ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯರಾದವರು. ತಂದೆಯನ್ನು ದೇವರಿಗೆ ಹೋಲಿಸಿದರೆ ತಾಯಿಯನ್ನು ಗುರುವಿಗೆ ಹೋಲಿಸಲಾಗುತ್ತದೆ. ಮಕ್ಕಳಲ್ಲಿ ಇರುವ ಎಲ್ಲಾ ಲೋಪದೋಷಗಳನ್ನು ತಿದ್ದಿ ಈ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ನೀಡುವುದು ಅಮ್ಮ ಹಾಗೂ ಗುರು ಎಂದು ಹೊಸದಿಗಂತ ಪತ್ರಿಕೆಯ ಸಿಇಓ ಪಿ ಎಸ್ ಪ್ರಕಾಶ್ ಹೇಳಿದರು.
ಅವರು ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿಗುರು ಪೂರ್ಣಿಮೆ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಬರೀ ಸರ್ಟಿಫಿಕೇಟ್‍ಗೋಸ್ಕರ ಶಾಲೆಗೆ ಬಂದರೆ ಅದು ನಿಜವಾದ ವಿದ್ಯೆ ಆಗೋದಿಲ್ಲ, ಸರ್ಟಿಫಿಕೇಟ್ ಜೊತೆಗೆ ನಮ್ಮ ಜೀವನಕ್ಕೆ ಬೇಕಾದ ಒಂದು ಉತ್ತಮ ಮೌಲ್ಯ, ಸಂಸ್ಕಾರವನ್ನು ಕೂಡ ನಾವು ಶಿಕ್ಷಣದಿಂದ ಪಡೆಯುವಂತಾಗಬೇಕು. ಅಂತಹ ಒಳ್ಳೆಯ ಮೌಲ್ಯ ಸಂಸ್ಕಾರವನ್ನು ಈ ಶಕ್ತಿ ಶಾಲೆಯು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇಡೀ ಜಗತ್ತಿಗೆ ಭಾರತದ ಮೌಲ್ಯ ಮಾದರಿಯಾಗಬೇಕು. ಹಾಗೆ ಆಗಬೇಕಾದರೆ ಇಂತಹ ಶಾಲೆಯಲ್ಲಿ ಕಲಿತ ಒಳ್ಳೆಯ ಸಂಸ್ಕಾರಭರಿತ ಮಕ್ಕಳಿಂದ ಮಾತ್ರ ಸಾಧ್ಯಎಂದರು. ನಾಗರಿಕ ಶಿಷ್ಟಾಚಾರದ ಪಾಲನೆಯನ್ನು ನಾವು ಮಾಡಬೇಕು, ಪ್ರಕೃತಿಯ ರಕ್ಷಣೆ ದೇಶರಕ್ಷಣೆಯ ಮೊದಲ ಹೆಜ್ಜೆ, ಹಾಗಾಗಿ ನಾವು ನಮ್ಮ ಪ್ರಕೃತಿಯ ರಕ್ಷಣೆಯನ್ನು ಮಾಡಬೇಕು ಎಂದರು.
ಶಕ್ತಿ ಶಾಲೆಯ ಸಂಸ್ಕೃತ ಶಿಕ್ಷಕಿ ಸಾರಿಕಾ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ತಿಳಿಸಿದರು. ನಂತರ ಮುಖ್ಯ ಅತಿಥಿಗಳಾದ ಪಿ ಎಸ್ ಪ್ರಕಾಶ್ ಅವರಿಗೆ ಪಾದಪೂಜೆಯನ್ನು ಮಾಡುವ ಮೂಲಕ ಗುರುಪೂಜೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಡಾ. ಕೆ ಸಿ ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಆಶೀರ್ವಾದವನ್ನು ಮಾಡಿದರು. ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ರಮೇಶ್ ಕೆ, ಉಪ ಪ್ರಾಂಶುಪಾಲರಾದ ನಟೇಶ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೇಶ್ ಕೆ ಸ್ವಾಗತಿಸಿ , ಶಕ್ತಿ ಶಾಲೆಯ ಶಿಕ್ಷಕ ಶರಣಪ್ಪಕಾರ್ಯಕ್ರಮವನ್ನು ನಿರೂಪಿಸಿದರು.