ಏನಾಗ್ತಾ ಇದೆ ಶಿಕ್ಷಣದಲ್ಲಿ ಎಂತ ಯಾರಾದ್ರೂ ಕೇಳ್ತಾರಾ?

October 8, 2025
9:53 PM
ನಮ್ಮ ಶಿಕ್ಷಕಿಯರು ರಜೆ ಇಲ್ಲದೆ ದಣಿಯುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟರೆ ಹಿಂದಿರುಗುವಾಗ ಸಂಜೆ 9 ಗಂಟೆ ಆಗುತ್ತದೆ. ಅವರ ಎಳೆಯ ಮಕ್ಕಳನ್ನು ನೋಡಿಕೊಳ್ಳಲು ಶಿಕ್ಷಕಿಯರ ಅತ್ತೆ ಮಾವ ಅಥವಾ ತಾಯಿ ಸಹಕರಿಸಿದರೆ ಅದು ಅವರ ಭಾಗ್ಯ. ಇಲ್ಲವಾದರೆ ಅವರು ಮಗುವನ್ನು ಎತ್ತಿಕೊಂಡು ಹೋಗಬೇಕು. ವಿದ್ಯುತ್‌ ಇಲಾಖೆಯವರ ಮಾಹಿತಿ ಆಧಾರಿತವಾಗಿ ಮನೆಗಳನ್ನು ಗುರುತಿಸಿರುವುದರಿಂದ ಶಿಕ್ಷಕರು ಮಾಹಿತಿ ಸಂಗ್ರಹಿಸಬೇಕಾದ ಲೊಕೇಶನ್‍ಗಳು ಎಲ್ಲೆಲ್ಲಿಯೋ ಇವೆ. ಅಲ್ಲಿಗೆ ಹುಡುಕಿಕೊಂಡು ಹೋಗುವುದೊಂದು ಪ್ರಯಾಸ. ಒಂದು ವೇಳೆ ಹೋದರೂ ಅಲ್ಲಿ ಅಂತರ್ಜಾಲ ಪ್ರವಾಹ ಇರುವುದಿಲ್ಲ. ಸರ್ವರ್ ತಲುಪುವುದಿಲ್ಲ. ಅದಲ್ಲದೆ ಅವರು ತಾವು ಮಾಹಿತಿ ಕೊಡುವುದಿಲ್ಲವೆಂದರೆ ಕಷ್ಟಪಟ್ಟು ಹೋದದ್ದೂ ನಿಷ್ಫಲ. ಮಾಹಿತಿ ಕೊಡಬೇಕಾಗಿರುವುದು ಅನಿವಾರ್ಯವಲ್ಲವೆಂದು ಸರಕಾರದ ಕಡೆಯಿಂದಲೇ ವಿನಾಯಿತಿ ಇದೆ. ಇದಲ್ಲದೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ತಮಗೆ ಇಷ್ಟವಿಲ್ಲದ ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರಿಸದಿದ್ದರೂ ನಡೆಯುತ್ತದೆ.
ಹೀಗೆ ಪ್ರಶ್ನಾವಳಿಯು ಪೂರ್ಣವಾಗಿ ಖಾಲಿ ಉಳಿದರೂ ಆಂಶಿಕವಾಗಿ ಖಾಲಿ ಉಳಿದರೂ ಮಾಹಿತಿ ಅಪೂರ್ಣವಾದರೂ ಅದು ಸಂಗ್ರಹದ ಕಾರ್ಯ ಪೂರ್ಣಗೊಂಡ ಲೆಕ್ಕಕ್ಕೆ ಸೇರುತ್ತದೆ. ಹೀಗೆ ಖಾಲಿ ಹಾಗೂ ಅಪೂರ್ಣ ಫಾರ್ಮ್‍ಗಳ ಮಾಹಿತಿಯನ್ನು ಸಂಕಲಿಸುವಾಗ ಅಂಕಿ ಅಂಶಗಳು ತಾಳೆಯಾಗುವುದು ಹೇಗೆ? ಉದ್ಯೋಗ, ಆದಾಯ, ಆಸ್ತಿ ಮುಂತಾದ ಆರ್ಥಿಕ ಮಾಹಿತಿಗಳನ್ನು ಸರಿಯಾಗಿ ಕೊಡದಿದ್ದಾಗ ಸಮಿಕ್ಷೆಯ ವರದಿಯನ್ನು ಸಮರ್ಪಕವಾಗಿ ತಯಾರಿಸುವುದು ಹೇಗೆ? ಕೃಷಿ, ಶಿಕ್ಷಣ, ನಿರುದ್ಯೋಗ ಮತ್ತು ಕಾಮಗಾರಿಗಳ ವೇತನಗಳಲ್ಲಿ ಪ್ರಾದೇಶಿಕ ಭಿನ್ನತೆಗಳಿರುವಾಗ ರಾಜ್ಯಮಟ್ಟದಲ್ಲಿ ಸಂಕಲಿಸುವ ಶೇಕಡಾವಾರು ಫಲಿತಾಂಶಗಳು ವಾಸ್ತವ ಪರಿಸ್ಥಿತಿಯ ಚಿತ್ರಣವನ್ನು ನೀಡಲು ಹೇಗೆ ಸಾಧ್ಯ?
ಸಾರ್ವಭೌಮ ಭಾರತದ ಕನಸನ್ನು ಹೊತ್ತು ನಡೆದ ಸ್ವಾತಂತ್ರ್ಯ ಹೋರಾಟದ ಯಶಸ್ಸು ಕೇವಲ 78 ವರ್ಷಗಳಲ್ಲಿ ಅಂದರೆ 1947 ರಿಂದ 2025 ಕ್ಕಾಗುವಾಗ ಕಾಣಿಸಿಕೊಂಡ ಛಿದ್ರತೆಯ ಬಿರುಕುಗಳಿಂದಾಗಿ ಹೊಸ ಆತಂಕಗಳನ್ನು ಸೃಷ್ಟಿಸಿದೆ. ಜಾತಿಯಾಧಾರಿತವಾಗಿ ನಡೆಯುತ್ತಿದ್ದ ಶೋಷಣೆಯನ್ನು ಶಿಕ್ಷಣದ ಸಮಾನತೆಯ ಮೂಲಕ ಪರಿಹರಿಸುವ ಪ್ರಯತ್ನಗಳಿಗೆ ಬಲ ತುಂಬದೆ ಇದ್ದುದರಿಂದ ಸಾಮಾಜಿಕ ಶಿಥಿಲತೆಯನ್ನು ಸಾಕಿಕೊಂಡು ಬರಲಾಯಿತು. ಹೀಗಾಗಿ ಸರಕಾರದ ಯೋಜನೆಗಳು, ಅನುದಾನಗಳು ಹಾಗೂ ಸೌಲಭ್ಯಗಳು ಸೂಕ್ತ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅವು ಮಧ್ಯದಲ್ಲೇ ಭ್ರಷ್ಟಾಚಾರದ ಪ್ರವಾಹದಲ್ಲಿ ಸಿಲುಕಿ ಮತ್ಯಾರದೋ ಪಾಲಾಗುತ್ತಿವೆ. ಇದನ್ನು ತಪ್ಪಿಸಲು ರಾಜಕೀಯ ಭ್ರಷ್ಟಾಚಾರವನ್ನೇ ನಿಯಂತ್ರಿಸಬೇಕು. ಆದರೆ ಇಂದು ರಾಜಕೀಯ ಮತ್ತು ಭ್ರಷ್ಟಾಚಾರದ ನಡುವಿನ ಸಮೀಕರಣ ಭಾರೀ ಬಲವಾಗಿರುವುದರಿಂದ ಅಧಿಕಾರ ಲಾಲಸೆಯ ಪ್ರೇರಣೆಗಳು ದೇಶದ ಏಕತೆ ಮತ್ತು ಸಮಗ್ರತೆಯೊಳಗೆ ಛಿದ್ರಗಳನ್ನು ಹುಡುಕಲು ಯತ್ನಿಸುತ್ತವೆ. ಅದಕ್ಕೊಂದು ಪ್ರಮುಖ ಪರಿಕಲ್ಪನೆ ಎಂದರೆ ಜಾತಿಯಾಧಾರಿತವಾಗಿ ಸಮಾಜವನ್ನು ವಿಭಜಿಸುವುದು. ಅದನ್ನು ಔಪಚಾರಿಕವಾಗಿ ತೋರಿಸುವ ಉದ್ದೇಶದಿಂದ ಇತ್ತೀಚೆಗೆ ಕರ್ನಾಟಕ ಸರಕಾರವು ಜಾತಿಗಣತಿಯನ್ನು ಮಾಡುವ ನಿರ್ಧಾರ ಮಾಡಿತು. ಹಿಂದುಳಿದವರ ದುಃಸ್ಥಿತಿಗೆ ಮೇಲಸ್ತರದ ಜಾತಿಗಳು ಮಾಡಿದ ಶೋಷಣೆಯೇ ಕಾರಣವೆಂದು ಅಂಕಿ ಅಂಶಗಳ ಸಹಿತ  ತೋರಿಸುವ ಹುನ್ನಾರ ಅದರ ಹಿಂದೆ ಇತ್ತು.
ಈ ಬಗೆಯ ಜಾತಿಯಾಧಾರಿತ ಶೋಷಣೆಯನ್ನು ನಿವಾರಿಸುವ ಉದ್ದೇಶವೇ ಕಳೆದ ಏಳು ದಶಕಗಳಲ್ಲಿ ಸ್ವತಂತ್ರ ಭಾರತದಲ್ಲಿ ಅಂಗೀಕರಿಸಲ್ಪಟ್ಟ ಹೆಜ್ಜೆಯಾಗಿತ್ತು. ಆದರೆ ಅದರ ವಿಫಲತೆಗೆ ಕಾರಣವಾಗಿರುವ ಭ್ರಷ್ಟಾಚಾರವನ್ನು ಮರೆ ಮಾಚಲು ಜಾತಿಗಣತಿ ಸಹಾಯವಾಗಲಿತ್ತು. ಆದರೆ ಹಾಗೆಲ್ಲ ಜಾತಿ ಗಣತಿ ಮಾಡುವುದಕ್ಕೆ ನ್ಯಾಯಾಲಯದ ಮೂಲಕವೇ ವಿರೋಧ ಬಂದಾಗ ಇಡೀ ಕಾರ್ಯಕ್ರಮವನ್ನು “ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ” ಹೆಸರಿನಲ್ಲಿ ನಡೆಸಲು ಮುಖ್ಯಮಂತ್ರಿಗಳಾಗಿರುವ ಶ್ರೀ ಸಿದ್ದರಾಮಯ್ಯನವರು ನಿರ್ಧರಿಸಿದರು. ಅಂದರೆ ಹೊಸ ಶಿರೋನಾಮೆಯಲ್ಲಿ ಕಾರ್ಯಕ್ರಮ ನಡೆಸಿ ಜಾತಿ ಗಣತಿಯನ್ನು ಬಲವಂತದಿಂದ ಮಾಡುವ ಪ್ರಕ್ರಿಯೆ ಆರಂಭವಾಯಿತು. ಅದರ ಅಂಗವಾಗಿ 2025 ರ ಸೆಪ್ಟಂಬರ್ 22 ರಂದು ಸರಕಾರಿ ಶಾಲಾ ಶಿಕ್ಷಕರನ್ನು ಮನೆ ಮನೆ ಭೇಟಿ ಮತ್ತು ಮಾಹಿತಿ ಸಂಗ್ರಹಕ್ಕಾಗಿ ಇಳಿಸಿದರು. ಶಾಲೆಗಳ ಮಧ್ಯ ವಾರ್ಷಿಕ ರಜೆಯಾದ ದಸರಾದ ದಿನಗಳಲ್ಲಿ ಗ್ರಾಮೀಣ ಕರ್ನಾಟಕದ ಶಿಕ್ಷಕರು ತಮ್ಮ ಮನೆ ಬಿಟ್ಟು ಊರವರ ಮನೆಗಳಲ್ಲಿ ಮಾಹಿತಿಗಾಗಿ ಅಲೆದಾಡಿದ್ದಾರೆ.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬ ಹೆಸರಿದ್ದ ಕಾರಣ ಈ ಗಣತಿ ಕಾರ್ಯದಲ್ಲಿ ಅನೇಕ ಅನುಪಯುಕ್ತ ಹಾಗೂ ಉತ್ತರಿಸಲು ಸಂಕೋಚ ಪಡುವ ಪ್ರಶ್ನೆಗಳನ್ನು ತುರುಕಿ ಅವುಗಳ ಸಂಖ್ಯೆಯನ್ನು 60 ರಷ್ಟು ಏರಿಸಲಾಗಿತ್ತು. ಹಾಗಾಗಿ ಪ್ರತಿ ಮನೆಯಲ್ಲಿಯೂ ಮಾಹಿತಿ ಸಂಗ್ರಹಕ್ಕೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಅಲ್ಲದೆ ಎಲ್ಲವೂ ಮೊಬೈಲ್ ಆಪ್‍ನಲ್ಲಿ ತುಂಬಿಸಿ ಆಪ್‍ಲೋಡ್ ಮಾಡಬೇಕಾಗಿದ್ದ ಕಾರಣ ಅದಕ್ಕೆ ತಾಂತ್ರಿಕ ವ್ಯವಸ್ಥೆಗಳು ಉನ್ನತ ಮಟ್ಟದಲ್ಲಿ ಇರಬೇಕಿತ್ತು. ಸರ್ವರ್ ತೊಂದರೆ, ಆಧಾರ್ ಸಂಖ್ಯೆಯಲ್ಲಿ ತಪ್ಪು ಸೇರಿಕೆ, ಎಲ್ಲಿಂದೆಲ್ಲಿಗೋ ಮಾಹಿತಿಗಾಗಿ ಅಲೆದಾಟ, ಭೇಟಿಯ ಕಾಲದಲ್ಲಿ ಲಭ್ಯರಿಲ್ಲದ ಮನೆಮಂದಿ,  ಅವರಲ್ಲಿ ದಾಖಲೆಗಳ ಅಲಭ್ಯತೆ ಇತ್ಯಾದಿ ತಾಂತ್ರಿಕ ಸಮಸ್ಯೆಗಳು ಇಡೀ ಕೆಲಸದ ಅವಧಿಯನ್ನು ದೀರ್ಘಗೊಳಿಸಿದುವು. ಸದ್ಯದಲ್ಲೇ ಜಾತಿ ಗಣತಿ ನಡೆಸುವ ನಿರ್ಧಾರವು ಕೇಂದ್ರ ಸರಕಾರದಿಂದ ಪ್ರಕಟಿಸಲ್ಪಟ್ಟಿರುವುದರಿಂದ ಈಗ ರಾಜ್ಯಮಟ್ಟದಲ್ಲಿ ಜಾತಿ ಗಣತಿ ನಡೆಸಬೇಕಾದ ಅಗತ್ಯವೇನು ಎಂಬ ವಿರೋಧ ಪಕ್ಷದ ಪ್ರಶ್ನೆಗೆ ನ್ಯಾಯಾಲಯದ ಪುಷ್ಟೀಕರಣ ಸಿಕ್ಕಿತು. ಆದರೂ ಶ್ರೀ ಸಿದ್ದರಾಮಯ್ಯರವರು ತಮ್ಮ ಯೋಜಿತ ಜಾತಿ ಗಣತಿಯನ್ನು ಬಿಟ್ಟು ಕೊಡಲಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗೆ ವಾಸ್ತವಿಕ ಮಾಹಿತಿ ಬೇಕಾಗಿರುವುದರಿಂದ ಈ ಸರ್ವೆಗೆ ಸಾಮಾಜಿಕ ಸಮೀಕ್ಷೆ ಎಂತ ಹೆಸರಿಟ್ಟು ನಡೆಸುವ ನಿರ್ಧಾರ ಮಾಡಿದರು. ಈ ವರ್ಷದ ಆರಂಭದಿಂದ ಶಿಕ್ಷಕರಿಗೆ ತಮ್ಮ ಉದ್ಯೋಗಕ್ಕೆ ಒತ್ತಡವಾಗಬಾರದು ಎಂಬುದಕ್ಕಾಗಿ ಕಲಿಸುವುದರ ಹೊರತಾಗಿ ಬೇರೆ ಕೆಲಸಗಳನ್ನು ಕೊಡಬಾರದೆಂಬ ಚಿಂತನೆ ನಡೆದಿತ್ತು. ಅದಕ್ಕೆ ಸರಕಾರವೂ ಸಮ್ಮತಿಸಿ ಮಾತಾಡಿದ ಸಂದರ್ಭವನ್ನು ಕಂಡಿದ್ದೇವೆ. ಆದರೆ ಈ ಸಲ ಶಿಕ್ಷಕ ವರ್ಗದವರನ್ನೇ ಕಡಿಮೆ ಸಮಯದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಒತ್ತಡ ಹಾಕಿದ ವಾಸ್ತವ ನಮ್ಮ ಮುಂದಿದೆ.
ಬೆಂಗಳೂರಿನ ಹೊರತಾಗಿ ರಾಜ್ಯದ  ಉಳಿದ ಭಾಗಗಳಲ್ಲಿ ಸಮೀಕ್ಷೆಯ ಕಾರ್ಯ ನಡೆದಿದೆ. ಮಾಹಿತಿ ಸಂಗ್ರಹಕ್ಕಾಗಿ ತಮಗೆ ನೀಡಿದ ಮನೆಗಳನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗಿ ಅಂತರ್ಜಾಲ ಸಮಸ್ಯೆಗಳನ್ನು ಎದುರಿಸಿ ಹೇಗೆ ಹೇಗೋ ಕಾರ್ಯ ಮಾಡಿದ್ದಾರೆ. ಒಬ್ಬೊಬ್ಬರೇ ಹೋಗಲಾಗದೆ ರಕ್ಷಣೆಗಾಗಿ ತಮ್ಮ ತಂದೆಯನ್ನೊ, ಗಂಡನನ್ನೊ, ಮಗನನ್ನೋ ಕರೆದುಕೊಂಡು ಹೋಗಿದ್ದಾರೆ. ಮಾಹಿತಿ ಕೊಡುವುದಿಲ್ಲ ಎಂದವರ ಟೀಕೆಗಳನ್ನು ಸಹಿಸಿಕೊಂಡಿದ್ದಾರೆ. ಇನ್ನು, ನಾಯಿ ಕಚ್ಚುವ ಕಾಟಕ್ಕೆ ಒಳಗಾಗಿದ್ದಾರೆ. ತಾವು ಕೇಳುತ್ತಿರುವ ಪ್ರಶ್ನೆಗಳ ಔಚಿತ್ಯವನ್ನು ಪ್ರಶ್ನಿಸಿದವರಿಗೆ ವಿವರಣೆ ಕೊಡಲಾಗದೆ ಇರಿಸುಮುರಿಸಿಗೆ ಒಳಗಾಗಿದ್ದಾರೆ. ಈ ಸಮಸ್ಯೆಯನ್ನು ಉಪಮುಖ್ಯಮಂತ್ರಿಗಳ ಮನೆಯಲ್ಲೇ ಎದುರಿಸಿದ್ದಾರೆ. ಅಲ್ಲದೆ “ಆಭರಣಗಳಿವೆಯಾ?” ಎಂಬ ಪ್ರಶ್ನೆಗಳನ್ನು  ಕೇಳಬಾರದಪ್ಪಾ ಎಂದು ಸ್ವತಃ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್‍ರವರೇ ಹೇಳಿದ್ದಾರೆ. ಅಂದರೆ ಮಂತ್ರಿ ಮಂಡಲದ ಸ್ತರದಲ್ಲಿ ಪ್ರಶ್ನಾವಳಿಯನ್ನು ಪರಿಶೀಲಿಸಲಿಲ್ಲ ಎಂದಾಯಿತು.
ಇನ್ನು, ಆಭರಣಗಳ ಬಗ್ಗೆ ಕೇಳುವಾಗ ಅದರ ಗಾತ್ರ, ಮೌಲ್ಯಗಳ ಹೆಚ್ಚು ಕಡಿಮೆಯ ಬಗ್ಗೆ ಪ್ರಶ್ನಾವಳಿಯಲ್ಲಿ ಕೇಳುವುದಿಲ್ಲವಂತೆ. ಪ್ರತಿಯೊಂದು ಆಭರಣಕ್ಕೆ ಒಂದೊಂದು ಸಂಖ್ಯೆ ಸೇರಿಸುತ್ತಾರೆ. ಕುತ್ತಿಗೆಯ ಚೈನ್, ಮಾಂಗಲ್ಯಸರ, ಉಂಗುರ, ಕಿವಿಯೋಲೆ ಎಲ್ಲದಕ್ಕೆ ಒಟ್ಟಾಗಿ 4 ಎಂದು ಬರೆದರಾಯ್ತು. ಇದರ ಸಾಮಾಜಿಕ ಆರ್ಥಿಕ ವಿಶ್ಲೇಷಣೆಯನ್ನು ಹೇಗೆ ಮಾಡುವುದು? ಇನ್ನು ಮದುವೆಯಾಗುವಾಗಿನ ಪ್ರಾಯದ ಬಗ್ಗೆ ಒಂದು ಪ್ರಶ್ನೆ ಇದೆ. ಇದರ ಅವಶ್ಯಕತೆ ಏನು? ಒಂದು ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿತ್ತು ಎಂತ ತಿಳಿಯುವ ಉದ್ದೇಶವಿದ್ದರೂ ಅದಿನ್ನು ಉಪಯೋಗವಿಲ್ಲದ ಮಾಹಿತಿಯಾಗುತ್ತದೆ. ಇಂತಹ ನ್ಯೂನತೆಗಳ ಬಗ್ಗೆ ತಿಳಿದ ಬಳಿಕವೂ ದಸರಾ ಬಳಿಕ ಬೆಂಗಳೂರಿನಲ್ಲಿ ಸಮೀಕ್ಷೆಗಳನ್ನು ಅವೆಲ್ಲ ನ್ಯೂನತೆಗಳೊಂದಿಗೆ ನಡೆಸಿದರೆಂಬುದು ಒಂದು ವಿರೋಧಾಭಾಸ.
ಇತ್ತೀಚೆಗೆ ಪ್ರತಿದಿನ ಟಿ.ವಿಯಲ್ಲಿ ಸಮೀಕ್ಷೆಯ ಸಂಕಟಗಳ ಬಗ್ಗೆ ವರದಿಗಳು ಬರುತ್ತಲೇ ಇವೆ. ಶಿಕ್ಷಕ-ಶಿಕ್ಷಕಿಯರು ಅದನ್ನಲ್ಲದೆ ಬೇರೇನೂ ಕನಸು ಕಾಣದಂತಹ, ಕುಟುಂಬ ಸದಸ್ಯರೊಡನೆ ಸಂತೋಷ ಪಡದಂತಹ, ತನ್ನ ಖಾಸಗಿ ಕೆಲಸಗಳನ್ನು ಬಾಕಿ ಇಡಬೇಕಾದಂತಹ ಒತ್ತಡಕ್ಕೆ ಒಳಗಾಗಿದ್ದಾರೆ. ಗಣತಿಗೆ ತಪ್ಪಿಸಿದರೆ ಎಫ್.ಐ.ಆರ್. ಹಾಕುವ, ಕೆಲಸದಿಂದ ಸಸ್ಪೆಂಡ್ ಮಾಡುವಂತಹ ಭಯಕ್ಕೆ ಈಡಾಗಿದ್ದಾರೆ. ಗಣತಿಯಿಂದಾಗಿ ಶಿಕ್ಷಕಿಯರ ಸಾವು ಸಂಭವಿಸಿದ ಪ್ರಕರಣಗಳಲ್ಲಿ 20 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿಯವರು ಘೋಷಿಸಿದರೂ ಅದು ಸರಿಯಾದ  ಪರಿಹಾರವಲ್ಲ. ಸಮಸ್ಯೆ ಹೀಗಿದ್ದರೂ ನಮ್ಮ ಶಾಲೆಗಳಲ್ಲಿ ಏನು ನಡೀತಿದೆ ಎಂದು ಕೇಳುವ ಧ್ವನಿ ಪೋಷಕರಲ್ಲಿ ಇಲ್ಲ. ಅಂತಹ ಧ್ವನಿ ಇರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿರುವುದರಿಂದ ನಿಶ್ಚಿಂತರಾಗಿದ್ದಾರೆ. ಹೀಗಾಗಿ ಇದು ಸರಕಾರಿ ಶಾಲೆಗಳ ಮತ್ತೊಂದು ಹಂತದ ಕುಸಿತ ಎನ್ನಬಹುದು.ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ
ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!
January 8, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror