MIRROR FOCUS

ಬೆಳೆಗಾರರೇ, ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಆತ್ಮಹತ್ಯೆ ಮಾಡಬೇಡಿ | ಹಾಗೆಂದು ಹೊಸ ಹೊಸ ಗೊಬ್ಬರದ ಆಮಿಷಗಳಿಗೂ ಬಲಿಯಾಗಬೇಡಿ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಹಳದಿರೋಗದ ಕಾರಣದಿಂದ ಇನ್ನೊಬ್ಬ ಕೃಷಿಕ ಸುಳ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ರೈತರೇ ದಯವಿಟ್ಟು ಇಂತಹ ಕೃತ್ಯ ಮಾಡಿಕೊಳ್ಳಬೇಡಿ. ಪರ್ಯಾಯ ಬೆಳೆಗಳ ಅವಕಾಶ ಇದೆ. ಸರ್ಕಾರ, ಜನಪ್ರತಿನಿಧಿಗಳು ಆತ್ಮಹತ್ಯೆ ಮಾಡಿಕೊಂಡ ಮನೆಗೆ ಭೇಟಿ ನೀಡಿ ಮೈಲೇಜ್‌ ಪಡೆದುಕೊಳ್ಳುವುದಷ್ಟೇ ಅಲ್ಲ.‌ ಬೆಳೆಗಾರರಿಗೆ ಧೈರ್ಯ ತುಂಬಿ. ಪರ್ಯಾಯ ಸಾಧ್ಯತೆಗಳ ಬಗ್ಗೆ ವಿವರಿಸಿ. ಈಗಾಗಲೇ ಸುಳ್ಯದಲ್ಲಿ ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಇದೊಂದು ಸಮೂಹ ಸನ್ನಿಯಾಗುವ ಮೊದಲು ರಾಜಕೀಯ ವ್ಯವಸ್ಥೆ ಎಚ್ಚೆತ್ತುಕೊಳ್ಳಲಿ. ………ಮುಂದೆ ಓದಿ……..

Advertisement

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆ , ಅರಂತೋಡು, ಮಡಪ್ಪಾಡಿ, ಮರ್ಕಂಜ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಅಡಿಕೆಗೆ ಹಳದಿ ಎಲೆರೋಗ ಬಾಧಿಸಿ ಸುಮಾರು 25 ವರ್ಷಗಳಾದವು. ಶೃಂಗೇರಿ, ಕೊಪ್ಪ ಪ್ರದೇಶದಲ್ಲೂ ಸುಮಾರು ಅಷ್ಟೇ ವರ್ಷಗಳು ಕಳೆದವು. ಈಚೆಗೆ ಈ ರೋಗ ಹಬ್ಬುತ್ತಿದೆ. ಶೃಂಗೇರಿ, ಕೊಪ್ಪದ ಪ್ರದೇಶಗಳ ಬಹುತೇಕ ಕಡೆ ಕೃಷಿಯೇ ಇಲ್ಲವಾಗಿದೆ, ಕೆಲವರು ನಗರ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಸುಳ್ಯ, ಸಂಪಾಜೆ ಭಾಗದಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಕೃಷಿಕರು ಪರ್ಯಾಯ ಬೆಳೆಯತ್ತ ಸಾಗಿದ್ದಾರೆ. ರಬ್ಬರ್‌, ಕೊಕೋ, ಕಾಳುಮೆಣಸು ಹೀಗೆ ಕೃಷಿ ಮಾಡಿದರೆ, ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಸಣ್ಣಪುಟ್ಟ ಉದ್ಯೋಗಕ್ಕೆ ಹೋಗುತ್ತಾರೆ. ಹಾಗಿದ್ದರೂ ದ ಕ ಜಿಲ್ಲೆಯ ಆರ್ಥಿಕ ಶಕ್ತಿಯೂ ಆದ, ರೈತರ ಜೀವನಾಡಿಯೂ ಆದ ಅಡಿಕೆ ಹಳದಿ ಎಲೆರೋಗದ ಬಗ್ಗೆ  ಕಳೆದ 25 ವರ್ಷಗಳಿಂದ ಒಂದು ರಾಜಕೀಯ ಇಶ್ಯೂ ಆಗಲಿಲ್ಲ. ಅಡಿಕೆ ಧಾರಣೆ ಕುಸಿತವಾದಾಗ ಪಾದಯಾತ್ರೆ ನಡೆದಿದೆ, ಕೊಳೆರೋಗದಿಂದ ನಷ್ಟವಾದಾಗ ಪ್ರತಿಭಟನೆ ನಡೆದಿದೆ. ಆದರೆ ಈಗ ಕಳೆದ ಎರಡು ವರ್ಷಗಳಿಂದ ಇದೊಂದು ರಾಜಕೀಯ ಒತ್ತಡ ಬರುತ್ತಾ , ಇದೀಗ ರಾಜಕೀಯವಾಗಿಯೂ ಇಶ್ಯೂ ಆಗುತ್ತಿದೆ. ಈ ನಡುವೆಯೇ ಅಡಿಕೆ ಬೆಳೆಗಾರರು ಆತ್ಮಹತ್ಯೆಯ ಸರದಿಗೆ ಬಂದಿದ್ದಾರೆ. ಸುಳ್ಯದ ಮಡಪ್ಪಾಡಿಯಲ್ಲಿ ಮೊನ್ನೆ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ 3 ನೇ ಪ್ರಕರಣ ದಾಖಲಾಯಿತು.ಕಳೆದ 25 ವರ್ಷಗಳಲ್ಲೂ ಇದೊಂದು ಇಶ್ಯೂ ಅಂತ ಅನಿಸಲೇ ಇಲ್ಲ…!. ಪರಿಹಾರ ಕಾಣಬೇಕು ಅಂತ ಮನಸ್ಸು ಬರಲೇ ಇಲ್ಲ. ಇದರ ಪರಿಣಾಮ ಮೂರನೇ ಕೃಷಿಕ ಆತ್ಮಹತ್ಯೆ ಮಾಡಿಕೊಂಡರು…!

ಪ್ರತೀ ಬಾರಿಯ ಚುನಾವಣೆಯ ಸಮಯದಲ್ಲಿ “ಈ ಬಾರಿ ಪರಿಹಾರ” ಅಂತ ಭರವಸೆ ನೀಡಿ ಮತ ಪಡೆಯುವ ರಾಜಕಾರಣಿಗಳು, ರಾಜಕೀಯ ಪಕ್ಷಗಳು ನಂತರ ಮೌನ. ಕಳೆದ ಬಾರಿ ಒಂದು ತಂಡ ಸಚಿವರ ಬಳಿಗೆ ಭೇಟಿ ನೀಡಿದಾಗ, “ಏನೂ ಸಾಧ್ಯವಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ಮೊಸಳೆ ಕಣ್ಣೀರು ಸುರಿಸುವ ಪಕ್ಷಗಳು, ಪರಿಹಾರದ ಬಗ್ಗೆ ಭರವಸೆ ನೀಡುವ ನಂತರ ಮೌನವಾಗುವ ಸನ್ನಿವೇಶವೇ ಇತ್ತು. ಇದೀಗ ರಾಜಕೀಯವಾಗಿಯೂ ಅಡಿಕೆ ಹಳದಿಎಲೆರೋಗ ಕಾವು ಪಡೆದುಕೊಂಡಿದೆ.ಈಗಲಾದರೂ ಇದಕ್ಕೊಂದು ಪರಿಹಾರ ಸಿಗಲಿ. ಅಡಿಕೆ ಹಳದಿ ಎಲೆರೋಗ ಶಾಶ್ವತವಾಗಿ ಪರಿಹಾರ ಕಾಣಲು ಸಾಧ್ಯವಾಗದೇ ಇದ್ದರೂ ಅಡಿಕೆ ಬೆಳೆಗಾರರಿಗೆ ಯಾವುದಾದರೊಂದು ರೀತಿಯಲ್ಲಿ ಪರಿಹಾರ ಸಿಗಲಿ. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಚೆಕ್‌ ನೀಡುವ ಪರಿಸ್ಥಿತಿ ಬರುವ ಮೊದಲು ಕ್ರಮವಾಗಲಿ. ಬೆಳೆಗಾರರು ಧೈರ್ಯವಾಗಿರಿ, ಪರ್ಯಾಯ ಬೆಳೆಯ ಕಡೆಗೆ ಮನಸ್ಸು ಮಾಡಿ ಅಷ್ಟೇ.

ಅಡಿಕೆ ಹಳದಿ ಎಲೆರೋಗದಿಂದ ಸಾಕಷ್ಟು ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆ ಮಾನಸಿಕ ಸ್ಥಿತಿ ದೂರದಿಂದ ದೂರುವವರಿಗೆ ಅರಿವಾಗದು. ಆರ್ಥಿಕ ಪರಿಸ್ಥಿತಿ, ಕ್ವಿಂಟಾಲ್‌ ಗಟ್ಟಲೆ ಅಡಿಕೆಯಾಗುತ್ತಿದ್ದವರಿಗೆ ತಿನ್ನಲು ಕೂಡಾ ಬೇರೆ ಕಡೆಯಿಂದ ಅಡಿಕೆ ಖರೀದಿ ಮಾಡಬೇಕಾದ ಸ್ಥಿತಿ ಬಂದರೆ…?. ಆ ಕಡೆ ಅಡಿಕೆಗೆ 500 ರೂಪಾಯಿ ಸಿಕ್ಕಿದರೂ ಸಾಲದು ಎನ್ನುವ ಮಾರುಕಟ್ಟೆ ಆಸೆ ಇರುವಾಗ, ಇಲ್ಲಿ ಅಡಿಕೆ ಇದ್ದೂ ಇಲ್ಲದ ಸ್ಥಿತಿ ಇರುವಾಗ ಮಾನಸಿಕ ಸ್ಥಿತಿ ಹೇಗೆ ಇರಬೇಡ..?. ಅಡಿಕೆಗೆ ಪರ್ಯಾಯ ಬೆಳೆ ಬೆಳೆಯಿರಿ ಎಂದು ಸಲಹೆ ನೀಡುವುದು ಸುಲಭ, ಆದರೆ ಅಡಿಕೆಯಷ್ಟು ಸುಲಭ ಹಾಗೂ ಹೆಚ್ಚು ಆದಾಯ ತರುವ ಕೃಷಿ ಯಾವುದಿದೆ..?

ಇಂತಹ ಪರಿಸ್ಥಿತಿಯನ್ನು ಸಾಕಷ್ಟು ಜನರು ಲಾಭ ಮಾಡಿಕೊಂಡಿದ್ದಾರೆ. ಅಡಿಕೆ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ. ಹೊಸ ಹೊಸ ಗೊಬ್ಬರ ಮಾರಾಟ ಮಾಡಲು ಸರ್ಕಸ್‌ ಮಾಡಿದ್ದಾರೆ. ನಮ್ಮ ಉತ್ಪನ್ನ ಹಾಕಿದರೆ ಹಳದಿ ಎಲೆರೋಗವೇ  ಕಡಿಮೆಯಾಗುತ್ತದೆ, ಹಳದಿ ಎಲೆರೋಗ ಗುಣವಾಗುತ್ತದೆ ಎಂದೆಲ್ಲಾ ಹೇಳಿ ಉತ್ಪನ್ನ ಮಾರಾಟ ಮಾಡಿದ್ದಿದೆ. ಅಡಿಕೆ ಹಳದಿ ಎಲೆರೋಗಕ್ಕೆ ಫೈಟೋಪ್ಲಾಸ್ಮಾ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆ ದಿಸೆಯಲ್ಲಿ ಪ್ರಯತ್ನ ಮಾಡಿ ಅದರ ನಿವಾರಣೆಗೆ ಪ್ರಯತ್ನ ಮಾಡಿದ್ದಾರೆ. ಮಳೆಗಾಲದಲ್ಲಿ ಅಡಿಕೆ ಸೋಗೆ ಹಳದಿಯಾಗಿ ನಂತರ ಹಸಿರಾಗುವ ಎಲೆಯ ಕಾರಣದಿದಲೇ ಅಡಿಕೆ ಹಳದಿ ಎಲೆರೋಗ ದೂರವಾಯಿತು ಎನ್ನುತ್ತಾ ಪ್ರಚಾರ ಮಾಡಿದವರು ಹಲವಾರು ಮಂದಿ.

ಹಳದಿ ಎಲೆರೋಗ ಬಾಧಿತ ಪ್ರದೇಶದಲ್ಲಿ ಹೊಸ ಅಡಿಕೆ ಗಿಡ ಹಾಕಿದಾಗ ಕನಿಷ್ಟ 5- 10 ವರ್ಷಗಳ ಕಾಲ ಒಂದೇ ಗೊಬ್ಬರವನ್ನು ಕೃಷಿಕರಿಗೆ ನೀಡಿ ಪ್ರಯೋಗ ಮಾಡಿ ಯಶಸ್ಸು ಅಂತ ಹೇಳಿದವರು ಯಾರಿದ್ದಾರೆ..? ಕೇವಲ ಒಂದೆರಡು ವರ್ಷದಲ್ಲಿ ಅಡಿಕೆ ಹಳದಿ ಎಲೆರೋಗ ಯಶಸ್ಸು ಅಂತ ಹೇಳುವುದರಲ್ಲಿ ಅರ್ಥವೇ ಇಲ್ಲ. ಗೊಬ್ಬರ ಮಾರಾಟಗಾರರು ಪ್ರತೀ ವರ್ಷ ಒಂದಿಲ್ಲೊಂದು ಪ್ರಯತ್ನ ಮಾಡುತ್ತಾರೆ. ರೋಗದಿಂದ ಸೋತ ಅಡಿಕೆ ಬೆಳೆಗಾರರಿಂದ ಮತ್ತಷ್ಟು ನಷ್ಟಕ್ಕೆ ದೂಡುತ್ತಾರೆ, ಅಡಿಕೆ ಬೆಳೆಗಾರರ ಮೇಲೆ ತೋಟದ ಮೇಲೆ ಪ್ರಯೋಗ ಮಾಡುತ್ತಾರೆ. ಬೆಳೆಗಾರರಿಗೆ ಸಹಜವಾಗಿಯೇ ನಿರೀಕ್ಷೆ. ಈ ಬಾರಿ ಯಶಸ್ಸು ಕಾಣಬಹುದು ಎನ್ನುವ ನಿರೀಕ್ಷೆ. ದಯವಿಟ್ಟು ಹೀಗೆ ಮಾಡಬೇಡಿ. ಕನಿಷ್ಟ 5 ವರ್ಷ ಉಚಿತವಾಗಿ ಪ್ರಯೋಗ ಮಾಡಿ ನಂತರ ಯಶಸ್ಸಿನ ಬಗ್ಗೆ ಮಾತನಾಡಿ. ಏಕೆಂದರೆ ಸಾಮಾನ್ಯ ಅಡಿಕೆ ಬೆಳೆಗಾರರು ಈಗಲೂ ಬಹಳ ನಿರೀಕ್ಷೆಯಲ್ಲಿ ಇದ್ದಾರೆ, ಅವರ ನಿರೀಕ್ಷೆಗಳು ವಿಫಲವಾದರೆ ನಿರಾಶರಾಗುತ್ತಾರೆ, ಆತ್ಮಹತ್ಯೆಗೆ ದಾರಿಯಾಗುತ್ತದೆ. ದಯವಿಟ್ಟು ನಿಮ್ಮ ಪ್ರಯೋಗ ಒಂದು ತೋಟದಲ್ಲಿ ಕನಿಷ್ಟ 5 ವರ್ಷವಾದರೂ ಮಾಡಿ ಯಶಸ್ಸು ಹೇಳಿರಿ. ಸರ್ಕಾರ, ರಾಜಕಾರಣಿಗಳು ಇಂತಹದ್ದರ ಮೇಲೂ ನಿಗಾ ಇಡಬೇಕು.

ಅಡಿಕೆ ಹಳದಿ ಎಲೆರೋಗ  ಅಧ್ಯಯನಗಳೂ ಸಂಪೂರ್ಣ ಯಶಸ್ಸು ಕಾಣಲಿಲ್ಲ ನಿಜ. ಹಾಗೆಂದು ವಿಜ್ಞಾನಿಗಳು ಕೆಲಸವೇ ಮಾಡಿಲ್ಲ ಎಂದೇನಲ್ಲ. ಮಾಡಿದ್ದಾರೆ, ಆದರೆ ಸರ್ಕಾರದ ವ್ಯವಸ್ಥೆಯಲ್ಲಿ ಅದು ಸಾಧ್ಯವಾಗಲಿಲ್ಲ. 25 ವರ್ಷಗಳಿಂದ ಅಡಿಕೆ ಹಳದಿ ಎಲೆರೋಗಕ್ಕೆ ರಾಜಕೀಯವಾಗಿ ಯಾರೊಬ್ಬರೂ ಹೇಗೆ ಧ್ವನಿ ಎತ್ತಲಿಲ್ಲವೋ , ಹಾಗೇ ವಿಜ್ಞಾನಿಗಳ ಪರಿಸ್ಥಿತಿಯೂ ಆಗಿದೆ, ಯಾವ ಸಹಕಾರವೂ ವಿಜ್ಞಾನಿಗಳಿಗೆ ಸಿಗಲಿಲ್ಲ ಎನ್ನುವುದನ್ನು ಹೇಳಲು ಮರೆಯಬಾರದು. ಒಂದು ಕಾಲದಲ್ಲಿ ಪ್ರಯೋಗ ನಡೆದು ಅರ್ಧಕ್ಕೇ ನಿಂತಿರುವುದು ಕೂಡಾ ಇದೇ ಕಾರಣದಿಂದ…!. ಆ ಕಾಲದಲ್ಲಿ ಕೃಷಿಕರೂ ಕೃಷಿ ಸಂಶೋಧನಾ ಕೇಂದ್ರಗಳಿಗೆ ಹೋಗುವುದು ಬಿಡಿ, ಮಾತನಾಡುವುದೂ ಕಷ್ಟವಾಗಿತ್ತು. ಈಗ ಪರಿಸ್ಥಿತಿ ಹಾಗಿಲ್ಲ, ಆಸಕ್ತ ವಿಜ್ಞಾನಿಗಳು ಇದ್ದಾರೆ. ಆದರೆ  ಈಗ ನೆರವು, ಸಹಕಾರ ಸಿಗದೇ ಇರಲು ಕಾರಣ ಬೇರೆಯೇ ಇದೆ.

ಒಂದು ಕಾಲದಲ್ಲಿ ಅಡಿಕೆ ಬೆಳೆಗಾರರು ಹೋರಾಟ ಮಾಡಿದರು. ಸಾಕಷ್ಟು ಕಡೆ ಓಡಾಟ ನಡೆಸಿದರು. ಸಂಪಾಜೆಯ ಬಹಳಷ್ಟು ಅಡಿಕೆ ಬೆಳೆಗಾರರು ವಿವಿಧ ಕಡೆ ಅಲೆದಾಡಿದ್ದಾರೆ. ಅವರ ಸಮಯ, ಶ್ರಮ, ಹಣ ವ್ಯರ್ಥವಾದ್ದು ಬಿಟ್ಟರೆ ಯಾವ ಉಪಯೋಗವೂ ಆಗಿಲ್ಲ. ಆಗಲೇ ರಾಜಕೀಯ ಧ್ವನಿಗಳೂ ಗಟ್ಟಿಯಾಗಿದ್ದರೆ ಬಹುಶ: ವಿಜ್ಞಾನಿಗಳ ಮೇಲೂ ಹೆಚ್ಚಿನ ಒತ್ತಡ ಬಂದು ಅನುದಾನಗಳೂ ಲಭ್ಯವಾಗಿ ಈಗ ಪರಿಹಾರ ಕಾರ್ಯಗಳ ಅನುಷ್ಟಾನದ ಬಗ್ಗೆ ಮಾತನಾಡಬಹುದಾಗಿತ್ತು…!.

ಕೃಷಿ ಎಂದರೆ ಹಾಗೆಯೇ, ಭಾರತದಲ್ಲಿ ಕೃಷಿ ವ್ಯವಸ್ಥೆ ಸೋಲುವುದು ಅದೇ ಕಾರಣಕ್ಕೆ. ಅದೊಂದು ರಾಜಕೀಯ ಇಶ್ಯೂ ಆಗುವುದು ಆತ್ಮಹತ್ಯೆ ನಡೆದ ಬಳಿಕವೇ…!. ಪಕ್ಷಗಳು ನಂತರವೇ ರಾಜಕೀಯ ಮೈಲೇಜ್‌ ಪಡೆಯಲು ಯತ್ನ ಮಾಡುತ್ತವೆ. “ನಾವು ಮಾಡಿದ್ದು” ಅಂತ ಸೋಶಿಯಲ್‌ ಮೀಡಿಯಾದಲ್ಲಿ ಬೇಗನೆ ಗುಂಪುಗಳಿಗೆ ಹಾಕುತ್ತಾರೆ. ಅದರ ನಂತರ ಫಾಲೋಅಪ್‌ ಮಾಡಿದವರಿಗೆ ಸತ್ಯ ಅರಿವಾಗುತ್ತದೆ.  ಕೃಷಿ ವೈಫಲ್ಯಗಳನ್ನು ಗುರುತಿಸಿ ಯಾರೋ ಕೆಲವರು ಕೆಲಸ ಮಾಡುತ್ತಿದ್ದರೆ, ಕೊನೆಗೆ ಅದೇ ಸಮಸ್ಯೆಯಾಗಲು ಶುರುವಾದಾಗ , ರಾಜಕೀಯ ವ್ಯವಸ್ಥೆಗಳು ಅಂತಹ ಕೆಲಸಗಳನ್ನೇ ಮಲಗಿಸಲು ಪ್ರಯತ್ನ ಪಡುತ್ತವೆ, ಏಕೆಂದರೆ ರಾಜಕೀಯ ವ್ಯವಸ್ಥೆಗಳಿಗೆ ಅದರಿಂದಲೇ ಸಮಸ್ಯೆಗಳು ಹೆಚ್ಚಾಗುವ ಕಾರಣದಿಂದ…!.  ಒಂದು ಹೋರಾಟ ಯಶಸ್ಸು ಪಡೆಯಲು ಆರಂಭವಾಗುತ್ತದೆ ಎನ್ನುವಾಗ ಗುಂಪುಗಳು ಹುಟ್ಟಿಕೊಳ್ಳುತ್ತವೆ, ಅವುಗಳು ಕೂಡಾ ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತವೆ. ಇಂತಹ ಕಾರಣಗಳಿಂದಲೇ ಕೃಷಿ ಸಮಸ್ಯೆಗಳು ಸೋಲುತ್ತಿವೆ.

ಈ ಎಲ್ಲದರ ನಡುವೆಯೇ ಕೃಷಿ ಬೆಳೆಯಬೇಕು, ಕೃಷಿಕರು ಗೆಲ್ಲಬೇಕು. ಕೃಷಿ ಸೋಲಿನ ಕಾರಣದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಪರ್ಯಾಯ ಬೆಳೆಯ ಕಡೆಗೆ ಗಮನಿಸಿ, ಸ್ವಲ್ಪ ಸಹಕಾರಿ ಸಂಘಗಳ ನೆರವು ಪಡೆಯಿರಿ. ಈಚೆಗೆ ಕೊಕೋ ಬೆಳೆ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶ ಕೃಷಿಕರನ್ನು “ತಾಂಗಿದೆ”, ಈಗಲೂ ಕೊಕೋಗೆ ಉತ್ತಮ ಧಾರಣೆ ಇದೆ. ಇಂತಹ ಪರ್ಯಾಯದ ಕಡೆಗೆ ಮುಖ ಮಾಡಿರಿ. ಅದೇ ತಾತ್ಕಾಲಿಕ ಪರಿಹಾರ. ಧೈರ್ಯವಾಗಿರಿ, ಕೃಷಿ ಯಾವತ್ತೂ ಸೋಲುವುದಿಲ್ಲ. ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ಯಶಸ್ವೀ ಕೃಷಿಕರ ಯಶೋಗಾಥೆಗಳನ್ನು ಗಮನಿಸಿ.

The death of a Arecanut grower by suicide as a result of Arecanut yellow leaf disease has led to three suicide cases being reported in Sullia. Farmers should not resort to suicide. They should have courage and consider alternative farming methods. This incident should serve as a warning to the political system. Immediate action is needed to not only provide relief, but also to find a cure for the disease.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

2 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

7 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

15 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

16 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

1 day ago