“ಈ ಚುಕ್ಕೆ ರೋಗ ನಾವು ಚಿಕ್ಕವರಾಗಿದ್ದಾಗಲೇ ಇತ್ತು. ಇದೇನು ಹೊಸದಲ್ಲ. ಏನಾಗಲ್ಲ. ನೀನು ಸುಮ್ನಿರು” ಅಂದ್ರು ಚಂದ್ರಣ್ಣ. ಅವರ ಮಗ ರಮೇಶನಿಗೆ ಗೊಂದಲ. ಎಲ್ಲೆಡೆ ಎಲೆ ಚುಕ್ಕಿ ರೋಗ ಗಂಭೀರವಾಗಿದೆ, ಅಡಿಕೆ ತೋಟ ನಾಶ ಮಾಡುತ್ತಿದೆ ಎಂಬ ಮಾತು ಮತ್ತು ವಿಡಿಯೋಗಳನ್ನು ನೋಡಿ ಕಂಗಾಲಾಗಿದ್ದ ರಮೇಶ, ಅಪ್ಪನ ಮಾತು ಕೇಳಿ ಗೊಂದಲಕ್ಕೀಡಾದ. ನಂತರ, ಸಿಪಿಸಿಆರ್ ಐ ಸಂಸ್ಥೆಯ ತಜ್ಞರನ್ನು ಭೇಟಿ ನೀಡಿ ಉತ್ತರ ಕಂಡು ಕೊಂಡ.
ಒಂದು ದಿನ ಮಾತಿಗೆ ಸಿಕ್ಕರು ಈ ಯುವ ಕೃಷಿಕ. ಚಂದ್ರಣ್ಣ ಹೇಳಿದ್ದು ಸರಿ ಇತ್ತು. ಎಲೆ ಚುಕ್ಕಿ ರೋಗ 1960 ರ ದಶಕದಲ್ಲಿಯೇ ಅಡಿಕೆಯನ್ನು ಬಾಧಿಸುವ ರೋಗವೆಂದು ವರದಿಯಾಗಿತ್ತು. ಆದರೆ, ಅದು ಮಾರಕ ರೋಗವಾಗಿರಲಿಲ್ಲ. ಮಳೆಗಾಲದಲ್ಲಿ ಅಡಿಕೆ ಮರದ ಕೆಳಭಾಗದ ಸೋಗೆಗಳಲ್ಲಿ ಕಾಣುವ ಕಂದು ಬಣ್ಣದ ದೊಡ್ಡ ಗಾತ್ರದ ಚುಕ್ಕಿಗಳು, ಕಂದು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕಿಗಳು, ಹೀಗೆ ನಾನಾ ರೀತಿಯ ಚುಕ್ಕೆಗಳು ಅಡಿಕೆಯನ್ನು ಕಾಡುತ್ತವೆ. ಕೊಲೆಟೊಟ್ರೈಕಮ್ ಸೇರಿದಂತೆ ಬೇರೆ ಬೇರೆ ಜಾತಿಯ ಶಿಲೀಂಧ್ರಗಳು ಉಂಟು ಮಾಡುವ ರೋಗ ಲಕ್ಷಣಗಳಿವು.
ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬಯಸಿದ ರಮೇಶ, ಸುಳ್ಯದ ಗುತ್ತಿಗಾರು ಮತ್ತು ನಡುಗಲ್ಲು ಇಲ್ಲಿನ ತೋಟಗಳಿಗೆ ಡಾ. ತವಪ್ರಕಾಶ್, ಮತ್ತವರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಜೊತೆಯಾದ. ಆರೇಳು ವರ್ಷಗಳ ಹಿಂದೆ ಚಿಕ್ಕಮಗಳೂರಿನ ಕಳಸ ಭಾಗದಲ್ಲಿ ಅಡಿಕೆ ಮರಗಳ ಕೆಂಪಾಗುತ್ತಿವೆ ಎಂಬ ಮಾಹಿತಿಯನ್ನು ಆಧರಿಸಿ, ಆ ಪ್ರದೇಶಗಳಿಗೆ ಭೇಟಿ ಕೊಟ್ಟಾಗ, ಎಲೆಯ ಮೇಲೆ ಹೊಸ ರೀತಿಯ ಚುಕ್ಕೆಯನ್ನು ಸಿಪಿಸಿಆರ್ ಐ ಸಂಸ್ಥೆಯ ಡಾ. ವಿನಾಯಕ ಹೆಗ್ಗಡೆ ಮತ್ತು ಡಾ. ತವಪ್ರಕಾಶರು ಗಮನಿಸಿದ್ದರು. ಅಷ್ಟೊಂದು ಗಂಭೀರವಾಗಿ ರೋಗ ಬಾಧಿಸಿದ್ದು ಅವರೆಲ್ಲರನ್ನು ಆಶ್ಚರ್ಯಗೊಳಿಸಿತು. ನಂತರದ ಕೆಲವೇ ವರ್ಷಗಳಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶಗಳಾದ ಮಲೆನಾಡು ಮತ್ತು ಕರಾವಳಿಗೆ ಹಬ್ಬಿ ಇಂದಿಗೂ ಕೃಷಿಕರನ್ನು ಕಾಡುತ್ತಿದೆ. ಹಳದಿ ಬಣ್ಣದಿಂದ ಆವೃತವಾಗಿರುವ ಕಂದು ಬಣ್ಣದ ಚುಕ್ಕೆಗಳು ಈ ಹೊಸ ರೋಗದ ಲಕ್ಷಣ. ಇದು ಕೊಲೆಟೊಟ್ರೈಕಮ್ ಕಹಾವೇ (ಸಿಗ್ಗಾರೊ) ಎಂಬ ಹೊಸ ಜಾತಿಯ ಶಿಲೀಂದ್ರ ಎನ್ನುವುದು ಸಿಪಿಸಿಆರ್ ಐ ಸಂಸ್ಥೆಯ ಅಧ್ಯಯನದಲ್ಲಿ ಕಂಡು ಬಂದಿರುವ ವಿಚಾರ. ಕೊಲೆಟೊಟ್ರೈಕಮ್ ಒಂದು ಅನೇಕ ಉಪ ಜಾತಿಗಳಿರುವ ಸಂಕೀರ್ಣವಾದ ಪ್ರಬೇಧವಾಗಿದೆ.
“ಗಾಳಿಯಲ್ಲಿ ಈ ರೋಗದ ಸೋಂಕು ಬಹಳ ಬೇಗನೆ ಹರಡುತ್ತದೆ. ಕೃಷಿಕರು ಅಡಿಕೆ ಸಸಿಗಳನ್ನು ಒಂದು ಜಾಗದಿಂದ ಇನ್ನೊಂದು ಪ್ರದೇಶಕ್ಕೆ ಸಾಗಾಟ ಮಾಡುವಾಗ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಹಳ ಸುಲಭವಾಗಿ ಸಸಿಗಳ ಮೂಲಕ ಬೇರೊಂದು ಜಾಗಕ್ಕೆ ಹರಡುತ್ತದೆ. ಸೂಕ್ತವಾದ ವಾತಾವರಣ ಸಿಕ್ಕಾಗ ತನ್ನ ನಿಜರೂಪವನ್ನು ತೋರಿಸುತ್ತದೆ.” ಎಂದು ಡಾ. ತವಪ್ರಕಾಶರು ರಮೇಶನಿಗೆ ಹೇಳಿದಾಗ ರೋಗದ ಗಾಂಭೀರ್ಯತೆ ಅರಿವಾಯಿತು.
“ಹಾಗಾದ್ರೆ, ಇಲ್ಲಿಯವರೆಗೆ ಸುಮ್ಮನಿದ್ದ ಶಿಲೀಂದ್ರ, ಒಮ್ಮೆಲೇ ಅಡಿಕೆ ಸೋಗೆಯನ್ನು ಸಂಹರಿಸುತ್ತಿರುವುದು ಯಾಕೆ?” ರಮೇಶನ ಪ್ರಶ್ನೆಗೆ ಉತ್ತರಿಸುವುದು ತವಪ್ರಕಾಶರಿಗೆ ಸ್ವಲ್ಪ ಕಷ್ಟವಾಯಿತು. “ಶಿಲೀಂದ್ರಗಳು ಸುಲಭವಾಗಿ ಮಾರ್ಪಾಡು ಹೊಂದುತ್ತವೆ. ಅಡಿಕೆಯನ್ನು ಕಾಡುತ್ತಿರುವ ಈ ಹೊಸ ಜಾತಿ ಶಿಲೀಂದ್ರವು, ಕಾಫಿ ಬೆಳೆಯನ್ನು ಬಾಧಿಸುವ ಕುರಿತು ಉಲ್ಲೇಖಗಳಿವೆ. ಅಲ್ಲದೇ, ಮೊದಲು ಈ ಶಿಲೀಂದ್ರವನ್ನು ನಾವು ಕಂಡದ್ದು ಕಳಸ ಭಾಗದ ಕಾಫಿ ಮತ್ತು ಅಡಿಕೆ ಬೆಳೆಯುವ ಪ್ರದೇಶದಲ್ಲಿ. ಹಾಗಾಗಿ, ಬೇರೆ ಬೆಳೆಯಿಂದ ಅಡಿಕೆಗೆ ಬಂದಿರುವ ಸಾಧ್ಯತೆ ತಳ್ಳಿ ಹಾಕಲಾಗದು. ಹಾನಿಯುಂಟು ಮಾಡುವ ಶಕ್ತಿಯು ಈ ಶಿಲೀಂಧ್ರಗಳ ಉಪಜಾತಿ (strain/race)ಗಳಲ್ಲಿ ವ್ಯತ್ಯಾಸವಿರುತ್ತದೆ. ಅದರ ಹಾನಿ ಮಾಡುವ ಶಕ್ತಿ, ಬೆಳೆ, ಪೂರಕ ವಾತಾವರಣ, ಇವುಗಳನ್ನು ಆಧರಿಸಿದೆ. ಈ ಹೊಸ ಜಾತಿಯ ರೋಗಾಣು ಪೂರಕ ವಾತಾವರಣ ಇದ್ದಾಗ ಬಹಳ ವೇಗವಾಗಿ ಅಡಿಕೆ ಮರದ ಎಲೆ, ಹಾಳೆ ಮತ್ತು ಕಾಯಿಯ ಮೇಲೆ ಬೆಳೆದು, ಹಾನಿ ಮಾಡುವ ಶಕ್ತಿ ಹೊಂದಿದೆ. ಇದು ಈಗ ಕಂಡು ಬಂದಿರುವ ಶಿಲೀಂಧ್ರದ ಶಕ್ತಿ. ಹವಾಮಾನ ಬದಲಾವಣೆಯಿಂದ ಅದರ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವೂ ಕಾರಣ” ಎಂದು ಉತ್ತರಿಸಿದರು.
ಚಿಂತಾಕ್ರಾಂತನಾದ ರಮೇಶ, “ಇದಕ್ಕೆ ಮುಕ್ತಿ ಇಲ್ಲವೇ? ಸಿಂಪಡಣೆ ಮಾಡುತ್ತಿರುವ ಕ್ರಮ ನೋಡಿದರೆ ಭಯವಾಗುತ್ತದೆ. ನಾವೇನು ಮಾಡಬಹುದು?” ಎಂದು ಪ್ರಶ್ನಿಸಿದ್ದು, ತರಕಾರಿ, ದವಸ- ಧಾನ್ಯಗಳಲ್ಲಿ ಸುಲಭವಾಗಿ ಉತ್ತರಿಸಬಹುದಾದ, ಅಡಿಕೆ ತೋಟದಲ್ಲಿ ಜಟಿಲವಾದ ಪ್ರಶ್ನೆ.…… ಮುಂದೆ ಓದಿ……
ಕಾರಣವಿಷ್ಟೇ, ಈ ಎಲೆ ಚುಕ್ಕಿಯ ಸೋಂಕು ಗಾಳಿಯಲ್ಲಿ ವೇಗವಾಗಿ ಹರಡಿ, ಸೂಕ್ತ ವಾತಾವರಣದಲ್ಲಿ ರೋಗವನ್ನು ಉಂಟು ಮಾಡುವ, ರೋಗಭಾದಿತ ಸಸ್ಯ ಭಾಗದಲ್ಲಿ ಏಳೆಂಟು ತಿಂಗಳು ಉಳಿದುಕೊಳ್ಳುವ ಈ ಶಿಲೀಂದ್ರವನ್ನು ಸುಲಭವಾಗಿ ನಿಯಂತ್ರಿಸಲಾಗದು. ಇದರ ನಿರ್ವಹಣೆಗೆ ನಾವು ಬಳಸುವ ಅಂತರ್ವ್ಯಾಪಿ ಶಿಲೀಂದ್ರನಾಶಕಗಳ ಉಳಿಕೆ ಸಸ್ಯ ಭಾಗದಲ್ಲಿ ಕೆಲದಿನಗಳವರೆಗೆ ಮಾತ್ರ. ಶಿಲೀಂದ್ರವನ್ನು ಪರಿಣಾಮಕಾರಿಯಾಗಿ ನಾಶ ಮಾಡಿದರೂ, ಶಿಲೀಂದ್ರನಾಶಕವು ವಿಘಟನೆಯಾಗಿ ಹೆಚ್ಚು ದಿನ ಸಸ್ಯ ಭಾಗದಲ್ಲಿ ಉಳಿಯದ ಕಾರಣ, ಹೆಚ್ಚು ದಿನಗಳವರೆಗೆ ರೋಗ ಬಾರದಂತೆ ತಡೆಯಲಾಗದು. ಹಾಗಾಗಿ, ಒಮ್ಮೆ ಸಿಂಪಡಣೆ ಮಾಡಿ ರೋಗವನ್ನು ನಿಯಂತ್ರಿಸಿದರೂ, ಕೆಲವು ದಿನಗಳ ನಂತರ ಬರುವ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಶಿಲೀಂದ್ರನಾಶಕಗಳಿಗೆ ಆಗದು. ಹಾಗಾಗಿ, ಮೂರು ಕೃಷಿ ಕ್ರಮಗಳು ಬಹಳ ಮುಖ್ಯ. ಸಾಮೂಹಿಕವಾಗಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು, ತೀವ್ರವಾದ ಎಲೆಗಳನ್ನು ತೆಗೆದು ನಾಶ ಮಾಡುವುದು, ಹಾಗೂ ಬಹು ಮುಖ್ಯವಾಗಿ ಅಡಿಕೆ ಮರದ ಆರೋಗ್ಯವನ್ನು ಉತ್ತಮಗೊಳಿಸುವುದು.
ಡಾ. ತವಪ್ರಕಾಶರೊಂದಿಗೆ ರಮೇಶ ಅಂದು ಭೇಟಿ ನೀಡಿದ್ದು ಗುತ್ತಿಗಾರು ಮತ್ತು ನಡುಗಲ್ಲು, ಇಲ್ಲಿನ ಹನ್ನೆರಡು ಎಕರೆ ಅಡಿಕೆ ತೋಟಗಳಿಗೆ. ಪ್ರತಿಯೊಂದು ತೋಟದಲ್ಲೂ ರೋಗದ ತೀವ್ರತೆ ವಿಭಿನ್ನವಾಗಿತ್ತು. ನೀರು ಹರಿದು ಹೋಗಲು ಬಸಿಗಾಲುವೆ ವ್ಯವಸ್ಥೆ ಸಮರ್ಪಕವಾಗಿಲ್ಲದ ತೋಟದಲ್ಲಿ ಎಲೆ ಚುಕ್ಕೆ ರೋಗ ಹೆಚ್ಚಿತ್ತು. ಮರ ಉಳಿದಿತಾ ಎನ್ನುವಷ್ಟು ಕಾಯಿ-ಕೊಳೆ ಮತ್ತು ಎಲೆ ಚುಕ್ಕೆ ರೋಗವಿತ್ತು. “ರೋಗ ನಿರ್ವಹಣೆಗೆ ಸಿಂಪಡಣೆಯೊಂದೇ ಮದ್ದಲ್ಲ. ತೋಟದಲ್ಲಿ ಮಾಡಬೇಕಾದ ಬೇಸಿಕ್ಸ್ ಅನ್ನು ಪಾಲನೆ ಮಾಡಲೇಬೇಕು” ಎನ್ನುವುದು ಡಾ. ತವಪ್ರಕಾಶರ ತಂಡದಲ್ಲಿದ್ದವರ ಅಭಿಪ್ರಾಯವಾಗಿತ್ತು. ನೀರು ನಿಲ್ಲುವ/ ಒಸರು ಇರುವ ಜಾಗದಲ್ಲಿ ಸಾಮಾನ್ಯವಾಗಿ ಮಣ್ಣಿನ ರಸಸಾರ ಕಡಿಮೆ.
ಮಾತ್ರವಲ್ಲ, ಉಪಕಾರಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ, ಬೇರಿನ ಬೆಳವಣಿಗೆ, ಪೋಷಕಾಂಶಗಳ ಲಭ್ಯತೆ ಮತ್ತು ಅವುಗಳ ಹೀರುವಿಕೆ, ಇವೆಲ್ಲವೂ ಕಡಿಮೆ. ಮರದ ಉತ್ತಮ ಆರೋಗ್ಯಕ್ಕೆ ಸದೃಢ ಬೇರುಗಳು ಇರಬೇಕಾದುದು ಮತ್ತು ಅವುಗಳು ಸಮರ್ಪಕವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಮುಖ್ಯ. ಇದಕ್ಕೆ ನಾವು ಅವಕಾಶವನ್ನು ಕಲ್ಪಿಸಬೇಕು. ಬೈಲು ಪ್ರದೇಶದಲ್ಲಿ ತುಂಡು ಗದ್ದೆಗಳನ್ನು ತೋಟವಾಗಿ ಪರಿವರ್ತಿಸಿದ ನಮ್ಮಲ್ಲಿ, ನೀರು ಬಸಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಅವಕಾಶವಿದ್ದರೂ ವ್ಯವಸ್ಥೆ ಮಾಡದ ಕೃಷಿಕರೂ ನಮ್ಮೊಂದಿಗೆ ಇದ್ದಾರೆ.
ಹಾಗಾಗಿ, ಆ ಬೈಲಿನ ಕೊನೆಯ ಕೃಷಿಕನಿಂದ ಮೊದಲಾಗಿ, ಉಳಿದೆಲ್ಲ ಕೃಷಿಕರು ಸ್ವಯಂಪ್ರೇರಿತರಾಗಿ ಬಸಿ ಕಾಲುವೆಯನ್ನು ನೀಡಿ, ನೀರು ಹರಿದು ಹೋಗುವಂತೆ ನೋಡಿಕೊಳ್ಳುವುದು ಅನಿವಾರ್ಯ. ನೀರು ನಿಲ್ಲುವ ತೋಟಗಳಲ್ಲಿ ಅಡಿಕೆ ಮರಗಳು ಒತ್ತಡಕ್ಕೆ ಒಳಗಾಗುವ ಕಾರಣ, ಕಾಯಿ ಕೊಳೆ ರೋಗ, ಕೊಬೆ ಕೊಳೆ ರೋಗ, ಆಂಬ್ರೋಸಿಯ ಕೀಟ ಸೇರಿದಂತೆ ರೋಗ-ಕೀಟ ಬಾದೆಗಳು ಹೆಚ್ಚು ಎನ್ನುವ ಅವರ ತರ್ಕ ಸರಿ ಕಂಡಿತು. ನಡುಗಲ್ಲು ಪ್ರದೇಶದ ಗಿರೀಶ್ ಗೌಡರು ಮತ್ತು ಗುತ್ತಿಗಾರು ಸಮೀಪದ ಯುವ ಕೃಷಿಕ ಸುಬ್ರಹ್ಮಣ್ಯ ಪ್ರಸಾದರು ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಂಡ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಇಳುವರಿಯಲ್ಲಿ ವ್ಯತ್ಯಾಸವಾಗಿಲ್ಲ.
ಆದರೆ, ಮಾಡಿದ ಪ್ರಯತ್ನಕ್ಕೆ ಸಂಪೂರ್ಣ ಫಲಿತಾಂಶವೂ ಸಿಕ್ಕಿಲ್ಲ. ಕಾರಣ, ಸುತ್ತಲಿನ ತೋಟಗಳಲ್ಲಿ ರೋಗ ಬಾದೆ ಹೆಚ್ಚಿದೆ. ಅಲ್ಲಿ, ಸಿಂಪಡಣೆ ಮಾಡಿಲ್ಲ. ಮಾತ್ರವಲ್ಲ, ಬಸಿಗಾಲುವೆ ಮತ್ತು ಪೋಷಣೆಯೂ ಸರಿಯಾಗಿಲ್ಲ. ಹಾಗಾಗಿ, ಸಾಮೂಹಿಕವಾಗಿ ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದೆ, ಪರಿಣಾಮಕಾರಿಯಾಗಿ ಎಲೆ ಚುಕ್ಕೆ ರೋಗವನ್ನು ನಿರ್ವಹಣೆ ಮಾಡಲಾಗದು. ಅಲ್ಲಿ ಸುಮಾರು 10 ಜನ ಕೃಷಿಕರನ್ನು ಡಾ. ತವಪ್ರಕಾಶರು ಮತ್ತು ಅವರ ತಂಡ ಭೇಟಿಯಾಗಿ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ರಮೇಶ ಹೇಳಿದ್ದು ಹೀಗೆ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.. …… ಮುಂದೆ ಓದಿ……
- ಬಸಿಗಾಲವೆಯನ್ನು ನೀಡಿ ನೀರು ಸರಿಯಾಗಿ ಹರಿದು ಹೋಗುವಂತೆ ಮಾಡಬೇಕು.
- ಎರಡನೇ ಮತ್ತು ಮೂರನೇ ಸುತ್ತಿನ ಬೋಡೋ ಮಿಶ್ರಣದ ಸಿಂಪಡಣೆಯನ್ನು ಗೊನೆಗೆ ಮತ್ತು ಎಲೆಗಳಿಗೆ ಸಿಂಪಡಿಸಬೇಕು.
- ಸೆಪ್ಟಂಬರ್ ತಿಂಗಳ ಮೊದಲಿಗೆ ಕುಮ್ಮಯ ಸುಣ್ಣ ಅಥವಾ ಡೋಲೋಮೈಟ್ ಸುಣ್ಣವನ್ನು ಹಾಕಿ ಮಣ್ಣಿನ ರಸಸಾರವನ್ನು ಹೆಚ್ಚಿಸಬೇಕು. ರಸಸಾರ ಕಡಿಮೆ ಇದ್ದರೆ, ಉಪಕಾರಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ, ಬೇಕಾದ ಪೋಷಕಾಂಶಗಳ ಲಭ್ಯತೆ, ಮತ್ತು ಬೇರಿನ ಬೆಳವಣಿಗೆ, ಇವೆಲ್ಲವೂ ಕಡಿಮೆ. ಅಲ್ಲದೆ, ಕಡಿಮೆ ಪ್ರಮಾಣದಲ್ಲಿ ಬೇಕಾಗಿರುವ ಅಲುಮಿನಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶಗಳ ಲಭ್ಯತೆ ಹೆಚ್ಚು. ಹಾಗಾಗಿ, ಮಣ್ಣಿನ ರಸಸಾರವನ್ನು ಹೆಚ್ಚು ಮಾಡಲೇಬೇಕು. ಸುಣ್ಣ ಹಾಕಿದ ಎರಡರಿಂದ ಮೂರು ವಾರಗಳ ನಂತರ ಪೋಷಕಾಂಶಗಳನ್ನು ನೀಡಬಹುದು.
- ಗೊಬ್ಬರಗಳು ಸಸ್ಯಗಳಿಗೆ ನೇರವಾಗಿ ಸಿಗುವ ಪ್ರಮಾಣ ಕಡಿಮೆ. ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಅವುಗಳನ್ನು ಪರಿವರ್ತನೆ ಮಾಡಿ, ರೆಡಿ-ಟು-ಈಟ್ ಮಾಡಿಕೊಡುತ್ತವೆ. ಇವುಗಳು ಸಾವಯವ ವಸ್ತು ಮತ್ತು ತೇವಾಂಶ ಇರುವ ಮಣ್ಣಿನಲ್ಲಿ ಹೆಚ್ಚು. ಹಾಗಾಗಿ, ಮಣ್ಣಿಗೆ ಸಾವಯವ ಗೊಬ್ಬರವನ್ನು ಸೇರಿಸುವುದು ಅತಿ ಮುಖ್ಯ. ಅಲ್ಲದೆ, ಇದರಿಂದ ಮಣ್ಣಿನ ಭೌತಿಕ ಗುಣ, ಬೇರಿನ ಬೆಳವಣಿಗೆ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗಳು ಹೆಚ್ಚಾಗುವುದಲ್ಲದೆ, ಲಘು ಪೋಷಕಾಂಶಗಳು ಮತ್ತು ಇತರ ಅವಶ್ಯಕ ಪೋಷಕಾಂಶಗಳನ್ನು ಒದಗಿಸುತ್ತದೆ.
- ರಸಗೊಬ್ಬರಗಳನ್ನು ಮಣ್ಣಿಗೆ ಸುರಿಯುವವರು ಅನೇಕರು. ಕೇವಲ ಸಂಕೀರ್ಣ ಗೊಬ್ಬರಗಳನ್ನು ಬಳಸುವ ಕೃಷಿಕರಲ್ಲಿ ರೋಗಬಾಧೆಯು ಹೆಚ್ಚು ಎಂಬುದು ಸರ್ವೇ ಮಾಡಿದಾಗ ತಿಳಿದ ಸಂಗತಿ. ಹಾಗಾಗಿ, ಸುಲಭದ ಕ್ರಮಗಳಿಗೆ ಮೊರೆಹೋಗುವ ಬದಲು, ಅಡಿಕೆ ಮರದ ಅಗತ್ಯತೆಯನ್ನು ತಿಳಿದುಕೊಂಡು ಪೋಷಕಾಂಶಗಳನ್ನು ನೀಡಬೇಕು. ಸಾಮಾನ್ಯವಾಗಿ, ಒಂದು ಚೀಲ ಯೂರಿಯಾ, ಒಂದು ಚೀಲ ರಾಕ್ ಪಾಸ್ಪೇಟ್ ಮತ್ತು ಒಂದು ಚೀಲ + 10 ಕೆಜಿ ಪೊಟ್ಯಾಶ್, ಇಷ್ಟನ್ನು ಮಿಶ್ರಣ ಮಾಡಿ, ಪ್ರತಿ ಮರಕ್ಕೆ 335 ಗ್ರಾಂ ಪ್ರಮಾಣದಲ್ಲಿ ನೀಡಬಹುದು. ಇಷ್ಟೇ ಪ್ರಮಾಣದ ರಸಗೊಬ್ಬರವನ್ನು ಫೆಬ್ರವರಿ ತಿಂಗಳಲ್ಲಿ ನೀಡಬಹುದು. ಈ ವರ್ಷ ಮಳೆ ಹೆಚ್ಚಾದ ಕಾರಣ, ಸುಣ್ಣವನ್ನು ತಕ್ಷಣ ಹಾಕಿ, ಎರಡು ವಾರಗಳ ನಂತರ ಮೇಲೆ ತಿಳಿಸಿದ ಪ್ರಮಾಣದ ಮಿಶ್ರಣವನ್ನು 225 ಗ್ರಾಂ ನೀಡಬಹುದು. ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ತಲಾ 225 ಗ್ರಾಂ ನೀಡಬಹುದು.
- ರೋಗಭಾದೆಯಿಂದ ಬಳಲುತ್ತಿರುವ ಮರಗಳಿಗೆ ತಕ್ಷಣದ ಕ್ರಮವಾಗಿ, ಮೆಗ್ನೀಷಿಯಂ ಸಲ್ಫೇಟ್ (1.5 ಕೆಜಿ), ಜಿಂಕ್ ಸಲ್ಫೇಟ್ (250 ಗ್ರಾಂ) ಮತ್ತು ಕರಗುವ ಬೋರಾನ್ (250 ಗ್ರಾಂ), ಇವನ್ನು 200 ಲೀಟರ್ ನೀರಲ್ಲಿ ಪ್ರತ್ಯೇಕವಾಗಿ ಕರಗಿಸಿ, ಎಲೆಗಳಿಗೆ ಸಿಂಪಡಿಸಬಹುದು.
- ಸಣ್ಣಪ್ರಾಯದ ತೋಟಗಳಲ್ಲಿ ರೋಗಭಾದಿತ ಎಲೆಗಳನ್ನು ಕಡ್ಡಾಯವಾಗಿ ಮತ್ತು ದೊಡ್ಡ ಮರಗಳಲ್ಲಿ ಸಾಧ್ಯವಾದಷ್ಟು ತೆಗೆದು ನಾಶ ಮಾಡಬೇಕು. ಇದು ಪ್ರಾಯೋಗಿಕವಾಗಿ ಕಷ್ಟವಾದರೂ ಸೋಂಕನ್ನು ಕಡಿಮೆ ಮಾಡಲು ಸಹಕಾರಿ.
- ಸೆಪ್ಟೆಂಬರ್ ತಿಂಗಳಲ್ಲಿ ಎಲೆಚುಕ್ಕೆ ರೋಗವನ್ನು ಗಮನಿಸಿದರೆ, Propiconazole 25EC ಅಥವಾ Tebuconazole 38.39SC ಅನ್ನು ಒಂದು ಲೀಟರ್ ನೀರಿಗೆ ಒಂದು ಎಂ.ಎಲ್ ಪ್ರಮಾಣದಲ್ಲಿ ಎಲೆಗಳಿಗೆ ಸಿಂಪಡಿಸಬೇಕು. ನಾಲ್ಕು ವಾರಗಳ ನಂತರ, Propineb 70WP ಶಿಲೀಂದ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಎಲೆಗಳಿಗೆ ಅಂಟು ಸೇರಿಸಿ ಸಿಂಪಡಿಸಬೇಕು.
- ಸಸಿಗಳನ್ನು ಬೇರೊಂದು ಜಾಗದಿಂದ ಖರೀದಿ ಮಾಡುವ ಸಂದರ್ಭದಲ್ಲಿ, ರೋಗರಹಿತವಾದಂತಹ ನರ್ಸರಿಗಳಿಂದ ಆರೋಗ್ಯವಂತ ಸಸ್ಯಗಳನ್ನು ಮಾತ್ರ ಖರೀದಿ ಮಾಡಬೇಕು.
ಸೂಚನೆ:
- ಸೂಚಿತ ಕೃಷಿ ಕ್ರಮಗಳನ್ನು ಸರಿಯಾಗಿ ಪಾಲಿಸುವುದು ರೋಗಭಾದೆಯನ್ನು ಕಡಿಮೆ ಮಾಡಲು ಮತ್ತು ರೋಗದ ನಂತರ ಪುನರ್ಚೇತನಗೊಳಿಸಲು ಸಹಕಾರಿ. ಇವುಗಳನ್ನು ಸರಿಯಾಗಿ ಮಾಡದೆ ಕೇವಲ ಶಿಲೀಂದ್ರನಾಶಕವನ್ನು ಬಳಸಿಕೊಂಡು ರೋಗ ಹತೋಟಿ ಕಷ್ಟ ಸಾಧ್ಯ. ಮರಗಳು ನಮ್ಮ ನಿರ್ವಹಣಾ ಕ್ರಮಗಳಿಗೆ ಸ್ಪಂದಿಸಲು ಸದೃಢವಾದ ಬೇರುಗಳು ಮತ್ತು ಸಮರ್ಪಕ ಪೋಷಣೆ ಅತ್ಯಗತ್ಯ.
- ನಾವು ಸಿಂಪಡಿಸುವ ಅಂತರ್ವ್ಯಾಪಿ ಶಿಲೀಂದ್ರನಾಶಕಗಳು ಕೆಲವು ದಿನಗಳವರೆಗೆ ಮಾತ್ರ ರೋಗ ಹತೋಟಿ ಮಾಡಬಹುದು. ಹಾಗಾಗಿ, ಸುತ್ತಲಿನ ಎಲ್ಲಾ ಕೃಷಿಕರು ಸೇರಿ ರೋಗ ನಿರ್ವಹಣೆ ಮಾಡಬೇಕು.
- ಶಿಫಾರಸು ಮಾಡದಿರುವ ಸಾವಯವ ಉತ್ಪನ್ನಗಳು, ರಾಸಾಯನಿಕ ಶಿಲೀಂದ್ರನಾಶಕಗಳು ಮತ್ತು ಕೀಟನಾಶಕಗಳೊಂದಿಗೆ ಸೇರಿಸಿ ಸಿಂಪಡಿಸುವ ಕ್ರಮಗಳು ಒಳ್ಳೆಯದಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಮುಖ ಶಿಲೀಂದ್ರನಾಶಕಗಳನ್ನು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ, ಉತ್ತಮವಾಗಿ ಫಲಿತಾಂಶ ತೋರಿಸಿದ ಶಿಲೀಂದ್ರನಾಶಕಗಳನ್ನು ಮಾತ್ರ ಶಿಫಾರಸು ಮಾಡಲಾಗಿದೆ. ಸಾವಯವ ಉತ್ಪನ್ನಗಳನ್ನು ಬಳಸಿ ರೋಗ ಹತೋಟಿ ಬಹುಮುಖ್ಯವಾದರೂ, ಇದಕ್ಕೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಅಧ್ಯಯನವೂ ಈ ನಿಟ್ಟಿನಲ್ಲಿ ಸಾಗಿದೆ. ಬೇರೆ ಯಾವುದೇ ಉತ್ಪನ್ನಗಳನ್ನು ಬಳಸುವ ಮುಂಚೆ ಕೂಲಂಕುಶವಾಗಿ ಪರಿಶೀಲಿಸಿ, ರೋಗ ನಿರ್ವಹಣೆ ಮಾಡಿ ಅನುಭವ ಇರುವ ಕೃಷಿಕರೊಂದಿಗೆ ಮತ್ತು ವಿಷಯ ತಜ್ಞರೊಂದಿಗೆ ಚರ್ಚಿಸಿ, ನಂತರವಷ್ಟೇ ಬಳಸುವುದು ಹೆಚ್ಚು ಸೂಕ್ತ.
- ಶಿಲೀಂದ್ರನಾಶಕಗಳು ಅಮೃತವಲ್ಲ. ಹಾಗಾಗಿ, ದೇಹಕ್ಕೆ ಬೀಳುವುದು ಕಡಿಮೆ ಇರುವಂತೆ ನೋಡಿಕೊಳ್ಳುವುದು, ಕೈ, ಕಣ್ಣು ಮತ್ತು ಕಾಲನ್ನು ಸೋಪ್ ಹಾಕಿ ಚೆನ್ನಾಗಿ ತೊಳೆಯುವುದು ಸೇರಿದಂತೆ, ಶಿಲೀಂದ್ರನಾಶಕಗಳಲ್ಲಿ ತಿಳಿಸಿದ ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
(ಅಡಿಕೆ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಸಿಪಿಸಿಆರ್‌ಐ ವಿಜ್ಞಾನಿ ಡಾ.ಭವಿಷ್ಯ ಅವರು ವ್ಯಾಟ್ಸಪ್ ಗುಂಪೊಂದರಲ್ಲಿ ಅಡಿಕೆ ಬೆಳೆಗಾರರ ಜಾಗೃತಿಗಾಗಿ ಹಂಚಿಕೊಂಡ ಮಾಹಿತಿ. ಅದರ ಯಥಾವತ್ತಾದ ಬರಹ ಇದು)


