ಇಂದು ನಾವು ತಿಳಿದು ಕೊಳ್ಳಲಿರುವ ಹಕ್ಕಿ ಜೇನ್ನೊಣ ಬಾಕ( Green Bee Eater) ದ ಕುರಿತು. ಕನ್ನಡದಲ್ಲಿ ಕಳ್ಳಿಪೀರ , ಸಂಸ್ಕೃತ ಭಾಷೆಯಲ್ಲಿ ಸಾರಂಗ, ತುಳುವಿನಲ್ಲಿ ತುಂಬೆ ಪಕ್ಕಿ ಎಂತಲೂ ಕರೆಯಲಾಗುತ್ತದೆ.
ಈ ಹಕ್ಕಿ ತನ್ನ ಸೌಂದರ್ಯಕ್ಕೆ ಬುದ್ಧಿವಂತಿಕೆಗೆ, ನಿಖರ ಗುರಿಗೆ ಪ್ರಸಿದ್ಧವಾಗಿದೆ. ಜೇನುನೊಣ ಬಾಕ ಹಕ್ಕಿಗಳಲ್ಲಿ ಸುಮಾರು ೨೦ ಕ್ಕೂ ಹೆಚ್ಚಿನ ಜಾತಿಗಳಿವೆ.ಅದರಲ್ಲಿ ಮೂರು ರೀತಿಯ ಜೇನ್ನೊಣ ಬಾಕಗಳನ್ನು ನಮ್ಮ ಬಾಳಿಲ ಪರಿಸರದಲ್ಲಿ ವನ್ಯಜೀವಿ ಛಾಯಾಚಿತ್ರಗಾರರಾದ ರಾಧಾಕೃಷ್ಣ ರಾವ್ ಯು ಬಾಳಿಲ ರವರು ಗುರುತಿಸಿದ್ದಾರೆ. ಈ Green Bee eater ಗಳು ಆಫ್ರಿಕಾದ ಉತ್ತರ ಭಾಗ ಪಶ್ಚಿಮ ಅರೇಬಿಯಾ, ಭಾರತದಿಂದ ವಿಯೆಟ್ನಾಮ್ ವರೆಗೆ, ಪರ್ಷಿಯಾದ ಭಾಗಗಳಲ್ಲಿ ಕಂಡು ಬರುತ್ತವೆ.
ಮೈ ಭಾಗ ಹಸಿರು, ನೆತ್ತಿಯ ಭಾಗ ಕಂದು ಬಣ್ಣ, ಮೊನಚಾಗಿರುವ ಬಾಗಿದ ಕೊಕ್ಕುಗಳು, ಬಾಲದ ಮಧ್ಯದಿಂದ ಸೂಜಿಯಂತೆ ಹೊರಟ ನೀಳವಾದ ಗರಿಗಳು ಈ ಹಕ್ಕಿಯ ವಿಶೇಷತೆ.
ಎತ್ತರದ ಪ್ರದೇಶಗಳಲ್ಲಿ , ಮರದ ಗೆಲ್ಲುಗಳಲ್ಲಿ, ವಿದ್ಯುತ್ ತಂತಿಗಳ ಮೇಲೆ ಬೇಟೆಗಾಗಿ ಕಾಯುತ್ತವೆ. ಬೇಟೆಯನ್ನು ನಿಖರವಾಗಿ ಗುರುತಿಸಿ ಹಿಡಿಯುತ್ತವೆ. ಗುರಿ ತಪ್ಪುವ ಮಾತೇ ಇಲ್ಲ. ಆಕಾಶದಲ್ಲಿ ಹಾರುವಾಗ ಜೇನ್ನೋಣಗಳನ್ನು , ಮಿಡತೆ, ಜೀರುಂಡೆಗಳು ಹಿಡಿದು ತಿನ್ನುತ್ತವೆ. ನಿಖರವಾದ ಬೇಟೆಯನ್ನು ಕುಳಿತ ಜಾಗದಿಂದಲೇ ಗುರುತಿಸಿ ಹಿಡಿಯುತ್ತವೆ ಮತ್ತು ಪುನಃ ಅದೇ ಸುರಕ್ಷಿತ ಜಾಗದಲ್ಲಿ ಬಂದು ಬೇಟೆಯನ್ನು ತಿನ್ನುತ್ತವೆ. ಈ ಹಕ್ಕಿಗಳು ಗುಂಪಾಗಿರುತ್ತವೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.