ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಗಣಿಗಾರಿಕೆ ಸೇರಿದಂತೆ ಯಾವುದೇ ಗಣಿಗಾರಿಕೆಯನ್ನು ಬೆಂಬಲಿಸುವ ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಎಚ್ಚರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, ಕೆಂಪು ಕಲ್ಲು ಗಣಿಗಾರಿಕೆ ನಡೆಸುವ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ಗ್ರಾಮೀಣ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗುವುದು.
ಗಣಿಗಾರಿಕೆಗೆ ಅನುಮತಿ ನೀಡುವಾಗ ಹಿರಿಯ ಭೂವಿಜ್ಞಾನಿ ಹಂತದಲ್ಲಿ ನೀಡಲಾಗುತ್ತಿದ್ದು, ಒಂದು ಕಡೆ ಗಣಿಗಾರಿಕೆಗೆ ಅನುಮತಿ ಪಡೆದು ಮತ್ತೊಂದು ಕಡೆ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಒಂದು ವಾರದಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಪಟ್ಟಾ ಜಾಗದಲ್ಲಿ ಪರವಾನಗಿ ಪಡೆದು ಕಲ್ಲು ಗಣಿಗಾರಿಕೆಗೆ ನಡೆಸಲು ಅನುಮತಿ ನೀಡಲಾಗುವುದು. ಆದರೆ ಸರಕಾರಿ ಭೂಮಿ ಅಥವಾ ಇನ್ನಾವುದೇ ಪ್ರದೇಶದಲ್ಲಿ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಈ ಬಗ್ಗೆ ಗೊತ್ತಿದ್ದು ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ವೌನವಹಿಸಿದರೆ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಸರ್ವೇ: ಅನಧಿಕೃತ ಕೆಂಪು ಕಲ್ಲು ಗಣಿಗಾರಿಕೆ ಬಗ್ಗೆ ಈಗಾಗಲೇ ದೂರುಗಳು ಬಂದಿದ್ದು, ಈ ಬಗ್ಗೆ ಸರ್ವೇ ನಡೆಸಿ ಪಟ್ಟಿ ಮಾಡಲಾಗುತ್ತಿದೆ. ಡಿ.20ರೊಳಗೆ ಈ ಪ್ರಕ್ರಿಯೆ ಪೂರ್ಣವಾಗಲಿದ್ದು, ಬಳಿಕ ಕ್ರಮಕೈಗೊಳ್ಳಲಾಗುವುದು.
*ಮಂಗಳೂರು ಎಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್ ಹಾಜರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
This is box title
ಸ್ಯಾಂಡ್ ಬಜಾರ್ ಆಪ್‌ನ ಮೂಲಕ ನೋಂದಣಿ ಮಾಡಿದರೆ 10 ಮೆಟ್ರಿಕ್ ಟನ್‌ಗೆ 5ಸಾವಿರ ರೂ. ಹಾಗೂ 20ಕಿಲೋ ಮೀಟರ್‌ವರೆಗೆ ಮರಳು ಸಾಗಾಟಕ್ಕೆ 2ಸಾವಿರ ಬಾಡಿಗೆ ಸೇರಿ 7ಸಾವಿರ ರೂ.ಗೆ ಮರಳು ಸಾಗಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ 88 ಮಂದಿಗೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಅನುಮತಿ ನೀಡಲಾಗಿದೆ. ಧಕ್ಕೆಗಳನ್ನು ಗುರುತಿಸಿ ಅದಕ್ಕೆ ಜಿಪಿಎಸ್ ಹಾಕಬೇಕು. ಎಲ್ಲ ಧಕ್ಕೆಗಳಲ್ಲೂ ಉನ್ನತ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.