ಹೊರಬಿಟ್ಟ ದನಗಳನ್ನೆಲ್ಲ ಒಳಸೇರಿಸಿ ಉರಿಯುವ ಸೆಖೆಯಿಂದ ರಕ್ಷಣೆಗೋಸ್ಕರ ವಿದ್ಯುತ್ತು ಪಂಖದ ಅಡಿಯಲ್ಲಿ ಒಂದಷ್ಟು ಹೊತ್ತು ಕುಳಿತಿದ್ದೆ. ಆಗುಂತಕರಿಬ್ಬರು ಬಂದರು. ಮನೆಯೆದುರು ವಿಶಾಲವಾಗಿ ಚಾಚಿರುವ ಸಾಗುವಾನಿ ಮರವನ್ನು ನೋಡುತ್ತಾ ನೋಡುತ್ತಾ, ಈ ಮರವನ್ನು ಇನ್ನೂ ಬೆಳೆಸಿದರೆ ಒಟ್ಟೆ ಬಿದ್ದು ಹಾಳಾಗುತ್ತದೆ. ಯಾರಿಗಾದರೂ ಉಪಯೋಗವಾಗಬಹುದು. ಸುಮ್ಮನೆ ಹಾಳುಮಾಡಬೇಡಿ. ನೀವು ಕೊಡಲೇ ಬೇಕೆಂದೇನೂ ಇಲ್ಲ, ಆದರೂ ನೀವು ಕೊಡುವುದಿದ್ದರೆ ಅದಕ್ಕೆ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ ಅಂತ ಅಂದರು.
ಅವರ ಬುದ್ಧಿ ಮಾತಿಗೂ (ಮತ್ತೆಗೂ ) ತಲೆದೂಗುತ್ತಾ ದೇಶಾವರಿ ನಗುವೊಂದನ್ನು ನಕ್ಕೆ. ಈಗಿನ್ನೂ ನೂರಕ್ಕೂ ಮಿಕ್ಕಿ ವರುಷದ ಮರ, ನನ್ನ ಮೊಮ್ಮಗನ ಕಾಲಕ್ಕೆ ತನ್ನ ಮುತ್ತಜ್ಜನ ಬಳುವಳಿ ಇದು ಎಂದು ಘೋಷಿಸಿ ಕೊಳ್ಳುವಂತೆ ಹೇಗಾದರೂ ಸರಿ ಅದು ಇರಲಿ ಎಂದು ಅವರನ್ನು ಬೀಳ್ಕೊಟ್ಟೆ.
ನಾಶವಾದ ಕಾಡನ್ನು ಮತ್ತೆ ಪುನರುಜ್ಜೀವನಗೊಳಿಸುವುದು ಅದೆಷ್ಟು ಶ್ರಮ ಬೇಕೋ, ಅಂತೆಯೇ ಇರುವ ಕಾಡನ್ನು ಉಳಿಸಿಕೊಳ್ಳಲು ಅದಕ್ಕಿಂತ ಹೆಚ್ಚಿನ ಶ್ರಮದ ಅಗತ್ಯತೆ ಇದೆ ಎಂದು ನಾನು ಇತ್ತೀಚಿನ ಅನೇಕ ವರ್ಷಗಳಲ್ಲಿ ಕಂಡುಕೊಂಡೆ.
ನನ್ನಂತವರಿಗೆ ಮರವೊಂದಿದ್ದರೆ ಅದು ಬಿಡುಗಡೆ ಮಾಡುವ ಆಮ್ಲಜನಕ,ಇಂಗಿಸಿ ಕೊಡುವ ನೀರು, ಧರೆಗೆ ನೀಡುವ ತಂಪು, ಬೀಸು ಗಾಳಿಯಿಂದ ದೊರೆಯುವ ರಕ್ಷಣೆ ಮುಂತಾದುವು ಮೌಲ್ಯವೆಂದು ಕಂಡರೆ, ಮರ ಕಟುಕರಿಗೆ ಅದನ್ನು ಮಾರಿ ಸಿಗುವ ಹಣವೇ ಮೌಲ್ಯ. ಹಾಗಾಗಿ ಅವರು ನಾನಾ ಬುದ್ಧಿವಂತಿಕೆಯ ಮಾತಿನಿಂದ ನಮ್ಮನ್ನು ಓಲೈಸಲು ನೋಡುತ್ತಾರೆ. ಆಡಿನ ಮರಿಯನ್ನು ಎತ್ತಿ ನಡೆದು ಹೋಗುತ್ತಿದ್ದ ವೃದ್ಧನೊಬ್ಬನನ್ನು ಕಂಡು, ನಾಯಿಯನ್ನು ಎತ್ತಿಕೊಂಡು ಯಾಕೆ ಹೋಗುತ್ತಿರುವೆ ಎಂದು ಕೇಳುವ ಪಂಚತಂತ್ರ ಕಥೆಯ ವಂಚಕರ ನೆನಪಾಗುತ್ತದೆ. ಆ ಪ್ರಮಾಣದಲ್ಲಿ ನಮ್ಮನ್ನು ಮರುಳು ಮಾಡಿ ಬಿಡುತ್ತಾರೆ.
ಬೇಕಾಬಿಟ್ಟಿಯಾಗಿ ಎಳೆಯುವ ವಿದ್ಯುತ್ತು ಲೈನುಗಳು ಮರಗಳಿಗೆ ಅತ್ಯಂತ ದೊಡ್ಡ ಮಾರಕ. ಮುಖ್ಯರಸ್ತೆಯಿಂದ ಒಂದು ಕಿಲೋಮೀಟರ್ ಒಳಗಡೆ ನಮ್ಮ ಮನೆ. ಮಾರ್ಗದ ಒಂದು ಬದಿ ಖಾಲಿ ಬಿದ್ದಿತ್ತು. ಹಲಸಿನ ಗಿಡಗಳನ್ನು ನೆಟ್ಟು, ಬಿಡಾಡಿ ದನಗಳಿಂದ ರಕ್ಷಣೆಗೋಸ್ಕರ ಬೇಲಿ ಹಾಕಿ, ಗೊಬ್ಬರ ನೀರನ್ನು ಹಾಕಿ ದಷ್ಟಪುಷ್ಟವಾಗಿ ಸಾಕಿದ್ದೆ. ಕಾಯಿ ಬಿಡುವ ಹಂತದಲ್ಲಿತ್ತು. ಒಂದು ದಿನ ಕಾರ್ಯನಿಮಿತ್ತ ಪೇಟೆ ಎಡೆಗೆ ಹೊರಟಿದ್ದೆ. ದೂರದಲ್ಲಿ ರಸ್ತೆಯ ಅಂಚನ್ನು ನೋಡುತ್ತಿದ್ದಂತೆ *ಕದಳಿಯೊಳು ಮದದಾನೆ ಹೊಕ್ಕಂದದಲಿ* ಎಂಬ ಷಟ್ಪದಿ ಕಾವ್ಯ ನೆನೆಪಿಸುವಂತಾಯಿತು. ಜತನದಿಂದ ಕಾಪಾಡಿದ ಅಷ್ಟೂ ಹಲಸಿನ ಗಿಡಗಳನ್ನು ವಿದ್ಯುತ್ತು ಲೈನು ಎಳೆಯಲೋಸುಗ ನಿರ್ದಾಕ್ಷಿಣ್ಯವಾಗಿ ಕಡಿದು ಕೊಚ್ಚಿ ಹಾಕಿದ್ದರು. ಬದಲಿ ವ್ಯವಸ್ಥೆ ಇದೆಯೋ ಎಂದು ನೋಡುವಷ್ಟೂ ವ್ಯವಧಾನ ಅವರಲ್ಲಿ ಇರಲಿಲ್ಲ.ಮೌನದ ಕಣ್ಣೀರು ಮಾತ್ರ ನನ್ನ ಉತ್ತರವಾಗಿತ್ತು. ಉಳಕೊಂಡ ಎರಡು ಮರಗಳು ಈಗಲೂ ಹಣ್ಣುಗಳನ್ನು ನೀಡುತ್ತಿವೆ.
ಬೆಳೆದುನಿಂತ ಮರವೊಂದಿದ್ದರೆ ಅದರ ಪರಿಮಳ ಯಾವ ಯಾವುದೋ ಊರುಗಳಿಗೆ ಹೋಗುತ್ತದೆ. ಎಲ್ಲೆಲ್ಲಿಂದಲೋ ದೇವ, ದೈವಸ್ಥಾನಗಳಿಗೆ ಮರದ ಬೇಡಿಕೆಯನ್ನು ಸಲ್ಲಿಸಿಕೊಂಡು ಬರುವುದನ್ನು ನೋಡಿ ಆಶ್ಚರ್ಯಚಕಿತನಾಗುತ್ತೇನೆ.
ಇಲ್ಲೆಲ್ಲಾ ನನಗೆ ಕಂಡುದು ಸ್ಥಳೀಯವಾಗಿ ಉತ್ತಮ ಮರಗಳ ಕೊರತೆ. ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ನನ್ನದೊಂದು ಕಿರು ಮನವಿ. ಪ್ರತಿಯೊಂದು ದೇವ ದೈವಸ್ಥಾನಗಳ ಸುತ್ತುಮುತ್ತು ಜಾಗವಿದ್ದರೆ ಅಲ್ಲೊಂದಷ್ಟು ಮರಗಳನ್ನು ಬೆಳೆಸಲು ಪ್ರಯತ್ನಿಸೋಣ. ಅಲ್ಲದಿದ್ದರೆ ಸ್ಥಳೀಯವಾಗಿ ಕೃಷಿ ಜಾಗ ಇದ್ದವರಲ್ಲಿ ಮುಂದಿನ ಜೀರ್ಣೋದ್ಧಾರಕ್ಕೆ ಒದಗಿ ಬರುವಂತೆ ಎರಡೆರಡು ಮರಗಳನ್ನು ಆದರೂ ನೆಟ್ಟು ಮೀಸಲಿಡುವಂತೆ ಮನವಿ ಮಾಡಿಕೊಳ್ಳೋಣ.
ನೂರು ವರ್ಷ ಬೆಳೆದು ಬಾಳಿದ ಮರವೊಂದು ಕಡಿದು ಮೋಪನ್ನಾಗಿಸಿದರೂ ಮತ್ತೆ ಮುಂದಿನ ನೂರು ವರ್ಷ ನಿರ್ಜೀವವಾಗಿ ಬಾಳಿಕೆ ಬರುತ್ತದೆ. ಸರಿಯಾಗಿ ಜೀರ್ಣವಾಗುವ ಮೊದಲೇ ಜೀರ್ಣೋದ್ಧಾರದ ಕಾರ್ಯಕ್ರಮ ಕೈಗೊಂಡರೆ ಅದು ಆತ್ಮಹತ್ಯೆಗೆ ಸಮ. ಮರಕ್ಕೆ ಮಾಡಿದ ಅಪಮಾನ.
ಮರವಿರೆ ಮಾನವ ಕಡಿದವ ದಾನವ,
ಉಳಿವಿನ ಕಾಳಗ ಘೋಷಿಸುವ,
ಮರವನ್ನುಳಿಸುವ ಮಾರ್ಗವನರಸುವ,
ನಾವು ಒಟ್ಟಾಗುವ ಧ್ವನಿ ಕರೆವ.
ಎಂಬ ಕವಿ ಕರೆಯೊಂದಿಗೆ ಪ್ರಕೃತಿಯೆಡೆಗೆ ಸಾಗೋಣ.
# ಎ.ಪಿ. ಸದಾಶಿವ. ಮರಿಕೆ.
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…