ಕೃಷಿ ಈ ದೇಶದ ಪ್ರಮುಖ ಕಸುಬು. ಪುರಾಣದ ಕಾಲದಿಂದಲೇ ಕೃಷಿ ಮಾಡಿ, ಕೃಷಿ ಉತ್ಪನ್ನಗಳನ್ನು ಎಲ್ಲರಿಗೂ ದಾನ ನೀಡಿದ ದೇಶ ಇದು. ಇಂದು ಯಾವ ಮಟ್ಟಕ್ಕೆ ತಲುಪಿದ್ದೇವೆ ಎಂದರೆ ವಿದೇಶಿ ತಂತ್ರಜ್ಞಾನದ ಹೆಸರಿನಲ್ಲಿ ನಮ್ಮ ಮೂಲ ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲಿ ಕೃಷಿಯೂ ಸೇರಿದೆ. ಕೃಷಿ ಈ ದೇಶಕ್ಕೆ ಅಗತ್ಯ ಇದೆ. ಕೃಷಿ ನಾಶವಾದರೆ ಈ ದೇಶದ ಎಲ್ಲವೂ ನಾಶವಾಗಬಹುದು ಎನ್ನುತ್ತಾರೆ ಕಣಿಪುರದ ಕೃಷಿಕ ಶ್ಯಾಮರಾಜ್.
ಕೃಷಿಕ ಶ್ಯಾಮರಾಜ್ ಅವರು ಕಾಸರಗೋಡು ಜಿಲ್ಲೆಯ ಕುಂಬಳೆ(ಕಣಿಪುರ)ಯಲ್ಲಿ ವಾಸವಾಗಿದ್ದಾರೆ. ಕೃಷಿಯಲ್ಲಿ ಆಸಕ್ತ, ಕೃಷಿ, ಕಸಿಕಟ್ಟುವುದು ಇವರ ಆಸಕ್ತಿ. ಜೀವಶಾಸ್ತ್ರ ಓದಿದ ಶ್ಯಾಮರಾಜ್ ಅವರು ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದರು. ಕಳೆದ 8 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಾರೆ. ಸದ್ಯ ಕಣಿಪುರದಲ್ಲಿ ಕೃಷಿ ನಡೆಸುತ್ತಿದ್ದಾರೆ. ಇವರು ಈ ವಾರದ ದ ರೂರಲ್ ಮಿರರ್.ಕಾಂ ಅತಿಥಿಯಾಗಿ ನಡೆಸಿದ ಮಾತುಕತೆಯ ಸಾರಾಂಶ ಇದು…..(ವಿಡಿಯೋ ಇದೆ)
ಕೃಷಿಯ ಜೊತೆಗೆ ಭಾರತದ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿದುಕೊಂಡಿದೆ. ಹೀಗಾಗಿ ಕೃಷಿ ಉಳಿದರೆ ಮಾತ್ರವೇ ಈ ದೇಶ ಉಳಿಯಬಹುದು ಎನ್ನುತ್ತಾರೆ ಶ್ಯಾಮರಾಜ್. ಇಂದು ನಾವು ಯಾವಮಟ್ಟಕ್ಕೆ ತಲಪಿದ್ದೇವೆ ಎಂದರೆ, ವಿದೇಶಿ ತಂತ್ರಜ್ಞಾನ, ವಿದೇಶಿ ವ್ಯಾಮೋಹದಿಂದ ನಮ್ಮ ಮೂಲ ಕಳೆದುಕೊಳ್ಳುತ್ತಿದ್ದೇವೆ. ಆಹಾರ ಪದ್ದತಿ, ಬದುಕು ಎಲ್ಲವೂ ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆ ಮುಖ್ಯವಾಗಿ ಬೇಕಾದ್ದು ಕೃಷಿ. ಕೃಷಿ ಕಳೆದುಕೊಂಡರೆ ದೇಶ ಕಳೆದುಕೊಳ್ಳುತ್ತೇವೆ. ನಮ್ಮ ಪರಿಸರ, ಜೀವನ ಶೈಲಿ, ನೀರು ಎಲ್ಲವೂ ಈ ದೇಶದ ಮೂಲಸ್ಥಂಭ. ಇದಕ್ಕಾಗಿ ಕೃಷಿ ಮಹತ್ವ ಮನವರಿಕೆ ಮಾಡಿಕೊಂಡು ಎಲ್ಲರೂ ಅಳವಡಿಸಬೇಕು, ಮುಂದುವರಿಸಬೇಕು, ಮಕ್ಕಳಿಗೆ ತಿಳಿಸಬೇಕು ಎನ್ನುತ್ತಾರೆ ಶ್ಯಾಮರಾಜ್.
ಸಾಧ್ಯವಾದಷ್ಟು ಕೃಷಿ ಚಿಂತನೆ ಬೇಕು, ಮಕ್ಕಳುಗೆ ಕಲಿಸಬೇಕು, ಪಠ್ಯದಲ್ಲಿ ಇರಬೇಕು. ಈಗಾಗಲೇ ಕಾಲ ಮೀರಿದೆ. ಇಂದಿನಿಂದಲೇ ಈ ಬಗ್ಗೆ ಯೋಚನೆ ಶುರುವಾಗಬೇಕು. ನಮ್ಮಿಂದ ಏನು ಸಾಧ್ಯ ಅದು ಮಾಡಬೇಕು. ಸರ್ಕಾರಗಳು ಅಲ್ಲ. ಕೃಷಿ ಭೂಮಿಗೆ ನಮ್ಮ ಕೊಡಿಗೆ ಏನು ಎಂಬುದರ ಆಲೋಚನೆ ಆಗಲೇಬೇಕು. ಮಕ್ಕಳಿಗೆ ಗೊತ್ತಾಗಬೇಕಾದರೆ ನಾವೇ ಮಾಡಬೇಕು. ಕಷ್ಟ ಇದೆ, ಜಗತ್ತಿನಲ್ಲಿ ಎಲ್ಲವೂ ಕಷ್ಟ ಇದೆ ಎನ್ನುವುದನ್ನೂ ಅರಿತುಕೊಳ್ಳಬೇಕು ಎನ್ನುತ್ತಾರೆ.
ಇಂದು ಮಕ್ಕಳು ಹೆಚ್ಚು ಕಲಿತು ಕೃಷಿಗೆ ಬಾರದೇ ಇರಲು ಕಾರಣವಿದೆ. ನಮ್ಮ ಮಕ್ಕಳಿಗೆ ಈ ದೇಶದ ಬಗ್ಗೆ, ನಮ್ಮ ಕೃಷಿಯ ಬಗ್ಗೆ ನೆಗೆಟಿವ್ ಹೇಳಿಕೊಡಲಾಗುತ್ತಿದೆ. ನಾನು ಜೀವಶಾಸ್ತ್ರ ಕಲಿತು ಅಮೇರಿಕಾದಲ್ಲಿ ಉನ್ನತವಾಗಿ ಜೀವಶಾಸ್ತ್ರ ಕಲಿತೆ. ಅಲ್ಲಿನ ಜೀವಶಾಸ್ತ್ರದ ಅತ್ಯಂತ ಕೆಟ್ಟ ವಾತಾವರಣ ಕಂಡು , ಕಲೆಯ -ನಾಟಕ ಸಿನಿಮಾ ಕಡೆಗೆ ವಾಲಿದೆ. ಲಾಸ್ ಎಂಜಲೀಸ್ ನಲ್ಲಿ 10 ವರ್ಷ ಕೆಲಸ ಮಾಡಿದೆ. ಅಲ್ಲಿನ ಕೆಟ್ಟ ವಾತಾವರಣ ಪರಿಚಯವಾಯಿತು. ತೀರಾ ಕೆಟ್ಟ ವ್ಯವಸ್ಥೆ ಅಲ್ಲಿದೆ.
ಭಾರತದ ಮೇಧಾವಿಗಳ ಪರಿಚಯವಾದ ಬಳಿಕ ಮತ್ತೆ ಭಾರತಕ್ಕೆ ಬಂದೆ. ನಮ್ಮ ಜನರು ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದಂತೆ ಅಹಂ ಬರುತ್ತದೆ. ನನಗೂ ಅದೇ ಆಗಿತ್ತು ಕೂಡಾ. ಅದು ವಿದೇಶಿ ಶಿಕ್ಷಣ. ಅದರಲ್ಲಿ ನಮ್ಮ ದೇಶದ ನಮ್ಮ ಸಂಸ್ಕೃತಿ ಪರಿಚಯವಾಗಿಲ್ಲ, ಹಾಗಾಗಿ ತೀವ್ರವಾದ ಕೀಳರಿಮೆ ಇದೆ ನಮ್ಮ ದೇಶದ ಬಗ್ಗೆ, ನನಗೂ ಇತ್ತು ಆ ಕೀಳರಿಮೆ.
ನಮ್ಮ ದೇಶದ ಸಂಸ್ಕೃತಿ ಮೂಲ ಪರಿಚಯವಾಗಬೇಕು. ವೇದದಿಂದ ಎಲ್ಲ ತೊಡಗಿ ಎಲ್ಲಾ ಶಾಸ್ತ್ರಗಳು ಇದೆ. ಇಲ್ಲಿ ಅಪಾರವಾದ ಜ್ಞಾನ ಇದೆ. ನಮ್ಮಲ್ಲಿ ಶಾಲೆಯಲ್ಲಿ ಹೇಳಿಲ್ಲ. ನಮ್ಮ ಮೆಕಾಲೆ ಶಿಕ್ಷಣ ಪದ್ದತಿ ಬದಲಾಗಬೇಕು, ಆಗ ಮಾತ್ರಾ ಕೀಳರಿಮೆ ಹೋಗುತ್ತದೆ.ಭಾರತದ ಬಗ್ಗೆ ಹೆಮ್ಮೆಯಾಗುತ್ತದೆ ನಮ್ಮ ಮಕ್ಕಳಿಗೂ ಎನ್ನುವುದು ಶ್ಯಾಮರಾಜ್ ಅಭಿಪ್ರಾಯ.
ನನಗೆ ಈ ದೇಶದ ಬಗ್ಗೆ ಕೀಳರಿಮೆ ಶುರುವಾದ್ದು 2 ನೇ ಕ್ಲಾಸಲ್ಲಿ. ಪಾಠ ಹೇಳುತ್ತದೆ, ಭಾರತ ಬಡ ದೇಶ ಎಂದು.ಇಲ್ಲಿಂದಲೇ ನೆಗೆಟಿವ್ ತುಂಬಿದ್ದಾರೆ. ಇದೇ ರೀತಿ ನಮ್ಮ ಮಕ್ಕಳಿಗೆ ಬ್ರೈನ್ ವಾಶ್ ಮಾಡಲಾಗುತ್ತದೆ. ಇದೇ ರೀತಿ ನಮ್ಮ ಎಲ್ಲಾ ಸಂಪ್ರದಾಯ, ಆಚರಣೆ ಬಗ್ಗೆ ಕೇವಲವಾಗಿ ಹೇಳಲಾಗಿದೆ. ಇದನ್ನು ಓದಿದರೆ ಕೀಳರಿಮೆ ಬರಲೇಬೇಕು. ಹೀಗಾಗಿ ಕಲಿತ ಕೂಡಲೇ ವಿದೇಶಕ್ಕೆ ಹೋಗುವ ಮನಸಾಗುತ್ತದೆ, ಹಣ ಮಾಡುವುದು ಹೇಗೆ ಎಂಬುದೇ ಯೋಚನೆಯಾಗುತ್ತದೆ. ಇದಕ್ಕಾಗಿ ಪಠ್ಯ ಬದಲಾಗಬೇಕು. ಇದರ ಜೊತೆಗೇ ಮನೆಯಲ್ಲಿ ಎಲ್ಲವೂ ಹೇಳಿಕೊಡಬೇಕು. ಶಾಲೆಯಲ್ಲಿ ಈಗ ಸಾಧ್ಯವಿಲ್ಲ. ಮಕ್ಕಳಿಗೆ ಮಾತೃಭಾಷೆ ಹೇಳಿಕೊಡಿ. ಕೀಳರಿಮೆ ಬೇಡ. ಬದಲಾಣೆ ಈಗಲೇ ಶುರು ಮಾಡಿ. ಎಲ್ಲವೂ ಆರಂಭವಾಗುವುದು ಮನೆಯಲ್ಲಿಯೇ ಶಾಲೆಯಲ್ಲಿ ಅಲ್ಲ ಎನ್ನುತ್ತಾರೆ ಶ್ಯಾಮರಾಜ್.