Opinion

ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೊಮ್ಮಗಳಿಗೆ ಮಂಗನಬಾವು ಬಾಧಿಸಿದಕ್ಕೆ ಪಾರಂಪರಿಕ ಔಷಧಿಯಾದ ಕಾವಟೆ ಮುಳ್ಳು ತರುವುದಕ್ಕಾಗಿ ಮನೆಯ ಪಕ್ಕದ ಕಾಡು ಹತ್ತಿದೆ. ಹಾಗೆ ಹೋಗಿ ಬರುವಾಗ ಕಾಡಿನ ಪಕ್ಕದಲ್ಲಿಯೇ ಇರುವ ನಮ್ಮ ಕೃಷಿ ಸಹಾಯಕನ ಮನೆಗೂ ಭೇಟಿ ಇತ್ತಿದ್ದೆ. ಅಡಿಕೆ ತೆಗೆಯುವುದು ತೋಟಕ್ಕೆ ಔಷಧಿ ಹೊಡೆಯುವುದು ಆತನ ಕಾಯಕ. ಈ ವರ್ಷ ಒಂದು ದಿನವೂ ರಜೆ ಇಲ್ಲದಂತೆ ಔಷಧಿ ಹೊಡೆಯುವ ಕೆಲಸ ಇತ್ತಂತೆ. ಕುತೂಹಲಕ್ಕಾಗಿ ಏನು ಔಷಧಿ ಅಂತ ಕೇಳಿದೆ. ಹೆಸರುಗಳು ಆತನಿಗೆ ಗೊತ್ತಿಲ್ಲ. ಆದರೆ ಎಲ್ಲಾ ಔಷಧಿಗೂ ಕರಾಟೆ ಒಂದು ಸೇರಿಸಿಯೇ ಹೊಡೆಯುತ್ತಾರಂತೆ. ಅಯ್ಯೋ!! ನಮ್ಮ ದುರ್ವಿಧಿಯೇ!! ಈ ವಿಷಗಳ ಪರಿಣಾಮದ ಕಲ್ಪನೆ ಇದೆಯೋ? ಇಲ್ಲವೋ? ನನಗಂತೂ ಅರ್ಥವಾಗದು. ಇದನ್ನೆಲ್ಲ ಕೇಳಿ ಖೇದದ ಮನಸ್ಸಿನೊಡನೆ ಕಾವಟೆ ಕೆತ್ತೆಯೊಂದಿಗೆ ಮನೆಗೆ ಬಂದೆ.

Advertisement

ಸಂಚಾರ ವಾಣಿ ಹಿಡಿಯುತ್ತಿದ್ದಂತೆ ಗಮನ ಸೆಳೆದದ್ದು ರೂರಲ್ ಮಿರರ್ ಪತ್ರಿಕೆಯಲ್ಲಿ ಬಂದ ಜೇನು ಕುಟುಂಬ ಉಳಿಸುವ ಅಭಿಯಾನ ಲೇಖನಮಾಲೆ. ನಶಿಸುತ್ತಿರುವ ಜೇನು ಕುಟುಂಬದ ಬಗ್ಗೆ ಲೇಖನ ಓದುತ್ತಿದ್ದಂತೆ, ಇಂದು ಕೃಷಿ ಸಹಾಯಕ ಹೇಳಿದ ವಿಷಯ ಮತ್ತಷ್ಟು ತಲೆಯಲ್ಲಿ ಕೊರೆಯಲು ಆರಂಭವಾಯಿತು. ಸುಮಾರು 50 ವರ್ಷದ ಹಿಂದೆಗೆ ಮನಸ್ಸು ಹೊರಳಿತು.

ಆಗಲೇ ಮನೆಯ ಸುತ್ತು ಮುತ್ತಲೆಲ್ಲ ಜೇನು ಕುಟುಂಬವನ್ನು ಸಾಕುತ್ತಿದ್ದೆವು. ಸಂಜೆಯ ಹೊತ್ತು ತೋಟದ ಅಂಚು ಅಥವಾ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದರೆ ಅಲ್ಲೆಲ್ಲ ಜೇನು ಹುಳುಗಳ ಝೇಂಕಾರ ಕೇಳಿಸುತ್ತಿತ್ತು. ತೋಟ ಗುಡ್ಡೆಗಳ ಪಕ್ಕದ ಹುತ್ತಗಳು, ಕಲ್ಲುಕಟ್ಟದ ಸಂದಿಗಳು, ಮರದ ಪೊಟರೆಗಳು, ಕುಂಬಾಗಿ ತೂತುಬಿದ್ದಿರುವ ಅಡಿಕೆ ಮರ, ಇಲ್ಲೆಲ್ಲಾ ತೊಡುವೆ ಜಾತಿಯ ( ಪೆಟ್ಟಿಗೆಯಲ್ಲಿ ಸಾಕುವ ಜೇನು ) ಕಾಡು ಜೇನು ಕುಟುಂಬಗಳು ಯಥೇಚ್ಛವಾಗಿ ದೊರೆಯುತ್ತಿದ್ದವು. ಹಳ್ಳಿಯ ಮಂದಿ ಔಷಧಿಗೋಸ್ಕರ ಅಥವಾ ಕೆಲವೊಮ್ಮೆ ಮಾರಾಟಕ್ಕೋಸ್ಕರ ಈ ಕುಟುಂಬಗಳನ್ನು ಪತ್ತನಾಜೆಗಿಂತ ಮೊದಲು ( ಮೇ 25ಕ್ಕೆ ಮೊದಲು ) ಹೊಗೆ ಹಾಕಿ ಹಾರಿಸಿ ಜೇನು ಸಂಗ್ರಹಿಸುತ್ತಿದ್ದರು. ಹೆಚ್ಚಿನ ಕುಟುಂಬಗಳು ಮಳೆಗಾಲದಲ್ಲಿ ಎಲ್ಲೆಲ್ಲೋ ವಾಸಿಸಿ ಪುನಃ ಹೆಚ್ಚಾಗಿ ಅದೇ ಜಾಗಕ್ಕೆ ಮರು ವರ್ಷ ಬಂದು ತನ್ನ ಸಂಸಾರವನ್ನ ಬೆಳೆಸಿಕೊಂಡಿರುತ್ತಿದ್ದವು. ಸಾಧಾರಣ ಡಿಸೆಂಬರ್ ಅಥವಾ ಜನವರಿ ತಿಂಗಳ ಅಂತ್ಯದೊಳಗೆ ವೃದ್ಧಿಸಿ ಕುಟುಂಬ ವಿಭಜನೆಯಾಗಿ ಹಾರಾಟಕ್ಕೆ ಬಂದವುಗಳು ತೋಟದಲ್ಲಿ ನಮಗೆ ಆಗಾಗ ಕಾಣಸಿಗುತ್ತಿತ್ತು. ಇಂತವುಗಳನ್ನು ಹಿಡಿದು ಪೆಟ್ಟಿಗೆಯಲ್ಲಿ ಕೂರಿಸುವ ಕ್ರಮವೂ ಇತ್ತು.

ಇತ್ತೀಚೆಗಿನ ವರ್ಷಗಳಲ್ಲಿ ತೋಟಗಳ ವಿಸ್ತರಣೆಯು ಆಯ್ತು. ವೈಜ್ಞಾನಿಕ ಕೃಷಿ ಬಹಳವಾಗಿ ಪ್ರಚಾರವಾಯಿತು. ಒಂದೆರಡು ಮಿಡಿ ಉದುರುವುದು ಅಪರಾಧವಾಯಿತು. ಅನೇಕ ಸಂಸ್ಥೆಗಳು, ಅಂಗಡಿಯವರು, ಬೋಧಕರಾದರು. ಪರಿಣಾಮ ಹಂತ ಹಂತವಾಗಿ ಹೆಚ್ಚಿನ ಕೃಷಿಕರ ಮನೆಗಳಿಗೂ ಅನೇಕ ರಾಸಾಯನಿಕ ಸಿಂಪಡಣೆಗಳು ಬಂದವು. ಅವನು ಬಿಟ್ಟ ಎಂದು ಇವನು, ಇವನು ಬಿಟ್ಟ ಎಂದು ಆಚೆಯವ, ತಾನು ಬಿಡದೆ ಇದ್ದರೆ ಪ್ರಗತಿಪರ ಅಲ್ಲ ಎಂದು ತಿಳಿಯುವವ ಹೀಗೆ ಬೆಳೆಯ ಹೆಸರಿನಲ್ಲಿ ವಾತಾವರಣಕ್ಕೆ ವಿಷವನ್ನು ಸಿಂಪಡಿಸಲಾಯಿತು.

ಅದರ ಮುಂದಿನ ಪರಿಣಾಮ ಅನೇಕ ಜೀವ ಸಂತಾನದ ನಾಶ ನಮ್ಮ ಕಣ್ಣು ಮುಂದೆ ಇದೆ. ಮೇಲುನೋಟಕ್ಕೆ ಕಂಡಂತೆ ಗುಬ್ಬಚ್ಚಿ ಹೆಚ್ಚು ಕಮ್ಮಿ ಸರ್ವನಾಶ, ಅಳಿಲುಗಳು, ಕಾಗೆ, ಕೆಂಬೂತಗಳು, ನಮಗೆ ಕಾಣಸಿಗುವುದೇ ಅಪರೂಪವಾಗಿದೆ.

ಮೇಲೆ ಹೇಳಿದ ಸಮೃದ್ಧಿಯ ಜೇನು ಝೇಂಕಾರ ಈಗ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಕುಟುಂಬ ವಿಭಜಿಸಿ ಬರುವದ್ದು ಸದ್ಯದ ವರ್ಷಗಳಲ್ಲಿ ಕಾಣಲೇ ಇಲ್ಲ. ಕಾಡು ಕುಟುಂಬಗಳು ಗೋಚರಿಸದೆ ಕೆಲವು ವರ್ಷಗಳೇ ಆದುವು. ಸಂಪೂರ್ಣ ನಾಶವಾಗದಿದ್ದರೂ ಇದೆಲ್ಲಾ ಜೇನು ಸಂತತಿಯ ಅವನತಿಯ ಲಕ್ಷಣದಂತೆ ಗೋಚರಿಸುವ ಅಂಶ. ಯಾವುದೇ ಜೀವ ಜಗತ್ತಿನ ಸಂತತಿಯ ಇಳಿಕೆ ಅಂದರೆ ನಾಶದ ಪ್ರಥಮ ಹಂತ.

ಶಿಫಾರಸು ಮಾಡಿದ ಪ್ರಮಾಣದಲ್ಲಿ ಯಾವುದೇ ಸಿಂಪಡಣೆ ಅಪಾಯಕಾರಿಯಲ್ಲ ಎಂಬ ವಾದವೂ ಇದೆ. ಶಿಲೀಂದ್ರ ನಾಶಕಗಳು ನಿರಪಾಯಕಾರಿ ಎಂಬ ವಾದವೂ ಇದೆ. ಆದರೆ ಈ ಸರಿಯಾದ ಪ್ರಮಾಣದ ಬಗ್ಗೆ ಎಷ್ಟು ಮಂದಿಗೆ ಅರಿವಿದೆ. ಅರಿವೇ ಇಲ್ಲದಿರುವಾಗ ಬೇಕಾಬಿಟ್ಟಿ ಮಾರಾಟಕ್ಕೆ ಲಭ್ಯವಿರುವುದು ವಿನಾಶಕ್ಕೆ ಬಾಗಿಲು ತೆರೆದಿಟ್ಟಂತಲ್ಲವೇ?

ಜೇನು ನೊಣಗಳಾದಿ ಕೀಟಗಳು ಬಹಳ ಸೂಕ್ಷ್ಮ. ಸರಿಯಾದ ಪ್ರಮಾಣ ಅಂತ ಹೇಳಿ ಮಾಡಿದ ಸಿಂಪಡಣೆಯೂ ಕಾಲಾಂತರದಲ್ಲಿ ನಿಧಾನ ವಿಶವಾಗಿ ಅವುಗಳನ್ನು ನಾಶಪಡಿಸುವುದಿಲ್ಲ ಎಂಬುದಕ್ಕೆ ಖಾತರಿ ಏನು? ಅದೆಷ್ಟೋ ಮಾನವನಿಗೆ ಸಂಬಂಧಪಟ್ಟ ಔಷಧಿಗಳು ಮಾನವನಿಗೆ ದೋಷವಾಗಿ ಹಿಂತೆಗೆದುಗೊಂಡದ್ದು ನಮ್ಮ ಕಣ್ಣ ಮುಂದೆ ಇಲ್ಲವೇ? ಮಾನವನಂತ ದೊಡ್ಡ ಜೀವಿಗೇ ಹೀಗಾಗಿರುವಾಗ ಅತ್ಯಂತ ಸೂಕ್ಷ್ಮ ಜೀವಿಯಾದ ಜೇನಿಗೆ ಹಾನಿ ಆಗುವುದಿಲ್ಲ ಎಂಬುದು ನಮ್ಮ ಭ್ರಮೆ ಎಂಬುದು ಅನಿಸಲಾರದೆ?

ಪತ್ರಿಕೆಯ ಲೇಖನದ ಪ್ರಕಾರ ಅತ್ಯಂತ ಮುಂದುವರಿದ ದೇಶವಾದ ಮತ್ತು ಸಾಕ್ಷರರಾದ ಅಮೆರಿಕದಲ್ಲಿಯೇ ಅತ್ಯಂತ ಹೆಚ್ಚು ಜೇನು ಕುಟುಂಬಗಳ ನಾಶ ಆಗಿದೆ ಎಂದಾದರೆ ರಾಸಾಯನಿಕ ಸಿಂಪಡಣೆಗಳು ನಿರಪಾಯಕಾರಿ ಎಂಬ ವಾದ ಹುರುಳಿಲ್ಲದ್ದು ಅಂತ ಅನಿಸುವುದಿಲ್ಲವೇ?

ಎಲ್ಲಾ ನಾಶನವೆಲ್ಲ ಕಾಲಾವಶವಾದೊಡಂ,
ಕ್ಷುಲ್ಲಕನು ನರನಾದೊಡಂ ಕಾಲನಿದಿರೊಳ್,
ಉಲ್ಲಾಸವೇ ಧರ್ಮ ಕೊಲ್ಲಿಪನೆ ಬೆಳೆಯಿಪನು,
ಹುಲ್ಲೊಣಗಿ ಬೆಳೆವುದಲ ಮಂಕುತಿಮ್ಮ.

ಎಲ್ಲವೂ ನಾಶಗೊಂಡು ಕಾಲವಶವಾದಾಗ ಮನುಷ್ಯನು ಕಾಲನ( ಯಮ) ಮುಂದೆ ಕ್ಷುಲ್ಲಕನೆನೆಸಿಕೊಳ್ಳುತ್ತಾನೆ. ಸರಿಯಾದ ದಾರಿಯಲ್ಲಿದ್ದರೆ ಕೊಲ್ಲಿಸುವವನೇ ಬೆಳೆಯಗೊಡುತ್ತಾನೆ. ಒಣಗಿದ ಹುಲ್ಲಾದರೂ ಮತ್ತೆ ಮತ್ತೆ ಬೆಳೆಯುತ್ತಲಿರುತ್ತದೆ ಎಂಬುದನ್ನು ಅರಿತುಕೊಂಡರೆ ಸಮಾಜಕ್ಕೆ ಕ್ಷೇಮ.

ಮಂಕುತಿಮ್ಮನ ಮಾತಿನಂತೆ ಎಲ್ಲವೂ ನಾಶವಾಗದ ಮುನ್ನ ಎಚ್ಚೆತ್ತುಕೊಳ್ಳೋಣ. ನಮ್ಮಂತೆಯೇ ಉಳಿದ ಜೀವಿಗಳು ಅಂತ ಜೇನು ಸಹಿತ ಜೀವಕೋಟಿಗೆ ನಮನ ಸಲ್ಲಿಸೋಣ.

ಎ.ಪಿ. ಸದಾಶಿವ ಮರಿಕೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

6 hours ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

6 hours ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

6 hours ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

6 hours ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

15 hours ago