“ಗಜಾನನಂ ಭೂತಗಣಾಧಿ ಸೇವಿತಂ
ಕಪಿತ್ಥ ಜಂಭೂಫಲ ಸಾರಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಕಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ”
ಹೊಸತನ್ನು ಆರಂಭಿಸುವಾಗ, ಕಾರ್ಯಕ್ರಮದ ಮೊದಲಿಗೆ ನೆನಪಾಗುವುದು ಪ್ರಥಮವಂದಿತನನ್ನೇ. ಮನಸು ಖಾಲಿಯಾದಾಗ, ಎಲ್ಲವೂ ಶೂನ್ಯವೆನಿಸಿದಾಗ, ಇನ್ನು ಏನೂ ಉಳಿದಿಲ್ಲವೆನಿಸುವಾಗಲೂ ನೆನಪಾಗುವುದು ಅವನನ್ನೇ ಗಜಪತಿಯನ್ನು. ಮಕ್ಕಳ ಪ್ರೀತಿಯ ಗಣಪ , ನೆನದವರ ಮನದಲ್ಲಿ ಸದಾ ನೆಲೆಸಿರುವ ವಿಘ್ನನಿವಾರಕನವನು.
ಯಾರಿಗಾದರೂ ಉಡುಗೊರೆ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ ಕಣ್ಣಿಗೆ ಬೀಳುವುದು ತರಹೇವಾರಿ ಗಣಪತಿ ವಿಗ್ರಹಗಳೇ. ಒಂದೊಮ್ಮೆ ಈ ಬಾರಿ ಗಣೇಶ ಬೇಡ ಬೇರೆ ಏನಾದರೂ ತಗೊಳ್ಳುವುದೇ ಎಂದು ಮನಸ್ಸು ಗಟ್ಟಿ ಮಾಡಿದರೂ ಆಚೆ ,ಈಚೆ ತಿರುಗಿ ಕೊನೆಗೆ ಆಯ್ದುಕೊಳ್ಳುವುದು ಮತ್ತೆ ಗಣೇಶನನ್ನೇ. ಯಾಕೋ ಗಣೇಶನಿಗೆ ಸಂಭಂದಿಸಿದ್ದು ಕೊಡುವುದೆಂದರೆ ಮನಸಿಗೇನೋ ಸಮಾಧಾನ.
ಗಣೇಶನ ಹಬ್ಬ ಜಗತ್ತಿನಾದ್ಯಂತ ಆಚರಿಸ್ಪಡುವ ಹಬ್ಬ. ಜಾತಿ, ಮತ, ಧರ್ಮಗಳನ್ನು ಮೀರಿ ಸಂಭ್ರಮಿಸುವ ಹಬ್ಬ. ಮಕ್ಕಳಿಗಂತೂ ಗೌಜಿಯ ಹಬ್ಬ. ನಾವು ಶಾಲೆಗೆ ಹೋಗುವ ಸಂಧರ್ಭದಲ್ಲಿ ಗಣಪತಿಯ ಮೂರ್ತಿ ಶಾಲೆಯಲ್ಲೇ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿತ್ತು. ತಳಿರು ತೋರಣಗಳನ್ನು ದಾರಿಯುದ್ದಕ್ಕೂ ಕಟ್ಟುತ್ತಿದ್ದೆವು. ಪೂಜೆ ಭಜನೆ ಕುಣಿತ, ಮೆರವಣಿಗೆಗಳಲ್ಲಿ ಊರಿನ , ದೊಡ್ಡವರು, ಸಣ್ಣವರೆಲ್ಲರು ಭಾಗವಹಿಸುತ್ತಾ ಆನಂದ ಪಡುತ್ತಿದ್ದೆವು.
ಮನೆ, ಮನೆಯಲ್ಲಿ ಆರಾಧನೆ ಗೊಳ್ಳುತ್ತಿದ್ದ ಗಣೇಶ ಸಾರ್ವಜನಿಕವಾಗಿ ಪೂಜಿಸಲ್ಪಟ್ಟುದರ ಹಿಂದೆ ರೋಚಕ ಹೋರಾಟದ ಕಥೆಯೇ ಇದೆ. ಅದರ ಹಿಂದೆ ದೊಡ್ಡ ಉದ್ದೇಶವೇ ಇತ್ತು. 1892 ರ ಸಮಯ ದೇಶ ಬ್ರಿಟಿಷ್ ರ ಆಳ್ವಿಕೆಯಲ್ಲಿತ್ತು. ಅಗಾಧವಾದ ಜಾತಿ ತಾರತಮ್ಯವೂ ಇತ್ತು. ಸಮಾಜದ ಜನರಲ್ಲಿ ಒಗ್ಗಟ್ಟು ಇರಲಿಲ್ಲ. ಜಾತಿ ವೈಷಮ್ಯ , ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟಕ್ಕೆ ಒಂದಾಗಲು ದೊಡ್ಡ ಅಡ್ಡಿಯಾಗಿತ್ತು. ಇದರ ನಿವಾರಣೆಗಾಗಿ ಒಂದು ಉಪಾಯದ ಅಗತ್ಯ ಬಹುವಾಗಿತ್ತು. ಮನೆಯೊಳಗೆ, ದೇವಸ್ಥಾನಗಳಲ್ಲಿ ಪೂಜಿಸಲ್ಪಡುತ್ತಿದ್ದ ಗಣಪನ ಆರಾಧನೆಯನ್ನು ಸಾರ್ವಜನಿಕವಾಗಿ ಎಲ್ಲರೂ ಒಟ್ಡಾಗಿ ಪೂಜಿಸಿದರೆ ಹೇಗೆ ಎಂಬ ಕಲ್ಪನೆ ಮುಖಂಡರನ್ನು ಕಾಡಿತು. ಆರಂಭಿಕವಾಗಿ 1892 ರಲ್ಲಿ ಮಹಾರಾಷ್ಟ್ರ ದಲ್ಲಿ ಬಾವ್ ಸಾಹೇಬ ಲಕ್ಷ್ಮಣ ಜವೇರಿಯವರು ಪ್ರಥಮ ಬಾರಿಗೆ ಸಾರ್ವಜನಿಕ ಗಣೇಶೋತ್ಸವ ಮಾಡಿದರು. ಇದರ ಬಗ್ಗೆ ಸ್ಪಷ್ಟ ಪರಿಕಲ್ಪನೆಯನ್ನು 1892 ರಲ್ಲಿ ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರಕಟಿಸಿದರು. ಆಮೇಲೆ 1894 ರಲ್ಲಿ ಪುಣೆಯ ಕೇಸರಿವಾಡದಲ್ಲಿ ಅಧಿಕೃತವಾಗಿ ಸಾರ್ವಜನಿಕ ಗಣೇಶೋತ್ಸವ ಆರಂಭವಾಯಿತು. ಇಲ್ಲಿ ಜಾತಿ , ಮತ ಭೇದಗಳನ್ನು ಮರೆತು ಜನ ಒಂದಾದರು. ದೇವರ ಆರಾಧನಾ ಉತ್ಸವ ಜನರು ಒಗ್ಗೂಡಲು ಒಂದು ಕಾರಣವಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಧ್ಯೇಯ ವಾಕ್ಯದ ಅರ್ಥ ಜನರಲ್ಲಿ ಜಾಗೃತಿಯುಂಟು ಮಾಡಿತು. ನಾಯಕರ ಕನಸು ಈಡೇರಿತು.
ಗಣೇಶನೆಂದರೆ ಅಲಂಕಾರಪ್ರಿಯ. ಇಂದು ಹಲವು ರೀತಿಯಲ್ಲಿ ಆತನ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಸುವರ್ಣ,ರಜತ, ಕಂಚು, ಪಂಚಲೋಹ , ಶಿಲೆ, ಕಾಷ್ಠ, ಕಡುಶರ್ಕರ, ಗೋಮಯ, ಜೇಡಿ ಮಣ್ಣಿನಿಂದ ತಯಾರಿಸಲಾಗುತ್ತದೆ. ಆದರೆ ಚೌತಿಯ ಸಮಯದಲ್ಲಿ ಆರಾಧಿಸಲು ಯೋಗ್ಯವಾದುದು ಗೋಮಯದ ಮೂರ್ತಿ , ಅಥವಾ ಮಣ್ಣಿನ ಮೂರ್ತಿ. ಪೂಜಿಸಿ ವಿಸರ್ಜಿಸಲು ಅನುಕೂಲಕರವಾದುದರಿಂದ ಹೆಚ್ಚಾಗಿ ಇವುಗಳಿಂದ ಮಾಡಿದ ಮೂರ್ತಿಗಳನ್ನು ಬಳಸುವುದೇ ಸೂಕ್ತ. ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದ ಬಣ್ಣ ಹಾಗೂ ನೈಸರ್ಗಿಕವಾದ ಹೂವು , ಗರಿಕೆಗಳಿಂದ ಮಾಡಿದ ಅಲಂಕಾರವೇ ಚೆಂದ.
ಮೋದಕಪ್ರಿಯ ಗಣಪತಿಗೆ ಹಲವು ಬಗೆಯ ನೈವೇದ್ಯ ಗಳನ್ನು ಸಮರ್ಪಿಸುವುದೇ ಒಂದು ಖುಷಿ. ಪಂಚಕಜ್ಜಾಯ, ಅಪ್ಪ ನೈವೇದ್ಯ, ಮೋದಕ, ಪಾಯಸ, ಕಡುಬು, ಚಕ್ಕುಲಿ, ಖರ್ಜಿಕಾಯಿ, ಇಡ್ಲಿ, ರಸಾಯನ, ಬಾಳೆಹಣ್ಣು ಹೀಗೆ ಎಷ್ಟು ನಮೂನೆ ಮಾಡಿದರೂ ಕಮ್ಮಿಯೇ. ಭಕ್ತಿಯಿಂದ ಗರಿಕೆ ಸಮರ್ಪಿಸಿದರೂ ಗಣಪನಿಗೆ ಇಷ್ಟವೇ.
ಈ ಬಾರಿ ಕಟ್ಟುನಿಟ್ಟಿನ ಶರತ್ತುಗಳೊಂದಿಗೆ ಚೌತಿಯನ್ನು ಆಚರಿಸಬೇಕೆಂಬ ನಿಯಮವಿದೆ. ಕೊರೋನಾ ಕಾಲಘಟ್ಟದಲ್ಲಿ ನಾವು ಜಾಗರೂಕತೆಯಿಂದ. ಹಬ್ಬ ಮಾಡ ಬೇಕಾದ ಅನಿವಾರ್ಯತೆ ಇದೆ. ಭಕ್ತಿ , ಭಾವಕ್ಕೆ ಯಾವ ಅಡ್ಡಿಯೂ ಇರದು, ಆಡಂಬರಕ್ಕೆ ಮಾತ್ರ ಕಡಿವಾಣ. ಮನಃಪೂರ್ವಕವಾಗಿ ಗಣೇಶನಲ್ಲಿ ಕೊರೋನಾ ಕಂಟಕವನ್ನು ನಿವಾರಿಸಿ, ಇಡೀ ಜಗತ್ತಿಗೆ ಒಳಿತುಂಟುಮಾಡು ವಿಘ್ನನಿವಾರಕನೇ …..
#ಅಶ್ವಿನಿಮೂರ್ತಿ ಅಯ್ಯನಕಟ್ಟೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…