ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

April 24, 2025
6:05 AM
ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ; ಮತ್ತೆ ಕೆಲವೆಡೆ ಆದ್ರಕ ಮನೀಯ. ಭವ್ಯತೆ ದಿವ್ಯತೆಗಳೆರಡೂ ಮೇಳೈಸಿರುವ ಪ್ರಕೃತಿಯು ಶ್ರದ್ಧೆಯುಳ್ಳವರಿಗೆ ದೇವತೆ; ಭಾವಜೀವಿಗಳಿಗೆ ವಿಸ್ಮಯಾವಹ; ಕವಿ- ಕಾವ್ಯ ಪ್ರಚೋದಕ. ವಿಜ್ಞಾನಿಗಳಿಗೆ ಸದಾ ಸಂಶೋಧನಾ ಕೌತುಕ! ಮುಕ್ತತೆಯನ್ನೂ ನಿಗೂಢತೆಯನ್ನೂ ಜೊತೆಗೇ ಬೆಸೆದುಕೊಂಡಿರುವ ಸೌಂದರ್ಯವನ್ನೂ ಅಧ್ಯಾತ್ಮವನ್ನೂ ಅದ್ವೈತವಾಗಿಸಿರುವ ಪ್ರಕೃತಿಯಾಟಕ್ಕೆಎಣೆಯುಂಟೇ?
ಆಧುನಿಕತೆಯ ಸ್ಪರ್ಶವೇ ಇಲ್ಲದ ಪ್ರಕೃತಿ ಕೇಂದ್ರಗಳು ಮತ್ತು ಶ್ರದ್ಧಾಕೇಂದ್ರಗಳು ಅಪರೂಪವಾಗುತ್ತಿರುವ ಈಗಿನ ಸನ್ನಿವೇಶದಲ್ಲಿ ದಕ್ಷಿಣಕನ್ನಡಜಿಲ್ಲೆಯ ಒಂದು ಸ್ಥಳ ಭಕ್ತಿಕೇಂದ್ರವಾಗಿ – ನಂಬಿದವರಿಗೆ ಇಂಬನ್ನುಕೊಡುತ್ತಾ , ಪ್ರಕೃತಿಕೇಂದ್ರವಾಗಿ – ಪ್ರಕೃತಿಪ್ರಿಯರಿಗೆ ಆನಂದವನ್ನುಂಟು ಮಾಡುತ್ತಾ ಸಂದರ್ಶನಾತುರರ ಕಣ್ಮನಸೆಳೆಯುತ್ತಾ ಮೈಮನತಣಿಸುತ್ತಾ ಪ್ರಚಾರಾಡಂಬರವಿಲ್ಲದೆಯೂ ಜನಪ್ರಿಯ ಕ್ಷೇತ್ರವಾಗಿರುತ್ತಾ ಸಾಗಿಬಂದಿರುವ ಪರಿ ವಿಸ್ಮಯವೇ ಸರಿ. ಆ ಸ್ಥಳವೇ ನಾಕೂರುಗಯ.‌
ಕುಮಾರಧಾರಾ ನದಿಯು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲೊಂದು.ಸುಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಪರ್ವತ ಈ ನದಿಯ ಮೂಲ. ಕುಮಾರಧಾರೆಯು ಕಡಬ ತಾಲೂಕಿನ ಈ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಹರಿದು ಮುಂದೆ ಇದೇ ತಾಲೂಕಿನ ಬಿಳಿನೆಲೆ, ಐತ್ತೂರು-ನಂತರ ಕೇನ್ಯ, ಪಂಜಗಳನ್ನು ದಾಟಿ–ಎಡಮಂಗಲ ಹಾಗೂ ಕೋಡಿಂಬಾಳ ಗ್ರಾಮಗಳ ನಡುವೆ ಸರಿದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಜಿಲ್ಲೆಯ ಮತ್ತೊಂದು ಪ್ರಮುಖ ನದಿಯಾದ ನೇತ್ರಾವತಿಯನ್ನು ಸೇರುತ್ತದೆ. ಈ ಸಂಗಮ ಪ್ರದೇಶ ಶ್ರೀಸಹಸ್ರಲಿಂಗೇಶ್ವರನ ಸಾನ್ನಿಧ್ಯ–ಗಯಾಪದಕ್ಷೇತ್ರ, ದಕ್ಷಿಣಕಾಶಿಯೆಂದೇ ಪ್ರಸಿದ್ಧ. ಉಭಯ ತಾಲೂಕುಗಳಲ್ಲಿ ಹರಿಯುವ ಕುಮಾರಧಾರೆಯು ಒಂದು ಜೀವನದಿಯೇ ಆಗಿದ್ದು ನೂರಾರು ಕುಟುಂಬಗಳು ಕೃಷಿ, ಮನೆವಾರ್ತೆ, ಕುಡಿಯುವ ನೀರಿಗಾಗಿ ಈ ನದಿಯನ್ನು ಆಶ್ರಯಿಸಿವೆ.
ನಾಕೂರುಗಯವಿರುವುದು ಇದೇ ನದಿಯಲ್ಲಿ, ಕಡಬ-ಪಂಜರಸ್ತೆಯಲ್ಲಿರುವ ಪುಳಿಕುಕ್ಕು ಎಂಬಲ್ಲಿಂದ ಕೆಳಗೆ ರೈಲ್ವೇ ಸೇತುವೆಯ ಬಳಿ. ಮಂಗಳೂರು – ಬೆಂಗಳೂರು ರೈಲು ಮಾರ್ಗದಲ್ಲಿ ಕುಮಾರಧಾರಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆಯ ಕೆಳಭಾಗಕ್ಕಿದೆ ಈ ಗಯ. ತುಳುಭಾಷೆಯಲ್ಲಿ ಗಯವನ್ನು ‘ಕಯ’ ಅಥವಾ ‘ಕಯೊ’ಎನ್ನುತ್ತಾರೆ. ಕಯವೆಂದರೆ– ‘ನೀರಿನ ಹೊಂಡ’; ‘ಆಳ’; ‘ಅಗಾಧಜಲಾಶಯ’ –ಎಂಬೆಲ್ಲಾ ಅರ್ಥಗಳಿವೆ [ನೋಡಿ: ಡಾ.ಯು.ಪಿ.ಉಪಾಧ್ಯಾಯರ ‘ಸಂಕ್ಷಿಪ್ತ ತುಳು ಪದಕೋಶ’] ತುಂಬಾ ಆಳವಿರುವ, ವರ್ಷಪೂರ್ತಿ ನೀರುತುಂಬಿಕೊಂಡು ಸರೋವರದಂತೆ ಕಂಗೊಳಿಸುವ ಈ ಸ್ಥಳ ಈ ಭಾಗದ ಜನರ ಶ್ರದ್ಧಾ ಕೇಂದ್ರ.

Advertisement
ಇಲ್ಲಿ ನದಿಯ ಬದಿಯಲ್ಲಿ-ಎರಡು ದಡಗಳಲ್ಲೂ ದೇವಸ್ಥಾನದಂಥ ನಿರ್ಮಾಣವೇನೂ ಇಲ್ಲ.ಇಲ್ಲಿ ನದಿಯೇ ದೇವಾಲಯ; ನದಿಯಾಳದಲ್ಲಿ ದೇವಳ ಇದೆಯೆಂಬುದು ಭಕ್ತಜನರ ನಂಬಿಕೆ.ಈ ಕುರಿತಾದ  ಕಥೆಯೊಂದು ರೂಢಿಯಲ್ಲಿ ಬಂದಿದೆ. ಅದು ಹೀಗಿದೆ : ಸುಮಾರು ಮೂರೂವರೆ-ನಾಲ್ಕು ಶತಮಾನಗಳ ಹಿಂದೆ ಈಗ ಗಯವೆಂದು ಹೇಳುವ ಸ್ಥಳದ ಸಮೀಪ ಪ್ರಸ್ತುತ ಎಡಮಂಗಲ ಗ್ರಾಮಕ್ಕೆ ಸೇರುವ ಬದಿಯ ದಡದಿಂದ ಸ್ವಲ್ಪ ಮೇಲಕ್ಕೆ ಶ್ರೀಗೋಪಾಲಕೃಷ್ಣ ದೇವರಗುಡಿಯಿತ್ತಂತೆ. ಅಲ್ಲಿ ಪೂಜೆ  ಮಾಡುವ ಅರ್ಚಕರು ನದಿಯ ಆಚೆಯ ದಡದಿಂದ ಈಚೆಯ ದಡಕ್ಕೆ ದಿನಾಲೂ ಬಾಳೆ ಎಲೆಯ ಮೇಲೆ ಕುಳಿತು ನದಿ ದಾಟಿ ಬರುತ್ತಿದ್ದರಂತೆ. ಒಂದು ದಿನ ಅರ್ಚಕರ ಪತ್ನಿತಾನೂ ದೇವಸ್ಥಾನಕ್ಕೆ ಬರುವೆನೆಂದು ಹಟ ಹಿಡಿದು ಹೊರಡುತ್ತಾರೆ. ಅವರಿಬ್ಬರೂ ಬಾಳೆ ಎಲೆಯ ಮೇಲೆ ಕುಳಿತು ನದಿ ದಾಟುತ್ತಿದ್ದಾಗ ಪತ್ನಿಗೆ ಆಶ್ಚರ್ಯವಾಗಿ ಪತಿಯಲ್ಲಿ , “ಸ್ವಾಮೀ, ನೀವು ದಿನವೂ ಇದೇ ರೀತಿ ನದಿ ದಾಟುವುದಾ?” ಎಂದು ಕೇಳಿದಾಗ ಅವರಿಬ್ಬರೂ ಬಾಳೆಎಲೆ ಸಹಿತ ನದಿ ನೀರಿನಲ್ಲಿ ಮುಳುಗಿದರಂತೆ. ನಂತರ ಇಡೀ ದೇವಾಲಯ ನದಿಯಾಳ ಸೇರಿತಂತೆ. ಈ ಜಾಗವೇ ನಾಕೂರು ಗಯವೆಂದು ಇಲ್ಲಿನವರ ನಂಬಿಕೆ. ನದಿಯಾಳದಲ್ಲಿ ಗೋಪಾಲಕೃಷ್ಣ ದೇವಾಲಯವಿದೆಯೆಂಬ ನಂಬಿಕೆ. ‘ಗಯ’ವೆಂಬ ಹೆಸರು ಬಹುಶಃ ‘ಪುಣ್ಯಕ್ಷೇತ್ರʼ ವೆಂಬ ಅರ್ಥದಲ್ಲೇ ಇಲ್ಲಿ ಪ್ರಚಲಿತಕ್ಕೆ ಬಂದಿರಬಹುದು.
ಪೂರ್ವೋಕ್ತ ಕಥೆಯ ಮುಂದುವರಿದ ಭಾಗದಂತೆ ಕಾಣುವ ಇನ್ನೊಂದು ಕಥೆಯೂ ಇದೆ: ನಾಕೂರುಗಯದ ಆಸುಪಾಸಿನ ಹೊಲಗಳಲ್ಲಿನ ಪೈರು ರಾತ್ರೋರಾತ್ರಿ ಕಾಣೆಯಾಗುತ್ತಿತ್ತು.ಇದನ್ನು ಪತ್ತೆ ಮಾಡ ಹೊರಟ ಕೋಡಿಂಬಾಳದ ಪಡೆಜ್ಜಾರು ಮನೆಯ ಚಂರ್ಬಗೌಡ ಎಂಬವರು ರಾತ್ರಿ ಕಾದು ಕುಳಿತಾಗ ಕಾಣಿಸಿದ್ದು- ಬಿಳಿಯ ಹಸುವೊಂದು ಪೈರು ಮೇಯುತ್ತಿರುವ ದೃಶ್ಯ. ಗೌಡರು ಅದನ್ನು ಹಿಡಿಯಲು ಬೆನ್ನತ್ತಿ ಹೋದಾಗ ಹಸು ಓಡತೊಡಗಿತು. ಅದು ಹೇಗೋ ಗೌಡರು ಅದರ ಬಾಲವನ್ನು ಹಿಡಿದುಕೊಂಡರು. ನಾಗಾಲೋಟದಿಂದ ಓಡಿದ ಹಸು ಗಯಕ್ಕೆ ಹಾರಿತು. ಗೌಡರಿಗೆ ಬಾಲವನ್ನು ಬಿಡಲಾಗಲಿಲ್ಲ! ಏನಾಗುತ್ತಿದೆಯೆಂಬ ಅರಿವೂ, ಪ್ರಾಯಶಃ ಗೌಡರಿಗಾಗಲಿಲ್ಲ.ಹಸು ಗೌಡರೊಂದಿಗೆ ನೀರಿನಾಳದಲ್ಲಿ ಮುಳುಗಿತು.ನೀರಿನಾಳದಲ್ಲಿ ಅರಿವಿಗೆ ಮರಳಿದ ಗೌಡರು ಚಕಿತರಾದರು. ಏನಾಶ್ಚರ್ಯ! ಏನದ್ಭುತ! ಅಲ್ಲೊಂದು ಭವ್ಯವಾದ ದೇಗುಲ.ವಿಜೃಂಭಣೆಯ ಉತ್ಸವ, ಎಣೆಯಿಲ್ಲದ ವೈಭವ.
ಗೌಡರಂತೂ ಅಲ್ಲಿಅಕ್ಷರಶಃ ತಮ್ಮನ್ನು ತಾವೇ ಮರೆತರು. ದಿನಗಳು ಸರಿದದ್ದು, ಕಾಲವುರುಳಿದ್ದು ಅವರಿಗೆ ಗೊತ್ತೇ ಆಗಲಿಲ್ಲ.ಇತ್ತ ಊರಿನಲ್ಲಿ, ಚಂರ್ಬ ಗೌಡರು ಕಾಣೆಯಾಗಿ ವರುಷವೇ ಸಂದಿದ್ದರಿಂದ ಅವರು ಮರಣಿಸಿರಬೇಕೆಂದು ಭಾವಿಸಿದ ಕುಟುಂಬಿಕರು ಅವರ ಉತ್ತರ ಕ್ರಿ ದಿಗಳನ್ನು ಪೂರೈಸಿದ್ದರು. ಕೆಲ ಕಾಲದ ಬಳಿಕ ಅದೊಂದು ದಿನ ಚಂರ್ಬ ಗೌಡರ ಆಗಮನವಾಯಿತು. ‘ಎಲ್ಲಿಗೆ ಹೋಗಿದ್ರಿ?’, ‘ಏನು ಮಾಡಿದ್ರಿ?’ ತಡೆಯಲಾರದ ಕುತೂಹಲದಿಂದ ಮನೆಯವರ ಪ್ರಶ್ನಾವಳಿ! ಆದರೆ ನೀರಿನಾಳದಲ್ಲಿ ತಾವು ಕಂಡದ್ದನ್ನು, ಅಲ್ಲಿ ನಡೆದದ್ದನ್ನು ಯಾರಲ್ಲಿಯೂ ಹೇಳಬಾರದೆಂದು ಕಟ್ಟಪ್ಪಣೆಯಾಗಿತ್ತು. ಒಂದು ವೇಳೆ ಹೇಳಿದರೆ ತಲೆಯೊಡೆದು ಸಾಯುವುದು ಅಥವಾ ಕಿವುಡಾಗುವುದೆಂದು ಎಚ್ಚರಿಕೆಯನ್ನು ನೀಡಲಾಗಿತ್ತು.ಆದ ಕಾರಣ ಗೌಡರು ಬಾಯಿ ಬಿಡಲಿಲ್ಲ. ಆದರೆ, ಬಹುಕಾಲ ರಹಸ್ಯವನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಒಂದುದಿನ ತನ್ನ ಪತ್ನಿಯಲ್ಲಿ ‘ಎಲ್ಲವನ್ನೂ’ ಹೇಳಿದರು.  ತಕ್ಷಣ ವಿಧಿವಶರಾದರು. ಇದು ಪ್ರಚಲಿತದಲ್ಲಿರುವ ‘ಕಥೆ’.
ಈಗಲೂ, ಚಂರ್ಬಗೌಡರ ಕುಟುಂಬದ ಪ್ರತಿ ತಲೆಮಾರಿನ ಯಾರಾದರೊಬ್ಬರಿಗೆ ಕಿವುಡುತನ ಶಾಶ್ವತವಾಗಿ ಮುಂದುವರಿಯುತ್ತಿದೆ. ಅಂದರೆ, ಮೇಲೆ ಹೇಳಿದ ಕಥೆಯು ಬರೇಕಥೆಯಲ್ಲ; ನಾಕೂರುಗಯದ ಐತಿಹ್ಯವೇ ಅದು ಭಾವಿಸಿದರೆ ತಪ್ಪಾಗದು.
ಹಸು ಕರು ಹಾಕದಿದ್ದರೆ ಇಲ್ಲಿನ ಗಯಕ್ಕೆ ಹಾಲೆರೆಯುವ ಹರಕೆ ಹೊರುತ್ತಾರೆ.ತಿಂಗಳೊಳಗೆ ಹಸು ಗರ್ಭಕಟ್ಟಿದ ನಿದರ್ಶನಗಳಿವೆ. ಹಸು ಹಾಲು ಕರೆಯಲು ಬಿಡದೆ ಒದೆಯುತ್ತಿದ್ದರೆ,ಎತ್ತುಗಳು ಉಳಲು ಬರದಿದ್ದರೆ ಈ ಗಯಕ್ಕೆ ಹರಕೆ ಹೊತ್ತು ಸಮಸ್ಯೆಗೆ ಪರಿಹಾರ ಕಂಡು ಕೊಂಡವರಿದ್ದಾರೆ. ಪಶುಸಂಬಂಧೀ ಸಮಸ್ಯೆಗಳಿಗೆ ಪರಿಹಾರ ಸಿಗುವ ಈ ಗಯದಲ್ಲಿ ಮನುಷ್ಯ ಸಂಬಂಧೀ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದ ಸಾಕಷ್ಟು ಉದಾಹರಣೆಗಳಿವೆ. ಗಯಕ್ಕೆ ಹರಕೆ ಹೊತ್ತು ವಿವಾಹಯೋಗವನ್ನೋ ಸಂತಾನಭಾಗ್ಯವನ್ನೋ  ಸಿದ್ಧಿಸಿಕೊಂಡ  ಉದಾಹರಣೆಗಳೂ ಅದೆಷ್ಟೋ ಸಿಗುತ್ತವೆ.
ವಿಶೇಷವೆಂದರೆ ಇಲ್ಲಿ ಗುಡಿಯಿಲ್ಲ; ಅರ್ಚಕರೂಇಲ್ಲ! ಭಕ್ತರೇ ಸ್ವಯಂ ಹರಕೆ-ಪೂಜೆ-ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ಪದ್ಧತಿ. ಹರಕೆಯನ್ನು ಸಲ್ಲಿಸುವುದಕ್ಕೂ ಕಟ್ಟುನಿಟ್ಟಾದ ವಿಧಿ-ವಿಧಾನಗಳಿಲ್ಲ. ಇಲ್ಲಿನ ಸಾಮಾನ್ಯ ಹರಕೆಯೆಂದರೆ ಹಾಲಿನ ಹರಕೆ ಅಥವಾ ಗಯಕ್ಕೆ ಹಾಲೆರೆಯುವುದು.ಇದು ಬಹ್ವಂಶ ಹಸುಗಳಿಗೇ ಸಂಬಂಧಿಸಿದ್ದಾಗಿದ್ದು ಇದನ್ನೇ ಬಲಿವಾಡು ಹರಕೆ ಎಂತಲೂ ಕರೆಯುತ್ತಾರೆ. ಹಸು ಕರು ಹಾಕುವ ಪೂರ್ವದಲ್ಲಿ ಹರಕೆ ಹೊರದಿದ್ದರೂ ಕರು ಹಾಕಿದ ಬಳಿಕ ಭಕ್ತಿಪೂರ್ವಕವಾಗಿ ಸೇವಾರೂಪದಲ್ಲಿ ಹಾಲೆರೆಯುವ ಪದ್ಧತಿಯೂ ಇಲ್ಲಿ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಕರು ಹಾಕಿದ ಬಳಿಕ ಸ್ವಂತ ಉಪಯೋಗಕ್ಕೆ ಹಾಲನ್ನು ಬಳಸಲಾರಂಭಿಸುವ ಮೊದಲುಗಯಕ್ಕೆ ಹಾಲೆರೆಯುವುದು ಇಲ್ಲಿನ ರೂಢಿ. ಸಾಮಾನ್ಯವಾಗಿ ಹಸು ಕರು ಹಾಕಿದ ಹನ್ನೊಂದನೆಯ ದಿನ ಇಲ್ಲವೇ ಹದಿನಾರನೆಯ ದಿನ ಹಾಲನ್ನುಗಯಕ್ಕರ್ಪಿಸುವುದು ಪರಂಪರಾಗತವಾಗಿ ಬಂದಿರುವ ಆಚರಣೆ.
ಎರಡು ತುದಿ ಬಾಳೆ ಎಲೆಗಳ ಮೇಲೆ ಒಂದು ಸೇರು ಬೆಳ್ತಿಗೆ ಅಕ್ಕಿಯನ್ನು ಸುರಿದು ಅದರ ಮೇಲೆ ಅಲ್ಲೇ ಒಡೆದ ತೆಂಗಿನಕಾಯಿಯ ಎರಡೂ ಕಡಿಗಳನ್ನು ಮೇಲ್ಮುಖವಾಗಿಟ್ಟು ಅದರ ಮೇಲೆ ಹಾಲನ್ನು ಸುರಿದು ಎಲೆಯ ತುದಿ ಭಾಗದಲ್ಲಿ ಐದು ವೀಳ್ಯದೆಲೆ ಮತ್ತು ಒಂದು ಹಣ್ಣಡಿಕೆಯನ್ನಿಟ್ಟು ಯಥಾಶಕ್ತಿ ಕಾಣಿಕೆಯಿಟ್ಟು ನೆಣೆಯನ್ನೂಅಗರಬತ್ತಿಯನ್ನೂ ಉರಿಸಿಟ್ಟು ನೀರಿನಲ್ಲಿ ತೇಲಿ ಬಿಡಲಾಗುತ್ತದೆ. ಅದು ಮುಳುಗುವ ಮುನ್ನ ಕೈಮುಗಿದು ಪ್ರಾರ್ಥಿಸಿ ತೆಂಗಿನಕಾಯಿಯ ಒಂದು ಕಡಿಯನ್ನು ಅಂತೆಯೇ ಪಾತ್ರೆಯೊಂದರಲ್ಲಿ ಗಯದ ನೀರನ್ನು  ಪ್ರಸಾದವೆಂದು ಸ್ವೀಕರಿಸುತ್ತಾರೆ. ನೀರನ್ನುಇಲ್ಲಿಗೆ ಒಪ್ಪಿಸುವ ಹರಕೆಯಿಂದ ಬಾವಿಯಲ್ಲೋ ಕೆರೆಯಲ್ಲೋ ನೀರು ಸಿಕ್ಕಿದ ನಿದರ್ಶನಗಳಿವೆ. ಹೀಗೆ ವೈವಿಧ್ಯಮಯವಾದ ಹರಕೆಗಳು ನಾಕೂರುಗಯಕ್ಕೆ ಸಲ್ಲುತ್ತವೆ. ಹರಕೆ ಹೊತ್ತು ಶ್ರದ್ಧೆಯಿಂದ ನಡಕೊಂಡವರಿಗೆ ಸಮಸ್ಯಾ ಪರಿಹಾರವಾಗಿದೆ.
ನಾಕೂರುಗಯದ ಪರಿಸರ ಸಹಜ ಸುಂದರ. ಅಪ್ಪಟ ಹಳ್ಳಿಯ ವಾತಾವರಣ. ವಾಹನ ಜನದಟ್ಟಣೆ ಇಲ್ಲಿಲ್ಲ. ಸದ್ಯ ಈ ಸ್ಥಳ ಯಾವುದೇ ಪ್ರಭುತ್ವದ ಹಂಗಿನಲ್ಲಿಲ್ಲ. ದರ್ಶನ ಟಿಕೆಟ್‍ ಎಂದೋ ಸೇವಾ ರಶೀದಿಯೆಂದೋ ದಕ್ಷಿಣೆ-ಕಾಣಿಕೆಗಳೆಂದೋ – ವಿಧಿಸಲ್ಪಟ್ಟ ನಿಯಮಗಳಿಲ್ಲ. ಭಕ್ತರ ಶ್ರದ್ಧಾಭಕ್ತಿಯೊಂದೇ ಇಲ್ಲಿಎದ್ದು ಕಾಣುವಂಥದ್ದು. ಇಲ್ಲಿಅಧಿಕಾರಿ ವರ್ಗ-ಸೇವಾವರ್ಗಗಳಿಲ್ಲ. ಭಕ್ತರ ಚಲನವಲನಗಳಿಗೆ ಸ್ವತಃ ಅವರೇ ಜವಾಬ್ದಾರರು. ನದಿ ಪರಿಸರವಾಗಿರುವ ಕಾರಣ ಮತ್ತು ದಡದ ಬುಡದಿಂದಲೇ ನದಿಯಾಳವು ತೆರೆದುಕೊಳ್ಳುವ ಕಾರಣ ಭಕ್ತರು ಸ್ವಯಂ ಜಾಗ್ರತೆ ವಹಿಸುವುದು ಅವಶ್ಯಕ.
ಈ ಗಯದಲ್ಲಿನ ಮತ್ತೊಂದುಆಕರ್ಷಣೆ ಮತ್ಸ್ಯಗಳದ್ದು. ಇವುಗಳನ್ನು ‘ದೇವರ ಮೀನು’ಗಳು ಎನ್ನಲಾಗುತ್ತದೆ. ಸಾಮಾನ್ಯವಾಗಿ ಬೆಳ್ತಿಗೆ ಅಕ್ಕಿಯನ್ನು ಈ ಮೀನುಗಳಿಗೆ ಆಹಾರವಾಗಿ ನೀಡುತ್ತಾರೆ ಭಕ್ತರು. ಈ ಅಕ್ಕಿಯನ್ನೋ ಹರಕೆಯ ವಸ್ತುಗಳನ್ನೋ ಸೆಳೆಯಲು ಈ ಮೀನುಗಳು ಮುಗಿಬೀಳುವುದನ್ನು ನೋಡುವುದೇ ಒಂದು ಚೆಂದ.ಅವುಗಳಿಗೆ ನೂಕುನುಗ್ಗಾಟಗಳ ಗೊಡವೆಯೇಇಲ್ಲ. ತುಳಿತ ಥಳಿತಗಳ ಆತಂಕವೂಇಲ್ಲ. ಕಾರಣ, ಕೈಕಾಲೇ ಅವಕ್ಕಿಲ್ಲವಲ್ಲ! ಮತ್ಸ್ಯ ನ್ಯಾಯವೆಂಬ ನೈಸರ್ಗಿಕ ನೀತಿ ಅಲ್ಲಿರಬಹುದೇನೋ? ಅದನ್ನು ಬಿಟ್ಟರೆ ಬೇರಾವುದೇ ರೀತಿ ನೀತಿಗಳು ಅಲ್ಲಿರದು. ಅವೆಲ್ಲಾಇರುವ ಮಾನವ ಸಮಾಜ ಹೇಗಿದೆ? ಅಲ್ವೇ!  ದಶಕಗಳ ಹಿಂದೆ ಈ ಗಯದಲ್ಲಿರುವ ದೇವರಮೀನುಗಳನ್ನು ಕೆಲವು ಜನ ಬಲೆ ಬೀಸಿ, ಸ್ಫೋಟಕ ಸಿಡಿಸಿ ಹಿಡಿಯುತ್ತಿದ್ದರು. ಒಂದು ಸಲ ಮೀನು ಹಿಡಿಯುವುದಕ್ಕಾಗಿ ಬಲೆಬೀಸಿದ ಒಬ್ಬ ವ್ಯಕ್ತಿಗೆ ನೀರಲ್ಲಿ ಮುಳುಗಿ ಹೋಗಿದೆಯೆಂದು ಹೇಳಲಾದ ದೇವಸ್ಥಾನದ್ದೋ ಎಂಬಂತೆ– ‘ಮುಗುಳಿ’ಯಂಥ ವಸ್ತು ಬಲೆಗೆ ಸಿಕ್ಕಿಹಾಕಿಕೊಂಡಂತಾಯಿತಂತೆ. ಆ ಬಳಿಕ ಆ ವ್ಯಕ್ತಿಊರು ಬಿಟ್ಟುಓಡಿಹೋದನಂತೆ! ಸ್ಫೋಟಕವನ್ನು ಬಳಸಿ ಮೀನು ಹಿಡಿಯಲು ಹೊರಟ ವ್ಯಕ್ತಿಯೊಬ್ಬತನ್ನ ಬಲಗೈಯ್ಯನ್ನೇ ಕಳೆದುಕೊಂಡ.ಇಲ್ಲಿಮೀನು ಹಿಡಿದ ಹಲವರಿಗೆ ವಾಸಿಯಾಗದ ರೋಗಗಳು ಬಂದವು. ನಾಕೂರುಗಯದ ಮೇಲಿನ ಆಸ್ತಿಕರ ನಂಬುಗೆ-ಭಯ-ಭಕ್ತಿಯನ್ನುಇಂಥ ಘಟನೆಗಳು ಪುಷ್ಟೀಕರಿಸುತ್ತವೆ. ನಂಬಿದವರಿಗೆ ಇಂಬು. ನಂಬದವರಿಗೆಯಾವುದೇ ನಷ್ಟವಿಲ್ಲ. ಆದರೆ, ಹಾನಿಮಾಡಬಂದವರಿಗೆ ಶಿಕ್ಷೆ ತಾನಾಗಿಯೇ ಸಿಗುತ್ತದೆ.ಇದು ನಾಕೂರುಗಯದ ನ್ಯಾಯ.

1970ರಲ್ಲಿ ಈ ಭಾಗದಲ್ಲಿ ಬೆಂಗಳೂರು – ಮಂಗಳೂರು ಮೀಟರ್‍ಗೇಜ್‍ ರೈಲು ಆರಂಭವಾಗುವಾಗ ರೈಲ್ವೇ ಅಧಿಕಾರಿಗಳು ಸೇತುವೆ ನಿರ್ಮಿಸಲು ಈ ಗಯವಿರುವ ಪ್ರದೇಶವನ್ನೇ ಆಯ್ದುಕೊಂಡಿದ್ದರು. ಆದರೆ, ಅವರಿಗೆಗಯದ ಆಳವನ್ನು ಪತ್ತೆ ಮಾಡಲಾಗಲಿಲ್ಲ. ತತ್ಪರಿಣಾಮವಾಗಿ ಆ ಸೇತುವೆಯುಗಯದಿಂದ ನೂರು ಮೀಟರ್ ಮೇಲಕ್ಕೆ ನಿರ್ಮಾಣವಾಗಬೇಕಾಯಿತು. ರೈಲು ಮಾರ್ಗದ ದಿಕ್ಕಿನಲ್ಲಿತುಸು ಮಾರ್ಪಾಟೇ ಆಗಬೇಕಾಯಿತು.ಈ ಗಯದಾಳ ಇಂದಿಗೂ ಬಯಲಾಗಿಲ್ಲ, ಕಾರಣಕಂಡವರಿಲ್ಲ.
ಪ್ರಕೃತಿಸೌಂದರ್ಯ ಮತ್ತು ಧಾರ್ಮಿಕತೆಗಳೆರಡೂ ಮೇಳೈಸಿದ ಸ್ಥಳವಿದು. ಅದೃಷ್ಟವಶಾತ್‍ಯಾವುದೇ ‘ಕೃತಕಾಭರಣ’ಗಳ ಹೊರೆ  ಹೊರಿಸಲ್ಪಡದೆ ಸರಳ- ನಿರಾಭರಣಸುಂದರಿಯಾಗಿದ್ದಾಳೆ ಪ್ರಕೃತಿಮಾತೆಯಿಲ್ಲಿ.ನಿಸರ್ಗಸಹಜ ಸೌಂದರ್ಯಾನುಭೂತಿ ಇಲ್ಲಿಯದು. ಆಧುನಿಕತೆಯ ಆಕ್ರಮಣವಿಲ್ಲ; ಆಗೊಮ್ಮೆಈಗೊಮ್ಮೆ ರೈಲುಬಂಡಿಗಳ ಘರ್ಜನೆಯನ್ನು ಬಿಟ್ಟರೆ ಇತರ ಯಂತ್ರಗಳ ಕರ್ಕಶಧ್ವನಿಯಿಲ್ಲ. ಜನಜಂಗುಳಿಯಿಲ್ಲ, ಸಂತೆ ವ್ಯಾಪಾರಗಳಿಲ್ಲ. ನಿರ್ಮಲ ಪ್ರಶಾಂತ ವಾತಾವರಣ- ಧ್ಯಾನಕ್ಕೆಯೋಗ್ಯ ಸ್ಥಳ. ಇಲ್ಲಿನ ವಾತಾವರಣ ಸಹಜ ಧ್ಯಾನವನ್ನುಂಟು ಮಾಡುವಂತಿದೆ. ಇಕ್ಕೆಲಗಳಲಿ ಹಸಿರವನ, ನಡುವೆ ನಿರ್ಮಲಜಲ- ಕುಮಾರಧಾರಾ. ನದಿಯಲ್ಲಿ ಮತ್ಸ್ಯಗಳ ಜಳಕ, ಮೇಲೆ ಹಕ್ಕಿಗಳಿಂಚರ ಕಲರವ- ರಸಿಕರಿಗೋ ಪುಳಕ! ಈಚೆಗೆ ನದಿಯಲ್ಲಿ ಮೊಸಳೆಗಳೂ ಕಾಣಸಿಗುತ್ತಿವೆ. ಗಯದಿಂದ ತುಸುವೇ ಮೇಲಕ್ಕಿರುವಎತ್ತರದ ರೈಲು ಸೇತುವೆಯ ಮೇಲೆ ನಿಂತೂ ಇಲ್ಲಿನ ಸೌಂದರ್ಯವನ್ನು ಸವಿಯಬಹುದಾಗಿದೆ. ಸೇತುವೆಯ ಕೆಳಕ್ಕೂ ಮೇಲಕ್ಕೂ ದೃಷ್ಟಿಹಾಯಿಸಿದರೆ ಕಣ್ಮನಗಳಿಗೆ ಹಬ್ಬ. ಸೇತುವೆಯಿಂದ ಆಳಕ್ಕೆ ದೃಷ್ಟಿ ಹಾಯಿಸುವಾಗ ಎಚ್ಚರಅಗತ್ಯ. ಇತ್ತೀಚೆಗೆ ಈ ಮಾರ್ಗದಲ್ಲಿ ರೈಲುಗಳ ಓಡಾಟ ಹೆಚ್ಚಿರುವುದರಿಂದ ಸೇತುವೆಯ ಮೇಲೆ ನಿಂತು ನೋಡುವಾಗ ಜಾಗ್ರತೆಯೂ ಬೇಕು. ಬೇಸಿಗೆಯಲ್ಲಿ ಬಿಸಿಲಝಳಕ್ಕೆ ಹೊಳೆಯುವ ಹೊಳೆಯು ಮಳೆಗಾಲದಲ್ಲಿ ಭೋರ್ಗರೆದು ಹರಿಯುವುದು ಸಾಮಾನ್ಯವಷ್ಟೇ! ವಸಂತಕಾಲದಲ್ಲಿ ನಯನ ಮನೋಹರವಾಗಿ ಬಳುಕುತ್ತಾ ಸರಿಯುವ ಈ ವೇಣಿಯು ಮಳೆಗಾಲದಲ್ಲಿ ಭೋರೆಂದು ಘರ್ಜಿಸುತ್ತಾ ರುದ್ರನರ್ತನವನ್ನಾಡುವಳು. ಆದಕಾರಣ ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿದರೆ, ವರ್ಷಕಾಲವನ್ನುಳಿದು ಇತರ  ಸಮಯದಲ್ಲೇ ಇಲ್ಲಿಗೆ ಭೇಟಿಕೊಡುವುದು ಉಚಿತ.
ತುಳುನಾಡಿನ ಜನತೆ ಮಾತ್ರವಲ್ಲದೆ ದೂರದ ಕೇರಳದ ಕಾಸರಗೋಡು ಕಾಂಞಗಾಡು ಪ್ರದೇಶದಿಂದಲೂ ಬಹಳ ಹಿಂದಿನಿಂದಲೇ ಜನರು ಹರಕೆ ಹೊತ್ತು ಈ ಸ್ಥಳಕ್ಕೆ ಬರುತ್ತಿದ್ದರು. ಈಗಲೂ ಬೇರೆ ಬೇರೆ ಕಡೆಗಳಿಂದ ಜನ ಬರುತ್ತಿದ್ದಾರೆ. 1990ರ ದಶಕದಲ್ಲಿಆಕಾಶವಾಣಿ ಮಂಗಳೂರು ಕೇಂದ್ರವು ನಾಕೂರುಗಯದ ಬಗ್ಗೆ ಸಾಕ್ಷ್ಯರೂಪಕವೊಂದನ್ನು ಪ್ರಸಾರ ಮಾಡಿತ್ತು. ಇತ್ತೀಚೆಗೆ ಖಾಸಗಿ ದೂರದರ್ಶನ ಚಾನೆಲ್‍ಗಳಲ್ಲಿ ಸಾಕ್ಷ್ಯಚಿತ್ರಗಳು ಪ್ರಸಾರವಾಗಿವೆ.ಯೂಟ್ಯೂಬ್ ಚಾನೆಲ್‍ಗಳಲ್ಲೂ ನಾಕೂರುಗಯದ ವಿಡಿಯೋ ಮಾಹಿತಿಗಳು ಪ್ರಸಾರವಾಗಿವೆ. ಪತ್ರಿಕೆಗಳಲ್ಲೂ ಸಚಿತ್ರ ವರದಿಗಳು ಲೇಖನಗಳು ಪ್ರಕಟಗೊಂಡಿವೆ. ಎಡಮಂಗಲ ಗಾಮದ ಪುಟ್ಟಹಳ್ಳಿಯಾದ ಪುಳಿಕುಕ್ಕು ಎಂಬಲ್ಲಿನ ಉತ್ಸಾಹಿ ಯುವಕರ ತಂಡವೊಂದು ಗುರುಹಿರಿಯರ ಮಾರ್ಗದರ್ಶನದಲ್ಲಿ‘ನಾಕೂರುಗಯ ಹಿತರಕ್ಷಣಾ ವೇದಿಕೆ ಎಂಬ ಸಂಘಟನೆಯೊಂದನ್ನು ರಚಿಸಿಕೊಂಡು ಕಾರ್ಯಾಚರಿಸುತ್ತಾ ಕ್ಷೇತ್ರಾಭಿವೃದ್ಧಿಗೆ ಶ್ರಮಿಸುತ್ತಿರುವುದು ಉಲ್ಲೇಖನೀಯ.

ಗಯದಎರಡೂ ದಡಗಳ ಬದಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಸಣ್ಣ ಕಟ್ಟಡಗಳಿವೆ. ಎಡಮಂಗಲ ಗ್ರಾಮದ ಪುಳಿಕುಕ್ಕು ಬದಿಯಿಂದ ಬಂದುಗಯಕ್ಕೆ ಹರಕೆ ಸಲ್ಲಿಸುವವರ ಅನುಕೂಲಕ್ಕೆ ಮೆಟ್ಟಿಲುಗಳ ನಿರ್ಮಾಣವಾಗಿದೆ. ಪ್ರತಿ ವರ್ಷ ಜನವರಿ 26 ರಂದು ಈ ಬದಿಯದಡದಲ್ಲಿ ಶ್ರೀಗೋಪಾಲಕೃಷ್ಣ ದೇವರ ಪೂಜೆ ಹಾಗೂ ಸಾರ್ವಜನಿಕ-ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಗಳು ನಾಕೂರುಗಯ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನೆರವೇರುತ್ತಿವೆ.
ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ; ಮತ್ತೆ ಕೆಲವೆಡೆ ಆದ್ರಕ ಮನೀಯ. ಭವ್ಯತೆ ದಿವ್ಯತೆಗಳೆರಡೂ ಮೇಳೈಸಿರುವ ಪ್ರಕೃತಿಯು ಶ್ರದ್ಧೆಯುಳ್ಳವರಿಗೆ ದೇವತೆ; ಭಾವಜೀವಿಗಳಿಗೆ ವಿಸ್ಮಯಾವಹ; ಕವಿ- ಕಾವ್ಯ ಪ್ರಚೋದಕ. ವಿಜ್ಞಾನಿಗಳಿಗೆ ಸದಾ ಸಂಶೋಧನಾ ಕೌತುಕ! ಮುಕ್ತತೆಯನ್ನೂ ನಿಗೂಢತೆಯನ್ನೂ ಜೊತೆಗೇ ಬೆಸೆದುಕೊಂಡಿರುವ ಸೌಂದರ್ಯವನ್ನೂ ಅಧ್ಯಾತ್ಮವನ್ನೂ ಅದ್ವೈತವಾಗಿಸಿರುವ ಪ್ರಕೃತಿಯಾಟಕ್ಕೆಎಣೆಯುಂಟೇ?
ಬರಹ :
ಜಯಪ್ರಕಾಶ್ ಎ ನಾಕೂರು
ಜಯಪ್ರಕಾಶ್
(ಜಯಪ್ರಕಾಶ್ ಅವರು ಇತಿಹಾಸ, ಕನ್ನಡದಲ್ಲಿ ಎಂಎ ಹಾಗೂ ಬಿಎಡ್  ಪದವೀಧರರು. ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಾಸದಲ್ಲಿ ತೆಂಕುತಿಟ್ಟುಯಕ್ಷಗಾನದಲ್ಲಿ ಭಾಗವತಿಕೆ ಹಾಗೂ ಚೆಂಡೆ ಮದ್ದಳೆ ವಾದನ ಮಾಡುತ್ತಾರೆ. ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.  ಸದ್ವಿಚಾರ ವಿಮರ್ಶೆ, ಭಾರತೀಯ ವಿಚಾರಧಾರೆ, ಅಧ್ಯಯನ, ಚಿಂತನ, ಲೇಖನ ಬರೆವಣಿಗೆ ಅವರ ಆಸಕ್ತಿಯ ವಿಷಯ )

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group