ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

September 1, 2026
7:42 AM
ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, “ಉತ್ಪಾದಕತೆಯಿಂದ ಕಪ್‌ನವರೆಗೆ” ಎಂಬ ಪರಿಕಲ್ಪನೆಯಡಿ ಭಾರತದ ವಿವಿಧ ಕಾಫಿ ಪ್ರದೇಶಗಳ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಕಾಫಿ ರೈತರಿಂದ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಗ್ರಾಹಕರವರೆಗೆ ಇಡೀ ಕಾಫಿ ಮೌಲ್ಯ ಸರಪಳಿಯನ್ನು ಒಂದೇ ವೇದಿಕೆಗೆ ತರುವ ಈ ಉತ್ಸವ ಭಾರತೀಯ ಕಾಫಿಗೆ ಜಾಗತಿಕ ಬ್ರ್ಯಾಂಡ್ ಗುರುತು ಬಲಪಡಿಸುವ ಪ್ರಯತ್ನಕ್ಕೂ ವೇದಿಕೆಯಾಗಲಿದೆ.

ಭಾರತದ ಅತಿದೊಡ್ಡ ಕಾಫಿ ಉತ್ಸವ ಬೆಂಗಳೂರಿನಲ್ಲಿ 2027 ಫೆಬ್ರವರಿ 26 ರಿಂದ 28 ರವರೆಗೆ ನಡೆಯಲಿದೆ. ಜಯಮಹಲ್ ಮುಖ್ಯರಸ್ತೆಯಲ್ಲಿರುವ ಚಾಮರ ವಜ್ರದಲ್ಲಿ ನಡೆಯಲಿರುವ ಈ ಉತ್ಸವವು ಭಾರತೀಯ ಕಾಫಿಯ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉತ್ಪಾದಕತೆಯಿಂದ ಕಪ್‌ನವರೆಗೆ” ಎಂಬ ಪರಿಕಲ್ಪನೆಯಡಿ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಭಾರತದ ವಿವಿಧ ಕಾಫಿ ಬೆಳೆಯುವ ಪ್ರದೇಶಗಳ ವೈವಿಧ್ಯ, ಅಲ್ಲಿನ ಕಾಫಿಯ ವಿಶಿಷ್ಟ ಗುಣಗಳು ಮತ್ತು ದೇಶದ ಕಾಫಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ.

ತೋಟದಿಂದ ಗ್ರಾಹಕರ ಕಪ್‌ವರೆಗೆ : ಈ ಉತ್ಸವದ ವಿಶೇಷತೆ ಕೇವಲ ಕಾಫಿ ರುಚಿ ನೋಡುವ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ. ಕಾಫಿ ಬೆಳೆಯುವ ತೋಟದಿಂದ ಆರಂಭವಾಗಿ, ಕೊಯ್ಲು, ಸಂಸ್ಕರಣೆ, ಹುರಿಯುವಿಕೆ, ಗುಣಮಟ್ಟ, ಮೌಲ್ಯವರ್ಧನೆ ಮತ್ತು ಅಂತಿಮವಾಗಿ ಗ್ರಾಹಕರ ಕಪ್‌ವರೆಗೆ ಸಾಗುವ ಸಂಪೂರ್ಣ ಸರಪಳಿಯನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಇದರಿಂದ ಕಾಫಿ ಬೆಳೆಯುವ ರೈತರು, ಸಂಸ್ಕರಣಾ ವಲಯ, ರೋಸ್ಟರ್‌ಗಳು, ವ್ಯಾಪಾರಿಗಳು, ಕಾಫಿ ತಜ್ಞರು ಮತ್ತು ಗ್ರಾಹಕರ ನಡುವೆ ಸಂಪರ್ಕ ಹೆಚ್ಚಿಸುವ ಅವಕಾಶ ಸಿಗಬಹುದು.

ಭಾರತದ ಕಾಫಿಯ ವೈವಿಧ್ಯ ಒಂದೇ ಕಡೆ : ಭಾರತದ ಕಾಫಿಗೆ ಒಂದೇ ರೀತಿಯ ರುಚಿ ಅಥವಾ ಗುಣಮಟ್ಟವಿಲ್ಲ. ಕರ್ನಾಟಕದ ಬೆಟ್ಟ ಪ್ರದೇಶಗಳಿಂದ ಹಿಡಿದು ಕೇರಳ ಮತ್ತು ತಮಿಳುನಾಡಿನ ಕಾಫಿ ಪ್ರದೇಶಗಳವರೆಗೆ ಮಣ್ಣು, ಎತ್ತರ, ಮಳೆ, ಹವಾಮಾನ, ನೆರಳು, ಕಾಫಿ ಜಾತಿ ಮತ್ತು ಸಂಸ್ಕರಣಾ ವಿಧಾನಗಳಲ್ಲಿ ವ್ಯತ್ಯಾಸವಿದೆ. ಇದೇ ಕಾರಣಕ್ಕೆ ಒಂದೊಂದು ಪ್ರದೇಶದ ಕಾಫಿಗೂ ತನ್ನದೇ ಆದ ರುಚಿ ಮತ್ತು ಪರಿಮಳದ ವೈಶಿಷ್ಟ್ಯ ಸಿಗುತ್ತದೆ. ಈ ವೈವಿಧ್ಯವನ್ನು ಗ್ರಾಹಕರಿಗೆ ಮತ್ತು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಇಂತಹ ಉತ್ಸವಗಳು ನೆರವಾಗಬಹುದು.

ಕಾಫಿ ರೈತನಿಗೂ ಅವಕಾಶ : ಕಾಫಿ ಉದ್ಯಮದ ಬೆಳವಣಿಗೆಯಲ್ಲಿ ಬೆಳೆಗಾರರ ಪಾತ್ರ ಅತ್ಯಂತ ಮುಖ್ಯ. ಆದರೆ ಕಾಫಿ ಬೀಜದ ಅಂತಿಮ ಮೌಲ್ಯದಲ್ಲಿ ರೈತನ ಪಾಲು ಎಷ್ಟು ಎಂಬ ಪ್ರಶ್ನೆ ಸದಾ ಪ್ರಮುಖವಾಗಿದೆ. ಉತ್ಪಾದನೆಯ ಗುಣಮಟ್ಟ, ಉತ್ತಮ ಸಂಸ್ಕರಣೆ, ನೇರ ಮಾರುಕಟ್ಟೆ ಸಂಪರ್ಕ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ರೈತರು ಹೆಚ್ಚಿನ ಮೌಲ್ಯ ಪಡೆಯುವ ಅವಕಾಶ ಸೃಷ್ಟಿಸುವುದು ಇಂತಹ ಕಾರ್ಯಕ್ರಮಗಳ ಮತ್ತೊಂದು ಸಾಧ್ಯತೆ.  ಕಾಫಿ ಬೆಳೆಯುವ ರೈತನನ್ನು ಕೇವಲ ಕಚ್ಚಾ ಉತ್ಪನ್ನ ಪೂರೈಕೆದಾರನಾಗಿ ನೋಡುವ ಬದಲು, ಅಂತಿಮ ಕಪ್‌ನ ಮೌಲ್ಯ ಸರಪಳಿಯ ಪ್ರಮುಖ ಭಾಗವಾಗಿ ನೋಡುವುದು ಅಗತ್ಯ. “ಉತ್ಪಾದಕತೆಯಿಂದ ಕಪ್‌ನವರೆಗೆ” ಎಂಬ ಪರಿಕಲ್ಪನೆಯೇ ಈ ಉತ್ಸವದ ಕೇಂದ್ರವಾಗಿರುವುದರಿಂದ ಕಾಫಿ ರೈತನಿಂದ ಆರಂಭವಾಗುವ ಮೌಲ್ಯ ಸರಪಳಿಯನ್ನು ಗ್ರಾಹಕರಿಗೆ ಅರ್ಥ ಮಾಡಿಸುವ ಅವಕಾಶವೂ ಇದೆ.

‘ಇಂಡಿ ಕಾಫಿ’ಗೆ ಬ್ರ್ಯಾಂಡ್ ವೇದಿಕೆ? : ಇತ್ತೀಚೆಗೆ ಭಾರತೀಯ ಕಾಫಿಗೆ ಜಾಗತಿಕ ಗುರುತು ನೀಡುವ ಉದ್ದೇಶದಿಂದ ‘ಇಂಡಿ ಕಾಫಿ’ ಬ್ರ್ಯಾಂಡ್ ರೂಪಿಸುವ ಪ್ರಯತ್ನದ ಬಗ್ಗೆ ಕಾಫಿ ಮಂಡಳಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂತಹ ದೊಡ್ಡ ಕಾಫಿ ಉತ್ಸವವು ಭಾರತದ ಕಾಫಿಯ ವಿವಿಧ ಪ್ರಭೇದಗಳು, ಪ್ರದೇಶಗಳು ಮತ್ತು ಸಂಸ್ಕರಣಾ ವೈಶಿಷ್ಟ್ಯಗಳನ್ನು ದೇಶೀಯ ಮತ್ತು ಜಾಗತಿಕ ಗ್ರಾಹಕರಿಗೆ ಪರಿಚಯಿಸಲು ಉತ್ತಮ ವೇದಿಕೆಯಾಗಬಹುದು. ಕಚ್ಚಾ ಕಾಫಿ ರಫ್ತಿನಿಂದ ಮೌಲ್ಯವರ್ಧಿತ ಮತ್ತು ಬ್ರ್ಯಾಂಡ್ ಮಾಡಿದ ಭಾರತೀಯ ಕಾಫಿಯತ್ತ ಸಾಗುವ ಪ್ರಯತ್ನಕ್ಕೆ ಇಂತಹ ಕಾರ್ಯಕ್ರಮಗಳು ವೇಗ ನೀಡಬಹುದು.

ಬೆಂಗಳೂರು ಏಕೆ ಸೂಕ್ತ ವೇದಿಕೆ? :  ಬೆಂಗಳೂರು ದೇಶದ ಪ್ರಮುಖ ಕಾಫಿ ಬಳಕೆ ಮತ್ತು ಕಾಫಿ ಉದ್ಯಮದ ಕೇಂದ್ರಗಳಲ್ಲಿ ಒಂದಾಗಿದೆ. ನಗರದಲ್ಲಿ ವಿಶೇಷ ಕಾಫಿ ಅಂಗಡಿಗಳು, ರೋಸ್ಟರ್‌ಗಳು, ಕಾಫಿ ಉದ್ಯಮಿಗಳು ಮತ್ತು ಹೊಸ ತಲೆಮಾರಿನ ಕಾಫಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕಾಫಿ ಬೆಳೆಯುವ ಗ್ರಾಮೀಣ ಪ್ರದೇಶ ಮತ್ತು ಕಾಫಿ ಬಳಕೆಯ ನಗರ ಮಾರುಕಟ್ಟೆ ನಡುವೆ ಸೇತುವೆ ನಿರ್ಮಿಸಲು ಬೆಂಗಳೂರು ಸೂಕ್ತ ವೇದಿಕೆಯಾಗಬಹುದು.

ಕಾಫಿ ಉದ್ಯಮದ ಬೆಳವಣಿಗೆಯ ಹೊಸ ಹಂತ : ಭಾರತದ ಕಾಫಿ ರಫ್ತು ಈಗಾಗಲೇ ವೇಗ ಪಡೆಯುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದೇಶೀಯ ಬಳಕೆಯೂ ವಿಸ್ತರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಕಾಫಿ ಉತ್ಸವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಇದು ಉತ್ಪಾದನೆ , ಗುಣಮಟ್ಟ , ಸಂಸ್ಕರಣೆ , ರೋಸ್ಟಿಂಗ್ , ಬ್ರ್ಯಾಂಡಿಂಗ್ , ಗ್ರಾಹಕ ಎಂಬ ಸಂಪೂರ್ಣ ಕಾನ್ಸೆಪ್ಟ್‌ ಇಲ್ಲಿದೆ.

ಒಂದು ಕಪ್ ಕಾಫಿಯ ಹಿಂದೆ ಇರುವ ಭಾರತದ ಕಥೆ :  ಕಾಫಿ ಕೇವಲ ಒಂದು ಪಾನೀಯವಲ್ಲ. ಅದರ ಹಿಂದೆ ಬೆಟ್ಟ ಪ್ರದೇಶದ ಕೃಷಿ, ಮಳೆ, ನೆರಳು ಮರಗಳು, ಕಾರ್ಮಿಕರ ಶ್ರಮ, ಕೊಯ್ಲು, ಸಂಸ್ಕರಣೆ, ರೋಸ್ಟಿಂಗ್ ಮತ್ತು ಅಂತಿಮವಾಗಿ ಗ್ರಾಹಕರ ಕಪ್‌ವರೆಗೆ ಸಾಗುವ ಸರಪಳಿ ಇದೆ. ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಫಿ ಉತ್ಸವ ಈ ಸಂಪೂರ್ಣ ಪಯಣವನ್ನು ಒಂದೇ ವೇದಿಕೆಯಲ್ಲಿ ತೋರಿಸುವ ಪ್ರಯತ್ನವಾಗಿದೆ.  ಭಾರತೀಯ ಕಾಫಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಈ ಉತ್ಸವ ಭಾರತದ ಕಾಫಿಗೆ ಹೊಸ ಬ್ರ್ಯಾಂಡ್ ಗುರುತು ಕಟ್ಟುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆ ಮೂಡಿಸಿದೆ.

India’s largest coffee festival will be held in Bengaluru from 2027 February 26 to 28 at Chamar Vajra on Jayamahal Main Road, Coffee Board CEO Karmarao said. The festival will follow the theme “From Productivity to Cup” and showcase the diversity and richness of India’s coffee-growing regions. The event is expected to bring together different stages of the coffee value chain, from production and processing to roasting, branding and consumption, while highlighting the unique characteristics of Indian coffee and its growing global presence.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?
September 1, 2026
7:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
August 31, 2026
2:46 PM
by: ಸಾಯಿಶೇಖರ್ ಕರಿಕಳ
ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror