ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ ಇದು.ಆಗ ಗುಟ್ಕಾ ಬ್ಯಾನ್ ಎಂಬ ಸುದ್ದಿ ದೊಡ್ಡದಾಗಿತ್ತು. ಅಡಿಕೆಗೆ ಗುಟ್ಕಾವೇ ಆಸರೆ. ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಂದು ಚೆರ್ಚೆ ಶುರುವಾಗಿತ್ತು. ಗುಟ್ಕಾ ಬ್ಯಾನ್ ಆದರೆ ಅಡಿಕೆ ಬೆಲೆ ಸಂಪೂರ್ಣ ಕುಸಿಯುತ್ತದೆ ಎಂಬ ಮಾತು ಆಗ ಎಲ್ಲಾ ಅಡಿಕೆ ಬೆಳೆಗಾರರಲ್ಲಿತ್ತು…
ಆ ಸಂಧರ್ಭದಲ್ಲಿ ದಿವಂಗತ ಕೆ ವಿ ಸುಬ್ಬಣ್ಣ ಹೆಗ್ಗೋಡು ಅವರು.”ಅಡಿಕೆಗೆ ಗುಟ್ಕಾ ಆಧಾರವಾದರೆ ನಮಗೆ ಅಡಿಕೆ ಬೆಳೆಯೇ ಬೇಡ ” ಎಂದಿದ್ದರು. ನಿಜಕ್ಕೂ ನಮ್ಮ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆಗೆ ಹಿಂದಿನ ಎಲೆ ಅಡಿಕೆ ಹಾಕುವ , ಬೀಡಾ ತಾಂಬೂಲಕ್ಕಾಗಿ ಬೇಡಿಕೆಯಿದ್ದಿದ್ದರೆ ….!! ತುಂಬಾ ಚೆನ್ನಾಗಿತ್ತು… ಯಾವಾಗ ಗುಟ್ಕಾ ಅಡಿಕೆಗೆ ಖರೀದಿದಾರ ಆಯಿತೋ ಅಡಿಕೆಯ ಮಾನ-ಮರ್ಯಾದೆ ಹೋಯಿತು. ನಮ್ಮ ಮಲೆನಾಡು ಕರಾವಳಿಯ ಅಡಿಕೆಯ ಸಾಂಪ್ರದಾಯಿಕ ಬಳಕೆಯನ್ನು ಪ್ರೋತ್ಸಾಹಿಸಬೇಕಿದೆ. ಗುಟ್ಕೋತ್ತರ ಕಾಲದ ಮಲೆನಾಡು ಕರಾವಳಿಯ ಅಡಿಕೆ ಯ ಬೇಡಿಕೆ ಮತ್ತೆ ಬಂದರೆ ಒಳ್ಳೆಯದು. ಅಡಿಕೆ ಗುಟ್ಕಾ ನೆಂಟಸ್ಥನದಲ್ಲೇ ಇದ್ದರೆ ನಮ್ಮ ಮಲೆನಾಡಿನ ಅಡಿಕೆಗೆ ಇನ್ನೊಂದು ನಾಲ್ಕೈದು ವರ್ಷಗಳ ಕಾಲ ಮಾತ್ರ ಬೇಡಿಕೆಯಿರಬಹುದು.
ಕಾಲ ಬದಲಾಗುತ್ತಿರುತ್ತದೆ. ಜನರ ಆಸಕ್ತಿ ಹವ್ಯಾಸಗಳೂ ಬದಲಾಗುತ್ತಿರುತ್ತದೆ. ಬೀಡಿ ಸೇದುತ್ತಿದ್ದವ ಗುಟ್ಕಾಕ್ಕೆ ಬಂದ. ಇದೀಗ ನೇರವಾಗಿ ಅಮಲುಕಾರಕ ಡ್ರಗ್ಸ್ ಹಳ್ಳಿ ಹಳ್ಳಿಗೂ ಬಂದು ತಲುಪುತ್ತಿದೆ. ಕೆಲವೇ ವರ್ಷಗಳಲ್ಲಿ ಗುಟ್ಕಾ ಕೂಡ ಬೆಲೆ ಕಳೆದುಕೊಳ್ಳುವ ಸಾದ್ಯತೆಯಿದೆ. ಜನ ಕೊಂಕಣ ಸುತ್ತಿ ಮೈಲಾರಕ್ಕೆ ಬರೋದಕ್ಕಿಂತ ನೇರವಾಗಿಯೇ ಡ್ರಗ್ಸ್ ತಗೋಬಹುದು.ಇವತ್ತು ಗುಟ್ಕಾ ಜಾಹೀರಾತಿನಲ್ಲಿ ರೂಪದರ್ಶಿ ಗಳಾಗಿರುವ ಶಾರುಕ್ ಖಾನ್ ಅಜಯ್ ದೇವಗನ್ ತರದವರ ನೋಡಿ ಗುಟ್ಕಾ ಹಾಕುವವರು ಕೂಲಿ ಕಾರ್ಮಿಕರು , ನೆದ್ದೆಗೆಟ್ಟು ಡ್ರೈವಿಂಗ್ ಮಾಡುವ ಡ್ರೈವರ್ ಗಳು ಮಾತ್ರ. ಸೊಂಟದಲ್ಲಿ ಅಥವಾ ಕೈಚೀಲದಲ್ಲಿ ಎಲೆ ಅಡಿಕೆ ಚೀಲ ಇಟ್ಟುಕೊಂಡು ಓಡಾಡುತ್ತಿದ್ದವರು ಈಗಿಲ್ಲ.ಜೋಬಿನಲ್ಲಿ ಬೀಡಿ ಬೆಂಕಿಪೊಟ್ಣ ಇಟ್ಟುಕೊಂಡು ಓಡಾಡುವರು ಈಗಿಲ್ಲ. ಸದ್ಯ ಗುಟ್ಕಾ ಜೇಬಿನಲ್ಲಿ ಇಟ್ಟುಕೊಂಡವರು ಅಲ್ಲಲ್ಲಿ ಕಾಣಿಸುತ್ತಿದ್ದಾರೆ.ಅದೂ ತಾತ್ಕಾಲಿಕ…
ಅಮಲುಕಾರಕ ಉತ್ಪನ್ನ ತಯಾರಿಸಿ ಮಾರಾಟ ಮಾಡುವವರು ತಮ್ಮ ಉತ್ಪನ್ನ ಮಾರಲು ಇನ್ನೊಂದು ಮಾದ್ಯಮ ಹುಡುಕಿಕೊಂಡು ಹೋಗ್ತಾರೆ.ಅಡಿಕೆ ತಾಂಬೂಲಕ್ಕೆ ಸಾವಿರಾರು ವರ್ಷಗಳಿಂದ ಪೂಜನೀಯ ಸ್ಥಾನ ಇತ್ತು.ಎಲ್ಲಾ ಶುಭ ಕಾರ್ಯಗಳಲ್ಲೂ ಎಲೆ ಅಡಿಕೆ ತಾಂಬೂಲ ಇಡುವುದು ಸಾಮಾನ್ಯ. ಯಾರೂ ಎಲೆ ಅಡಿಕೆ ಬದಲಾಗಿ ಗುಟ್ಕಾ ಪ್ಯಾಕೆಟ್ ಇಡೋಕಾಗೋಲ್ಲ.ಅಡಿಕೆ ಬೆಳೆಗಾರರ ಸಂಘಗಳು ಸಾಂಪ್ರದಾಯಿಕ ಅಡಿಕೆ ಬಳಕೆಯ ಮಹತ್ವವನ್ನು ದೇಶದಾದ್ಯಂತ ಪ್ರಚುರ ಪಡಿಸಿ ನಮ್ಮ ಭಾಗದ ದೇಶಾವರಿ ಅಡಿಕೆಗೆ ಮತ್ತೆ ಬೇಡಿಕೆ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಅಡಿಕೆಯ ಸಾಂಪ್ರದಾಯಿಕ ಬಳಕೆಯ ಬಗ್ಗೆ ಹೆಚ್ಚು ಜನರಿಗೆ ತಿಳಿಸಲು ಅಡಿಕೆ ಸಂಶೋಧನೆ ಕೇಂದ್ರ, ಆಹಾರ ಸಂಶೋಧನಾ ಕೇಂದ್ರ, ಕೃಷಿ ವಿ ವಿ ಗಳು, ತೋಟಗಾರಿಕಾ ಸಚಿವಾಲಯ ಕೈ ಜೋಡಿಸಿದರೆ ಅತ್ಯುತ್ತಮ.ಅಡಿಕೆ ಯ ಹಿಂದಿನ ಕಾಲದ ವೈಭವ ಮರಳಿ ಬರಲಿ.ಅಡಿಕೆಯು ಆರೋಗ್ಯವನ್ನು ವೃದ್ದಿಸಿ ಅಡಿಕೆ ಬೆಳೆಗಾರರ ಉಳಿಸಲಿ.