ಫ್ರೈಡ್‍ ರೈಸ್ ಸಿಂಡ್ರೋಮ್ | ಏನಿದು ಸಿಂಡ್ರೋಮ್‌…? | ಇದು ಯಾವ ರೀತಿಯ ಫುಡ್ ಪಾಯಿಸನಿಂಗ್…?

November 17, 2023
7:48 PM
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಫ್ರೈಡ್‍ ರೈಸ್ ಸಿಂಡ್ರೋಮ್ ಬಗ್ಗೆ ಯುವಕರು ಹೆಚ್ಚಾಗಿ ಗಮನ ಹರಿಸಬೇಕಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಈ ಸಿಂಡ್ರೋಮ್(Fried rice syndrome )ಯುವಜನರಲ್ಲಿ ಹೆಚ್ಚು ಬರುತ್ತದೆ. ಇದೊಂದು ರೀತಿಯ ಫುಡ್ ಪಾಯಿಸನಿಂಗ್ ಆಗಿರುತ್ತದೆ. ಉಳಿದ ದಿಢೀರ್ ಆಹಾರಗಳಾದ ನೂಡಲ್ಸ್, ಫಿಜ್ಜಾ ,ಪಾಸ್ಟಾ, ಕೇಕ್ ,ಬಿರಿಯಾನಿ ಇತ್ಯಾದಿಗಳನ್ನು ತೆರೆದ ಗಾಳಿಗೆ ಬಹಳ ಕಾಲ ತೆರೆದಿಟ್ಟು, ಆ ಬಳಿಕ ಶೀತಲೀಕರಣ ಯಂತ್ರದಲ್ಲಿ ದಿನಗಟ್ಟಲೆ ಶೇಖರಿಸಿ ಆ ಬಳಿಕ ಮಗದೊಮ್ಮೆ ಬಿಸಿ ಮಾಡಿ ತಿನ್ನುವುದರಿಂದ ಈ ರೀತಿಯ ಸಿಂಡ್ರೋಮ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಮತ್ತು ವೈದ್ಯರು ಎಚ್ಚರಿಸಿದ್ದಾರೆ.

Advertisement
Advertisement

ಇದೊಂದು ಬ್ಯಾಕ್ಟಿರಿಯಾ ದಿಂದ ಹರಡುವ ರೋಗವಾಗಿದ್ದು, ಬ್ಯಾಸಿಲ್ಲಸ್ ಸೀರಸ್ ಎಂಬ ಬ್ಯಾಕ್ಟೀರಿಯಾ ದಿಂದ ಹೊರ ಹೊಮ್ಮುವ ವಿಷಕಾರಿ ಟಾಕ್ಸಿನ್‍ಗಳಿಂದ ಉಂಟಾಗುತ್ತದೆ ಎಂದೂ ತಿಳಿದು ಬಂದಿದೆ.

Advertisement

ಕಳೆದ ವಾರವಷ್ಟೆ ಒಬ್ಬ ಯುವಕ ಐದು ದಿನಗಳಷ್ಟು ಹಳೆಯದಾದ ಪಾಸ್ಟಾ ಎಂಬ ಆಹಾರವನ್ನು ಮಗದೊಮ್ಮೆ ಬಿಸಿ ಮಾಡಿ ತಿಂದ ಬಳಿಕ ಅಸ್ವಸ್ಥನಾಗಿ ಜೀವ ಕಳೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿ ಮಾಡಿತ್ತು. ಅಗತ್ಯದ್ದಷ್ಟೆ ಆಹಾರವನ್ನು ತಯಾರಿಸಿ ಬಳಸಿದಲ್ಲಿ ಆಹಾರ ಪೋಲಾಗುವುದನ್ನು ತಡೆಯಬಹುದು ಮತ್ತು ಉಳಿದ ಆಹಾರವನ್ನು ಶೇಖರಿಸಿ ಮಗದೊಮ್ಮೆ ಬಿಸಿ ಮಾಡಿ ತಿನ್ನುವ ಪ್ರಮೇಯ ಬರದಿರಬಹುದು. ಇದು ಆರೋಗ್ಯದ ಹಿತದೃಷ್ಟಿಯಿಂದ ಅತಿ ಉತ್ತಮ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಗತ್ಯವಿದ್ದಾಗ ಅಗತ್ಯವಿದ್ದಷ್ಟೇ ಆಹಾರ ತಯಾರಿಸಿ ಬಳಸಿದಲ್ಲಿ ಇಂತಹ ಸಿಂಡ್ರೋಮ್ ಬರದಂತೆ ತಡೆಯಲು ಸಾಧ್ಯವಿದೆ. ಒಂದು ವೇಳೆ ಆಹಾರ ಉಳಿದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಶೇಖರಣೆ ಮಾಡಬೇಕು. ವಾರಗಟ್ಟಲೆ ಆಹಾರವನ್ನು ಶೀತಲೀಕರಣ ಯಂತ್ರದಲ್ಲಿ ಶೇಖರಿಸಿಡುವುದು ಮತ್ತು ಪುನ: ಬಿಸಿ ಮಾಡಿ ಬಳಸುವುದು ಸರ್ವತಾ ಸಹ್ಯವಲ್ಲ. ಬ್ಯಾಸಿಲ್ಲಸ್ ಸೀರಸ್ ಎಂಬ ಬ್ಯಾಕ್ಟಿರೀಯಾ ನಮ್ಮ ಸುತ್ತಲಿನ ವಾತಾವರuದಲ್ಲಿ ಹೇರಳವಾಗಿದ್ದು, ನೀರಿನ ಅಂಶ ಜಾಸ್ತಿ ಇರುವ ಅಂಟು ಆಹಾರಗಳಾದ ಬೇಯಿಸಿದ ಅನ್ನ, ಬರ್ಗರ್, ಪಾಸ್ಟಾ,ಪಿಜ್ಜಾ, ಕೇಕ್‍ಗಳಲ್ಲಿ ಬಹುಬೇಗ ಬೆಳೆಯುತ್ತದೆ ಎಂದೂ ತಿಳಿದು ಬಂದಿದೆ.

Advertisement

ತಡೆಗಟ್ಟುವುದು ಹೇಗೆ? : ಫ್ರೈಡ್‍ರೈಸ್ ಎಂಬ ಆಹಾರವನ್ನು ಸಾಮಾನ್ಯವಾಗಿ ಚೈನಾದಲ್ಲಿ ಹೆಚ್ಚು ಬಳಸುತ್ತಾರೆ. ಈಗ ವಿಶ್ವದೆಲ್ಲೆಡೆ ಬಳಸಲಾಗುತ್ತದೆ. ಅನ್ನದ ಜೊತೆಗೆ ತರಕಾರಿ, ಸೊಪ್ಪು ಹಾಗೂ ಇನ್ನಿತರ ಹಲವು ಬಣ್ಣದ ವಸ್ತುಗಳು, ರುಚಿಕಾರಕ ವಸ್ತುಗಳು ಮತ್ತು ಇತರ ರಾಸಾಯನಿಕಗಳನ್ನು ಬಳಸಿ ಆಹಾರವನ್ನು ಹೆಚ್ಚು ಆಕರ್ಷಕವಾಗುವಂತೆ ಮಾಡಲಾಗುತ್ತದೆ. ಈ ಆಹಾರವನ್ನು ಸರಿಯಾಗಿ ಬೇಯಿಸತಕ್ಕದ್ದು ಮತ್ತು ಅರೆಬೆರೆ ಬೇಯಿಸುವುದರಿಂದ ಇದರಲ್ಲಿನ ಕಲುಷಿತ ವೈರಾಣುಗಳು ಬ್ಯಾಕ್ಟೀರಿಯಾಗಳು ಸಾಯದೇ ಇರಬಹುದು. ಈ ರೀತಿ ಅರೆಬೆಂದ ಆಹಾರವನ್ನು ತರಾತುರಿಯಲ್ಲಿ ತಿಂದು ಉಳಿದದ್ದನ್ನು ಸರಿಯಾದ ರೀತಿಯಲ್ಲಿ ಶೇಖರಿಸದೇ ಇದ್ದಲ್ಲಿ ಅದರಲ್ಲಿನ ಬ್ಯಾಕ್ಟೀರಿಯಾಗಳು, ಕೊಳೆತ ಆಹಾರದಲ್ಲಿ ಮಗದೊಮ್ಮೆ ವಿಜೃಂಭಿಸತೊಡಗುತ್ತದೆ. ಇದನ್ನು ಮತ್ತೆ ಬಿಸಿ ಮಾಡಿ ಸೇವಿಸಿದಾಗ ಅದರಲ್ಲಿನ ರೋಗಾಣುಗಳು ಆಹಾರ ಸೇವಿಸಿದ ವ್ಯಕ್ತಿಯ ಹೊಟ್ಟೆಗೆ ಸೇರಿಕೊಂಡು ತನ್ನ ನಿಜರೂಪದ ದರ್ಶನವನ್ನು ಮಾಡುತ್ತದೆ. ಬ್ಯಾಸಿಲಸ್ ಸೀರಸ್ ಎಂಬ ಬ್ಯಾಕ್ಟೀರಿಯಾ 120 ಡಿಗ್ರಿ ಸೆಲ್ಸಿಯಸ್‍ಗೆ ಕುದಿಸಿದರೂ ತನ್ನ ಪೊರೆಯೊಳಗೆ ರಕ್ಷಿಸಿಕೊಳ್ಳುವ ಸಾಮಥ್ರ್ಯ ಹೊಂದಿದೆ. ಇದೊಂದು ಉಷ್ಣ ನಿರೋಧಕ ಬ್ಯಾಕ್ಟೀರಿಯಾ ಆಗಿರುತ್ತದೆ.

1) ಅತೀ ಅಗತ್ಯವಿದ್ದಷ್ಟೆ ಆಹಾರವನ್ನು ತಯಾರಿಸಿ. ಉಳಿಯುವಷ್ಟು ಆಹಾರ ತಯಾರಿಸಬೇಡಿ.
2) ದಿಢೀರ್ ಆಹಾರ ತಯಾರಿಸುವಾಗ ಅದನ್ನು ಸೂಕ್ತ ರೀತಿಯಲ್ಲಿ ಸಾಕಷ್ಟು ಕಾಲ ಸರಿಯಾಗಿ ಬೇಯಿಸಿ ಬಳಸಬೇಕು.
3) ಒಂದು ವೇಳೆ ಇಂತಹ ದಿಢೀರ್ ಆಹಾರ ಉಳಿದಲ್ಲಿ ಅದನ್ನು ಪುನ: ಬಳಸಬೇಡಿ. ಶೇಖರಿಸಿ ಇಟ್ಟು ಹಲವು ದಿನಗಳ ಬಳಿಕ ಬಳಸುವುದು ಸರ್ವತಾ ಸಹ್ಯವಲ್ಲ.
4) ಸಿದ್ದ ಆಹಾರಗಳನ್ನು ಅತೀ ಅಗತ್ಯವಿದ್ದಲ್ಲಿ ಬಳಸಿ .ಯಾವತ್ತೂ ಮನೆಯಲ್ಲಿಯೇ ತಯಾರಿಸಿದ ಶುದ್ಧ ಪರಿಪೂರ್ಣ ಆಹಾರವನ್ನು ಹೆಚ್ಚು ಬಳಸಬೇಕು.
5) ಸಾಮಾನ್ಯವಾಗಿ ಫ್ರೈಡ್‍ರೈಸ್‍ಗೆ ಬಳಸುವ ಅನ್ನವನ್ನು ಮೊದಲೇ ಬೇಯಿಸಿ ಇಡಲಾಗುತ್ತದೆ. ಹಿಂದಿನ ದಿನ ರಾತ್ರಿ ಬೇಯಿಸಿ ಇಟ್ಟ ತೇವಯುಕ್ತ ಆಹಾರದಲ್ಲಿ ಅನ್ನದಲ್ಲಿ ರೂಮಿನ ಉಷ್ಣತೆಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಮೊದಲೇ ಬೇಯಿಸಿದ ಆಹಾರ, ಅನ್ನವನ್ನು ಬಳಸದಿರುವುದೇ ಉತ್ತಮ.
6) ಯಾವುದೇ ಕಾರಣಕ್ಕೂ ಬೇಯಿಸಿದ ಅನ್ನವನ್ನು 5 ರಿಂದ 60 ಡಿಗ್ರಿ ಉಷ್ಣತೆಯಲ್ಲಿ ಶೇಖರಿಸಬೇಡಿ. ಇದು ಅಪಾಯಕಾರಿ ಬ್ಯಾಕ್ಟೀರಿಯಾ ಈ ಉಷ್ಣತೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಕ್ಷಣವೇ ಬಳಸದೇ ಇದ್ದಲ್ಲಿ ಈ ಅನ್ನವನ್ನು 4 ಡಿಗ್ರಿ ಸೆಲ್ಸಿಯಸ್‍ಗಿಂತಲೂ ಕಡಿಮೆ ಉಷ್ಣತೆಯಲ್ಲಿ ಶೇಖರಿಸಿಡಬಹುದಾಗಿದೆ.
7) ಅತೀ ಅಗತ್ಯವಿದ್ದಲ್ಲಿ ಶೇಖರಿಸಿದ ಆಹಾರವನ್ನು ಬಳಸಬೇಕು. ಈ ಆಹಾರವನ್ನು ಕನಿಷ್ಠ 75 ಡಿಗ್ರಿವರೆಗೆ ಬಿಸಿ ಮಾಡಿ ಬಳಸಬಹುದಾಗಿದೆ.
8) ಆಹಾರ ಪದಾರ್ಥ ತಯಾರಿಸುವಾಗ ಎಲ್ಲಾ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಬಳಸಿ, ಕೈ ಶುಚಿಯಾಗಿ ಇರತಕ್ಕದ್ದು. ಇಂತಹಾ ಸಿದ್ದ ಆಹಾರಗಳ ಜೊತೆಗೆ ಹಸಿ ಮೊಟ್ಟೆ, ಮೊಟ್ಟೆಕವಚ, ಜ್ಯೂಸ್‍ಗಳು, ಹಸಿ ಮಾಂಸಗಳ ಜೊತೆ ಸ್ಪರ್ಶಿಸದಂತೆ ಜಾಗ್ರತೆ ವಹಿಸಬೇಕು.

Advertisement

ಚಿಕಿತ್ಸೆ ಹೇಗೆ?: ಸಿದ್ದ ಆಹಾರ ಅಥವಾ ಮೊದಲೇ ತಯಾರಿಸಿದ ಆಹಾರವನ್ನು ಸೇವಿಸಿದ ಬಳಿಕ ಹೊಟ್ಟೆ ನೋವು, ವಾಂತಿ ವಾಕರಿಕೆ, ಭೇದಿ ಉಂಟಾದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸಿ. ಮನೆ ಮದ್ದು ಮಾಡಬೇಡಿ. ದೇಹಕ್ಕೆ ನಿರ್ಜಲೀಕರಣವಾಗದಂತೆ ಎಳನೀರು, ಹಣ್ಣುರಸ ಮತ್ತು ಓಆರ್‍ಎಸ್ ದ್ರಾವಣಗಳನ್ನು ಬಳಸಬಹುದು. ರೋಗದ ಲಕ್ಷಣಗಳನ್ನು ಅನುಸರಿಸಿ ವೈದ್ಯರು ಅಂಟಿಬಯೋಟಿಕ್ ಔಷಧಿ ನೀಡುತ್ತಾರೆ. ವಾಂತಿ ಭೇಧಿಯಿಂದಾಗಿ ವ್ಯಕ್ತಿ ಬಳಲಿದ್ದಲ್ಲಿ ರಕ್ತನಾಳಗಳ ಮೂಲಕ ಗ್ಲೂಕೋಸ್ ಅಥವಾ ಇನ್ನಿತರ ಶಕ್ತಿವರ್ಧಕ ಔಷಧಿಗಳನ್ನು ನೀಡಲಾಗುತ್ತದೆ. ವ್ಯಕ್ತಿ ತೀರಾ ದುರ್ಬಲನಾಗಿದ್ದಲ್ಲಿ ಅಶಕ್ತನಾಗಿದ್ದಲ್ಲಿ ಅಥವಾ ಮಧುಮೇಹ ಮುಂತಾದ ರೋಗಗಳಿಂದ ಬಳಲುತ್ತಿದ್ದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಅನಿವಾರ್ಯವಾಗಬಹುದು. ಒಟ್ಟಿನಲ್ಲಿ ಯಾವ ಔಷಧ, ಯಾವಾಗ, ಹೇಗೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಬರೀ ಹೊಟ್ಟೆ ನೋವು, ಬೇಧಿ ಎಂದು ನಿರ್ಲಕ್ಷಿಸಿದ್ದಲ್ಲಿ ಜೀವಕ್ಕೇ ಸಂಚಕಾರ ಬರಬಹುದು.

ಕೊನೆಮಾತು : ಸಮಯ ಮತ್ತು ಹಣ ಉಳಿಸುವ ಸಲುವಾಗಿ ನಿನ್ನೆ ಮಾಡಿದ ಆಹಾರವನ್ನು ಇಂದು ಬಳಸಿದ ಬಳಿಕ, ಉಳಿದ ಆಹಾರವನ್ನು ನಾಳೆ ಬಳಸುತ್ತೇನೆ ಎಂದು ಅತೀ ಬುದ್ಧಿವಂತಿಕೆ ಉಪಯೋಗಿಸಿ, ಸರಿಯಾಗಿ ಸಂರಕ್ಷಿಸದೇ ನಿರ್ಲಕ್ಷ್ಯ ವಹಿಸಿ, ನಾಳೆ ಮಗದೊಮ್ಮೆ ಅದನ್ನೇ ಬಳಸಿದಲ್ಲಿ, ನಿಮಗೆ ಶಾಶ್ವತವಾಗಿ ನಾಳೆಯನ್ನು ಕಾಣದೇ ಇರುವ ಪರಿಸ್ಥಿತಿ ಬರಲೂಬಹುದು ಜೋಕೆ. ಆಹಾರವನ್ನು ಔಷಧದ ರೀತಿಯಲ್ಲಿ ಹಿತಮಿತವಾಗಿ ಬಳಸಿದಲ್ಲಿ ಆರೋಗ್ಯಕ್ಕೆ ಯಾವುದೇ ಸಂಚಕಾರ ಬರಲಾರದು.

Advertisement
ಬರಹ :
ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd , ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು
9845134787

Food poisoning caused by Bacillus cereus is called fried rice syndrome. A Bacillus cereus infection can develop after eating food left at room temperature for short periods, even hours

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ|ಮುರಲೀಮೋಹನ ಚೂಂತಾರು

ಡಾ|ಮುರಲೀ ಮೋಹನ್ ಚೂಂತಾರು BDS MDS DNB MBA MOSRCSEd ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror