Advertisement
ಅಂಕಣ

ಗುಣಮಟ್ಟದ ಶಿಕ್ಷಣ ಬೇಕೆಂಬ ಆಸೆ, ಕಾಸಿಲ್ಲದೆ ನಿರಾಸೆ

Share
ಈಗ ಬಡವರಿಗೆ ತಮ್ಮ ಮಕ್ಕಳನ್ನು ಅವರ ಕೌಶಲಕ್ಕೆ ಪೂರಕವಾಗುವಂತಹ ಶಿಕ್ಷಣ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಗೆ ಸಮಾಜ ತಳ್ಳಲ್ಪಟ್ಟಿದೆ. ಇದರಿಂದಾಗಿ ಕೆಲವು ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಒತ್ತಡ ಮತ್ತೆ ಕೆಲವು ಕೋರ್ಸ್ ಗಳ ಕೊಠಡಿಗಳು ಭಣ ಭಣ. ಮಕ್ಕಳನ್ನು ಉದ್ಯೋಗಕ್ಕೆ ತಯಾರಿಸುವ ಕಾರ್ಖಾನೆಗಳಾಗಿ ಉನ್ನತ ಶಿಕ್ಷಣ ಕೇಂದ್ರಗಳು ಪರಿವರ್ತಿತವಾಗಿರುವುದು ಎಷ್ಟು ಸರಿ? ಇದಕ್ಕೆ ಈಗಿನ ಅಂದರೆ 2024-25 ರ ಒಂದು ಉದಾಹರಣೆ ಹೇಳುವುದಾದರೆ ಉನ್ನತ ಶಿಕ್ಷಣದ ಸಂಸ್ಥೆಗಳನ್ನು ನಡೆಸುವವರಿಗೆ ಬಿ.ಸಿ.ಎ. (Bachelor of Computer Application) ಕೋರ್ಸ್ ಚಿನ್ನದ ಮೊಟ್ಟೆ ಕೊಡುತ್ತದೆ. ಮೂಲ ವಿಜ್ಞಾನಗಳಾದ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮುಂತಾದುವು ಹೊರೆಯಾಗುತ್ತವೆ! ಈ ವಿದ್ಯಮಾನ ಎಷ್ಟು ಕಾಲವೆಂದು ಗೊತ್ತಿಲ್ಲ. ಏಕೆಂದರೆ ಆನ್ವಯಿಕ ಕೋರ್ಸ್ ಗೆ ಬಹುಕಾಲ ಆಕರ್ಷಣೆ ಇರುವುದಿಲ್ಲ.
ಒಂದು ಖಾಯಂ ಆಕರ್ಷಣೆ ಇರುವ ಕೋರ್ಸ್ ಎಂದರೆ ವೈದ್ಯ ವೃತ್ತಿಯದ್ದು. ಆದರೆ ಶಿಕ್ಷಣ ಮಾತ್ರ ಬಹಳ ದುಬಾರಿ. ಪ್ರಖ್ಯಾತ ವೈದ್ಯ ಡಾ. ದೇವಿ ಶೆಟ್ಟಿಯವರು ತಮ್ಮ ಒಂದು ಭಾಷಣದಲ್ಲಿ ಶಿಕ್ಷಣದ ವೆಚ್ಚವನ್ನು ಹೆಚ್ಚಿಸಿದ್ದೇ ವೈದ್ಯಕೀಯ ಶಿಕ್ಷಣಕ್ಕೆ ಮಾರಕವೆಂದು ಪ್ರತಿಪಾದಿಸಿದ್ದಾರೆ. ಈವತ್ತು ಭಾರತದಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಲು 400 ಕೋಟಿ ರೂಪಾಯಿ ಬೇಕಾಗುತ್ತದೆ! ಅಷ್ಟೊಂದು ವೆಚ್ಚ ಮಾಡಿದ ಬಳಿಕ ಆ ಹಣವನ್ನು ಭರಿಸಿಕೊಳ್ಳುವುದಾದರೂ ಹೇಗೆ? ಅದಕ್ಕೆ  ವಿದ್ಯಾರ್ಥಿಗಳ ಪೆÇೀಷಕರಿಂದ ಡೊನೇಶನ್ ಸಂಗ್ರಹಿಸುವುದೊಂದೇ ದಾರಿ. ಹಾಗಾಗಿ ಸದ್ಯದ ವ್ಯವಸ್ಥೆಯಲ್ಲಿ ಶ್ರೀಮಂತರ ಮಕ್ಕಳಷ್ಟೇ ವೈದ್ಯರಾಗಬಹುದು. ಬಡವರ ಮಕ್ಕಳು ಪ್ರತಿಭಾನ್ವಿತರಾಗಿದ್ದೂ ಡಾಕ್ಟರ್ ಆಗುವ ಕನಸನ್ನು ಕೂಡಾ ಕಾಣಲು ಸಾಧ್ಯವಿಲ್ಲದ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣವಿದೆ ಎನ್ನುತ್ತಾರೆ ಡಾ. ದೇವಿ ಶೆಟ್ಟಿ. ತಾನು ಬಡ ಸಹಪಾಠಿಗಳೊಂದಿಗೆ ಕಲಿತೆ ಎಂದು ನೆನಪಿಸಿಕೊಳ್ಳುವ ಶೆಟ್ಟಿಯವರು ಇಂದು ಪ್ರತಿಷ್ಟೆಗಾಗಿ ಡಾಕ್ಟರ್ ಆಗುವ ಜ್ಞಾನದಾಹವಿಲ್ಲದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾಲೇಜುಗಳನ್ನು ನಡೆಸುವ ಪರಿಸ್ಥಿತಿಯನ್ನು ಬದಲಾಯಿಸಬೇಕೆನ್ನುತ್ತಾರೆ. ಭಾರತದಲ್ಲಿ ಈಗ ಡಾಕ್ಟರ್‍ಗಳ ಕೊರತೆ ತೀವ್ರವಾಗಿದೆ. ಇದಕ್ಕೆ ಕಾರಣವೇನೆಂದರೆ ಮೆಡಿಕಲ್ ಕಾಲೇಜುಗಳಲ್ಲಿ ಸೀಟುಗಳಿಲ್ಲ! ನಮ್ಮಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರಲು ಹತ್ತು ಲಕ್ಷ ಮಂದಿ ಆಸಕ್ತರಿದ್ದಾರೆ. ಅಷ್ಟು ಮಂದಿ ಪರೀಕ್ಷೆ ಬರೆಯುತ್ತಾರೆ. ಆದರೆ ಸೀಟುಗಳಿರುವುದು 60,000 ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಹಣದ ಆಟ, ಭ್ರಷ್ಟಾಚಾರ ಮತ್ತು ಸೀಟುಗಳ ಮಾರಾಟ ನಡೆಯುತ್ತದೆ. ಆಗ ಅವಕಾಶ ಪಡೆಯುವುದು ಶ್ರೀಮಂತ ವಿದ್ಯಾರ್ಥಿಗಳೇ. ಅವರು ಆಸಕ್ತಿ ತಾಳುವುದು ರೇಡಿಯೋಲಜಿ, ಡರ್ಮಿಟೋಲಾಜಿ ಇತ್ಯಾದಿ ವಿಭಾಗಗಳಲ್ಲಿ. ಏಕೆಂದರೆ ನಿದ್ರೆ ಕೆಟ್ಟು ಚಿಕಿತ್ಸೆ ನೀಡುವ ಕಷ್ಟ ಅವರಿಗೆ ಬೇಡ.
ಅಂದರೆ  ಅವರ ವಿದ್ಯಾಭ್ಯಾಸದ ಗುರಿಯು ಹಣ ಹೂಡಿ ಹಣ ತೆಗೆಯುವುದಷ್ಟೇ ಆಗಿರುತ್ತದೆ. ಇಂದು ಒಬ್ಬ ಸಾಮಾನ್ಯ ಸ್ಪೆಶಲಿಸ್ಟ್ ಆಗಲು ಹತ್ತು ಲಕ್ಷ ದೇಣಿಗೆ ಯಾಕೆ? ಒಂದು ಸ್ನಾತಕೋತ್ತರ ಪದವೀಧರನಾಗಲು 2ರಿಂದ 5 ಕೋಟಿ ಬೇಕೆಂದರೆ ಏನರ್ಥ? ಅಷ್ಟು ಹಣ ಹಾಕಿ ಪದವಿ ಪಡೆಯುವವರಿಗೆ ಅಧ್ಯಯನದಲ್ಲಿ ಅತ್ಯಾಸಕ್ತಿ ಇರಲು ಸಾಧ್ಯವೇ? ಕೊನೆಗೂ ಪದವಿ ಪಡೆದ ಬಳಿಕ ವೃತ್ತಿನಿಷ್ಟೆ ಎಷ್ಟರಮಟ್ಟಿಗೆ ಇರಬಹುದು? ಹೀಗೆ ವೈದ್ಯಕೀಯ ಶಿಕ್ಷಣವು ಖರೀದಿಯ ಮಟ್ಟಕ್ಕೆ ಇಳಿದಿರುವುದು ಭಾರತದಲ್ಲಿ ಮಾತ್ರ. ವಿಶ್ವದ ಎಲ್ಲಾ ಕಡೆ ಉನ್ನತ ವೈದ್ಯಕೀಯ ಶಿಕ್ಷಣವು ಉಚಿತವಾಗಿದೆ. ಅಲ್ಲಿ ಸೀಟು ಗಳಿಸಲು ಮೆರಿಟ್ ಒಂದೇ ಮಾನದಂಡವಾಗಿದೆ. ಹಾಗಾಗಿ ಅಗತ್ಯವಿದ್ದಷ್ಟು ಪರಿಣತ ವೈದ್ಯರು ಲಭ್ಯರಿದ್ದಾರೆ. ಆದರೆ ನಮ್ಮ ದೇಶದಲ್ಲಿ ವೈದ್ಯರ ಕೊರತೆ ಬಾಧಿಸುತ್ತಿದೆ.  ಬಾಣಂತಿ ಮತ್ತು ಮಗುವಿನ ಸುರಕ್ಷೆಗೆ ನಮ್ಮಲ್ಲಿ 2 ಲಕ್ಷ ಮಂದಿ ಗೈನೆಕಾಲಜಿಸ್ಟ್‍ಗಳು ಬೇಕು. ಆದರೆ 50,000ದಷ್ಟು ವೈದ್ಯರ ಕೊರತೆ ಇದೆ. ಕಲಿತವರಲ್ಲೂ ಅನೇಕರು ಪ್ರಸೂತಿ ವಿಜ್ಞಾನ ಕಲಿಯೋದಿಲ್ಲ. ಏಕೆಂದರೆ ಅವರನ್ನು ಮಧ್ಯರಾತ್ರೆ ಎಬ್ಬಿಸಬಾರದು. ಇನ್ನು ಸ್ಪೆಶಲಿಸ್ಟ್ ಎಲ್ಲರೂ ನಗರಗಳಲ್ಲಿ ನೆಲಸಿದ್ದಾರೆ. ಆದರೆ 60% ಕ್ಕಿಂತ ಹೆಚ್ಚು ಮಕ್ಕಳು ಹುಟ್ಟುವುದು ಗ್ರಾಮೀಣ ಭಾರತದಲ್ಲಿ. ಹಾಗಾಗಿ ಎಲ್ಲಿ ಶುಶ್ರೂಶೆ ಬೇಕೋ ಅಲ್ಲಿ ಶುಶ್ರೂಶಕರು ಇಲ್ಲ. ಶೆಟ್ಟಿಯವರ ಪ್ರಕಾರ ಭಾರತದಲ್ಲಿ ಆರೋಗ್ಯ ವ್ಯವಸ್ಥೆಗೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಅದೇ ರೀತಿ ನರ್ಸಿಂಗ್ ಮತ್ತು ಪಾರಾಮೆಡಿಕಲ್ ಶಿಕ್ಷಣವೂ ಕುಂಠಿತಗೊಂಡಿದೆ. ಇದು ತುಂಬಾ ವ್ಯಾಪಕವಾಗಿ ಅಭಿವೃದ್ಧಿ ಆಗಬೇಕಾದ ಅಗತ್ಯವಿದೆ. ಅಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯಕೀಯ ಶಿಕ್ಷಣ ಬೇಕೆಂದು ಬಯಸಿ ಬರುವ ಅಭ್ಯರ್ಥಿಗಳು ತುಂಬಾ ಇದ್ದಾರೆ. ಅದರೆ ಅವರಿಗೆ ಶಿಕ್ಷಣ ನೀಡುವಷ್ಟು ಸಂಸ್ಥೆಗಳನ್ನು ನಾವು ಕಟ್ಟಿಲ್ಲ. ಯಾಕೆಂದರೆ ನಮ್ಮಿಂದ ಕಡಿಮೆ ವೆಚ್ಚದಲ್ಲಿ ಸಂಸ್ಥೆಗಳನ್ನು ಸ್ಥಾಪಿಸಲು ಆಗುವುದಿಲ್ಲ.
ದೇವಿ ಶೆಟ್ಟಿಯವರು ಹೇಳುವ ಪ್ರಕಾರ ಕೆರಿಬಿಯನ್ ವಲಯದಲ್ಲಿ ಅಮೇರಿಕಾಕ್ಕೆ ಉತ್ತಮ ಡಾಕ್ಟರ್‍ಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ 35 ಮೆಡಿಕಲ್ ಕಾಲೇಜುಗಳಿವೆ. ಅಲ್ಲಿ ತರಬೇತಿ ಪಡೆದ ಡಾಕ್ಟರ್‍ಗಳು ಅದ್ಭುತ ಸಾಮರ್ಥ್ಯವಂತರಿರುತ್ತಾರೆ. ಅಲ್ಲಿ ಸಾಧ್ಯವಿರುವಂತೆ ನಮ್ಮಲ್ಲಿಯೂ ಕಡಿಮೆ ವೆಚ್ಚದಲ್ಲಿ ಕಳಪೆ ಅಲ್ಲದ ಕಾಲೇಜುಗಳನ್ನು ಮಾಡಬಾರದೇಕೆ? ಇಲ್ಲಿ 400 ಕೋಟಿ ವೆಚ್ಚ ಮಾಡಿ ನೂರು ವಿದ್ಯಾರ್ಥಿಗಳಿಗೆ 140 ಉಪನ್ಯಾಸಕರಿರುವಂತಹ ದುಬಾರಿ ವ್ಯವಸ್ಥೆ ಏಕೆ? 140 ಮಂದಿ ಪಾಠ ಮಾಡುವವರಿರುವಾಗ ಸಾವಿರ ಮಂದಿ ವಿದ್ಯಾರ್ಥಿಗಳಿಗೆ ವ್ಯೆದ್ಯಕೀಯ ಕಲಿಸಬಹುದು ಎಂಬುದು  ದೇವಿ ಶೆಟ್ಟಿಯವರ ಅಭಿಪ್ರಾಯ.
ದೇವಿ ಶೆಟ್ಟಿಯವರ ತರ್ಕದ ಎಳೆಯನ್ನು ವಿಸ್ತರಿಸಿ ನೋಡಿದರೆ ನಮ್ಮ ದೇಶದ ಎಲ್ಲಾ ಶಿಕ್ಷಣ ವ್ಯವಸ್ಥೆಗಳಿಗೂ ಈ ಸಮಸ್ಯೆ ಇದೆ. ಅದೆಂದರೆ ಶಿಕ್ಷಣದ ವೆಚ್ಚವನ್ನು ಅಧಿಕಗೊಳಿಸುವುದು. ಇದು ಪ್ರಾಥಮಿಕ ಶಾಲೆಯನ್ನು ಸ್ಥಾಪಿಸುವ ಹಂತದಿಂದಲೇ  ಆರಂಭವಾಗುತ್ತದೆ. ಶಿಕ್ಷಣ ಸಂಸ್ಥೆ ಎಂದಾಕ್ಷಣ ಭವ್ಯವಾದ ಕಟ್ಟಡ ಮುಂತಾಗಿ ಭೌತಿಕ ವ್ಯವಸ್ಥೆಗಳ ಏರ್ಪಾಡಿಗೇ ಬಹಳ ವೆಚ್ಚಗಳಾಗುತ್ತವೆ. ಶಿಕ್ಷಣ ಇಲಾಖೆಯೊಂದಿಗೆ ಜಂಟಿಯಾಗಿ ನಿರ್ದಿಷ್ಟ ಮೊತ್ತದ ಠೇವಣಿಯನ್ನು ಇಡಬೇಕೆಂಬ ಒಂದು ಶರ್ತವಿರುತ್ತದೆ. ಇದು ಪ್ರಾಥಮಿಕ ಹಂತದಲ್ಲಿ ಸಾವಿರಗಳಲ್ಲಿ ಇದ್ದದ್ದು ಕಾಲೇಜುಗಳಿಗಾಗುವಾಗ ಲಕ್ಷ-ಕೋಟಿಗಳಲ್ಲಿ ಇರುತ್ತದೆ. ಇದೊಂದು ಅನುಪಯುಕ್ತ ಬಂಡವಾಳ. ಇದನ್ನು ಹೂಡದೆ ಅನುಮತಿಯೇ ಸಿಗುವುದಿಲ್ಲ. ಇನ್ನು ಕಟ್ಟಡ ನಿರ್ಮಾಣ ಆಗದೆ ಮಾನ್ಯತೆಯ ಪರಿಶೀಲನೆಗೆ ಬರುವುದಿಲ್ಲ. ಮಾನ್ಯತೆ ನೀಡುವ ತಂಡದಲ್ಲಿರುವ ತಜ್ಞರು ಕಾಲೇಜುಗಳನ್ನು ಸ್ಥಾಪಿಸಿ ಅನುಭವ ಇರುವವರಲ್ಲ. ಅವರು ಶಿಕ್ಷಣ ವ್ಯವಸ್ಥೆಯ ಉನ್ನತ ಸ್ಥಾನಗಳಲ್ಲಿರುವವರು. ಹಾಗಾಗಿ ಸಂಸ್ಥೆಗಳು ಹೇಗಿರಬೇಕೆಂಬ ಆದರ್ಶಮಯ ಪರಿಕಲ್ಪನೆಗಳನ್ನು ಮಾತ್ರ ಪೋಣಿಸುತ್ತಾರೆ. ಆದರೆ ಅವುಗಳನ್ನು ಒದಗಿಸಿಕೊಳ್ಳುವುದು ಸಂಸ್ಥೆಗಳ ಸ್ಥಾಪಕರಿಗೆ ಕಷ್ಟವಾಗುತ್ತದೆ. ಆಗ ಸಹಜವಾಗಿ ಅಲ್ಲಿ ಭ್ರಷ್ಟಾಚಾರಕ್ಕೆ ಎಡೆಯಾಗುತ್ತದೆ. ಮಾನ್ಯತೆಯನ್ನೂ ಲಂಚ ನೀಡಿಯೇ ಪಡೆಯಬೇಕಾದ ಪರಿಸ್ಥಿತಿ ಇದೆ. ಹಾಗಿದ್ದ ಮೇಲೆ ಕಡಿಮೆ ವೆಚ್ಚದಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವೇ? ಇಂತಹ ಒಂದು ಪ್ರಶ್ನೆಗೆ ಶೀಘ್ರವಾಗಿ ಉತ್ತರ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ. ಕೋಟಿಗಟ್ಟಲೆ ಡೋನೇಶನ್ ಕೊಟ್ಟು ವೈದ್ಯರಾದವರಲ್ಲಿ ರೋಗಿಗಳ ಬಗ್ಗೆ ಇರಬೇಕಾದ ಕರುಣೆ, ಅನುಕಂಪ ಹಾಗೂ ಜವಾಬ್ದಾರಿಗಳಿಗಿಂತ ಹೆಚ್ಚಾಗಿ ಹಣದ ಮೇಲೆ ಕಣ್ಣು ಇರುತ್ತದೆ. ಇಂದು ನರ್ಸ್‍ಗಳ ತರಬೇತಿ ಸಂಸ್ಥೆಗಳೂ ವೈದ್ಯಕೀಯ ಕಾಲೇಜುಗಳೂ ಸಮರ್ಥ ವೈದ್ಯಕೀಯ ಶೂಶ್ರೂಶಕರನ್ನು ಹುಟ್ಟು ಹಾಕುವುದಿಲ್ಲ. ಕೆಲವು ಪ್ರಾಧ್ಯಾಪಕರ ಪ್ರಕಾರ ಶರೀರ ಶಾಸ್ತ್ರದ ಮೂಲಭೂತ ಸಂಗತಿಗಳನ್ನು ತಿಳಿದಿಲ್ಲದ ಅಭ್ಯರ್ಥಿಗಳು ವೈದ್ಯಕೀಯಕ್ಕೆ ವಿದ್ಯಾರ್ಥಿಗಳಾಗಿ ಸೇರುತ್ತಾರೆ. ಇವರೆಲ್ಲ ಡಾಕ್ಟರರಾದ ಬಳಿಕ ರೋಗಿಗಳ ಪಾಡೇನು ಎಂಬ ಪ್ರಶ್ನೆ ಕಲಿಸುತ್ತಿರುವ ಗುರುಗಳಲ್ಲೇ ಇದೆ!
ಪ್ರಸ್ತುತ ಆಕರ್ಷಕ ಎನ್ನಿಸಿರುವ ಬಿ.ಸಿ.ಎ. ಶಿಕ್ಷಣದ ಪರಿಸ್ಥಿತಿಯೂ ಅದೇ ಆಗಿದೆ. ಕಾಲೇಜುಗಳು ತಮ್ಮಲ್ಲಿರುವ ಸೌಲಭ್ಯಗಳ ಸಾಮಥ್ರ್ಯವನ್ನು ಮೀರಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿದ್ದಾರೆ. ಕಂಪ್ಯೂಟರ್ ಗಳನ್ನಾದರೂ ಖರೀದಿಸಿ ಹೊಂದಿಸಿಕೊಳ್ಳಲು ಸಾಧ್ಯ, ಆದರೆ ಕಲಿಸಬಲ್ಲ ತಜ್ಞ ಉಪನ್ಯಾಸಕರ ಕೊರತೆಯನ್ನು ನೀಗಿಸುವುದು ಹೇಗೆ? ಇದರ ಪರಿಹಾರಕ್ಕೆ ಅಸಮರ್ಥರನ್ನೂ ನೇಮಿಸಿಕೊಂಡು ವಿದ್ಯಾರ್ಥಿಗಳನ್ನೂ ಅವರ ಪೋಷಕರನ್ನೂ ವಂಚಿಸುತ್ತಿರುವುದು ಶಿಕ್ಷಣವೆಂಬುದು ವ್ಯಾಪಾರ ಎಂತ ಆಗಿರುವುದಕ್ಕೆ ಸಾಕ್ಷಿಯಾಗುತ್ತದೆ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ವೆದರ್‌ ಮಿರರ್‌ | 19.09.2024 | ರಾಜ್ಯದ ಹಲವೆಡೆ ಸಾಮಾನ್ಯ ಮಳೆ ಸಾಧ್ಯತೆ |

20.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 hour ago

ಭೂತಾನ್‌ನಿಂದ ಮತ್ತೆ ಹಸಿ ಅಡಿಕೆ ಆಮದಿಗೆ ಅನುಮತಿ | ಈ ಬಾರಿ ಅಸ್ಸಾಂ ಮೂಲಕವೂ ಅವಕಾಶ…! | ಕಳ್ಳಸಾಗಾಣಿಕೆಗೆ ಪರೋಕ್ಷ ಬೆಂಬಲ..?

ಭೂತಾನ್‌ನಿಂದ 17,000 ಟನ್‌ಗಳಷ್ಟು ಹಸಿ ಅಡಿಕೆಯನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳಲು ಸರ್ಕಾರವು 2022…

4 hours ago

ನ.14 ರಿಂದ 17 ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳ 2024 ಅನ್ನು ಗಾಂಧಿ ಕೃಷಿ ವಿಜ್ಞಾನ…

15 hours ago

ಮೂಲಸೌಕರ್ಯ ಯೋಜನೆಗಳಿಗೆ 15 ಲಕ್ಷ ಕೋಟಿ ರೂ. ಹೂಡಿಕೆ

ಭಾರತವನ್ನು ವಿಕಸಿತ ಭಾರತದತ್ತ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಸರ್ಕಾರದ…

15 hours ago

ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ | ಕಲ್ಯಾಣ ಕರ್ನಾಟಕಕ್ಕೆ 11 ಸಾವಿರದ 770 ಕೋಟಿ |

ಕಲಬುರಗಿಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.ದಶಕಗಳ ಬಳಿಕ   ಕಲಬುರಗಿಯಲ್ಲಿ …

16 hours ago

ಕೇಂದ್ರ ಸರ್ಕಾರದ ಅಗ್ರಿಶೂರ್ ಯೋಜನೆ ಅನಾವರಣ | ಯೋಜನೆಯಿಂದ ರೈತರಿಗೆ ಸಂತಸ

ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಗಳಿಗೆ  ಧನ ಸಹಾಯ ನೀಡುವುದು ಮತ್ತು ರೈತರ…

16 hours ago