Advertisement
MIRROR FOCUS

ಪಾರಂಪರಿಕ ಬೀಜೋತ್ಸವ | ದಾವಣಗೆರೆಯಲ್ಲಿ ಮೇ.12 ರಂದು ನಡೆಯಲಿದೆ ಸಂಭ್ರಮದ ಬೀಜ ವೈಭವ |

Share

ಬೀಜ(Seed) ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ(Agriculture) ಜೀವನಾಡಿ. ಸಾವಿರಾರು ವರ್ಷಗಳಿಂದ ಬೀಜ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ(Culture) ಜೊತೆಯಾಗಿ ಬೆಸೆದುಕೊಂಡು ಬಂದಿದೆ. ರೈತರು(Farmer) ತಳಿ(Breed) ವೈವಿಧ್ಯವನ್ನು ಅಭಿವೃದ್ಧಿಗೊಳಿಸಿ, ಕಾಪಾಡಿ, ಪೀಳಿಗೆಯಿಂದ ಪೀಳಿಗೆಗೆ(Generation) ಸಾಗಿಸಿ ತಂದಿದ್ದಾರೆ. ಅಕ್ಕಡಿ, ಮಿಶ್ರಬೆಳೆ, ನವಧಾನ್ಯದಂಥ ಹಲವು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿ ಇರಿಸಿದ್ದಾರೆ.

ಒಕ್ಕಲು ಮಕ್ಕಳ ಜೀವಾಳವಾಗಿರುವ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದ್ದು, ಪ್ರಸ್ತುತ ಎದುರಾಗಿರುವ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರದಾಯಿಕ ತಳಿಗಳಿಗೆ ಆದ್ಯತೆ ನೀಡಬೇಕಿದೆ. ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಐಕಾಂತಿಕ ಮತ್ತು ಸಹಜ ಸಮೃದ್ಧ ಸಹಯೋಗದಲ್ಲಿ ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ಪಾರಂಪರಿಕ‌ ಬೀಜೋತ್ಸವ’ ವನ್ನು ಆಯೋಜಿಸಲಾಗಿದೆ.

ಪಾರಂಪರಿಕ‌ ಬೀಜೋತ್ಸವವು, ನಮ್ಮ ಬೀಜ ಪರಂಪರೆಯ ವೈಭವವನ್ನು ತೋರುವ ಕಾರ್ಯಕ್ರಮವಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಉದ್ದೇಶ ಹೊಂದಿದೆ. ಕರ್ನಾಟಕದ ಬೀಜ ಸಂರಕ್ಷಕರನ್ನೆಲ್ಲಾ ಒಂದೇ ವೇದಿಕೆಯಡಿ‌ ತಂದು ‘ಕರ್ನಾಟಕ ಬೀಜ ಸಂರಕ್ಷಕರ ಬಳಗವನ್ನು’ ಹುಟ್ಟು ಹಾಕುವ ಕನಸು ನಮ್ಮದು.

ಕರ್ನಾಟಕ ಬೀಜ ವೈವಿಧ್ಯದ ತಾಣ.‌ ರತ್ನಚೂಡಿ,ರಾಜಮುಡಿ,ಆಲೂರು ಸಣ್ಣ, ಗಂಧಸಾಲೆಯಂತ ದೇಸಿ ಭತ್ತ, ಕರಿ ಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲೆನಂಥ ನೂರಾರು ಸಿರಿಧಾನ್ಯಗಳು, ಮಟ್ಟುಗುಳ್ಳ, ಈರಂಗೆರೆ ಬದನೆಗಳು, ಬ್ಯಾಡಗಿ ಮೆಣಸಿನಕಾಯಿ, ತಂಬೂರಿ ಸೋರೆ, ಮಂತು ಕುಂಬಳ, ಕಾಶಿ ಟೊಮೊಟೋದಂತ ತರಕಾರಿ, ಕೆಂಪು ಹಲಸು, ದೇವನಹಳ್ಳಿ ಚಕ್ಕೋತ, ಏಲಕ್ಕಿ, ರಸಬಾಳೆಯಂಥ ಹಣ್ಣಿನ ತಳಿಗಳು ಕನ್ನಡ ನಾಡಿನಲ್ಲಿ ನೆಲೆಯಾಗಿವೆ. ಕನ್ನಡ ನಾಡಿನ ಬೀಜ ವೈವಿಧ್ಯ ಎಣಿಕೆಗೆ ದಕ್ಕದಷ್ಟು ಅಗಾಧವಾಗಿದೆ.

ವಾಣಿಜ್ಯ ಬೆಳೆಗಳ ಹಾವಳಿಯಿಂದ ಇಂಥ ಅಪರೂಪದ ಬೀಜ ವೈವಿಧ್ಯ ಕಣ್ಮರೆಯಾಗುತ್ತಿದೆ. ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ ಮೆಣಸು, ಹಾಲುಬ್ಬಲು, ಜೇನುಗೂಡು ರಾಗಿ, ಮರ ಸಜ್ಜೆಯಂಥ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ. ಪೋಷಕಾಂಶಗಳ ಆಗರವಾದ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ, ಮಳೆ ವೈಪರಿತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಅಗತ್ಯತೆ ಇದೆ.

ಒಂದು ದಿನದ ಬೀಜ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ  30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದ್ದು, 1000 ಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಕ್ಕೆ ಬರುತ್ತಿವೆ. ಗುಣ ಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ‘ಸಿದ್ದ ಹಲಸು’ ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಪಾಪಮ್ಮ ಅವರು ಮತ್ತು ಮಾನ್ಯ ಪ್ರಧಾನ ಮಂತ್ರಿಗಳಿಂದ ಸನ್ಮಾನಿತರಾದ ಮೈಸೂರಿನ ಬೀಜಮಾತೆ  ಪದ್ಮಾವತಮ್ಮ ಅವರು ‘ಪಾರಂಪರಿಕ ಬೀಜೋತ್ಸವ’ ವನ್ನು ಉದ್ಘಾಟಿಸಲಿದ್ದಾರೆ. ಮಹಿಳಾ ಸಂಘಗಳು ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟಕ್ಕೆ ತರಲಿವೆ. ದಾವಣಗೆರೆಯ ಜನತೆಗೆ ದೇಸೀ ಸೊಗಡಿನ ಆಹಾರಗಳನ್ನು ಪರಿಚಯಿಸಲು ಮಹಿಳಾ ಸಂಘದ ಸದಸ್ಯರು ಸಾಂಪ್ರದಾಯಿಕ ಅಡುಗೆಗಳ ಜೊತೆ ಬರಲಿದ್ದಾರೆ.

ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿವೆ. ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನಗಳು ಪ್ರದರ್ಶನಕ್ಕೆ ಬರಲಿವೆ. ನೈಸರ್ಗಿಕವಾಗಿ ಬೆಳೆದ ಮಾವು ಮಾರಾಟಕ್ಕೆ ಬರುತ್ತಿದೆ. ಬೀಜ ಉತ್ಸವದ ಅಂಗವಾಗಿ ನಗರದ ಪರಿಸರ ಪ್ರಿಯರಿಗಾಗಿ ‘ ನಮ್ಮ ತೋಟದಿಂದ ನಮ್ಮ ಊಟ’ ಕಾರ್ಯಕ್ರಮ ಏರ್ಪಾಡಾಗಿದೆ. ತಾರಸಿ ಮತ್ತು ಮನೆ ಹಿತ್ತಲಿನಲ್ಲಿ ವೈವಿಧ್ಯದ ಕೈ ತೋಟವನ್ನು ನಿರ್ಮಿಸುವ ತರಬೇತಿ ನೀಡಲಾಗುತ್ತದೆ. ಅದಕ್ಕೆ ಅಗತ್ಯವಿರುವ ಮಣ್ಣು, ಗೊಬ್ಬರ, ಮಣ್ಣಿನ ಮಡಿಕೆ, ಬೀಜದ ಮಾರಾಟವೂ ಇರುತ್ತದೆ. ಹಾಗೆಯೇ, ದಾವಣಗೆರೆ ನಗರದ ಕೈತೋಟ ಆಸಕ್ತರನ್ನು ಒಗ್ಗೂಡಿಸಿ, ‘ಪೌಷ್ಟಿಕ ಕೈತೋಟ ಒಕ್ಕೂಟ’ ರಚನೆ ಆಗಲಿದೆ.

ತೆನೆ ತೋರಣ, ಕೃಷಿ ಆಚರಣೆಗಳ ಪ್ರದರ್ಶನ ಮತ್ತು ರೈತ ವಿಜ್ಞಾನಿಗಳ ಅನುಭವ ಹಂಚಿಕೆ ಇರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಬೀಜ ಸಂರಕ್ಷಕರು ಪರಸ್ಪರ ಕಲೆತು, ಚರ್ಚಿಸಿ ರಾಜ್ಯ ಮಟ್ಟದ ಬೀಜ ಸಂರಕ್ಷಕರ ಒಕ್ಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಉತ್ಸವದ ವಿಷೇಷತೆಗಳು:

  • ಪಾರಂಪರಿಕ ಬೀಜಗಳ ಸಂರಕ್ಷಣೆಯ ರಂಗದಲ್ಲಿ ನಮ್ಮ ದೇಶದಲ್ಲೆ ಹೆಸರಾದ ‘ಸಹಜ ಸಮೃದ್ಧ’ ಸಂಸ್ಥೆಯ ಮುಖ್ಯಸ್ಥರಾದ ಕೃಷ್ಣಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
  • ದೇಶದ ಹೆಸರಾಂತ ಸಹಜ ಕೃಷಿಕರಾದ ‘ಐಕಾಂತಿಕ’ ದ ರಾಘವ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವಿಶ್ವೆಶ್ವರ ಸಜ್ಜನ್ ಅವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
  • ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ಬೆಂಗಳೂರು ನಗರದ ತೋಟಗಾರರಿಗೆ ಪ್ರೇರಣೆ ಮತ್ತು ಚೊದಕಶಕ್ತಿಯಾದ ರಾಜೇಂದ್ರ ಹೆಗಡೆ ಯವರು ದಾವಣಗೆರೆ ನಗರದ ತೋಟಗಾರರಿಗೆ ಮತ್ತು ರೈತರಿಗೆ ತರಬೇತಿ ನೀಡಲಿದ್ದಾರೆ.
  • ನಿರ್ಲಕ್ಷ್ಯಕ್ಕೆ ಒಳಗಾದ ಗೆಡ್ಡೆ ಗೆಣಸಿನಂಥ ಅಪರೂಪದ ಬೆಳೆಗಳ ಪ್ರದರ್ಶನ
  • ವಿವಿಧ ರೀತಿಯ ಸಿರಿಧಾನ್ಯಗಳು, ಸಾಂಪ್ರದಾಯಿಕ ತರಕಾರಿಗಳು, ಹಣ್ಣುಗಳು ಮತ್ತು ವಿವಿಧ ಭತ್ತದ ತಳಿಗಳ ಪ್ರದರ್ಶನ
  • ಹರಿಯಾಣ, ಉತ್ತರ ಪ್ರದೇಶ, ಒರಿಸ್ಸಾ, ತಮಿಳು ನಾಡು ಮತ್ತು ಇತರ ರಾಜ್ಯಗಳಿಂದ ಬೀಜ ಸಂರಕ್ಷರ ಗುಂಪುಗಳು ಭಾಗವಹಿಸಲಿವೆ.
  • ಸುಮಾರು 250 ವಿವಿಧ ರೀತಿಯ ತರಕಾರಿ ತಳಿಗಳು, ಅಕ್ಕಿ ಹಾಗೂ ಸಿರಿಧಾನ್ಯಗಳ ಮಾರಾಟ ನಡೆಯಲಿದೆ
  • ‘ಬೀಜ ವಿನಿಮಯ’ ಕಾರ್ಯಕ್ರಮವಿರುತ್ತದೆ. ಆಸಕ್ತರು ಬೀಜ ಮತ್ತು ಗಿಡಗಳನ್ನು ವಿನಿಮಯಕ್ಕೆ ತರಬಹುದು.
  • ಅಪಾರದವಾದ ಬೀಜ ವೈವಿದ್ಯತೆ ಬರಲಿದ್ದು, ಕೈತೋಟ ಪ್ರಿಯರು ಮತ್ತು ರೈತರು ತಮಗೆ ಬೇಕಾದ ಅಗತ್ಯ ಬೀಜಗಳನ್ನು, ಮತ್ತು ಅಪರೂಪದ ತಳಿಗಳನ್ನೂ, ಇಲ್ಲಿ ಖರೀದಿಸಲು ಅವಕಾಶ ಇರುತ್ತದೆ.
  • ಸುಸ್ಥಿರ ಜೀವನಶೈಲಿಯ ಉತ್ಪನ್ನಗಳಲಾದ ತಾಳೆ ಗರಿಯ ಆಭರಣಗಳು, ಅರಿಶಿನ ಎಣ್ಣೆಯ ಸೋಪ್ ಮತ್ತು ಫೇಸ್ ವಾಶ್, ಮಣ್ಣಿನ ಮಡಿಕೆಗಳು, ಮಕ್ಕಳಿಗೆ ಮಣ್ಣಿನ ಆಟಿಕೆಗಳು ಬರುತ್ತಿವೆ.
  • ವಿಷಮುಕ್ತ ಕೃಷಿ ಉತ್ಪನ್ನಗಳಾದ ಬಿದಿರು ಅಕ್ಕಿ, ಕಂದು ಬಣ್ಣದ ಅಕ್ಕಿ, ಸಾಂಬಾರ್ ಪದಾರ್ಥಗಳು, ಜೇನು ತುಪ್ಪ, ಬೆಲ್ಲ, ಸಿರಿಧಾನ್ಯಗಳು, ಬೇಳೆಕಾಳುಗಳು, ಶೇಂಗಾ ಬೀಜ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ, ಗೋದಿ, ಕೆಂಪು ಉಪ್ಪು.
  • ಆರೋಗ್ಯಕರ ಆಹಾರ ಉತ್ಪನ್ನಗಳಾದ ರಾಗಿ ಮತ್ತು ಜೋಳದ ಅಂಬ್ಲಿ, ಕಾಳುಮೆಣಸಿನ ಬೆಲ್ಲದ ಪಾನಕ, ಬೆಲ್ಲದ ಕೊಬ್ಬರಿ ಬರ್ಫಿ, ಮೊಳಕೆ ಕಾಳು ಹುಸ್ಲಿ, ತೆಂಗಿನ ಗಿಣ್ಣ, ಜವೇಗೊದಿ ಬೆಲ್ಲದ ಕೇಕ್, ಕುಕ್ಕೀಸ್, ಕೆಂಪಕ್ಕಿಯ ಚಕ್ಕುಲಿ, ಮಾಕಲಿಬೇರು ಮತ್ತು ಮಿಡಿ ಮಾವಿನ ಉಪ್ಪಿನಕಾಯಿ, ತೊಕ್ಕು, ಹಿಂಡಿ, ಪುಡಿಗಳು, ನನ್ನರಿ ಮತ್ತು ಕೋಕಮ್ ಜೂಸ್, ಬಾಳೆ ಮತ್ತು ಹಲಸಿನ ಹಣ್ಣಿನ ಹಪ್ಪಳ, ಹಲಸು ಮತ್ತು ಆಲೂ ಚಿಪ್ಸ್, ಬಾಳೆಹಣ್ಣಿನ ಸುಕೇಳಿ ಮತ್ತಿತರ ದೇಸೀ ಆಹಾರ ಉತ್ಪನ್ನಗಳು ಬಾಯಿ ಚಪ್ಪರಿಸಲು ಸಿಗಲಿವೆ.

ಸ್ಥಳ: ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ತಾರೀಕು: 12ನೇ ಮೇ 2024 ಸಮಯ: ಬೆಳಿಗ್ಗೆ 9 ಘಂಟೆಯಿಂದ ಸಂಜೆ 6 ರವರೆಗೆ ವಿವರಗಳಿಗೆ ಸಂಪರ್ಕಿಸಿ: 9743140939, 8867202370

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ

ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…

5 hours ago

ಅಡಿಕೆ ಬೆಳೆಗಾರರೇ ಗಾಬರಿ ಬೇಡ | ಮಾರುಕಟ್ಟೆಯ ‘ತಾತ್ಕಾಲಿಕ ತಿದ್ದುಪಡಿ’ಯ ಹಿಂದಿದೆ ಆರ್ಥಿಕ ಲೆಕ್ಕಾಚಾರ

ಅಡಿಕೆ ಮಾರುಕಟ್ಟೆಯ ಇತ್ತೀಚಿನ ಕುಸಿತ ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಹಣದ ಹರಿವು…

8 hours ago

ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ

ಕಾಂಪೌಂಡ್ ರಬ್ಬರ್ ಆಮದು ಕುರಿತು ಕಳೆದ 10 ವರ್ಷಗಳ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ…

20 hours ago

ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 357 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿ ಹೊಸ…

20 hours ago

ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…

1 day ago

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…

1 day ago