ಪುತ್ತೂರು ತಾಲೂಕಿನ ಕೃಷಿಕರೊಬ್ಬರು ನಮ್ಮ ಪ್ರಯೋಗಾಲಯಕ್ಕೆ ಬಂದಿದ್ದರು. ಅವರು ತುಸು ಆತಂಕಿತರಾಗಿದ್ದರು. ಸಮಸ್ಯೆ ಏನೆಂದು ಕೇಳಿದೆ. “ನೂರು ಅಡಿಕೆ ಮರಗಳಲ್ಲಿ ಸುಮಾರು ಇಪ್ಪತ್ತು ಮರದ ಗರಿಗಳು (ಎಲೆಗಳು) ಸಣ್ಣದಾಗಿವೆ. ವರ್ಷದಿಂದ ವರ್ಷಕ್ಕೆ ಅಂತಹ ಲಕ್ಷಣವುಳ್ಳ ಮರಗಳ ಸಂಖ್ಯೆ ಹೆಚ್ಚಾಗುತ್ತಿದೆ. ನನಗೆ ಅದೇ ಚಿಂತೆಯಾಗಿದೆ” ಎಂದರು.
ಶೇಕಡಾ 20 ಮರಗಳಲ್ಲಿ ಗರಿ ಸಣ್ಣದಾಗುವ ಲಕ್ಷಣವೇ? ಆಶ್ಚರ್ಯವಾಯಿತು. ದ. ಕ. ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಮಸ್ಯೆಯಿರುವ ತೋಟ ನನ್ನ ಗಮನಕ್ಕೆ ಬಂದಿರಲಿಲ್ಲ. ಹಾಗೆಂದು ಇಲ್ಲವೇ ಇಲ್ಲ ಅಂತಲ್ಲ. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಆನೇಕ ಜಿಲ್ಲೆಯಲ್ಲಿ ಇದರ ಸಮಸ್ಯೆ ಇದೆ. ಅಲ್ಲಿನ ಮಣ್ಣಿನಲ್ಲಿ ಕರಾವಳಿ ಮಣ್ಣಿಗಿಂತ ರಂಜಕದ ಅಂಶ ಹೆಚ್ಚಿದ್ದರೂ, ಡಿ. ಎ. ಪಿ. ಸೇರಿದಂತೆ ಇನ್ನಿತರ ಸಂಕೀರ್ಣ ಗೊಬ್ಬರಗಳನ್ನು ಯಥೇಚ್ಛ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ನೀಡುವವರು ಇದ್ದಾರೆ. ಕೆಲವು ವರ್ಷಗಳ ನಂತರ ಅಡಿಕೆ ಮರಗಳಲ್ಲಿ ಒರೆಗೆಣ್ಣು ಅಡಿಕೆ ಮರದ ಗಂಟು ಒರೆಯಾಗಿರುವುದು -(Cross nodes ), ಮುಂಡುತಿರಿ (ಎಲೆಗಳ ಗಾತ್ರ ಸಣ್ಣದಾಗುವುದು), ಚಂಡೆ ಬಾಗುವುದು (ಕೂಬೆ ಬಾಗುವುದು) ಸೇರಿದಂತೆ ಅನೇಕ ಸಮಸ್ಯೆಗಳನ್ನು ಕಾಣಬಹುದು. ಅವನ್ನು ನಾವಾಗೇ ಬರಮಾಡಿಕೊಳ್ಳುವುದು. ಶೇಕಡಾ ಐವತ್ತಕ್ಕಿಂತಲೂ ಹೆಚ್ಚಿನ ಮರಗಳಲ್ಲಿ ಮುಂಡುತಿರಿಯ ಸಮಸ್ಯೆ ಇರುವುದನ್ನು ನಾನಲ್ಲಿ ಗಮನಿಸಿದ್ದೇನೆ. ಅಲ್ಲಿನ ಮಣ್ಣಿನಲ್ಲಿ ಸತುವಿನ ಅಂಶ ಅಡಿಕೆ ಮರಗಳಿಗೆ ಬೇಕಾದ ಪ್ರಮಾಣದಲ್ಲಿ ಇದ್ದರೂ, ರಂಜಕದ ಅಂಶ ಮಣ್ಣಿನಲ್ಲಿ ಹೆಚ್ಚಾದಾಗ ಅವುಗಳು ಅಲಭ್ಯವಾಗುತ್ತವೆ. ಈ ರೀತಿ ಸತುವಿನ ಲಭ್ಯತೆ ಕಡಿಮೆ ಆದಾಗ ಅಥವಾ ಸತುವಿನ ಅಂಶ ಮಣ್ಣಿನಲ್ಲಿಯೇ ಕಡಿಮೆ ಇದ್ದಾಗ, ಮುಂಡುತಿರಿಯಂತಹ ಲಕ್ಷಣವನ್ನು ಅಡಿಕೆ ಮರಗಳಲ್ಲಿ ಕಾಣಬಹುದು. ಹೆಚ್ಚಿನ ಪ್ರಮಾಣದಲ್ಲಿ ಅಂಟು ಕೆರೆಗೋಡು ಮಣ್ಣನ್ನು ತೋಟಕ್ಕೆ ಹಾಕುವುದು ಮತ್ತು ಮರದ ಬೇರುಗಳಿಗೆ ಗಾಳಿಯಾಡುವಿಕೆ ಸರಿಯಾಗಿ ಆಗದೇ ಇರುವುದು ಕೂಡ ಇದಕ್ಕೆ ಪೂರಕವಾದ ಅಂಶಗಳು.
ಹಾಗಾದರೆ, ನನ್ನಲ್ಲಿ ಬಂದ ಕೃಷಿಕರ ಸಮಸ್ಯೆಗೆ ಕಾರಣವೇನು? ಅಂಜಿಕೆಯಿಲ್ಲದೆ, ಮುಕ್ತವಾಗಿ ಹಂಚಿಕೊಂಡರು. ಕಳೆದ ಕೆಲವು ವರ್ಷಗಳಿಂದ ಸಂಯುಕ್ತ ಗೊಬ್ಬರವನ್ನು (10.26.26) ಯಥೇಚ್ಛವಾಗಿ ಅಡಿಕೆ ಮರಗಳಿಗೆ ನೀಡುತ್ತಿದ್ದಾರೆ. ಎಷ್ಟು ಗೊತ್ತೇ? “ಸುಮಾರು 600 ಗ್ರಾಂ ಕ್ಕಿಂತ ಸ್ವಲ್ಪ ಹೆಚ್ಚಾಗಬಹುದು. ವರ್ಷಕ್ಕೆ ಎರಡು ಸಲ ನೀಡುತ್ತೇವೆ“. ಅಂದರೆ, 1.2 ಕೆಜಿ’ಗಿಂತಲೂ ಅಧಿಕ. ನಾನು ದಿಗಿಲಾದೆ.
ಸಮಸ್ಯೆ ಆಗಿದ್ದೇ ಇಲ್ಲಿ. ಅಡಿಕೆ ಮರವೊಂದಕ್ಕೆ 40 – 60 ಗ್ರಾಂ ರಂಜಕ ಬೇಕು. ಆದರೆ, ಕೃಷಿಕ ನೀಡಿದ್ದು 300 ಗ್ರಾಂಗಿಂತಲೂ ಅಧಿಕ. ಸಾರಜನಕ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳಿಗೆ ಹೋಲಿಸಿದರೆ, ರಂಜಕದ ಬಳಕಾ ಸಾಮರ್ಥ್ಯ ಕರಾವಳಿ ಮಣ್ಣಿನಲ್ಲಿ ಹೆಚ್ಚು. ಅವುಗಳಷ್ಟು ಸುಲಭವಾಗಿ ಮಳೆ ನೀರಿನೊಂದಿಗೆ ಹೋಗಿ ಸಮುದ್ರ ಸೇರದು. ಅಂದರೆ, ಪ್ರತೀ ವರ್ಷ ರಂಜಕಯುಕ್ತ ಗೊಬ್ಬರವನ್ನು ಹೆಚ್ಚೆಚ್ಚು ಬಳಸಿದಷ್ಟೂ ಅವುಗಳ ಪ್ರಮಾಣ ಮಣ್ಣಿನಲ್ಲಿ ಹೆಚ್ಚಾಗುವುದು. ಇದು ಸತುವಿನ ಲಭ್ಯತೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಇತ್ತೀಚಿನ ವರದಿ ಪ್ರಕಾರ, ಕೇರಳ ರಾಜ್ಯದಲ್ಲಿ ಶೇಕಡಾ 61 ರಷ್ಟು ಮಣ್ಣಿನಲ್ಲಿ ರಂಜಕದ ಪ್ರಮಾಣವು ಹೆಚ್ಚಿದೆ. ಶೇಕಡಾ 91 ರಷ್ಟು ಹುಳಿ ಮಣ್ಣಿರುವ ಕೇರಳದಲ್ಲಿ ರಂಜಕದ ಅಂಶ ಹೆಚ್ಚಿರುವುದು ಆಶ್ಚರ್ಯ. ಸಾಮಾನ್ಯವಾಗಿ, ಹುಳಿ ಮಣ್ಣಿನಲ್ಲಿ ಹೆಚ್ಚಿರುವ ಕಬ್ಬಿಣ ಮತ್ತು ಅಲ್ಯುಮಿನಿಯಂ ಜೊತೆ ಸೇರಿ ರಂಜಕವು ಅಲಭ್ಯವಾಗುತ್ತದೆ. ಅತಿಯಾದ ರಂಜಕಯುಕ್ತ ರಸಗೊಬ್ಬರಗಳ ಬಳಕೆ ಮತ್ತು ಹೆಚ್ಚು ರಂಜಕ ಇರುವ ಸಾವಯವ ಗೊಬ್ಬರದ ಅತಿಯಾದ ಬಳಕೆ ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ರಂಜಕದ ಅಂಶ ಮಿತಿ ಮೀರಿದರೆ ಮೂಲಸ್ಥಿತಿಗೆ ಮರಳಲು ಅನೇಕ ವರ್ಷಗಳೇ ಬೇಕು ಎಂಬುವುದು ಅವರ ಅನಿಸಿಕೆ.
ದ.ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ ಮತ್ತು ಕಡಬ ತಾಲೂಕುಗಳಲ್ಲಿ ನಾವು ಸರ್ವೇ ಮಾಡಿದಾಗ ಶೇಕಡಾ 30 ರಷ್ಟು ತೋಟಗಳಲ್ಲಿ ಸತುವಿನ ಕೊರತೆಯ ಲಕ್ಷಣಗಳು ಕಂಡು ಬಂದವು. ಇದು ಬಹಳ ಕಳವಳಕಾರಿಯಾದ ವಿಚಾರ. ನಾವು ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು.
ಪೋಷಣೆ ಸುಲಭದಲ್ಲಿ ಆಗಬೇಕೆಂದು ರಾಸುಗಳಿಗೆ ಬರೀ ನೆಟ್ಟ ಹುಲ್ಲನ್ನು ತಿನ್ನಿಸಿದರೆ ಸಾಕೇ? ನೀರು, ಒಣಹುಲ್ಲು, ಹಸಿರು ಹುಲ್ಲು, ಬೂಸಾ, ಹಿಂಡಿ ಹೀಗೆ ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ನೀಡಿದರಷ್ಟೆ ಉತ್ತಮ ಹಾಲಿನ ಇಳುವರಿ. ಹಾಗಾದರೆ, ಯಾತಕ್ಕೆ ಅಡಿಕೆ ಮರಗಳಿಗೆ ಈ ರೀತಿಯ ಪೋಷಣೆ? ಅದರ ಬೇಡಿಕೆಯೇನು? ಅದರ ಮಾತಿಗೂ ಕಿವಿಯಾಗೋಣ ಅಲ್ಲವೇ?
ನನ್ನ ಗುರುಗಳು ಅದರ ಬಗ್ಗೆ ಅಧ್ಯಯನ ಮಾಡಿದ್ದರು. ಒಂದು ವರ್ಷಕ್ಕೆ 28.2 – 37.7 ಗ್ರಾಂ ರಂಜಕವನ್ನು ಅಡಿಕೆ ಮರ ಹೀರಿಕೊಳ್ಳುತ್ತದೆ. ಆದರೆ, ಇದಕ್ಕಿಂತ 10 ಪಟ್ಟು ಹೆಚ್ಚು ಸಾರಜನಕವನ್ನು ಮತ್ತು 8.5 ಪಟ್ಟು ಹೆಚ್ಚು ಪೊಟ್ಯಾಷಿಯಂ ಪೋಷಕಾಂಶವನ್ನು ಅಡಿಕೆ ಮರ ಹೀರಿಕೊಳ್ಳುತ್ತದೆ. ಅಂದರೆ, ಅಡಿಕೆ ಮರದ ಬೇಡಿಕೆ ಹೀಗಿದೆ, ಸಾರಜನಕ- ಪೊಟ್ಯಾಷಿಯಂ – ಕ್ಯಾಲ್ಸಿಯಂ – ರಂಜಕ – ಮೆಗ್ನೆಸ್ಸಿಯಂ. ಹೀಗಿದ್ದಾಗ, ಸಂಕೀರ್ಣ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಅವಶ್ಯಕತೆ ಏನಿದೆ?
1. ಮಣ್ಣಿನಲ್ಲಿ ಸತುವಿನ ಅಂಶ ಕಡಿಮೆ ಇದ್ದು, ಕೊರತೆಯ ಲಕ್ಷಣ ಕಂಡು ಬಂದರೆ 10ಗ್ರಾಂ ಸತುವಿನ ಸಲ್ಫೇಟ್ ಅನ್ನು ಪ್ರತೀ ಮರಕ್ಕೆ ನೀಡಬಹುದು (ಡಿಸೆಂಬರ್ ತಿಂಗಳು ಉತ್ತಮ).
2. ಒಂದು ವೇಳೆ ಮಣ್ಣಿನಲ್ಲಿ ರಂಜಕದ ಅಂಶ ಹೆಚ್ಚಿದ್ದು ಅಥವಾ ರಂಜಕಯುಕ್ತ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದರೆ, ಜಿಂಕ್ ಸಲ್ಫೇಟ್ ಬದಲಿಗೆ ಜಿಂಕ್ EDTA ಉತ್ತಮ. ಜೊತೆಗೆ ಒಂದೆರಡು ವರ್ಷ ರಂಜಕಯುಕ್ತ ಗೊಬ್ಬರ ನೀಡುವುದನ್ನು ನಿಲ್ಲಿಸಬೇಕು.
3. ಅತಿಯಾದ ಪ್ರಮಾಣದಲ್ಲಿ ಸಾರಜನಕಯುಕ್ತ ಗೊಬ್ಬರ ಬಳಸಬಾರದು.
4. ಅಂಟು ಕೆರೆಗೋಡು ಮಣ್ಣನ್ನು ತೋಟಕ್ಕೆ ಹಾಕುವುದನ್ನು ಕಡಿಮೆ ಮಾಡಬೇಕು. ತೋಟದಲ್ಲಿ ನೀರು ಚೆನ್ನಾಗಿ ಬಸಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಜೊತೆಗೆ, ಮಣ್ಣಿನಲ್ಲಿ ಗಾಳಿಯಾಡುವಿಕೆಯನ್ನು ಉತ್ತಮಗೊಳಿಸಬೇಕು. ಇದಕ್ಕೆ, ಸಂಪೂರ್ಣ ಅಥವಾ ಅರೆ ಕಾಂಪೋಸ್ಟ್ ಆದ ಅಡಿಕೆ ಸಿಪ್ಪೆ ಬಳಸಬಹುದು.
5. ಸಸಿಗಳಲ್ಲಾದರೆ, ಸತುವಿನ ಸಲ್ಫೇಟ್ (2.5ಗ್ರಾಂ ಒಂದು ಲೀಟರ್ ನೀರಿಗೆ) + ಬೋರಾಕ್ಸ್ (1 ಗ್ರಾಂ ಒಂದು ಲೀಟರ್ ನೀರಿಗೆ) ಅನ್ನು ಎಲೆಗಳಿಗೆ ಸಿಂಪಡಣೆ ಮಾಡಬಹುದು.
ಇಷ್ಟೇಲ್ಲಾ ವಿವರವನ್ನು ಕೃಷಿಕನಿಗೆ ಹೇಳಿದೆ. ಸಹನೆಯಿಂದ ಕೇಳಿಕೊಂಡರು. ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಹೊರಟರು. ವಿಚಾರವನ್ನು ಹಂಚಿಕೊಂಡು ನಿರಾಳರಾದ ಭಾವ ಅವರ ಮುಖದಲ್ಲಿ ಕಾಣುತ್ತಿತ್ತು. ಅವರ ಕೃಷಿ ಕ್ರಮ ನಮಗೆಲ್ಲ ಪಾಠ ಆಗಲಿ, ಅಲ್ಲವೇ?
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…