Advertisement
ಅಂಕಣ

ಭಾರತೀಯ ಪ್ರಜೆ

Share
ಸ್ವಾತಂತ್ರ್ಯ ಬಂದ  ಹೊಸದರಲ್ಲಿ ಭಾರತೀಯ ಪ್ರಜೆ ಹೇಗಿದ್ದಿರಬಹುದು? 1951ರಲ್ಲಿದ್ದ ಸಾಕ್ಷರತೆಯ ಪ್ರಮಾಣ 18% ಮಾತ್ರ, 2021 ರಲ್ಲಿ ಅದು 78% ಕ್ಕೆ ಏರಿದೆ. 1947ರಲ್ಲಿ ಗಳಿಸಿದ ಸ್ವಾತಂತ್ರ್ಯವು “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳದೇ” ಅಧಿಕಾರ ಎಂಬ ಹೊಸ ತತ್ವವು ಅದೆಷ್ಟು ಮಂದಿಗೆ ಅರ್ಥ ಆಗಿರಬಹುದು? ಮುಂದೆ 1951 ರ ಅಕ್ಟೋಬರ್ 25 ರಿಂದ 1952ರ  ಫೆಬ್ರವರಿ 21 ರ ನಡುವೆ 68 ಹಂತಗಳಲ್ಲಿ ನಡೆದ ಪ್ರಥಮ ಮಹಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಮತದಾನದ ಮಹತ್ವವು ಎಷ್ಟು ಮಂದಿಗೆ ತಿಳಿದಿದ್ದಿರಬಹುದು..! ತಮ್ಮ ಹೆಸರು ಲಿಸ್ಟ್ ನಲ್ಲಿದೆ ಎಂದು ಪಕ್ಷದ ಪ್ರಚಾರಕರು ಬಂದು ತಿಳಿಸಿ ಬೂತ್‍ಗೆ  ಬರಬೇಕೆಂದು  ಆಹ್ವಾನಿಸಿದಾಗ ಅಂದಿನ ಬಡ ನಿರಕ್ಷರಕುಕ್ಷಿಗಳಿಗೆ ಅಚ್ಚರಿಯಾಗಿರಲಿಕ್ಕಿಲ್ಲವೇ? “ನನ್ನದೆಂಥದಕ್ಕೆ ಓಟು” ಎಂತ ಕೇಳಿದವರೂ ಇರಬಹುದು. ಏಕೆಂದರೆ ಭಾರತ ಸ್ವತಂತ್ರಗೊಂಡಿದೆ ಎಂಬುದನ್ನು ಎರಡು ದಶಕಗಳ ಕಾಲ ತಿಳಿಯದಿದ್ದವರು ಪೂನಾದಿಂದ 100 ಕಿ.ಮೀ ದೂರದಲ್ಲಿದ್ದರು ಎಂದು ಒಂದು ಅಧ್ಯಯನದಲ್ಲಿ ಉಲ್ಲೇಖವಿದೆ. ಅಂದರೆ ಮಹಾ  ಚುನಾವಣೆಗಳ ಆರಂಭದ ಸರಣಿಗಳಲ್ಲಿ ಮತದ ಮೌಲ್ಯ ತಿಳಿದಿದ್ದವರಿಗಿಂತ ತಿಳಿಯದಿದ್ದವರೇ ಹೆಚ್ಚಿದ್ದರು. ಹಾಗಿದ್ದರೂ ಮೊದಲ ಚುನಾವಣೆಯಲ್ಲಿ 61.17 ಶೇಕಡಾ ಮತದಾನವಾಗಿತ್ತು. ಇಂದು  ಮತದಾನದ ಮಹತ್ವ ತಿಳಿಯದವರು ಯಾರೂ ಇಲ್ಲ ಎನ್ನಬಹುದು. ಕೆಲವರು ಮತವನ್ನು ಖರೀದಿಸುವ ಮತ್ತು ಕೆಲವರು ಅದನ್ನು ಮಾರುವುದರ ಲಾಭಗಳನ್ನು ತಿಳಿದಿದ್ದಾರೆ. ಇನ್ನು ಕೆಲವರು ವಿದ್ಯಾವಂತರಾಗಿದ್ದು ಮತದಾನ ಮಾಡದೆ ಮತವನ್ನು ಅಪಮೌಲ್ಯಗೊಳಿಸುತ್ತಾರೆ. ಹಾಗಾಗಿ ಈಗಲೂ ಮತದಾನದ ಪ್ರಮಾಣವು 1951 ರ 61% ದ ಆಸುಪಾಸಿನಲ್ಲೇ ಇದೆ. ಇದು ಭಾರತೀಯ ಪ್ರಜೆ ವಿದ್ಯಾವಂತನಾದರೂ ಪ್ರಜ್ಞಾವಂತನಾಗಿಲ್ಲ ಎನ್ನಲು ಸಾಲದೇ? ಅಥವಾ ಭಾರತೀಯ ಪ್ರಜೆ ಬೇಜವಾಬ್ದಾರಿ ವ್ಯಕ್ತಿ ಎನ್ನೋಣವೇ? ಅಥವಾ ಭಾರತೀಯ ಪ್ರಜೆಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ ಎನ್ನೋಣವೇ? ಈ ಸ್ವಾತಂತ್ರ್ಯಕ್ಕಿಂತ ಬ್ರಿಟಿಷರ ಆಡಳಿತವೇ ಚೆನ್ನಾಗಿತ್ತು ಎನ್ನುವ ಕೆಲವರ ಮಾತಿಗೆ ಇದು ಪುಷ್ಠಿ ನೀಡುತ್ತದೆಯೆ! ಇವೆಲ್ಲವೂ ಚಿಂತನೀಯ ಪ್ರಶ್ನೆಗಳು.
ಭಾರತೀಯ ಪ್ರಜೆಗೂ ಪ್ರಜಾಪ್ರತಿನಿಧಿಗೂ ಎಷ್ಟೊಂದು ಅಜಗಜಾಂತರವಿದೆಯೆಂದರೆ ಪ್ರತಿನಿಧಿಯು ಪ್ರಜೆಯ ಮತವನ್ನು ನಿರ್ದಾಕ್ಷಿಣ್ಯವಾಗಿ ಅಪಮೌಲ್ಯಗೊಳಿಸಬಹುದು. ಅಂದರೆ ತನಗೆ ಲಭಿಸಿದ ಬಹುಮತದ ಆಯ್ಕೆಯನ್ನು ತಿರಸ್ಕರಿಸಬಹುದು. ಭಾರತದಲ್ಲಿ ಅದು ಸಾಧ್ಯವಿದೆ. ಚುನಾವಣೆಯಲ್ಲಿ ಆಯ್ಕೆಯಾದ ಶಾಸಕನು ತನ್ನ ಸ್ಥಾನಕ್ಕೆ ರಾಜಿನಾಮೆ ಕೊಡದೆ ಸಂಸದನ ಸ್ಥಾನಕ್ಕೆ ಸ್ಪರ್ಧಿಸಬಹುದು. ಗೆದ್ದರೆ ಶಾಸಕನ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಸಂಸದನ ಸ್ಥಾನವನ್ನು ಉಳಿಸಿಕೊಳ್ಳುವ ಆಯ್ಕೆ ಇದೆ. “ಇಲ್ಲ, ಹಾಗಾಗುವುದಿಲ್ಲ ನೀವು ಸಂಸದನಾಗಿ ಹೋಗುವುದು ಬೇಡ, ಶಾಸಕನಾಗಿ ನಮ್ಮಲ್ಲೇ ಇರಬೇಕು. ನಾವು ಮತ ನೀಡಿದ್ದೇವೆ. ಅದು ವ್ಯರ್ಥವಾಗುತ್ತದೆ”  ಎಂದು ಪ್ರಜೆ ಹೇಳುವಂತಿಲ್ಲ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಕಾರಣದಿಂದ ಅಲ್ಲಿ ಪುನಃ ಚುನಾವಣೆ ನಡೆಸಬೇಕಾಗುತ್ತದೆ. ಅದರ ವೆಚ್ಚವನ್ನು ಜನರ ತೆರಿಗೆಯಿಂದ ಭರಿಸಲಾಗುತ್ತದೆ. ಇದರ ವಿರುದ್ಧ ಭಾರತೀಯ ಪ್ರಜೆ ಧ್ವನಿ ಎತ್ತುವುದಿಲ್ಲ. ಎತ್ತಿದರೂ ಅದಕ್ಕೆ ಯಾರೂ ಕಿವಿಕೊಡುವುದಿಲ್ಲ. ಬದಲಾಗಿ ಮತ್ತೊಮ್ಮೆ ಚುನಾವಣೆಗಾಗಿ ಅಬ್ಬರದ ಪ್ರಚಾರಕ್ಕೆ ಮಿತಿಮಿರಿ ಖರ್ಚು ಮಾಡುತ್ತಾರೆ. ಮತ್ತೆ ಅಧಿಕಾರ ಪಡೆದ ಬಳಿಕ ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಗಳಿಸುತ್ತಾರೆ. ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ದುಡಿಮೆ ಸಂಬಳವಿಲ್ಲದ ಆಳಿನಂತೆ ಲೆಕ್ಕಕ್ಕೆ ಸಿಗದೆ ಹೋಗುತ್ತದೆ. ಶಾಸಕ/ಸಂಸದರಾದವರು ಅಧಿಕಾರದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅವರಿಗೆ ಕಾರು, ಬಂಗ್ಲೆ, ಆಳುಕಾಳುಗಳು ಹೀಗೆ ಪ್ರಜೆಗಳ ತೆರಿಗೆಯ ಹಣದಿಂದ ಉಚಿತವಾಗಿ ಸಿಗುತ್ತದೆ. ಮೀಟಿಂಗ್‍ಗಳು ಮತ್ತು ಮನರಂಜನೆಗಳು ಅವರ ಸಮಯವನ್ನು ತಿನ್ನುತ್ತವೆ. ಹಾಗಾಗಿ ಪ್ರಜೆಗಳ ಅಹವಾಲುಗಳನ್ನಾಗಲೀ ಸಮಸ್ಯೆಗಳ ವರದಿಗಳನ್ನಾಗಲೀ ಓದಲು ಸಮಯ ಸಿಗುವುದಿಲ್ಲ.
ಒಬ್ಬ ಪ್ರಜೆಯಾಗಿದ್ದವನು ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕನೋ ಸಂಸದನೋ ಆದಾಗ ಸಿಕ್ಕುವ ಅಧಿಕಾರ ಮತ್ತು ಉಚಿತ ಸೌಲಭ್ಯಗಳು, ಅನುದಾನ ವಿತರಣೆ ಮತ್ತು ಗೌರವ ಪ್ರವೇಶಗಳು ಆತನಿಗೊಬ್ಬನಿಗೇ ಅಲ್ಲ, ಇಡೀ ಕುಟುಂಬಕ್ಕೆ ಸಿಗುತ್ತವೆ. ಆತ ಸತ್ತಾಗ ಮುಂದಿನ ಸ್ಪರ್ಧೆಯ ಅವಕಾಶವೂ ಕುಟುಂಬದವರಿಗೇ ಸಿಗುತ್ತದೆ. ಈಗ ಸಾಯಬೇಕಾಗಿಯೂ ಇಲ್ಲ. ಒಂದೇ ಕುಟುಂಬದ ಅಪ್ಪ, ಮಕ್ಕಳು, ಹೆಂಡತಿ, ಸೋದರಿ ಯಾರು ಬೇಕಾದರೂ ಏಕಕಾಲದಲ್ಲಿ ಪ್ರಜಾಪ್ರತಿನಿಧಿಗಳಾಗಲು ಅವಕಾಶ ಪಡೆಯುತ್ತಾರೆ. “ಪ್ರಜಾಪ್ರತಿನಿಧಿಯಾಗಲು ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶ” ಎಂಬ ಶಾಸನ ಬಾರದೆ ಭಾರತೀಯ ಪ್ರಜೆ ಆಡಳಿತದ ಸ್ಥಾನಗಳನ್ನು ಹೊಂದುವ ಕನಸು ಕಾಣುವಂತಿಲ್ಲ. ಅಪ್ಪ ಮಕ್ಕಳ ಆಡಳಿತದ ವೈರಸ್ ಎಲ್ಲಾ ಪಕ್ಷಗಳಿಗೂ ಹಬ್ಬುತ್ತಿದೆ.
ಭಾರತೀಯ ಪ್ರಜೆಯು ಅನೇಕ ಪ್ರತಿಕೂಲ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಸುಮ್ಮನಿರಬೇಕಾಗುತ್ತದೆ. ಉದಾಹರಣೆಗೆ ತಮ್ಮೂರ ಸರಕಾರಿ ಶಾಲೆಯಲ್ಲಿ ಕುಡುಕ ಶಿಕ್ಷಕರೊಬ್ಬರಿದ್ದರೆ ಅವರ ವಿರುದ್ಧ ಏನೂ ಮಾಡುವಂತಿಲ್ಲ. ಅಸಮಾಧಾನಿತ ಪ್ರಜೆಯು ತನ್ನ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಾನೆ ಅಷ್ಟೇ. ಇನ್ನು, ಕಂದಾಯ ಇಲಾಖೆಯಲ್ಲಿ ರಾಜಾರೋಷವಾಗಿ ಲಂಚ ನಡೆಯುತ್ತಿದ್ದರೆ ಅದನ್ನು ಪ್ರಶ್ನಿಸುವಂತಿಲ್ಲ. ಲಂಚ ಕೊಟ್ಟಾದರೂ ಕೆಲಸ ಮಾಡಿಸಿಕೊಂಡವನೇ ಜಾಣ ಎಂಬ ಗುಂಪಿಗೆ ಸೇರುವುದರಲ್ಲೇ ಸುರಕ್ಷಿತತೆ ಇದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಬೇಕಾದಲ್ಲಿ ಔಷಧಿಯ ಕ್ರಯ ಕೇಳಿದರೆ ಅದನ್ನೇ ಕಡಿಮೆ ವೆಚ್ಚದಲ್ಲಿ ಆಯಿತು ಎಂತ ತಿಳಿದುಕೊಂಡು ಪ್ರಜೆ ಬದುಕುತ್ತಾನೆ. ಅಪಘಾತ ಸಂಭವಿಸಿದಾಗ ಪರಿಹಾರ ನೀಡಲು ಗಾಯಗಳ ಪ್ರಮಾಣದ ಲೆಕ್ಕಾಚಾರ ಮಾಡುತ್ತ ಅಧಿಕಾರಿಗಳು ದಿನ ಕಳೆದರೆ ಭಾರತೀಯ ಪ್ರಜೆ ಕಾಯುವ ತಾಳ್ಮೆ ತೋರಬೇಕಾಗುತ್ತದೆ. ಸರಕಾರಿ ಆಡಳಿತದಲ್ಲಿ ಸುಧಾರಣೆ ತರುವ ದಿಸೆಯಲ್ಲಿ ಕಂಪ್ಯೂಟರ್ ಬಳಕೆಯನ್ನು ಹೆಚ್ಚಿಸಿದ ಕಚೇರಿಗಳಲ್ಲಿ ಸಿಗ್ನಲ್ ಸಮಸ್ಯೆ, ಸರ್ವರ್ ಡೌನ್, ಪಾಸ್‍ವರ್ಡ್, ಲಾಕ್ ಇತ್ಯಾದಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಲಂಚಕ್ಕಾಗಿ ಪೀಡಿಸುವವರನ್ನು ಸಹಿಸಬೇಕಲ್ಲದೆ ಭಾರತೀಯ ಪ್ರಜೆಗೆ ಅನ್ಯಮಾರ್ಗವಿಲ್ಲ. ತನ್ನ ಮಾನಭಂಗ ಮಾಡಿದ್ದಾರೆಂದು ಹೆಣ್ಣೊಬ್ಬಳು ದೂರು ಕೊಡುವುದೇ ಅಪರೂಪ. ಹಾಗೊಂದು ವೇಳೆ ಕೊಡಲು ಬಂದಾಗ ಯಾರ ಮೇಲೆ ದೂರು ಎಂಬುದರ ಲೆಕ್ಕಾಚಾರದಲ್ಲಿ ದೂರನ್ನು ಸ್ವೀಕರಿಸದೆ ಪೆÇೀಲಿಸರು ಆಕೆಗೆ ಬುದ್ಧಿ ಹೇಳಿ ಕಳಿಸಿದರೆ ಸಹಿಸಿಕೊಳ್ಳಬೇಕು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿ ಇದೆ. ಇಂತಹ ಅನೇಕ ದುರವಸ್ಥೆಗಳನ್ನು ಸಹಿಸುತ್ತಲೇ ಭಾರತೀಯ ಪ್ರಜೆ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಸಾಗುತ್ತಿದ್ದಾನೆ. ಚುನಾವಣೆಗಳಲ್ಲಿ ಮತದಾನ ಮಾಡಲು ಸರದಿಯ ಸಾಲಿನಲ್ಲಿ ನಿಲ್ಲುತ್ತಾನೆ. ಸಂವಿಧಾನದ ಬಗ್ಗೆ  ಮಾತಾಡುವವರು ಯಾರೂ ಸಂವಿಧಾನ ರಕ್ಷಕರಲ್ಲವೆಂದು ಗೊತ್ತಿದ್ದರೂ ಅವರ ಮಾತನ್ನು ನಂಬುತ್ತಿರುವಂತೆ ನಟಿಸುವವನೇ ಭಾರತೀಯ ಪ್ರಜೆ. ರಾಜಕಾರಣಿಗಳು ನೀಡುವ ಭರವಸೆಗಳೆಂದರೆ ನೀರಿನ ಗುಳ್ಳೆಗಳು ಎಂತ ಆತನಿಗೆ ಅರ್ಥವಾಗಿದೆ. ಮತಗಳನ್ನು ಸೆಳೆಯಲು ನೀಡಿದ ಗ್ಯಾರಂಟಿಗಳ ಔಚಿತ್ಯವನ್ನು ಆತ ಅರಿತಿದ್ದಾನೆ.
ಒಂದು ಹೆದ್ದಾರಿಯನ್ನು ಅಗೆದಿಟ್ಟು ಅದನ್ನು ಸರಿಗೊಳಿಸಲು ಕಾಲಮಿತಿಯ ಚೌಕಟ್ಟಿಲ್ಲದೆ ಯಾರಿಗೂ ಉತ್ತರದಾಯಿತ್ವ ಇಲ್ಲದೆ ಕಂಟ್ರಾಕ್ಟರ್ ವರ್ಷಗಳನ್ನೇ ಕಳೆದರೂ ಸಮಯ ಕೊಡಬಲ್ಲ ಉದಾರತೆಯನ್ನು ಭಾರತೀಯ ಪ್ರಜೆ ತೋರಿಸುತ್ತಿದ್ದಾನೆ. ಒಂದು ದಿನ ರಿಪೇರಿಗಾಗಿ ವಿದ್ಯುತ್ ನಿಲುಗಡೆ ಘೋಷಿಸಿ ಇನ್ನುಳಿದ ದಿನಗಳಲ್ಲೂ ವಿದ್ಯುತ್ತನ್ನು ನೀಡದ ಎಕ್ಸ್ಕಾಂಗಳ ಉಡಾಫೆ ವರ್ತನೆ ಈಗ ಆತನಿಗೆ ಅಭ್ಯಾಸವಾಗಿದೆ. ಇನ್ನು, ವಿಶ್ವವಿದ್ಯಾಲಯಗಳಲ್ಲೇ ಭ್ರಷ್ಟಾಚಾರ ನಡೆಯುವ ವಾರ್ತೆಗಳಿಂದ ತಲ್ಲಣಗೊಳ್ಳದ ಸ್ಥಿತಪ್ರಜ್ಞನಂತೆ ಭಾರತೀಯ ಪ್ರಜೆ ಕ್ಷಮಾಶೀಲನಾಗಿದ್ದಾನೆ. ಅಂತಹ ವಿ.ವಿ.ಯ ಕುಲಪತಿಗಳು ನೀಡುವ ಸನ್ನಡತೆಯ ಉಪದೇಶಾತ್ಮಕ ಭಾಷಣಗಳನ್ನು ಆಲಿಸುತ್ತಾನೆ. ಅಲ್ಲಿ ಕಲಿತ ತನ್ನ ಮಕ್ಕಳು ಪಡೆಯುವ ಸರ್ಟಿಫಿಕೇಟು ಉದ್ಯೋಗಾರ್ಹತೆಗೆ ರಹದಾರಿ ಎಂದು ನಂಬುತ್ತಾನೆ. ಇದಲ್ಲದೆ ಸರಕಾರಿ ಖಚೇರಿಗಳಲ್ಲಿರುವ ಭ್ರಷ್ಟಾಚಾರಕ್ಕೆ ಕುರುಡರಾಗುವುದು ಬಿಟ್ಟು ಬೇರೆ ಮಾರ್ಗವಿಲ್ಲ ಎಂಬುದನ್ನು ಆತನಿಗೆ ಎಲ್ಲಾ ಪಕ್ಷಗಳು ಮನಗಾಣಿಸಿವೆ. ಹೀಗಾಗಿ ಭಾರತೀಯ ಪ್ರಜೆ ತನಗೊಂದು ಪ್ರಭುತ್ವದ ಪಾತ್ರ ಇದೆಯೆಂಬುದನ್ನೇ ಮರೆತಿದ್ದಾನೆ.
ಈ ಮರವೆಯನ್ನು ಹೋಗಲಾಡಿಸಿ ಭಾರತೀಯ ಪ್ರಜೆಯನ್ನು ಎಬ್ಬಿಸಿ ನಿಲ್ಲಿಸಲು ಸಾಧ್ಯವಿರುವ ಒಂದೇ ಒಂದು ವಿಧಾನವೆಂದರೆ Civil Society Movement. ವಸ್ತುನಿಷ್ಟವಾಗಿ ಪಕ್ಷಾತೀತವಾಗಿ ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಸಂಘಟಿತರಾಗಿ ಪ್ರತಿಭಟಿಸುವುದೇ ನಾಗರಿಕ ಸಮಾಜದ ಚಳುವಳಿ. ಮೂಲತಃ ಸ್ವಾತಂತ್ರ್ಯ ಹೋರಾಟವನ್ನು ಜೀವಂತಗೊಳಿಸಿದ್ದೇ ಅಂತಹ ಚಳುವಳಿಗಳು. ಆದರೆ ಸ್ವಾತಂತ್ರ್ಯದ ಬಳಿಕ ಇಂತಹ ಚಳುವಳಿಗಳೇ ಮರೆಯಾದುವು. ಏಕೆಂದರೆ ವಿರೋಧ ಪಕ್ಷಗಳು Civil Society Movement ನ ಪಾತ್ರವನ್ನು ವಹಿಸಬೇಕಿತ್ತು. ಆದರೆ ಅವು ಆಳುವ ಪಕ್ಷವನ್ನು ಎಚ್ಚರಿಸುವ ಹೊಣೆ ಹೊರುತ್ತವೆ ಎಂಬ ವಿಶ್ವಾಸವೇ ಭಾರತೀಯ ಪ್ರಜೆಯನ್ನು ಮೋಸಗೊಳಿಸಿದೆ. ಹಾಗಾಗಿ ಈಗ ಚುನಾವಣೆಗೆ ನಿಂತವರಲ್ಲಿ ಯಾರು ಕಡಿಮೆ ಭ್ರಷ್ಟರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕದಾಗಿದೆ. ಅಮೇರಿಕಾದಲ್ಲೂ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪೊ ಅಥವಾ ಕಮಲಾ ಹ್ಯಾರಿಸ್ಸೋ ಎಂಬ ಪ್ರಶ್ನೆಗೆ ಅಲ್ಲಿನ ಪ್ರಜೆಗಳಿಗೆ ಉತ್ತರ ಸಿಕ್ಕದಾಗಿದೆಯಂತೆ.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

21 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

21 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

1 day ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

2 days ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

2 days ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago