ಏ ಸಬ್ ಪಾಪೀ ಪೇಟ್ ಕಾ ಸವಾಲ್ ಹೇ ಜನಾಬ್ ಔರ್ ಕುಚ್ ಭೀ ನಹೀ… ಅಂದ್ರೆ ಎಲ್ಲಾರೂ ಮಾಡುವದು ಹೊಟ್ಟೆಗಾಗಿ… ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನುವ ಮಾತನ್ನು ನಾವು ನೀವೆಲ್ಲ ಆಗಾಗ ಕೇಳುತ್ತಲೇ ಇರುತ್ತೇವೆ.ಆದರೆ ಹಣ ಗಳಿಸುವ ಆಸೆಗೆ ಬಿದ್ದ ಮನುಷ್ಯ ಮಾತ್ರ ಈ ಬದುಕಿನ ಹಾದಿಯಿಂದ ವಿಮುಖನಾಗುತ್ತಲೇ ಹೋಗುತ್ತಾನೆ.
ಬಿಸಿಲು ಅಂತ ಮನೆಯಿಂದ ಹೊರಗೆ ಬೀಳಲು ನಾವು ನೀವೆಲ್ಲ ಹಿಂದೇಟು ಹಾಕುವಾಗಲೇ ಹ್ಞಾಂ ತಾಜಾ ತರಕಾರೀ ಅನ್ನುತ್ತ ತಳ್ಳುವ ಗಾಡಿಯ ಮೇಲೆ ತರಕಾರಿ ಮಾರುವವನಿಂದ ಹಿಡಿದು…….. ಈಗಷ್ಟೇ ಕಂಪನಿಯೊಂದರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಸೇರಿದ ಹುಡುಗ ಅಥವಾ ಹುಡುಗಿಯವರೆಗೆ, ಈಗಷ್ಟೇ ಹೊರಟ ರೈಲಿನಲ್ಲಿ ಚಪ್ಪಾಳೆ ತಟ್ಟಿ ಭಯ್ಯಾ ದೇನಾ ಅನ್ನುವ ತೃತೀಯ ಲಿಂಗಿಯ ತನಕ ಎಲ್ಲರದ್ದೂ ಒಂದೊಂದು ವೇಷವಷ್ಟೇ…
ಕಳ್ಳತನ ಮಾಡುವದು ಖಂಡಿತ ತಪ್ಪಾದರೂ ಹಸಿದ ಹೊಟ್ಟೆಗಾಗಿ ಬಿಸ್ಕತ್ ಅಥವಾ ಬ್ರೆಡ್ಡು ಕದ್ದು ಬೇಕರಿ ಮಾಲೀಕನ ಕೈಗೆ ಸಿಕ್ಕುಬಿದ್ದು ಒದೆ ತಿನ್ನುವ ಹನ್ನೆರಡು ಹದಿಮೂರೋ ವರ್ಷದ ಮಕ್ಕಳು ಸೇರಿದಂತೆ ದೂರದ ಯೂಪಿ,ಬೀಹಾರ್, ಓರಿಸ್ಸಾಗಳಿಂದ ಹಿಡಿದು ನಮ್ಮದೇ ನಾಡಿನ ಇನ್ಯಾವದೋ ಊರಿನಿಂದ ಕೆಲಸ ಹುಡುಕಿಕೊಂಡು ಪಟ್ಟಣಗಳಿಗೆ ಬಂದ ಅದೆಷ್ಟೋ ಅಪರಿಚಿತ ಕಾಮ್ ವಾಲೆ ಬಾಬುಗಳು ಅಷ್ಟೇ ಯಾಕೆ ದೇಶದ ಗಡಿಯಲ್ಲಿ ಶತ್ರು ಪಾಳೆಯದ ವಿರುದ್ದ ತನ್ನ ಜೀವವನ್ನೆ ಪಣಕ್ಕಿಟ್ಟು ದುಡಿಯುವ ಸೈನಿಕ ಮತ್ತು ಸಕಾಲಕ್ಕೆ ಬಾರದ ಮಳೆಯನ್ನೇ ನಂಬಿಕೊಂಡು ಬದುಕುವ ಅನ್ನದಾತನ ತನಕ ಎಲ್ಲರೂ ಮಾಡುತ್ತಿರುವದು ಒನ್ ಯಾಂಡ್ ಓನ್ಲೀ ಹೊಟ್ಟೆಪಾಡು ಸ್ವಾಮೀ…ಹೊಟ್ಟೆ ಪಾಡು ಅಷ್ಟೇ.
ಆದರೆ ಇಂತಹ ಹೊಟ್ಟೆಪಾಡು ಅನ್ನುವ ಅಸಹಾಯಕತೆಗಳ ನಡುವೆಯೇ ಪಿಕ್ ಪಾಕೇಟ್, ಚೈನ್ ಸ್ನ್ಯಾಚಿಂಗ್ ಮಾಡುವ ಕಳ್ಳನಿಂದ ಹಿಡಿದು ನಾಳೆ ಖಂಡಿತ ನಿಮಗೆ ವಾಪಸ್ ಕೊಡ್ತೀನಿ ಬ್ರದರ್ ಈಗ ನೂರು ರೂಪಾಯಿ ಇದ್ರೆ ಕೊಡ್ತೀರಾ?? ಅನ್ನುವ ಕುಡುಕನೊಬ್ಬನ ತನಕ ಬಹಳಷ್ಟು ಜನ ಹಾದಿ ತಪ್ಪುವದೇ ಹೊಟ್ಟೆಪಾಡಿನ ಹೆಸರು ಹೇಳಿಕೊಂಡು ಅನ್ನೋದು ನಿಮಗೆಲ್ಲ ತಿಳಿದಿರಲಿ. ಕ್ಲಬ್ಬು ಮತ್ತು ಪಬ್ಬುಗಳಲ್ಲಿ ಮತ್ತಿನಲ್ಲಿ ಹಣ ತೂರುತ್ತ ಒನ್ ಮೋರ್ ಅಂತ ಕೂಗುವ ಗಿರಾಕಿಗಳ ಕೂಗಿಗೆ ತನಗಿಷ್ಟ ವಿಲ್ಲದಿದ್ದರೂ ಮತ್ತೆ ಅದೇ ಹಾಡಿಗೆ ಅನಿವಾರ್ಯವಾಗಿ ಮೈ ಬಳುಕಿಸುವ ಹುಡುಗಿಯೊಬ್ಬಳಿಂದ ಹಿಡಿದು ಇವತ್ತು ಯಾರಾದ್ರೂ ಸತ್ತರಷ್ಟೇ ಅವರ ಹೆಣ ಹೂಳಲು ಕುಣಿ ತೋಡಿದರಷ್ಟೇ ಮನೆಯ ದಿನಸಿ ಸಾಮಾನು ಅಂತ ಮತ್ತೊಬ್ಬರ ಸಾವಿಗೆ ಪರಿತಪಿಸುವ ಸ್ಮಶಾನದ ಕೆಲಸಗಾರನದ್ದು ಕೂಡ ಜಸ್ಟ ಪಾಪೀ ಪೇಟ್ ಕಾ ಸವಾಲ್…ಅಷ್ಟೇ.
ಹೀಗೆ ಹೊಟ್ಟೆಪಾಡು ಅಂತಲೇ ಇದ್ದಷ್ಟು ದಿನ ಪರಿತಪಿಸುವ, ಮಾತಿನಲ್ಲೆ ಮೋಡಿ ಮಾಡಿ ಪ್ರಾಡಕ್ಟಗಳನ್ನ ಸೇಲ್ ಮಾಡುವ, ಒಬ್ಬರನ್ನೊಬ್ಬರು ವಂಚಿಸುವ, ಮೋಸ ಮಾಡುವ ಮತ್ತು, ಕುದುರೆಯಂತೆ ಓಡುವ ಹಾಗೂ ಕತ್ತೆಯಂತೆ ದುಡಿಯುವ ಮನುಷ್ಯ ತನ್ನ ಹಣ ಘಳಿಕೆಯ ಮದದಿಂದಲೋ, ತಾನು ಮೇಲ್ವರ್ಗದ ಜಾತಿಯವನೆಂಬ ಅಮಲಿನಿಂದಲೋ ಮೆರೆಯುವದು ನೋಡಿದಾಗೆಲ್ಲ ನನಗೆ ಅಯ್ಯೋ ದುರ್ವಿಧಿಯೇ ಅನ್ನಿಸದೆ ಇರುವದಿಲ್ಲ.
ಕೆಲವೇ ಗಂಟೆಗಳಲ್ಲಿ ವಶೀಕರಣ ಮಾಡಿ ಕೊಡ್ತೀವಿ ಅನ್ನುವದರಿಂದ ಹಿಡಿದು ಉಚಿತ ಸಲಹೆ ಖಚಿತ ಪರಿಹಾರ ಅನ್ನುವ ಜಾಹಿರಾತು ಕೊಟ್ಟ ಮಂತ್ರವಾದಿ ಅಥವಾ ಅಘೋರಿಯ ವೇಷಧಾರಿ ವ್ಯಕ್ತಿಯಿಂದ ಹಿಡಿದು ನಿಮ್ಮ ಊರ ಸಂತೆ ಪೇಟೆಗಳಲ್ಲಿ ಹಲ್ಲು ನೋವು ತಲೆ ನೋವು ಗ್ಯಾಸ್ಟಿಕ್ ಪರಿಹಾರದ ಹೆಸರಲ್ಲಿ ಒಂದಷ್ಟು ಆಯುರ್ವೇದ ಔಷಧಿ ಮಾರುವ ಅನ್ ಎಜುಕೇಟೆಡ್ ದೇಶಿಯ ಡಾಕ್ಟರ್ ಗಳಿಂದ ಹಿಡಿದು ಎಮ್ .ಬಿ.ಬಿ.ಎಸ್, ಎಮ್- ಎಸ್ ಮತ್ತು ಎಮ್ಡಿ- ಕಲಿತು ಇವತ್ತು ಸರ್ಜರಿ ಮಾಡಲೇಬೇಕು ಅನ್ನುವ ಖ್ಯಾತ ವೈದ್ಯರು ಮತ್ತು ಮನೆಯ ಎದುರು ಹಾರ್ಮೋನಿಯಂ ಮತ್ತು ತಬಲಾಗಳನ್ನ ಟವೆಲ್ಲೊಂದಕ್ಕೆ ಕಟ್ಟಿಕೊಂಡು ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ನಾ ಬಡವನಯ್ಯ ಅನ್ನುವ ಹಾಡು ಹೇಳುತ್ತ, ಬೆನ್ನಿನಲ್ಲಿ ಕಾಲು ಮೂಡಿದ ಅಥವಾ ಮೂರು ಕೊಂಬು ಮೂಡಿ ವಿಚಿತ್ರವಾಗಿ ಜನಿಸಿದ ಆಕಳ ಕರು,ಎತ್ತು,ಹೋರಿಗಳನ್ನೇ ಬಸವಣ್ಣ ಅಂತ ನಂಬಿಸಿ ಕಾಳು ಕಡಿಗಳ ದಾನ ಬೇಡುತ್ತ ಬರುವ,ಹಾಗೂ ಶಿರಡಿ ಸಾಯಿಬಾಬಾ, ಪಂಡರಪೂರದ ವಿಠ್ಠಲ ರುಕ್ಮಿಣಿ,ದುರ್ಗಾ ದೇವಿಯಂತಹ ದೇವರ ಮೂರ್ತಿಗಳನ್ನ ತ್ರಿಚಕ್ರವಾಹನವೊಂದರಲ್ಲಿ ಪ್ರತಿಷ್ಠಾಪಿಸಿ ಶಿರ್ಡಿ ವಾಲೆ ಸಾಯಿ ಬಾಬಾ.. ಅಂತಲೋ ಜೈ ಜೈ ಸಂತೋಷಿ ಮಾತಾ ಜೈ ಜೈ ಮಾ ಅನ್ನುವಂತಹ ಭಕ್ತಿಯ ಗೀತೆಗಳನ್ನು ಸ್ಪಿಕರಿನಲ್ಲಿ ಹಚ್ಚಿಕೊಂಡು ಮನೆ ಮನೆಗೆ ತೆರಳಿ ರಸೀದಿ ಕೊಟ್ಟು ಹಣ ಪಡೆಯುವ ಕಸುಬು ಮಾಡುವ ವೇಷಗಾರರಿಂದ ಹಿಡಿದು ಆರತಿಯ ತಟ್ಟೆಗೆ ಪುಡಿಗಾಸು ಬಿದ್ದರಷ್ಟೇ ಆರತಿ ತಟ್ಟೆಯನ್ನು ಭಕ್ತರ ಮುಂದೆ ತಂದೋ, ಅಥವಾ ತಿರ್ಥ ಪ್ರೋಕ್ಷಣೆ ಮಾಡಿಯೋ ಹೊಟ್ಟೆ ಹೊರೆಯುವ ಪೂಜಾರಿಗಳು ಸೇರಿದಂತೆ ತೀರಿಹೋದವರ ಶ್ರಾಧ್ದ ನೆರವೇರಿಸಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತೆ ಅಂತಲೇ ವಡೆ ಪಾಯಸ ತಿನ್ನುವ ಬಡಜಿಯೊಬ್ಬರ ತನಕ ಎಲ್ಲರದ್ದೂ ಪಾಪೀ ಪೇಟ್ ಕಾ ಸವಾಲ್ ಅಂದ ಮೇಲೆ ನಾನು ನಿನಗಿಂತ ಸೀನಿಯರ್ ಗೊತ್ತಾ?? ಎನ್ ಅನ್ಕೊಂಡಿದ್ದೀಯಾ ನನ್ನ ಅನ್ನುವದರಿಂದ ಹಿಡಿದು ಡೂ ರಿಜೈನ್ ಯಾಂಡ್ ಗೆಟ್ ಔಟ್ ಪ್ರಾಮ್ ಹೇರ್ ಅನ್ನುವ ಬಾಸ್ ಚೇರನಲ್ಲಿ ಕುಳಿತು ನಮ್ಮನ್ನು ಗದರುವ ವ್ಯಕ್ತಿಯೊಬ್ಬನ ತನಕ ಎಂಥೆಂತಹ ವೇಷಗಳನ್ನು ನಾವು ನೀವೆಲ್ಲ ಹಾಕಿಕೊಂಡು ಕುಳಿತಿದ್ದೇವೆ ಅಂದರೆ ಮನುಷ್ಯ ಜಾತಿ ತಾನೊಂದೇ ವಲಂ ಅನ್ನುವ ಮೂಲ ಮಂತ್ರವನ್ನೇ ಮರೆತು ಹಳೆಯ ಕಾಲದ ವರ್ಣಪದ್ಧತಿಯನ್ನೆ ಈಗಲೂ ಮುಂದುವರೆಸಿಕೊಂಡು ಇವನು ಬ್ರಾಹ್ಮಣ ಅವನು ದಲಿತ ಇವನು ಲಿಂಗಾಯತ ಅವನು ಕುರುಬ ಅನ್ನುವ ಜಾತಿ ಪದ್ದತಿಯ ಗೂಡುಕಟ್ಟಿಕೊಂಡು ಕುಳಿತಿರುವ ಮನುಷ್ಯ ಪ್ರಾಣಿಯನ್ನ ನೋಡಿ ದಾಗೆಲ್ಲ ನನಗೆ ತೀವ್ರ ಹತಾಸೆ ಹುಟ್ಟುತ್ತದೆ.
ಈಗಲೂ ನಮ್ಮ ನಿಮ್ಮ ನಡುವೆ ಎಲ್ಲರ ಅನಿವಾರ್ಯತೆ ಮತ್ತು ನಮ್ಮ ಕೈ ಕೆಳಗೆ ದುಡಿಯುವ ಹಾಗೂ ಸಣ್ಣ ಪುಟ್ಟ ಕೆಲಸ ಮಾಡುವ ಜನರಿಗೂ ಒಂದು ಹೊಟ್ಟೆ ಇದೆ,ಅವರಿಗೂ ಅವಲಂಬಿತರಿದ್ದಾರೆ ಅನ್ನುವದನ್ನೇ ಮರೆತು ಸಣ್ಣ ಪುಟ್ಟ ಕೆಲಸ ಮಾಡುವವರನ್ನ ನಿಕೃಷ್ಟವಾಗಿ ನೋಡುವ ಮತ್ತು ಪೌರಕಾರ್ಮಿಕನೊಬ್ಬನನ್ನ ಅಣ್ಣಾ,ತಮ್ಮ ಅಥವಾ ಗಲ್ಲಿಯಲ್ಲಿ ನಿತ್ಯವೂ ಕಸ ಗುಡಿಸುವ ಹೆಂಗಸೊಬ್ಬಳನ್ನ ಅಕ್ಕಾ, ಅಮ್ಮಾ ಅಂತೆಲ್ಲ ಕರೆಯಲು ಹಿಂದೇಟು ಹಾಕಿ ಏ ಕಚರೇವಾಲಾ, ಓಯ್ ಕಚರೇವಾಲಿ ಅನ್ನುವ ಮನಸ್ಥಿತಿಯ ಜನರನ್ನ ಮತ್ತು ಹಣಗಳಿಸುವ ದುರಾಸೆಗೆ ಬಿದ್ದು ದುಡುಕುತ್ತಿರುವ ಜೀವಗಳನ್ನ ನೋಡಿದಾಗೆಲ್ಲ ನನಗೆ ಅಯ್ಯೋ ಪಾಪ ಅನ್ನಿಸದೇ ಇರುವದಿಲ್ಲ.
ಅಂದ ಹಾಗೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಕರುನಾಡ ಕುಂದಾನಗರಿ ಬೆಳಗಾವಿಯಿಂದ ಹಿಡಿದು ಕೇರಳದ ಗಡಿಗೆ ಹೊಂದಿಕೊಂಡಿರುವ ನಮ್ಮದೆ ನಾಡಿನ ಬಂದರು ನಗರಿ ಮಂಗಳೂರಿನ ತನಕ ಕಾಗೆಗಳು ಕೂಡ ಒಂದೇ ರೀತಿ ಕೂಗುತ್ತವೆ ಮತ್ತು ಅನ್ನದ ಅಗಳು ಕಂಡಾಗ ತನ್ನ ಬಳಗವನ್ನು ಕೂಗಿ ಕೂಗಿ ಕರೆಯುತ್ತವೆ ಅಂದಮೇಲೆ ಈ ಮನುಷ್ಯ ಪ್ರಾಣಿ ಮಾತ್ರ ಹೊಟ್ಟೆಪಾಡಿನ ಹೆಸರು ಹೇಳಿಕೊಂಡು ಮೇಲು-ಕೀಳು ಅಂತ ಕಚ್ಚಾಡುವದರಲ್ಲಿ ಯಾವ ಅರ್ಥವಿದೆ ಅಲ್ಲವಾ?? ಲೆಟ್ಸ್ ಆಲ್ ಆಫ್ ಅಸ್ ಜಸ್ಟ್ ಫೀಲ್ ಹಮ್ ಸಬ್ ಭಾಯಿ…ಭಾಯಿ.. ಏನಂತೀರಿ??