ಕೃಷಿ ಭೂಮಿಯ ವಿಸ್ತೀರ್ಣ ಕಡಿಮೆಯಾಗಿದ್ದರೂ ದೇಶದ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಳದ ನಿರೀಕ್ಷೆ ವ್ಯಕ್ತವಾಗಿದೆ. 2025-26ನೇ ಸಾಲಿನಲ್ಲಿ ಭಾರತದ ಒಟ್ಟು ತೋಟಗಾರಿಕೆ ಉತ್ಪಾದನೆ 3869.15 ಲಕ್ಷ ಟನ್‌ಗಳಿಗೆ (386.91 ಮಿಲಿಯನ್ ಟನ್) ತಲುಪುವ ಅಂದಾಜು ಪ್ರಕಟವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4.36ರಷ್ಟು ಹೆಚ್ಚಳವಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
2025-26ನೇ ಸಾಲಿನ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆಯ ಮೂರನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದ ಅವರು ಈ ಮಾಹಿತಿ ನೀಡಿದ್ದಾರೆ. 2024-25ನೇ ಸಾಲಿನಲ್ಲಿ 3707.38 ಲಕ್ಷ ಟನ್ ಉತ್ಪಾದನೆಯಾಗಿದ್ದರೆ, ಈ ಬಾರಿ 161.77 ಲಕ್ಷ ಟನ್ ಹೆಚ್ಚುವರಿ ಉತ್ಪಾದನೆಯ ನಿರೀಕ್ಷೆಯಿದೆ.
ಕಡಿಮೆ ಪ್ರದೇಶದಲ್ಲಿ ಹೆಚ್ಚು ಉತ್ಪಾದನೆ : ಈ ಅಂಕಿಅಂಶಗಳ ಪ್ರಮುಖ ಅಂಶವೆಂದರೆ ತೋಟಗಾರಿಕೆ ಬೆಳೆಗಳ ಕೃಷಿ ಪ್ರದೇಶ ಕಡಿಮೆಯಾಗಿದ್ದರೂ ಉತ್ಪಾದನೆ ಹೆಚ್ಚಾಗುತ್ತಿರುವುದು. 2024-25ರಲ್ಲಿ ತೋಟಗಾರಿಕೆ ಬೆಳೆಗಳ ಒಟ್ಟು ಪ್ರದೇಶ 301.36 ಲಕ್ಷ ಹೆಕ್ಟೇರ್ ಇತ್ತು. 2025-26ರಲ್ಲಿ ಇದು 297.21 ಲಕ್ಷ ಹೆಕ್ಟೇರ್‌ಗೆ ಇಳಿಕೆಯಾಗುವ ಅಂದಾಜಿದೆ. ಅಂದರೆ ಸುಮಾರು 4.15 ಲಕ್ಷ ಹೆಕ್ಟೇರ್ ಪ್ರದೇಶ ಕಡಿಮೆಯಾಗಿದ್ದರೂ ಉತ್ಪಾದನೆಯಲ್ಲಿ ದಾಖಲೆ ಏರಿಕೆ ನಿರೀಕ್ಷಿಸಲಾಗಿದೆ.
ಕೃಷಿ ವೈವಿಧ್ಯೀಕರಣ, ಸುಧಾರಿತ ತಂತ್ರಜ್ಞಾನ, ಉತ್ತಮ ತಳಿಗಳು ಹಾಗೂ ರೈತಕೇಂದ್ರಿತ ನೀತಿಗಳು ಈ ಬೆಳವಣಿಗೆಗೆ ನೆರವಾಗಿವೆ ಎಂದು ಸಚಿವರು ಹೇಳಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಂದ ಹಣ್ಣು, ತರಕಾರಿ, ಹೂವು, ಮಸಾಲೆ, ತೋಟಗಾರಿಕೆ ಮತ್ತು ಔಷಧೀಯ ಬೆಳೆಗಳತ್ತ ರೈತರು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಕೃಷಿ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣವಾಗುತ್ತಿದೆ ಎಂದಿದ್ದಾರೆ.
ಹಣ್ಣುಗಳ ಉತ್ಪಾದನೆಯಲ್ಲಿ ಶೇ.4.60ರಷ್ಟು ಏರಿಕೆ : 2024-25ರಲ್ಲಿ 1176.49 ಲಕ್ಷ ಟನ್ ಇದ್ದ ಹಣ್ಣುಗಳ ಉತ್ಪಾದನೆ 2025-26ರಲ್ಲಿ 1230.66 ಲಕ್ಷ ಟನ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಶೇ.4.60ರಷ್ಟು ಹೆಚ್ಚಳವಾಗಿದೆ. ಬಾಳೆ, ಮಾವು, ಪಪ್ಪಾಯಿ, ಸೇಬು, ದಾಳಿಂಬೆ ಮತ್ತು ಹಲಸಿನ ಉತ್ತಮ ಉತ್ಪಾದನೆ ಇದಕ್ಕೆ ಪ್ರಮುಖ ಕಾರಣವಾಗಿದೆ.
ತರಕಾರಿ ಉತ್ಪಾದನೆಯೂ ಹೆಚ್ಚಳ : ತರಕಾರಿ ಕೃಷಿ ಪ್ರದೇಶ 117.91 ಲಕ್ಷ ಹೆಕ್ಟೇರ್‌ನಿಂದ 119.31 ಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗುವ ಅಂದಾಜಿದೆ. ಉತ್ಪಾದನೆಯು 2177.97 ಲಕ್ಷ ಟನ್‌ನಿಂದ 2272.68 ಲಕ್ಷ ಟನ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಶೇ.4.35ರಷ್ಟು ಹೆಚ್ಚಳ.
ಆಲೂಗಡ್ಡೆ ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆಯಾಗುವ ನಿರೀಕ್ಷೆಯಿದೆ. ಹಿಂದಿನ ವರ್ಷದ 585.71 ಲಕ್ಷ ಟನ್‌ಗೆ ಹೋಲಿಸಿದರೆ ಈ ಬಾರಿ 655.70 ಲಕ್ಷ ಟನ್ ಉತ್ಪಾದನೆಯಾಗಬಹುದು. ಇದು ಶೇ.11.95ರಷ್ಟು ಹೆಚ್ಚಳವಾಗಿದೆ. ಟೊಮೆಟೊ ಉತ್ಪಾದನೆ 205.99 ಲಕ್ಷ ಟನ್‌ನಿಂದ 214.11 ಲಕ್ಷ ಟನ್‌ಗೆ ಏರಿಕೆಯಾಗುವ ಅಂದಾಜಿದೆ. ಈರುಳ್ಳಿ ಉತ್ಪಾದನೆ 288.96 ಲಕ್ಷ ಟನ್ ತಲುಪುವ ನಿರೀಕ್ಷೆಯಿದೆ.
ಅಡಿಕೆ, ತೆಂಗು, ಗೋಡಂಬಿ ಬೆಳೆಗಾರರಿಗೆ ಮಹತ್ವದ ಮಾಹಿತಿ : ತೋಟಗಾರಿಕೆ ಕ್ಷೇತ್ರದ ಪ್ರಮುಖ ಭಾಗವಾಗಿರುವ ತೋಟದ ಬೆಳೆಗಳ ಉತ್ಪಾದನೆಯಲ್ಲೂ ಹೆಚ್ಚಳದ ನಿರೀಕ್ಷೆ ವ್ಯಕ್ತವಾಗಿದೆ. ಅಡಿಕೆ, ತೆಂಗು, ಗೋಡಂಬಿ, ವೀಳ್ಯದೆಲೆ ಮತ್ತು ಕೋಕೋ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಎರಡರಲ್ಲೂ ಏರಿಕೆಯಾಗುವ ಅಂದಾಜಿದೆ. ಈ ಬೆಳೆಗಳ ಒಟ್ಟು ಉತ್ಪಾದನೆ 2025-26ರಲ್ಲಿ ಶೇ.7.56ರಷ್ಟು ಹೆಚ್ಚಳವಾಗಿ 182.64 ಲಕ್ಷ ಟನ್ ತಲುಪುವ ನಿರೀಕ್ಷೆಯಿದೆ. ಕರಾವಳಿ ಮತ್ತು ಮಲೆನಾಡಿನ ರೈತರಿಗೆ ಪ್ರಮುಖವಾಗಿರುವ ಅಡಿಕೆ, ತೆಂಗು, ಗೋಡಂಬಿ ಹಾಗೂ ಕೋಕೋ ಬೆಳೆಗಳೂ ಈ ವಿಭಾಗದಲ್ಲಿ ಸೇರಿವೆ.
ಹೂವು, ಮಸಾಲೆ ಬೆಳೆಗಳಲ್ಲೂ ಬೆಳವಣಿಗೆ : ಹೂವಿನ ಉತ್ಪಾದನೆಯಲ್ಲಿ ಸುಮಾರು ಶೇ.14.45ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. 2024-25ರಲ್ಲಿ 42.65 ಲಕ್ಷ ಟನ್ ಇದ್ದ ಉತ್ಪಾದನೆ 2025-26ರಲ್ಲಿ 48.82 ಲಕ್ಷ ಟನ್‌ಗೆ ಏರಿಕೆಯಾಗಬಹುದು. ಹೂವಿನ ಕೃಷಿ ಪ್ರದೇಶ 4.10 ಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗುವ ಅಂದಾಜಿದೆ. ಸುಗಂಧ ಮತ್ತು ಔಷಧೀಯ ಸಸ್ಯಗಳ ಉತ್ಪಾದನೆ 9.01 ಲಕ್ಷ ಟನ್‌ನಿಂದ 9.28 ಲಕ್ಷ ಟನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.
ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ಅಂಕಿಅಂಶಗಳ ಪ್ರಕಾರ, ಅರಿಶಿನ, ಬೆಳ್ಳುಳ್ಳಿ, ಕರಿಬೇವು ಮತ್ತು ಏಲಕ್ಕಿಯ ಉತ್ತಮ ಇಳುವರಿಯಿಂದ ಮಸಾಲೆ ಬೆಳೆಗಳ ಉತ್ಪಾದನೆಯಲ್ಲೂ ಏರಿಕೆಯಾಗುವ ನಿರೀಕ್ಷೆಯಿದೆ. 2025-26ರಲ್ಲಿ ಮಸಾಲೆ ಬೆಳೆಗಳ ಒಟ್ಟು ಕೃಷಿ ಪ್ರದೇಶ 47.56 ಲಕ್ಷ ಹೆಕ್ಟೇರ್ ಆಗಿದ್ದು, ಉತ್ಪಾದನೆ 123.54 ಲಕ್ಷ ಟನ್ ತಲುಪುವ ಅಂದಾಜಿದೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಈ ಮೂರನೇ ಮುಂಗಡ ಅಂದಾಜುಗಳನ್ನು ಸಿದ್ಧಪಡಿಸಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚುತ್ತಿರುವುದು ಹಾಗೂ ರೈತರು ಬೆಳೆ ವೈವಿಧ್ಯೀಕರಣದತ್ತ ಸಾಗುತ್ತಿರುವುದು ಈ ಅಂಕಿಅಂಶಗಳಲ್ಲಿ ತಿಳಿಯುತ್ತದೆ.
ಅಮರಮೂಡ್ನೂರು ಗ್ರಾಮದ ಕೃಷಿಕ ಶಿವರಾಂ ಪೈಲೂರು ಅವರು 24 ದಿನಗಳಿಂದ ಪ್ರತಿದಿನ ಏಕಾಂಗಿಯಾಗಿ…
ನವೆಂಬರ್ 18ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್…
ಸುಳ್ಯದಲ್ಲಿ ನಡೆದ ಚಿತ್ರಜಾತ್ರೆ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ಕಲಾಕೃತಿಗಳನ್ನು ಮಾರಾಟ…
ನವೆಂಬರ್ 17ರಂದು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಚಳಿ ಮತ್ತು…
ನವೆಂಬರ್ 17ರಂದು ಕಾಸರಗೋಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ…
ಕೃಷಿಯಲ್ಲಿ ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ನೀಡುವ ಬದಲು ಕಡಿಮೆ ಪೋಷಕಾಂಶ ಬಳಕೆಯಲ್ಲಿ ಉತ್ತಮ…