ಸ್ನೇಹಯಾನ

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಾಣಿಗಳಿಗೂ ಮನುಷ್ಯರಿಗೂ ಇರುವ ವ್ಯತ್ಯಾಸಗಳಲ್ಲಿ ಒಂದು ಯಾವುದೆಂದರೆ ಆಸ್ತಿಯ ಪರಿಕಲ್ಪನೆ. ಪ್ರಾಣಿಗಳಿಗೆ ಅದಿಲ್ಲ. ಪ್ರಾಣಿಗಳಾಗಲೀ ಪಕ್ಷಿಗಳಾಗಲೀ ತಮ್ಮ ಮರಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಕಲಿಸುತ್ತವೆಯೇ ಹೊರತು ಮನುಷ್ಯರಂತೆ ಆಸ್ತಿಯನ್ನು ಕಟ್ಟಿಕೊಡುವುದಿಲ್ಲ. ಒಂದು ಬೆಕ್ಕಾದರೂ ನಿದ್ರೆ ಬಂದಂತೆ ನಟಿಸುತ್ತಲೇ ತನ್ನ ಬಾಲವನ್ನು ಅಲ್ಲಾಡಿಸುತ್ತಾ ಅದರ ಮೇಲೆ attack ಮಾಡಲು ಮರಿಗಳಿಗೆ ಸವಾಲೊಡ್ಡುತ್ತದೆ. ಮರಿಗಳು ಹಾರಿ ಹಾರಿ ಅಮ್ಮನ ಬಾಲವನ್ನು ಕಚ್ಚಲು ಯತ್ನಿಸುತ್ತವೆ. ತನ್ನ ಬೇಟೆಯನ್ನು ತಪ್ಪಿಸಿಕೊಳ್ಳದಂತೆ ನಿಖರವಾಗಿ ಕಚ್ಚಲು ಅದೊಂದು ಸರಳ ತರಬೇತಿ. ಮುಂದೆ ತಮ್ಮ ಸಾಮರ್ಥ್ಯ ದ ಪ್ರಯೋಗವನ್ನು ಮರಿಗಳೇ ಮಾಡುತ್ತವೆ. ಆಮೇಲೆ ಅವು ಅಮ್ಮ ಬೆಕ್ಕನ್ನು ಬಿಟ್ಟು ಹೋಗುತ್ತವೆ. ಅಮ್ಮ ಬೆಕ್ಕು ಹೊಸ ಮರಿಗಳಿಗೆ ಜನ್ಮ ನೀಡುತ್ತದೆ. ಹೀಗೆ ತಲೆತಲಾಂತರದಿಂದಲೂ ಪ್ರಾಣಿಗಳ ಜೀವನವು ಕಲಿಕೆಗೆ ಮತ್ತು ಸ್ವಂತ ಗಳಿಕೆಗೆ ಕೊಟ್ಟ ಮಹತ್ವವನ್ನು ಮನುಷ್ಯ ಸಮಾಜದಲ್ಲಿ ಕಾಣಲಾರೆವು. ಅದು ಬೇರೆಯೇ ದಾರಿ ಹಿಡಿದಿದೆ.

Advertisement

ಆಸ್ತಿ ಮತ್ತು ಹಣದ ಗಳಿಕೆ ಹಾಗೂ ಅದರ ಉಳಿಸಿಕೊಳ್ಳುವಿಕೆಯ ವಿಧಾನಗಳು ಮನುಷ್ಯರಲ್ಲಿ ಪರಿಶ್ರಮವಿಲ್ಲದ ಸುಖಾಕಾಂಕ್ಷೆಗೆ ಪ್ರೇರಣೆ ನೀಡುತ್ತವೆ. ಅದರ ಪರಾಕಾಷ್ಟೆ ಎಲ್ಲಿಯವರೆಗೆ ಹೋಗಬಹುದು ಎನ್ನುವುದಕ್ಕೆ 2025ರ ಏಪ್ರಿಲ್ 20 ರಂದು ಬೆಂಗಳೂರಿನಲ್ಲಿ ನಡೆದ ಮಾಜಿ ಐಜಿಪಿ ಓಂ ಪ್ರಕಾಶ್ ರವರ ಕೊಲೆ ಒಂದು ಉದಾಹರಣೆ. ವೃದ್ಧಾಪ್ಯದಲ್ಲಿ ಅವರ ವೃದ್ಧ ಹೆಂಡತಿಯೇ ಕೊಲೆಗಾತಿಯಾಗಿ ಕಾಡಿದ ಘಟನೆಯ ಒಳಗೆ ಆಸ್ತಿ ಸಿಕ್ಕದ ಅಸಹನೆ ಇದೆ. ಮನೆಯಲ್ಲೇ ಕೊಲೆಗಾರರು ಹುಟ್ಟಿಕೊಳ್ಳುವುದರ ಹಿಂದೆ ಆಸ್ತಿ ಎಂತಹ ಪ್ರಲೋಭನೆ ಒಡ್ಡುತ್ತದೆ ಎನ್ನುವುದಕ್ಕೆ ಸಾಕ್ಷಿ ಇದು. ಅಣ್ಣ ತಮ್ಮಂದಿರು ಆಸ್ತಿಗಾಗಿ ಹೊಡೆದಾಟಕ್ಕಿಳಿದು ಕೊನೆಗೆ ಒಬ್ಬರಲ್ಲೊಬ್ಬರ ಕೊಲೆಯಲ್ಲಿ ಪರ್ಯವಸಾನಗೊಳ್ಳುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಇತ್ತೀಚೆಗೆ ಮಗನೇ ‘ಆಸ್ತಿಗಾಗಿ ಅಪ್ಪನನ್ನು ಹೊಡೆದು ಕೊಂದ’ ಎಂಬಂತಹ ವರದಿಗಳನ್ನು ಓದುವುದು ನಮಗೆ ಅಭ್ಯಾಸವಾಗಿದೆ. ಆದರೆ ಈ ಪ್ರಕರಣದಲ್ಲಿ ಹೆಂಡತಿಯೇ ಗಂಡನನ್ನು ಕೊಂದಿರುವುದರಿಂದ ‘ಆಸ್ತಿ’ ಎಂಬುದು ಅದೆಷ್ಟು ಕ್ರೂರ ಎಂದು ಅರ್ಥವಾಗುತ್ತದೆ.

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ ಮತ್ತೆ ಅವುಗಳ ಭೇಟಿಯಾದರೆ ಅದು ಉದ್ದೇಶ ಪೂರ್ವಕವಾಗಿರುವುದಿಲ್ಲ, ಅಕಸ್ಮಾತ್ತಾಗಿ ಆಗಿರುತ್ತದೆ. ಅಂದರೆ ಹಕ್ಕಿಗಳ ವೃದ್ಯಾಪ್ಯ ಮತ್ತು ಸಾವಿನ ಬಗ್ಗೆ ನಮಗೆ ಕನಿಷ್ಠ ಅರಿವೂ ಇಲ್ಲ. ಹಾಗೆಯೇ ಪ್ರಾಣಿಗಳ ಬದುಕೂ ಅನಾಮಿಕವಾಗಿ ಮುಗಿಯುತ್ತದೆ. ತಮ್ಮ ಮರಿಗಳಿಗೆ ಅಡಗುವ, ಓಡುವ, ಹಾರುವ, ಹಿಡಿಯುವ, ತಪ್ಪಿಸಿಕೊಳ್ಳುವ ಮತ್ತು ತಮ್ಮ ಬೇಟೆಯನ್ನು ಬಗೆದು ತಿನ್ನುವ ಕೌಶಲವನ್ನು ತಾಯಂದಿರು ಕಲಿಸುತ್ತವೆ. ಸಿಂಹದ ಮರಿಗಳಂತೂ ‘ಸಿಂಹ ಪಾಲನ್ನು’ ಪಡೆಯುವ ಸಾಮಥ್ರ್ಯವನ್ನು ಅನುವಂಶೀಯವಾಗಿ ಗಳಿಸುತ್ತವೆ. ಅಂದರೆ ಪಕ್ಷಿಗಳು ಹಾರುವ ಎತ್ತರವಾಗಲೀ, ಹಲ್ಲಿಗಳು ಹಾರುವ ಹಾತೆಗಳನ್ನು ಗುರಿಯಿಟ್ಟುಕೊಂಡು ಎರಗುವ ಪರಿಯನ್ನಾಗಲಿ, ಜಿಂಕೆಗಳು ಓಡುವ ವೇಗವನ್ನಾಗಲಿ, ಆನೆಗಳು ಗುಂಪಾಗಿ ಸಾಗುವ ಒಗ್ಗಟ್ಟನ್ನಾಗಲಿ, ಮರಿಗಳಿಗೆ ಅಪಾಯವಾದಾಗ ಕಾಪಾಡುವ ಬದ್ಧತೆಯನ್ನಾಗಲೀ ಕಾಣುವಾಗ ನಮಗೇಕೋ ಅಚ್ಚರಿಯಾಗುತ್ತದೆ. ಆದರೆ ಅವೆಲ್ಲ ಅವುಗಳಿಗೆ ಸ್ವಭಾವ ಸಹಜವಾಗಿ ಬಂದ ಸಾಮರ್ಥ್ಯ ಗಳು.

ಮನುಷ್ಯರ ವಿಚಾರಕ್ಕೆ ಬಂದಾಗ ಸಂಸ್ಕೃತಿಯ ಕಲಿಕೆ ಮುಖ್ಯವಾಗುತ್ತದೆ. ಇಲ್ಲಿ ಪ್ರಾಣಿಗಳಂತೆ ಹೊಟ್ಟೆ ತುಂಬಿಸುವ ದಾರಿಯನ್ನು ಮಾತ್ರ ಕಲಿಸುವುದಿಲ್ಲ. ಭಾಷೆಯನ್ನು ಒಂದು ವಾಹಕವಾಗಿ ಬಳಸಿ ಜ್ಞಾನದ ವಿಕಸನದೊಂದಿಗೆ ಮೌಲ್ಯಗಳನ್ನು, ಉತ್ಪಾದನಾ ಕೌಶಲಗಳನ್ನು, ಪರಿಸರದ ಬಳಕೆಯನ್ನು ಹಾಗೂ ಪುನರುತ್ಪಾದನೆಯನ್ನು ಮಾಡುವ ಸಾಮರ್ಥ್ಯವು ಮನುಷ್ಯರಿಗಷ್ಟೇ ಇದೆ. ಅಂದರೆ ಶಿಕ್ಷಣದ ಸಂಸ್ಕೃತಿ ಹಾಗೂ ಜೀವನೋಪಾಯದ ಮಾರ್ಗಗಳನ್ನು ಕಲಿಸುವ ವಿಶಿಷ್ಟತೆ ಮಾನವರಿಗಷ್ಟೇ ಇದೆ. ಹಾಗಾಗಿ ಮನುಷ್ಯರು ತಮ್ಮ ಸಂತತಿಯನ್ನು ವಿದ್ಯೆ ಕಲಿಸಿ ಉದ್ಯೋಗಗಳ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಲ್ಲದೆ ಅವರಿಗೆ ತಮ್ಮ ವೃದ್ಧಾಪ್ಯದಲ್ಲಿ ಸುರಕ್ಷಿತವಾಗಿ ದಿನ ಕಳೆಯುವ ವ್ಯವಸ್ಥೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಆಸ್ತಿಯ ಪರಿಕಲ್ಪನೆ ಹಾಗೂ ಅದರ ಉತ್ತರಾಧಿಕಾರಿತ್ವದ ನಿಯಮಗಳ ಪಾಲನೆ ಸಹಜ ಪ್ರಕ್ರಿಯೆ ಎನಿಸಿ ಅದರ ಸಂಬಂಧವಾಗಿ ಕಾನೂನುಗಳು ಕೂಡಾ ರಚನೆಗೊಂಡಿವೆ. ಅವುಗಳಿಗೆ ಅನುಸಾರವಾಗಿ ಆಸ್ತಿಯ ಮಾಲಕತ್ವದ ಪರಾಭಾರೆಯೂ ನಡೆಯುತ್ತದೆ.

ಮೂರು ತಲೆಮಾರಿನವರೆಗೂ ಕುಳಿತು ತಿಂದರೂ (ಅಂದ್ರೆ ಯಾವುದೇ ಕೆಲಸ ಮಾಡದೆ ಸಂಪಾದಿಸದೆ ಅನುಭೋಗಿಸುತ್ತಿದ್ದರೂ) ಮುಗಿಯದಷ್ಟು ಆಸ್ತಿ ಮಾಡಿಟ್ಟವರಿದ್ದಾರೆ. ಅಂತಹವರ ಸಂಪಾದನೆ ನ್ಯಾಯಬದ್ಧವಾಗಿರಲು ಸಾಧ್ಯವೇ ಇಲ್ಲ. ಅಲ್ಲದೆ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ದುಡಿಯದೆ ಸುಖದಿಂದ ಬದುಕುವಷ್ಟು  ಹಣ ಕೂಡಿಡುವ ಕ್ರಮ ಸಮರ್ಥನೀಯವಲ್ಲ. ಅಂತಹ ಹೊಟ್ಟೆಬಾಕರು ಆರೋಗ್ಯದಿಂದಿರಲು ಸಾಧ್ಯವೇ ಇಲ್ಲ. ಹಾಗಾಗಿ ಮಕ್ಕಳಿಗಾಗಿ ಹಣ ಕಟ್ಟಿಡುವುದು ಸರಿಯಾದ ಮಾರ್ಗವಲ್ಲ. ದುಡಿದು ತಿನ್ನುವಂತಹ ಕೃಷಿ ಭೂಮಿಯನ್ನು ಮಾಡಿಟ್ಟರೂ ಪರವಾಗಿಲ್ಲ, ಆದರೆ ಬಾಡಿಗೆ ಮತ್ತು ಬಡ್ಡಿ ಬರುವಂತಹ ಆದಾಯವನ್ನು ಮಾಡಿಟ್ಟರೂ ಮಕ್ಕಳಿಗೆ ಅದರಿಂದ ತೃಪ್ತಿಯಾದೀತು ಎನ್ನುವಂತಿಲ್ಲ. ಹಾಗಾಗಿ ಮಕ್ಕಳಿಗೆ ವಿದ್ಯೆ ಕಲಿಸಲು, ಉದ್ಯಮ ಆರಂಭಿಸಿ ನಡೆಸಲು ಹಾಗೂ ಉದ್ಯಮದ ಮೂಲ ಬಂಡವಾಳದಲ್ಲಿ ತೊಡಗಿಸಲು ಹೆತ್ತವರು ಸಹಕರಿಸಬಹುದು. ಅದಕ್ಕಿಂತ ಹೆಚ್ಚು ಆಸ್ತಿ ಮತ್ತು ಧನಸಂಪತ್ತನ್ನು ನೀಡಿದರೂ ಅಸಮಾಧಾನ, ದ್ವೇಷ ಹಾಗೂ ಸೇಡಿನ ಕೃತ್ಯಗಳಿಗೆ ಪ್ರೇರಣೆಯಾಗಿ ಬದುಕು ದುಃಖಾಂತ್ಯವಾಗುವ ಅಪಾಯವಿದೆ. ಅಂತಹ ಒಂದು ಅಪಾಯವೇ ಡಿ.ಐ.ಜಿ. ಓಂಪ್ರಕಾಶರ ಮೇಲೆ ಎರಗಿತು. ತಾನು ಸಂಗ್ರಹಿಸಿಟ್ಟ ಸಂಪತ್ತಿನೊಂದಿಗೆ ಅವರಿಂದ ಬದುಕಲಾಗಲಿಲ್ಲ, ಸಾಯಬೇಕಾಯಿತು.

Advertisement

ಆಸ್ತಿ ಮತ್ತು ಠೇವಣಿಗಳ ಪರಿಕಲ್ಪನೆಗಳು ಗಟ್ಟಿಗೊಳ್ಳುವುದರ ಹಿಂದೆ ಸರಕಾರದ ಆಸಕ್ತಿಯೂ ಇದೆ. ಆಸ್ತಿಯ ಮೇಲೆ ತೆರಿಗೆ ವಿಧಿಸುವ ಸರಕಾರವು ಬ್ಯಾಂಕ್ ಠೇವಣಿಗಳ ಮೇಲೂ ತೆರಿಗೆ ವಿಧಿಸುತ್ತದೆ. ಅಂದರೆ ಜನರಲ್ಲಿರುವ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಯು ಸರಕಾರಕ್ಕೆ ಮುಖ್ಯ ಆದಾಯವಾಗುತ್ತದೆ. ಹೀಗಾಗಿ ಆಧುನಿಕ ಜಗತ್ತಿನಲ್ಲಿ ಆಸ್ತಿಗೆ ವಿಶೇಷ ಮೌಲ್ಯವಿದೆ. ಆಸ್ತಿಯಲ್ಲಿ ಸ್ಥಿರಾಸ್ತಿ, ಚರಾಸ್ತಿ, ಪಿತ್ರಾರ್ಜಿತ ಆಸ್ತಿ, ಸ್ವಯಾರ್ಜಿತ ಆಸ್ತಿ ಮುಂತಾದ ಭೇದಗಳಿವೆ. ಪಿತ್ರಾರ್ಜಿತ ಆಸ್ತಿಯು ಹಕ್ಕಿನಿಂದ ಬರುವುದಾಗಿದ್ದು ಒಬ್ಬ ವ್ಯಕ್ತಿಯು ತಾನೇ ಸಂಪಾದಿಸಿದ ಆಸ್ತಿಯು ಸ್ವಯಾರ್ಜಿತವೆನ್ನಿಸುತ್ತದೆ. ಜೀವಿತ ಕಾಲದಲ್ಲಿ ಯಾರೇ ಒಬ್ಬರು ವಿಲ್ ಬರೆದು ತನ್ನ ಆಸ್ತಿಯು ತನ್ನ ಮರಣಾನಂತರ ಯಾರಿಗೆ ಸೇರಬೇಕೆಂಬುದನ್ನು ಬರೆದಿಡಬಹುದು.  ಆದರೆ ಪಿತ್ರಾರ್ಜಿತ ಆಸ್ತಿಯು ಮಕ್ಕಳಿಗೇ ಹಕ್ಕು ಇರುವಂತಹದ್ದಾಗಿದೆ.

ಸ್ವಾರ್ಜಿತ ಆಸ್ತಿಯನ್ನು  ಸಂಗ್ರಹಿಸಿದವರು ತಮ್ಮ ಮಕ್ಕಳಿಗಾಗಲೀ ಬಂಧುಗಳಿಗಾಗಲೀ ನೀಡುವಾಗ ಅದರ ಭವಿಷ್ಯದ ಪ್ರಯೋಜನ ಯಾರಿಗೆ ಸಿಗಬೇಕೆಂಬ ಗುರಿ ಹೊಂದಿರುತ್ತಾರೆ. ಅದು ಅವರ ಇಷ್ಟಾನಿಷ್ಟಕ್ಕೆ ಸೇರಿದ ವಿಚಾರ. ಆದರೆ ಅಂತಹವರ ಆಸ್ತಿಯ ಮೇಲೆ ಕಣ್ಣಿದ್ದವರು ನೀಡುವ ಸಲಹೆಗೆ ಒಪ್ಪದೆ ತನ್ನ ಇಷ್ಟ ಪ್ರಕಾರ ಆಸ್ತಿಯನ್ನು ನೀಡಿದರೆ ಆಸ್ತಿ ನೀಡುವವರೂ ಆಸ್ತಿ ಪಡೆಯುವವರೂ ದುಷ್ಕೃತ್ಯಕ್ಕೆ ಒಳಗಾಗಬೇಕಾದ ಅಪಾಯವಿದೆ. ಅಂತಹ ಅಪಾಯ ಬರುವುದು ಅಪಾರ ಪ್ರಮಾಣದಲ್ಲಿ ಸ್ವಯಾರ್ಜಿತ ಆಸ್ತಿ ಇದ್ದವರಿಗೆ ಮಾತ್ರ. ಒಬ್ಬರಲ್ಲಿ ಆಸ್ತಿಯು ಆದಾಯಕ್ಕೆ ಮೀರಿ ಬೆಳೆದಾಗಲೇ ಇಂತಹ ಸಮಸ್ಯೆ ಉದ್ಭವಿಸುತ್ತದೆ. ಬದಲಾಗಿ ಸೂಕ್ತ ಕಾಲದಲ್ಲಿ ತಾವು ಸಂಗ್ರಹಿಸಿದ ಆಸ್ತಿಯನ್ನು ದಾನ ಧರ್ಮಗಳ ಮೂಲಕ ವಿನಿಯೋಗಿಸಿದರೆ ಆಗ ಜೀವ ನಾಶದ ಸಂದರ್ಭ ಎದುರಾಗುವುದಿಲ್ಲ. ಅಧಿಕಾರ ಮತ್ತು ಅಕ್ರಮ ದಾರಿಗಳಲ್ಲಿ ಸಂಗ್ರಹಿಸಿದ ಹಣವು ಕರ್ಮಫಲದ ರೂಪದಲ್ಲಿ ಆಯಾ ವ್ಯಕ್ತಿಗೇ ಹಾನಿಯುಂಟು ಮಾಡುತ್ತದೆ ಎಂಬ ಭಗವದ್ಗೀತೆಯ ಉಕ್ತಿ ಸತ್ಯವೆಂದು ಇಂತಹ ಪ್ರಕರಣಗಳಿಂದ ತಿಳಿಯುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು

ಸಣ್ಣ ಹಿಡುವಳಿದಾರರಿಗೆ ಈಗ ಕಾಳುಮೆಣಸು ಕೃಷಿಯ ಬಗ್ಗೆ ಸಾಕಷ್ಟು ಗೊಂದಲ. ಇಂತಹ ಸಮಯದಲ್ಲಿ…

57 minutes ago

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…

2 hours ago

ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |

ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…

4 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.

ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…

8 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್

ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…

8 hours ago