ಪ್ರತಿಯೊಬ್ಬ ಪ್ರಜೆಯೂ ರಾಜ್ಯದ ಅಂದರೆ ಸರಕಾರದ ಒಕ್ಕಲು. ನಿಮ್ಮಲ್ಲಿ ಏನೆಲ್ಲಾ ಇದೆಯೋ ಅದನ್ನು ಅನುಭೋಗಿಸಲು ಗೇಣಿ ಕೊಡಬೇಕು. ಅಂದರೆ ತೆರಿಗೆ ಕಟ್ಟಬೇಕು. ಆ ತೆರಿಗೆಯನ್ನು ಕಟ್ಟದೆ ನಿಮಗೆ ನಿಮ್ಮದೇ ಆದ ಭೂ, ಜಲ, ಧನ, ಧಾನ್ಯ ಹಾಗೂ ಠೇವಣಿ ಹಣದ ಸಂಪತ್ತನ್ನು ಕೂಡಾ ಅನುಭವಿಸುವ ಹಕ್ಕಿಲ್ಲ. ಸರಕಾರಕ್ಕೆ ಸಲ್ಲಿಸಬೇಕಾದ್ದನ್ನು ಕೊಡದಿದ್ದರೆ ಬದುಕಬಹುದು. ಆದರೆ ಯಾವುದಾದರೂ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ ಅಥವಾ ನಿಮ್ಮ ಆಸ್ತಿ ಹಣ ಇತ್ಯಾದಿಗಳ ವಿಲೇವಾರಿ ಮಾಡುವುದಿದ್ದರೆ ಆಗ ನಿಮ್ಮ ತಪ್ಪು ಕಂಡು ಬರುತ್ತದೆ ಮತ್ತು ಅದು ಅಡ್ಡ ನಿಲ್ಲುತ್ತದೆ.
ನಿಮಗೆ ನಿಮ್ಮ ಆಸ್ತಿಯನ್ನು ಮಾರಬೇಕಾ? ಹಾಗಿದ್ದರೆ ಕಂದಾಯ ಇಲಾಖೆಯ ಕಂಪೂಟರ್‍ನಲ್ಲಿ ಪರಿಶೀಲಿಸಿ ನೋಡಿ. ಈ ಪರಿಶೀಲನೆ ನಿಮ್ಮಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ ಅದನ್ನು ನೋಡಿ ಹೇಳುವ ಮಧ್ಯವರ್ತಿಗಳು ಇರುತ್ತಾರೆ. ಆಸ್ತಿ ಮಾರಾಟದ ರೆಕಾರ್ಡ್ ಮಾಡಿಸುವ ಲಾಯರ್‍ಗಳು ಅಥವಾ ಬರವಣಿಗೆದಾರರು ಇರುತ್ತಾರೆ. ಅವರಿಗೆ ಸರಕಾರಿ ಕಂಪ್ಯೂಟರ್ ಆಪರೇಟರ್‍ಗಳ ಪಕ್ಕ ಹೋಗಿ ನಿಂತು ಪರಿಶೀಲಿಸುವಷ್ಟು ಸಲಿಗೆ ಇರುತ್ತದೆ. ನೀವು ಎಲ್ಲಿಯಾದರೂ ಯಾವಾಗಲಾದರೂ ಸರಕಾರಕ್ಕೆ ಕಟ್ಟಬೇಕಾಗಿದ್ದ ಹಣ ಬಾಕಿ ಇರುವುದು ಅದರಲ್ಲಿ ಪತ್ತೆಯಾಗುತ್ತದೆ. ಅದನ್ನು ನೀವು ಕೊಡಬೇಕು ಹಾಗೂ ಬಾಕಿ ಉಳಿಸಿಕೊಂಡ ತಪ್ಪಿನ ದಂಡವನ್ನು ಕಟ್ಟಬೇಕು. ಆ ಮೇಲಷ್ಟೇ ನೀವು ನಿಮ್ಮ ಆಸ್ತಿ ಮಾರಾಟದ ಹಕ್ಕನ್ನು ಪಡೆಯುತ್ತೀರಿ.
ಈ ಮಾರಾಟ ಜಾಲದೊಳಗೆ ಸಿಲುಕದ ಪ್ರಾಣಿಗಳಿಗೆ ಇದು ತಿಳಿಯದು. ಆದರೆ ಪ್ರತಿಯೊಬ್ಬರೂ ಒಂದಲ್ಲ ಒಂದು ಜಾಲದೊಳಗೆ ಸಿಲುಕಿರುತ್ತಾರೆ. ಒಂದು ಉದಾಹರಣೆ ನೋಡೋಣ. ಒಬ್ಬರು ತನ್ನ ಹಳೆಯದಾದ ಕಾರನ್ನು ಮಾರಬೇಕೆಂದಿದ್ದಾರೆ. ವಿಶ್ವಾಸಾರ್ಹ ಗಿರಾಕಿಗಳೂ ಸಿಗುತ್ತಾರೆ. ಕಾರಿನ ಆರ್.ಸಿ ಹಾಗೂ ಇತರ ದಾಖಲೆಗಳನ್ನು ಕೊಟ್ಟು ಪರಾಭಾರೆಗಾಗಿ RTO ಕಚೇರಿಗೆ ಅಲೆದಾಟ ನಿಮ್ಮಿಂದ ಆಗುವುದಿಲ್ಲ. ಆಗ ಮಧ್ಯವರ್ತಿಗಳನ್ನು ಸಂಪರ್ಕಿಸುತ್ತೀರಿ. ಅವರು “ನಿಮ್ಮ ಕೆಲಸ ಆಯಿತೆಂದೇ ತಿಳಿಯಿರಿ” ಎಂದು ಹಿತವೆನ್ನಿಸುವ ಮಾತುಗಳನ್ನಾಡುತ್ತಾರೆ. ಆದರೆ ವಾಹನ ಚಲಾಯಿಸುವ ಸಂದರ್ಭದಲ್ಲಿ ನೀವು ಮಾಡಿದ ತಪ್ಪುಗಳಿಗಾಗಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ವಿವರಗಳು ಕಂಪ್ಯೂಟರ್‍ನಲ್ಲಿ ಸಿಗುತ್ತವೆ. ನಿಮ್ಮ ವಾಹನ ತಿರುಪತಿಗೆ ಹೋಗಿದ್ದರೆ ಆಂಧ್ರಪ್ರದೇಶದಲ್ಲಿ ದಂಡ ಕಟ್ಟಲು ಬಾಕಿ ಇಟ್ಟುಕೊಂಡದ್ದೂ ಪತ್ತೆಯಾಗುತ್ತದೆ. ನಿನಗೆ ಅದು ಗೊತ್ತೇ ಇರುವುದಿಲ್ಲ; ನೆನಪೂ ಇರುವುದಿಲ್ಲ. ಏಕೆಂದರೆ ಅಂತ ಘಟನೆ ನಿಮಗೆ ಎದುರಾಗಿರುವುದೇ ಇಲ್ಲ. ಬದಲಾಗಿ ಅಲ್ಲಿ ಸಿ.ಸಿ. ಕೆಮರಾದಲ್ಲಿ ನಿಮ್ಮ ತಪ್ಪು ಪೊಲೀಸ್ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿರುತ್ತದೆ. ಆ ದಂಡವನ್ನು ಕಟ್ಟದ ಹೊರತು ಇಲ್ಲಿ ನಿಮ್ಮ ವಾಹನದ ಮಾರಾಟಕ್ಕೆ ಆಡಚಣೆಯಾಗುತ್ತದೆ. ಆದರೆ ಆ ಹಣವನ್ನು ಇಲ್ಲಿ ಕಟ್ಟಲು ಆಗುವುದಿಲ್ಲ. ಬದಲಾಗಿ ತಿರುಪತಿಯಲ್ಲೇ ಕಟ್ಟುವ ವ್ಯವಸ್ಥೆಯಾಗಬೇಕು. ಅದಕ್ಕೊಂದಿಷ್ಟು ಹಣ ಖರ್ಚಾಗುತ್ತದೆ. ಈ ಅನಿರೀಕ್ಷಿತ ವೆಚ್ಚಕ್ಕೆ ನೀವು ತಯಾರಾಗಿರಬೇಕು. ಅಥವಾ ಮಧ್ಯವರ್ತಿಗಳಿಗೆ ನೀವು ಹೆಚ್ಚಿನ ಹಣ ನೀಡಬೇಕು. ಆಧುನಿಕ ತಾಂತ್ರಿಕತೆ ಅಭಿವೃದ್ಧಿಯಾದ ಬಳಿಕ ನಗರಗಳಲ್ಲಿ ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಎಂಬ ಫಲ ಇದ್ದಲ್ಲಿ ಕಾರುನಿಲ್ದಾಣದ ಫೋಟೋಗಳು ನಿಮ್ಮ ನಾಗರಿಕ ಜವಾಬ್ದಾರಿಯ ಮರೆವಿಗೆ ಸಾಕ್ಷಿಯಾಗುತ್ತವೆ. ಈ ತಪ್ಪುಗಳು ನಿಮ್ಮಿಂದಲ್ಲೇ ಆಗಿರಬೇಕಾಗಿಲ್ಲ. ನಿಮ್ಮ ಸಂಬಂಧಿಗಳು ಅಥವಾ ಡ್ರೈವರ್‍ಗಳಿಂದ ಆಗಿರಬಹುದು. ಆದರೆ ತಪ್ಪು ತಪ್ಪೇ. ವಾಹನದ ಮಾಲಕರೇ ತಪ್ಪಿತಸ್ಥರು. ಅದಕ್ಕೆ ದಂಡ ಕಟ್ಟಲೇಬೇಕು. ಕಟ್ಟುವುದಿಲ್ಲವಾದರೆ ಆ ವಾಹನ ಮಾರಾಟಕ್ಕೆ ಅನುಮತಿ ಸಿಗುವುದಿಲ್ಲ. ಅಂದರೆ ನಿಮ್ಮ ಸ್ವಂತ ಗಾಡಿ ಪೂರ್ಣವಾಗಿ ನಿಮ್ಮದಲ್ಲ. ಅದು ಭಾಗಶಃ ಸರಕಾರದ್ದು. ಸರಕಾರಕ್ಕೆ ಬಹುವಿಧದಲ್ಲಿ ಆದಾಯ ಸಲ್ಲುತ್ತದೆ.
ಬೇಂಕ್‍ನಲ್ಲಿ ನಿಮ್ಮ ಠೇವಣಿ ಇದ್ದರೆ ಅದಕ್ಕೆ ಬಡ್ಡಿ ಸಿಗುತ್ತದೆ. ಒಂದು ವರ್ಷ ಕಳೆದಾಗ ಅದಕ್ಕೆ ಬಡ್ಡಿ ಸಹಿತವಾಗಿ Maturity Value ಎಂತ ಬರೆದಿರುತ್ತಾರೆ. ಆ ಅವಧಿ ಕಳೆದಾಗ ಅದು ತನ್ನಿಂದ ತಾನೇ renewal ಆಗುತ್ತದೆ. ಬೇಂಕ್ ಇಷ್ಟು ಸೇವೆಯನ್ನು ನಿಮಗೆ ಯಾವುದೇ ಶ್ರಮವಿಲ್ಲದೆ ಮಾಡಿ ಕೊಡುತ್ತದೆ ಎಂತ ನೀವು ಎಣಿಸಿರುತ್ತೀರಿ. ಹಳೆಯ ಠೇವಣಿ ಪತ್ರವನ್ನು ಕೊಟ್ಟು ಹೊಸತನ್ನು ತರುವುದಷ್ಟೇ ನಿಮ್ಮ ಕೆಲಸ. ಆದರೆ ಹಳೆಯ ಠೇವಣಿ ಪತ್ರದಲ್ಲಿ ನಮೂದಾಗಿರುವ Maturity Valuel ಹೊಸ ಠೇವಣಿ ಪತ್ರದಲ್ಲಿ ಮೂಲಧನವಾಗಿರುವುದಿಲ್ಲ. ಅದಕ್ಕಿಂತ ಕಡಿಮೆ ಇದೆಯೆಂಬುದು ನಿಮ್ಮ ಗಮನಕ್ಕೆ ಬರುವುದಿಲ್ಲ. ಒಂದು ವೇಳೆ ಪರಿಶೀಲಿಸಿ ವಿಚಾರಿಸಿದರಷ್ಟೇ ನಿಮಗೆ ಸಿಕ್ಕಿದ ಬಡ್ಡಿಯ ಪೂರ್ಣ ಹಕ್ಕುದಾರರು ನೀವಲ್ಲವೆಂದು ತಿಳಿಯುತ್ತದೆ. ಅದು Tax Deducted at source (TDS) ಗೆ ಮುರಿಯಲ್ಪಟ್ಟಿರುತ್ತದೆ. ಅಂದರೆ ಸರಕಾರಕ್ಕೆ ಹೋಗಿರುತ್ತದೆ. ಈ ಕೆಲಸವನ್ನು ಕಂಪ್ಯೂಟರ್‍ಗಳೇ ಮಾಡುತ್ತವೆ. ಬೇಂಕ್ ಮೇನೇಜರ್‍ರಲ್ಲಿ ಕೇಳಿದರೆ, “ಹೌದು ಸರ್, ಆ ವ್ಯತ್ಯಾಸ ಬರುತ್ತದೆ. ಆದ್ರೆ ಅದನ್ನು ಕಂಪ್ಯೂಟರ್ರೇ ಮಾಡುತ್ತದೆ. ನಾವಲ್ಲ ಮಾಡೋದು” ಎಂದು ಜಾಣ್ಮೆ ಪ್ರದರ್ಶಿಸುತ್ತಾರೆ. ಆದರೆ ಇಲ್ಲಿ ತಿಳಿಯುವ ವಾಸ್ತವವೆಂದರೆ ನಿಮ್ಮದ್ದಾದ ಠೇವಣಿಯ ಗಳಿಕೆಯಲ್ಲಿಯೂ ಸರಕಾರಕ್ಕೆ ತೆರಿಗೆ ಸಲ್ಲುತ್ತದೆ.
ತೆರಿಗೆ ವಸೂಲಿ ಮಾಡುವುದು ಸರಕಾರಕ್ಕೆ ಅನಿವಾರ್ಯ. ಅದನ್ನು ಪ್ರಶ್ನಿಸುವಂತಿಲ್ಲ. ಆದರೆ ಅದರ ವಸೂಲಿಯಲ್ಲಿ ಸಿಕ್ಕಿಸಿ ಹಾಕುವ ವಿದ್ಯಮಾನವು ವಾಹನಗಳ ಒಡೆತನ ಇದ್ದವರನ್ನು ಹೆಚ್ಚು ಬಾಧಿಸುತ್ತದೆ. ಮಧ್ಯವರ್ತಿಗಳು ಹೆಚ್ಚು ಬೆಳೆಯುವುದೇ ಇಲ್ಲಿ. ವಾಹನಗಳಿಗೆ ಸಂಬಂಧಿಸಿದ ಯಾವುದೇ ಹೊಸ ಕಾನೂನು ಬಂದರೂ ಅದು ಅವರಿಗೆ ಲಾಭದಾಯಕ. ನಿರ್ದಾಕ್ಷಿಣ್ಯವಾಗಿ ಗಿರಾಕಿಗಳನ್ನು ಸುಲಿಯುತ್ತಾರೆ ಮತ್ತು ಹೀರುತ್ತಾರೆ. ಇದಕ್ಕೆ ಕಚೇರಿಯೊಳಗಿನ ಅಧಿಕಾರಿಗಳೂ ಬೆಂಬಲ ನೀಡುತ್ತಾರೆ. ಏಕೆಂದರೆ ಅವರಿಗೂ ಇದೊಂದು ಗುಪ್ತ (ಲೆಕ್ಕಕ್ಕೆ ಸಿಗದ) ಆದಾಯದ ಮೂಲ. ಅಂತಹ ಯಾವುದೇ ಹೊಸ ನಿಯಮಗಳು ಆಗಿರುವುದು ಜನರ ಗಮನಕ್ಕೆ ಬರುವುದಿಲ್ಲ. ಅದು ಗೊತ್ತಾಗುವುದು ವ್ಯವಹಾರಕ್ಕೆ ಇಳಿದಾಗಲೇ. ಉದಾಹರಣೆಗೆ ಆಂಗ್ಲ ಮಾಧ್ಯಮದ ಹುಚ್ಚು ಇರುವ ಇಂದಿನ ದಿನಗಳಲ್ಲಿ ಇಂಗ್ಲಿಷ್ ಮಿಡಿಯಂ ಶಾಲೆಯೊಂದನ್ನು ತೆರೆದರೆ ಮಕ್ಕಳನ್ನು ಸೇರಿಸಲು ಪೋಷಕರು ಬರುತ್ತಾರೆ. ಹೇಳಿದಷ್ಟು ಶುಲ್ಕ ನೀಡಿ ಮಕ್ಕಳನ್ನು ಸೇರಿಸುತ್ತಾರೆ. ಶಾಲೆಯೂ ನಡೆಯುತ್ತದೆ. ಆದರೆ ಅದು ಅಧಿಕೃತವೊ ಅನಧಿಕೃತವೋ ಎಂಬುದು ತಿಳಿಯುವುದು ಅಲ್ಲಿಂದ ಮಗುವಿನ ವರ್ಗಾವಣೆ ಪತ್ರ ಪಡೆದಾಗಲೇ, ಅಂದರೆ ಶಾಲೆ ಇನ್ನೂ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯದೆ ನಡೆಯುತ್ತಿದ್ದರೆ ಅದು ನೀಡುವ ವರ್ಗಾವಣೆ ಪತ್ರ ಇನ್ನೊಂದು ಶಾಲೆಯಲ್ಲಿ ಮಾನ್ಯವಾಗುವುದಿಲ್ಲ. ಆದರೆ ಅಷ್ಟು ಹೊತ್ತಿಗೆ ನಿಮ್ಮ ಮಗುವಿನ ಮೂರು ನಾಲ್ಕು ವರ್ಷಗಳೇ ಕಳೆದಿರುತ್ತವೆ. ಆ ನ್ಯೂನತೆಯ ನಿವಾರಣೆ ಖರ್ಚು ಇಲ್ಲದೆ ಆಗುವುದಿಲ್ಲ. ಆ ಶಾಲೆಯವರೇ ಅದನ್ನು ಮಾಡಬೇಕು. ಅದಕ್ಕಾಗಿ ಹೆತ್ತವರಿಂದಲೇ ಮತ್ತೊಮ್ಮೆ ವಸೂಲಿ ಕೇಳಿದರೆ ಮಗುವಿನ ಹಿತ ದೃಷ್ಠಿಯಿಂದ ಕೊಡಲೇಬೇಕಾಗುತ್ತದೆ. ಹಾಗಿದ್ದರೆ ನಾಲ್ಕು ವರ್ಷಗಳಿಂದ ಶಾಲೆ ಹೇಗೆ ನಡೆಯಿತು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಾಗೆ ನಡೆಸಿದ್ದು ತಪ್ಪು ಎಂದಷ್ಟೇ ಉತ್ತರ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ 993 ಅನಧಿಕೃತ ಶಾಲೆಗಳು ಇವೆ ಎಂಬುದಾಗಿ ವಿಧಾನ ಸಭೆಯಿಂದಲೇ ಬಂದ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ. ಅವು ಹೆಚ್ಚಾಗಿ ಕಂಡು ಬಂದಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ. ಅಂದರೆ ನಗರಗಳ ಹೊರ ಭಾಗಗಳಲ್ಲಿ ಜನರಿಗೆ ತಮ್ಮ ಬಡಾವಣೆಯ ಸಮೀಪವೇ ಒಂದು ಇಂಗ್ಲಿಷ್ ಮೀಡಿಯಂ ಶಾಲೆ ತೆರೆಯಲ್ಪಟ್ಟರೆ ಅದೇ ದೊಡ್ಡ ಲಾಭ. ಅದು ಅಧಿಕೃತವೋ ಎಂಬುದನ್ನು ವಿಚಾರಿಸುವುದಿಲ್ಲ. ಉದಾಹರಣೆಗೆ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 141, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 172, ರಾಮನಗರ ಜಿಲ್ಲೆಯಲ್ಲಿ 120, ರಾಯಚೂರು ಜಿಲ್ಲೆಯಲ್ಲಿ 101 ಹೀಗೆ ನಗರಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಅನಧಿಕೃತ ಶಾಲೆಗಳು ಹುಟ್ಟಿಕೊಂಡಿವೆ. ಆದರೆ ಶಿಕ್ಷಣ ಇಲಾಖೆ ಏನು ಮಾಡುತ್ತಿತ್ತು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅನಧಿಕೃತ ಶಾಲೆಗಳು ನಡೆಯುತ್ತಿರುವುದು ಕಂಡು ಬಂದರೆ ನಿಯಾಮಾನುಸಾರ ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಂಡು ಪೊಲೀಸ್ ಇಲಾಖೆಯ ಸಹಾಯ ಪಡೆದು ಅವುಗಳನ್ನು ಮುಚ್ಚಿಸುವ ಹಕ್ಕು ಶಿಕ್ಷಣ ಇಲಾಖೆಗೆ ಇದೆ. ಆದರೆ ಆಡಳಿತ ಮಂಡಳಿಗಳು ನೀಡುವ ಪ್ರಲೋಭನೆ ಹಾಗೂ ರಾಜಕೀಯ ಶಕ್ತಿಗಳ ಪ್ರಭಾವದಿಂದ ಶಿಕ್ಷಣ ಇಲಾಖೆ ಸುಮ್ಮನೇ ಕುಳಿತಿದ್ದರೆ ಕೊನೆಗೆ ತಪ್ಪು ಅವರದ್ದಾಗುವುದಿಲ್ಲ. ಅದು ಶಾಲೆಗೆ ಮಗುವನ್ನು ಸೇರಿಸಿದ ಪೋಷಕರದ್ದೇ ಆಗುತ್ತದೆ. ಏಕೆಂದರೆ ಕಾನೂನಿನ ಅಜ್ಞಾನ ಕ್ಷಮೆಗೆ ಅರ್ಹವಾಗುವುದಿಲ್ಲ.
ಈಗ ಪ್ರಶ್ನೆ ಇರುವುದು ಕಾನೂನು ಮಾಡುವುದು ಯಾರು ಮತ್ತು ಅದರ ಹಿಂದೆ ಇರುವ ಮನಸ್ಸು ಯಾವುದು? ಅದಕ್ಕೊಂದು ಉದಾಹರಣೆಯೇ ಬಸ್ಸುಗಳ ಫಿಟ್‍ನೆಸ್ ಸರ್ಟಿಫಿಕೇಟ್. ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣದಂತಹ ಘಟನೆಗಳನ್ನು ನಿಯಂತ್ರಿಸಲು ಬಸ್ ಗಳಲ್ಲಿ Panic Button ಹಾಕಿಸಬೇಕೆಂಬ ನ್ಯಾಯಾಲಯದ ಆಜ್ಞೆ ಬಂತು. ಅದರ ನೆಪವಾಗಿ ಈಗ 2024ರಲ್ಲಿ ಅದನ್ನು ಅಳವಡಿಸಲು ಸಾರಿಗೆ ಇಲಾಖೆ ಅಡಿಯಿಟ್ಟಿದೆ. ಅದರ ಪ್ರಕಾರ ಒಂದು ಬಸ್ಸಿನಲ್ಲಿ ಎಷ್ಟು Panic Button ಇರಬೇಕೆಂಬುದನ್ನು ಅಧಿಕಾರಿಗಳು ನಿರ್ಧರಿಸುತ್ತಾರೆ. ಅಂದರೆ ಪ್ರತಿಯೊಬ್ಬ ಪ್ರಯಾಣಿಕನಿಗೂ ಅಗತ್ಯವಿದ್ದಾಗ ಒತ್ತಲು ಇದು ಲಭ್ಯವಾಗುವಷ್ಟು ಇರಬೇಕಿತ್ತು. ಆದರೆ ಸದ್ಯದ ನಿಯಮ ಅಷ್ಟೊಂದು ಅನುಕೂಲವಾಗಿಲ್ಲ. ಆದರೆ ಅದು ಇರಲೇಬೇಕು. ಅದನ್ನು ನಿರ್ದಿಷ್ಟ ಕಂಟ್ರಾಕ್ಟರ್‍ರಿಂದಲೇ ಹಾಕಿಸಬೇಕು. ಹೇಳಿದಷ್ಟು ದುಡ್ಡು ಕೊಡಬೇಕು. ಇದರೊಳಗಿನ ಕಮಿಶನ್ ಅಧಿಕಾರಿಗೆ ಎಷ್ಟೆಂದು ಯಾರೂ ಹೇಳುವವರಿಲ್ಲ. ಅಂತೂ ಬಸ್ಸು ಖರೀದಿಸಿದವರಿಗೆ ಏನೂ ಪ್ರಯೋಜನವಿಲ್ಲದ ಇದೊಂದು ಅನವಶ್ಯಕ ವೆಚ್ಚ. ಯಾರದೋ ಹೊಟ್ಟೆ ತುಂಬಿಸಲು ಈ ಬಗೆಯಲ್ಲಿ ಕಾನೂನಿನ ಹೇರಿಕೆ ನಿಜಕ್ಕೂ ವಿದ್ಯಾವಂತ ಸಮಾಜಕ್ಕೆ ಭೂಷಣ ಅಲ್ಲ. ಆದರೆ ಇಂತಹ ಒಂದು ಫಿಟ್‍ನೆಸ್ ಸರ್ಟಿಫಿಕೇಟ್ ಇಲ್ಲದೆ ‘ಫಿಟ್’ ಆಗಿರುವ ಹೊಸ ಬಸ್ಸು ಕೂಡಾ ರಸ್ತೆಯಲ್ಲಿ ತಪಾಸಣೆಗೆ ಸಿಕ್ಕಿದರೆ ಸರ್ಟಿಫಿಕೇಟ್ ಇಲ್ಲವೆಂಬ ಕಾರಣಕ್ಕೆ ಹೇಳಿದಷ್ಟು ದಂಡ ತೆರಬೇಕಾಗುತ್ತದೆ. ಅದು ಹೆಚ್ಚೆನಿಸಿದರೆ ವಾಹನವನ್ನು ಬಿಡಿಸಿಕೊಳ್ಳುವ ಬೇರೆ ಉಪಾಯವನ್ನು ಹುಡುಕಬೇಕಾಗುತ್ತದೆ. ಅದು ಲಂಚವೂ ಆಗಬಹುದು, ಅಥವಾ ರಾಜಕಾರಣಿಗಳ ಪ್ರಭಾವವೂ ಆಗಬಹುದು. ಆದರೆ ಎರಡೂ ಕೂಡಾ ಕಾಲಾಂತರದಲ್ಲಿ ಖರ್ಚಿನ ದಾರಿಗಳೇ. ಅಂದರೆ ನ್ಯಾಯಬದ್ಧವಾಗಿದ್ದರೂ ಮಾರ್ಗ ತುಳಿಯ ಬೇಕಾದಂತಹ ಕಾನೂನುಗಳ ಜಾಲ ನಮ್ಮನ್ನು ಆವರಿಸುತ್ತದೆ. ಶಾಲೆಗಳಿಗೆ ಅಗ್ನಿ ಸುರಕ್ಷೆಯನ್ನು ಅಳವಡಿಸುವ ನಿಯಮವೂ ಹೀಗೆಯೇ ಸುಲಿಯುವ ಉಪಾಯವಾಗಿದೆ. ಅಗ್ನಿ ಅವಘಡಗಳು ಆದಾಗ ಉಪಯೋಗಕ್ಕೆ ಬರುವಷ್ಟು ಸಮರ್ಪಕವಾಗಿಲ್ಲದ ರೀತಿಯಲ್ಲಿ ಅಳವಡಿಸಿದ ವ್ಯವಸ್ಥೆಗಳು ನಿರ್ವಹಣೆಗೆ ಕಷ್ಟವೇ. ಬೆಂಕಿ ಬಿದ್ದಾಗ ಕೊನೆಗೂ ಅಗ್ನಿಶಾಮಕ ದಳ ಬರಲೇಬೇಕು. ಹೀಗೆ ಸ್ವಾರ್ಥಕ್ಕಾಗಿ ಅಧಿಕಾರಿಗಳು ಹೂಡುವ ನಿಯಮಗಳ ಜಾಲದಲ್ಲಿ ಜನಸಾಮಾನ್ಯರು ಬಸವಳಿಯುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….


