯಿಂದ ನೂರು ಮೀಟರ್ ದೂರ ಇದ್ದ ಮನೆಯ ಬಾವಿಯಿಂದ ಕೊಡದಲ್ಲಿ ನೀರು ಎತ್ತಿಕೊಂಡು ಬರುತ್ತಿದ್ದೆವು. ಹಬ್ಬ ಹಾಗೂ ಕಾರ್ಯಕ್ರಮಗಳು ಬಂದಾಗ ನಾವೇ ಶಾಲೆಗೆ ತೋರಣ ಕಟ್ಟಿ, ಅಲಂಕಾರ ಮಾಡುತ್ತಿದ್ದೆವು. ಗಾರ್ಡನಿಂಗ್ ಕೂಡ ನಮ್ಮದೇ ಜವಾಬ್ದಾರಿ ಆಗಿತ್ತು. ಮೈದಾನದ ಸಣ್ಣ ಪುಟ್ಟ ಕೆಲಸವನ್ನು ಕೂಡ ನಾವೇ ಮಾಡುತ್ತಿದ್ದೆವು.
ಪ್ರೌಢಶಾಲೆಗೆ ಹೋಗುತ್ತಿದ್ದಾಗ ಮೈದಾನದ ಮಣ್ಣನ್ನು ಕೂಡ ನಾವೇ ಎತ್ತಿದ್ದೆವು. ವಾಲಿಬಾಲ್, ಖೋಖೋ ಸೇರಿ ಇತರ ಆಟಗಳಿಗೆ ಬೇಕಾಗುವ ಕಂಬವನ್ನೂ ನಾವೇ ತರುತ್ತಿದ್ದೆವು. ಇದನ್ನೆಲ್ಲ ನಿಭಾಯಿಸಲು ಮುಖ್ಯಮಂತ್ರಿ, ಆರೋಗ್ಯ/ಸ್ವಚ್ಛತಾ ಮಂತ್ರಿ, ಕ್ರೀಡಾ ಮಂತ್ರಿ ಎಂದೆಲ್ಲ ಇರುತ್ತಿದ್ದರು. ಇದ್ಯಾವುದಕ್ಕೂ ಜಾತಿ, ಜನಾಂಗದ ಬಣ್ಣ ಇರಲಿಲ್ಲ. ಹಾಗೆಯೇ ಇದೊಂದು ಹೊರೆ ಅಥವಾ ದಬ್ಬಾಳಿಕೆ ಎಂದುಕೊಳ್ಳದೇ ಪ್ರತಿ ದಿನ ಖುಷಿಯಿಂದ ಮಾಡುತ್ತಿದ್ದೆವು. ಅಚ್ಚುಕಟ್ಟಾಗಿ ಈ ಕೆಲಸ ಮಾಡುವ ಮೂಲಕ ಶಿಕ್ಷಕರಿಂದ ಭೇಷ್ ಎನಿಸಿಕೊಳ್ಳಬೇಕು ಎನ್ನುವ ಸಣ್ಣ ಸ್ವಾರ್ಥ ಕೂಡ ಇತ್ತು. ಆದರೆ ಈ ಶಿಕ್ಷಣಕ್ಕೆ ಕಾನೂನು, ನೀತಿ, ಹಕ್ಕುಗಳು ಎನ್ನುವ ಲೇಪನ ಆಗುತ್ತಿದ್ದಂತೆ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿದೆ. ಈಗ ಶಿಕ್ಷಣವು ಅಧಃಪತನದತ್ತ ಸಾಗುತ್ತಿದೆಯೇ ಎನ್ನುವ ಆತಂಕ ಶುರುವಾಗಿದೆ.
ಓರ್ವ ವಿದ್ಯಾರ್ಥಿನಿ ಶಾಲೆಯ ಕೊಠಡಿ ಒರೆಸುತ್ತಿರುವ ಚಿತ್ರ ಹಾಕಿ ಶಿಕ್ಷಕಿ ಮಹಾ ಅಪರಾಧ ಮಾಡಿದ್ದಾರೆ ಎಂದು ಒಂದಿಷ್ಟು ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ ಇಂತಹ ಸುದ್ದಿ ಮಾಡುವಾಗ ಸಣ್ಣ ಸೂಕ್ಷ್ಮತೆಯನ್ನಾದರೂ ಮಾಧ್ಯಮಗಳು ಕಳೆದುಕೊಳ್ಳುತ್ತಿರುವುದು ಹೇಸಿಗೆಯ ವಿಚಾರ. ಮೂಲ ವಿಚಾರಕ್ಕೆ ಬರುವ ಮುನ್ನ ಒಂದು ಘಟನೆಯನ್ನು ವಿವರಿಸುತ್ತೇನೆ.
ಒಂದು ದಶಕಗಳ ಹಿಂದೆ ಕರ್ನಾಟಕದಲ್ಲಿ ಆಗ ತಾನೆ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿತ್ತು. ಕಾಯ್ದೆ ಪ್ರಕಾರ ಮಕ್ಕಳ ಹಕ್ಕುಗಳ ಆಯೋಗ ರಚನೆಯಾಗಿತ್ತು. ಆ ಆಯೋಗದಲ್ಲಿನ ದೂರಿನ ವಿಚಾರಣೆಯು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನಡೆಯುತ್ತಿತ್ತು. ಓರ್ವ ಗಣಿತದ ಶಿಕ್ಷಕಿಯ ವಿರುದ್ಧ ವ್ಯಕ್ತಿಯೊಬ್ಬ ದೂರು ನೀಡಿದ್ದ. ತನ್ನ ಮಗಳಿಗೆ ಶಿಕ್ಷಕಿ ಹೊಡೆದಿದ್ದಾರೆ ಹಾಗೂ ಕಿರುಕುಳ ಕೊಡುತ್ತಾರೆ ಎನ್ನುವುದು ದೂರಿನ ಸಾರಾಂಶವಾಗಿತ್ತು. ತನ್ನ ಮಗಳಿಗೆ ಶಿಕ್ಷಕಿ ಹೇಗೆ ಹೊಡೆದರು ಎನ್ನುವುದನ್ನು ಆ ತಂದೆ ತೋರಿಸುತ್ತಿದ್ದ. ಆ ತಂದೆಯ ವರ್ತನೆ ನೋಡಿ ಆಕ್ರೋಶಗೊಂಡ ನ್ಯಾಯಮೂರ್ತಿ, ʼಶಿಕ್ಷಕಿ ಹೊಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ನೀನು ಹೊಡೆದ ರೀತಿ ಅಮಾನವೀಯವಾಗಿದೆ. ಇನ್ನೊಮ್ಮೆ ಈ ರೀತಿ ಮಾಡಿದರೆ ನಿನ್ನ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡುತ್ತೇನೆʼ ಎಂದು ನ್ಯಾಯಮೂರ್ತಿ ಎಚ್ಚರಿಸಿದರು. ನಮ್ಮ ಕಾನೂನು ಹಾಗೂ ಕಾಯ್ದೆಗಳು ಶಿಕ್ಷಣವನ್ನು ಈ ಮಟ್ಟಿಗೆ ಹದಗೆಡಿಸಿವೆ.
ನಾನು ಶಾಲೆಗೆ ಹೋಗುತ್ತಿದ್ದಾಗ, ನನ್ನ ಅಪ್ಪನೇ ಶಾಲೆಗೆ ಬಂದು ʼನನ್ನ ಮಗ ಸರಿಯಾಗಿ ಓದುತ್ತಿಲ್ಲ, ಸರಿಯಾಗಿ ಎರಡು ಕೊಡಿʼ ಎಂದು ಬೆತ್ತವನ್ನೂ ಕೊಟ್ಟು ಹೋಗುತ್ತಿದ್ದರು. ಶಿಕ್ಷಕರಿಂದ ಆಗಾಗ ಒಂದೆರಡು ಏಟು ತಿಂದರೂ ಪ್ರೀತಿ, ಗೌರವ, ಭಯ-ಭಕ್ತಿ ಕಡಿಮೆ ಆಗಿರಲಿಲ್ಲ. ಆದರೆ ಈ ಕಾಯ್ದೆಗಳು ಏನು ಮಾಡುತ್ತಿವೆ? ಶಿಕ್ಷಕರು ಹೊಡೆಯಬಾರದು, ಗದರಿಸಬಾರದು, ಕೆಲಸ ಮಾಡಿಸಬಾರದು… ಹೀಗೆ ಮಾಡಬಾರದು ಎನ್ನುವ ನೂರಾರು ಪಟ್ಟಿಗಳಿವೆ. ಏನು ಮಾಡಬೇಕು ಎಂದರೆ, ಊಟ ಹಾಕಿಸಬೇಕು, ಹಾಲು ಕುಡಿಸಬೇಕು, ಅದರ ಲೆಕ್ಕ ಬರೆದಿಡಬೇಕು ಸೇರಿ ಇಂತಹ ಹತ್ತಾರು ಕಾರಕೂನರ ಕೆಲಸವನ್ನು ಶಿಕ್ಷಕರಿಗೆ ನೀಡಲಾಗಿದೆ. ಇಂತಹ ಬೇಕು-ಬೇಡದರ ಮಧ್ಯೆ….. ಇಂತಹ ಕೆಲಸಕ್ಕೆ ಬಾರದ ವಿಚಾರವನ್ನು ಶಿಕ್ಷಕಿ ಅಪರಾಧಿ ಎಂದು ಸುದ್ದಿ ಮಾಡುವವರಿಗೆ ಸಣ್ಣ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಹೇಗೆ…
ರಾಜ್ಯದ ಯಾವುದಾದರೂ ಒಂದು ಸರ್ಕಾರಿ ಶಾಲೆಯಲ್ಲಿ ಕೊಠಡಿ, ಶೌಚಾಲಯ, ವರಾಂಡ ಸ್ವಚ್ಛಗೊಳಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನೀಡಲಾಗಿದೆಯೇ? ಇಲ್ಲವೆಂದಾದರೆ ಈ ಕೆಲಸವನ್ನು ದೇವರಿಗೆ ಸಮಾನ ಎಂದು ಗೌರವಿಸುವ ಶಿಕ್ಷಕರು ಮಾಡಲು ಸಾಧ್ಯವಿದೆಯೇ? ಜೀವನದ ಪ್ರತಿಯೊಂದು ಕಲಿಕೆಗೆ ಶಾಲೆಯು ವೇದಿಕೆ ಆಗಬೇಕು. ಹೀಗಿರುವಾಗ ನಾನು ಓದುವ ಶಾಲೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಹಾಗೂ ಶುದ್ಧವಾಗಿಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾದರೆ ಸಮಸ್ಯೆ ಏನು? ಇಂದು ಶಾಲೆಯಲ್ಲಿನ ಕೊಠಡಿ, ಶೌಚಾಲಯ ಸ್ವಚ್ಛಗೊಳಿಸಲು ಇಷ್ಟಪಡದ ವಿದ್ಯಾರ್ಥಿಯು ನಾಳೆ ಮನೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸಲು ಬೇರೆಯವರತ್ತ ಮುಖ ಮಾಡುತ್ತಾನೆ.
ಬಯಸುವ ಸಮಾನತೆಯ ಸಮಾಜವು ಇಂತಹ ಅಸಂಬದ್ಧ ಶಿಕ್ಷಣ ವ್ಯವಸ್ಥೆಯಿಂದ ನಿರ್ಮಾಣವಾಗಲು ಸಾಧ್ಯವಿದೆಯೇ? ನೀವು ಮೂತ್ರ ಮಾಡಿದ ಶೌಚಾಲಯ, ನೀವು ಓದುವ ಕೊಠಡಿಗೆ ನೀವು ನೀರು ಹಾಕಿದರೆ ಯಾವ ವ್ಯಕ್ತಿಯ ಜಾತಿ-ಕುಟುಂಬದ ಘನತೆಗೆ ಕುತ್ತಾಗುತ್ತದೆಯೇ? ಶಾಲೆ ಎನ್ನುವುದು ಎರಡನೇ ಮನೆಯಿದ್ದಂತೆ. ಎರಡನೇ ಮನೆಯನ್ನು ವಿದ್ಯಾರ್ಥಿಗಳೇ ಸ್ವಚ್ಛವಾಗಿರಿಸಿಕೊಳ್ಳಬೇಕು. ಅದು ಅವರ ಜವಾಬ್ದಾರಿ ಹಾಗೂ ಕಲಿಕೆಯ ಒಂದು ಮಾರ್ಗವೂ ಹೌದು.
ನಮ್ಮ ದೇಶದಲ್ಲಿ ಕರ್ತವ್ಯಕ್ಕಿಂತ ಹಕ್ಕಿನ ಪಾಠವೇ ಹೆಚ್ಚಾಗುತ್ತಿರುವ ಪರಿಣಾಮವೇ ಇದು.ಕಾನೂನು, ಕಾಯ್ದೆಗಿಂತ ಮೊದಲು ನನ್ನ ಶಾಲೆ, ನನ್ನ ಸರ್ಕಾರ, ನನ್ನ ದೇಶ, ನನ್ನ ದೇಶದ ಸಂಪತ್ತು ಎನ್ನುವ ಪಾಠ ಮೊದಲು ಆಗಬೇಕು. ಇಲ್ಲವಾದಲ್ಲಿ ಶಾಲೆಯಲ್ಲಿ ಕೆಲಸ ಮಾಡಿಸುವುದು ಅಮಾನವೀಯವಾಗಿಯೂ ಕಾಣಿಸುತ್ತದೆ. ಮುಂದೆ ಕೋಣ, ಕತ್ತೆಯಂತೆ ಬೆಳೆದು ದೊಡ್ಡವರಾದಾಗ ದೇಶ ಭ್ರಷ್ಟ ಮನಃಸ್ಥಿತಿಯನ್ನು ಸೃಷ್ಟಿಸುತ್ತದೆ. ಹಾಗೆಯೇ ಈ ಕಾಯ್ದೆ ಹೆಸರಲ್ಲಿ ವಸೂಲಿ ಮಾಡುವ ʼಓರಾಟಗಾರರುʼ ಹೆಚ್ಚಾಗುತ್ತಾರೆ.
ವಿಶೇಷ ಸೂಚನೆ: ಸರ್ಕಾರಿ ಶಾಲೆಯಲ್ಲಿ ಕೆಳ ಜನಾಂಗದವರಿಂದ ಮಾತ್ರ ಕೆಲಸ ಮಾಡಿಸುತ್ತಿದ್ದರು ಎನ್ನುವ ಬುದ್ಧಿವ್ಯಾದಿಗಳೂ ಅಲ್ಲಲ್ಲಿ ದೊರೆಯಬಹುದು. ಅಂದ್ಹಾಗೆ ನಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ, ನಾನು ಶಾಲೆಗೆ ಹೋಗುವಾಗ ನನ್ನ ತಂದೆ ಎಸ್‌ಡಿಎಂಸಿಯಲ್ಲೂ ಇದ್ದರು. ಗ್ರಾಮ ಪಂಚಾಯಿತಿ, ಸಂಘ ಸಂಸ್ಥೆಗಳ ಸದಸ್ಯ, ಅಧ್ಯಕ್ಷರಾಗಿದ್ದರು. ಆದರೆ ಶಾಲೆಯ ಯಾವುದೇ ಕೆಲಸದಿಂದ ನನ್ನ ಜಾತಿ, ತಂದೆಯ ಹುದ್ದೆ ಆಧರಿಸಿ ವಿನಾಯಿತಿ ಇರಲಿಲ್ಲ. ನನ್ನ ಜೀವನದಲ್ಲಿ ಒಂದಿಷ್ಟು ಶಿಸ್ತು ಹಾಗೂ ದೇಶ ಪ್ರೇಮ ಬಂದಿದ್ದರೆ ಅದಕ್ಕೆ ನನ್ನ ಅತ್ಯದ್ಭುತ ಶಿಕ್ಷಕರು ಕಾರಣ. ನಾವು ಮಾಡಿದ್ದ ಯಾವ ಕೆಲಸವೂ ನಮಗೆ ಶಿಕ್ಷೆ ಆಗಿ ಕಾಣಿಸಲಿಲ್ಲ, ಜೀವನದ ಪಾಠವಾಗಿತ್ತು. ಕೇವಲ ಪುಸ್ತಕಗಳು ಪಾಠ ಮಾಡುವುದಿಲ್ಲ ಎನ್ನುವುದು ಗೊತ್ತಿರಲಿ. ಇಂತಹ ಸೂಕ್ಷ್ಮಗಳನ್ನು ಅರಿಯುವ ಜನರು ಮಾಧ್ಯಮದಲ್ಲಿ ಹಾಗೂ ಆಡಳಿತ ನಡೆಸುವ ವಲಯದಲ್ಲಿ ಹೆಚ್ಚಾಗಲಿ.
ಬರವಣಿಗೆ : ರಾಜೀವ್ ಹೆಗ್ಡೆ, ಪತ್ರಕರ್ತರು
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…