“ನಿಮ್ಮಲ್ಲಿ ಸ್ವಲ್ಪ ಮಾತಾಡೋದಿದೆ ಸರ್” ಎಂದು ಮೆಸೇಜ್ ಹಾಕಿ ನನ್ನ ಸಮಯ ಗೊತ್ತು ಮಾಡಿಕೊಂಡು ನನ್ನ ವಿದ್ಯಾರ್ಥಿಯಾಗಿದ್ದ ಸುಜಾತ ಬಂದಳು. ಆಕೆ M.S.W. ಪದವೀಧರೆಯಾಗಿದ್ದಳು. ಇನ್ನೂ ಕೆಲಸಕ್ಕೆ ಸೇರಿರಲಿಲ್ಲ. ಏನಾದರೂ ಉದ್ಯೋಗದ ವಿಚಾರ ಇರಬಹುದೆಂದು ನಾನು ಎಣಿಸಿದ್ದೆ. ಆದರೆ ಆಕೆ ಮುಂದಿಟ್ಟ ವಿಚಾರವೇ ಬೇರೆ. “ಸರ್, ನನ್ನ ಅಪ್ಪ ಮದುವೆ ಮಾಡುವ ಆಲೋಚನೆ ಮಾಡುತ್ತಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ. ಏನು ಮಾಡುವುದೆಂದು ಗೊತ್ತಾಗ್ತಿಲ್ಲ ಸರ್” ಎಂದಳು. “ಯಾರು ಆ ಭಾಗ್ಯಶಾಲಿ” ಎಂದು ಜೋಕ್ ಬೆರೆಸಿ ಕೇಳಿದೆ. “ಆತ ಅಮೇರಿಕಾದಲ್ಲಿದ್ದಾರೆ ಸರ್. ದೊಡ್ಡ ಕೆಲಸದಲ್ಲಿದ್ದಾರೆ. ಅಪ್ಪ ಒಪ್ಪಿ ಬಿಟ್ಟಿದ್ದಾರೆ. ನಾನೇನು ಮಾಡಲಿ ಸಾರ್” ಎಂದಳು. “ಯಾಕೆ ನೀನು ಬೇರೆ ಯಾರನ್ನಾದರೂ ಲವ್ ಮಾಡುತ್ತಿದ್ದೀಯಾ, ಹೇಳಲು ಹೆದರಿಕೆಯಾ?” ಎಂದು ವಿಚಾರಿಸಿದೆ. “ಇಲ್ಲ ಸರ್, ಹಾಗೇನಿಲ್ಲ. ನನಗೆ ಲವ್ ಮಾಡಲು ಕೂಡ ಹೆದ್ರಿಕೆ ಆಗ್ತದೆ. ಮದುವೆಯಾದ್ರೆ ಜೀವನ ನರಕ ಆಗ್ತದೋ ಏನೋ ಎಂತ ಭಯ” ಎಂಬ ಸತ್ಯ ಬಿಚ್ಚಿಟ್ಟಳು.
“ನಿನಗೆ ಮದುವೆ ಆಗದಿದ್ದರೂ ಜೀವನ ನರಕ ಆಗಬಹುದು. ಮದುವೆಯ ಬಳಿಕ ಸ್ವರ್ಗ ಅಥವಾ ನರಕಗಳನ್ನು ನಾವು ಮಾಡಿಕೊಳ್ಳುವುದು. ಆ ಎರಡೂ ಎಲ್ಲರ ಜೀವನದಲ್ಲಿ ಅಲ್ಪ ಸ್ವಲ್ಪ ಇರುತ್ತವೆ. ನರಕ ಆಗುವ ಸಂಗತಿಗಳನ್ನು ಮೇನೇಜ್ ಮಾಡಿಕೊಂಡರಾಯಿತು.”
“ಅದೆಲ್ಲಾ ನನ್ನಿಂದ ಆಗ್ಲಿಕ್ಕಿಲ್ಲ ಸರ್. ಅಪ್ಪನಲ್ಲಿ ಮದುವೆ ಬೇಡಾ ಅಂತಾ ಹೇಗೆ ಹೇಳುವುದು ಸರ್.”
ಅರೆ! ಇದು ದೊಡ್ಡ ಕಷ್ಟದ ವಿಷಯವಾಯ್ತಲ್ಲಾ! ಇವಳೇನು ಅವಿದ್ಯಾವಂತೆಯಲ್ಲ. M.S.W ವಿದ್ಯಾರ್ಥಿನಿಯಾಗಿದ್ದಾಗ ಮುಂದಾಳಾಗಿ ವಿಚಾರಗೋಷ್ಠಿಗಳನ್ನು ನಡೆಸಿದವಳು. ಪ್ರಾಜ್ಞರಲ್ಲಿ, ಅಧಿಕಾರಿಗಳಲ್ಲಿ ಮಾತಾಡಿ ಆಮಂತ್ರಿಸಿದವಳು, ಕಾಲೇಜಿನ ಪ್ರಾಚಾರ್ಯರ ಮೆಚ್ಚುಗೆ ಗಳಿಸಿದವಳು. ಈಗ ಮದುವೆ ಅಂದ್ರೆ ಹೆದ್ರಿಕೆ ಅನ್ನುತ್ತಿದ್ದಾಳೆ. ಆದ್ರೆ ಪ್ರಸ್ತಾಪದಲ್ಲಿರುವ ಮದುವೆಯನ್ನು ನಿಲ್ಲಿಸುವುದು ನನ್ನ ಕೆಲಸವಲ್ಲ. ಹಾಗಾಗಿ ಆಕೆಯಲ್ಲಿ ಹುಡುಗನ ಬಗ್ಗೆ ವಿಚಾರಿಸಿದೆ. ಆತನ ಕುಟುಂಬದ ಬಗ್ಗೆಯೂ ಆಕೆಯಿಂದಲೇ ತಿಳಿದುಕೊಂಡೆ. ಯಾವುದೇ ಆಕ್ಷೇಪಗಳನ್ನು ಗುರುತಿಸುವಂತೆಯೂ ಇರಲಿಲ್ಲ. ಆದರೆ ಮದುವೆ ಎಂದರೆ ‘ತನ್ನನ್ನು ತಾನು ಕಳೆದು ಕೊಳ್ಳುವುದು’ ಎಂಬ ಒಂದು ಚಿಂತನೆ ಅವಳನ್ನು ಕಾಡುತ್ತಿತ್ತು.
ಮದುವೆ ಆಗಿ ನರಕ ಅನುಭವಿಸುತ್ತಿರುವ ಅನೇಕ ಹೆಣ್ಮಕ್ಕಳ ಕತೆಗಳು ಆಕೆಯ ಅರಿವಿನ ಬುಟ್ಟಿಯಲ್ಲಿದ್ದುವು. ಆದರೆ ಮದುವೆ ಆಗಿ ನರಕ ಅನುಭವಿಸುತ್ತಿರುವ ಅನೇಕ ಗಂಡಂದಿರ ಉದಾಹರಣೆಗಳೂ ನನ್ನಲ್ಲಿದ್ದುವು. ಹಾಗೆಂದು ಹೆಂಡತಿಯನ್ನು ಉಸಿರುಗಟ್ಟಿಸುವ ಸ್ಥಿತಿಗೆ ತಳ್ಳುವ ಕೆಲಸ ಗಂಡಂದಿರದ್ದಲ್ಲ, ಹಾಗೆಯೇ ಗಂಡನ ಜೀವನವನ್ನು ಹೊರೆಯಾಗುವಂತೆ ಮಾಡುವ ಕೆಲಸ ಹೆಂಡತಿಯರದ್ದೂ ಅಲ್ಲ. ಅವರಿಬ್ಬರೂ ಹೊಂದಿಕೊಂಡು ಅನೇಕ ವ್ಯತ್ಯಾಸಗಳಿಗೆ ಸಂಬಂಧಿಸಿ ಹೊಂದಾಣಿಕೆ ಮಾಡಿಕೊಂಡು ಇಬ್ಬರ ಜೀವನವನ್ನು ಸುಖಮಯ ಮಾಡಿಕೊಳ್ಳುವ ಗುರಿ ಇರಬೇಕು. “ಮದುವೆ ಎಂದರೆ ಒಬ್ಬರು ಇನ್ನೊಬ್ಬರ ಜೀವನವನ್ನು ಕಸಿದುಕೊಳ್ಳುವುದಲ್ಲ, ಬದಲಾಗಿ ಜೀವನವನ್ನು ಪೂರ್ಣಗೊಳಿಸಿಕೊಳ್ಳುವುದು. ಈ ಎಚ್ಚರ ದಂಪತಿಗಳಲ್ಲಿದ್ದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಎಲ್ಲರೂ ಹೀಗೆ ಮುಕ್ತ ಮನಸ್ಸನ್ನು ಹೊಂದಿರುತ್ತಾರೆಂದೇನೂ ಇಲ್ಲ. ಹಾಗಾಗಿ ಮುಂದಾಗಿ ಚರ್ಚಿಸಿಕೊಳ್ಳುವುದು ಒಳ್ಳೆಯದು. ಅದಕ್ಕೆ ನೀನು ಸಿದ್ಧಳಾಗಬೇಕು. ಅಂತಹ ಒಂದು ಭೇಟಿಯನ್ನು ವ್ಯವಸ್ಥೆ ಮಾಡಲು ನಿನ್ನ ಅಪ್ಪನಿಗೆ ನಾನು ಹೇಳಬಲ್ಲೆ. ಆದರೆ ನಿನ್ನ ಭಯದ ನೆಪದಲ್ಲಿ ಮದುವೆ ನಿಲ್ಲಿಸುವುದು ನನಗೆ ಸರಿಯೆನಿಸುವುದಿಲ್ಲ” ಎಂದು ಹೇಳಿದೆ.
ಆದರೆ ಇಲ್ಲಿ ಬರೆದಷ್ಟು ವೇಗದಲ್ಲಿ ಸುಜಾತಾಳನ್ನು ಸರಿ ದಾರಿಗೆ ತರಲು ಸಾಧ್ಯವಾಗಲಿಲ್ಲ. ಆಕೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಳು. ಕೊನೆಗೂ ಅವಳ ಸಮಸ್ಯೆಯನ್ನು ಅವಳೇ ಬಗೆಹರಿಸಿಕೊಳ್ಳಬೇಕೆಂಬ ನನ್ನ ಸಲಹೆಯನ್ನು ಒಪ್ಪಿದಳು. Zoom ನಲ್ಲಿ ಹುಡುಗನೊಂದಿಗೆ ಮಾತಾಡಿದಳು. ಆತನೂ ತೆರೆದ ಮನಸ್ಸಿನಿಂದ ಮಾತಾಡಿದನಂತೆ. ಮುಂದೆ ಮದುವೆ ಜರಗಿತು. ನಾನೂ ಭಾಗವಹಿಸಿದೆ. ಈಗ ಅಮೇರಿಕಾದಲ್ಲಿ ಸುಖವಾಗಿದ್ದಾರೆ. ಒಂದು ಮಗುವೂ ಆಗಿದೆ. ಆಕೆ ಉದ್ಯೋಗ ಮಾಡುತ್ತಿಲ್ಲ. ಪೂರ್ಣಾವಧಿ ಗೃಹಲಕ್ಷ್ಮಿಯಾಗಿ ಈಗ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾಳೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ. ಹೀಗೆ ತಮ್ಮ ಮದುವೆಯನ್ನು ಸುಖಮಯ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಹೊಂದಾಣಿಕೆಯ ಬದುಕಿನಲ್ಲಿ ಗಂಡ ಹೆಂಡತಿ ಪರಸ್ಪರ ಪೂರಕರಾಗಿದ್ದು ಹೊಸ ಸಾಧನೆಗಳನ್ನು ಮಾಡಿದವರಿದ್ದಾರೆ. ಹಾಗೆಂದು ಸುಖದ ಮಟ್ಟದಲ್ಲಿ ವ್ಯತ್ಯಾಸಗಳಿರಬಹುದು. ಮದುವೆಯ ಬಳಿಕ ಕೆಲಸ ಮಾಡುವುದಿಲ್ಲ ಎಂತ ಇದ್ದ ಮಡದಿಯರು ಕುಟುಂಬ ಭದ್ರತೆಗಾಗಿ ತಮ್ಮ ಉದ್ಯೋಗವನ್ನು ಮುಂದುವರಿಸಿರಬಹುದು. ಕೆಲಸಕ್ಕೆ ಸೇರುವುದಿಲ್ಲ ಎಂತ ಇದ್ದವರು ಸೇರಿರಬಹುದು. ಇನ್ನು ಕೆಲವರು ಗಂಡನ ಇಚ್ಛೆಯನ್ನು ಮನ್ನಿಸಿ ಉದ್ಯೋಗಕ್ಕೆ ರಾಜಿನಾಮೆ ನೀಡಿರಬಹುದು. ನಗರದ ಹುಡುಗ ಬೇಡ ಅಂತಿದ್ದವರು ಬೆಂಗಳೂರಿನ ಹುಡುಗನನ್ನೇ ಮದುವೆಯಾಗಿ ಬದುಕುವ ಅನಿವಾರ್ಯತೆಗೆ ಹೊಂದಿಕೊಂಡಿರಬಹುದು. ಇನ್ನು ಅನೇಕ ಗಂಡಂದಿರು ಹೆಂಡತಿಯ ಇಚ್ಛೆಗಾಗಿ ತಮ್ಮ ವೆಚ್ಚಗಳಲ್ಲಿ ಹೊಸ ಹಾದಿ ಹಿಡಿದಿರಬಹುದು. “ಮಗು ಯಾವಾಗ” ಎಂಬ ಬಗ್ಗೆ ಯಾರಾದರೊಬ್ಬರು ಹಟ ಬಿಟ್ಟು ಒಪ್ಪಂದಕ್ಕೆ ಬಂದಿರಬಹುದು. ಗಂಡನ ಹೆತ್ತವರ ಜೊತೆಯಲ್ಲಿ ಬಾಳುವ ಬಗ್ಗೆ ಹೆಂಡತಿಯ ಮಾತು ನಡೆದಿರಬಹುದು. ಹೀಗೆ ಅನೇಕ ವಿಧದ ಹೊಂದಾಣಿಕೆಗಳಿಂದ ಗೆದ್ದ ಅಥವಾ ‘ಸೋತರೂ ಪರವಾಗಿಲ್ಲ’ ಎಂಬ ಭಾವನೆಗಳೊಂದಿಗೆ ಪರಸ್ಪರ ನಿಷ್ಠೆಯಿಂದ ದಾಂಪತ್ಯ ಜೀವನದ ಯಶಸ್ಸನ್ನು ಕಾಣುವ ಅನೇಕಾನೇಕ ಕುಟುಂಬಗಳಿವೆ. ಈ ಗಂಡು ಹೆಣ್ಣಿನ ಸಂಬಂಧ ಮದುವೆಯಲ್ಲೇ ಸುಖ ಕಾಣಬೇಕಾದ ವಾಸ್ತವಿಕತೆಗೆ ಹೊಂದಿಕೊಂಡು ಬಾಳುವೆ ನಡೆಸುವವರ ಉದಾಹರಣೆಗಳು ಭರಪೂರ ಇವೆ.
ಆದರೆ ಮದುವೆ ಸುಖವಲ್ಲವೆಂಬ ಮೆಸೇಜ್ ನೀಡುವ ಅನೇಕ ಘಟನೆಗಳು ದಿನನಿತ್ಯವೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಸುಪಾರಿ ನೀಡಿ ಹೆಂಡತಿಯನ್ನು ಗಂಡ ಕೊಲ್ಲಿಸಿದ, ವಿವಾಹೇತರ ಸಂಬಂಧ ಬೆಳೆಸಿ ಹೆಂಡತಿಯು ಗಂಡನನ್ನೇ ಚಟ್ಟಕ್ಕೇರಿಸಿದ ಘಟನೆಗಳು ವರದಿಯಾಗುತ್ತಿವೆ. ತನ್ನ ಸೌಂದರ್ಯವನ್ನೇ ಬಂಡವಾಳವಾಗಿ ಬಳಸಿಕೊಂಡು ಅಕ್ರಮವಾಗಿ ಗೆಳೆಯರನ್ನು ಸಂಪಾದಿಸಿ ಮಕ್ಕಳನ್ನು ಮರೆತು ಪ್ರಿಯಕರನೊಂದಿಗೆ ಓಡಿ ಹೋದ ಪತ್ನಿಯರು ವಿವಾಹವನ್ನು ವಿಫಲಗೊಳಿಸಿದ್ದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಸ್ವಪ್ರತಿಷ್ಠೆಯನ್ನೇ ದೊಡ್ಡದು ಮಾಡಿಕೊಂಡು ಮಕ್ಕಳ ಸಹಿತ ಹೊಳೆಗೆ ಹಾರಿದ ಅಮ್ಮಂದಿರು, ಸಿಟ್ಟಿನಲ್ಲಿ ತವರಿಗೆ ಹೋದವಳನ್ನು ಅಲ್ಲೇ ಬಿಟ್ಟು ಮಕ್ಕಳನ್ನು ಮಾತ್ರ ಎತ್ತಿಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡು ಹೆಂಡತಿಗೆ ಬುದ್ಧಿ ಕಲಿಸಲು ಹೋಗಿ ಮದುವೆಯನ್ನೇ ಭಂಗಗೊಳಿಸಿದ ಗಂಡ, ಹೀಗೆ ಅಮಾಯಕ ಮಕ್ಕಳ ಸಾವಿಗೆ ಕಾರಣವಾಗುವ ವಿವಾಹ ವೈಫಲ್ಯ, ಗಂಡನನ್ನು ಬಿಟ್ಟು ಜೊತೆಗಿದ್ದ ಸ್ನೇಹಿತನಿಂದಲೇ ಕೊಲೆಯಾಗಿ ಬಾಳನ್ನೇ ಕಳೆದುಕೊಂಡ ಪತ್ನಿಯ ದುರಂತ, ಪ್ರೇಮಿಯ ಪ್ರೇರಣೆಯಿಂದ ಹೆಂಡತಿಯು ಸ್ವಲ್ಪ ಸ್ವಲ್ಪವೇ ವಿಷಪೂರಿತ ಆಹಾರ ನೀಡಿ ಗಂಡನನ್ನು ರೋಗಿಷ್ಟನಾಗಿಸಿ ಕೊಲ್ಲುವ ಸಂಚು ಹೂಡಿದ ಪ್ರಕರಣ, ಹಿರಿಯರು ನಿಶ್ಚೈಸಿದ ವಿವಾಹಕ್ಕೆ ಒಪ್ಪಿ ಮದುವೆಯ ಹಿಂದಿನ ರಾತ್ರಿ ಚಿನ್ನಾಭರಣಗಳೊಂದಿಗೆ ಪಲಾಯನ ಮಾಡಿದ ವಧು, ವಿವಾಹದ ಬಳಿಕ ಮೊದಲ ರಾತ್ರಿಯಲ್ಲೇ ತನ್ನನ್ನು ಮುಟ್ಟದಿರುವಂತೆ ಗಂಡನಿಗೆ ನಿರ್ಬಂಧ ಹೇರುವ ಹೆಂಡತಿ, ತನಗೆ ಬೇರೆ ಗೆಳೆಯನಿರುವುದಲ್ಲದೆ ಹೆತ್ತವರ ಒತ್ತಾಯಕ್ಕೆ ಮದುವೆಯಾಗಿರುವುದಾಗಿ ಘೋಷಿಸಿ ಗಂಡನನ್ನು ಗಾಬರಿಗೊಳಿಸುವ ಮದುಮಗಳು, ಇಂತಹ ಒಂದು ಸಂದರ್ಭದಲ್ಲಿ ಗಂಡನೇ ಎದುರು ನಿಂತು ಹೆಂಡತಿಯನ್ನು ಆಕೆಯ ಗೆಳೆಯನಿಗೇ ಧಾರೆ ಎರೆದು ಕೊಟ್ಟ ಘಟನೆ ಮುಂತಾಗಿ ವಿವಾಹ ಮುರಿದು ಬಿದ್ದು ಜೀವನವೇ ಮೂರಾಬಟ್ಟೆಯಾದ ಇನ್ನೂ ಅನೇಕ ಘಟನೆಗಳು ಹೊಸತು ಹೊಸತಾಗಿ ನಿತ್ಯವೂ ಒಂದೆರಡು ವರದಿಯಾಗುತ್ತಲೇ ಇವೆ. ನಗರಗಳಲ್ಲಷ್ಟೇ ಅಲ್ಲ, ಗ್ರಾಮೀಣ ವಲಯದಲ್ಲಿಯೂ ಕೇಳಿ ಬರುತ್ತಿವೆ. ಹೆತ್ತವರ ಮಾತನ್ನು ಮೀರಿ ಗೆಳೆಯನೊಂದಿಗೆ ಪಲಾಯನ ಮಾಡಿ ಎಲ್ಲೆಲ್ಲೋ ಹೋಗಿ ಮದುವೆ ಮಾಡಿಕೊಂಡು ಪೆÇೀಲೀಸರ ರಕ್ಷಣೆ ಕೇಳಿ ನಿತ್ಯ ಆತಂಕದಲ್ಲಿ ಬದುಕುವವರ ಕಥೆಗಳು ಒಂದೆಡೆಯಾದರೆ ಪ್ರೇಮಪಾಶಕ್ಕೆ ಬಿದ್ದು ಗಂಡಿನ ಹಿಂದೆ ಓಡಿ ಹೋಗಿ ಮದುವೆಯೂ ಆಗದೆ ‘ಲಿವಿಂಗ್ ಟುಗೆದರ್’ ಮಾಡಿ ಕೊನೆಗೆ ಹತ್ಯೆಯಾಗಿ ದೇಹ ತುಂಡು ತುಂಡುಗಳಾಗಿ ಎಸೆಯಲ್ಪಟ್ಟು ಕೊನೆಗಾಣುವ ಪ್ರಕರಣಗಳು ನಿಜಕ್ಕೂ ಸಮಾಜದಲ್ಲಿ ಸಂಸ್ಕಾರಗಳ ಶಿಕ್ಷಣವು ಎಷ್ಟೊಂದು ಕುಸಿದಿದೆ ಎನ್ನುವುದರತ್ತ ಬೊಟ್ಟು ಮಾಡುತ್ತದೆ.
ನಿನ್ನೆ (15-10-2025) ವರದಿಯಾದ ಒಂದು ಘಟನೆ ಮಾರ್ಮಿಕವಾದುದು. ಅದು ವಿವಾಹದ ಸಂದರ್ಭ, ನೈತಿಕ ನಿಯಮಗಳು ಮತ್ತು ಕಾನೂನು ಹೇಗೆ ವ್ಯಕ್ತಿಗಳನ್ನು ಬಲಿ ಪಡೆಯುತ್ತವೆ ಎಂಬುದರತ್ತ ಗಮನ ಸೆಳೆಯುತ್ತದೆ. ಒಬ್ಬ ಸದೃಢ, ಸುಂದರ, ಸುಸಂಸ್ಕೃತ ವೈದ್ಯನು ಮದುವೆಯಾಗಿ ಕೊಲೆಗಡುಕನಾಗಿ ವಿವಾಹ ಬಂಧನದಿಂದ ಕಾರಗೃಹದ ಬಂಧನಕ್ಕೆ ಒಳಗಾದ ಘಟನೆ. ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ. ಸುದಾಮ (ಹೆಸರು ಬೇರೆ) ಅದೇ ಆಸ್ಪತ್ರೆಯಲ್ಲಿ ಬೇರೊಂದು ವಿಭಾಗದಲ್ಲಿ ವೈದ್ಯೆಯಾಗಿದ್ದ ಡಾ. ಗುಣವತಿ (ಹೆಸರು ಬೇರೆ) ಯವರನ್ನು ಮದುವೆಯಾಗುತ್ತಾರೆ. ಇಬ್ಬರೂ ವೈದ್ಯರಾಗಿ ಒಂದೇ ಆಸ್ಪತ್ರೆಯಲ್ಲಿದ್ದುದರಿಂದ ಹೆತ್ತವರಿಂದ ಒಪ್ಪಿಗೆ ಸಿಗುವುದು ಕಷ್ಟವಾಗಲಿಲ್ಲ. ಆದರೆ ಮದುವೆಯಾಗಿ ಮೂರು ತಿಂಗಳಲ್ಲೇ ಡಾ. ಗುಣವತಿ ಸಾವಿಗೀಡಾಗುತ್ತಾರೆ. ಅದಕ್ಕೆ ಆಕೆಗಿದ್ದ ಒಂದು ಅಪರೂಪದ ಕಾಯಿಲೆಯೇ ಕಾರಣವಾಗಿತ್ತು. ವಿವಾಹದ ಸಂದರ್ಭದಲ್ಲಿ ಅಂತಹ ಕಾಯಿಲೆಯ ಬಗ್ಗೆ ಆಕೆಯಾಗಲೀ ಆಕೆಯ ಹೆತ್ತವರಾಗಲೀ ಡಾ. ಸುದಾಮರಿಗೆ ಏನೇನೂ ತಿಳಿಸಿರಲಿಲ್ಲ. ಆದರೆ ವಿವಾಹದ ಬಳಿಕ ಆ ಕಾಯಿಲೆಯು ಮೇಲಿಂದ ಮೇಲೆ ಮರುಕಳಿಸಿದ್ದು ಡಾ. ಸುದಾಮರಿಗೆ ಜೀವನವು ಮರುಭೂಮಿಯಾಯಿತು. ಸ್ವತಃ ವೈದ್ಯರಾಗಿದ್ದ ಇಬ್ಬರಿಂದಲೂ ಪರಿಹಾರ ಹುಡುಕಲಾಗದಷ್ಟು ವಿಶಿಷ್ಟವಾದ ಆ ಕಾಯಿಲೆಯಿಂದಾಗಿ ಡಾ. ಸುದಾಮರಿಗೆ ತನ್ನ ವೃತ್ತಿ ಸಂಬಂಧಿತ ಕೆಲಸಗಳನ್ನು ಮಾಡಲೂ ಅಡಚಣೆಯಾಯಿತು. ವೈವಾಹಿಕ ಜೀವನದ ಆನಂದವೇ ಮರೀಚಿಕೆಯಾದಾಗ ಡಾ. ಸುದಾಮ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಗೆ ಒಂದು ಅರಿವಳಿಕೆ ಇಂಜೆಕ್ಷನ್ ನೀಡಿದರು. ಆಕೆಯ ಸ್ಥಿತಿ ತೀವ್ರಗೊಂಡಾಗ ಆಸ್ಪತ್ರೆಯೊಂದಕ್ಕೆ ಸೇರಿಸಿದರು. ಅಲ್ಲಿ ಡಾ. ಗುಣವತಿ ಮೃತರಾಗಿದ್ದಾರೆಂದು ವೈದ್ಯರು ಹೇಳಿದರು. ಪೋಸ್ಟ್ ಮಾರ್ಟಂ ಮಾಡಿ ಹೆಣ ಬಿಟ್ಟುಕೊಟ್ಟಾದ ಬಳಿಕ ಉತ್ತರ ಕ್ರಿಯೆಗಳನ್ನು ನಡೆಸಿದರು. ತಮಗೆ ತಿಳಿದಿದ್ದರೂ ಕಾಯಿಲೆಯ ಬಗ್ಗೆ ಹೇಳದೆ ಮುಚ್ಚಿಟ್ಟಿದ್ದ ತಪ್ಪಿತಸ್ಥ ಮನಸ್ಸಿನಿಂದಾಗಿ ಹೆತ್ತವರು ಮಗಳ ಸಾವಿನ ಬಗ್ಗೆ ಯಾವುದೇ ತಗಾದೆ ತೆಗೆಯಲಿಲ್ಲ. ವಿಷಯ ಅಲ್ಲಿಗೆ ಸ್ಥಬ್ಧವಾಗಿದದ್ದು ಮರಣೋತ್ತರ ಪರೀಕ್ಷೆಯ ಫಲಿತಾಂಶ ಬಂದಾಗ ಪೊಲೀಸರು ಜಾಗೃತರಾದರು. ಮೃತ ಗುಣವತಿಗೆ ಅರಿವಳಿಕೆ ಚುಚ್ಚು ಮದ್ದಿನಲ್ಲಿ ವಿಷ ಬೆರೆಸಲಾಗಿತ್ತೆಂದು ವರದಿ ಹೇಳಿತ್ತು. ಇದನ್ನು ನಿರಾಕರಿಸಲಾಗದೆ ಡಾ. ಸುದಾಮ ತಪ್ಪನ್ನು ಒಪ್ಪಿಕೊಂಡರು. ಅವರನ್ನು ಅರೆಸ್ಟ್ ಮಾಡಿದ ಪೊಲೀಸರೊಂದಿಗೆ ತಲೆತಗ್ಗಿಸಿ ಹೋಗುತ್ತಿದ್ದ ಆ ಸುಂದರ ಕಾಯದ ಸುದೃಢ ವೈದ್ಯರು ತಮ್ಮ ಪತ್ನಿಯನ್ನು ಕೊಲೆ ಮಾಡುವ ನಿರ್ಧಾರದ ಬದಲು ತಮಗೆ ಆಗಿರುವ ಮೋಸದ ಬಗ್ಗೆ ಬಹಿರಂಗ ಪಡಿಸಿ ನ್ಯಾಯಾಲಯದಿಂದ ಡೈವೋರ್ಸ್ ಪಡೆದಿದ್ದರೆ ತಾನು ಕಷ್ಟಪಟ್ಟು ಸಂಪಾದಿಸಿದ ವಿದ್ಯೆಯ ಸದುಪಯೋಗ ಅವರಿಗೂ ಆಗುತ್ತಿತ್ತು, ರೋಗಿಗಳಿಗೂ ಆಗುತ್ತಿತ್ತು. ಅಲ್ಲದೆ ಅವರ ಹೆತ್ತವರು ಮಗನಿಗೆ ವಿದ್ಯೆ ಕಲಿಸಿದ ತಮ್ಮ ತ್ಯಾಗದ ಗೌರವವನ್ನು ಆಂಶಿಕವಾಗಿಯಾದರೂ ಪಡೆಯುತ್ತಿದ್ದರು. ಆದರೆ ಅದೂ ಸುಲಭದ ಹಾಗೂ ಕ್ಷಿಪ್ರವಾಗಿ ಪರಿಹಾರ ಪಡೆಯುವ ದಾರಿಯಲ್ಲವೆಂಬುದನ್ನು ನಾವು ನ್ಯಾಯಾಲಗಳಲ್ಲಿ ಸಮಯ ಕಳೆಯುವ ವಾದಿ ಪ್ರತಿವಾದಿಗಳ ಸಂಕಟಗಳಿದ ತಿಳಿಯಬಹುದು. ಹಾಗಿದ್ದರೂ ನ್ಯಾಯವನ್ನು ಕೈಗೆತ್ತಿಕೊಳ್ಳುವುದಕ್ಕಿಂತ ನ್ಯಾಯಾಲಯದಲ್ಲೇ ಪರಿಹಾರ ಕಂಡಿದ್ದರೆ ಒಳ್ಳೆಯದಿತ್ತು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel