ಗೋನಂದಾ ಜಲದ ವಿಚಾರದಲ್ಲಿ ಕೆಲವು ಗೋಪಾಲಕರ ಸ್ವಾಭಾವಿಕವಾಗಿ ಸತ್ತ ಗೋವಿನ ಕಳೆಬರದಿಂದ ಗೋನಂದಾ ಜಲ ತಯಾರಿಕೆಯ ಚಿಂತನೆ ಖಂಡಿತವಾಗಿಯೂ ತಪ್ಪಿಲ್ಲ. ಆದರೆ “ಗೋನಂದಾ ಜಲ ” ಒಂದು ಉದ್ಯಮವಾಗದಿರಲಿ. ಅದು ನನ್ನ ಅಭಿಪ್ರಾಯ ಲೇಖನದ ಸಾರ. ಏಕೆಂದರೆ ಇದುವರೆಗೂ ಅನೇಕ ಪ್ರಾಣಿ ಪಕ್ಷಿಗಳು, ಸಸ್ಯ ಸಂಕುಲಗಳು ತಮ್ಮ ಮೌಲ್ಯದ ಕಾರಣಕ್ಕೆ ಮನುಷ್ಯನಿಂದ ನಾಶವಾಗಿ ಹೋಗಿದೆ..! ಎಲ್ಲರೂ ಗೋ ಪ್ರೇಮಿಗಳಿರೋಲ್ಲ. ಕೊನೆಗ್ಯಾವತ್ತೋ ಗೋನಂದಾ ಜಲಕ್ಕೆ ಲೀಟರ್ ಗೆ ನೂರು ರೂಪಾಯಿ ಅಂತಾದರೆ (ಕೆಲವು ವರ್ಷಗಳ ಹಿಂದೆ ಇದಕ್ಕೆ ಇಷ್ಟು ಬೆಲೆ ಅಂತ ಹೇಳಿ ಮಾರಾಟ ಮಾಡಿದ್ದನ್ನ ನಾನು ಗಮನಿಸಿದ್ದೇನೆ) ಮುಂದೆ ಗೋ ನಂದನಾ ಜಲ ತಯಾರಿಕೆಗಾಗಿ ಗೋ ಹತ್ಯೆ ಮಾಡುವಂತಾದರೆ…. ಎಂಬ ಭಯ ನನ್ನದು. ಮತ್ತು ಇವತ್ತಿನ ನೈಸರ್ಗಿಕ ವಿಕೋಪದ ನಡುವೆ ಪರಿಶುದ್ಧ ಸಾವಯವವೋ, ಮಿಶ್ರ ಸಾವಯವವೋ ಅಥವಾ ರಾಸಾಯನಿಕ ಮಾಧ್ಯಮದ ಕೃಷಿಯಲ್ಲೋ ಯಶಸ್ಸು ಅತ್ಯಂತ ಕಷ್ಟ..
ಅದರಲ್ಲಿ ಭೂ ಸತ್ವ ಕಳೆದುಕೊಂಡ ಭೂಮಿಗೆ ಈ ಗೋನಂದಾ ಜಲ ಬಳಸುವುದರಿಂದ ತಕ್ಷಣ ಭಯಂಕರ ಪವಾಡ ಆಗಿ ಬಿಡುತ್ತದೆ ಎಂಬ ಅತಿರಂಜಿತ ವರ್ಣನೆ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಇದು ಅಸಾಧ್ಯ. ಈ ವರ್ಷ ಕೃಷಿ ಬೇಸಾಯಕ್ಕೆ ಬಳಸಿ ಇನ್ನಾರು ತಿಂಗಳಲ್ಲಿ ಉತ್ತಮ ಇಳುವರಿ ಬಂದರೆ ಅದು ಲಗಾಯ್ತಿನಿಂದ ಮಾಡಿದ ಬೇಸಾಯ ಮತ್ತು ವಾತಾವರಣ ದ ಸಹಕಾರ ಕಾರಣ.
ನಾನೂ ಗೋ ಆಧಾರಿತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಆದರೆ ನಾನೂ ಒಬ್ಬ ಗವ್ಯೋತ್ಪನ್ನಕ ಆಗಿಯೂ ಕೂಡ ನಮ್ಮ ತಯಾರಿಕೆಯ ಗೊಬ್ಬರ “ತಕ್ಷಣ” ಪರಿಣಾಮ ಬೀರಿ ಭಾರೀ ಇಳುವರಿ ಬಂದು ಬಿಡುತ್ತದೆ ಎಂದು ಹೇಳೆನು. ಅಡಿಕೆ ತೆಂಗು ಮುಂತಾದ ತೋಟಗಾರಿಕಾ ಬೆಳೆಗೆ ಯಾವುದೇ ಕಂಪನಿಯ ಸಾವಯವ ಗೊಬ್ಬರ ಬಳಸಿದರೂ ಆ ಗೊಬ್ಬರದ ಸತ್ಪರಿಣಾಮ ಗೊತ್ತಾಗಲು ಕನಿಷ್ಠ ಎರಡು ವರ್ಷಗಳ ಕಾಲ ಬೇಕು. ಅಷ್ಟರ ತನಕ ಆ ಕೃಷಿ ಬೆಳೆಯ ಬುಡದಲ್ಲಿ ಹಾಕಲಾದ ಸಾವಯವ ಗೊಬ್ಬರ ಉಳಿಯಬೇಕು.. ಈ ಕುಂಬದ್ರೋಣ ಮಳೆಯ ಆರ್ಭಟದಲ್ಲಿ ಈ ಪಟ್ಟಣ – ಕಾರ್ಖಾನೆಯ ಕೃತಕ ಸಾವಯವ ಗೊಬ್ಬರಗಳು ಉಳಿಯುತ್ತವೆಯೇ..?
ದ್ರವ ರೂಪದ ಗೊಬ್ಬರ ವೂ ಅಷ್ಟೇ.. ಈ ಜೀವಾಣುಗಳಿಲ್ಲದ, ನಿಗದಿತ ತೇವಾಂಶ ಇಲ್ಲದ, ಅತಿ ಮಳೆ, ಅತಿ ಉಷ್ಣ ವಾತಾವರಣ ದಲ್ಲಿ ಉಳಿದು ಬಾಳುವುದು ಅಸಂಭವ. ಅಂತೆಯೇ ಈ ಗೋನಂದಾ ಜಲದ ವಿಚಾರವೂ ಅಷ್ಟೇ.. ಈ ತಿಂಗಳಲ್ಲಿ ಗೋನಂದಾ ಜಲ ಜಲ ಬೇಸಾಯಕ್ಕೆ ಬಳಸಿ ಮುಂದಿನ ತಿಂಗಳಲ್ಲಿ ಭಯಂಕರ ಇಳುವರಿ ಬಂತು ಎಂದು ಹೊಗಳುತ್ತಾ ಹೋದರೆ ಗೋ ನಂದನ ಜಲ ಭವಿಷ್ಯದಲ್ಲಿ ಹಸುಗಳ ಬಾಳುವೆಗೇ ಅತ್ಯಂತ ಅಪಾಯಕಾರಿಯಾಗುತ್ತದೆ. ಗೋನಂದಾ ಜಲ ತಯಾರಿಸಲು ಸ್ವಾಭಾವಿಕವಾಗಿ ಸತ್ತ ಹಸುವನ್ನು ಮಾತ್ರ ಬಳಸುವ ಬದ್ದತೆಯಿರುವ ಗೋಪಾಲಕರಿಗೆ ಸುಸ್ವಾಗತಗಳು.. ಗೋನಂದಾ ಜಲ ತಯಾರಿಕೆಯ ಉದ್ದೇಶಕ್ಕಾಗಿ ಗೋವುಗಳ ಹನನವಾಗದಿರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ.
ಕೊನೆಯಲ್ಲಿ ಒಂದು ಮಾತು : ಹಿಂದಿನವರು ಪ್ರಾಣಿ ಜನ್ಯ ವಸ್ತುಗಳನ್ನು ಬಳಸಲು ಒಂದು ಕ್ತಮ ಇಟ್ಟುಕೊಂಡಿದ್ದರು. ಚಂಡೆ ಮದ್ದಳೆ ತಯಾರಿಸಲು ನನಗೆ ತಿಳಿದ ಮಟ್ಟಿಗೆ ಸತ್ತ ಹಸುಗಳ ಚರ್ಮ ಬಳಸುತ್ತಿದ್ದರು. ಅದನ್ನು ಸಂಸ್ಕರಿಸಲು ಸಮಾಜದಲ್ಲಿ ಒಂದು ಪ್ರತ್ಯೇಕ ವರ್ಗ ಇತ್ತು. ಅವರೂ ಕ್ರಮವತ್ತಾಗಿ ಆ ಸಂಸ್ಕರಣೆ ಮಾಡುತ್ತಿದ್ದರು. ಆನೆ ಸತ್ತರೆ ಅದನ್ನು ಹೊಂಡ ತೆಗೆದು ಅದರ ಶವದ ಮೇಲೆ ನೂರಾರು ಚೀಲ ಉಪ್ಪು ಸುರಿದು, ಆನೆಯ ಮಾಂಸ ಮಣ್ಣಾದ ಮೇಲೆ ಆನೆಯ ದಂತ ಮತ್ತು ಎಲುಬನ್ನ ಮನುಷ್ಯರು ಬಳಸುತ್ತಿದ್ದರು. ಆ ನಂತರ ಇತ್ತೀಚಿನ ವರ್ಷಗಳಲ್ಲಿ ಮನುಷ್ಯರು ಜೀವಂತ ಆನೆ ಕೊಂದು ಆನೆ ದಂತ ಪಡೆಯುತ್ತಿದ್ದಾರೆ..!
ಮನುಷ್ಯರು ಪ್ರಾಣಿಜನ್ಯ ವಸ್ತುಗಳನ್ನು ಬಳಸಲೇ ಬೇಕೆಂದೇನೂ ಇಲ್ಲ..! : ಮನುಷ್ಯ “ಮಾನವೀಯ ” ನಾದರೆ ಖಂಡಿತವಾಗಿಯೂ ಪ್ರಾಣಿ ಜನ್ಯ ವಸ್ತುಗಳನ್ನು ವರ್ಜ್ಯ ಮಾಡಬಹುದು. ಪ್ರಾಣಿ ಜನ್ಯ ಅನಿವಾರ್ಯ ವೇನಲ್ಲ. ಈಗಾಗಲೇ ವಿದೇಶದಲ್ಲೂ ಈ ಬಗೆಯ ಪ್ರಾಣಿ ಜನ್ಯ ವಸ್ತುಗಳ ಬಳಕೆ ಮಾಡುವುದನ್ನ ದಿಕ್ಕರಿಸುತ್ತಿದ್ದಾರೆ. ಇದು ವ್ಯಾಪಕವಾಗಬೇಕು. ಹಾಗೇ ದೇಸಿ ತಳಿ ಹಸುಗಳ ವಿಚಾರದಲ್ಲೂ ಅಷ್ಟೇ.. ಈ ತರಹ ಸಾದ್ಯತೆ ಕೆಲವೊಮ್ಮೆ ಸತ್ಪಾತ್ರ ರ ಬಳಿ ಇರುವ “ಜ್ಞಾನ” , ಸತ್ಪಾತ್ರ ಬಳಿ ಇರುವ ಆಯುಧ ಸ್ವ ರಕ್ಷಣೆ ಮತ್ತು ಸಮಾಜದ ರಕ್ಷಣೆ ಗಾಗಿ .. ಆದರೆ ಜ್ಞಾನ ಮತ್ತು ಆಯುಧ ಅಪಾತ್ರರ ಕೈಲಿ ಸಿಕ್ಕರೆ ಎಂತಹ ಅನಾಹುತ ಆಗುತ್ತದೆ ಎಂಬುದಕ್ಕೆ ಪ್ರಚಲಿತ ಸಮಾಜದಲ್ಲಿ ಹಲವಾರು ಜೀವಂತ ನಿದರ್ಶನ ಸಿಗುತ್ತದೆ.
ಅವಕಾಶ ಇರುವ ಸಜ್ಜನರು ಖಂಡಿತವಾಗಿಯೂ ಗೋವಿನ ಕಳೆಬರ ದಿಂದ ಗೋನಂದಾ ಜಲ ತಯಾರಿಸಿ ಕೃಷಿಗೆ ಬಳಸಲಿ.. ಆ ಬಗ್ಗೆ ನನ್ನ ಯಾವುದೇ ತಕರಾರು ಇಲ್ಲ.. ಆದರೆ ಯಾವುದೇ ಕಾರಣಕ್ಕೂ ಗೋನಂದಾ ಜಲ ಮುಂದಿನ ದಿನಗಳಲ್ಲಿ ವ್ಯಾಪಾರದ ವಸ್ತುವಾಗದಿರಲಿ ಎಂಬ ಆಶಯ. ಈ ಸಮಾಜದಲ್ಲಿ ಎಲ್ಲಾ ಒಳಿತನ್ನೂ ಕಳೆದುಕೊಳ್ಳುತ್ತಿದ್ದೇವೆ..! ಇಂತಹ ಅವಕಾಶಗಳು ದುರುಪಯೋಗವಾಗ ಬಾರದು ಅಷ್ಟೇ.. ಈ ಬಗ್ಗೆ ಎಚ್ಚರಿಕೆ ಇರಲಿ..
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…