ಸ್ವಾಧ್ಯಾಯವನ್ನು ನಿರ್ಲಕ್ಷಿಸಬೇಡಿ

December 10, 2025
5:07 PM
ಶಾಲೆಯಲ್ಲಿ ಪಾಠ ಎಂದರೆ ಮಾರ್ಗದರ್ಶನ. ಅದನ್ನು ಬಳಸಿಕೊಂಡು ಸ್ವಯಂ ಕಲಿಕೆಯಿಂದ ಜ್ಞಾನವನ್ನು ಗಳಿಸುವುದೇ ಶಿಕ್ಷಣ. ಬಾಯಿಪಾಠವೇ ಕಲಿಕೆಯಲ್ಲ. ಅದು ಒಂದು ಆಧಾರ ತಂತು ಅಷ್ಟೇ. ಅದನ್ನು ಆಧರಿಸಿ ವಿಶ್ಲೇಷಿಸಿ ಅರ್ಥೈಸಿಕೊಳ್ಳುವುದೇ ಶಿಕ್ಷಣ. ಆದ್ದರಿಂದ ಬಾಯಿಪಾಠ ತಪ್ಪಲ್ಲ. ಬದಲಾಗಿ ಅದನ್ನೇ ಅವಲಂಬಿಸುವುದು ತಪ್ಪು. ಈ ಎಚ್ಚರವನ್ನು ಪೂರ್ವ ಪ್ರಾಥಮಿಕ ಹಂತದಿಂದಲೇ ಮೂಡಿಸಬೇಕು. ಒಂದನೇ ತರಗತಿಯಿಂದಲೇ ಪರೀಕ್ಷೆ ಮತ್ತು ಅದಕ್ಕಾಗಿ ಮಕ್ಕಳಿಗೆ ಬಾಯಿಪಾಠದ ಕಲಿಕೆಯನ್ನು ಅಭ್ಯಾಸ ಮಾಡಿಸುವ ವಿಧಾನ ಅತ್ಯಂತ ಹಾನಿಕಾರಕವಾದದ್ದು. ಆದರೆ ಅದೇ ಬಳಕೆಯಲ್ಲಿದೆ. ಪರೀಕ್ಷೆ ಮತ್ತು ಅಂಕಗಳ ಆಧಾರಿತವಾದ ಮೆಕಾಲೆ ಮಾದರಿಯ ಶಿಕ್ಷಣವು ನಮ್ಮ ಮಕ್ಕಳ ಸಾಮರ್ಥ್ಯವನ್ನು ಕಲುಷಿತಗೊಳಿಸುತ್ತಿದೆ. ಅವರನ್ನು ತಮ್ಮ ನಿಜವಾದ ಸಾಮರ್ಥ್ಯದ ಎತ್ತರಕ್ಕೆ ಏರಿಸುವುದಿಲ್ಲ. ಅಂತಹ ಏರಿಕೆಯನ್ನು ಸಾಧಿಸಲು ಸ್ವಾಧ್ಯಾಯವು ಅಗತ್ಯವಾಗಿದೆ. ಅದನ್ನು ಅಳವಡಿಸಿದರೆ  ಮೌಲ್ಯಮಾಪನದ ವಿಧಾನವೂ ಬದಲಾಗಬೇಕಾಗುತ್ತದೆ.
ಸ್ವಾಧ್ಯಾಯದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಂದ ಸ್ವಮೌಲ್ಯಮಾಪನವೇ ನಡೆಯುತ್ತದೆ. ಅಂದರೆ ತಮ್ಮ ಜ್ಞಾನ ಸಂಗ್ರಹದ ಸಾಧನೆಯ ಸಮರ್ಪಕ ನಡೆಯನ್ನು ವಿದ್ಯಾರ್ಥಿಗಳು ಗುರುತಿಸಿಕೊಳ್ಳುತ್ತಲೇ ಹೋಗುತ್ತಾರೆ. ಇಂತಹ ಗುರುತಿಸುವಿಕೆಯಿಂದ ತಮ್ಮ ತಪ್ಪುಗಳನ್ನು ತಾವೇ ಸರಿ ಮಾಡಿಕೊಂಡು ತಮ್ಮ ಅರಿವನ್ನು ಹೆಚ್ಚು ನಿಖರವಾಗಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಮೌಲ್ಯಮಾಪನ ಮಾಡಲು ಹೆಚ್ಚು ಸಮರ್ಪಕವಾದ ಉತ್ತರ ಪತ್ರಿಕೆಗಳೇ ಸಿಗುತ್ತವೆ. ಇದರಿಂದಾಗಿ ಶಿಕ್ಷಕರ ಕಲಿಸುವ ಆಸಕ್ತಿಯೂ ಪಠ್ಯದ ಗುಣಮಟ್ಟವೂ ಹೆಚ್ಚುತ್ತದೆ. ಏಕೆಂದರೆ ವಿದ್ಯಾರ್ಥಿಗಳ ಸಂಗ್ರಹಣ ಶಕ್ತಿ ಹೆಚ್ಚಿದ್ದಷ್ಟು ಗುರುಗಳ ಪರಿಪೂರ್ಣತೆಯ ಕಡೆಗಿನ ಲಕ್ಷ್ಯವೂ ವೇಗವನ್ನು ಪಡೆಯುತ್ತದೆ.
ತೈತ್ತೀರಿಯ ಉಪನಿಷತ್ತಿನ ಶಿಷ್ಯಾನುಶಾಸನದಲ್ಲಿ ಬರುವ ಒಂದು ಮಾತು ಹೀಗಿದೆ: “ಸ್ವಾಧ್ಯಾಯ ಪ್ರಮದಿತವ್ಯಂ”.  ಅಂದರೆ “ಸ್ವಯಂ ಅಧ್ಯಯನ ಮತ್ತು ಬೋಧನೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ” ಎಂದರ್ಥ, ಇದು ನಿರಂತರ ಅಧ್ಯಯನ, ಚಿಂತನೆ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮಹತ್ವವನ್ನು ಒತ್ತಿ ಹೇಳುತ್ತದೆ. ಅರ್ಥಾತ್, ಜ್ಞಾನಾರ್ಜನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅಧ್ಯಯನ ಹಾಗೂ ಬೋಧನೆಯೆಂಬ ಪ್ರಕ್ರಿಯೆಗಳಲ್ಲಿ ಎಂದಿಗೂ ಸೋಮಾರಿತನ ಅಥವಾ ಅಲಕ್ಷ್ಯ ತೋರಬಾರದು ಎಂಬುದು ಇದರ ತಿರುಳು.
ತ್ತೈತ್ತಿರೀಯ ಉಪನಿಷತ್‍ನಲ್ಲಿ ಹೇಳಲಾಗಿರುವ ಈ ವಿಚಾರಕ್ಕೆ ಸೂಕ್ತ ಉದಾಹರಣೆ ಈಗ ಸಿಕ್ಕಿದೆ. ಮಹಾರಾಷ್ಟ್ರ ಮೂಲದ ದೇವವೃತ ಮಹೇಶ ರೇಖೆ ಎಂಬ  19 ವರ್ಷದ ತರುಣ ಸ್ವಾಧ್ಯಾಯಕ್ಕೆ ಒಂದು ಅದ್ಭುತ ಉದಾಹರಣೆಯಾಗಿ ಮೂಡಿ ಬಂದಿದ್ದಾನೆ. ಈತ ಈಗ ಕಾಶಿಯ ವಲ್ಲಭರಾಮ ಶಾಲಿಗ್ರಾಮ ಸಾಂಗವೇದ ವಿದ್ಯಾಲಯದಲ್ಲಿ ಒಂದು ವಿಶಿಷ್ಟ ಸಾಧನೆಯನ್ನು ಪ್ರಸ್ತುತ ಪಡಿಸಿದ್ದಾನೆ. ಇದೇ 2025 ರ ಅಕ್ಟೋಬರ್ 2 ರಿಂದ ನವೆಂಬರ್ 30 ರ ನಡುವೆ 50 ದಿನಗಳ ಅವಧಿಯಲ್ಲಿ ಯಾವುದೇ ಪುಸ್ತಕದ ಸಹಾಯವಿಲ್ಲದೆ ಕೇವಲ ಸ್ಮರಣ ಶಕ್ತಿಯಿಂದ ಶುಕ್ಲಯರ್ಜುರ್ವೇದದ ಮಾಧ್ಯಂದಿನೀಯ ಶಾಖೆಯ 2000 ಮಂತ್ರಗಳ ದಂಡಕ್ರಮ ಪಾರಾಯಣವನ್ನು ಯಾವುದೇ ತಪ್ಪಿಲ್ಲದೆ ಮಾಡಿದ್ದಾನೆ. ನಿರಂತರವಾಗಿ ಮಾಡಿರುವ ಈ ಬಾಯಿ ಪಾಠದ ಸುದೀರ್ಘ ಪಾರಾಯಣದಲ್ಲಿ ಒಂದೇ ಒಂದು ತಪ್ಪು ಮಾಡಿಲ್ಲವೆಂಬುದು ಈ ಒಟ್ಟು ಕಾರ್ಯಕ್ರಮದ ವಿಶೇಷವಾಗಿದೆ. ಲಬ್ಧವಿರುವ ದಾಖಲೆಗಳ ಪ್ರಕಾರ ಕಳೆದ 200 ವರ್ಷಗಳಲ್ಲಿ ಯಾರೇ ವಿದ್ವಾಂಸರು ಮಾಡದಿರುವ ಈ ಸಾಧನೆಯಲ್ಲಿ ದೇವವೃತ ಹೊಸ ದಾಖಲೆ ಬರೆದಿದ್ದಾನೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯವರು ಸನ್ಮಾನಿಸಿರುವ ಈ ಯುವಕನನ್ನು ಸ್ವತಃ ಪ್ರಧಾನಿ ಮೋದಿಯವರೂ ಪ್ರಶಂಸಿಸಿದ್ದಾರೆ. ದೇಶಾದ್ಯಾಂತದಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು ಶೃಂಗೇರಿಯ ಸ್ವಾಮೀಜಿಯವರು  ಸುವರ್ಣ ಕಂಕಣ ನೀಡಿ ಸನ್ಮಾನಿಸಿದ್ದಾರೆ. ಈಗ ‘ವೇದಮೂರ್ತಿ’ ಎಂಬ ಗೌರವಕ್ಕೆ ಅತ್ಯಂತ ಎಳೆಯ ಪ್ರಾಯದ ದೇವವೃತ ರೇಖೆಗೆ ತನ್ನ ತಂದೆಯಿಂದಲೇ ಮಂತ್ರಪಾಠಗಳು ನಡೆದಿದ್ದುವು. ಪ್ರಸ್ತುತ ಮುಖ್ಯ ಮುದ್ರಣ ಮಾಧ್ಯಮಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಹೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲಿ ಈ ಸಾಧನೆಯನ್ನು ವಿಶೇಷವೆಂಬುದಾಗಿ ಬಿತ್ತರಿಸಲಾಗಿದೆ.
ಭಾರತದಲ್ಲಿ ವೇದಗಳೆಂದರೆ ಶೃತಿ ಮತ್ತು ಸ್ಮೃತಿಗಳಿಂದ ಉಳಿದು ಬಂದಿರುವ ಕಂಠಸ್ಥವಾದ  ಸಾಹಿತ್ಯ. ಮುದ್ರಿತ ವೈದಿಕ ಸಾಹಿತ್ಯವು ಇಂದು ಲಭ್ಯವಿದ್ದರೂ ಧ್ವನಿಯ ನಿಖರತೆಯು ಗುರುಗಳಿಂದಲೇ ಬರಬೇಕು. ಏನಿದ್ದರೂ ವೇದ ಪಾರಾಯಣವು ಬರಿಯ ನೆನಪಿನ ಶಕ್ತಿಯ ಪ್ರದರ್ಶನವಲ್ಲ. ಆದರೆ ಇದರಲ್ಲಿ ನೆನಪಿನ ಶಕ್ತಿಯ ಅಗತ್ಯ ತುಂಬಾ ಇದೆ. ದೀರ್ಘ ಪಠ್ಯಗಳನ್ನು ನೆನಪಿಟ್ಟುಕೊಳ್ಳಲು ಸಾಮಾನ್ಯವಾಗಿ ಸರಪಣಿ ಸ್ಮರಣೆಯ ತಂತ್ರವನ್ನು  ಅನುಸರಿಸಲಾಗುತ್ತದೆ. ಇದನ್ನು ಸೀಕ್ವೆನ್ಶಿಯಲ್ ಮೆಮೋರಿ ಎನ್ನಲಾಗುತ್ತದೆ. ಆದರೆ ವೇದ ಪಠ್ಯಗಳ ಸ್ಮರಣೆಗೆ ಇದಕ್ಕಿಂತಲೂ ವಿಶಿಷ್ಟವಾದ ಸ್ಮರಣೆಯ ತಂತ್ರ ಅಗತ್ಯವಿರುತ್ತದೆ. ಅದನ್ನು ನಾನ್ ಲೀನಿಯರ್ ಮೆಮೊರಿ ಎನ್ನಲಾಗುತ್ತದೆ. ಇಂತಹ ಸ್ಮೃತಿಶಕ್ತಿಯನ್ನು ಗಳಿಸಿದ ದೇವವೃತ ರೇಖೆಯವರ ಸಾಧನೆ ತುಂಬಾ ಮಹತ್ವದ್ದು.
ಉಚ್ಛಾರಶುದ್ಧಿ, ಸ್ವರ, ಶ್ವಾಸ ಹಾಗೂ ಜ್ಞಾನದ ಸ್ಪಷ್ಟತೆಯನ್ನು ಪ್ರದರ್ಶಿಸುವ ದಂಡಕ್ರಮ ಪಾರಾಯಣದ  ಸಾಧನೆಯನ್ನು ಸಾಧಿಸಿರುವ ವೇದಮೂರ್ತಿ ದೇವವೃತ ರೇಖೆಯವರ ತಂದೆಯವರೂ ಕೂಡಾ ‘ವೇದಬ್ರಹ್ಮರ್ಷಿ’ ಎಂಬುದಾಗಿ ಪ್ರಸಿದ್ಧರು. ಮಹೇಶ ಚಂದ್ರಕಾಂತ ರೇಖೆಯವರು ತಮ್ಮ ಮಗನಿಗೆ ಮಾರ್ಗದರ್ಶಿಯೂ ಗುರುವೂ ಆಗಿದ್ದರು. ಅವರ ಕುಲಪರಂಪರೆಯೇ ವೇದಾಧ್ಯಯನ ಪಠನಗಳಿಗೆ ಪ್ರಸಿದ್ಧವಾಗಿತ್ತು. ಹಾಗಾಗಿ ದೇವವೃತ ಮಹೇಶ ರೇಖೆಯ ಸಾಧನೆಯ ಹಿಂದೆ ಮೌಖಿಕವಾಗಿ ವೇದ ಪಾರಾಯಣದ ಕುಲಪರಂಪರೆಯ ಕೊಡುಗೆ ಇದೆ. ಆಧುನಿಕ ಯುಗದಲ್ಲಿ ಶಾಲಾ ಕಾಲೇಜುಗಳ ಶಿಕ್ಷಣದ ಮೂಲಕ ಉನ್ನತ ಹುದ್ದೆಗಳ ಆಕರ್ಷಣೆಯ ಜಾಲಕ್ಕೆ ಒಳಗಾದ ಬ್ರಾಹ್ಮಣ ವಿದ್ವಾಂಸರ ಉದಾಹರಣೆಗಳ ಎಡೆಯಲ್ಲಿ ವೇದಮೂರ್ತಿ ದೇವವ್ರತನನ್ನು ಈ ದಾರಿಯಲ್ಲಿ ಬೆಳೆಸಿ ವೇದಾಧ್ಯಯನದ ಅನನ್ಯತೆಯನ್ನು ಸಾಧಿಸಿದ ಕುಟುಂಬ ನಿಜಕ್ಕೂ ಉನ್ನತ ಮನ್ನಣೆಗೆ ಪಾತ್ರವಾಗಿದೆ.
ಐವತ್ತು ದಿನಗಳಲ್ಲಿ ದಿನಕ್ಕೆ ನಾಲ್ಕು ಗಂಟೆಯಂತೆ ದಂಡಕ್ರಮಗಳಲ್ಲಿ ವೇದ ಪಠಣವನ್ನು ಕಂಠಸ್ಥವಾಗಿ ಮಾಡಿದ್ದರಿಂದ ಏನು ಪ್ರಯೋಜನವಿದೆ? ಅದೇನು ಮಹಾ ಸಾಧನೆ? ಈ ಬಗ್ಗೆ ವಿದೇಶಗಳಲ್ಲಿ ಮೆದುಳಿನ ಸಾಮರ್ಥ್ಯದ ವಿಸ್ಮಯಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಈಗ ಶಿಕ್ಷಣಕ್ಕೆ ದಂಡಕ್ರಮದ ಪಠಣ ಹೇಗೆ ನೆರವಾಗಬಹುದು ಎಂಬುದನ್ನು ನಾವು ಪರಿಶೀಲಿಸಬಹುದು. ಅದಕ್ಕಾಗಿ ಶ್ರೇಷ್ಠ ಅಂಕಣಕಾರ ಶ್ರೀವತ್ಸ ಜೋಶಿಯವರು 7-12-2025ನೇ ರವಿವಾರದಂದು ವಿಶ್ವವಾಣಿಯ “ತಿಳಿರು ತೋರಣ” ಅಂಕಣದಲ್ಲಿ ದಂಡಕ್ರಮ ಪಾರಾಯಣದ ವಿಧಾನವನ್ನು ತಿಳಿಸಿದ್ದಾರೆ. ತಮ್ಮ ಧ್ವನಿ ಮುದ್ರಣವನ್ನು ಯುಟ್ಯೂಬ್‍ಗೂ ಏರಿಸಿದ್ದಾರೆ. ಅವರು ಕೊಟ್ಟ ಮಾದರಿಯನ್ನೇ ಇಲ್ಲಿ ಟಿಂಕಿಸುತ್ತಿದ್ದೇನೆ.
1         2        3        4      5        6
ಬಣ್ಣದ   ತಗಡಿನ   ತುತ್ತೂರಿ  ಕಾಸಿಗೆ  ಕೊಂಡನು  ಕಸ್ತೂರಿ
1, 2
1, 2, 2, 3,
3, 2, 1,
1, 2, 2, 3, 3, 4
4, 3, 2, 1
1, 2, 2, 3, 3, 4, 4, 5
5, 4, 3, 2, 1
1, 2, 2, 3, 3, 4, 4, 5, 5, 6
6, 5, 4, 3, 2, 1
1, 2, 2, 3, 3, 4, 4, 5, 5, 6
6, 5, 4, 3, 2, 1
ಈ ಸರಣಿಯನ್ನು ಸ್ಮರಣೆಯಲ್ಲಿಟ್ಟು ಕೊಂಡು ಹೇಳುವುದೇ ಕಷ್ಟ. ಅಂದ ಮೇಲೆ ಶುಕ್ಲ ಯಜುರ್ವೇದದ ಮಾಧ್ಯಾಂದಿನೀಯ ಶಾಖೆಯ 2000 ಮಂತ್ರಗಳ ದಂಡಕ್ರಮ ಪಾರಾಯಣವನ್ನು ಪರೀಕ್ಷಕರ ಸಮ್ಮುಖದಲ್ಲಿ ಒಂದೂ ತಪ್ಪಿಲ್ಲದಂತೆ ಮಾಡಬೇಕಿದ್ದರೆ 19 ರ ಹರೆಯದ ಆ ವೇದಮೂರ್ತಿ ದೇವವ್ರತನ ಚಿತ್ತಸಾಮರ್ಥ್ಯ ಅದೆಂತಹದಿರಬಹುದು. ಭಾರತದಲ್ಲಿಯೇ ವೇದ ಪ್ರಾಮಾಣ್ಯವನ್ನು ಒದಗಿಸಿದ ಈ ಯುವ ಸಾಧಕನಿಗೆ ಬಹುಪರಾಕ್ ಸಲ್ಲಲೇಬೇಕು..
ಸ್ವಾಧ್ಯಾಯದ ಕಡೆಗೆ ಮತ್ತೊಮ್ಮೆ ನಮ್ಮ ಚಿಂತನೆಯನ್ನು ಹರಿಸೋಣ. ದಂಡಕ್ರಮದ ಪಾರಾಯಣಕ್ಕೆ ವೇದಗಳೇ ವಸ್ತುವಾಗಬೇಕಿಲ್ಲ. ಅದಕ್ಕೆ ನಾವು ಶಾಲೆಗಳಲ್ಲಿ ಕಲಿಯುವ ಗಣಿತ, ಸಮಾಜ, ವಿಜ್ಞಾನಗಳೂ ಆಗಬಹುದು. ಏಕೆಂದರೆ ದಂಡಕ್ರಮವೆಂಬುದು ಮೆದುಳಿನ ವ್ಯಾಯಾಮಕ್ಕೊಂದು ವಿಧಾನ. ಮೇಲೆ ಹೇಳಿರುವಂತೆ ನಿಗದಿತ ಸ್ಥಾನಗಳಲ್ಲಿ ಆಯಾ ಶಬ್ದಗಳ ಉಚ್ಛರಣ ಮಾಡಬೇಕು. ಅದಕ್ಕೆ ಸೂತ್ರದ ಸ್ಮರಣೆ ಸಮರ್ಪಕವಾಗಿ ಆಗಬೇಕು. ಪೂರ್ತಿಯಾಗಿ ಏಕಾಗ್ರತೆ ಇರಬೇಕು. ಈ ಏಕಾಗ್ರತೆಯ ಸಾಧನೆಗೆ ದಂಡಕ್ರಮ ಕರಾರುವಾಕ್ಕಾಗಿ ನೆನೆಪಿಟ್ಟುಕೊಳ್ಳಲು ಈ ಕ್ರಮವನ್ನು ವಿದ್ಯಾರ್ಥಿಗಳು ತಾವಾಗಿಯೇ ರೂಪಿಸಿಕೊಳ್ಳಬೇಕು. ಜಾಣ ವಿದ್ಯಾರ್ಥಿಗಳು ತಮ್ಮದೇ ಸೂತ್ರವನ್ನು ಸಿದ್ಧಪಡಿಸಿದರೆ ಅವರಿಂದ ಇನ್ನುಳಿದವರು ಕಲಿತು ಅದೇ ರೀತಿ ಅಭ್ಯಾಸ ಮಾಡಬೇಕು. ಆಗ ತಾವು ತಿಳಿದುಕೊಂಡಿರುವ ವಿಷಯವು ಕ್ರಮಬದ್ಧವಾಗಿ ಮನಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಯಾರಿಂದಲೇ ಯಾವ ಸಂದರ್ಭದಲ್ಲೇ ಆಗಲಿ ಪ್ರಶ್ನೆಗಳು ಕೇಳಿ ಬಂದಾಗ ಸೂಕ್ತ ಉತ್ತರಗಳು ಸ್ಮರಣೆಗೆ ಬರುತ್ತವೆ. ಪರೀಕ್ಷಾ ಕೊಠಡಿಯಲ್ಲಿ ಕನ್‍ಫ್ಯೂಸ್ ಆಗುವ ಅಪಾಯವನ್ನು ಇಂತಹ ಪ್ರಯೋಗಗಳ ಮೂಲಕ ತಪ್ಪಿಸಿಕೊಳ್ಳಬಹುದು.
ಇನ್ನು ಸಮಾಜ ವಿಜ್ಞಾನ ಮತ್ತು ಭಾಷಾ ಪಾಠಗಳಲ್ಲೂ ವಿವರಣಾತ್ಮಕ ಮಾಹಿತಿಯನ್ನು ಸೂತ್ರಗಳ ರೂಪಕ್ಕೆ ಅಳವಡಿಸಿಕೊಂಡು ಅಭ್ಯಸಿಸಿದರೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರೆ ಈ ಕೆಲಸವನ್ನು ಅವರೇ ಸ್ವಾಧ್ಯಾಯದ ಮೂಲಕ ಮಾಡಬೇಕು. ಅಂದರೆ ಅವರು ಆಲೋಚನೆಗಳನ್ನು ಹರಿಯಬಿಡಬೇಕು. ಆಗ ಅವು ಸೂಕ್ತ ಮಾಹಿತಿಗಳನ್ನು ಆವರಿಸಿಕೊಂಡು ತಮ್ಮದಾಗಿಸಿಕೊಳ್ಳುತ್ತವೆ. ಅದೇ ಸ್ವಾಧ್ಯಾಯದ ಯಶಸ್ಸಿನ ಗುಟ್ಟು.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
“ಅಡಿಕೆ ಹಾನಿಕಾರಕ” ಅಪವಾದದ ವಿರುದ್ಧ ಧ್ವನಿ ಎತ್ತಿದರೆ “ಅಡಿಕೆ’ ಉಳಿಯಬಹುದು…!
January 2, 2026
11:06 AM
by: ಪ್ರಬಂಧ ಅಂಬುತೀರ್ಥ
ಕನ್ನಡ ಅನ್ನದ ಭಾಷೆ ಅಲ್ಲ ಎಂಬ ಮಿಥ್ಯೆ
January 1, 2026
6:05 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror