#ನಮ್ಮೊಳಗಿನಗಾಂಧಿ | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ | ಗಾಂಧಿ ವಿಚಾರ ಮುಂದಿನ ಪೀಳಿಗೆಗೆ ಹಸ್ತಾಂತರ ಅಗತ್ಯ|

October 2, 2021
10:16 AM

ಅಕ್ಟೋಬರ್ ಎರಡು ಅಂದರೆ ಎಲ್ಲರಿಗೂ ನೆನಪಾಗುವುದು ಗಾಂಧಿ ಜಯಂತಿ . ಮೋಹನದಾಸ ಕರಮಚಂದ ಗಾಂಧಿ ಇವರು ರಾಷ್ಟ್ರಪಿತ. ಆಂಗ್ಲರ ದುರಾಡಳಿತದಿಂದ ಬೇಸತ್ತು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಉತ್ತಮ ನಾಯಕತ್ವವನ್ನು ಕೊಟ್ಟವರಲ್ಲಿ ಮುಂಚೂಣಿಯಲ್ಲಿದ್ದವರು. ಅಷ್ಟೇ ಅಲ್ಲ ರಾಷ್ಟ್ರ ಸಂತ ಕೂಡ ಹೌದು. ಅವರ ಅಸ್ಪೃಶ್ಯತಾ ನಿವಾರಣೆ,ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ,ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ,ಸರಳಜೀವನ, ಪಾನ ನಿಷೇಧ ಕಾರ್ಯಕ್ರಮ, ಗೋಹತ್ಯಾ ನಿಷೇಧದ ಬೆಂಬಲ, ರಾಮರಾಜ್ಯದ ಕನಸು ಇತ್ಯಾದಿ ಯೋಚನೆಗಳೆಲ್ಲಾ ಸಾರ್ವಕಾಲಿಕ ಸತ್ಯಗಳು.

Advertisement

ಇಂತಹ ಮಹಾತ್ಮನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳುವುದರ ಜೊತೆಗೆ ನೆನಪಿಸಿಕೊಳ್ಳುವುದು ಗಾಂಧೀಜಯಂತಿಯ ಉದ್ದೇಶ. ದುರಂತವೆಂದರೆ ಗಾಂಧೀಜಿಯವರ ಆದರ್ಶಗಳು ಬರಿಯ ಪುಸ್ತಕಕ್ಕೆ ಮತ್ತು ಅಕ್ಟೋಬರ್ ಎರಡಕ್ಕೆ ಮಾತ್ರ ಸೀಮಿತವಾಗಿರುವುದು. ನಾವು ಏನಾದರೂ ಸ್ವಲ್ಪ ಆದರ್ಶದ ಮಾತುಗಳನ್ನು ಆಡಿದರೆ ಇವನೊಬ್ಬ ದೊಡ್ಡಗಾಂಧೀ ಎಂಬ ಹಿಯಾಳಿಕೆಯ ಮಾತನ್ನು ಕೇಳಿರಬಹುದು. ನಮ್ಮ ಮುಂದಿನ ಪೀಳಿಗೆಗೆ ಗಾಂಧೀಜಿಯವರ ಆದರ್ಶವನ್ನು, ಆದರ್ಶದ ಕಥೆಗಳನ್ನು ಹಸ್ತಾಂತರ ಮಾಡುವುದು ನಮ್ಮೆಲ್ಲರ ಅತ್ಯಂತ ದೊಡ್ಡ ಜವಾಬ್ದಾರಿ.

ಮಹಾತ್ಮರ ಜೀವನದಲ್ಲಿ ಆದರ್ಶದ ಸಾವಿರ ಸಾವಿರ ಘಟನೆಗಳು ಇವೆ. ಎರಡು ಘಟನೆಗಳನ್ನು ಪ್ರಸ್ತುತಪಡಿಸಲು ಇಚ್ಚಿಸುತ್ತೇನೆ.

ಸ್ವದೇಶಿಯತೆ ಮತ್ತು ಸ್ವಾವಲಂಬನೆ ಗಾಂಧೀಜಿಯವರ ಉಸಿರು. ಎಷ್ಟೇ ಕಾರ್ಯದೊತ್ತಡ ಇದ್ದರು ತಮ್ಮ ಬಟ್ಟೆಗಳನ್ನು ಒಗೆಯಲು ಒಂದು ದಿನವೂ ಅವರು ಉದಾಸೀನ ಮಾಡಿದ್ದಿಲ್ಲ. ವೃದ್ಧಾಪ್ಯದ ಒಂದು ದಿನ ಅವರ ಕಷ್ಟವನ್ನು ನೋಡಿ ಶಿಷ್ಯರು ಕೆಲವರು ಬಂದು ನಾಳೆಯಿಂದ ನಿಮ್ಮ ಬಟ್ಟೆಯನ್ನು ನಾವು ಒಗೆದು ಕೊಡುತ್ತೇವೆ ನೀವು ಒಪ್ಪಿಕೊಳ್ಳಬೇಕು ಎಂದರಂತೆ. ಆರಂಭದಲ್ಲಿ ಗಾಂಧೀಜಿಯವರು ಸಮ್ಮತಿಸದಿದ್ದರೂ ಒತ್ತಡಕ್ಕೆ ಮಣಿದು ಒಪ್ಪಲೇಬೇಕಾಯಿತು. ಒಂದು ತಿಂಗಳು ಕಳೆದ ಮರುದಿನ ಗಾಂಧೀಜಿಯವರು ಶಿಷ್ಯರಿಗೆ ಹೇಳಿದರಂತೆ ನಾಳೆಯಿಂದ ನಾನೇ ಒಗೆದುಕೊಳ್ಳುತ್ತೇನೆ.

ನಿಮಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ. ಶಿಷ್ಯರು ದುಂಬಾಲುಬಿದ್ದರು,ನಮಗೆ ಯಾವುದೇ ತೊಂದರೆ ಇಲ್ಲ ಯಾಕೆ ಒಗೆದದ್ದು ಚೆನ್ನಾಗಿಲ್ಲವೆ? ತಪ್ಪಾಗಿದ್ದರೆ ತಿಳಿಸಿ ಎಂದರಂತೆ. ಗಾಂಧೀಜಿಯವರು ನಯವಾಗಿ ಉತ್ತರಿಸಿದರು ನೀವು ತಪ್ಪು ತಿಳಿಯಬೇಡಿ ಒಗೆದ ಬಟ್ಟೆಯ ಬಗ್ಗೆ ಯಾವುದೇ ನನ್ನ ಆಕ್ಷೇಪವಿಲ್ಲ. ಆದರೆ, ಬಟ್ಟೆ ಒಗೆಯಲು ತಿಂಗಳ ಸಾಬೂನು ಖರ್ಚು ಯಾವಾಗಲಿಗಿಂತ ಕೊಂಚ ಜಾಸ್ತಿಯಾಗಿದೆ. ಹಾಗಾಗಿ ನಾನು ಮುಂದುವರಿಸುತ್ತೇನೆ ಎಂದು. ಇಲ್ಲಿ ನಾವು ಗಮನಿಸಬೇಕಾದದ್ದು ಗಾಂಧೀಜಿಯವರ ಸ್ವಾವಲಂಬನೆ, ಸರಳ ಜೀವನ, ಮತ್ತು ಮಿತವ್ಯಯದ ಸೂಕ್ಷ್ಮ.

ಇಂದಿನ ನಮ್ಮ ಮತ್ತು ನಮ್ಮ ಮಕ್ಕಳ ಅಂದಾ ದುಂದು ಖರ್ಚಿನ ಎದುರು ನೋಡುವಾಗ ನಮಗೆ ಈ ವಿಷಯ ಹಾಸ್ಯಾಸ್ಪದ ಎನಿಸೀತು. ನಾನು ಕಂಡ ಸತ್ಯಗಳು ಈ ಕೆಳಗಿನಂತಿವೆ.

  • ಸ್ವಾವಲಂಬನೆ: ಇಂದು ನಮ್ಮ ಬಟ್ಟೆಗಳನ್ನು ನಾವೇ ಒಗೆದು ಕೊಳ್ಳುವವರು ಬೆರಳೆಣಿಕೆಯ ಮಂದಿಯು ಇರಲಾರರು. ಬಟ್ಟೆ ಒಗೆಯುವ ಯಂತ್ರಕ್ಕೆ ವಿದ್ಯುತ್ ಇಲ್ಲದಿದ್ದರೆ, ಬಟ್ಟೆ ಮೂಲೆಯಲ್ಲಿ ರಾಶಿ ಬಿದ್ದೀತ್ತು ವಿನಹ: ಕೈಯಿಂದ ಒಗೆಯಲಾರರು.
  • ಕೆಲವು ಮನೆಗಳಲ್ಲಿ ಒಳಉಡುಪುಗಳನ್ನು ಕೂಡ ಅಮ್ಮನ ಕೈಗೆ,ಅಲ್ಲ ಹೆಂಡತಿಯ ಕೈಗೆ ಒಪ್ಪಿಸುವವರನ್ನು ನೋಡಿದ್ದೇನೆ.
  • ಆರ್ಥಿಕ ಅಶಕ್ತರು ಕೂಡ ಸಶಕ್ತರನ್ನು ನೋಡಿ ಅಂತೆಯೇ ಆಗಲು ಸಾಲ ಮಾಡಿ( ಕಂತಿನಲ್ಲಿ) ಪರಾವಲಂಬಿ ಯಂತ್ರಗಳನ್ನು ಖರೀದಿಸುತ್ತಾರೆ.
  • ವಿದ್ಯುತ್ತಿನ ಬೇಡಿಕೆ ದಿನೇ ದಿನೇ ಜಾಸ್ತಿಯಾಗುವುದರಿಂದ ಅಗತ್ಯಕ್ಕೆ ಇಂದು ವಿದ್ಯುತ್ ಇಲ್ಲದಂತಾಗಿದೆ.( ಹಳ್ಳಿಗಳಲ್ಲಿ ಈ ಕಾರಣದಿಂದ ವಿದ್ಯುತ್ತಿನ ಸಮಸ್ಯೆ ತೀವ್ರವಾಗಿದೆ)

ಈ ತರಹದ ಚಿಂತನೆಗಳನ್ನು ನಾವೇನಾದರೂ ಸಮಾಜದ ಮುಂದೆ ಹೇಳಿದರೆ ಇವನೊಬ್ಬ ದೊಡ್ಡ ಗಾಂಧಿ ಎಂದು ಹೇಳದೆ ಇದ್ದಾರೆಯೇ?

ಇನ್ನೊಂದು ಘಟನೆ:
ಗಾಂಧೀಜಿಯವರು ಒಮ್ಮೆ ಕಾಂಗ್ರೆಸ್ ಪಕ್ಷದ ಯಾವುದೋ ಸಭೆಗೆ ಹೋಗಿದ್ದರಂತೆ. ಸಭೆ ಆರಂಭವಾಗುವ ಹೊತ್ತಿಗೆ ಗಾಂಧಿಯವರು ಕಾಣಿಸಿಕೊಳ್ಳಲಿಲ್ಲ.ಎಲ್ಲಿ ಹೋದರು ಎಂದು ಹುಡುಕಾಡುವಾಗ ಶೌಚಾಲಯದ ಬಳಿ ಕಂಡರಂತೆ. ಶೌಚಾಲಯದ ದುರವಸ್ಥೆಯನ್ನು ನೋಡಿ ದುಃಖಿತರಾದ ಗಾಂಧೀಜಿ ಕೈಯಲ್ಲಿ ನೀರು ಹಿಡಿಸೂಡಿ ಹಿಡಕೊಂಡು ಅದನ್ನು ಶುಚಿ ಮಾಡುತ್ತಿದ್ದರಂತೆ. ಗಾಂಧೀಜಿಯವರ ಆರೋಗ್ಯದ ಮತ್ತು ಶುಚಿತ್ವದ ಬಗ್ಗೆ ಕಾಳಜಿ ನೋಡಿ. ಶೌಚಾಲಯಗಳನ್ನು ಗಾಂಧೀಜಿಯವರು ಅನಾರೋಗ್ಯದ ಆಟಂಬಾಂಬುಗಳು ಎಂದು ಕರೆದಿದ್ದರು. ಸಾರ್ವಜನಿಕ ಬಿಡಿ ನಮ್ಮ ನಮ್ಮ ಮನೆಯ ಶೌಚಾಲಯಗಳನ್ನು ನಾವೆಷ್ಟು ಮಂದಿ ಶುಚಿ ಮಾಡುತ್ತೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ನಾನೊಮ್ಮೆ ಕೆಲವು ವರ್ಷಗಳ ಹಿಂದೆ ಪುತ್ತೂರು ನ್ಯಾಯಾಲಯಕ್ಕೆ ಯಾವುದೋ ಕಾರಣಕ್ಕೆ ಹೋಗಬೇಕಾಯಿತು. ಜಲಭಾದೆ ತೀರಿಸುವುದಕೋಸ್ಕರ ಶೌಚಾಲಯವನ್ನು ಹುಡುಕಿಕೊಂಡು ಹೋದೆ. ಒಳ ನುಗ್ಗುತ್ತಿದ್ದಂತೆ ನನ್ನ ದೇಹಬಾಧೆ ನಿಂತೇ ಹೋಗಿತ್ತು. ನ್ಯಾಯಾಧೀಶರು, ನ್ಯಾಯಕ್ಕಾಗಿ ಹೋರಾಡುವವರು ತುಂಬಿರುವ ಜಾಗದಲ್ಲಿ ಶೌಚಾಲಯದ ಸ್ಥಿತಿಯನ್ನು ಕಂಡು ಆ ಬಗೆಗಿನ ಕಾಳಜಿ ಇಲ್ಲದೆ ಇರುವ ಅವಿದ್ಯಾವಂತ ಮಂದಿಯನ್ನು ಮನಸಾ ಕ್ಷಮಿಸಿದೆ. ನಾನು ಗಾಂಧಿ ಅಲ್ಲದುದರಿಂದ ಪೊರಕೆ ಸೇವೆಯಿಂದ ದೂರ ಉಳಿದೆ.

ಇಂತಹ ಘಟನೆಗಳನ್ನು ಚಿಕ್ಕಮಕ್ಕಳ ಎದುರಲ್ಲಿ ಆಗಾಗ ಹೇಳುತ್ತಾ ಇದ್ದರೆ ಮಕ್ಕಳಲ್ಲಿ ಒಂದಷ್ಟು ಸ್ವಾವಲಂಬನೆ ಸ್ವಾಭಿಮಾನ ಉಕ್ಕೇರಬಹುದು ಎಂದು ನನ್ನ ಭಾವನೆ.

#ಎ.ಪಿ. ಸದಾಶಿವ ಮರಿಕೆ , ಕೃಷಿಕರು

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಸುಕ್ಕಾ
April 30, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಗುಜ್ಜೆ ಚಟ್ನಿ
April 29, 2025
8:00 AM
by: ದಿವ್ಯ ಮಹೇಶ್
ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ
ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror

Join Our Group