ವಿಶ್ವ ಆರೋಗ್ಯ ಸಂಸ್ಥೆಯ(WHO) ಮೂಲಕ ಅಡಿಕೆ ಕ್ಯಾನ್ಸರ್‌ಕಾರಕ, ಅಡಿಕೆ ನಿಷೇಧ ಇತ್ಯಾದಿಗಳ ಬಗ್ಗೆ ಪದೇ ಪದೇ ಸುದ್ದಿಯಾಗುತ್ತಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಭೆಗೆ ತೆರಳುವ ಭಾರತದ ಪ್ರತಿನಿಧಿಗಳಿಗೆ ಅಡಿಕೆಯ ಔಷಧೀಯ ಮೌಲ್ಯಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಅಲ್ಲದೆ ಅಡಿಕೆಯ ಅಧ್ಯಯನದ ಬಗ್ಗೆ ಮಾಹಿತಿ ಹಾಗೂ ಕೃಷಿಕರ ಬದುಕಿನ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆಯಾಗಬೇಕು ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ (ಎ ಆರ್ ಡಿ ಎಫ್) ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಸಭೆಯು ಧರ್ಮಸ್ಥಳದಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅಡಿಕೆ ಸಂಶೋಧನೆಗಳ ಬಗ್ಗೆ ಚರ್ಚೆ ನಡೆಯಿತು. ಅಡಿಕೆಯ ವಿವಿಧ ಔಷಧೀಯ ಗುಣಮಟ್ಟಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ. ಅಡಿಕೆ ಹಾನಿಕಾರಕ ಅಲ್ಲ ಎಂಬ ಅಂಶ ಈಗಾಗಲೇ ಅಧ್ಯಯನದಿಂದ ಹೊರಬಂದಿದೆ, ಎ ಆರ್ ಡಿ ಎಫ್ ಹಾಗೂ ಜೆಡ್ಡು ಆಯುರ್ವೇದ ಸಂಸ್ಥೆ ಈ ಬಗ್ಗೆ ಮಾಡಿರುವ ಅಧ್ಯಯನವು ಅಂತರಾಷ್ಟ್ರೀಯ ಜರ್ನಲ್ ನಲ್ಲೂ ಪ್ರಕಟವಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು. ವಿದೇಶಿ ಅಡಿಕೆ ಆಮದು ತಡೆಗೆ ಅಡಿಕೆ ಕ್ವಾಲಿಟಿಯ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಈ ಬಗ್ಗೆ ಸುಸಜ್ಜಿತವಾದ ಪ್ರಯೋಗಾಲಯ ಸ್ಥಾಪನೆ ಅಗತ್ಯವಿದೆ. ಈಗಾಗಲೇ 63 ಕ್ಕೂ ಹೆಚ್ಚು ವಿದೇಶಿ ಅಡಿಕೆಯ ಸ್ಯಾಂಪಲ್ ಗಳನ್ನು ಎಆರ್ ಡಿಎಫ್ ಪರಿಶೀಲಿಸಿದೆ. ಇದಕ್ಕಾಗಿ ಮುಂದೆ ಪ್ರಯೋಗಾಲಯದ ಅಗತ್ಯ ಇದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಅಡಿಕೆ ಹಳದಿರೋಗ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ಸರ್ಕಾರದಿಂದ ಕ್ರಮವಾಗಬೇಕು ಈ ಬಗ್ಗೆ ಒತ್ತಾಯ ಅಗತ್ಯವಿದೆ ಹಾಗೂ ಆ ಪ್ರದೇಶದಲ್ಲಿ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಲು ಯೋಜನೆಗೆ ಸಲಹೆ ನೀಡಲಾಯಿತು. ವಿಶೇಷವಾಗಿ ಸುಳ್ಯ, ಶೃಂಗೇರಿ ಹಾಗೂ ಕೊಪ್ಪ ತಾಲೂಕಿಗೆ ಆದ್ಯತೆ ನೀಡಬೇಕಾಗಿದೆ. ಅಡಿಕೆ ಕೊಳೆರೋಗದಿಂದ ಕೃಷಿಕರು ಸಂಕಷ್ಟ ಅನುಭವಿಸಿರುವ ಬಗ್ಗೆ ಚರ್ಚೆ ನಡೆಯಿತು. ಶೇ.70 ರಷ್ಟು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದ್ದು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕ್ರಮಗಳ ಬಗ್ಗೆಯೂ ಒತ್ತಾಯಿಸಲಾಯಿತು. ಅಡಿಕೆಯ ಇತರ ಬಳಕೆಯಾದ ಶಾಯಿ, ಅಡಿಕೆಯ ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಸಂಸ್ಥೆಗಳ ಮೂಲಕ ತಯಾರಿಗೆ ಸಲಹೆ ನೀಡಲಾಯಿತು.
ಸಭೆಯಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಟ್ರಸ್ಟಿಗಳಾದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಅಡಿಕೆ ಮಹಾಮಂಡಲ ಅಧ್ಯಕ್ಷ ಅರಗ ಜ್ಞಾನೇಂದ್ರ, ಕ್ಯಾಂಪ್ಕೊ ಆಡಳಿತ ನಿರ್ದೇಶಕ ಬಿ ವಿ ಸತ್ಯನಾರಾಯಣ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ , ತುಮ್ಕೋಸ್ ಅಧ್ಯಕ್ಷ ಎಚ್ ಎಸ್ ಶಿವಕುಮಾರ್,ಅಡಿಕೆ ಕೃಷಿಕ ಸಂಶೋಧಕ ಬದನಾಜೆ ಶಂಕರ ಭಟ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್ ಕೇಶವ ಭಟ್ ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

