ನಮ್ಮ ಮನೆಯಲ್ಲಿ ಔಷಧಿ ಬಿಡಲು ಅನಾದಿಕಾಲದಿಂದಲೂ ನಿಲಯದ ಕಲಾವಿದರಿದ್ದರು. ಹಾಗಾಗಿ ಮಳೆಗಾಲದ ಮಧ್ಯದಲ್ಲಿ ಬಿಸಿಲು ಕಾದಿದ್ದರೆ ನಮ್ಮ ತೋಟಕ್ಕೆ ರೋಗ ಇಲ್ಲ ಎಂದೇ ಹೇಳಬಹುದು. ಸುಮಾರು 30 ವರುಷದ ಹಿಂದೊಮ್ಮೆ, ಬಿಸಿಲು ಕಾಣದ ಮಳೆಗಾಲದಲ್ಲಿ ಭಾರಿ ರೋಗ ಬಂದಿತ್ತು. ಆ ನಂತರದಲ್ಲಿ ಮಹಾಳಿ ಸಮಸ್ಯೆಯಾಗುವಷ್ಟು ಬಂದದ್ದು 2018ರಲ್ಲಿ. ಕಾರಣ ನಿಲಯದ ಕಲಾವಿದರು ಸಾರ್ವಜನಿಕ ಕಲಾವಿದರಾದದ್ದು. ಹಾಗಾಗಿ ಅವರ ಬರುವಿಕೆಯನ್ನೇ ಕಾದು ಅಸಹಾಯಕರಾದದ್ದು.
ಮೊದಲ ಸಲ ಔಷಧಿ ಹೊಡೆಯುವ ಸಂದರ್ಭದಲ್ಲಿ ಕಲಾವಿದನೋರ್ವನ ಕಾಲಿಗೆ ಕತ್ತಿ ತಾಗಿದುದರಿಂದ ಆತ ಅಸಹಾಯಕನಾಗಿದ್ದ. ಹಾಗಾಗಿ ಹೊಸದಾಗಿ ತಂದ ದೋಟಿಯನ್ನು ವಲಸೆ ಕಾರ್ಮಿಕನೊಬ್ಬನಿಗೆ ಅಭ್ಯಾಸ ಮಾಡಿಸಿದೆ. ಹೆಚ್ಚಿನ ಆದಾಯದ ಆಸೆಯಿಂದ ಅವನಿಗೆ ಅದು ಬಹುವಾಗಿ ಹಿಡಿಸಿತು. ಇನ್ನೊಬ್ಬನ ಮನಸ್ಸಿಗೆ ತನಗೂ ದೋಟಿ ಒಂದು ಸಿಕ್ಕಿದರೆ ಆಗಬಹುದೆಂಬ ಆಸೆಯೂ ಹುಟ್ಟಿತು. ನಾನು ಮೊದಲ ಸಲ ತಂದದ್ದು ಹಾಸನದ ದೋಟಿ. ಅಂತಹುದೇ ಇನ್ನೊಂದು ದೋಟಿಯನ್ನು ಸಮೀಪದಲ್ಲೇ ತೆಗೆಯೋಣವೆಂದು ಹುಡುಕಾಡಿದೆ. ಆದರೆ ಗಮನಾರ್ಹವಾಗಿ ತೂಕದ ವ್ಯತ್ಯಾಸ, ಸ್ಪ್ರೇ ಪೈಪು ದೋಟಿಯ ಒಳಗಡೆಯಿಂದ ಚಲಿಸುವಾಗ ಹೊರತೆಗೆಯಲು ಮತ್ತು ಒಳ ಸೇರಿಸಲು ಇನ್ನೊಂದು ವ್ಯಕ್ತಿಯ ಸಹಾಯ ಅನಿವಾರ್ಯ ಎಂಬ ಕಾರಣದಿಂದ ಮತ್ತೆ ಪುನಃ ಹಾಸನದಿಂದಲೇ ತರಿಸಿದೆ.
ಹವಾಮಾನ ತಜ್ಞರಾದ ಮಿತ್ರರಿಬ್ಬರ ಪದೇ ಪದೇ ಎಚ್ಚರಿಕೆ, ( 21 ರಿಂದ 28ರ ಒಳಗಡೆ ಸದವಕಾಶ) ಅನಪೇಕ್ಷಿತ ಅತಿಥಿ ಮಹಾಳಿಯ ಒಂದೆರಡು ಮರದ ಪಾದಾರ್ಪಣೆ ನನ್ನನ್ನು ಮತ್ತೆ ಎರಡು ಸಾವಿರದ ಹದಿನೆಂಟರ ನೆನಪಿನಂಗಳಕ್ಕೆ ತಂದಿತು. ಕಲಾವಿದನೋರ್ವನ ಆರೋಗ್ಯ ಇನ್ನೂ ಸುಧಾರಿಸದೆ ಇರುವುದರಿಂದ, ಒಬ್ಬನನ್ನೇ ನಂಬಿ ಕುಳಿತರೆ ಈ ವರ್ಷದ ಅಡಿಕೆ ಫಸಲು ಗಗನ ಕುಸುಮವೇ ಆಗಬಹುದೆಂದು ಎರಡೂ ದೋಟಿಯನ್ನು ವಲಸೆ ಕಾರ್ಮಿಕರ ಕೈಗಿತ್ತು ಅಭ್ಯಾಸಕ್ಕೆ ಮುಂದಾದೆ. ಆರಂಭದಲ್ಲಿ ಹೊಸಬ ಸ್ವಲ್ಪ ಚಡಪಡಿಸಿದರೂ ಅಭ್ಯಾಸವಾಯಿತು.
ನಮ್ಮ ತೋಟ ಹಳೆಯದೋ ಹಳೆಯದು. ಪ್ರತಿಸರ್ತಿಯು ಮೂರು ಅಂತರದಲ್ಲಿ ದೋಟಿಯನ್ನು ಏರಿಳಿಸಬೇಕಾಗುತ್ತದೆ. ದೋಟಿ ತೆಗೆದುಕೊಂಡು ಹೋಗುವ ಸಾಲಲ್ಲಿ ಬಾಳೆ ಇದ್ದರೆ, ಕಾರ್ತವೀರ್ಯನ ಕೈಗಳನ್ನು ಕಡಿದಂತೆ ಕೊಕ್ಕೋ ಕೊಯ್ಯುವ ಕತ್ತಿಯಲ್ಲಿ ಕೈಗಳನ್ನು ತುಂಡರಿಸುವುದು ಬಲು ಅನುಕೂಲ. ಕೋಕೋ ಮರಗಳು ತುಂಬಾ ಇರುವ ತೋಟದಲ್ಲಿ ಸ್ವಲ್ಪ ಅನಾನುಕೂಲವೇ ಆಗಬಹುದು. 5 ಅಡಿಯ ಮನುಷ್ಯರಿಗೆ 15 ಅಡಿಯ ಮೇಲಿರುವ ಕೊಕ್ಕೋ ಮರಗಳಿಂದಾಗಿ, ಎತ್ತರದ ಅಡಿಕೆ ಗೊನೆಗಳ ಅಗೋಚರವೇ ಬಲು ದೊಡ್ಡ ಸಮಸ್ಯೆ. ದೂರ ದೂರದಲ್ಲಿ ಕೊಕ್ಕೋ ಮರದ ಸಾಲಿದ್ದರೆ ಸುದಾರಿಸಬಹುದು. 60 ಅಡಿಯ ಒಳಗಿನ ಮರಗಳಿಗೆ ಆರಾಮ. ಅದರಿಂದ ಮೇಲಿನ ಮರಗಳಿಗೆ ಸ್ವಲ್ಪ ಬಳುಕುವಿಕೆಯಿಂದಾಗಿ ಔಷಧಿ ಖರ್ಚು ಜಾಸ್ತಿ ಬರಬಹುದು. ಮಹಾಳಿಯಿಂದಾಗಿ ಅಡಿಕೆ ಉದುರುವಾಗ ತಲೆ ಮೇಲೆ ಕೈಯಿಟ್ಟು ಕುಳಿತು ನೋಡುವುದರ ಎದುರು ಇದು ನಗಣ್ಯ. ಆರು ಗಂಟೆಯ ಹೊತ್ತಿನಲ್ಲಿ ಒಬ್ಬ ಮುನ್ನೂರ ಐವತ್ತು ಮರಗಳಿಗೆ ಔಷಧಿ ಹೊಡೆಯುತ್ತಾನೆ. ಇದು ಹೆಚ್ಹೋ ಕಡಿಮೆಯೋ ಅನುಭವಿಗಳೇ ಹೇಳಬೇಕಷ್ಟೆ. ಈ ವರ್ಷದ ದೋಟಿ ತರಬೇತಿ ಶಿಬಿರಗಳು ಅಡಿಕೆ ಕೃಷಿಕರ ಮನದಲ್ಲಂತೂ ಉತ್ಸಾಹ ತುಂಬಿದ್ದು ನಿಶ್ಚಯ. ದೋಟಿ ಅಡಿಕೆ ಕೃಷಿಕನ ಪಾಲಿಗಂತೂ ವರ. ಪ್ರತಿ ಕೃಷಿಕನ ಮನೆಯಲ್ಲಿ ಇರಲೇ ಬೇಕಾದ ಒಂದು ವಸ್ತು ಎಂಬುದರಲ್ಲಿ ಎರಡು ಮಾತಿಲ್ಲ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…