ಬಹುಶ: ಕರಾವಳಿ ಜಿಲ್ಲೆಯ ಮಲೆನಾಡು ಭಾಗದ ಈಗಿನ ದೊಡ್ಡ(ದಡ್ಡ) ಯೋಜನೆ ಇದು. ಸುಮಾರು 750 ಕೋಟಿ ರೂಪಾಯಿ ಯೋಜನೆ(ಅಂದಾಜು) ದಕ್ಷಿಣ ಕನ್ನಡ ಜಿಲ್ಲೆಯ ಭಾಗಶ: ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಹರಿಸುವ ಯೋಜನೆ. ಇದಕ್ಕಾಗಿ ಶಂಭೂರಿನಲ್ಲಿ ಅಣೆಕಟ್ಟು, ಈ ಅಣೆಕಟ್ಟಿನಿಂದ ಸುಳ್ಯ ತಾಲೂಕಿನ ತೀರಾ ಗ್ರಾಮೀಣ ಭಾಗವಾದ ಕೊಲ್ಲಮೊಗ್ರ-ಕಲ್ಮಕಾರುವರೆಗೂ ನೀರು ಹರಿಯುತ್ತದೆ. ಜಿಲ್ಲೆಯ, ಗ್ರಾಮೀಣ ಭಾಗದ ಎಲ್ಲಾ ಜನರಿಗೂ ಮುಂದೆ ಕುಡಿಯುವ ನೀರಿಲ್ಲ ಎನ್ನಬಹುದಾದ ಯೋಜನೆ..!.…..ಮುಂದೆ ಓದಿ….
ಈ ಯೋಜನೆಗೆ ಕರಾವಳಿ ಜಿಲ್ಲೆಯ “ಮಿನಿ ಎತ್ತಿನಹೊಳೆ” ಯೋಜನೆ ಎಂದರೆ ತಪ್ಪಾಗಲಾರದು. ಗ್ರಾಮೀಣ ಭಾಗದ ಸಾಮಾನ್ಯ ಜನರೂ ಮಾತನಾಡುವುದು ಈ ಯೋಜನೆ ಕಾರ್ಯಗತವಾದೀತಾ…? ಶಂಭೂರಿನಿಂದ ನಮ್ಮೂರಿಗೆ ನೀರು ಬೇಕಾ…? ಗ್ರಾಮೀಣ ಭಾಗಕ್ಕೆ ನೀರು ಕೊಟ್ಟರೆ ಮಂಗಳೂರಿಗೆ ಎಲ್ಲಿಂದ ನೀರು..? ಮುಂದೆ ನೀರಿನ ಕೊರತೆಯಾದರೆ ಕುಮಾರಧಾರಾ , ನೇತ್ರಾವತಿ ನದಿ ಅಕ್ಕಪಕ್ಕದ ಕೃಷಿಕರ ಪಾಡೇನು..?, ಇದರಲ್ಲಿ ನೀರು ಬಂದೀತಾ…?, ನಮ್ಮ ಊರಲ್ಲಿ ಹರಿಯುವ ನೀರು ಶಂಭೂರಿನಿಂದ ವಾಪಾಸ್ ಪೈಪ್ ಮೂಲಕ ನಮ್ಮ ಊರಿಗೆ…!, ಹೀಗೇ ಎಲ್ಲಾ ಸಂಶಯಗಳೂ ಇದರಲ್ಲಿದೆ. ಆದರೆ ಜನಪ್ರತಿನಿಧಿಗಳು ಯಾರೂ ಮಾತನಾಡುತ್ತಿಲ್ಲ, ಅಧಿಕಾರಿಗಳು ಈ ಯೋಜನೆ ಎಷ್ಟು ವೇಗವಾಗಿ ಕಾರ್ಯಗತವಾಗುತ್ತಿದೆ ಎಂದು ಫಾಲೋಅಪ್ ಮಾಡುತ್ತಿದ್ದಾರೆ.
ಈ ಯೋಜನೆ ಹೇಗಿದೆ ಎಂದರೆ, ಬಂಟ್ವಾಳದ ಶಂಭೂರಿನಲ್ಲಿ ಅಣೆಕಟ್ಟಿನಿಂದ ಪ್ರಮುಖ ಪೈಪ್‌ಲೈನ್ ಮೂಲಕ ನೀರು ಪ್ರತೀ ಪಂಚಾಯತ್ ವ್ಯಾಪ್ತಿಯ ಟ್ಯಾಂಕ್ ಗೆ ನೀರು ಬರುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಂತ ಇದನ್ನು ಹೇಳಬಹುದು. ಈ ಬೃಹತ್ ಟ್ಯಾಂಕ್‌ನಿಂದ ಪಂಚಾಯತ್ ವ್ಯಾಪ್ತಿಯಲ್ಲಿರುವ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಟ್ಯಾಂಕ್‌ಗಳಿಂದ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರು.
ಶಂಭೂರಿನಿಂದ ನೀರು ಬರಲು ಸಾಧ್ಯವೇ..? ಹೌದು, ಅದಕ್ಕೂ ಈ ಯೋಜನೆಯಲ್ಲಿ ಪ್ಲಾನ್ ಇದೆ. ಶಂಭೂರಿನಿಂದ ಮುಂದೆ ಅಲ್ಲಲ್ಲಿ ಲಿಫ್ಟ್ ಮಾಡುವ, ನೀರನ್ನು ತಳ್ಳುವ ಪಂಪ್ ಗಳು ಇವೆ. ಅಂದರೆ ಜಾಕ್‌ವೆಲ್ ಗಳೂ ಇವೆ. ಹೀಗಾಗಿ ಶಂಭೂರಿನ ನೀರು ಸುಳ್ಯದ ಕಡೆಯ ಗ್ರಾಮದ ಕಲ್ಮಕಾರು-ಕೊಲ್ಲಮೊಗ್ರದವರೆಗೂ ತಲಪುತ್ತದೆ. ಹೀಗಾಗಿ ಯೋಜನೆಯ ಪ್ರಕಾರ ನೀರು ಎಲ್ಲಾ ಕಡೆಗೂ ತಲಪುತ್ತದೆ, ಇದು ಪ್ಲಾನ್‌ಗಳು.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಕೆಲವೇ ಕೆಲವು ಕಡೆ ತೀರಾ ಅಗತ್ಯವಾಗಿ ಕುಡಿಯುವ ನೀರು ಬೇಕಾಗಿರುವ ಪ್ರದೇಶಗಳಿಗೆ ಇಷ್ಟು ದೊಡ್ಡ ಯೋಜನೆ ಅಗತ್ಯ ಇದೆಯೇ ? ಎನ್ನುವುದು ಒಂದು ಪ್ರಶ್ನೆ. ಗ್ರಾಮೀಣ ಭಾಗಗಳಿಗೆ ನೀರನ್ನು ನೀಡಿದರೆ ಮಂಗಳೂರಿನಂತಹ ನಗರ ಪ್ರದೇಶಕ್ಕೆ ನೀರು ಎಲ್ಲಿಂದ..? ಕುಮಾರಧಾರಾ-ನೇತ್ರಾವತಿ ನದಿಯಲ್ಲಿ ಅಷ್ಟೊಂದು ಪ್ರಮಾಣದ ನೀರು ಸದ್ಯಕ್ಕಂತೂ ಇಲ್ಲ. ಕಳೆದ ಕೆಲವು ವರ್ಷಗಳಿಂದ ಮಾರ್ಚ್-ಎಪ್ರಿಲ್ ವೇಳೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತದೆ. ಈ ಸಮಯದಲ್ಲಿ ಹೋಟೆಲ್ ಬಂದ್ ಮಾಡಲು ಸೂಚಿಸಲಾಗುತ್ತದೆ, ಕುಮಾರಧಾರಾ-ನೇತ್ರಾವತಿ ನದಿ ಪಕ್ಕದಲ್ಲಿರುವ ಕೃಷಿಕರ ಪಂಪ್‌ಸೆಟ್ ತೆಗೆಯಲು ಸೂಚನೆ ನೀಡಲಾಗುತ್ತದೆ. ತೀರಾ ಅಗತ್ಯವಾಗಿ ಕುಡಿಯುವ ನೀರು ಬೇಕಾಗುವ ಮಾರ್ಚ್-ಎಪ್ರಿಲ್ ಸಮಯದಲ್ಲಿ ನೀರಿಗೆ ಮತ್ತೆ ತತ್ವಾರವಾದರೆ ಗ್ರಾಮೀಣ ಭಾಗಕ್ಕೆ ಇಷ್ಟು ದೊಡ್ಡ ಯೋಜನೆಯ ಉದ್ದೇಶವೇನು..? ಇದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಇನ್ನೊಂದು ಚೋದ್ಯ, ಇನ್ನೊಂದು ತಮಾಷೆ ಎನ್ನಬಹುದಾದ ಅಂಶ ಎಂದರೆ, ಕುಮಾರಧಾರಾ, ನೇತ್ರಾವತಿ ನದಿಗಳಿಗೆ ಉಪನದಿಗಳಾಗಿ ಹಲವು ನದಿಗಳು ಹರಿಯುತ್ತವೆ, ಆ ಉಪನದಿಗಳಿಗೆ ಕಿರು ತೊರೆಗಳಾಗಿ, ಹೊಳೆಗಳಾಗಿ ಹರಿಯುವ ಇನ್ನೊಂದಿಷ್ಟು ಹೊಳೆಯಗಳು ಇದೇ ಗ್ರಾಮೀಣ ಭಾಗದಿಂದಲೇ ಹರಿಯುತ್ತವೆ. ಇದೇ ನೀರು ಕುಮಾರಧಾರಾ ಸೇರಿ ಅಣೆಕಟ್ಟು ತುಂಬಿ ಮತ್ತೆ ಪೈಪ್ ಮೂಲಕ ಅದೇ ಹಳ್ಳಿಗೆ ತಲಪುತ್ತದೆ…!, ಆದರೆ ಪೈಪ್ ಮೂಲಕ, ಶುದ್ದೀಕರಿಸಿ..!. ಬಹಳ ಅಚ್ಚರಿಯ ವಿಷಯ..!.
ಕಳೆದ ಕೆಲವು ಸಮಯಗಳಿಂದ ದ ಕ ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಂತಹ ಅರಣ್ಯ ತುಂಬಿರುವ ನಾಡಿನಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಕಾರಣ ವ್ಯಾಪಕವಾಗಿ ಕೊಳವೆಬಾವಿಗಳು ಆಗಿವೆ. ಈಗಾಗಲೇ ಕೊಳವೆಬಾವಿ ಸಾಕಷ್ಟು ತೆಗೆದು ಅಂತರ್ಜಲ ಬರಿದಾಗಿದೆ-ಬರಿದಾಗುತ್ತಿದೆ. ಈಗ ಹೊಳೆಯೂ ಬರಿದಾಗುತ್ತಿದೆ. ಇಂತಹ ಸಮಯದಲ್ಲಿ ಸಣ್ಣ ಸಣ್ಣ ಕಿಂಡಿ ಅಣೆಕಟ್ಟುಗಳ ಮೂಲಕ ಹರಿಯುವ ನೀರಿಗೆ ಹಳ್ಳಿಯಲ್ಲಿ ತಡೆ ಮಾಡಿದ್ದರೆ, ಅಂತರ್ಜಲ ಮಟ್ಟ ಏರಿಕೆ ಕಾಣುತ್ತಿತ್ತು, ಕೆರೆ, ಬಾವಿಗಳಲ್ಲಿ ನೀರೂ ಹೆಚ್ಚಾಗುತ್ತಿತ್ತು ಎನ್ನುವುದು ಸಾಮಾನ್ಯ ಜನರ ಅನುಭವದ ಮಾತುಗಳು. ಈಗ, ಸಮೃದ್ಧ ಕಾಡು ಇರುವ, ಹುಡುಕಿದರೆ ಬೇಕಾದಷ್ಟು ನೀರು ಸಿಗಬಹುದಾಗ, ನೀರು ಉಳಿಸಿಕೊಳ್ಳಬಹುದಾದ ವ್ಯವಸ್ಥೆ ಇರುವಾಗಲೂ ಎಲ್ಲಿಂದಲೋ ದೂರದ ಊರಿನಿಂದ ಸಹಜವಾಗಿ ಹರಿಯುವ ನೀರನ್ನು ವಿರುದ್ಧವಾಗಿ ಹರಿಸಿ, ಜನರಿಗೆ ಕುಡಿಸಬೇಕಾಗಿ ಇರಲಿಲ್ಲ ಎನ್ನುವುದನ್ನೂ ಜನಪ್ರತಿನಿಧಿಗಳು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ..?.
ಈಗಾಗಲೇ ಪೈಪ್ ಅಳವಡಿಕೆ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ, ರಸ್ತೆ ಬದಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟಿದೆ. ವನಮಹೋತ್ಸವದ ಹೆಸರಿನಲ್ಲಿ ನೆಟ್ಟಿರುವ ಗಿಡಗಳೂ ಕೆಲವು ಕಡೆ ಮಣ್ಣಿನಡಿಗೆ ಆಗಿದೆ. ಹೀಗಾಗಿ ಒಂದು ಯೋಜನೆಯಲ್ಲಿ ಇನ್ನೆರಡು ಹೊಸ ಯೋಜನೆಗಳು ಹುಟ್ಟಿಕೊಳ್ಳುತ್ತವೆ. ರಸ್ತೆ ಬದಿಯಲ್ಲಿ ಚರಂಡಿ ಇನ್ನಷ್ಟು ದೊಡ್ಡದಾಗಿ ಇಲಾಖೆಗಳಿಗೂ ಹೊಸ ಯೋಜನೆ ಸೃಷ್ಟಿಸಿಕೊಳ್ಳಬಹುದಾದ ವ್ಯವಸ್ಥೆಗಳೂ ಇಲ್ಲಾದ್ದು ಬಿಟ್ಟರೆ ಯಾವ ಉಪಯೋಗವೂ ಆಗುವುದು ಸದ್ಯಕ್ಕೆ ಕಷ್ಟ. ಏಕೆಂದರೆ ಈ ಯೋಜನೆಯ ಇಂಜಿನಿಯರ್ ಒಬ್ಬರ ಜೊತೆ ಮಾತನಾಡುವ, ಈ ಎಲ್ಲಾ ವಾಸ್ತವಗಳ ಬಗ್ಗೆ ಮಾತನಾಡಿದ ನಂತರ ಅವರು ಹೇಳುವುದು, “ನೀರು ಬರುತ್ತದೆ, ಇಂದೇ ನಾಳೆ ಅಲ್ಲ, ಯಾವಾಗ ಅಂತ ಹೇಳಲಾಗದು “. ಬಹುಶ: ಇಲ್ಲಿಗೆ ಈ ಯೋಜನೆಯ ಉದ್ದೇಶವೂ ಅರಿವಾಗುತ್ತದೆ.
ಕೆಲವು ಸಮಯ ಹಿಂದೆ ಶುದ್ಧ ಕುಡಿಯುವ ನೀರಿನ ಯೋಜನೆ ಎಂದು ನಗರದಿಂದ ತೊಡಗಿ ಗ್ರಾಮೀಣ ಭಾಗದವರೆಗೂ ಅಲ್ಲಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿತ್ತು, ರಸ್ತೆ ಬದಿ ಈಗಲೂ ಹಾಗೆಯೇ ಇದೆ. ಇದರ ಉಪಯೋಗವೇ ಆಗುತ್ತಿಲ್ಲ..!. ಕೆಲವು ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಎಂದು ಜಿಪಂ ಜಾರಿ ಮಾಡಿತು. ಅನೇಕ ಕಡೆ ಟ್ಯಾಂಕ್‌ಗಳಿಗೆ ನೀರು ಒಂದು ದಿನವೂ ಬಂದಿಲ್ಲ. ಕೊಳವೆಬಾವಿಯಿಂದ ನೀರನ್ನು ಲಿಫ್ಟ್ ಮಾಡಲು ಪಂಪ್ ಸಾಮರ್ಥ್ಯವೇ ಸಾಕಾಗಲಿಲ್ಲ, ಕೆಲವು ಕಡೆ ನೀರು ಇದ್ದರೂ ಪೈಪ್ ಸಮಸ್ಯೆಯಿಂದ ನೀರು ಬರಲೇ ಇಲ್ಲ..!. ಇಷ್ಟೆಲ್ಲಾ ವಿಫಲ ಯೋಜನೆಗಳು ಇದ್ದಾಗಲೂ ಸರ್ಕಾರ, ಪ್ರತಿನಿಧಿಗಳು, ಇಲಾಖೆಗಳು ಈ ಯೋಜನೆಗಳು ಗ್ರಾಮೀಣ ಭಾಗಕ್ಕೆ ಅದರಲ್ಲೂ ಮಲೆನಾಡು-ಕರಾವಳಿ ಭಾಗಕ್ಕೆ ಸೂಕ್ತವೇ ಎಂದು ಏಕೆ ಪರಿಶೀಲನೆ ಮಾಡುತ್ತಿಲ್ಲ…?
ಈಗಾಗಲೇ ಎತ್ತಿನಹೊಳೆ ಯೋಜನೆ ಮಾದರಿ ಇದೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಕೇವಲ ಟಿಎಂಸಿ ನೀರು ಮಾತ್ರವೇ ಕಳೆದ ವರ್ಷ ಹಾಯಿಸಲು ಸಾಧ್ಯವಾಯಿತು. ಇದರಿಂದ ಪಶ್ಚಿಮಘಟ್ಟದ ಒಂದಷ್ಟು ಕಡೆ ಅರಣ್ಯ ನಾಶ, ಪರಿಸರಕ್ಕೆ ಧಕ್ಕೆಯಾಯಿತು. ಮಳೆಯೂ ಕಡಿಮೆಯಾಯಿತು. ನಿಜ, ಕೋಲಾರದಂತಹ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಅಗತ್ಯ ಇದೆ. ಆದರೆ ದೂರದಿಂದ ಸಾವಿರಾರು ಕೋಟಿ ಖರ್ಚು ಮಾಡಿ ಕೊನೆಗೆ ನೀರು ಇಲ್ಲವಾದರೆ ಏನು ಪರಿಹಾರ..?., ಶಾಶ್ವತವಾಗಿ ಮಾಡಬಹುದಾದ, ಈಗಾಗಲೇ ಸಾಕಷ್ಟು ಮುಂದುವರಿದಿರುವ ದೇಶಗಳಲ್ಲಿ ಕೃತಕವಾಗಿ ಅರಣ್ಯ ಸೃಷ್ಟಿ ಮಾಡುವ, ನೀರು ಉಳಿಸುವ ಸಾಕಷ್ಟು ತಂತ್ರಗಳು ಇರುವಾಗ ಏಕೆ ಇಂತಹದ್ದೇ ಯೋಜನೆಗಳು ಜಾರಿಯಾಗುತ್ತವೆ ಎಂದು ಪ್ರಶ್ನೆಯಾಗಿ ಕಾಡುವಾಗ, ಈ ಪೈಪ್‌ಗಳಲ್ಲಿ ನೀರಲ್ಲ ಹಣವೇ ಹರಿಯುತ್ತದೆ…! ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಈ ಪಾಲಿನಲ್ಲಿ ಮೌನವಾಗಿರುವ ಜನರೂ ಪಾಲುದಾರರಾಗುತ್ತಿದ್ದಾರೆ ಅಷ್ಟೇ…!.
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…
ಅಡಿಕೆಯ ಮೇಲೆ ಯಾವುದೇ ಋಣಾತ್ಮಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕಾದ ಹಲವು ಅಂಶಗಳು…