ಇದೊಂದು ಕೃಷಿ ಸಂಬಂಧಿತ ವಾಟ್ಸ್ ಆಪ್ ಗುಂಪಿನಲ್ಲಿ ಬಂದ ಓರ್ವ ರೈತನ ಮನದಾಳದ ಚಿಂತನ ಮಂಥನ.. ರೈತರಾದ ನಾವು ಈ ಎಲ್ಲಾ ಸಂಗತಿಗಳನ್ನು ಯೋಚಿಸಲೇಬೇಕು.. ಹಾಗೆ ಕೃಷಿಕರಾದರೆ ಯಾವೆಲ್ಲ ಕಷ್ಟ ಹಾಗೂ ಗೊಂದಲಗಳ ಮಧ್ಯೆ ಬದುಕಬೇಕು ಅನ್ನೋದನ್ನು ವಿವರವಾಗಿ ಹೇಳಿಕೊಂಡಿದ್ದಾರೆ.
ಅರಿಶಿನ ಬೆಲೆ ಬಿದ್ದಿದೆ. ಚಾಮರಾಜನಗರ ಜಿಲ್ಲೆಯ ರೈತರು ಪ್ರತಿಭಟಿಸುತ್ತಿದ್ದಾರೆ. ಕೊಬ್ಬರಿ ಬೆಲೆ ಬಿದ್ದಿದೆ ತಿಪಟೂರು ಕಡೆ ಗಲಾಟೆ, ತೆಂಗು ಬಿದ್ದೇ ಇದೆ ಎಲ್ಲಾ ಕಡೆಯಲ್ಲೂ ರೈತರು ಸಂಕಷ್ಟದಲ್ಲಿದ್ದಾರೆ. ತರಕಾರಿ ಕೇಳುವವರೇ ಇಲ್ಲ. ಬೆಳೆದವ ಹತಾಶನಾಗಿದ್ದಾನೆ. ಎಲ್ಲಾ ಕಡೆ ಕೃಷಿಯಲ್ಲಿ ಉತ್ಸಾಹ ಕುಂಠಿತಗೊಂಡಿದೆ…
ಈಗೊಂದು ನಾಲ್ಕು ವರ್ಷದಲ್ಲಿ ಹೊಸ ಅರಿಶಿನದ ತಳಿ ಬಂದಿತ್ತು. ಸಿಕ್ಕಾಪಟ್ಟೆ ಒಳ್ಳೆಯ ಇಳುವರಿ ಎಂದಾಗ ನಾನು ಯಾಕೆ ಬೇಕು ಹೆಚ್ಚಿನ ಇಳುವರಿ ಅಂದಿದ್ದೆ. ಯಥಾಪ್ರಕಾರ ಒಂದಿಷ್ಟು ವಾದಗಳು, ಒಂದಿಷ್ಟು ತರ್ಕಗಳು ಬಂದು ಹೋಗಿದ್ದವು. ಹೆಚ್ಚಿನ ಇಳುವರಿ ಬಂದರೆ ರೈತನಿಗೇ ನಷ್ಟ. ಅಷ್ಟಂತೂ ಸದ್ಯದ ಪರಿಸ್ಥಿತಿಯಲ್ಲಿ ಸತ್ಯ. ಕೋಲ್ಡ್ ಸ್ಟೋರೇಜ್ ಮಾಡಿದರೆ ರೈತನಿಗೆ ನಷ್ಟ ಎನ್ನುವುದೂ ಸತ್ಯ. ಅಂತದ್ದರಲ್ಲಿ ಹೆಚ್ಚು ಹೆಚ್ಚು ಬೆಳೆದು ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಹಾಕಿಕೊಂಡರೆ ಹೇಗೆ?
ಈಗ ನೋಡಿ ನಮ್ಮೂರಿನಲ್ಲಿ ಒಂದು ಎಕರೆಯೂ ರಾಗಿ ಬೆಳೆದಿಲ್ಲ. ಅದಕ್ಕೆ ಸಿಗುವ ಬೆಲೆಗೆ ಮಾಡಬೇಕಾದ ಕೆಲಸಕ್ಕೆ ಯಾರಿಗೂ ಅದು ಬೇಡವಾಗುತ್ತಿದೆ. ಎಲ್ಲಾ ರೈತರ ಮನೆಯಲ್ಲಿರಬೇಕಾದ ರಾಗಿ, ಆಚೆಯಿಂದ ತರಬೇಕಾಗಿ ಬರುತ್ತಿರುವ ಕೆಟ್ಟ ಸಮಯವಿದು. ಇಷ್ಟೆಲ್ಲಾ ಕೊರತೆಯ ಕಾರಣ ಅದರ ಬೆಲೆ 35 ರೂಪಾಯಿ. ಯಾವ ಕಳ್ಳನೂ ಕದ್ದ ಮಾಲನ್ನೂ ಇಷ್ಟು ಕಡಿಮೆ ಬೆಲೆಗೆ ಕೊಡುವುದಿಲ್ಲ ಅದರ ಕೆಲಸ ನೋಡಿದರೆ. ಆದರೆ ರೈತ ಹೆಚ್ಚು ಬೆಳೆದಾಗ ಹನ್ನೆರಡು ರೂಪಾಯಿಗೂ ಕೊಡುತ್ತಿದ್ದ, ಈಗ ಆರೇಳು ವರ್ಷದಲ್ಲಿ.
ಇನ್ನು ಕೆಲವೇ ವರ್ಷದಲ್ಲಿ ಹಣ್ಣು ಹಂಪಲು ಹೆಚ್ಚುತ್ತದೆ,ಒಂದಿಷ್ಟೇ ತರಕಾರಿಯಾಗುತ್ತದೆ, ಬೇಳೆಕಾಳುಗಳು ಇಲ್ಲವೇ ಇಲ್ಲ ಎಂಬಂತಾಗುತ್ತದೆ ಇದು ಸತ್ಯ. ಒಂದು ಕೆಲಸ ಹೆಚ್ಚು, ಕೆಲಸಗಾರರಿಲ್ಲ, ಬೆಲೆಯೂ ಇಲ್ಲ. ಜೊತೆಗೆ ಒಂದೊಂದು ತಲೆಮಾರು ಕಡಿಮೆಯಾಗುತ್ತಾ ಇದನ್ನು ಬೆಳೆಯುವ ಕೌಶಲ್ಯವೂ ಕಾಣೆಯಾಗುತ್ತಿದೆ. ಇದು ಅತ್ಯಂತ ಭಯವಾಗಬೇಕಾದ ವಿಷಯ. ಒಂದು ಬೆಳೆಯನ್ನು ದೂರದಿಂದಲೇ ಒಮ್ಮೆ ನೋಡಿ ಅದರ ಆರೋಗ್ಯ ಗುರುತಿಸಬಲ್ಲ ರೈತರು ಕಡಿಮೆಯಾಗುತ್ತಿದ್ದಾರೆ.
ಭತ್ತ ಹೇಗೋ ಉಳಿಯುತ್ತದೆ ಯಾಕೆಂದರೆ ಅದಕ್ಕೆ ಒಂದಿಷ್ಟು ಉಪಕರಣಗಳು ಬಂದಿವೆ, ಗದ್ದೆ ಬಯಲುಗಳು ಒಟ್ಟೊಟ್ಟಿಗೆ ಸಿಗುತ್ತದೆ. ಯಾಂತ್ರೀಕರಣ ಬಳಸಿ ಹೇಗೋ ಮಾಡಬಹುದು. ಒಮ್ಮೆ ಕಟಾವಾದರೆ ಹೆಚ್ಚಿನ ಕೆಲಸವಿಲ್ಲ. ರಾಗಿ ಹಾಗಲ್ಲ. ರಾಗಿ ಬೆಳೆಯುವುದು ಭತ್ತಕ್ಕಿಂತ ಸುಲಭ. ಆದರೆ ಕಟಾವಿನ ನಂತರದ ಕೆಲಸಗಳು ರೇಚಿಗೆ ಎನಿಸುವಷ್ಟು ವಿಪರೀತ. ಆ ಒಡ್ಡು ಹಾಕುವುದೇ ಕೌಶಲ್ಯ. ಅದನ್ನು ಕಟ್ಟಲು ಈಗಲೇ ಅನುಭವಿಗಳು ಕಡಿಮೆಯಾಗುತ್ತಿದ್ದಾರೆ. ಜೊತೆಗೆ ಇವರೆಲ್ಲರೂ ಸಣ್ಣ ರೈತರು ಹಿಡುವಳಿ ಕಡಿಮೆಯಾದ ಕಾರಣ ಯಾಂತ್ರೀಕರಣ ಕಷ್ಟ ಹಾಗೂ ದುಬಾರಿ. ಹೇಗೆ ಬೆಳೆಯುತ್ತಾರೆ? ಅಂತದ್ದರಲ್ಲಿ ಈ ವರ್ಷ ಸಿರಿಧಾನ್ಯದ ವರ್ಷ. ಮೊದಲೇ ಜನರಿಲ್ಲ ಎನ್ನುವಾಗ ಸಿರಿಧಾನ್ಯ ಬೆಳೆದು ಕೊಡುವವರು ಯಾರು? ಏನೇನೋ ಯೋಜನೆಗಳನ್ನು ರೂಪಿಸಿ ಒಂದಿಷ್ಟು ಸಬ್ಸಿಡಿಯ ಆಸೆ ತೋರಿಸಿ ಅಳಿದುಳಿದ ರೈತರನ್ನು ಮತ್ತೆ ಕಷ್ಟಕ್ಕೆ ದೂಡಬೇಕಷ್ಟೆ.
ಯಾಕೋ ಜನರಿಗೆ ಅರ್ಥವಾಗುತ್ತಲೇ ಇಲ್ಲ. ಮೊನ್ನೆ ಒಂದು ವಿಡಿಯೋ ಓಡುತ್ತಿತ್ತು. ಯಾರೋ ಒಬ್ಬರು ಭಾರತ ಸ್ವರ್ಣಯುಗ ಎಂದು ಮಾತನಾಡುತ್ತಿದ್ದರು. ಅವರು ಹೇಳುವ ಪ್ರಕಾರ ಒಂದು ನಿಮಿಷಕ್ಕೆ ಮೂವತ್ತು ಜನ ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಅದ್ಭುತವಾಗಿ ಬೇಡಿಕೆಗಳು ಹೆಚ್ಚುವುದಂತೆ. ಅವರಿಗೆಲ್ಲಾ ಊಟ, ವಸತಿ, ಶಾಲೆ, ಗಾಡಿ, ಆಸ್ಪತ್ರೆ ಬೇಕಾಗುವುದಂತೆ. ಇತ್ಯಾದಿ ಇತ್ಯಾದಿ ಅಂಕಿ ಅಂಶಗಳನ್ನು ಉದುರಿಸುತ್ತಿದ್ದರು. ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಯೋಚಿಸುತ್ತಿದ್ದೆ. ಈಗಾಗಲೇ ಒಂದು ದಿನಕ್ಕೆ ಒಬ್ಬ ಗಂಡಸು ಕೆಲಸಗಾರನಿಗೆಕಮ್ಮಿ ಅಂದ್ರೆ 500 ರೂ. ಆ ಸಂಬಳ ಕೊಟ್ಟು ರಾಗಿ ಬೆಳೆಯುವುದಾದರೂ ಹೇಗೆ? ಒಂದು ಎಕರೆ ಭೂಮಿ ಕನಿಷ್ಠ ಹದಿನೈದು ಲಕ್ಷ. Cost of cultivation ಲೆಕ್ಕ ಮಾಡುವಾಗ, ನಾವೂ ಕಂಪೆನಿಗಳ ಹಾಗೆ ಭೂಮಿಯ ಖರ್ಚನ್ನೂ ಸೇರಿಸಿದರೆ (ಇಲ್ಲೇ ಅರುಣ್ ಜೇಟ್ಲಿ, ಮೋದಿ ಮೋಸ ಮಾಡಿರುವುದು ಎಮ್.ಎಸ್.ಪಿ ಕೊಡುವಾಗ) ಆ ಬೆಲೆ ಕೊಟ್ಟು ಉಣ್ಣಲು ಯಾರಿಗೆ ಸಾಧ್ಯ?
ಒಟ್ಟಾಗಿ ಕೃಷಿ ಅವನತಿಯತ್ತ ಸಾಗುತ್ತಲೇ ಇದೆ. ಮೋದಿ ಅದರ ವೇಗವನ್ನು ಇನ್ನೂ ಬಹಳ ಪಟ್ಟು ಹೆಚ್ಚಿಸಿದ್ದಾರೆ. ಕೋವಿಡ್ ತರಹದ ಒಂದು ಪ್ರಕರಣವಾದರೂ ಮೋದಿ ತನ್ನ ಹಾದಿ ಬದಲಿಸದೇ ಹಾಗೇ ಹೋಗುತ್ತಿರುವುದು ಹುಚ್ಚಾಟ ಅನಿಸುತ್ತದೆ. ಇಡೀ ಭಾರತದ ಆಹಾರದ ಭಾರವನ್ನು ಕೃಷಿ ಸಮುದಾಯ ಹೊತ್ತಿತ್ತು. ಪಟ್ಟಣದಲ್ಲಿ ಲಾಕ್ ಡೌನ್ ಎಂದಾಗಲೂ ಕೃಷಿಗೆ ಅನುಮತಿ ಕೊಟ್ಟದ್ದು ಉಳ್ಳವರಿಗೆ ಊಟವಿರಲಿ ಎಂದೇ. ಅದನ್ನು ಮರೆತು ಯಾವನೋ ಒಬ್ಬ ದಿನಕ್ಕೆ ಮೂರು ಕೋಟಿ ಚಾರಿಟಿಗೆ ಕೊಟ್ಟ ಎನ್ನುವವರಿಗೆ ಏನು ಹೇಳೋಣ? ಒಂದು ಹೊತ್ತಿನ ಊಟ ಕೊಡಲು ರೈತನೊಬ್ಬ ತನ್ನ ಆಯುಷ್ಯ,ಆರೋಗ್ಯ ಎಲ್ಲವನ್ನೂ ಕೊಡುತ್ತಾನೆ.ಅವನು ಹಣ ಹಾಕಿ ಹಣ ಮಾಡುವ ಕೆಲಸ ಮಾಡುವುದಿಲ್ಲ. ಪ್ರತಿ ಬಾರಿಯೂ ಹೊಸತಾಗಿ ಬೆಳೆಯುತ್ತಾನೆ.
ಮೋದಿಗೆ ಮಾತನಾಡಲು ಒಂದು ವಿಷಯ ಬೇಕು. ಆತ ಒಂದೇ ಭಾಷಣದಲ್ಲಿ natural farming ಹಾಗೂ ಕೃಷಿ ಯಾಂತ್ರೀಕರಣ ಎರಡನ್ನೂ ಮಾತನಾಡಬಲ್ಲರು! ಸಿರಿಧಾನ್ಯದ ಬಗ್ಗೆ ಹೇಳುತ್ತಲೇ ಹಳ್ಳಿಯಿಂದ ಪಟ್ಟಣಕ್ಕೆ ವಲಸೆಯಿಂದ ಎಷ್ಟು ಬೇಡಿಕೆ ಹೆಚ್ಚಾಗುತ್ಯದೆ ಎಂದು ಹೇಳಬಲ್ಲರು. ಅವರಿಗೆ ಬೆಳೆಯುವವನೇ ಪಟ್ಟಣಕ್ಕೆ ಹೋಗಿ ಕೂಲಿ ಮಾಡಿದರೆ ಬೆಳೆಯುವವರು ಯಾರು ಎಂದೂ ತಿಳಿಯುತ್ತಿಲ್ಲ. ನಮ್ಮ ವಿರೋಧ ಪಕ್ಷಗಳಿಗೆ ಮೋದಿಯನ್ನು ಎಲ್ಲಿ ಹೇಗೆ ವಿರೋಧಿಸಬೇಕೆಂದೂ ತಿಳಿಯುತ್ತಿಲ್ಲ. ಮೋದಿಗೆ ಏನೋ ಸಿರಿಧಾನ್ಯ ಎಸೆದರೆ ಬೆಳೆದುಬಿಡುತ್ತದೆ ಎಂದು ಯಾರೋ ಹೇಳಿದಂತಿದೆ. ಅಷ್ಟು ಧಾನ್ಯಗಳಲ್ಲಿ ರಾಗಿಯೊಂದೇ ಉಳಿದಿದ್ದ ಕಾರಣ ಅದು ಇರುವುದರಲ್ಲಿ ಸುಲಭ ಎಂದು. ಏರತ್ತಿರುವ ತಾಪಮಾನದಲ್ಲಿ ಯಾವುದೇ field crop ಬೆಳೆಯುವುದು ಅಸಾಧ್ಯ ಎನಿಸುತ್ತಿರುವಾಗ ಸಿರಿಧಾನ್ಯವನ್ನು, ರಾಗಿಯನ್ನು ಬೆಳೆಯುವುದು ಹೇಗೆ?
ನಗರಕ್ಕೆ ವಲಸೆ ಹೋಗುವುದೇ ಉತ್ತಮ ಅಭಿವೃದ್ಧಿಯ ಅಂಶವಾದರೆ ದೇವರೇ ಕಾಪಾಡಬೇಕು. ಭಾರತದ ಅಮೃತ ಕಾಲ ಎನ್ನುವ ಈ ಸಮಯದಲ್ಲಿ ಹತ್ತು ವರ್ಷವಾದ ಮೇಲೇನಾದರೂ ಕೋವಿಡ್ ರೀತಿಯ ಘಟನೆ ಸಂಭವಿಸಿದರೆ ಆಗ ಈ ಪೋಸ್ಟ್ ಮತ್ತೆ ಓದಿ. ಆಗಲಾದರೂ ಕೃಷಿಕರು ಯಾಕೆ ಬೇಕು ಎಂದು ತಿಳಿಯುತ್ತದೆ. ಒಂದು ಬೆಳೆಯನ್ನು ಬೆಳೆಯದೆ ಇರುವವರು , ಜಿಡಿಪಿ, ಮಾನವ ಸಂಪನ್ಮೂಲದ ಪಾಠ ಮಾಡಬೇಡಿ. ನಿಮಗೆ ಜೀವನದ ಆದ್ಯತೆಗಳೇ ತಿಳಿದಿಲ್ಲ.