ಮೊನ್ನೆ ಪ್ರಮುಖ ದಿನ ಪತ್ರಿಕೆಯಲ್ಲಿ(news paper) ರಾಜ್ಯದಲ್ಲಿ ಇತ್ತಿಚೆಗೆ ನೂರಾರು ರೈತರು ಆತ್ಮಹತ್ಯೆಗೆ(Farmers Suicide) ಶರಣಾಗಿದ್ದಾರೆ ಎಂಬ ಅತ್ಯಂತ ಆಘಾತಕಾರಿ ಸಂಗತಿಯನ್ನು ಪ್ರಮುಖ ಸುದ್ದಿ ಮಾಡಿದ್ದರು. ಸಾವು ಹೇಗೆ ಭೂಮಿಯ(Earth) ಮೇಲೆ ಹುಟ್ಟಿದ(Birth) ಎಲ್ಲಾ ಜೀವಿಗಳಿಗೂ(Creature) ಬರುತ್ತದೋ ಹಾಗೆ ಆತ್ಮಹತ್ಯೆ ಕೂಡ ಬಡವ ಬಲ್ಲಿದ ಎನ್ನದೇ ಎಲ್ಲರ ವರ್ಗದ ಜನರನ್ನು ಕಾಡುತ್ತದೆ. ಬಹುಶಃ ಬಹುತೇಕ ಎಲ್ಲ ಜನರನ್ನು ಜೀವಮಾನದಲ್ಲಿ ಒಂದಲ್ಲ ಒಂದು ಸಂಧರ್ಭದಲ್ಲಿ ಈ ಜೀವನ ಬೇಡ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿ ಬಿಡೋಣ ” ಅಂತನ್ನಿಸಿರುತ್ತದೆ…!! ಆದರೆ ಜಗತ್ತಿನ ಎಲ್ಲಾ ಜೀವಿಗೆ ಏನೇ ಕಷ್ಟ ನಷ್ಟ ಇರಲಿ, ತಮ್ಮವರು ಯಾರು ಇಲ್ಲದಿರಲಿ, ಬಡತನ ಇರಲಿ, ಅಂಗವೈಕಲ್ಯ ಇರಲಿ ಏನೇ ಇರಲಿ ಇದೆಲ್ಲಕ್ಕಿಂತ ತನ್ನ ಉಸಿರನ್ನು ಪ್ರೀತಿಸುವ ಮನಸ್ಥಿತಿ ಇರುತ್ತದೆ.
ಆತ್ಮಹತ್ಯೆ ಖಂಡಿತವಾಗಿಯೂ ಸುಲಭವಾದ ವಿಚಾರವೂ ಅಲ್ಲ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರು “ಹೇಡಿ” ಗಳೂ ಅಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ನಿಂತವನಿಗೆ ಸಾವನ್ನು ಎದುರು ನೋಡುವ ಧೈರ್ಯ ಇರುತ್ತದೆ. ಆ ನಿರ್ಯಾತ ಅಂಧಕಾರದತ್ತ ಸಾಗಲು ಭಯಂಕರ ಧೈರ್ಯ ಬೇಕು. ಮನುಷ್ಯ ಸಾವಿಗಿಂತ ಹೆಂಗೋ ಏನೋ ಇರೋದು ತಿಂದುಂಡು ಬಾಳುವ ಯೋಚನೆ ಗಟ್ಟಿ ಮಾಡೋದು ಇದಕ್ಕೆ… ಸಾವು ಬಹಳ ಕಷ್ಟಾತಿ ಕಷ್ಟದ ವಿಚಾರ. ಕುತ್ತಿಗೆಗೆ ನೇಣು ಬಿಗಿದು ಅಕಸ್ಮಾತ್ತಾಗಿ ಬದುಕಿದವರು ಹೇಳುವ ಅನುಭವ ಕೇಳಿದರೆ ಸಾವು ಎಷ್ಟು ಘೋರ ಎಂಬ ಭಯ ಆವರಿಸುತ್ತದೆ. ಆ ಕ್ಷಣದಲ್ಲಿ ನರ ನಾಡಿಗಳೆಲ್ಲ ಒಮ್ಮೆಗೆ ಕಿತ್ತು ಹಾಕುವ ನೋವು ಯಮ ಯಾತನೆ. ಹೀಗೆ ಎಲ್ಲಾ ಬಗೆಯ ಆತ್ಮಹತ್ಯಾ ಪ್ರಯತ್ನ ದಲ್ಲೂ ಮನುಷ್ಯನ ದೇಹದಿಂದ ಉಚ್ವಾಸ ನಿಚ್ವಾಸ ನಿಲ್ಲುವ ಅಂತಿಮ ಕ್ಷಣ ಅತ್ಯಂತ ಯಾತನಾದಾಯಕ. ಯಾರು ಸಾಯಲು ಹೊರಟಿದ್ದಾರೋ ಅವರಿಗೆ ಚಾಲ್ತಿ ಬದುಕಿಗಿಂತ ಆತ್ಮಹತ್ಯೆ ಮಾಡಿಕೊಂಡು ಸಾಯುವುದು ದುಪ್ಪಟ್ಟು ಸವಾಲಿನ ವಿಚಾರ. ಅದಕ್ಕೆ ಆತ್ಮಹತ್ಯೆ ಆಲೋಚನೆ ಬಂದವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳೋಲ್ಲ. ಆದರೆ ಈ ಕ್ರೂರ ಆತ್ಮಹತ್ಯೆಯ ಬಗ್ಗೆ ಮನಸು ಮಾಡುವಷ್ಡು ಬದುಕು ಕ್ರೂರ ಆಗುವಾಗ ಆ ಸಾವಿಗೆ ಪ್ರಚಲಿತ ಸಮಾಜವೂ ಹೊಣೆಯಾಗುತ್ತದೆ ಎಂಬುದೂ ಅತ್ಯಂತ ವಿಷಾದನೀಯ ವಿಚಾರ .
ಆತ್ಮಹತ್ಯೆ ಯಲ್ಲಿ ಹಲವಾರು ಬಗೆಗಳಿವೆ ಮನುಷ್ಯ ಕೆಲವು ಆಘಾತಕಾರಿ ಘಟನೆ ನಡೆದಾಗ ತಕ್ಷಣ ಆತ್ಮಹತ್ಯೆ ಗೆ ಶರಣಾಗುತ್ತಾನೆ. ಉದಾಹರಣೆಗೆ ಪರೀಕ್ಷೆಲಿ ಫೇಲು, ಪ್ರೇಮ ವೈಫಲ್ಯ, ಪ್ರೀತಿ ಪಾತ್ರರ ಸಾವು, ತಕ್ಷಣದ ಸಾವಿಗೆ ಮನ ಮೂಡಿಸುತ್ತದೆ. ವ್ಯವಹಾರ ದ ನಷ್ಟ, ಸಾಲಬಾಧೆ ಅತಿ ಹೆಚ್ಚು ಆತ್ಮಹತ್ಯೆಗೆ ದೂಡುವ ಪ್ರಮುಖ ಕಾರಣವಾಗಿದೆ. ಮಾರಣಾಂತಿಕ ಖಾಯಿಲೆಗಳ ಯಾತನೆಯಿಂದ ಪಾರಾಗಲು ಅನೇಕ ರೋಗಿಗಳಿಗೆ ಆತ್ಮಹತ್ಯೆ ಪರಿಹಾರವಾಗಿದೆ..!! ತತ್ ಕ್ಷಣದ ಆತ್ಮಹತ್ಯೆ ನಿರ್ಧಾರಗಳನ್ನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗಳು ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದು ಯಾರಲ್ಲೂ ಹೇಳಿಕೊಂಡಿರೋಲ್ಲ. ಹಾಗಾಗಿ ಈ ತಕ್ಷಣದ ಸಾವಿಗೆ ಆತ್ಮಹತ್ಯೆ ಮಾಡಿಕೊಂಡವರೇ ಹೊಣೆ…
ಆದರೆ ಮಿಕ್ಕುಳಿದ ಎಲ್ಲಾ ಆತ್ಮಹತ್ಯೆಗಳು ಆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳು ತಮ್ಮ ಸಹಚರ ಆತ್ಮೀಯ ಸಂಬಂಧಿಗಳ ಜೊತೆಯಲ್ಲಿ ತಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆನ್ನಿಸುತ್ತಿದೆ ಎಂದು ಹೇಳಿಕೊಂಡಿರುತ್ತಾರೆ ಎಂಬುದು ಗಮನಾರ್ಹ ಸಂಗತಿ. ಬಹುತೇಕ ಸಂಧರ್ಭದಲ್ಲಿ ಈ ಹಾತಾಶ ವ್ಯಕ್ತಿಯ ಸಂಭಂಧಿ ಬಂಧು ಮಿತ್ರರು ತಾವೇ ಬುದ್ದಿ ಹೇಳಿ ಸಮಾಧಾನ ಮಾಡಿ ಕಳಿಸಿರುತ್ತಾರೆ. ಆದರೆ ಇದೇ ಸಮಾಜ ಹತಾಶ ಜೀವಿಗಳ ವಿಚಾರದಲ್ಲಿ ಮಾಡುವ ಬಹುದೊಡ್ಡ ತಪ್ಪು. ಆತ್ಮಹತ್ಯೆ ನಿರ್ಧಾರ ಎಂಬುದು ವ್ಯಕ್ತಿ ಯೊಬ್ಬನ ಖಿನ್ನತೆಯ ದುಷ್ಪರಿಣಾಮ. ಇದಕ್ಕೆ ನಮ್ಮ ನಿಮ್ಮಂಥ ಸಾಮಾನ್ಯ ಜನರ ಸಮಾಧಾನ, ಜೀವನ ಪ್ರೀತಿ ಮೂಡುವ ಮಾತುಗಳ ಜೊತೆಗೆ ಸಂಬಂಧಿಸಿದ ವೈದ್ಯರ ಚಿಕಿತ್ಸೆ ಅತ್ಯಗತ್ಯ.
ನನ್ನ ಬಂಧುವೊಬ್ಬರ ಆತ್ಮಹತ್ಯೆ ವಿಚಾರದಲ್ಲಿ ವಿಚಾರಣೆ ಮಾಡಿದಾಗ ಕಂಡು ಬಂದದ್ದೇನೆಂದರೆ ಆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತನ್ನ ಹೆಂಡತಿ ಯನ್ನೂ ಸೇರಿದಂತೆ ಹಲವಾರು ಜನ ಬಂಧುಗಳ ಬಳಿ ತನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನಿಸುತ್ತಿದೆ ” ಎಂದು ಹೇಳಿಕೊಂಡಿದ್ದರಂತೆ. ಎಲ್ಲರೂ ಸಮಾಧಾನದ ಮಾತನಾಡಿದ್ದಾರೆ. ಹೇಗೆ ತಲೆನೋವೋ, ಜ್ವರವೋ, ಶೀತಕ್ಕೋ ಸಮಾಧಾನ ದ ಮಾತು ಪಥ್ಯವಾಗಿ ವಾಸಿಯಾಗುವುದಿಲ್ಲವೋ ಹಾಗೆಯೇ ಆತ್ಮಹತ್ಯೆ ಎನ್ನುವ ಖಿನ್ನತೆ ಅಥವಾ ಮನೋಬಾಧೆಗೂ ವೈದ್ಯರ ಕೌನ್ಸಲಿಂಗ್ ಮತ್ತು ಔಷಧ ಮಾತ್ರೆ ಚಿಕಿತ್ಸ ಇಲ್ಲದೇ ನಿವಾರಣೆ ಆಗೋಲ್ಲ ಮತ್ತು ಆ ವ್ಯಕ್ತಿಯ ಮನಸಿನಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಮನೋಭಾವ ಹೋಗೋಲ್ಲ….!!!
ಇಲ್ಲಿ ಇನ್ನೊಂದು ದುರಂತ ಏನೆಂದರೆ ಕೆಲವು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗಳು Habitual offenders ತರಹ ಹಿಂದೆ ಹಲವಾರು ಬಾರಿ ವಿಫಲ ಆತ್ಮಹತ್ಯಾ ಪ್ರಯತ್ನ ಮಾಡಿದ್ದು ದನ ಕಾಯುವವನ ಹುಲಿ ಬಂತು ಹುಲಿ ಕಥೆಯಂತೆ ಇವನು ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಮ್ಮ ಭಯ ಪಡಿಸುತ್ತಿದ್ದಾನೆ.. ಇವ ಸಾಯೋಲ್ಲ.. ಎಂಬ ನಿರ್ಲಕ್ಷ್ಯ ಮೂಡಿಬಿಡುವ ಸಾದ್ಯತೆಯೂ ಹೆಚ್ಚಿರುತ್ತದೆ. ಆದರೆ ಆತ್ಮೀಯ ಬಂಧುಗಳೇ.. ನಿಮ್ಮ ಬಳಿ ಯಾರಾದರೂ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೇಳಿದರೆ ಆತನ ಮಾತು ಎಷ್ಟು ಗಂಭೀರವಾಗಿದೆ ಎಂದು ಗಮನಿಸಿ ನಂತರ ಅವರ ಹತ್ತಿರದ ಸಂಬಂಧಿಗಳ ಗಮನಕ್ಕೆ ಈ ವಿಚಾರವನ್ನು ಮನದಟ್ಟು ಮಾಡಿ ಆತನನ್ನು ಕೂಡಲೇ ಸಂಬಂಧಿಸಿದ ವೈದ್ಯರ ಬಳಿ ಕರೆದುಕೊಂಡು ಹೋಗುವಂತೆ ಮಾರ್ಗದರ್ಶನ ಮಾಡಲೇಬೇಕು.
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ತಕ್ಷಣದ ಕಾರಣಕ್ಕೆ ತಕ್ಷಣಕ್ಕೆ ಆತ್ಮಹತ್ಯೆ ಮಾಡು ಕೊಳ್ಳುವವರ ಹೊರತುಪಡಿಸಿ ಬೇರೆಲ್ಲಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು ಒಬ್ಬರಲ್ಲ ಒಬ್ಬರಿಗೆ ತಮ್ಮ ಆತ್ಮಹತ್ಯಾ ನಿಲುವಿನ ಬಗ್ಗೆ ಹೇಳಿಕೊಂಡಿರುತ್ತಾರೆ. ನೀವು ಯಾವುದೇ ಆತ್ಮಹತ್ಯಾ ಪ್ರಕರಣದ ನಂತರ ಅವರ ಕುಟುಂಬ ವರ್ಗದವರನ್ನು ಸಂಪರ್ಕ ಮಾಡಿದಾಗ ಅವರು ಈ ವಿಚಾರವನ್ನು ಹೇಳುತ್ತಾರೆ. ಆದರೆ ಎಲ್ಲಾ ಸರ್ತಿಯೂ ಹೀಗೆ ಹೇಳಿಕೊಂಡ ದುರ್ದೈವಿ ಗಳ ಮಾತಿಗೆ ಒಂದಷ್ಟು ಸಮಾಧಾನ ದ ಮಾತಿನ ಹೊರತಾಗಿ ಬೇರಾವ ಬೆಳವಣಿಗೆಯೂ ಆಗಿರದ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಆತ್ಮಹತ್ಯಾ ತೀವ್ರತೆಗೆ ಮೆದುಳಿನಲ್ಲಿ ಆಗುವ ಬೆಳವಣಿಗೆ, ರಕ್ತ ಪರಿಚಲನೆಯ ವ್ಯತ್ಯಾಸ, ಹಾರ್ಮೋನು ವ್ಯತ್ಯಾಸ ಮುಂತಾದ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆ ಅತಿ ಮುಖ್ಯ. ನಾವು ದೊಡ್ಡ ಮಾಹಾನ್ ಜ್ಞಾನಿಗಳಂತೆ ಬುದ್ಧಿವಾದ ಹೇಳಿ ಕನ್ವಿನ್ಸ್ ಮಾಡಲು ಹೋಗಬಾರದು. ನಮ್ಮ ಮಾತುಗಳು ಅವರಿಗೆ ತಾತ್ಕಾಲಿಕ ಪರಿಣಾಮ ಮಾತ್ರ ಬೀರಬಲ್ಲದು. ಆದರೆ ವೈದ್ಯರ ಮಾತ್ರೆ ಔಷಧಿಗಳು ಮಾತ್ರ ಈ ದುರ್ದೈವಿಗಳ ಬಚಾವು ಮಾಡಬಲ್ಲದು ಎಂಬ ಅರಿವು ನಮಗಿರಬೇಕು. ತೀವ್ರವಾಗಿ ಆತ್ಮಹತ್ಯೆ ಮಾಡಿಕೊಳ್ಳಲೇ ಬೇಕು ಎನಿಸುವುದು ಮಾನಸಿಕ ಅಸ್ವಸ್ಥತೆ. ಇದು ಬಿಪಿ, ಷುಗರ್, ಕ್ಯಾನ್ಸರ್ ಇತರೆ ಖಾಯಿಲೆ ಗಳಂತೆ ಖಾಯಿಲೆಯೇ. ನಮ್ಮ ದೇಶದಲ್ಲಿ ಮಾನಸಿಕ ಅಸ್ವಸ್ಥತೆ ಸಂಬಂಧಿಸಿದ ರೋಗದ ಬಗ್ಗೆ ಅರಿವು ಜಾಗೃತಿ ತುಂಬಾ ಕಡಿಮೆ.
ಯೌವನದ ಹುಡುಗ ಹುಡುಗಿಯರಿಗೆ ಮೊಬೈಲ್ ವ್ಯಸನ , ಆನ್ ಲೈನ್ ಗೇಮಿಂಗ್, ಬೆಟ್ಟಿಂಗೂ – ದಿಡೀರಾಗಿ ಶ್ರೀಮಂತಿಗೆಯ ಹುಚ್ಚು, ಆ ಸಂಬಂಧಿಸಿದ ಗುರಿ ತಲುಪದ ವೈಪಲ್ಯತೆಗಳಿಂದಾದ ನಿರಾಶೆ ಹತಾಶೆ ಯುವ ಪೀಳಿಗೆಯನ್ನು ಮನೋರೋಗಕ್ಕೆ ದೂಡಿ ಖಿನ್ನರನ್ನಾಗಿ ಮಾಡಿ ಮುಂದಿನ ದಿನಗಳಲ್ಲಿ ಆತ್ಮಹತ್ಯೆ ಗೆ ದೂಡುತ್ತಿದೆ..!! ಆದರೆ ಭಾರತದ ದೇಶ ಮಟ್ಟದಲ್ಲಿ ಚಿಂತನೆ ಮಾಡಿದರೆ ಆತ್ಮಹತ್ಯಾ ಪ್ರಕರಣದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ರೈತರು…!!
“ಜಮೀನ್ದಾರ” ರೈತ ತನ್ನ ಬೆವರು ಹರಿಸಿ ಅನ್ನ ಹುಟ್ಟಿಸುವ ಶ್ರಮದ ದುಡಿಮೆಯ ಪ್ರಯತ್ನದ ಯಾವುದೋ ಹಂತದ ಸೋಲಿನ ಅಪಘಾತವಾದಾಗ ಆ ರೈತ ನ ಭವಿಷ್ಯಕ್ಕೆ “ಜಾಮೀನ್ದಾರರು ” ಯಾರೂ ಇಲ್ಲ ಎಂಬದು ಅತಿ ದೊಡ್ಡ ವಿಪರ್ಯಾಸ…!! ಸಾಲ ಮಾಡಿಕೊಂಡು ಕೃಷಿ ಮಾಡಿದ ರೈತನಿಗೆ ಬೀಜದಿಂದ ಮಾರುಕಟ್ಟೆ ಯಲ್ಲಿ ಮಾರಾಟವಾಗಿ ಉತ್ತಮ ಬೆಲೆ ಸಿಗುವ ತನಕವೂ ಕೃಷಿ ಬದುಕು ಅಭದ್ರತೆ. ವರ್ತಮಾನದ ಸಾಲ ಭವಿಷ್ಯದ ಆತಂಕ ಹತಾಶ ರೈತನನ್ನ ಆತ್ಮಹತ್ಯೆಗೆ ದೂಡುತ್ತಿದೆ. ಸರ್ಕಾರಗಳು ರೈತರ ಆತ್ಮಹತ್ಯೆಯನ್ನ ಲೆಕ್ಕ ಹಾಕುತ್ತಿದೆ ಹೊರತು ರೈತ ಆತ್ಮಹತ್ಯೆ ” ಮಾಡಿಕೊಳ್ಳದಂತೆ” ಹೇಗೆ ತಡೆಯಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತಿಲ್ಲ…!!! ಬಂಧುಗಳೇ…. ನಮ್ಮ ಮಲೆನಾಡು ಕರಾವಳಿಯಲ್ಲೀಗ ಅಡಿಕೆ ಬೆಳೆಗಾರ ಕೃಷಿಕ ನ ಬದುಕು ಎಲೆಚುಕ್ಕಿ ರೋಗ ಹಳದಿ ಎಲೆ ರೋಗದಿಂದ ಆತಂಕವನ್ನು ಮೂಡಿಸುತ್ತಿದೆ. ಅಡಿಕೆ ಈ ರೋಗಗಳೋ, ಹವಾಮಾನ ವೈಪರೀತ್ಯಗಳಿಂದಲೋ, ಕಾಡು ಪ್ರಾಣಿಗಳ ಹಾವಳಿಯೋ.. ಕೊನೆಗೆ ಅಡಿಕೆ ಬೆಳೆ ವಿಸ್ತರಣೆಯ ಕಾರಣಕ್ಕೋ ಒಂದಲ್ಲ ಒಂದು ದಿನ ಬೆಳೆಗಾರರಿಗೆ ಕೈ ಕೊಡುವುದು ನಿಚ್ಚಳ.
ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಬೆಳೆಗೆ “ಪರ್ಯಾಯ” ಹುಡುಕಿಕೊಳ್ಳದಿದ್ದರೆ ಖಂಡಿತವಾಗಿಯೂ ಅಡಿಕೆ ಬೆಳೆಗಾರರ ಬದುಕು ನಷ್ಟಕ್ಕೆ ಈಡಾಗಿ ರೈತ ದಿಕ್ಕು ತೋಚದಂತಾಗಿ “ಆತ್ಮಹತ್ಯೆ” ಬಗ್ಗೆ ಚಿಂತನೆ ಮಾಡುವ ಸಾದ್ಯತೆ ಇದೆ. ಈಗಾಗಲೇ ಈ ಬಗೆಯ ಆತ್ಮಹತ್ಯಾ ಪ್ರಕರಣಗಳು ಮಲೆನಾಡು ಕರಾವಳಿಯ ಭಾಗದಲ್ಲಿ ಅಲ್ಲಲ್ಲಿ ವರದಿಯಾಗಿದೆ. ಈ ಅಡಿಕೆ ಸಮಸ್ಯೆ ಗೆ “ಪರ್ಯಾಯವೇ ಮದ್ದು”…
ನಮ್ಮ ಸುತ್ತಮುತ್ತಲಿನ ಅಡಿಕೆ ಬೆಳೆಗಾರರಾದರೂ ಈ ತರಹದ ನಷ್ಟಕ್ಕೆ ಆತ್ಮಹತ್ಯೆಯ ಬಗ್ಗೆ ಮಾತನಾಡಿದರೆ ಅವರಿಗೆ ಸಕಾರಾತ್ಮಕ ಮಾತನಾಡಿ ಅವರನ್ನು ವೈದ್ಯಕೀಯ ಚಿಕಿತ್ಸೆ ಪಡೆಯಲು ಪ್ರೇರಣೆ ಮಾಡಬೇಕಾಗಿದೆ. ಯಾರಾದರೂ ಆತ್ಮಹತ್ಯಾ ಆಲೋಚನೆಯಲ್ಲಿದ್ದು ಆ ಬಗ್ಗೆ ಮಾತನಾಡಿದರೆ ಬರೀ ಸಮಾಧಾನದ ಮಾತನಾಡದೇ ಅವರ ಕುಟುಂಬ ವರ್ಗದವರ ಬಳಿ ಅವರ ನಕಾರಾತ್ಮಕ ಮನಸ್ಥಿತಿಯ ಬಗ್ಗೆ ಗಮನಕ್ಕೆ ತಂದು ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಮಾರ್ಗದರ್ಶನ ಮಾಡದಿದ್ದಲ್ಲಿ ಆ ಹತಾಶ ಜೀವಿಯು ಮುಂದೆ ಆತ್ಮಹತ್ಯೆ ಮಾಡಿಕೊಂಡಲ್ಲಿ ಆ ದುರ್ಮರಣದಲ್ಲಿ ನಮ್ಮ ಪಾಲು ಸೇರುತ್ತವೆ….
ಭಗವಂತ ಕೊಟ್ಟ ಉಸಿರು ಭಗವಂತನೇ ಕಿತ್ತುಕೊಳ್ಳಲಿ.. ನಮ್ಮ ಜೀವ ನಾವೇ ತೆಗೆದುಕೊಳ್ಳುವ ಆತ್ಮಹತ್ಯೆ ಪ್ರಯತ್ನ ಅತ್ಯಂತ ಕ್ರೂರ. ಆತ್ಮಹತ್ಯೆ ಮಾಡಿಕೊಂಡು ಸತ್ತವ ಒಂದು ಸರ್ತಿ ಸತ್ತರೆ ಅವನ ನಂಬಿ ಜೀವನ ನಡೆಸುವ ಹೆಂಡತಿ ಮಕ್ಕಳು ವೃದ್ದ ತಂದೆ ತಾಯಿಯರು ಅತ್ತ ಸಾಯಲೂ ಆಗದೇ ಇತ್ತ ಬದುಕಲೂ ಆಗದ ಜೀವನ ಪರ್ಯಂತದ ನಿತ್ಯ ನರಕದ ಬದುಕು ಬಾಳುವಂತಾಗುತ್ತದೆ. ಈ ಕಾರಣಕ್ಕೆ ಆತ್ಮಹತ್ಯೆ ಯನ್ನು ಪಾಲಾಯನವಾದ ಎಂದು ವಿಶ್ಲೇಷಣೆ ಮಾಡುತ್ತಾರೆ. ಆತ್ಮಹತ್ಯೆ ಮಾಡಿಕೊಂಡವ ಬೌತಿಕ ಜೀವನದ ಸವಾಲುಗಳನ್ನು ತಾನು ಎದುರಿ ಸಲಾಗದೇ ಸತ್ತು ತನ್ನ ಕುಟುಂಬ ವರ್ಗವನ್ನು ಆ ಸವಾಲುಗಳಿಗೆ ಗುರಿ ಮಾಡುವುದುರ ಜೊತೆಯಲ್ಲಿ ಅವನ ದುರ್ಮರಣದ ಸಂಕಟದ ಹೊರೆಯನ್ನೂ ಕುಟುಂಬಕ್ಕೆ ಹೊರಿಸುವುದು ಪರಮ ಅನ್ಯಾಯವಾಗಿರುತ್ತದೆ.
ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರು ವ್ಯಕ್ತಿ ಬದುಕಿದ್ದಾಗ ನಾವು ಆತನ ಬಗ್ಗೆ ಇನ್ನಷ್ಟು ಗಮನ ಕೊಟ್ಟಿದ್ದರೆ ಉಳಿಸಿಕೊಳ್ಳಬಹುದಿತ್ತು ಎಂಬ “ಪಶ್ಚಾತ್ತಾಪ” ಶಾಶ್ವತವಾಗಿ ಅವರಲ್ಲಿ ಉಳಿಸಿ ಅದನ್ನು ಕುಟುಂಬದವರ ಕೊರಗಾಗಿಸುವುದು ಅತ್ಯಂತ ದುರಂತ. ಆತ್ಮಹತ್ಯೆಯ ಬಗ್ಗೆ ಸಮಸ್ತ ಸಮಾಜ ಅತ್ಯಂತ ಜಾಗೃತೆಯಿಂದ ಗಮನ ಹರಿಸದಿದ್ದರೆ ಕೊನೆಯಲ್ಲಿ “ಪಶ್ಚಾತ್ತಾಪ ದ ಬೇಗೆ” ಮಾತ್ರ ಉಳಿಯುತ್ತದೆ….
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…