ಗಾಂಧಿ ಪ್ರಣೀತವಾದ ಶಿಕ್ಷಣವು ಸಾರ್ವಕಾಲಿಕ ಸತ್ಯ.ಗಾಂಧಿ ಶಿಕ್ಷಣದಿಂದ ಸ್ವಾವಲಂಬನೆ ಪಾಠ ಲಭ್ಯವಿರುತ್ತಿತ್ತು. ಶಾಲೆಯ ಕೊನೆಗೆ ಬದುಕಿಗೆ ಅಗತ್ಯವಾದ ಸ್ವಾವಲಂಬನೆಯ ಪಾಠ ಸಿಗಬೇಕಾದ್ದು ಅಗತ್ಯ. ಪ್ರತೀ ವ್ಯಕ್ತಿಯೂ ಸ್ವಾವಲಂಬಿಯಾಗುವ ಮೂಲಕ ಪ್ರತೀ ಹಳ್ಳಿಯೂ ಸ್ವಾವಲಂಬೀ ಬದುಕಿಗೆ ಪ್ರೇರಣೆಯಾಗಬೇಕು ಎಂದು ಸಾಹಿತಿ, ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.
ಅವರು ಶುಕ್ರವಾರ ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತೀ ವ್ಯಕ್ತಿ ಸ್ವಾವಲಂಬಿಯಾಗಬೇಕು. ಅದು ಗಾಂಧೀಜಿಯವರ ಚಿಂತನೆಗಳಿಂದ ಸಾಧ್ಯವಿದೆ. ಹಿಂದೆಲ್ಲಾ ಶಿಕ್ಷಣದ ಕೊನೆಗೆ ಶಾಲೆಯಲ್ಲಿ ಈ ಪಾಠ ಲಭ್ಯವಿತ್ತು. ಕಲಿಯಬೇಕಾದ್ದು ಕೂಡಾ ಅದೇ, ಬದುಕಿಗೆ ಅಗತ್ಯವಾದ ಶಿಕ್ಷಣ ಅದು. ಗಾಂಧೀ ಎನ್ನುವುದು ಒಂದು ಸಂಕೇತ, ರೂಪಕ, ವಾಸ್ತವೂ ಹೌದು. ಗಾಂಧೀಜಿ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಅನೇಕ ಗಾಂಧೀಜಿ ಪ್ರಣೀತವಾದ ವಿಷಯಗಳನ್ನೂ ಅನುಸರಿಸಲೂ ಸಾಧ್ಯವಿಲ್ಲ. ಆದರೆ ಕೆಲವನ್ನು ಅನುಸರಿಸಲು ಸಾಧ್ಯವಿದೆ. ವೈಜ್ಞಾನಿಕ ಚಿಂತನೆಗಳು, ಅನೇಕ ಸಂಗತಿಗಳು ಉಳಿಸಿಕೊಳ್ಳಲು ಹಾಗೂ ಬೆಳೆಸಲು, ಅನುಸರಿಸಲು ಸಾಧ್ಯ ಎಂದು ಸುಬ್ರಾಯ ಚೊಕ್ಕಾಡಿ ಹೇಳಿದರು. ದೇಶದಲ್ಲಿ ಇರುವ ಎಲ್ಲರೂ ದೇಶ ಭಕ್ತರೇ, ವೈಚಾರಿಕ ಚಿಂತನೆ ಮಾತ್ರಾ ಬೇರೆ ಬೇರೆ. ದೇಶ ಹಾಳಾಗಿ ಹೋಗಲು ಎಂದು ಯಾರೂ ಬಯಸುವುದಿಲ್ಲ, ದೇಶ ಭಕ್ತಿ ಭಾಷಣದಲ್ಲಿ ಅಲ್ಲ, ಅದು ನಾವು ಪ್ರಾರಂಭಿಸುವ ಕೆಲಸದಿಂದ ಬರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೃಷಿಕ ಶ್ರೇಯಾಂಸ್ ಕುಮಾರ್ ಪಂಜ, ಗಾಂಧಿ ವಿಚಾರ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯ ಇದೆ. ಈ ಚಿಂತನೆಗೆ ಯಾವಾಗಲೂ ಮಹತ್ವ ಇದೆ. ಇವತ್ತು ಕೊಲೆಯಾಗುತ್ತಿರುವುದು ಮನುಷ್ಯ ಅಲ್ಲ, ಮನುಷ್ಯತ್ವದ ಕೊಲೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ, ಸಮಾಜದ ಪರಿವರ್ತನೆ ಮಾಡುತ್ತಾ ಹೋದಾಗ ಇನ್ನೊಂದು ಸಮಸ್ಯೆ ಇರುತ್ತದೆ. ಕಳೆ ಕಿತ್ತ ಹಾಗೇ ಕಳೆ ಬರುವ ಹಾಗೇ ಸಮಾಜದ ಪರಿವರ್ತನೆಯೂ ನಿರಂತರ ಪ್ರಕ್ರಿಯೆ. ಇಂದು ಮನುಷ್ಯ ಮನುಷ್ಯನನ್ನು ಕೊಲ್ಲುವುದು ಭಯಾನಕ ಸ್ಥಿತಿ. ಈಗಾಗಲೇ ವಿಶ್ವಶಾಂತಿ ಆಗಬೇಕಿತ್ತು. ಆದರೆ ಭಾರತ ಈಗಲೂ ಸತ್ತ, ಧರ್ಮದ ಮಾರ್ಗದಲ್ಲಿದೆ. ಭಾರತದಲ್ಲಿ ಇಂದಿಗೂ ಮಾನವೀಯತೆ ಉಳಿದುಕೊಂಡಿದೆ.ಯಾರೂ ನಿರಾಶರಾಗಬೇಕಾಗಿಲ್ಲ. ಭಾರತೀಯತೆ, ಗಾಂಧಿ ಚಿಂತನೆ ಉಳಿದುಕೊಂಡಿದೆ ಹೀಗಾಗಿ ಭಾರತದ ಮಾನವೀಯ ಮೌಲ್ಯ ಬೆಳಗಲಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಮಾತನಾಡಿ, ಗ್ರಾಮೀಣ ಜನರು ವೃತ್ತಿ ಸ್ವಾವಲಂಬನೆ ಮೂಲಕ ಸ್ವಾತಂತ್ರ್ಯ ಪಡೆಯಬೇಕಿದೆ. ಇದಕ್ಕೆ ಗಾಂಧೀ ಚಿಂತನೆಯೇ ಪರಿಹಾರವಾಗಿದ್ದು ಇಂದು ಸಾತ್ವಿಕ ನೆಲೆಯ ಚಿಂತನೆ ಬೇಕು. ಮಾನವ ಕುಲದ ವಿವೇಕ ದೇಶದೆಲ್ಲೆಡೆ ಇರಬೇಕು ಎಂದ ಅವರು ಗಾಂಧಿ ಗಾಂಧಿಯಾಗಿಯೇ ಆತ್ಮ ಸ್ವರೂಪಿಯಾಗಿ ಇರುತ್ತಾರೆ ಎಂದಿಗೂ ನಾಶವಾಗಲು ಸಾಧ್ಯವಿಲ್ಲ ಎಂದರು.
ಮಹಾತ್ಮಾಗಾಂಧಿ ವಿದ್ಯಾ ಪೀಠದ ಪುರುಷೋತ್ತಮ ಮುಡೂರು ಮಾತನಾಡಿ, ಗಾಂಧೀಜಿ ಅವರ ಚಿಂತನೆಗಳನ್ನು ಗ್ರಾಮೀಣ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ಅನುಷ್ಟಾನ ಮಾಡಲು ಪ್ರತೀ ವ್ಯಕ್ತಿ ಮುಂದೆ ಬರಬೇಕು ಎಂದರು.
ಧಾರ್ಮಿಕ ಮುಂದಾಳು ತಿಮ್ಮಪ್ಪ ಗೌಡ ಪುತ್ಯ, ಕಾರ್ಮಿಕ ಮಹಿಳೆ ಪರಮೇಶ್ವರಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀಧರ ಬಿಡೆ ಮಾತನಾಡಿ, ಗಾಂಧಿ ತತ್ತ್ವ ಹಳ್ಳಿಯಿಂದಲೇ ಈಗ ಆರಂಭವಾಗಬೇಕು. ಅದರ ಅಗತ್ಯವಿದೆ. ಗಾಂಧೀ ಅಸ್ತಿತ್ವ, ಚಿಂತನೆಗಳೇ ಪ್ರಭಾವ ಬೀರುವ ಹಾಗಿರಬೇಕು. ಎಲ್ಲರೂ ಗಾಂಧಿಯಾಗಲು ಸಾಧ್ಯವಿಲ್ಲ, ಆದರೆ ಚಿಂತನೆಯನ್ನು ಬೆಂಬಲಿಸಬಹುದು, ಒಳ್ಳೆಯದನ್ನು ಒಳ್ಳೆಯದು ಎನ್ನಬಹುದು . ಪ್ರತೀ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರಲಿ ಹೀಗಿದ್ದರೆ ನೆಮ್ಮದಿಯ ದೇಶ ನಿರ್ಮಾಣ ಮಾಡಲು ಸಾಧ್ಯವಿದೆ. ಯಾವತ್ತೂ ಯೋಗ್ಯರ ಮೌನ, ಅಯೋಗ್ಯರ ಮಾತು ಸಮಾಜಕ್ಕೆ ಅಪಾಯಕಾರಿ ಎಂದರು.
ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಸ್ವಾಗತಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಅಚ್ಚುತ ಮಲ್ಕಜೆ ವಂದಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ನಿರೂಪಿಸಿದರು. ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಇದೇ ವೇಳೆ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…