ಭಕ್ತಿಯೊಂದೇ ಸಾಲದೇ? ದೇವರಿಗೆ ಬಹು ಬಗೆಯ ಪೂಜೆಗಳು ಬೇಕೇ? ಮರದ ಪಲ್ಲಕಿಗಿಂತ ಚಿನ್ನದ ಪಲ್ಲಕಿಯಲ್ಲಿ ಮೆರವಣಿಗೆ ಮಾಡಿದರೆ ದೇವರಿಗೆ ಹೆಚ್ಚು ಖುಷಿಯೆ? ದೇವರ ಅನುಗ್ರಹದಲ್ಲಿ ಏರಿಕೆ ಆದೀತೇ? ರುದ್ರಾಭಿಷೇಕಕ್ಕೆ ಹೆಚ್ಚು ಶುಲ್ಕ ಮತ್ತು ಕುಂಕುಮಾರ್ಚನೆಗೆ ಯಾಕೆ ಕಡಿಮೆ ಶುಲ್ಕ? ಈ ಎರಡೂ ಪೂಜೆಗಳನ್ನು ಸಮುದಾಯದ ಹಿತಕ್ಕಾಗಿಯೇ ಮಾಡಬಹುದಲ್ಲವೇ? ಯಾವ ಯಾವ ಪೂಜೆಗೆ ಎಷ್ಟೆಷ್ಟು ಶುಲ್ಕವೆಂಬ ಪಟ್ಟಿ ಯಾಕೆ ಬೇಕಾಗುತ್ತದೆ? ಬಹುದೇವತಾರಾಧನೆಗೂ ಬಹುವಿಧದ ಅರ್ಚನೆಗೂ ಸಂಬಂಧವಿದೆಯೆ? ಇದು ಭಕ್ತರ ನಡುವಿನ ಸ್ತರವಿನ್ಯಾಸಕ್ಕೆ ಹೇತುವಾಗುದಿಲ್ಲವೇ? ಈ ಎಲ್ಲ ಪ್ರಶ್ನೆಗಳು ಯಾಕೆ ಮುಖ್ಯವೆಂಬುದು ಲೇಖನದ ಕೊನೆಯಲ್ಲಿ ಸ್ಪಷ್ಟವಾಗುತ್ತದೆ.
ಭಾರತದಲ್ಲಿ ಸಂಖ್ಯಾಬಲದಲ್ಲಿ ಹಿಂದುಗಳು ಹಿಂದುಳಿಯುತ್ತಿದ್ದಾರೆ. ಇದರಿಂದಾಗಿ ಹಿಂದುಗಳು ತಮಗಿರುವ ಒಂದೇ ಒಂದು ರಾಷ್ಟ್ರವಾದ ಭಾರತವನ್ನು ಕಳಕೊಳ್ಳುತ್ತಾರೆಂಬ ಒಂದು ಆತಂಕ ವ್ಯಾಪಕವಾಗುತ್ತಿದೆ. ಇತ್ತೀಚೆಗೆ ಹವ್ಯಕ ಬ್ರಾಹ್ಮಣರ ಇಬ್ಬರು ಮಠಾಧೀಶರು ಹೆಚ್ಚು ಮಕ್ಕಳನ್ನು ಪಡೆಯಬೇಕೆಂದು ತಮ್ಮ ಭಕ್ತ ಸಮುದಾಯಕ್ಕೆ ಕರೆ ನೀಡಿದ ವಾರ್ತೆಗಳೂ ಬಿತ್ತರವಾದುವು. ಹುಟ್ಟಿದ ಎಲ್ಲಾ ಮಕ್ಕಳನ್ನು ಸಾಕುವ, ಬೆಳೆಸುವ ಮತ್ತು ಒಂದು ನೆಲೆಗೆ ಮುಟ್ಟಿಸುವ ಹೊರೆಯು ಹೆತ್ತವರಿಗೆ ಹೆಚ್ಚಾಗುತ್ತದೆಂದು ಅನ್ನಿಸುವುದಾದರೆ ಇಬ್ಬರಿಗಿಂತ ಹೆಚ್ಚಿನ ಮಕ್ಕಳ ಚಿಂತೆಯನ್ನು ಮಠವೇ ವಹಿಸಿಕೊಳ್ಳುತ್ತದೆಂಬ ಭರವಸೆಯನ್ನು ಸ್ವಾಮಿಗಳು ನೀಡಿದ್ದಾರೆಂಬ ವಾರ್ತೆ ಇದೆ. ಈ ಪ್ರೋತ್ಸಾಹವು ಮಠಾಧೀಶರ ಭರವಸೆಗಳಿಂದಾಚೆಗೆ ಎಷ್ಟರ ಮಟ್ಟಿಗೆ ಪ್ರಾಯೋಗಿಕ ಎಂಬ ಪ್ರಶ್ನೆಯ ಜಿಜ್ಞಾಸೆ ಇದ್ದೇ ಇದೆ. ಏಕೆಂದರೆ ವಿವಿಧ ಜಾತಿಗಳವರು ಹೆಚ್ಚು ಮಕ್ಕಳನ್ನು ಹೆತ್ತು ನೋಡಿಕೊಳ್ಳುವುದಕ್ಕಾಗಿ ಮಠಕ್ಕೆ ಕೊಟ್ಟರೆ ಅವರನ್ನೆಲ್ಲ ಸಮಾನವಾಗಿ ಜಾತ್ಯಾತೀತವಾಗಿ ನೋಡಿಕೊಳ್ಳುವ ವ್ಯವಸ್ಥೆ ಮಠಗಳಲ್ಲಿ ಸಾಧ್ಯವಾಗಬಹುದೇ? ಒಂದು ವೇಳೆ ಆಗಬಹುದು ಎಂದಾದರೆ ಅದೊಂದು ದೇಶದ ಸಾಮಾಜಿಕ ಸಂರಚನೆಯಲ್ಲಿ ಸಾಧಿಸುವ ಅದ್ಭುತ ಏಕತೆಯಾಗುತ್ತದೆ. ಅಂತಹ ಏಕತೆಯೇ ನಮಗೆ ಬೇಕಾದ್ದು ಎಂಬುದಕ್ಕೆ ಗತ ಇತಿಹಾಸದಲ್ಲಿ ಅನೇಕಾನೇಕ ಪುರಾವೆಗಳು ಸಿಗುತ್ತವೆ.
ಹತ್ತನೇ ಶತಮಾನದ ಆರಂಭದಲ್ಲಿ ಘಜ್ನಿ ಮಹಮ್ಮದ್ ಸೋಮನಾಥ ದೇವಾಲಯವನ್ನು ಸೂರೆಗೊಂಡ ಲಾಗಾೈತು 19ನೇ ಶತಮಾನದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಗಟ್ಟಿಯಾಗುವವರೆಗೆ ನಮ್ಮ ದೇಶವು ಸೋಲು ಮತ್ತು ಶೋಷಣೆಗೆ ಒಳಗಾಗುವಲ್ಲಿ ಕಾರಣವಾಗಿದ್ದದ್ದು ಪರಸ್ಪರ ಮತ್ಸರ ಮತ್ತು ಚಂಚನೆಯ ಕೃತ್ಯಗಳು. ರಾಜರುಗಳ ನಡುವೆ ಒಗ್ಗಟ್ಟಿರಲಿಲ್ಲ. ತಮ್ಮ ರಾಜ್ಯಾಧಿಕಾರವನ್ನಷ್ಟೇ ಕೇಂದ್ರವಾಗಿಟ್ಟುಕೊಂಡು ಇನ್ನುಳಿದವರ ಅಳಿವನ್ನು ಸಂಭ್ರಮಿಸುವ ಕುತ್ಸಿತ ಪ್ರತೀಕಾರದ ವರ್ತನೆಗಳು ಪ್ರತಿಯೊಬ್ಬರ ಸೋಲಿಗೂ ಕಾರಣವಾದುವು. ಮೊದಲನೇ ಸ್ವಾತಂತ್ರ್ಯ ಸಂಗ್ರಾಮದವರೆಗೂ ಹಿಂದು ರಾಜರುಗಳು ಒಟ್ಟಾಗಿ ಬ್ರಿಟಿಷರನ್ನು ಎದುರಿಸುವ ಚಿಂತನೆ ಮೂಡಿರಲಿಲ್ಲ. ಹಾಗಾಗಿ ಮೊಘಲರ ಹಾಗೂ ಸುಲ್ತಾನರ ರಾಜ್ಯಗಳು ಅಬಾಧಿತವಾಗಿ ಮುಂದುವರೆದುವು. ಅರ್ಥಾತ್ ಭಾರತದಲ್ಲಿ ಹಿಂದೂ ಏಕತೆಯ ಕೊರತೆಯೇ ಮುಖ್ಯ ಸಮಸ್ಯೆಯೇ ಹೊರತು ಜನಸಂಖ್ಯಾ ಬಲದ್ದಲ್ಲ.
ಹಿಂದುಗಳಿಗೆ ಪ್ರಸಿದ್ಧವಾಗಿರುವ ಕಾಶಿ, ತಿರುಪತಿ, ಮಲೆಮಹದೇಶ್ವರ, ಮಂತ್ರಾಲಯ, ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ಮುಂತಾದ ದೇವಾಲಯಗಳಿಗೆ ಹೋದರೆ ಅಲ್ಲಿ ನಿತ್ಯವೂ ಅಪಾರ ಸಂಖ್ಯೆಯಲ್ಲಿ ಭಕ್ತರ ಸರತಿಯ ಸಾಲುಗಳಿರುವುದು ಕಾಣುತ್ತದೆ. ದೇವರ ಮೂರ್ತಿಯ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವ ಭಕ್ತರ ದಂಡನ್ನು ನೋಡಿದಾಗ ಹಿಂದೂ ಧರ್ಮಕ್ಕೆ ಯಾವ ಕಾಲಕ್ಕೂ ಆತಂಕವಿಲ್ಲವೆಂಬ ಅಭಿಪ್ರಾಯ ಮೂಡುತ್ತದೆ. ಆದರೆ ಅಂಕಿ ಅಂಶಗಳು ವಿರುದ್ಧ ಚಿತ್ರಣ ನೀಡುತ್ತವೆ. ಪ್ರಕಟಿತ ಅಂಕೆ ಸಂಖ್ಯೆಗಳ ಲೆಕ್ಕದಲ್ಲಿ ಭಾರತದಲ್ಲಿ ಎಲ್ಲಾ ಮತಗಳ ಜನಸಂಖ್ಯೆ ಹೆಚ್ಚಾಗಿದ್ದರೂ 1951ರ ಬಳಿಕ ಮುಸ್ಲಿಮರ ಏರಿಕೆ ಪ್ರಮಾಣ ಹೆಚ್ಚಿದೆ. ಸ್ವಾತಂತ್ರ್ಯ ಬಂದಾಗಿನಿಂದ ಹಿಂದುಗಳ ಏರಿಕೆ ಪ್ರಮಾಣ 20% ಇದ್ದರೆ ಮುಸ್ಲಿಮರದ್ದು 29.5% ಇದೆ. ವಿಶ್ವದ ಲೆಕ್ಕಾಚಾರ ನೋಡಿದರೂ ಎರಡನೇ ಸ್ಥಾನದಲ್ಲಿರುವ ಮುಸ್ಲಿಂ ಜನಸಂಖ್ಯೆಯು 2050 ಕ್ಕೆ ಆಗುವಾಗ ಕ್ರಿಶ್ಚಿಯನ್ನರ ಸಂಖ್ಯೆಯನ್ನು ಸರಿಗಟ್ಟಿ ಮುನ್ನೆಡೆಯಲಿದೆ. 2050 ರಲ್ಲಿ ಒಟ್ಟು ದಾಮಾಶಯದಲ್ಲಿ 2.8% ಹಿಂದೂಗಳು ಭಾರತದಲ್ಲಿ ಕಡಿಮೆಯಾಗಲಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ 2010 ರಲ್ಲಿ 79.5% ಇದ್ದ ಹಿಂದೂಗಳ ದಾಮಾಶಯವು 2050ರಲ್ಲಿ 76.7% ಕ್ಕೆ ಇಳಿಯಲಿದೆ. ಇದರೊಂದಿಗೆ ಹಿಂದೂ ಸ್ತ್ರೀಯರ ಪುನರುತ್ಪಾದನಾ ಸಾಮರ್ಥ್ಯವೂ ಕಡಿಮೆಯಾಗಲಿದೆ. ಇನ್ನು ಹಿಂದುಗಳ ಸಂಖ್ಯೆಯಲ್ಲಿ ಆಗುವ ಏರಿಕೆಗೆ ಪಾಕಿಸ್ತಾನದಿಂದ ಹಾಗೂ ಬಾಂಗ್ಲಾದಿಂದ ವಲಸೆ ಬಂದವರೂ ಸೇರಿಕೊಳ್ಳುವುದೂ ಕಾರಣವಾಗುತ್ತದೆ. ಹೀಗಾಗಿ ಹಿಂದುಗಳಿಗೆ ಎಂತ ಇರುವ ಒಂದೇ ಒಂದು ಭಾರತ ರಾಷ್ಟ್ರದ ಅಸ್ತಿತ್ವ ಉಳಿಯುವುದೇ ಎಂಬ ಬಗ್ಗೆ ಚಿಂತೆ ಮೂಡಿರುವುದರಲ್ಲಿ ಅಚ್ಚರಿ ಇಲ್ಲ.
ಹಿಂದೂಗಳಿಗೆ ದೇಶಭ್ರಷ್ಟತೆಯ ಭಯ ನಿವಾರಣೆಯ ಮಾರ್ಗ ಯಾವುದು? ಹಿಂದುಗಳ ಜನಸಂಖ್ಯೆಯನ್ನು ಹೆಚ್ಚಿಸುವುದರಿಂದ ಸಾಧ್ಯವೇ? ಹಾಗೆ ಏರಿದ ಸಂಖ್ಯಾಬಲದಿಂದ ಹೋರಾಟಗಾರರು ನಿರ್ಮಾಣವಾಗುವರೇ? ಶಸ್ತ್ರಧಾರಿಗಳಾಗಿ ಮುಸ್ಲಿಂ ಧರ್ಮಾಂಧರು ದೇವಾಲಯಗಳನ್ನಾಗಲೀ, ಕ್ಯೂಗಳಲ್ಲಿ ನಿಂತ ಭಕ್ತರನಾಗಲೀ ಆಕ್ರಮಿಸಿದಾಗ ಪ್ರತಿಭಟಿಸಿ ಆಕ್ರಮಿಸುವ ಮತ್ತು ಗೆಲ್ಲುವ ಹೋರಾಟದ ನೈಪುಣ್ಯವನ್ನು ಹಿಂದುಗಳು ಪಡೆಯುವರೇ? “ಸರ್ವೆಪಿ ಸುಖಿನಸ್ಸಂತು” ಎಂದು ಪ್ರಾರ್ಥಿಸುವವರು ತಮ್ಮ ಸುಖವೇ ಮರೀಚಿಕೆಯಾಗಲು ಬಿಡದಂತಹ ಧೈರ್ಯ ತೋರುವರೇ?
ನಾಗರಿಕತೆಯ ಪರಮೋಚ್ಚ ನೆಲೆಯಲ್ಲಿ ಅರ್ಥಪೂರ್ಣವೆನ್ನಿಸುವ ಚಿಂತನೆಗಳು ಭಾರತದಲ್ಲಿ ಬಹಳ ಹಿಂದೆಯೇ ಪ್ರಚಲಿತವಾದುವು. ಉದಾಹರಣೆಗೆ “ಎಲ್ಲರ ಬದುಕು ಸುರಕ್ಷಿತವಾಗಿರಲಿ” ಎನ್ನುವ “ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖಭಾಗ್ಭವೇತ್” ಎಂಬುದು ಅಸಾಧಾರಣ ಪ್ರಾರ್ಥನೆ. ಪ್ರತಿಯೊಬ್ಬರ ಜೀವನವೂ ಭದ್ರತೆ ಪಡೆಯಲ್ಲಿ ಯಾರೂ ದುಃಖಿತರಾಗದಿರಲಿ ಎಂಬ ಆಶಯವು ಸಫಲವಾಗಬೇಕಾದರೆ ಎಲ್ಲರೂ ಅದೇ ರೀತಿಯಲ್ಲಿ ಪ್ರಾರ್ಥಿಸುವವರಾಗಬೇಕು. ಆದರೆ ಎಲ್ಲರೂ ಹಾಗೆ ಭಾವಿಸುತ್ತಿಲ್ಲ. ತಮ್ಮ ಧರ್ಮ ತತ್ವಗಳನ್ನು ಖಡ್ಗದ ಮೊನೆಯಿಂದಾದರೂ ಒಪ್ಪುವಂತೆ ಮಾಡುವ ಇಸ್ಲಾಮೀಕರಣದ ಚಿಂತನೆಯುಳ್ಳವರಿಗೆ “ಸರ್ವೆಪಿ ಸುಖಿನಸ್ಸಂತು” ಎಂಬ ಪ್ರಾರ್ಥನೆ ಅರ್ಥವಾಗೋದು ಹೇಗೆ? “ವಸುಧೈವ ಕುಟುಂಬಕಂ” ಎಂಬ ಅತಿ ಉತ್ಕೃಷ್ಟವಾದ ಬೋಧನೆಯು ಜಾತಿವಾದಿ ಸಂಬಂಧಗಳಿಂದ ಹೆಣೆಯಲ್ಪಟ್ಟ ಭಾರತೀಯ ಸಮಾಜದಲ್ಲೇ ಹುಟ್ಟಿದೆಯೆಂದರೆ ಅದೊಂದು ಅಚ್ಚರಿಯಲ್ಲವೇ?
ಈಗ ಈ ಅಚ್ಚರಿಯನ್ನು ನಿಜವಾಗಿಸಬೇಕಾದ ಕಾಲ ಬಂದಿದೆ. ಕೇವಲ ಭಜನೆ, ಘೋಷಣೆಗಳಷ್ಟೇ ಅಲ್ಲದೆ ನಡವಳಿಕೆಯಲ್ಲಿಯೂ ಏಕತೆಯನ್ನು ಸಾಧಿಸಬೇಕಾಗಿದೆ. ಅದಕ್ಕೆ ಸಾಮಾಜಿಕ ಸಮಾನತೆಯೇ ತಳಹದಿಯಾಗಿದೆ. ಪ್ರಸ್ತುತ ನಮ್ಮ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಎರಡು ಪ್ರಮುಖ ಪರಿವರ್ತನೆಗಳು ಬರಬೇಕು. ಒಂದು ಪರಂಪರೆಯ ಮಾರ್ಗ, ಇನ್ನೊಂದು ಆಧುನಿಕ ಮಾರ್ಗ. ಪರಂಪರೆಯ ಮಾರ್ಗವೆಂದರೆ ದೇವಸ್ಥಾನಗಳಲ್ಲಿ ಸರ್ವರಿಗೂ ಸಮಾನವಾದ ಅಂದರೆ ಒಂದೇ ಆರಾಧನಾ ಪ್ರಕಾರ ಇರಬೇಕು. ಭಕ್ತರ ಆರ್ಥಿಕ ಅಂತಸ್ತಿಗೆ ತಕ್ಕಂತೆ ದರ ವ್ಯತ್ಯಾಸರ ಪೂಜೆಗಳಿರಬಾರದು. ಕರ್ಪೂರಾರತಿಯೂ ಕುಂಕುಮಾರ್ಚನೆಯೂ ರುದ್ರಾಭಿಷೇಕವೂ ಎಲ್ಲರಿಗಾಗಿ ಇರಬೇಕು. ಸಾಮಾನ್ಯವಾಗಿ ಬ್ರಹ್ಮಕಲಶಗಳಾದ ಬಳಿಕ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳ ದರ ಪಟ್ಟಿಯು ದೇವಾಲಯದ ಗೋಡೆಯನ್ನೇರುತ್ತದೆ. ಇವುಗಳು ಪೂಜೆಯನ್ನು ವ್ಯಾಪಾರವನ್ನಾಗಿ ಮಾಡಿದ ವಿದ್ಯಮಾನಗಳು. ಇಂದು ಭಕ್ತರು ದೇವಸ್ಥಾನಕ್ಕೆ ಬಂದು ತಮ್ಮ ಹೆಸರಿನಲ್ಲಿ ಪೂಜೆ ಮಾಡಬೇಕೆಂಬ ಇಚ್ಛೆಗೊಳಗಾಗುವುದು ಮತ್ತು ತಮ್ಮ ಧನಬಲಕ್ಕನುಸಾರವಾಗಿ ಯಾವ ಪೂಜೆ ಆಗಬಹುದೆಂದು ಆಯ್ಕೆ ಮಾಡುವ ವ್ಯವಸ್ಥೆಯು ಪರಿಣಾಮದಲ್ಲಿ ಸಾಮಾಜಿಕ ವಿಭಜನೆಗೆ ಕಾರಣವಾಗುತ್ತದೆ. ಅನೇಕ ಬಾರಿ ಆರ್ಥಿಕ ಸ್ತರ ಭಿನ್ನತೆಯು ಜಾತಿಸ್ತರ ಭಿನ್ನತೆಗೆ ಸಂವಾದಿಯಾಗಿರುತ್ತದೆ. ಹೀಗಾಗಿ ದೇವಾಲಯಗಳೇ ಜಾತಿ ಭೇದದ ಘನೀಕರಣಕ್ಕೂ ಕಾರಣವಾಗಿ “ಹಿಂದೂ ಒಂದು” ಎಂಬ ಏಕತೆಯು ಕೇವಲ ಘೋಷಣೆಯ ಮಟ್ಟದಲ್ಲಿ ನಿಲ್ಲುತ್ತದೆ. ಸಮುದಾಯದ ಒಳಿತಿಗಾಗಿ ದೇವಾಲಯಗಳಲ್ಲಿ ರಶೀದಿ ರಹಿತವಾಗಿ ಅರ್ಚನೆಗಳು ನಡೆಯಲಿ. ಹಿಂದೆ ಹೀಗೆಯೇ ಪೂಜೆಗಳು ನಡೆಯುತ್ತಿದ್ದುವು. ಏಕೆಂದರೆ ದೇವಸ್ಥಾನಗಳ ಉಗಮದ ಹಿಂದೆ “ಸರ್ವಜನ ಹಿತಾಯ ಮತ್ತು ಸರ್ವಜನ ಸುಖಾಯ” ಎಂಬ ಪರಿಕಲ್ಪನೆಯೇ ಇತ್ತು. ಅದೇ ಮತ್ತೊಮ್ಮೆ ಜಾರಿಗೆ ಬಂದು “ರಾಷ್ಟ್ರ ಹಿತಾಯ” ಎಂಬ ಏಕೋಪಾಸನೆ ಮತ್ತು ಏಕೋಭಾವನೆ ಮೂಡುವುದು ಅಗತ್ಯವಾಗಿದೆ.
ರಾಷ್ಟ್ರದ ಏಕತೆಯ ಸ್ಥಾಪನೆಗೆ ಆಧುನಿಕ ಮಾರ್ಗವೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಬೇಕಾದ ಬೃಹತ್ ಸಾಧನೆ. ಅಂದರೆ ಪ್ರಾಥಮಿಕ ಹಂತದಲ್ಲಿ ದೇಶದ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪ್ರಾದೇಶಿಕ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವ ವ್ಯವಸ್ಥೆ ಇರಬೇಕು. ಸದ್ಯ ಇರುವ ವ್ಯಾಪಾರೀಕರಣಕ್ಕೆ ಒಳಗಾದ ಶಿಕ್ಷಣ ಸಂಸ್ಥೆಗಳನ್ನೆಲ್ಲ ರಾಷ್ಟ್ರೀಕರಣಗೊಳಿಸಿ ಸರ್ವಸಮಾನತೆಯ ಶಿಕ್ಷಣವನ್ನು ಪ್ರಚಲಿತಗೊಳಿಸಬೇಕು. ಈ ಪ್ರಕ್ರಿಯೆಗೆ ಪ್ರಸ್ತುತ ಇರುವ ಶಿಕ್ಷಣ ಇಲಾಖೆಯ ಋಣಾತ್ಮಕ ಧೋರಣೆಯ ಸಿಬ್ಬಂದಿಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾಯಿಸಬೇಕು. ಪೋಷಕರ ಆರ್ಥಿಕ ಬಲವನ್ನು ಸೂರೆಗೊಳ್ಳುವ ಅಂಕ ರೇಂಕ್‍ಗಳ ಆಕರ್ಷಣೆಗಳನ್ನು ಸ್ಥಗಿತಗೊಳಿಸಬೇಕು. ದೇಶದ ರಕ್ಷಣೆಗೆ ಹೇಗೆ ಏಕ ಸ್ವರೂಪದ ಸೈನ್ಯವಿರಬೇಕೋ ಹಾಗೆಯೇ ಏಕಭಾವನೆಯ ದೇಶಭಕ್ತಿಯನ್ನು ನೀಡುವ ಶಿಕ್ಷಣವೂ ಇರಬೇಕು. ಇದನ್ನು ಮಾಡಲು ಕೇಂದ್ರ ಸರಕಾರವು ಅಂದರೆ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಮನಸ್ಸು ಮಾಡಿದರೆ ಸಾಧ್ಯ. ಈಗ WAQF ಶಾಸನದಲ್ಲಿ ಬದಲಾವಣೆಯನ್ನು ತಂದಂತೆ ಶಿಕ್ಷಣದ ಶಾಸನವನ್ನು ರೂಪಿಸಿ “ಒಂದೂರಿನ ಎಲ್ಲರೂ ಒಂದೇ ಶಾಲೆಗೆ” ಎನ್ನುವ ಪರಿವರ್ತನೆಯನ್ನು ತಾರದ ಹೊರತು ಹಿಂದೂ ಏಕತೆ ಮತ್ತು ಅದರ ಮೂಲಕ ರಾಷ್ಟ್ರದ ಸ್ಥಾಪನೆ ಅಸಾಧ್ಯ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…