ಅಡಿಕೆ ತೋಟಗಳಲ್ಲಿ ನುರಿತ ಕೃಷಿ ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಡ್ರೋನ್ ಮೂಲಕ ಔಷಧ ಮತ್ತು ಪೋಷಕಾಂಶ ಸಿಂಪಡಣೆಯನ್ನು ವೈಜ್ಞಾನಿಕವಾಗಿ ಪರಿಣಾಮಕಾರಿಯಾಗಿ ನಡೆಸಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಐಸಿಎಆರ್–ಸಿಪಿಸಿಆರ್ಐ) ಮಹತ್ವದ ಹೆಜ್ಜೆಯಿಟ್ಟಿದೆ. ಎತ್ತರದ ಅಡಿಕೆ ಮರಗಳಲ್ಲಿ ಡ್ರೋನ್ ಮೂಲಕ ಸಿಂಪಡಣೆ ನಡೆಸಲು ಅಗತ್ಯವಾದ ಕಾರ್ಯಾಚರಣೆಯ ಮಾನದಂಡಗಳನ್ನು ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ.
ಈ ಸಂಶೋಧನೆಯ ವರದಿ ಅಂತರರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ ‘ರಿಸಲ್ಟ್ಸ್ ಇನ್ ಎಂಜಿನಿಯರಿಂಗ್’ನಲ್ಲಿ ಪ್ರಕಟವಾಗಿದೆ. ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಲ್ಲಿ ಬೆಳೆ ಸಂರಕ್ಷಣೆಯ ಆಧುನೀಕರಣ ಹಾಗೂ ಕೃಷಿ ಕಾರ್ಯಗಳಲ್ಲಿ ಯಾಂತ್ರೀಕರಣವನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಅಧ್ಯಯನ ನಡೆಸಲಾಗಿದೆ.
ಡ್ರೋನ್ ಸಿಂಪಡಣೆಗೆ ಕ್ಷೇತ್ರ ಪ್ರಯೋಗ : ಕರಾವಳಿಯ ಹವಾಮಾನ ಪರಿಸ್ಥಿತಿಯಲ್ಲಿ ನಡೆಸಿದ ವಿಸ್ತೃತ ಕ್ಷೇತ್ರ ಪ್ರಯೋಗಗಳ ಮೂಲಕ ಅಡಿಕೆ ಮರದ ಶಿರಭಾಗ, ಹಿಂಗಾರ ಮತ್ತು ಗೊನೆಗಳನ್ನು ಗುರಿಯಾಗಿಸಿಕೊಂಡು ಹೆಕ್ಸಾಕಾಪ್ಟರ್ ಡ್ರೋನ್ನ ಒಂಬತ್ತು ವಿಭಿನ್ನ ಕಾರ್ಯಾಚರಣೆಯ ಸಂಯೋಜನೆಗಳನ್ನು ಪರೀಕ್ಷಿಸಲಾಗಿದೆ. ಸಿಂಪಡಣೆಯ ದ್ರಾವಣದ ಪ್ರಮಾಣ, ಹನಿಗಳ ಗಾತ್ರ ಮತ್ತು ಸಾಂದ್ರತೆ, ಮರದ ವಿವಿಧ ಭಾಗಗಳಿಗೆ ತಲುಪುವ ದ್ರಾವಣದ ಪ್ರಮಾಣ ಹಾಗೂ ಸಿಂಪಡಣೆಯ ಏಕರೂಪತೆಯನ್ನು ಅಧ್ಯಯನ ಮಾಡಲಾಯಿತು.
ಹೆಕ್ಟೇರ್ಗೆ 75 ಲೀಟರ್ ದ್ರಾವಣ: ಶೇ.82ರಷ್ಟು ಏಕರೂಪತೆ : ಪ್ರಯೋಗದಲ್ಲಿ ಪ್ರತಿ ಹೆಕ್ಟೇರ್ಗೆ 75 ಲೀಟರ್ ದ್ರಾವಣವನ್ನು ಬಳಸಿಕೊಂಡು, ಅಡಿಕೆ ಮರದ ಮೇಲಿನಿಂದ 2.5 ಮೀಟರ್ ಎತ್ತರದಲ್ಲಿ ಡ್ರೋನ್ ಹಾರಿಸಿ, ಸೆಕೆಂಡಿಗೆ 3 ಮೀಟರ್ ವೇಗದಲ್ಲಿ ಸಿಂಪಡಿಸಿದಾಗ ಉತ್ತಮ ಫಲಿತಾಂಶ ದಾಖಲಾಗಿದೆ.
ಈ ವಿಧಾನದಲ್ಲಿ ಹನಿಗಳ ಸಾಂದ್ರತೆ ಮತ್ತು ಗಾತ್ರ ಉತ್ತಮವಾಗಿದ್ದು, ಸಿಂಪಡಣೆಯ ಏಕರೂಪತೆ ಶೇ.82ರಷ್ಟಿತ್ತು ಎಂದು ಅಧ್ಯಯನ ವರದಿ ತಿಳಿಸಿದೆ. ಇದೇ ಪ್ರಮಾಣದ ದ್ರಾವಣ ಮತ್ತು ಹಾರಾಟದ ಎತ್ತರವನ್ನು ಕಾಯ್ದುಕೊಂಡು ಡ್ರೋನ್ ವೇಗವನ್ನು ಸೆಕೆಂಡಿಗೆ 5 ಮೀಟರ್ಗೆ ಹೆಚ್ಚಿಸಿದಾಗ, ಸಿಂಪಡಣೆಯ ಹನಿಗಳ ಗಾತ್ರದಲ್ಲಿ ಬದಲಾವಣೆ ಕಂಡುಬಂದಿದ್ದು, ನೆಲಕ್ಕೆ ಬೀಳುವ ದ್ರಾವಣದ ಪ್ರಮಾಣವನ್ನು ಕಡಿಮೆ ಮಾಡಲು ಈ ವಿಧಾನ ಸಹಕಾರಿಯಾಗಿರುವುದು ಅಧ್ಯಯನದಲ್ಲಿ ಗುರುತಿಸಲಾಗಿದೆ.
ಸಾಂಪ್ರದಾಯಿಕ ಸಿಂಪಡಣೆಗೆ ಹೋಲಿಸಿದರೆ ಡ್ರೋನ್ನ ಅನುಕೂಲಗಳೇನು? : ಕಾರ್ಬನ್ ಫೈಬರ್ ದೋಟಿ ಬಳಸಿ ನಡೆಸುವ ಸಾಂಪ್ರದಾಯಿಕ ಸಿಂಪಡಣೆಯಲ್ಲಿ ಅಡಿಕೆ ಗೊನೆ, ಹಿಂಗಾರ ಮತ್ತು ಕೆಳಭಾಗದ ಎಲೆಗಳಿಗೆ ಹೆಚ್ಚಿನ ಪ್ರಮಾಣದ ದ್ರಾವಣ ತಲುಪುತ್ತದೆ. ಈ ದೃಷ್ಟಿಯಿಂದ ಮರದ ನಿರ್ದಿಷ್ಟ ಭಾಗಗಳನ್ನು ಗುರಿಯಾಗಿಸಿಕೊಂಡು ಸಿಂಪಡಿಸುವಲ್ಲಿ ಸಾಂಪ್ರದಾಯಿಕ ವಿಧಾನ ಹೆಚ್ಚು ಪರಿಣಾಮಕಾರಿಯಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.
ಆದರೆ, ಸಾಂಪ್ರದಾಯಿಕ ಸಿಂಪಡಣೆಯಲ್ಲಿ ಔಷಧವು ನೆಲಕ್ಕೆ ಬೀಳುವ ಮತ್ತು ಕೃಷಿ ಕಾರ್ಮಿಕರ ಮೈಮೇಲೆ ಸಿಂಪಡಣಾ ದ್ರಾವಣ ತಾಗುವ ಸಾಧ್ಯತೆಗಳಿವೆ. ಇದಕ್ಕೆ ಹೋಲಿಸಿದರೆ ಡ್ರೋನ್ ಸಿಂಪಡಣೆಯು ವೇಗವಾಗಿ ಕಾರ್ಯನಿರ್ವಹಿಸಲು ಮತ್ತು ಕಾರ್ಮಿಕರ ನೇರ ಸಂಪರ್ಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಜೊತೆಗೆ, ಸೂಕ್ತ ಕಾರ್ಯಾಚರಣೆಯ ಮಾನದಂಡಗಳನ್ನು ಅನುಸರಿಸಿದಾಗ ಸಿಂಪಡಣೆಯ ಹನಿಗಳ ಹಂಚಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಗೊನೆ ಮತ್ತು ಹಿಂಗಾರಕ್ಕೆ ಸಿಂಪಡಣೆಯಲ್ಲಿ ಮಿತಿ : ಡ್ರೋನ್ ಸಿಂಪಡಣೆಗೆ ಕೆಲವು ಮಿತಿಗಳೂ ಇವೆ ಎಂಬುದನ್ನು ಅಧ್ಯಯನ ಗುರುತಿಸಿದೆ. ಮರದ ಕೆಳಭಾಗದ ಎಲೆಗಳು, ಹಿಂಗಾರ ಮತ್ತು ಅಡಿಕೆ ಗೊನೆಗಳ ಮೇಲೆ ಸಿಂಪಡಣಾ ಹನಿಗಳು ತಲುಪುವ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ, ಅಡಿಕೆ ಕಾಯಿಗಳು ಮತ್ತು ಹಿಂಗಾರಕ್ಕೆ ಬಾಧಿಸುವ ರೋಗ ಹಾಗೂ ಕೀಟಗಳ ನಿಯಂತ್ರಣಕ್ಕೆ ಡ್ರೋನ್ ಸಿಂಪಡಣೆಯೊಂದನ್ನೇ ಅವಲಂಬಿಸುವುದು ಸೂಕ್ತವಲ್ಲ ಎಂಬುದನ್ನು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತವೆ.
ಮುಂದಿನ ಹಂತದಲ್ಲಿ ರೋಗ–ಕೀಟ ನಿಯಂತ್ರಣದ ಅಧ್ಯಯನ ಅಗತ್ಯ : ಡ್ರೋನ್ ಸಿಂಪಡಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದರ ಜೊತೆಗೆ ಪರಿಸರ ಸುರಕ್ಷತೆಯನ್ನು ಕಾಪಾಡಲು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ ಮಾನದಂಡಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಈ ಅಧ್ಯಯನದಲ್ಲಿ ಗುರುತಿಸಿದ ಭೌತಿಕ ಸಿಂಪಡಣಾ ಮಾನದಂಡಗಳ ಆಧಾರದಲ್ಲಿ, ಅಡಿಕೆಯ ಪ್ರಮುಖ ರೋಗ ಮತ್ತು ಕೀಟಗಳ ವಿರುದ್ಧ ನಿರ್ದಿಷ್ಟ ಶಿಲೀಂಧ್ರನಾಶಕ ಹಾಗೂ ಕೀಟನಾಶಕಗಳನ್ನು ಡ್ರೋನ್ ಮೂಲಕ ಸಿಂಪಡಿಸಿದಾಗ ಅವುಗಳ ಜೈವಿಕ ಪರಿಣಾಮಕಾರಿತ್ವ ಹೇಗಿರುತ್ತದೆ ಎಂಬುದನ್ನು ಮುಂದಿನ ಸಂಶೋಧನೆಯಲ್ಲಿ ಪರೀಕ್ಷಿಸಬೇಕಿದೆ.
ಸಂಶೋಧನಾ ತಂಡದಲ್ಲಿ ಐಸಿಎಆರ್–ಸಿಪಿಸಿಆರ್ಐ ವಿಜ್ಞಾನಿಗಳಾದ ಡಾ. ರಾಜೇಶ್ ಎಂ.ಕೆ., ಡಾ. ವಿನಾಯಕ ಹೆಗ್ಡೆ, ಡಾ. ಭವಿಷ್ಯ, ಡಾ. ಆರ್. ತವ ಪ್ರಕಾಶ ಪಾಂಡಿಯನ್ ಸೇರಿದಂತೆ ಇತರರು ಹಾಗೂ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ (ಐಸಿಎಆರ್–ಡಿಸಿಆರ್) ವಿಜ್ಞಾನಿ ಡಾ. ಕೆ. ಮಂಜುನಾಥ್ ಭಾಗವಹಿಸಿದ್ದರು. ಅಡಿಕೆ ತೋಟಗಳಲ್ಲಿ ಡ್ರೋನ್ ಬಳಕೆಗೆ ವೈಜ್ಞಾನಿಕ ಆಧಾರ ಒದಗಿಸಿರುವ ಈ ಸಂಶೋಧನೆಯು ಕೃಷಿ ಯಾಂತ್ರೀಕರಣಕ್ಕೆ ನೆರವಾಗುವ ನಿರೀಕ್ಷೆಯಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ICAR–CPCRI scientists have standardised operational parameters for drone-based spraying in tall arecanut plantations to address labour shortages and promote mechanisation. Published in the international journal Results in Engineering, the study evaluated nine hexacopter configurations under coastal field conditions. Spraying 75 litres of solution per hectare from 2.5 metres above the palm canopy at 3 metres per second achieved 82% spray uniformity. Increasing flight speed to 5 metres per second helped reduce the amount of spray reaching the ground. However, drone spraying delivered fewer droplets to lower leaves, inflorescences and arecanut bunches than conventional carbon-fibre pole spraying. Further research is needed to establish the biological effectiveness of specific fungicides and insecticides applied using drones.
ಮಣ್ಣಿನ ಫಲವತ್ತತೆ ಮತ್ತು ಮಾನವ ಆರೋಗ್ಯ ಕಾಪಾಡಲು ರೈತರು ಸಾವಯವ ಕೃಷಿಗೆ ಆದ್ಯತೆ…
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಬನಾಸ್ಕಾಂಠಾದಲ್ಲಿ ಪಿಎಂ ಕಿಸಾನ್ ಯೋಜನೆಯ 24ನೇ…
ಅರಬ್ಬಿ ಸಮುದ್ರದ ತಿರುವಿಕೆ ಹಾಗೂ ಗಾಳಿಯ ಚಲನೆಯಲ್ಲಿನ ಬದಲಾವಣೆಯಿಂದ ನವೆಂಬರ್ 1ರಿಂದ ಕರ್ನಾಟಕದ…
ರಾಜ್ಯದಲ್ಲಿ ಅಕ್ರಮ ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ಕಳ್ಳಸಾಗಣೆ ವಿರುದ್ಧ ನಡೆಸಿದ…
ಅಸ್ಸಾಂನ ನ್ಯೂ ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ಮ್ಯಾನ್ಮಾರ್ ಮೂಲದ್ದೆಂದು ಶಂಕಿಸಲಾದ ಸುಮಾರು 24…
ತಮಿಳುನಾಡಿನ ವಿಒಸಿ ಬಂದರಿನಲ್ಲಿ ತೆರಿಗೆ ವಂಚನೆ ಆರೋಪದಡಿ 25 ಟನ್ ಹಸಿ ಅಡಿಕೆಯನ್ನು…