ನಾವು ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆದಾಗ ಮನಸ್ಸು ಹಗುರವಾದಂತೆ ಅನಿಸುತ್ತದೆ. ಆತಂಕ ಕಡಿಮೆಯಾಗಿ, ಉಸಿರಾಟ ಸಹಜವಾದಂತೆ ಭಾಸವಾಗುತ್ತದೆ. ಇದು ಕೇವಲ ನಮ್ಮ ಅನುಭವವೇ? ಅಥವಾ ಪ್ರಕೃತಿಯು ನಿಜವಾಗಿಯೂ ನಮ್ಮ ದೇಹದ ಕೆಲವು ಜೈವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆಯೇ?. ಕಾಡಿನಲ್ಲಿ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುವ ಜೊತೆಗೆ ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗಬಹುದೆಂದು ಕೆಲವು ವೈಜ್ಞಾನಿಕ ಅಧ್ಯಯನಗಳು ಸೂಚಿಸಿವೆ.
ಜಪಾನ್ನ ಟೋಕಿಯೊದಲ್ಲಿರುವ ನಿಪ್ಪಾನ್ ವೈದ್ಯಕೀಯ ಶಾಲೆಯ ರೋಗನಿರೋಧಕ ಶಾಸ್ತ್ರಜ್ಞ ಡಾ. ಕ್ವಿಂಗ್ ಲಿ ಅವರು ಕಾಡಿನಲ್ಲಿ ಸಮಯ ಕಳೆಯುವುದು ಮಾನವ ದೇಹದ ಮೇಲೆ ಬೀರುವ ಪರಿಣಾಮಗಳ ಕುರಿತು ಸಂಶೋಧನೆ ನಡೆಸಿದ್ದಾರೆ. ಅವರ ಅಧ್ಯಯನಗಳಲ್ಲಿ ಕಾಡಿನ ವಾತಾವರಣದಲ್ಲಿ ಸಮಯ ಕಳೆದವರಲ್ಲಿ ನ್ಯಾಚುರಲ್ ಕಿಲ್ಲರ್ ಸೆಲ್ಸ್ ಚಟುವಟಿಕೆ ಹೆಚ್ಚಿರುವುದು ಕಂಡುಬಂದಿದೆ. ಈ ಕೋಶಗಳು ವೈರಸ್ಗಳಿಂದ ಸೋಂಕಿತಗೊಂಡ ಕೋಶಗಳನ್ನು ಗುರುತಿಸಿ ನಾಶಪಡಿಸುವ ದೇಹದ ರಕ್ಷಣಾ ವ್ಯವಸ್ಥೆಯ ಭಾಗವಾಗಿವೆ.
ಮರಗಳಿಂದ ಹೊರಬರುವ ಫೈಟೋನ್ಸೈಡ್ಗಳ ಪಾತ್ರವೇನು? : ಮರಗಳು ಮತ್ತು ಇತರ ಸಸ್ಯಗಳು ಫೈಟೋನ್ಸೈಡ್ಗಳು (Phytoncides) ಎಂದು ಕರೆಯಲಾಗುವ ಕೆಲವು ನೈಸರ್ಗಿಕ ಬಾಷ್ಪಶೀಲ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಸಸ್ಯಗಳ ರಕ್ಷಣೆಯಲ್ಲಿ ಪಾತ್ರವಹಿಸುವ ಈ ಸಂಯುಕ್ತಗಳು ಮಾನವ ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಸಂಶೋಧನೆ ನಡೆದಿದೆ.
ಕೆಲವು ಸಣ್ಣ ಅಧ್ಯಯನಗಳಲ್ಲಿ ಮರಗಳಿಂದ ದೊರೆಯುವ ತೈಲದ ಆವಿಯನ್ನು ಉಸಿರಾಡುವುದರಿಂದ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್ಗಳ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಈ ಫಲಿತಾಂಶಗಳನ್ನು ಎಲ್ಲ ರೀತಿಯ ಕಾಡುಗಳು, ಎಲ್ಲ ಜನರು ಮತ್ತು ಎಲ್ಲ ಪರಿಸ್ಥಿತಿಗಳಿಗೆ ಅನ್ವಯಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಅರಣ್ಯ ಪ್ರವಾಸದ ವೇಳೆ ನಡೆದ ನಡಿಗೆ, ವಿಶ್ರಾಂತಿ, ನಿದ್ರೆ, ಮಾನಸಿಕ ಒತ್ತಡದ ಇಳಿಕೆ ಮತ್ತು ಪರಿಸರದ ರಾಸಾಯನಿಕ ಸಂಯುಕ್ತಗಳು ಸೇರಿದಂತೆ ಹಲವು ಅಂಶಗಳು ಈ ಬದಲಾವಣೆಗೆ ಕಾರಣವಾಗಿರಬಹುದು. ಅವುಗಳಲ್ಲಿ ಪ್ರತಿಯೊಂದರ ಪ್ರತ್ಯೇಕ ಪಾತ್ರವನ್ನು ಗುರುತಿಸಲು ಇನ್ನಷ್ಟು ಸಂಶೋಧನೆ ಅಗತ್ಯ.
ಪ್ರಕೃತಿಯ ನಡಿಗೆ: ದೇಹ ಮತ್ತು ಮನಸ್ಸಿಗೆ ವಿರಾಮ : ಹಸಿರು ಪರಿಸರದಲ್ಲಿ ನಿಧಾನವಾಗಿ ನಡೆಯುವುದು, ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಮತ್ತು ಮೊಬೈಲ್ ಬಳಕೆಯಿಂದ ಸ್ವಲ್ಪ ದೂರವಿರುವುದು ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡಬಹುದು. ಇಂತಹ ಚಟುವಟಿಕೆಗಳು ದೈಹಿಕ ಚಲನೆಗೂ ಅವಕಾಶ ನೀಡುತ್ತವೆ ಹಾಗೂ ದೈನಂದಿನ ಬದುಕಿನ ಒತ್ತಡದಿಂದ ವಿರಾಮ ಒದಗಿಸುತ್ತವೆ. ಪ್ರಕೃತಿಯಲ್ಲಿ ಸಮಯ ಕಳೆಯುವುದನ್ನು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಿ ಅಳವಡಿಸಿಕೊಳ್ಳಬಹುದು. ನಮ್ಮ ದೇಹವು ಒತ್ತಡಕ್ಕೆ ಪ್ರತಿಕ್ರಿಯಿಸುವಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದ ಶಕ್ತಿ ನಿರ್ವಹಣೆ, ರಕ್ತದೊತ್ತಡ ಮತ್ತು ಒತ್ತಡಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತದೆ. ಕಾರ್ಟಿಸೋಲ್ ದೇಹಕ್ಕೆ ಅಗತ್ಯವಾದ ಹಾರ್ಮೋನ್ ಆಗಿದ್ದು, ಅದರ ಮಟ್ಟ ದಿನದ ಸಮಯ ಮತ್ತು ಹಲವು ದೈಹಿಕ ಕಾರಣಗಳಿಂದ ಸಹಜವಾಗಿಯೇ ಬದಲಾಗುತ್ತದೆ. ಆದರೆ ಇದು ವೈದ್ಯಕೀಯ ಚಿಕಿತ್ಸೆ, ಅಗತ್ಯ ಔಷಧಗಳು ಅಥವಾ ವೈದ್ಯರ ಸಲಹೆಗೆ ಪರ್ಯಾಯವಲ್ಲ ಎಂಬುದನ್ನು ನಾವು ಇಂದಿನ ಕಾಲಘಟ್ಟದಲ್ಲಿ ಗಮನದಲ್ಲಿರಿಸಿಕೊಳ್ಳಬೇಕಾದ ವೈಯಕ್ತಿಕ ವಿಷಯ.
ಕಾಡಿನ ವಾತಾವರಣದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಸಂಶೋಧಕರು ಅರಣ್ಯ ಪ್ರದೇಶದಲ್ಲಿ ಸಮಯ ಕಳೆದವರನ್ನು ನಗರ ಪರಿಸರದಲ್ಲಿ ಸಮಯ ಕಳೆದವರೊಂದಿಗೆ ಹೋಲಿಸಿದ್ದಾರೆ. 2008 ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದವರಲ್ಲಿ ನ್ಯಾಚುರಲ್ ಕಿಲ್ಲರ್ ಸೆಲ್ಸ್ ಚಟುವಟಿಕೆ ಮತ್ತು ಅವುಗಳ ಕಾರ್ಯಕ್ಕೆ ಸಂಬಂಧಿಸಿದ ಕೆಲವು ಪ್ರೋಟೀನ್ಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿತ್ತು. ನಗರ ಪರಿಸರಕ್ಕೆ ಭೇಟಿ ನೀಡಿದವರಲ್ಲಿ ಇದೇ ರೀತಿಯ ಬದಲಾವಣೆ ಕಂಡುಬರಲಿಲ್ಲ ಎಂದು ಸಂಶೋಧಕರು ವರದಿ ಮಾಡಿದರು.
ಆದರೆ ಕಾಡು ಮತ್ತು ನಗರ ಪರಿಸರಗಳ ನಡುವಿನ ವ್ಯತ್ಯಾಸವನ್ನು ಕೇವಲ ಮರಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳಿಗೆ ಮಾತ್ರ ಕಾರಣವೆಂದು ಹೇಳಲು ಸಾಧ್ಯವಿಲ್ಲ. ದೈಹಿಕ ಚಟುವಟಿಕೆ, ನಿದ್ರೆ, ಗಾಳಿಯ ಗುಣಮಟ್ಟ, ಶಬ್ದದ ಮಟ್ಟ ಮತ್ತು ವ್ಯಕ್ತಿಯ ಮಾನಸಿಕ ಸ್ಥಿತಿ ಕೂಡ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು.
ಪಶ್ಚಿಮ ಘಟ್ಟದ ಕಾಡುಗಳು: ನಮ್ಮ ಸುತ್ತಲಿನ ಪ್ರಕೃತಿಯನ್ನೂ ಅನುಭವಿಸಬಹುದೇ? : ಕರ್ನಾಟಕದ ಪಶ್ಚಿಮ ಘಟ್ಟಗಳು ದಟ್ಟವಾದ ಸದಾ ಹಸಿರು ಕಾಡುಗಳು, ವೈವಿಧ್ಯಮಯ ಸಸ್ಯಸಂಪತ್ತು, ತೇವಾಂಶಭರಿತ ವಾತಾವರಣ ಮತ್ತು ವಿಶಿಷ್ಟ ಜೀವವೈವಿಧ್ಯಕ್ಕೆ ಹೆಸರುವಾಸಿ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕಾಡು ಹಾಗೂ ಮರಗಳಿಂದ ಕೂಡಿದ ಹಾದಿಗಳು ಪ್ರಕೃತಿಯೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಅವಕಾಶ ನೀಡುತ್ತವೆ.
ಪಶ್ಚಿಮ ಘಟ್ಟಗಳಂತಹ ಪ್ರದೇಶಗಳಲ್ಲಿ ಅರಣ್ಯ ನಡಿಗೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು ಹೊಸ ಸಂಶೋಧನೆಗೆ ಅವಕಾಶ ಒದಗಿಸುತ್ತದೆ. ವಿಶೇಷವಾಗಿ ಸ್ಥಳೀಯ ಸಸ್ಯಪ್ರಭೇದಗಳು, ಅರಣ್ಯದ ವಾತಾವರಣ, ಮಾನಸಿಕ ಒತ್ತಡ ಮತ್ತು ದೈಹಿಕ ಆರೋಗ್ಯದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಬಹುದು.
ಇದಕ್ಕೆ ಅರಣ್ಯ ಪರಿಸರದ ಸಂರಕ್ಷಣೆಯೂ ಅಷ್ಟೇ ಮುಖ್ಯ. ಆರೋಗ್ಯಕ್ಕಾಗಿ ಕಾಡಿಗೆ ಭೇಟಿ ನೀಡುವಾಗ ಕಸ ಎಸೆಯದೆ, ವನ್ಯಜೀವಿಗಳಿಗೆ ತೊಂದರೆ ನೀಡದೆ, ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ.
ಆರೋಗ್ಯಕ್ಕಾಗಿ ಅರಣ್ಯ ನಡಿಗೆ- ಹೇಗೆ ಆರಂಭಿಸಬಹುದು? : ಅರಣ್ಯ ನಡಿಗೆಯ ಪ್ರಯೋಜನಗಳನ್ನು ಅನುಭವಿಸಲು ದೈಹಿಕ ಸಾಮರ್ಥ್ಯ ಮತ್ತು ಸಮಯಕ್ಕೆ ಅನುಗುಣವಾಗಿ ಸುರಕ್ಷಿತವಾದ ಹಸಿರು ಪರಿಸರದಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದಲೇ ಆರಂಭಿಸಬಹುದು. ಸಾಮರ್ಥ್ಯಕ್ಕೆ ತಕ್ಕಂತೆ 15–30 ನಿಮಿಷಗಳ ನಡಿಗೆಯಿಂದ ಆರಂಭಿಸಿ ವೇಗ ಅಥವಾ ದೂರಕ್ಕಿಂತ ಆರಾಮದಾಯಕ ಚಲನೆಗೆ ಆದ್ಯತೆ ನೀಡಬಹುದು. ಪ್ರಕೃತಿಯನ್ನು ಗಮನಿಸುತ್ತಾ, ಹಕ್ಕಿಗಳ ಧ್ವನಿ, ಮರಗಳ ವೈವಿಧ್ಯ ಮತ್ತು ಸುತ್ತಲಿನ ಪರಿಸರವನ್ನು ಗಮನಿಸಿ. ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಾ ಓಡಾಟ ಮಾಡಬಹುದು. ಈ ನಡಿಗೆಯ ಸಂದರ್ಭ ಸಹಜವಾಗಿ ಉಸಿರಾಡುತ್ತಾ ನಡೆಯಬಹುದು. ಜಿಗಣೆ, ಕೀಟಗಳು, ಕಾಡುಪ್ರಾಣಿಗಳು ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಒಂಟಿಯಾಗಿ ಅಪರಿಚಿತ ಅರಣ್ಯ ಪ್ರದೇಶಗಳಿಗೆ ಹೋಗದಿರುವುದು ಉತ್ತಮ.
ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಸರಳವಾದ, ಕಡಿಮೆ ವೆಚ್ಚದ ಆರೋಗ್ಯಕರ ಅಭ್ಯಾಸವಾಗಬಹುದು. ಉದ್ಯಾನವನದಲ್ಲಿ ನಡೆಯುವುದು, ಮನೆಯ ಸುತ್ತಲಿನ ಕಾಡುಗಳ ನಡುವೆ ಕುಳಿತುಕೊಳ್ಳುವುದು, ತೋಟದಲ್ಲಿ ಕೆಲಸ ಮಾಡುವುದು ಅಥವಾ ಸುರಕ್ಷಿತವಾದ ಅರಣ್ಯ ಹಾದಿಯಲ್ಲಿ ನಿಧಾನವಾಗಿ ನಡೆಯುವುದು ಇವೆಲ್ಲವೂ ಪ್ರಕೃತಿಯೊಂದಿಗೆ ಸಂಪರ್ಕ ಬೆಳೆಸುವ ಮಾರ್ಗಗಳಾಗಿವೆ.
ಆದರೆ ಯಾವತ್ತೂ ಗಮನಿಸಬೇಕಾದ್ದು ಪಾಲನೆ ಮಾಡಬೇಕಾದ್ದು ಸ್ವಚ್ಛ ಪರಿಸರದ ಕಾಳಜಿ. ಪ್ಲಾಸ್ಟಿಕ್ ಎಸೆಯದೇ ಇರುವುದು, ಮಲಿನ ಮಾಡದೇ ಇರುವುದು ಕಡ್ಡಾಯ.
ಕಾಡಿನ ಮೌನವು ಮನಸ್ಸಿಗೆ ವಿರಾಮ ನೀಡಬಹುದು. ಹಸಿರು ಪರಿಸರವು ನಮ್ಮ ದೈನಂದಿನ ಒತ್ತಡದಿಂದ ದೂರ ಸರಿಯಲು ನೆರವಾಗಬಹುದು. ದೇಹದ ಕೆಲವು ಜೈವಿಕ ಸೂಚಕಗಳಲ್ಲಿಯೂ ಸಕಾರಾತ್ಮಕ ಬದಲಾವಣೆಗಳ ಸಾಧ್ಯತೆಯನ್ನು ಸಂಶೋಧನೆ ಸೂಚಿಸಿದೆ ಅಷ್ಟೇ. ಪ್ರಕೃತಿಯನ್ನು ಅನುಭವಿಸೋಣ, ಕಾಡುಗಳನ್ನು ಉಳಿಸೋಣ.
Spending time in forests may support relaxation, reduce stress and influence immune activity. Research by Japanese immunologist Dr. Qing Li has linked forest visits with increased activity of natural killer cells, which help defend the body against virus-infected cells. Trees also release natural compounds called phytoncides, which researchers have studied for their possible effects on stress hormones. However, the benefits vary, and forest walks are not a substitute for medical treatment.
ಉತ್ತರ ಭಾರತದಿಂದ ಶುಷ್ಕ ಗಾಳಿ ಬೀಸುವ ಸಾಧ್ಯತೆ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಬಹುದಾದ ವಾಯುಮಂಡಲದ…
ಮುಂಗಾರು ಮಳೆಯ ಕೊರತೆಯಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವ…
ಕರ್ನಾಟಕ ಸರ್ಕಾರವು ಆರ್ಟ್ ಪಾರ್ಕ್ಗೆ ಈವರೆಗೆ ₹62 ಕೋಟಿಗೂ ಅಧಿಕ ನೆರವು ನೀಡಿದ್ದು,…
ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸುವ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ‘ಅನ್ನ…
ಮುಂದಿನ ಜೂನ್ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿಗೆ ತೆರಳುವ…
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…