ಚುನಾವಣಾ ಕಣ ಸಿದ್ಧವಾಗುತ್ತಿದೆ. ಗ್ರಾಮೀಣ ಭಾಗದಲ್ಲೂ ಚುನಾವಣೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಕಳೆದ ನಾಲ್ಕು ವರ್ಷಗಳ ಸಾಧನೆ-ವೈಫಲ್ಯ-ನಿರುತ್ಸಾಹಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಈಗ ಮಾಡುವ ಎಲ್ಲಾ ಕೆಲಸಗಳೂ, ನಾಟಕಗಳು “ಓಟಿನ ಭರವಸೆ-ಓಟಿನ ಬೇಟೆ” ಎಂದು ಗ್ರಾಮೀಣ ಭಾಗದಲ್ಲೂ ಅರ್ಥ ಮಾಡಿಕೊಳ್ಳದಷ್ಟು ಜನರು ದಡ್ಡರಾಗಿ ಈಗ ಉಳಿದಿಲ್ಲ. ಸೋಶಿಯಲ್ ಮೀಡಿಯಾ ಐದು ವರ್ಷಗಳಲ್ಲಿ ಬೃಹತ್ತಾಗಿ ಬೆಳೆದಿದೆ. ಪ್ರತೀ ಮನೆಯಲ್ಲಿ ಫ್ಯಾಕ್ಟ್ ಚೆಕ್ ನಡೆಯುತ್ತದೆ. ಹೀಗಾಗಿ ವಿಷಯದ ಪರವಾಗಿಯೇ ಚರ್ಚೆ ನಡೆಯುತ್ತಿದೆ. ಈಗ ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಸುಳ್ಯದಿಂದ Election MIRROR ಆರಂಭವಾಗಿದೆ.
ಸುಳ್ಯ ಎನ್ನುವುದು ಕಳೆದ 25 ವರ್ಷಗಳಿಂದಲೂ ಬಿಜೆಪಿ ಭದ್ರಕೋಟೆ. ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು, ದಕ ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆ ಎಂದು ಕರೆಯಿಸಿಕೊಂಡ ಕ್ಷೇತ್ರ. ಮೀಸಲು ಕ್ಷೇತ್ರವಾಗಿ ಇದುವರೆಗೂ ಮುಂದುವರಿದಿದೆ. ಇನ್ನೂ ಅದೇ ಕ್ಷೇತ್ರವಾಗಿ ಮುಂದುವರಿಯುತ್ತದೆ. ಸುಳ್ಯ ಹಾಗೂ ಕಡಬ ತಾಲೂಕು ಒಳಗೊಂಡ ಕ್ಷೇತ್ರವಾಗಿರುತ್ತದೆ. ಕಳೆದ ಕೆಲವು ಸಮಯಗಳಿಂದ ಇಡೀ ರಾಜ್ಯದಲ್ಲಿ ಸುದ್ದಿಯಾಗಿರುವುದು ಕೂಡಾ ಸುಳ್ಯವೇ. ಅಭಿವೃದ್ಧಿಯ ಕಾರಣದಿಂದ ಸುಳ್ಯ ಎಲ್ಲೆಡೆಯೂ ಕಾಣಿಸಿಕೊಂಡಿದೆ. ಸುಳ್ಯದಲ್ಲಿ ರಸ್ತೆ, ಸೇತುವೆಗಳು, ನೆಟ್ವರ್ಕ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ಕಾರಣದಿಂದ ಸುದ್ದಿಯಾಗಿದೆ. ಈಚೆಗೆ ಆರು ತಿಂಗಳಿನಿಂದ ಅಭಿವೃದ್ಧಿ, ಅನುದಾನಗಳು ಸದ್ದು ಮಾಡಿವೆ. ಬೆಳ್ಳಾರೆಯ ಪ್ರಕರಣದ ನಂತರ ವೇಗವಾಗಿ ಅನುದಾನಗಳ ಪಟ್ಟಿ ಕಾಣಿಸಿಕೊಂಡಿದೆ. ಹಾಗಿದ್ದರೂ ಗ್ರಾಮೀಣ ಭಾಗದಲ್ಲಿ ಮಾತ್ರಾ ಇದೆಲ್ಲಾ”ಓಟಿನ ನಾಟಕ” ಎಂದು ಕರೆಯಿಸಿಕೊಂಡಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಕನಿಷ್ಟ 20 ಕಡೆಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಕಳೆದ 6 ತಿಂಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಅಷ್ಟೂ ಕಡೆಗಳಲ್ಲೂ ಸುಳ್ಯದ ಶಾಸಕರು, ಸಚಿವರು, ಬಿಜೆಪಿ ಪ್ರತಿನಿಧಿಗಳು ಮಾತನಾಡಿಸಲಿಲ್ಲ. ಇದೆಲ್ಲಾ ರಾಜಕೀಯ ಕಾರಣ ಎಂದರು. ಪ್ರತಿಭಟನೆಗಳೆಲ್ಲಾ ನಾಟಕ ಎಂದರು, ಮತದಾನ ಬಹಿಷ್ಕಾರ ಮಾಡಿದರೆ ಅಭಿವೃದ್ಧಿ ಆಗಲ್ಲ ಎಂದರು. ಇಷ್ಟೂ ವರ್ಷಗಳಲ್ಲಿ ಏಕೆ ಅಭಿವೃದ್ಧಿ ಆಗಿಲ್ಲ ಎಂದು ಕೇಳಿದರೆ, ಮತ್ತೆ ಒಂದಷ್ಟು ರಾಜಕೀಯದ ಹಗೆತನಗಳು ಕಾಣಿಸಿಕೊಂಡವು. ಹೀಗಾಗಿ ಜನರು ಭ್ರಮನಿರಸನಗೊಂಡಿರುವುದು ಸತ್ಯ.
ಆದರೆ ಬಿಜೆಪಿ ನಾಯಕರನ್ನು ಗಮನಿಸಿದರೆ ಮರಳುಗಾರಿಕೆ, ಕಲ್ಲುಗಣಿಗಾರಿಕೆ, ಮದ್ಯದ ಅಂಗಡಿ ವ್ಯವಹಾರ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಾಮಾನ್ಯ ಜನರು ಮಾತನಾಡುತ್ತಾ ಪ್ರತಿಭಟನೆಯ ಹಾದಿಯಲ್ಲಿ ಸಾಗಿದ್ದಾರೆ. ಈಚೆಗೆ ಸುಳ್ಯದ ಹರಿಹರ, ಕೊಲ್ಲಮೊಗ್ರದಲ್ಲಿ ಮದ್ಯದಂಗಡಿ ವಿರುದ್ಧ ನಡೆದ ಪ್ರತಿಭಟನೆ, ಮರ್ಕಂಜದಲ್ಲಿ ನಡೆಯುವ ಕಲ್ಲುಗಣಿಗಾರಿಕೆ ಹೋರಾಟ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಗೊಂದಲಗಳು… ಇದೆಲ್ಲಾ ಕೆಲವು ಸ್ಯಾಂಪಲ್ ಅಷ್ಟೇ. ಇದೆಲ್ಲಾ ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧದ ಅಪಸ್ವರಗಳ ದಾರಿಯಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಕಾಣಿಸಿಕೊಂಡು ತಿಂಗಳುಗಳೇ ಕಳೆದವು. ಯಾವ ಅಧಿಕಾರಿಗಳೂ ಈ ಸ್ಥಳಗಳಿಗೆ ಭೇಟಿ ನೀಡಿ ಬ್ಯಾನರ್ ತೆಗೆಸುವ, ಪರಿಹಾರದ ಬಗ್ಗೆ ಮಾತುಗಳನ್ನಾಡಲಿಲ್ಲ. ಇದಕ್ಕೆ ಕಾರಣ ಆಡಳಿತ ಪಕ್ಷವೇ ಆಗಿದೆ ಎಂದು ಗ್ರಾಮೀಣ ಭಾಗದಲ್ಲಿ ಜನರು ಮಾತನಾಡುತ್ತಾರೆ. ಇದು ಇನ್ನೊಂದು ವೈಫಲ್ಯಕ್ಕೆ ಕಾರಣವಾಗಿದೆ. ಚುನಾವಣೆಯ ಸಮಯದಲ್ಲಿ ಮತದಾನ ಬಹಿಷ್ಕಾರದ ಸ್ಥಳಗಳಿಗೆ ಬರುವ ಅಧಿಕಾರಿಗಳು ಬ್ಯಾನರ್ ತೆಗೆಸಲು ತೋರಿಸುವ ಆಸಕ್ತಿ ಈಗ ಏಕೆ ತೋರಿಸುತ್ತಿಲ್ಲ, ಅಭಿವೃದ್ಧಿಗೆ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಚುನಾವಣೆಯ ಸಮಯದಲ್ಲಿ ಈ ಬಾರಿ ಮತದಾನ ಬಹಿಷ್ಕಾರ ಬ್ಯಾನರ್ ತೆಗೆಸಲೂ ಬರಬೇಕಾಗಿಲ್ಲ ಎಂದೂ ಪಟ್ಟು ಹಿಡಿಯಲು ಕಾಯುತ್ತಿದ್ದಾರೆ ಹಲವು ಕಡೆಗಳಲ್ಲಿ. ಇದನ್ನೆಲ್ಲಾ ಆಡಳಿತ ಪಕ್ಷವಾಗಿ ಸರಿಪಡಿಸಬೇಕಾದ ಕೆಲಸ ಬಿಜೆಪಿ ಮಾಡದೇ ಇರುವುದು ಅಸಮಾಧಾನಗಳನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡಿದೆ.
ಚುನಾವಣೆಯ ಸಮಯದಲ್ಲಿ ಧರ್ಮ, ಜಾತಿ ಸೇರಿದಂತೆ ಸೂಕ್ಷ್ಮ ಸಂಗತಿಗಳನ್ನು ಎಳೆದು ತಂದರೆ ಆದೀತು ಎನ್ನುವುದು ಇನ್ನೊಂದು ವಾದ ಇದೆ. ಆದರೆ ಈ ಬಾರಿ ಸುಳ್ಯದ ಮಟ್ಟಿಗೆ ಅದೂ ವರ್ಕೌಟ್ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಧರ್ಮದ ಬಗ್ಗೆ ಮಾತನಾಡುವ ಅನೇಕ ನಾಯಕರು ಜಾತಿ ನಾಯಕರಾಗಿಯೂ, ಜಾತಿ ನಾಯಕರು ಒಳ ರಾಜಕೀಯವಾಗಿಯೂ ಕಾಣಿಸಿಕೊಂಡಿರುವುದು ಜನರು ಗುರುತಿಸಿದ್ದಾರೆ. ಹೀಗಾಗಿ ಧರ್ಮ ಸೂಕ್ಷ್ಮಗಳು ಈ ಬಾರಿ ಸುಳ್ಯದಲ್ಲಿ ವರ್ಕೌಟ್ ಆಗುವುದು ಸ್ವಲ್ಪ ಕಡಿಮೆಯಾಗಲಿದೆ.
ಇದೇ ವೇಳೆ ಕಾಂಗ್ರೆಸ್ ತನ್ನೊಳಗೆ ಈಗಾಗಲೇ ಇರುವ ಭಿನ್ನಾಭಿಪ್ರಾಯ ಮರೆತು ಗಟ್ಟಿಯಾಗುತ್ತಿದೆ. ಅಭ್ಯರ್ಥಿಯನ್ನು ಹೆಚ್ಚು ಕೇಂದ್ರೀಕರಿಸಿಕೊಂಡು ಕೆಲಸ ಮಾಡುತ್ತಿದೆ. ಸದ್ದಿಲ್ಲದೆ, ಅಸಮಾಧಾನಗೊಂಡಿರುವ ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಿಗೆ ತೆರಳಿ ಜನರನ್ನು ಮಾತನಾಡಿಸಿ ಸಂಘಟಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿ ಕಡೆಯಿಂದ ದೀಪಾವಳಿ ಶುಭಾಶಯ, ಮನೆಮನೆಗೆ ಪತ್ರ ಸೇರಿದಂತೆ ಅಲ್ಲಲ್ಲಿ ಸಣ್ಣ ಸಭೆಗಳ ಮೂಲಕ ತನ್ನ ಕಾರ್ಯವನ್ನು ಮಾಡುತ್ತಿದೆ.ಸಂಘಟನೆಯ ಶಕ್ತಿಯನ್ನು ವಿಸ್ತರಿಸುತ್ತಿದೆ.
ಈಚೆಗೆ ವೇಗವಾಗಿ ಬೆಳೆಯುತ್ತಿರುವ ಆಮ್ ಆದ್ಮಿ ಪಕ್ಷವು ಕೂಡಾ ಸುಳ್ಯದ ವೈಫಲ್ಯಗಳ ಲಾಭವನ್ನು ಪಡೆಯಲು ಯತ್ನಿಸಿದೆ. ಸಂಘಟನೆಯನ್ನು ಆನ್ ಲೈನ್ ಹಾಗೂ ಮನೆಮನೆಗೆ ಭೇಟಿ ನೀಡುವ ಮೂಲಕ ವಿಸ್ತರಿಸುತ್ತಿದೆ. ಸುಳ್ಯದ ಸಣ್ಣ ತಂಡವು ಪ್ರಭಾವಿಯಾಗಿ ಕೆಲಸ ಆರಂಭಿಸಿದ್ದು, ನಿರೀಕ್ಷೆಗೂ ಮೀರಿ ಎಎಪಿ ಪರವಾಗಿ ಒಲವು ತೋರಿದ್ದಾರೆ ಎಂದು ಎಎಪಿ ಮುಖಂಡರು ಹೇಳುತ್ತಾರೆ. ಗುಜರಾತ್ ಚುನಾವಣೆಯ ನಂತರ ಎಎಪಿ ಪಕ್ಷ ಸಂಘಟನೆಗೆ ವೇಗ ಪಡೆಯಲಿದೆ. ಸುಳ್ಯದಲ್ಲೂ ಓಟ್ ಶೇರ್ ಹೆಚ್ಚು ಪಡೆಯಲು ಸಿದ್ಧತೆ ನಡೆಸಿದೆ.
ಇದೆಲ್ಲದರ ನಡುವೆ ಜೆಡಿಎಸ್ ಕೂಡಾ ಸುಳ್ಯದಲ್ಲಿ ತನ್ನ ಕಚೇರಿ ತೆರೆದು ಪಕ್ಷ ಸಂಘಟನೆಯನ್ನು ಚುರುಕು ಮಾಡಿದೆ. ಹಲವು ಪ್ರಮುಖರನ್ನು ಭೇಟಿ ಮಾಡುವ ಕೆಲಸ ಆರಂಭಿಸಿದೆ. ಇದರ ಜೊತೆಗೆ ಎಸ್‌ಡಿಪಿಐ ಕೂಡಾ ಪಕ್ಷದ ಚಟುವಟಿಕೆ ಆರಂಭ ಮಾಡಿದೆ.
ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲಿನ ಕ್ಷೇತ್ರದಲ್ಲಿ ಇತರೆಲ್ಲಾ ಪಕ್ಷಗಳು ಚಟುವಟಿಕೆ ಆರಂಭಗೊಳಿಸಿದರೆ ಬಿಜೆಪಿ ಇನ್ನೂ ಚಟುವಟಿಕೆ ಆರಂಭಗೊಳಿಸಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ವರ್ಷದ ಮೊದಲೇ ಚಟುವಟಿಕೆ ಆರಂಭಗೊಳಿಸಿ ಅಸಮಾಧಾನಿತರನ್ನು ಮಾತುಕತೆ ನಡೆಸುವ, ಒಟ್ಟು ಮಾಡುವ ಕೆಲಸ ಆರಂಭ ಮಾಡಿತ್ತು. ಇದರಲ್ಲಿ ಆರ್‌ಎಸ್‌ಎಸ್ ಕೂಡಾ ತೊಡಗಿಸಿಕೊಂಡಿತ್ತು. ಈ ಬಾರಿ ಇನ್ನೂ ಈ ಕೆಲಸಗಳು ಆರಂಭವಾಗಿಲ್ಲ. ಈಗಿನ ಶಾಸಕರ ಕಾರ್ಯವೈಖರಿ ವಿರುದ್ಧ ಅಸಮಾಧಾನಗಳು ಗ್ರಾಮೀಣ ಭಾಗದಿಂದಲೂ ಇದ್ದರೂ ಯಾವ ಚಟುವಟಿಕೆಯೂ ಆರಂಭವಾಗದಿರುವುದು ಹೆಬ್ಬಾಗಿಲು ಕಿರಿದಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಬಾರಿ ನಿರೀಕ್ಷೆಯಷ್ಟು ಸುಲಭದಲ್ಲಿ ಸುಳ್ಯ ಇಲ್ಲ ಎನ್ನುವುದು ಈಗಾಗಲೇ ವ್ಯಕ್ತವಾಗುತ್ತಿದೆ. ಈ ಹಿಂದಿನ ಜನಸಂಘದ ಕಾಲದ ಮನೆಗಳು ನಿರಾಸೆಯಲ್ಲಿದ್ದರೆ, ಹಲವು ಕಡೆಗಳಲ್ಲಿ ನೋಟಾ ಮತದಾರರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಅಭಿವೃದ್ಧಿಯ ನಾಟಕಗಳು , ಪ್ರತಿಭಟನೆಯ ನಾಟಕಗಳು, ಮತದಾನ ಬಹಿಷ್ಕಾರದ ಕೂಗುಗಳೆಲ್ಲಾ ಬಲಗೊಳ್ಳುವ ಸಾಧ್ಯತೆ ಈಗ ನಿಚ್ಚಳವಾಗಿದೆ.
ಆರ್‌ಎಸ್‌ಎಸ್ ಕೂಡಾ ಮೊದಲಿನಷ್ಟು ಪ್ರಭಾವಶಾಲಿಯಾಗಿಲ್ಲ ಎನ್ನುವುದು ಈಚೆಗೆ ಹೆಚ್ಚು ಪ್ರತಿಫಲನವಾಗುತ್ತಿದೆ. ಜನಸಂಖ್ಯೆ ಮೇಲೆಯೇ ಈಗ ಕೇಂದ್ರೀಕೃತವಾಗುತ್ತಿದೆಯೇ ಹೊರತು ಸೈದ್ದಾಂತಿಕ ಬದ್ಧತೆಯ ಕಡೆಗಿನ ಆದ್ಯತೆ ಕಡಿಮೆಯಾಗಿದೆ. ಈ ಕಾರಣದಿಂದಲೇ ಅನೇಕ ಕಡೆಗಳಲ್ಲಿ ನಾಯಕರ ಓಡಾಟವೇ ಕಾಣುತ್ತದೆಯೇ ಹೊರತು ಕಾರ್ಯಕರ್ತರ ಓಡಾಟ ಕಾಣುತ್ತಿಲ್ಲ. ಇದೆಲ್ಲಾ ಕಾರಣಗಳಿಂದ ಸುಳ್ಯದಲ್ಲಿ ಮೊದಲಿನಷ್ಟು ಸುಲಭ ಇಲ್ಲ. ಅಭಿವೃದ್ಧಿಯ ಕೊರತೆ, ಅತಿಯಾದ ಆತ್ಮವಿಶ್ವಾಸ, ಸೈದ್ಧಾಂತಿಕ ಶಿಥಿಲತೆಯೇ ಇಲ್ಲಿ ಬಿಜೆಪಿಗೆ ಸದ್ಯ ಹಿನ್ನಡೆಯ ಕಾರಣ.