Advertisement
ಸುದ್ದಿಗಳು

24 ದಿನಗಳಿಂದ ಸದ್ದಿಲ್ಲದೆ ಸಾಗುತ್ತಿದೆ ಸ್ವಚ್ಛತಾ ನಡಿಗೆ – ಈಗ ಮೌನ ಸಾಧಕರಿಗೆ ಗೌರವದ ಸಿದ್ಧತೆ!

Share

ಪ್ರತಿದಿನದ ನಡಿಗೆ. ಆದರೆ ಇದು ಆರೋಗ್ಯಕ್ಕಾಗಿ ನಡೆಯುವ ನಡಿಗೆ ಅಷ್ಟೇ ಅಲ್ಲ. ಸಮಾಜದ ಸ್ವಾಸ್ಥ್ಯಕ್ಕಾಗಿ, ಜನಹಿತಕ್ಕಾಗಿ, ಪರಿಸಕ್ಕಾಗಿ ನಡಿಗೆ. ರಸ್ತೆಯ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಖಾಲಿ ಬಾಟಲಿ, ಕಸಗಳನ್ನು ಹೆಕ್ಕುತ್ತಾ ಸಾಗುವ ಸ್ವಚ್ಛತೆಯ ನಡಿಗೆ. ಸದ್ದಿಲ್ಲದೆ ಆರಂಭವಾದ ಈ ಪ್ರಯತ್ನಕ್ಕೆ ಈಗಾಗಲೇ 24 ದಿನಗಳು ಕಳೆದಿವೆ. ಪ್ರತಿದಿನವೂ ಒಂದೊಂದು ಅನುಭವ, ಒಂದೊಂದು ಪಾಠ. ಹೀಗೆ ತಮ್ಮೂರಿನ ರಸ್ತೆಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಏಕಾಂಗಿಯಾಗಿ ಹೆಜ್ಜೆ ಹಾಕುತ್ತಿರುವವರು ಅಮರಮೂಡ್ನೂರು ಗ್ರಾಮದ ಪರಿಸರ ಕಾರ್ಯಕರ್ತ ಶಿವರಾಮ ಪೈಲೂರು.

ಶಿವರಾಮ ಪೈಲೂರು ಅವರಿಗೆ ಸ್ವಚ್ಛತಾ ಕಾರ್ಯ ಹೊಸತೇನಲ್ಲ. ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯ, ಪರಿಸರದ ಬಗ್ಗೆ ಕಾಳಜಿ ಹೊಂದಿದವರು. ಏಕಾಂಗಿಯಾಗಿ ಸ್ವಚ್ಛತಾ ದಂಡಯಾತ್ರೆ ನಡೆಸುತ್ತಿರುವ ನಾಗರಾಜ್ ಬಜಾಲ್ ಅವರ ಕಾರ್ಯವನ್ನು ಅವರು ಗಮನಿಸುತ್ತಾ ಬಂದಿದ್ದರು. ಈಚೆಗೆ ಸಂಪಾಜೆಯಿಂದ ಮಂಗಳೂರಿನವರೆಗೆ ನಾಗರಾಜ್ ಅವರು ನಡೆಸಿದ ಸ್ವಚ್ಛತಾ ದಂಡಯಾತ್ರೆಯಲ್ಲೂ ಶಿವರಾಮ ಪೈಲೂರು ಭಾಗವಹಿಸಿದ್ದರು. ಆ ಪ್ರಯತ್ನ ಮತ್ತು ಏಕಾಂಗಿಯಾಗಿ ಸಾಗುವ ಹಾದಿ ಅವರಿಗೆ ವಿಶೇಷವಾಗಿ ಪ್ರೇರಣೆ ನೀಡಿತ್ತು.

ನಾವು ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಪರಿಸರ ಕಾಳಜಿಯ ಕೆಲಸ ಮಾಡಬೇಕು ಎನ್ನುವುದು ಅವರ ಆಶಯ. ಹೀಗಾಗಿ ತಮ್ಮದೇ ಊರಿನಲ್ಲಿ ಸ್ವಚ್ಛತಾ ನಡಿಗೆ ಆರಂಭಿಸಲು ನಿರ್ಧರಿಸಿದರು. ಯಾರನ್ನೂ ಒತ್ತಾಯ ಮಾಡಿ ಬರುವಂತೆಯೂ ಆಗಬಾರದು, ಪರಿಸರದ ಮೇಲೆ ಕಾಳಜಿಯಿಂದ ಸ್ವಯಂಪ್ರೇರಣೆಯಿಂದಲೇ ಈ ಕೆಲಸಗಳು ಆರಂಭವಾಗಬೇಕು ಎನ್ನುವುದು ಶಿವರಾಮ ಅವರ ಅಭಿಪ್ರಾಯ.

ಆರಂಭದಲ್ಲಿ ಇದು ಸುಲಭದ ಕೆಲಸ ಎಂದುಕೊಂಡಿದ್ದರು. ಹಳ್ಳಿಯಾದ ಕಾರಣ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್, ಬಾಟಲಿ ಮತ್ತಿತರ ಕಸಗಳು ಹೆಚ್ಚಾಗಿ ಇರಲಾರವು ಎಂಬ ನಿರೀಕ್ಷೆಯೂ ಇತ್ತು. ಆದರೆ ನಡಿಗೆ ಆರಂಭವಾದ ಬಳಿಕ ವಾಸ್ತವ ಅರಿವಿಗೆ ಬಂತು. ನಗರಗಳಷ್ಟೇ ಅಲ್ಲ, ಹಳ್ಳಿಗಳೂ ಕಸದ ಸಮಸ್ಯೆಯಿಂದ ಹೊರತಾಗಿಲ್ಲ ಎಂಬುದು ಅವರ ಅನುಭವಕ್ಕೆ ಬಂತು. ಹೀಗಾಗಿ ಪ್ರತಿದಿನದ ನಡಿಗೆ ಮುಂದುವರಿಯಿತು.

ಏಕಾಂಗಿಯಾಗಿ ಆರಂಭವಾದ ಪ್ರಯತ್ನ : 24 ದಿನಗಳ ಈ ಪ್ರಯಾಣದಲ್ಲಿ ಪ್ರತಿದಿನವೂ ಒಂದೊಂದು ಅನುಭವ. ಈಚೆಗೆ ಒಂದು ದಿನ ಶಿವರಾಮ ಅವರೊಂದಿಗೆ ಇನ್ನಷ್ಟು ಮಂದಿ ಕೈಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷ. ಯುವ ಮುಂದಾಳು ತೇಜಸ್ವಿ ಕಡಪಳ ಅವರಂತಹ ಯುವಕರು ಉತ್ಸಾಹದಿಂದ ಭಾಗವಹಿಸಿದರೆ, ಅತ್ಯಂತ ಹಿರಿಯರಾದ 88 ವರ್ಷದ ಉಡುವೆಕೋಡಿ ಸುಬ್ಬಪ್ಪಯ್ಯ ಅವರಂತಹವರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಡಾ.ಸನತ್‌ ದೇರಾಜೆ, ಸಾಯಿಪ್ರಸಾದ್‌, ಸತೀಶ್‌ , ಡಾ.ಗೌರೀಶಂಕರ, ಹೇಮಾವತಿ, ಕೃಷ್ಣಕುಮಾರ್‌ ಪೈಲೂರು ಮೊದಲಾದವರು  ವಯಸ್ಸಿನ ಅಂತರವಿಲ್ಲದೆ ಪರಿಸರ ಕಾಳಜಿಗಾಗಿ ಜನರು ಒಂದಾಗಿರುವುದು ಹಲವರಿಗೆ ಪ್ರೇರಣೆಯಾಗಿದೆ. ಇದೀಗ ಸ್ಥಳೀಯ ಯುವತಿ ಮಂಡಲ, ಯುವಕ ಮಂಡಲಗಳೂ ಕೈಜೋಡಿಸಿರುವುದು ಉತ್ತಮ ಬೆಳವಣಿಗೆ.

ಇದು ಕೇವಲ ಕಸ ಹೆಕ್ಕುವ ಕೆಲಸಕ್ಕೆ ಸೀಮಿತವಾಗಿಲ್ಲ. ಕಸ ಸಂಗ್ರಹಿಸಲು ವಿಶೇಷ ಸಲಕರಣೆಗಳನ್ನು ಆನ್‌ಲೈನ್ ಮೂಲಕ ಖರೀದಿಸಿದ್ದಾರೆ. ಪ್ರತಿದಿನ ಸಂಗ್ರಹವಾಗುವ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವ ಮೂಲಕ ತ್ಯಾಜ್ಯ ನಿರ್ವಹಣೆಯ ಬಗ್ಗೆಯೂ ಜನರಿಗೆ ಮಾದರಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರತಿದಿನ ಎಷ್ಟು ದೂರ ನಡೆದಿದ್ದಾರೆ, ಎಷ್ಟು ಪ್ರಮಾಣದ ಕಸ ಸಂಗ್ರಹವಾಗಿದೆ ಎಂಬುದರ ಲೆಕ್ಕ ಇಡಲು ವಿಶೇಷ ಆ್ಯಪ್ ಕೂಡ ಸಿದ್ಧಪಡಿಸಿದ್ದಾರೆ. ಸ್ವಚ್ಛತಾ ನಡಿಗೆಯ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಬದ್ಧತೆಗೆ ಇದು ಸಾಕ್ಷಿಯಾಗಿದೆ.

ಸ್ವಚ್ಛತಾ ನಡಿಗೆಯಿಂದ ಪ್ರವಾಸಿ ತಾಣಗಳ ಸ್ವಚ್ಛತೆಯತ್ತ : ಈಗ ಈ ಪ್ರಯತ್ನವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಸಿದ್ಧತೆ ನಡೆದಿದೆ. ಜಲಪಾತಗಳು, ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಕಸಮುಕ್ತವಾಗಿಡುವ ಉದ್ದೇಶದಿಂದ ನಿರಂತರ ಸ್ವಚ್ಛತಾ ಅಭಿಯಾನಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿಯೇ ನವೆಂಬರ್ 22ರಂದು ಕುಕ್ಕುಜಡ್ಕ ಸಮೀಪದ ಅಮರಮೂಡ್ನೂರು ಗ್ರಾಮದ ಸುಂದರ ಚಾಮಡ್ಕ ಜಲಪಾತದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾಮಾನ್ಯ ಸ್ವಚ್ಛತಾ ಅಭಿಯಾನಗಳಿಗಿಂತ ಭಿನ್ನವಾಗಿ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುವ ನೈರ್ಮಲ್ಯ ಕಾರ್ಮಿಕರು ಹಾಗೂ ಗುಜರಿ ವ್ಯಾಪಾರಿಗಳನ್ನು ಗೌರವಿಸುವುದು ಈ ಕಾರ್ಯಕ್ರಮದ ಉದ್ದೇಶ. ಸಮಾಜದ ಗಮನಕ್ಕೆ ಬಾರದೆ ಉಳಿಯುವ ಇವರ ಕೊಡುಗೆಯನ್ನು ಗುರುತಿಸಿ ಗೌರವಿಸುವ ಪ್ರಯತ್ನ ಇದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿ ಮೂಲದ ಶಿವರಾಮ ಪೈಲೂರು ಕೃಷಿ ಕುಟುಂಬದಿಂದ ಬಂದವರು. ಸಾರ್ವಜನಿಕ ಸೇವೆಯಿಂದ ನಿವೃತ್ತರಾದ ಬಳಿಕ ಪರಿಸರ ಸಂರಕ್ಷಣೆಯನ್ನೇ ತಮ್ಮ ಪ್ರಮುಖ ಕಾಳಜಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿಂದೆ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ (ಪಿಆರ್‌ಒ), ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಉಪನಿರ್ದೇಶಕರಾಗಿ ಹಾಗೂ ಭಾರತದ ಪತ್ರಿಕೆಗಳ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಚಾಮಡ್ಕ ಜಲಪಾತ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರ ಗಮನ ಸೆಳೆದ ಬಳಿಕ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಜಲಪಾತದಲ್ಲಿ ಜನವರಿವರೆಗೂ ನೀರಿನ ಹರಿವು ಇರುವುದರಿಂದ ಪ್ರವಾಸಿಗರ ಆಗಮನ ಮುಂದುವರಿಯುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಯು ಇಲ್ಲಿ ಮೆಟ್ಟಿಲುಗಳು ಹಾಗೂ ವೀಕ್ಷಣಾ ತಾಣವನ್ನೂ ನಿರ್ಮಿಸಿದೆ.

ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳ ಸಮಸ್ಯೆಯೂ ಹೆಚ್ಚಾಗಿದೆ. ಜಲಪಾತದ ಸುತ್ತಮುತ್ತ ರಾಶಿ ರಾಶಿ ಖಾಲಿ ಬಾಟಲಿಗಳು ಬಿದ್ದಿರುವುದನ್ನು ಗಮನಿಸಿದಾಗ ಸ್ವಚ್ಛತಾ ಅಭಿಯಾನ ನಡೆಸುವ ಆಲೋಚನೆ ಮೂಡಿತು ಎಂದು ಶಿವರಾಮ ತಿಳಿಸಿದ್ದಾರೆ.

ಆದರೆ, ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದಕ್ಕೆ ಮಾತ್ರ ಅವರು ಸೀಮಿತವಾಗುವ ಮನಸ್ಸು ಮಾಡಲಿಲ್ಲ, ಸ್ವಚ್ಛತಾ ಕಾರ್ಯದ ಮತ್ತೊಂದು ಪ್ರಮುಖ ಭಾಗವಾಗಿರುವ ಗುಜರಿ ವ್ಯಾಪಾರಿಗಳ ಕೊಡುಗೆಯನ್ನು ಗುರುತಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಜನರು ಕಸವನ್ನು ಸಂಗ್ರಹಿಸಿದ ಬಳಿಕ ಅದನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಪ್ರದೇಶದಲ್ಲಿ ಮರುಬಳಕೆ ಮಾಡಬಹುದಾದ ತ್ಯಾಜ್ಯದ ಸುಮಾರು ಶೇ.60ರಷ್ಟನ್ನು ಸ್ಥಳೀಯ ಗುಜರಿ ವ್ಯಾಪಾರಿ ಅದ್ರಮ ಅವರು ಸಂಗ್ರಹಿಸುತ್ತಾರೆ. ಅವರ ಕಾರ್ಯವನ್ನು ಗಮನಿಸಿದಾಗ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಗುಜರಿ ವ್ಯಾಪಾರಿಗಳ ಪಾತ್ರ ಎಷ್ಟು ಮಹತ್ವದ್ದು ಎಂಬುದು ಅರಿವಾಯಿತು ಎಂದು ಶಿವರಾಮ ಪೈಲೂರು ಹೇಳುತ್ತಾರೆ. ಕಸ ಎಸೆಯದಂತೆ ವಿಂಗಡಿಸಿ ಕಸ ವಿಲೇವಾರಿ ಕೂಡಾ ಬಹುಮುಖ್ಯವಾದ ಭಾಗ.

ನೈರ್ಮಲ್ಯ ಕಾರ್ಮಿಕರು, ಗುಜರಿ ವ್ಯಾಪಾರಿಗಳಿಗೆ ಗೌರವ :  ‘ಸ್ವಚ್ಛತಾ ನಡಿಗೆ’ಯ ಅಂಗವಾಗಿ ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈರ್ಮಲ್ಯ ಕಾರ್ಮಿಕರು ಹಾಗೂ ಗುಜರಿ ಸಂಗ್ರಹಕಾರರನ್ನು ಗೌರವಿಸಲಾಗುತ್ತದೆ. ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ಅವರು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಒಬ್ಬ ವ್ಯಕ್ತಿ ಏಕಾಂಗಿಯಾಗಿ ಆರಂಭಿಸಿದ ಸಣ್ಣ ಪ್ರಯತ್ನ ಹೇಗೆ ಇತರರಿಗೆ ಪ್ರೇರಣೆಯಾಗಬಹುದು ಎಂಬುದಕ್ಕೆ ಶಿವರಾಮ ಪೈಲೂರು ಅವರ ಸ್ವಚ್ಛತಾ ನಡಿಗೆ ಒಂದು ಉದಾಹರಣೆ. ಸ್ವಚ್ಛತೆ ಎನ್ನುವುದು ಕೇವಲ ಅಭಿಯಾನದ ದಿನಕ್ಕೆ ಸೀಮಿತವಾಗದೆ ಪ್ರತಿದಿನದ ಬದುಕಿನ ಭಾಗವಾಗಬೇಕು. ಜೊತೆಗೆ ಸ್ವಚ್ಛತೆಯ ಹಿಂದೆ ಶ್ರಮಿಸುವವರನ್ನೂ ಸಮಾಜ ಗುರುತಿಸಬೇಕು ಎಂಬ ಸಂದೇಶವನ್ನು ಈ ಪ್ರಯತ್ನ ಸಾರುತ್ತಿದೆ.

Environmental activist Shivaram Pailoor from Amaramudnur village near Sullia has been undertaking a daily solo cleanliness walk for over 20 days, collecting plastic waste, discarded bottles and garbage from village roads. Inspired by the cleanliness march of Nagaraj Bajal, Shivaram has extended the initiative by encouraging community participation, segregating collected waste and maintaining daily records through a dedicated app. As part of his broader environmental initiative, a special programme titled ‘Swachhata Sambhrama’ will be held at Chamadka Waterfalls on November 22 to honour sanitation workers and scrap dealers for their contribution to waste management and environmental protection.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 17-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ; ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ!

ನವೆಂಬರ್ 18ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್…

2 hours ago

ಬಣ್ಣಗಳು ಕ್ಯಾನ್ವಾಸ್‌ನಲ್ಲಿ ಮಾತ್ರವಲ್ಲ, ನಮ್ಮ ಮನಸ್ಸುಗಳಲ್ಲೂ ಅರಳಲಿ…

ಸುಳ್ಯದಲ್ಲಿ ನಡೆದ ಚಿತ್ರಜಾತ್ರೆ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ಕಲಾಕೃತಿಗಳನ್ನು ಮಾರಾಟ…

5 hours ago

ಆಂಧ್ರ ಕರಾವಳಿಯತ್ತ ಅಕ್ವಾನ್ ಚಂಡಮಾರುತ

ನವೆಂಬರ್ 17ರಂದು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಚಳಿ ಮತ್ತು…

7 hours ago

ಹವಾಮಾನ ವರದಿ | 16-11-2026 | ಅಕ್ವಾನ್ ಚಂಡಮಾರುತ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ನವೆಂಬರ್ 17ರಂದು ಕಾಸರಗೋಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ…

1 day ago

ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ಬೇಡ, ಪೋಷಕಾಂಶ ಸಮರ್ಥ ಬೆಳೆಗಳತ್ತ ಗಮನ ಹರಿಸಿ

ಕೃಷಿಯಲ್ಲಿ ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ನೀಡುವ ಬದಲು ಕಡಿಮೆ ಪೋಷಕಾಂಶ ಬಳಕೆಯಲ್ಲಿ ಉತ್ತಮ…

1 day ago

ರಬ್ಬರ್ ಬೆಲೆಯಲ್ಲಿ ಮತ್ತೆ ಇಳಿಕೆ : 15 ದಿನಗಳಲ್ಲಿ ಕೆ.ಜಿಗೆ ₹17 ಕುಸಿತ

ನವೆಂಬರ್ ಮೊದಲ ವಾರದಲ್ಲಿ ಕೆ.ಜಿಗೆ ₹300 ದಾಟಿದ್ದ ರಬ್ಬರ್ ಧಾರಣೆ ನವೆಂಬರ್ 16ರಂದು…

1 day ago