ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

August 30, 2026
5:57 AM
ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ 2 ಶತಕೋಟಿ ಡಾಲರ್‌ಗೂ ಅಧಿಕವಾಗಿದ್ದು, 140 ರಾಷ್ಟ್ರಗಳಿಗೆ ಕಾಫಿ ರಫ್ತಾಗುತ್ತಿದೆ. ಉತ್ಪಾದನೆ 4 ಲಕ್ಷ ಟನ್‌ ದಾಟುವ ನಿರೀಕ್ಷೆಯಿದ್ದು, ಮೌಲ್ಯವರ್ಧಿತ ಕಾಫಿಗೆ ಉತ್ತೇಜನ ನೀಡುವ ಜೊತೆಗೆ ‘ಇಂಡಿ ಕಾಫಿ’ ಬ್ರ್ಯಾಂಡ್ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಪ್ರತ್ಯೇಕ ಗುರುತು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಈಗ ಕಾಫಿ ಬೆಳೆಯಷ್ಟೇ ಅಲ್ಲ, ಬ್ರಾಂಡಿಂಗ್‌ ಕೂಡಾ ಅಗತ್ಯ ಇದೆ.

ಭಾರತದ ಕಾಫಿ ಉದ್ಯಮ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಯ ಹಾದಿಯಲ್ಲಿದ್ದು, ಕಾಫಿ ರಫ್ತು ಗಳಿಕೆ ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಂಡಿದೆ. 2021-22ರಲ್ಲಿ ಸುಮಾರು 1 ಶತಕೋಟಿ ಡಾಲರ್ ಇದ್ದ ಭಾರತದ ಕಾಫಿ ರಫ್ತು ಮೌಲ್ಯ 2025-26ರಲ್ಲಿ 2 ಶತಕೋಟಿ ಡಾಲರ್‌ಗಿಂತಲೂ ಅಧಿಕವಾಗಿದೆ ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಕಾಫಿ ಈಗ 140 ರಾಷ್ಟ್ರಗಳಿಗೆ ರಫ್ತಾಗುತ್ತಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಸುಮಾರು ಶೇ.39ರಷ್ಟು ಮೌಲ್ಯವರ್ಧಿತ ಕಾಫಿ ಆಗಿರುವುದು ಭಾರತೀಯ ಕಾಫಿ ಉದ್ಯಮದಲ್ಲಿ ಕೇವಲ ಕಚ್ಚಾ ಉತ್ಪನ್ನ ರಫ್ತಿನಿಂದ ಮೌಲ್ಯವರ್ಧಿತ ಉತ್ಪನ್ನಗಳತ್ತ ಬದಲಾವಣೆ ನಡೆಯುತ್ತಿರುವುದನ್ನು ತೋರಿಸುತ್ತದೆ.

ನಾಲ್ಕೇ ವರ್ಷದಲ್ಲಿ ರಫ್ತು ಮೌಲ್ಯ ದ್ವಿಗುಣ : ಭಾರತದ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಫ್ತು ಗಳಿಕೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. 2021-22ರಲ್ಲಿ ಸುಮಾರು $1 ಬಿಲಿಯನ್ ಇದ್ದ ರಫ್ತು ಮೌಲ್ಯ 2025-26ರಲ್ಲಿ $2 ಬಿಲಿಯನ್‌ಗಿಂತ ಹೆಚ್ಚು ಆಗಿದೆ. ಇದು ಕೇವಲ ಪ್ರಮಾಣದ ಏರಿಕೆಯಲ್ಲ. ಮೌಲ್ಯವರ್ಧಿತ ಕಾಫಿಯ ಪಾಲು ಹೆಚ್ಚುತ್ತಿರುವುದು ಭಾರತೀಯ ಕಾಫಿಗೆ ಹೆಚ್ಚಿನ ಮೌಲ್ಯ ಪಡೆಯುವ ಅವಕಾಶವನ್ನು ಸೂಚಿಸುತ್ತದೆ. ಕಾಫಿ ಬೀಜವನ್ನು ಕಚ್ಚಾ ರೂಪದಲ್ಲಿ ಮಾರಾಟ ಮಾಡುವುದಕ್ಕಿಂತ ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ಸಿದ್ಧ ಬಳಕೆಯ ಉತ್ಪನ್ನಗಳ ಮೂಲಕ ಹೆಚ್ಚಿನ ಮೌಲ್ಯ ಪಡೆಯುವ ಸಾಧ್ಯತೆ ಇದೆ.

140 ದೇಶಗಳಿಗೆ ಭಾರತದ ಕಾಫಿ :  ಭಾರತದ ಕಾಫಿ ಈಗ 140 ರಾಷ್ಟ್ರಗಳ ಮಾರುಕಟ್ಟೆ ತಲುಪಿದೆ. ಭಾರತದ ಪ್ರಮುಖ ಕಾಫಿ ಉತ್ಪಾದನಾ ಪ್ರದೇಶಗಳಾದ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ತೋಟಗಾರರಿಗೆ ಜಾಗತಿಕ ಮಾರುಕಟ್ಟೆಯ ಈ ವಿಸ್ತರಣೆ ಮಹತ್ವದ್ದಾಗಿದೆ. ವಿಶೇಷವಾಗಿ ಕರ್ನಾಟಕವು ದೇಶದ ಪ್ರಮುಖ ಕಾಫಿ ಉತ್ಪಾದನಾ ರಾಜ್ಯವಾಗಿರುವುದರಿಂದ ಜಾಗತಿಕ ಬೇಡಿಕೆ ಮತ್ತು ಬೆಲೆಗಳ ಬದಲಾವಣೆ ಇಲ್ಲಿನ ಕಾಫಿ ಬೆಳೆಗಾರರ ಆದಾಯದ ಮೇಲೂ ನೇರ ಪರಿಣಾಮ ಬೀರುತ್ತದೆ.

ಮೌಲ್ಯವರ್ಧಿತ ಕಾಫಿಗೆ ಶೇ.39ರ ಪಾಲು : ಇಂದಿನ ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಕೇವಲ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಮೌಲ್ಯವರ್ಧನೆ ಹೆಚ್ಚು ಮುಖ್ಯವಾಗುತ್ತಿದೆ. ಭಾರತದಿಂದ ರಫ್ತಾಗುತ್ತಿರುವ ಕಾಫಿಯಲ್ಲಿ ಸುಮಾರು ಶೇ.39ರಷ್ಟು ಮೌಲ್ಯವರ್ಧಿತ ಕಾಫಿ ಇದೆ ಎಂದು ಕಾಫಿ ಮಂಡಳಿ ತಿಳಿಸಿದೆ. ಇದರ ಅರ್ಥ ಕಾಫಿ ಬೀಜವನ್ನು ಕೇವಲ ರಫ್ತು ಮಾಡುವ ಬದಲು ಸಂಸ್ಕರಣೆ ಮತ್ತು ಇತರ ಮೌಲ್ಯವರ್ಧಿತ ಹಂತಗಳ ಮೂಲಕ ಅಂತಿಮ ಉತ್ಪನ್ನದ ಮೌಲ್ಯ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಬೆಳೆಗಾರನಿಗೆ ಸಿಗುವ ಬೆಲೆಯನ್ನು ಹೆಚ್ಚಿಸಲು ಉತ್ಪಾದನೆಯ ಜೊತೆಗೆ value addition ಕೂಡ ಮುಖ್ಯವಾಗಲಿದೆ.

ದೇಶೀಯ ಕಾಫಿ ಬಳಕೆಯೂ ಶೇ.20ರಷ್ಟು ಹೆಚ್ಚಳ : ರಫ್ತು ಮಾರುಕಟ್ಟೆಯ ಜೊತೆಗೆ ದೇಶೀಯ ಮಾರುಕಟ್ಟೆಯಲ್ಲೂ ಕಾಫಿ ಬೇಡಿಕೆ ಹೆಚ್ಚಾಗಿದೆ. ದೇಶೀಯ ಕಾಫಿ ಬೇಡಿಕೆ ಶೇ.20ರಷ್ಟು ಹೆಚ್ಚಾಗಿದೆ ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಕಾಫಿ ಬಳಕೆಯ ಹೆಚ್ಚಳ, ಕಾಫಿ ಸಂಸ್ಕೃತಿಯ ವಿಸ್ತರಣೆ ಮತ್ತು ಹೊಸ ತಲೆಮಾರಿನ ಗ್ರಾಹಕರಲ್ಲಿ ವಿಶೇಷ ಕಾಫಿ ಉತ್ಪನ್ನಗಳ ಮೇಲಿನ ಆಸಕ್ತಿ ದೇಶೀಯ ಮಾರುಕಟ್ಟೆಗೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಅಂದರೆ ಕಾಫಿ ಬೆಳೆಗಾರರಿಗೆ ರಫ್ತು ಮಾತ್ರವಲ್ಲ, ದೇಶೀಯ ಮಾರುಕಟ್ಟೆಯೂ ಮತ್ತೊಂದು ದೊಡ್ಡ ಅವಕಾಶವಾಗುತ್ತಿದೆ.

ಈ ವರ್ಷ 4 ಲಕ್ಷ ಟನ್‌ಗಿಂತ ಹೆಚ್ಚು ಉತ್ಪಾದನೆ? : ಉತ್ಪಾದನೆಯಲ್ಲೂ ಏರಿಕೆಯ ನಿರೀಕ್ಷೆ ಇದೆ. 2025-26ರಲ್ಲಿ ಭಾರತದ ಕಾಫಿ ಉತ್ಪಾದನೆ 3.73 ಲಕ್ಷ ಟನ್ ಆಗಿತ್ತು. ಈ ವರ್ಷ ಉತ್ಪಾದನೆ 4 ಲಕ್ಷ ಟನ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಾಫಿ ಮಂಡಳಿ ತಿಳಿಸಿದೆ. ಈ ವರ್ಷದ ಏಪ್ರಿಲ್‌ನಿಂದ ಜುಲೈವರೆಗೆ 1.68 ಲಕ್ಷ ಟನ್ ಕಾಫಿ ಉತ್ಪಾದನೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ. ಉತ್ಪಾದನೆ ಹೆಚ್ಚಳದ ಜೊತೆಗೆ ಜಾಗತಿಕ ಬೇಡಿಕೆಯೂ ಮುಂದುವರಿದರೆ ಭಾರತದ ಕಾಫಿ ಉದ್ಯಮಕ್ಕೆ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳಬಹುದು.

‘ಇಂಡಿ ಕಾಫಿ’ ಮೂಲಕ ಭಾರತದ್ದೇ ಬ್ರ್ಯಾಂಡ್ : ಭಾರತದ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತ್ಯೇಕ ಗುರುತು ಮೂಡಿಸುವ ಉದ್ದೇಶದಿಂದ ‘ಇಂಡಿ ಕಾಫಿ’ ಎಂಬ ಬ್ರ್ಯಾಂಡ್ ರೂಪಿಸುವ ಪ್ರಯತ್ನವೂ ನಡೆಯುತ್ತಿದೆ.  ಉತ್ಪಾದನೆಯ ಗುಣಮಟ್ಟಕ್ಕೆ ಮಾನದಂಡ ನಿಗದಿಪಡಿಸುವ ಕೆಲಸ ನಡೆಯುತ್ತಿದ್ದು, ಅದೇ ರೀತಿಯಲ್ಲಿ ಸಂಸ್ಕರಣೆಯ ಗುಣಮಟ್ಟಕ್ಕೂ ಮಾನದಂಡ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕೂರ್ಮಾರಾವ್ ತಿಳಿಸಿದ್ದಾರೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಯನ್ನು ಒಂದು ಏಕೀಕೃತ ಗುಣಮಟ್ಟದ ಬ್ರ್ಯಾಂಡ್ ಆಗಿ ಪರಿಚಯಿಸಲು ನೆರವಾಗಬಹುದು.

ಬೆಳೆಗಾರರಿಗೆ ಇದರ ಲಾಭ ಹೇಗೆ ತಲುಪಬೇಕು? :  ರಫ್ತು $2 ಬಿಲಿಯನ್ ದಾಟಿದೆ ಎಂಬುದು ಉದ್ಯಮಕ್ಕೆ ಒಳ್ಳೆಯ ಸುದ್ದಿ. ಆದರೆ ಕಾಫಿ ಬೆಳೆಗಾರನ ದೃಷ್ಟಿಯಿಂದ ಮುಖ್ಯ ಪ್ರಶ್ನೆ ಬೇರೆ.  ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಾಫಿಯ ಮೌಲ್ಯದ ಎಷ್ಟು ಭಾಗ ರೈತನಿಗೆ ತಲುಪುತ್ತಿದೆ? ಕಾಫಿ ಬೆಲೆ ಏರಿಕೆಯಾದಾಗ ಅದರ ಪ್ರಯೋಜನ ಬೆಳೆಗಾರರಿಗೆ ಸಿಗಬೇಕು. ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಿದಂತೆ ಬೆಳೆಗಾರರಿಗೂ ಹೆಚ್ಚಿನ ಮೌಲ್ಯ ಸಿಗುವ ವ್ಯವಸ್ಥೆ ರೂಪುಗೊಳ್ಳಬೇಕು. ಉತ್ಪಾದನೆಯ ಗುಣಮಟ್ಟ, ಸಂಸ್ಕರಣಾ ಗುಣಮಟ್ಟ, ಪತ್ತೆಹಚ್ಚುವಿಕೆ, ನೇರ ಮಾರುಕಟ್ಟೆ ಸಂಪರ್ಕ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆಗೆ ಅವಕಾಶ ನೀಡುವುದು ಮುಂದಿನ ಹಂತವಾಗಬಹುದು.

ಕಾಫಿ ಉದ್ಯಮದ ಮುಂದೆ ಸವಾಲುಗಳೂ ಇವೆ : ಉತ್ಪಾದನೆ ಹೆಚ್ಚಾಗುತ್ತಿದೆ, ರಫ್ತು ಹೆಚ್ಚಾಗಿದೆ, ದೇಶೀಯ ಬೇಡಿಕೆಯೂ ಹೆಚ್ಚಾಗಿದೆ.  ಆದರೆ ಹವಾಮಾನ ಬದಲಾವಣೆ, ಅನಿಯಮಿತ ಮಳೆ, ತಾಪಮಾನ ಏರಿಕೆ, ಕೀಟ ಮತ್ತು ರೋಗಗಳ ಒತ್ತಡ, ಕಾರ್ಮಿಕ ವೆಚ್ಚ ಮತ್ತು ಜಾಗತಿಕ ಬೆಲೆ ಏರಿಳಿತಗಳು ಕಾಫಿ ಬೆಳೆಗಾರರಿಗೆ ನಿರಂತರ ಸವಾಲಾಗಿವೆ. ಹೀಗಾಗಿ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಹವಾಮಾನ ಸಹಿಷ್ಣು ಕೃಷಿ, ಗುಣಮಟ್ಟ, ಸಂಸ್ಕರಣೆ ಮತ್ತು ಮಾರುಕಟ್ಟೆ ಮೌಲ್ಯ ಹೆಚ್ಚಿಸುವುದು ಮುಂದಿನ ಕಾಫಿ ಉದ್ಯಮದ ಪ್ರಮುಖ ಆದ್ಯತೆಯಾಗಬೇಕಿದೆ.

ಕಾಫಿ ಬೆಳೆಯಷ್ಟೇ ಅಲ್ಲ, ಬ್ರಾಂಡ್‌ ಕೂಡಾ ಅಗತ್ಯ :  ಭಾರತದ ಕಾಫಿ ಉದ್ಯಮ ಈಗ ಕೇವಲ ಹೆಚ್ಚು ಕಾಫಿ ಬೆಳೆಯುವುದಕ್ಕೆಷ್ಟೇ ಅಲ್ಲ. ಈಗ ಕರಾವಳಿಗೂ ಕಾಫಿ ಬೆಳೆ ವಿಸ್ತರಣೆಯಾಗುತ್ತಿದೆ. ಹೀಗಾಗಿ ಎಲ್ಲೆಡೆಯೂ ಕಾಫಿ ಬೆಳೆಯುವುದರ ಜೊತೆಗೆ ಬ್ರಾಂಡಿಂಗ್‌ ಕೂಡಾ ಅಗತ್ಯ ಇದೆ. ಹೀಗಾದರೆ ಮಾತ್ರಾ ಮಾರುಕಟ್ಟೆಯೂ ಉಳಿಯಲು, ಬೆಳೆಯಲು ಸಾಧ್ಯವಿದೆ.

India’s coffee industry is witnessing strong growth, with coffee export earnings rising from around $1 billion in 2021-22 to more than $2 billion in 2025-26, according to Coffee Board CEO Karmarao. Indian coffee is currently exported to around 140 countries, with value-added coffee accounting for about 39% of exports. Domestic coffee demand has also increased by around 20%. Production stood at 3.73 lakh tonnes in 2025-26 and is expected to cross 4 lakh tonnes this year. The Coffee Board is also working on quality standards for production and processing and promoting an “Indi Coffee” brand to strengthen India’s identity in global coffee markets.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!
August 30, 2026
5:41 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌
August 29, 2026
6:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 29-08-2026 | ಕರ್ನಾಟಕದಲ್ಲಿ ಸೆಪ್ಟೆಂಬರ್‌ ಆರಂಭದಲ್ಲಿ ಮಳೆ ಚುರುಕಾಗುವ ಲಕ್ಷಣ…?
August 29, 2026
6:37 PM
by: ಸಾಯಿಶೇಖರ್ ಕರಿಕಳ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್
August 28, 2026
9:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror