ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಬಂಟ್ವಾಳದ ಮಾಣಿಲದ ಕೃಷಿಕ. ಕೃಷಿಕ ಜಾನ್ ಮೊಂತೆರೋ ಅವರ ಈ ಸಾಹಸಗಾಥೆಯ ಪರಿಚಯ ಇಲ್ಲಿದೆ..
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಾಣಿಲ ಗ್ರಾಮ ಬೇಸಿಗೆ ಬಂತೆಂದರೆ ನೀರಿನ ಅಭಾವವನ್ನು ಎದುರಿಸುತ್ತದೆ. ಈ ನೀರಿನ ಬರವನ್ನು ನಿವಾರಿಸಲು ಗ್ರಾಮದ ಕೃಷಿಕ ಜಾನ್ ಮೊಂತೆರೋ ಸುರಂಗ ಕೊರೆದು ಯಶಸ್ವಿಯಾಗಿದ್ದಾರೆ. ಕೃಷಿ ಕಾಯಕವನ್ನೇ ಉಸಿರಾಗಿಸಿಕೊಂಡಿರುವ ಜಾನ್ ಮೊಂತೆರೋ, ಇಳಿ ವಯಸ್ಸಿನಲ್ಲೂ ಏಕಾಂಗಿಯಾಗಿ ಸುರಂಗ ಕೊರೆದು ಸಾಹಸ ಮಾಡಿದ್ದಾರೆ.
ಮೂಲತಃ ಕೃಷಿ ಕಾರ್ಮಿಕರಾಗಿರುವ ಜಾನ್ ಮೊಂತೆರೋ ದಿನವಿಡಿ ಕೂಲಿ ಕೆಲಸ ಮಾಡಿ, ಬಳಿಕ ಸಂಜೆ 6 ಗಂಟೆಯಿಂದ ತಡರಾತ್ರಿ 12ಗಂಟೆಯವರೆಗೆ ಪ್ರತಿ ದಿನ ತಮ್ಮ ಜಮೀನಿನಲ್ಲಿ ಸುರಂಗ ಕೊರೆಯುತ್ತಿದ್ದರು. ಸುಮಾರು 30 ಅಡಿ ಆಳದ 8ಕ್ಕೂ ಹೆಚ್ಚು ಸುರಂಗಗಳನ್ನು ಕೊರೆದಿದ್ದಾರೆ. ಮೂವತ್ತು ವರ್ಷದ ಪ್ರಾಯದಲ್ಲಿರುವಾಗಲೇ ಮೊಂತೆರೊ, ಸುರಂಗ ಕೊರೆಯುವ ಕಾರ್ಯ ಆರಂಭಿಸಿದ್ದರು. ಜೀವನದುದ್ದಕ್ಕೂ ಸುರಂಗವನ್ನು ಕೊರೆದು ಜೀವಜಲಕ್ಕಾಗಿ ಅವರ ಹುಡುಕಾಟ ನಿರಂತರವಾಗಿ ಮುಂದುವರೆಯುತ್ತಿತ್ತು. ಇದೀಗ ಅವರ ಭಗೀರಥ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಅವರು ಕೊರೆದ ಸುರಂಗಗಳ ಪೈಕಿ ಮೂರು ಸುರಂಗಗಳಲ್ಲಿ ಇದೀಗ ಅಂತರ್ಜಲ ಇದೆ. ಸುರಂಗಗಳಿಂದ ನಿರಂತರ ಹರಿಯುತ್ತಿರುವ ಜಲಧಾರೆಯಿಂದ ಮೊಂತೆರೋ ಅವರ ಕೃಷಿ ಭೂಮಿ ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಅವರ ತೋಟದಲ್ಲಿ ತೆಂಗು ಕಂಗು, ಭತ್ತ, ಕಾಳು ಮೆಣಸು ಸಮೃದ್ಧವಾಗಿ ಬೆಳೆದು ನಿಂತಿವೆ. ಇದೀಗ 70ರ ಹರೆಯದಲ್ಲಿರುವ ಮೊಂತೆರೋ, ಈಗಲೂ ಸಹ ಕೃಷಿ ಕಾಯಕವನ್ನು ನಿಲ್ಲಿಸದೆ ದಿನವಿಡೀ ತಮ್ಮ ಜಮೀನಿನಲ್ಲಿ ಭೂತಾಯಿಯ ಸೇವೆಯನ್ನು ಮುಂದುವರೆಸಿದ್ದಾರೆ.ಕೃಷಿ ತೋಟ ಮಾಡುವ ಸವಾಲಿಗೆ ಎದುರಾಗಿದ್ದು ನೀರಿನ ಸಮಸ್ಯೆ. ಹೀಗಾಗಿ ನೀರಿನ ಸಮಸ್ಯೆಗೆ ತಾವು ಕಂಡುಕೊಂಡಿದ್ದು ಸುರಂಗ ಎಂದು ಹೇಳುತ್ತಾರೆ ಜಾನ್ ಮೊಂತೆರೋ.
ಮೊಂತೆರೋ ಅವರ ದಣಿವರಿಸಿದ ಈ ಉತ್ಸಾಹವನ್ನು ಕಂಡ ಗ್ರಾಮದ ಜನರ ಅವರನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ಜಾನ್ ಮೊಂತೆರೊ ಅವರ ಈ ಸಾಹಸಕ್ಕೆ ಪತ್ನಿ ದುರ್ಸಿನಾ ಸೋಜಾ ಮತ್ತು ಮಕ್ಕಳು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ.
ಕಷ್ಟಪಟ್ಟು ಛಲದಿಂದ ಭಗೀರಥ ಪ್ರಯತ್ನಪಟ್ಟು ಯಶಸ್ಸು ಸಾಧಿಸಿದ್ದು, ಅವರ ಕೆಲಸಕ್ಕೆ ಮಕ್ಕಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುತ್ತಾರೆ ಜಾನ್ ಮೊಂತೆರೋ ಪತ್ನಿ ದುರ್ಸಿನಾ ಸೋಜಾ.
ಒಟ್ಟಾರೆಯಾಗಿ ಜಾನ್ ಮೊಂತೆರೋ ತಮ್ಮ ಈ ವಿನೂತನ ಸಾಹಸದಿಂದಾಗಿ ಕರ್ನಾಟಕದ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದು, ಯುವಪೀಳಿಗೆಗೂ ಮಾದರಿಯಾಗಿದ್ದಾರೆ.
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…