“ಮಾತೃದೇವೋ ಭವ, ಪಿತೃದೇವೋ ಭವ” ಎಂಬಂತೆ ಭಾರತೀಯ ಸಂಸ್ಕೃತಿಯ ಮತ್ತೊಂದು ಅಡಿಗಲ್ಲು “ಭೂಮಾತಾ” ಎಂಬ ಬೋಧನೆ. ಭೂಮಿ ಕೇವಲ ನಾಡು, ಮಣ್ಣು, ಸಂಪನ್ಮೂಲವಲ್ಲ; ಅದು ಜೀವಸಮಸ್ತದ ಜನನಸ್ತಾನ. ಆದ್ದರಿಂದ ಪರಿಸರ ಸಂರಕ್ಷಣೆ ಎಂಬುದು ಆಯ್ಕೆಗಿಂತಲೂ ಹೆಚ್ಚಾಗಿ ಅನಿವಾರ್ಯ ಕರ್ತವ್ಯ.
ವೇದಗಳಲ್ಲಿ ಹೇಳಿದೆ, “ಮಾತಾ ಭೂಮಿಃ ಪುತ್ರೋ ಅಹಂ ಪೃತಿವ್ಯಾಃ” (ಅಥರ್ವವೇದ 12.1.12) ಭೂಮಿ ಎಂದರೆ ತಾಯಿ, ನಾವು ಅವಳ ಮಕ್ಕಳು. ತಾಯಿಯನ್ನು ಕಾಪಾಡಿದರೆ ಮಾತ್ರ ಮಕ್ಕಳ ಜೀವನ ಸುಖಮಯವಾಗುತ್ತದೆ. ಇಂದಿನ ಪರಿಸರ ನಾಶವು ಮಾನವನ ಬದುಕಿಗೆ ನೇರ ಬೆದರಿಕೆಯಾಗಿದೆ.
ಅರಣ್ಯ ನಾಶದಿಂದ ಉಂಟಾದ ಹವಾಮಾನ ಅಸ್ಥಿರತೆಯೇ ನಾವು ಈಗ ಅನುಭವಿಸುತ್ತಿರುವ ಬರ, ಪ್ರವಾಹ, ಅಕಾಲಮಳೆ. ಕಾರ್ಖಾನೆ, ವಾಹನಗಳಿಂದ ಉಂಟಾದ ಅತಿಯಾದ ವಾಯು ಮಾಲಿನ್ಯವೇ ಶ್ವಾಸಕೋಶ, ಹೃದಯರೋಗ, ಕ್ಯಾನ್ಸರ್ ನಂತಹ ರೋಗಗಳ ಹೆಚ್ಚಳಕ್ಕೆ ಕಾರಣ. ಸುಲಭವೆಂದು ನಾವು ಉಪಯೋಗಿಸುತ್ತಿರುವ ಪ್ಲಾಸ್ಟಿಕ್, ರಾಸಾಯನಿಕ ಬಳಕೆ ಯೊಂದಾಗಿ ನೀರು, ಭೂಮಿ, ಸಮುದ್ರದ ಜೀವವೈವಿಧ್ಯ ನಾಶವಾಗುತ್ತಿದೆ.
“ಯದ್ಭೂತಾನಾಂ ಪ್ರತಿವಾಸಃ ಸ ಭೂಮಾ” – ಎಲ್ಲಾ ಜೀವಿಗಳಿಗೆ ಆಶ್ರಯವಾಗಿರುವ ಭೂಮಿಯನ್ನು ಹಾಳು ಮಾಡಿದರೆ, ಉಳಿಯುವುದೇ ಮಾನವ ಅಸ್ತಿತ್ವವಿಲ್ಲದ ಪ್ರಪಂಚ ಎಂಬುದನ್ನು ಯೋಚಿಸಿದರೆ ಅದರ ಭ್ಯಾನಕತೆಯ ಅರಿವು ನಮಗಾಗುತ್ತದೆ. ಈಗಲೇ ಎಚ್ಚೆತ್ತು ಸಂರಕ್ಷಿಸದೇ ಹೋದರೆ ಅಪಾಯ ತಪ್ಪಿದ್ದಲ್ಲ.
ಇಂದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವುದು ಪ್ರಕೃತಿಯ ಮೇಲಿನ ಅತಿಕ್ರಮಣ ನೋಡುತ್ತಾ ನಾವೆಲ್ಲಾ ಮೂಕರಾಗಿದ್ದೇವೆ.ಆದರೆ ಪ್ರತಿಯೊಂದು ಅತಿಕ್ರಮಣಕ್ಕೂ ಪ್ರತಿಕ್ರಿಯೆಯಿದೆ ಎಂಬುದನ್ನು ನಾವು ಸಾಕ್ಷಿಗಳಾಗಿ ಗಮನಿಸುತ್ತಲೇ ಇದ್ದೇವೆ. ಕೇವಲ 2 ಡಿಗ್ರಿ ತಾಪಮಾನ ಏರಿಕೆಯಾದರೂ ಹಿಮಪರ್ವತ ಕರಗುವುದು, ಸಮುದ್ರ ಮಟ್ಟ ಏರಿಕೆ, ಕರಾವಳಿ ನಾಶವಾಗುತ್ತದೆ.. ಮಣ್ಣು ಹಾಳಾದರೆ ಬೆಳೆ ನಾಶ, ನದಿ ಒಣಗಿದರೆ ನಾಗರಿಕತೆ ಕುಸಿತ.ಪರಿಸರ ನಾಶದಿಂದ ಪ್ರತಿ ವರ್ಷ ನೂರಾರು ಪ್ರಾಣಿಗಳು ನಾಶವಾಗುತ್ತಿವೆ. ಇದರಿಂದ ಪರಿಸರ ಸಮತೋಲನ ಕುಸಿಸುತ್ತಿದೆ.
ಕೇವಲ ಪ್ರಾಣಿಗಳು ಅಲ್ಲ, ಮಾನವನ ಬದುಕೂ ಯಂತ್ರಗಳ ಸಹಾಯದಿಂದಲೇ ನಡೆಯಬೇಕಾದ ‘ಕೃತಕ ಜೀವನ’ವಾಗುವ ಭೀತಿ ತಪ್ಪಿದ್ದಲ್ಲ. ಮಾನವ ಅಸ್ತಿತ್ವವೇ ಇಲ್ಲವಾಗುವಂತ ವಾತಾವರಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಭಗವದ್ಗೀತೆಯಲ್ಲಿ ಕೃಷ್ಣನು ಎಚ್ಚರಿಸುತ್ತಾನೆ: “ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೆ ಸರ್ವಕಿಲ್ಬಿಷೈಃ। ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್॥” (ಗೀ. 3.13)ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ದುರುಪಯೋಗ ಮಾಡಿದವರು ಪಾಪದ ಫಲದಿಂದ ತಪ್ಪಲಾರರು. ಇಂದು ಮಾನವಕುಲವೇ ಆ ಪಾಪದ ಫಲವನ್ನು ಅನುಭವಿಸುತ್ತಿದೆ.
ಪರಿಸರ ಸಂರಕ್ಷಣೆ ಎಂಬುದು ಸಂಸ್ಕೃತಿಯ ಅಂತರಂಗವಾಗಬೇಕು. ಭಾರತೀಯ ದಾರ್ಶನಿಕ ದೃಷ್ಟಿಯಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಪರಸ್ಪರ ವಿರೋಧಿಗಳಲ್ಲ; ಅವು ಪರಸ್ಪರಪೂರಕಗಳು. ಋಷಿಗಳಿಗೆ ಅರಣ್ಯವೇ ಅಶ್ರಮ ವಾಗಿತ್ತು ಪ್ರಕೃತಿಯ ನಡುವೆ ಧ್ಯಾನಮಗ್ನರಾದರು.
ನದಿ–ಪರ್ವತ–ಮರಗಳ ಪೂಜೆ ಕೇವಲ ಭಕ್ತಿಯಾ ಅತಿರೇಕ ಅಲ್ಲ, ಪರಿಸರ ಕಾಪಾಡುವ ಜ್ಞಾನ. ಸಸ್ಯಸಮೃದ್ಧಿಯ ಉತ್ಸವಗಳು ,ವೃಕ್ಷಾರೋಪಣ, ಹಬ್ಬ–ಹರಿದಿನಗಳಲ್ಲಿನ ಹಸಿರು ಸಂಪ್ರದಾಯ. ಪ್ರಕೃತಿಯೊಂದಿಗಿನ ಅವಿನಾಭಾವದ ದ್ಯೋತಕ !
ಭಾರತೀಯ ಸಂಸ್ಕೃತಿ ಎಂದರೆ ಪ್ರಕೃತಿ ಪೂಜೆ. ತುಳಸಿ, ವಟ, ಅಶ್ವತ್ಥ, ಗೋ, ನದಿ, ಬೆಟ್ಟ – ಎಲ್ಲವೂ ಪವಿತ್ರವೆಂದು ಪೂಜಿತವಾಗಿದೆ. ಇದರಲ್ಲಿ ಕೇವಲ ಭಕ್ತಿಯಿಲ್ಲ, ಪರಿಸರ ವಿಜ್ಞಾನವಿದೆ.
ಅಶ್ವತ್ಥ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೆಚ್ಚು ಹೀರಿಕೊಂಡು ಜೀವ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಹಿಂದೆ ಸಹಜವಾಗಿ ಇದ್ದ ಗಂಗಾ–ಕಾವೇರಿ ನದಿಗಳ ತೀರದಲ್ಲಿ ನಿರ್ಮಾಣವಾದ ಸಂಸ್ಕೃತಿ, ನೀರಿನ ಪವಿತ್ರತೆಯನ್ನು ಸಾರಿತ್ತು.ಯಜ್ಞ ಸಂಪ್ರದಾಯವು ವಾತಾವರಣ ಶುದ್ಧೀಕರಣದ ವೈಜ್ಞಾನಿಕ ವಿಧಾನವಾಗಿತ್ತು.
ಇವು ನಮಗೆ ನೀಡಿದ ಸಂದೇಶವೇನೆಂದರೆ , ಪರಿಸರ ಕಾಪಾಡಿದಾಗ ಮಾತ್ರ ಸಂಸ್ಕೃತಿ ಉಳಿಯುತ್ತದೆ; ಸಂಸ್ಕೃತಿ ಉಳಿದಾಗ ಮಾತ್ರ ಸಮಾಜ ಉಳಿಯುತ್ತದೆ. ಈ ಪರಿಸರ ಉಳಿಸುವ ವಿಷಯದಲ್ಲಿ ಜವಾಬ್ದಾರಿಯೇ ನಮ್ಮ ಧರ್ಮ ಮತ್ತು ಕರ್ತವ್ಯ ವಾಗಬೇಕು. ಪರಿಸರ ಕಾಪಾಡುವುದು ಸರ್ಕಾರದ ಯೋಜನೆ ಮಾತ್ರವಲ್ಲ; ಪ್ರತಿಯೊಬ್ಬನ ಜೀವನ ಧರ್ಮವಾಗಬೇಕು.
ಪ್ರತಿಯೊಬ್ಬನೂ ನಿತ್ಯ ಜೀವನದಲ್ಲಿ ನೀರು ಉಳಿಸುವುದು, ಮರ ನೆಡುವುದು, ಪ್ಲಾಸ್ಟಿಕ್ ತ್ಯಜಿಸುವುದು. ಪರಿಸರ ಸ್ನೇಹಿ ಹಬ್ಬಗಳು, ಸ್ಥಳೀಯ ಸಂಪನ್ಮೂಲ ಬಳಕೆ. ಇತ್ಯಾದಿಗಳನ್ನು ಪ್ರಾಮಾಣಿಕವಾಗಿ ಅಳವಡಿಸಿಕೊಂಡಾಗ ಬದಲಾವಣೆ ಪ್ರಾರಂಭವಾಗುತ್ತದೆ. ಸರ್ಕಾರ ಮತ್ತು ಸಂಸ್ಥೆಗಳು ಅಭಿವೃದ್ಧಿ ಯೋಜನೆಗಳಲ್ಲಿ ಪರಿಸರ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಿ ಅನುಷ್ಠಾನಕ್ಕೆ ತರಬೇಕು.
“ನರೋ ನ ಹಿ ಸ್ವಯಂ ಸಿದ್ಧ್ಯತಿ, ಪರಸ್ಪರೇಣ ಸಹ್ಯತೇ” – ಮನುಷ್ಯನು ಒಬ್ಬನೇ ಬದುಕಲು ಸಾಧ್ಯವಿಲ್ಲ; ಪ್ರಕೃತಿ–ಸಮಾಜ–ಸಹಜೀವಿಗಳ ಸಹಕಾರ ಅವಶ್ಯ. ಇಂದು ನಾವು ಮಾಡುವ ಪ್ರತಿಯೊಂದು ನಿರ್ಧಾರ, ನಾಳೆಯ ಪೀಳಿಗೆಯ ಬದುಕನ್ನು ನಿರ್ಧರಿಸುತ್ತದೆ.
ನಾವು ಮರ ಕಡಿಯುವುದಾದರೆ, ಅವರು ಮರ ನೆಡಬೇಕಾದ ಪರಿಸ್ಥಿತಿ. ನಾವು ನದಿಗಳನ್ನು ಹಾಳುಮಾಡಿದರೆ, ಅವರು ನೀರಿನ ಬಾಟಲಿಯಲ್ಲಿ ಬದುಕಬೇಕಾದ ಪರಿಸ್ಥಿತಿ. ನಾವು ಭೂಮಿಯನ್ನು ಕಲುಷಿತಗೊಳಿಸಿದರೆ, ಅವರು ಆಮ್ಲಜನಕ ಸಿಲಿಂಡರ್ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ.
ಈ ಕಾರಣಕ್ಕಾಗಿಯೇ ವೇದವಾಣಿ ನಮಗೆ ಹೇಳುತ್ತಲೇ ಬಂದಿದೆ “ಪೃಥಿವೀ ನಮೋಸ್ತುಭ್ಯಂ” – ಭೂಮಿಗೆ ನಮಸ್ಕರಿಸು. ನಮಸ್ಕಾರ ಮಾಡಿದಾಗ ಕೇವಲ ಭಕ್ತಿ ಅಲ್ಲ, ಸಂರಕ್ಷಣೆಯೂ ಆಗಬೇಕು. ಪರಿಸರ ಸಂರಕ್ಷಣೆ ಆಯ್ಕೆ ಅಲ್ಲ, ಅನಿವಾರ್ಯತೆ.!ಅದಿಲ್ಲದಿದ್ದರೆ ಭವಿಷ್ಯ ಕತ್ತಲೆಯಾಗಿದೆ; ಅದಿದ್ದರೆ ಭವಿಷ್ಯ ಹಸಿರಾಗಿದೆ. ಪ್ರಕೃತಿ–ಸಂಸ್ಕೃತಿ–ಸಮಾಜಗಳ ಸಮತೋಲನವೇ ನಿಜವಾದ ಪ್ರಗತಿ.


