ವಿಶ್ವ ಆರೋಗ್ಯ ಸಂಸ್ಥೆ(WHO)ಯ ದಕ್ಷಿಣ ಏಷ್ಯಾ ಪ್ರಾಂತೀಯ ಕಚೇರಿ ಆಯೋಜಿಸಿದ ಅಡಿಕೆ ಬಳಕೆ–ಆರೋಗ್ಯ ಕುರಿತ ವೆಬಿನಾರ್ ಮೇಲ್ನೋಟಕ್ಕೆ ಸಾರ್ವಜನಿಕ ಆರೋಗ್ಯದ ಚರ್ಚೆಯಂತೆ ಕಾಣಬಹುದು. ಆದರೆ ಅದರ ದೀರ್ಘಾವಧಿಯ ಒಳನೋಟದಲ್ಲಿ ಭಾರತ ಸೇರಿದಂತೆ ದಕ್ಷಿಣ–ಪೂರ್ವ ಏಷ್ಯಾದ ಅಡಿಕೆ ಆಧಾರಿತ ಗ್ರಾಮೀಣ ಆರ್ಥಿಕತೆಗೆ ದೀರ್ಘಾವಧಿಯ ಸಂದೇಶವನ್ನು ನೀಡುತ್ತಿದೆ. ಈಗಾಗಲೇ ಹಂತ ಹಂತವಾಗಿ ಅಡಿಕೆಯ ಮೇಲೆ ಮೌನವಾದ ಒತ್ತಡವನ್ನು ತರಲಾಗುತ್ತಿದೆ. ಈಗ ವೆಬಿನಾರ್‌ನ ಕೇಂದ್ರ “ಅಡಿಕೆ ಬಳಕೆ” ಆಗಿದ್ದರೂ, ಅದರ ಪರಿಣಾಮ ಕೃಷಿ, ಮಾರುಕಟ್ಟೆ ಮತ್ತು ರೈತರ ಜೀವನೋಪಾಯ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
WHO ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರು ಅಡಿಕೆಯನ್ನು ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳೊಂದಿಗೆ ಮುಂದಿಡುತ್ತಾರೆ ಇದರಿಂದಾಗಿ ಬಳಕೆಯನ್ನು ನಿಯಂತ್ರಿಸುವ ನೀತಿ, ಕಠಿಣ ಜಾಗೃತಿ ಅಭಿಯಾನ, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಅಡಿಕೆ ವಿರೋಧಿ ನಿಲುವು ಇವೆಲ್ಲವೂ ಮುಂದಿನ ಹಂತಗಳಲ್ಲಿ ಸರ್ಕಾರಗಳ ನೀತಿಗಳಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಆದರೆ ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಹಂತದಲ್ಲಿ WHO ಅಡಿಕೆ ಕೃಷಿ ನಿಷೇಧ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಅಡಿಕೆ ಬಳಕೆಯ ಮೇಲೆ ಮರುಚಿಂತನೆಯ ಮೇಲೆ ಒತ್ತಡ ಹೇರುತ್ತದೆ. ಇದರ ಅರ್ಥ ಅಡಿಕೆ ಬೆಳೆಯ ಮೇಲೆ ಒತ್ತಡ ಇರುವುದು ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಅಡಿಕೆ ಕೇವಲ ಕೃಷಿಯಲ್ಲ. ಇದು ಲಕ್ಷಾಂತರ ಸಣ್ಣ ರೈತರ ಆದಾಯದ ಆಧಾರವಾಗಿದೆ. ಗ್ರಾಮೀಣ ಮಾರುಕಟ್ಟೆಗಳ ಆರ್ಥಿಕ ಕೇಂದ್ರ, ಕೆಲವು ಪ್ರದೇಶಗಳಲ್ಲಿ “ಪರ್ಯಾಯವೇ ಇಲ್ಲದ” ಬೆಳೆಯಾಗಿದೆ. ಅನೇಕ ಕುಟುಂಬಗಳು ಅಡಿಕೆ ಬೆಳೆಯನ್ನು ನಂಬಿ ಇದ್ದಾರೆ. ಆದ್ದರಿಂದ, ಬಳಕೆಯ ಮೇಲಿನ ನಿರಂತರ ನಕಾರಾತ್ಮಕ ಅಭಿಯಾನಗಳು, ನಿರಂತರವಾಗಿ ಕ್ಯಾನ್ಸರ್ ಹೆಸರಿನ ಭೀತಿಯು ನೇರವಾಗಿ ಅಲ್ಲದಿದ್ದರೂ ಬೇಡಿಕೆ ಕುಸಿತ, ಬೆಲೆ ಅಸ್ಥಿರತೆ ಮತ್ತು ರೈತರ ಆದಾಯದ ಅನಿಶ್ಚಿತತೆಗೆ ಕಾರಣವಾಗಬಹುದು.
ಇಂತಹ ಸ್ಥಿತಿಯಲ್ಲಿ ಆರೋಗ್ಯ ಹಾಗೂ ಕೃಷಿ ಸಂಘರ್ಷ ಎಂದು ನೋಡಿದರೆ, ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಹೀಗಾಗಿ ಈಗ ಆರೋಗ್ಯ ವಲಯ ಮತ್ತು ಕೃಷಿ–ಆರ್ಥಿಕ ವಲಯ ಇವುಗಳ ನಡುವೆ ಸಮನ್ವಯದ ನೀತಿ ಅಗತ್ಯ ಇದೆ. ಅನಗತ್ಯವಾಗಿ ಅಡಿಕೆ ಹಾನಿಕಾರಕ ಎಂದು ಬಿತ್ತುವುದು ನಿಲ್ಲಬೇಕು. WHO ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರೆ, ರೈತರ ಬಗ್ಗೆ ಸರ್ಕಾರಗಳು ಮಾತನಾಡಬೇಕು. ಆದರೆ ಅವರೂ ಮೌನವಾಗಿದ್ದಾರೆ. ಹೀಗಾಗಿ ರೈತರ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ಈಗಿನ ವೆಬಿನಾರ್ ಸದ್ಯ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಿಂದ ಅಡಿಕೆ ಮಾರುಕಟ್ಟೆ, ಅಡಿಕೆಯ ಸದ್ಯದ ಭವಿಷ್ಯದ ಮೇಲೆ ಯಾವ ಪರಿಣಾಮವೂ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಅಡಿಕೆ ಬಳಕೆಯ ಮೇಲೆ ನಿಯಂತ್ರಣ ಹೆಚ್ಚುವ ಸಾಧ್ಯತೆ ಇದೆ. ಕೆಲವು ರಾಜ್ಯಗಳಲ್ಲಿ ಕಠಿಣ ನಿಯಮಗಳು ಬರಲೂಬಹುದು, ಸಾರ್ವಜನಿಕ ಅಭಿಪ್ರಾಯ ಅಡಿಕೆ ವಿರುದ್ಧ ತಿರುಗುವ ಸಾಧ್ಯತೆ ಇದೆ. ಇವೆಲ್ಲವೂ ರೈತರಿಗೆ ಮುಂಚಿತ ಎಚ್ಚರಿಕೆಯ ಗಂಟೆ. ಏಕೆಂದರೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಪಾನ್‌ಮಸಾಲಾಗಳು ಆರೋಗ್ಯದ ನೆಪವೊಡ್ಡಿ ನಿಷೇಧ ಮಾಡಿದ್ದಾರೆ. ಈಗ ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಕೂಡಾ ಅಷ್ಟು ಸುಲಭದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆಯ ಬಗ್ಗೆ ನಡೆಯುವ ಇಂತಹ ವೆಬಿನಾರ್ ಅಥವಾ ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟದ ಚರ್ಚೆಗಳು ಬಹಳ ಗಂಭೀರವಾಗಿರುವುದು ರೈತರ ದೃಷ್ಟಿಯಿಂದ ಮಾತ್ರಾ. ಉಳಿದಂತೆ ರಾಜಕಾರಣಿಗಳು, ಸಂಸ್ಥೆಗಳಿಗೆ, ಸಂಸ್ಥೆಯ ಮುಖ್ಯಸ್ಥರಿಗೆ ಆಡಳಿತ ಅವಧಿಗೆ, ಅಧಿಕಾರದ ಅವಧಿಗೆ ಮಾತ್ರಾ ಇದೊಂದು ಸಮಸ್ಯೆಯಷ್ಟೇ…!. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ



