ಯಾವುದೇ ಯೋಜನೆ ತಯಾರು ಮಾಡುವ ಮುನ್ನ ಲೆಕ್ಕಾಚಾರ ನಡೆಯುತ್ತದೆ. ಅಂತಹ ಯೋಚನೆಯೇ ಇಲ್ಲದೆ ತಯಾರಾದ ಯೋಜನೆಗಳು ಏನಾಗುತ್ತವೆ ? ಮತ್ತಿನ್ನೇನು ಹಳ್ಳ ಹಡಿಯುತ್ತವೆ. ಅದಕ್ಕೊಂದು ಉದಾಹರಣೆ ಸುಳ್ಯ ತಾಲೂಕಿನ ಪಂಜದ ಬಳಿಯ ಅಳ್ಪೆ ಸಿಂಗಾಣಿ ಗುಡ್ಡೆಯ ನೀರಿನ ಟ್ಯಾಂಕ್. 7 ವರ್ಷಗಳ ಹಿಂದೆ ರಚನೆಯಾದ ನೀರಿನ ಟ್ಯಾಂಕ್ ಗೆ ಇಂದಿಗೂ ನೀರು ಬಂದಿಲ್ಲ..!.
ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಳ್ಪೆ ಸಿಂಗಾಣಿ ಗುಡ್ಡೆಯಲ್ಲಿ ನೀರಿನ ಸಮಸ್ಯೆ ಇತ್ತು. ಇದಕ್ಕಾಗಿ ಜಿಲ್ಲಾ ಪಂಚಾಯತ್ ಯೋಜನೆಯ ಮೂಲಕ ವಿಶ್ವ ಬ್ಯಾಂಕ್ ಯೋಜನೆಯಲ್ಲಿ ನೀರಿನ ಟ್ಯಾಂಕ್ ರಚನೆ ಮಾಡಲಾಯಿತು. ಬಹುಗ್ರಾಮ ಕುಡಿಯುವ ನೀರು ಎಂಬ ಯೋಜನೆಯ ಅಡಿಯಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣವಾಗಿ 7 ವರ್ಷ ಕಳೆಯಿತು. ಇಂದಿಗೂ ಟ್ಯಾಂಕ್ ಗೆ ನೀರು ಬಂದಿಲ್ಲ, ಆಸುಪಾಸಿನ ಜನರಿಗೆ ನೀರಿನ ಭಾಗ್ಯವೇ ದಕ್ಕಿಲ್ಲ. ಅಂದ ಹಾಗೆ ಈ ಯೋಜನೆಗೆ ಸುಮಾರು 4.5 ಕಿಮೀ ದೂರದ ಕುಮಾರಧಾರಾ ನದಿಯಿಂದ 10 ಎಚ್ ಪಿ ಪಂಪ್ ಮೂಲಕ ನೀರು ಹಾಯಿಸಿ ಜನರಿಗೆ ನೀರು ನೀಡುವ ಯೋಜನೆ ಇದಾಗಿತ್ತು. ಆದರೆ ಯಾವುದೂ ಕೈಗೂಡಲಿಲ್ಲ.ಹಲವು ಬಾರಿ ಪ್ರಯತ್ನ ಮಾಡಿದರೂ ವಿಫಲವಾಗಿತ್ತು. ಕಾರಣ ಟ್ಯಾಂಕ್ ಗೆ ನೀರು ಬರುವುದಿಲ್ಲ…!. ಒಂದು ಯೋಜನೆ ಮಾಡುವ ವೇಳೆ ಇಂಜಿನಿಯರ್ ಇದ್ದು ಲೆಕ್ಕಾಚಾರ ನಡೆಯುತ್ತದೆ . ನೀರು ಟ್ಯಾಂಕ್ ಗೆ ಬರಬಹುದೇ ? ಬರದೇ ಇದ್ದರೆ ಏನು ವ್ಯವಸ್ಥೆ ಇತ್ಯಾದಿ. ಆದರೆ ಕೋಟಿ ಅನುದಾನ ಬಂದ ಕೂಡಲೇ ಟ್ಯಾಂಕ್ ರಚನೆಯಾಗಿ ಕುಳಿತಿದೆ, 7 ವರ್ಷ ಕಳೆಯುವ ಹೊತ್ತಿಗೆ ಟ್ಯಾಂಕ್‌ನಲ್ಲಿ ನೀರಿಲ್ಲದೆ ಟ್ಯಾಂಕ್ ಒಡೆಯಲು ಆರಂಭವಾಗಿದೆ. ಈಗ ನಷ್ಟ ಯಾರಿಗೆ ? ಹಣ ಎಲ್ಲಿಂದ ? ಈ ಪ್ರಶ್ನೆ ಕೇಳುವವರು ಯಾರು ? .
ಇದಕ್ಕಾಗಿಯೇ ಕಳೆದ ಬಾರಿ ಗ್ರಾ ಪಂ ಚುನಾವಣೆಯ ಸಂದರ್ಭ ಮತಬಹಿಷ್ಕಾರದ ಬದಲು ಸಾರ್ವಜನಿಕರೇ ಚುನಾವಣೆಗೂ ಸ್ಫರ್ಧೆ ಮಾಡಿದ್ದರು. ಹೀಗಾದರೂ ಆಡಳಿತ ಪಕ್ಷಗಳು, ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡುತ್ತಿಲ್ಲ, ಸಮಸ್ಯೆ ಪರಿಹಾರದ ಕಡೆಗೆ ಮುಖ ಮಾಡುತ್ತಿಲ್ಲ. ಪ್ರತಿಷ್ಟೆ ಹಾಗೂ ಚುನಾವಣೆಗೆ ಸ್ಫರ್ಧೆ ಮಾಡಿದವರೇ ಮಾಡಲಿ ಎನ್ನುವ ಅಹಂಭಾವವೇ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಈಗ ಚರ್ಚೆಯಾಗುತ್ತಿದೆ.