ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ-ಮೊಗ್ರ ಪ್ರದೇಶದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಮುಂದೆ ನಾಗರಿಕ ಕ್ರಿಯಾ ಸಮಿತಿ ವತಿಯಿಂದ ಅ.28 ರಂದು ಶಾಂತಿಯುತವಾಗಿ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಲಾಗಿದೆ.
ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯ ಸಮಗ್ರ ದುರಸ್ತಿ ಹಾಗೂ ಊರಿನ ಮತದಾನ ಕೇಂದ್ರ ಹಾಗೂ ಊರಿನ ಪ್ರಮುಖ ಕೇಂದ್ರವಾದ ಮೊಗ್ರ ಸಂಪರ್ಕಕ್ಕೆ ಸೇತುವೆ ನಿರ್ಮಾಣ ಪ್ರಮುಖವಾದ ಬೇಡಿಕೆಯಾಗಿದೆ.
ಮತದಾನ ಆರಂಭವಾದಾಗಿನಿಂದಲೂ ಮತದಾನ ಕೇಂದ್ರ ಸಂಪರ್ಕಿಸಲು ಜನರು ಮೊಗ್ರ ಹೊಳೆ ದಾಟಿಯೇ ಸಾಗುತ್ತಿದ್ದರು. ಊರಿನ ಶಾಲೆಗೆ ವಿದ್ಯಾರ್ಥಿಗಳು ಮರದ ಪಾಲ ದಾಟಿ ಅಪಾಯದ ಸ್ಥಿತಿಯಲ್ಲೇ ದಾಟುತ್ತಿದ್ದರು.ಆದರೆ ಇದುವರೆಗೂ ಸೇತುವೆ ನಿರ್ಮಾಣ ಸಾಧ್ಯವಾಗಲಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು, ವಿವಿಧ ಮಾಧ್ಯಮಗಳು ಶಾಲೆಯ ಮಕ್ಕಳು ಅಪಾಯದಲ್ಲಿ ಈ ಹೊಳೆ ದಾಟುವ ಬಗ್ಗೆಯೂ ವರದಿ ಮಾಡಿದ್ದವು. ಆದರೆ ಪ್ರತೀ ಬಾರಿ ಚುನಾವಣೆಯ ಸಂದರ್ಭ ಪ್ರಸ್ತಾವನೆಯ ನೆಪ ಇರಿಸಿ ಸೇತುವೆ ಆಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಇದುವರೆಗೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸೇತುವೆಯ ಭರವಸೆ ಬೇಡ, ಅನುದಾನ ಮಂಜೂರಾದ ದಾಖಲೆ ಬೇಕು ಎಂದು ಒತ್ತಾಯಿಸಿದ್ದಾರೆ. ಈ ಭಾಗವು ಊರಿನ ಕೇಂದ್ರ ಸ್ಥಳವೂ ಆಗಿದೆ. ಇತಿಹಾಸ ಪ್ರಸಿದ್ಧ ದೈವಸ್ಥಾನ, ಆರೋಗ್ಯ ಉಪಕೇಂದ್ರವೂ ಇಲ್ಲಿದೆ. ಆದರೆ ಇದುವರೆಗೂ ಸೇತುವೆ ಮಾತ್ರಾ ರಚನೆಯಾಗದೇ ಇರುವುದುಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದರು.
ಅದೇ ರೀತಿ ಗುತ್ತಿಗಾರು – ಕಮಿಲ – ಬಳ್ಪ ರಸ್ತೆಯ ಅವ್ಯವಸ್ಥೆಯೂ ಸುಮಾರು 15 ವರ್ಷಗಳಿಂದ ಇದೆ. ಇದುವರೆಗೂ ಸಂಪೂರ್ಣ ಡಾಮರೀಕರಣ ಹಾಗೂ ತೇಪೆ ಕಾರ್ಯವೂ ಆಗಿಲ್ಲ. ಈಗ ರಸ್ತೆಯಲ್ಲಿ ಓಡಾಡದ ಸ್ಥಿತಿ ಇದೆ. ಇಲ್ಲೂ ಪ್ರತೀ ಬಾರಿ ಚುನಾವಣೆ ಹತ್ತಿರ ಬರುವ ವೇಳೆ ಸ್ವಲ್ಪ ಸ್ವಲ್ಪ ಕಾಮಗಾರಿ ಮಾಡಿ ಚುನಾವಣೆ ಬಳಿಕ ಮರೆತೇ ಹೋಗುವ ಸನ್ನಿವೇಶವೇ ಇದುವರೆಗೆ ಆಗಿದೆ. ಹೀಗಾಗಿ ರಸ್ತೆ ಸಂಪೂರ್ಣ ಡಾಮರೀಕರಣವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇದಕ್ಕಾಗಿ ಸೂಕ್ತ ದಾಖಲೆಗಳು ಬೇಕು ಎಂದು ಒತ್ತಾಯಿಸಿದ್ದಾರೆ.
ಈ ಎರಡೂ ವಿಷಯಗಳ ಬಗ್ಗೆ ಮೊಗ್ರ ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನದ ವಠಾರದಲ್ಲಿ ಬುಧವಾರ ಗ್ರಾಮಸ್ಥರ ಸಭೆ ನಡೆಯಿತು. ಪಕ್ಷಾತೀತವಾಗಿ ನಡೆದ ಸಭೆಯಲ್ಲಿ ಯುವಕರರೇ ಹೆಚ್ಚಾಗಿ ಭಾಗವಹಿಸಿದ್ದರು. ಊರಿನ ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮೊಗ್ರ ಸೇತುವೆ ಈಡೇರಿಕೆ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಗೆ ಸಂಬಂಧಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಅ.28 ರಂದು ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಲಾಯಿತು. ಬಳಿಕ ಹಂತ ಹಂತವಾಗಿ ವಿವಿಧ ಹೋರಾಟ ನಡೆಸಲು ನಿರ್ಧರಿಸಲಾಗಿದ್ದು, ಇದುವರೆಗಿನ ಆಶ್ವಾಸನೆಗಳು ಕೇಳಲಾಗಿದೆ. ಆದರೆ ಈ ಬಾರಿ ಯಾವುದೇ ಆಶ್ವಾಸನೆಗಳ ಬದಲಾಗಿ ಸೂಕ್ತ ದಾಖಲೆಗಳು ಅಗತ್ಯವಾಗಿದೆ ಎಂದು ಸಭೆಯಲ್ಲಿ ಬೇಡಿಕೆ ವ್ಯಕ್ತವಾಯಿತು. ಈ ಹಿಂದೆ ಮೊಗ್ರದಲ್ಲಿ, ಕಮಿಲದಲ್ಲಿ ಪಕ್ಷಾತೀತವಾಗಿ ಮೊಗ್ರ ಸೇತುವೆ ಈಡೇರಿಕೆ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಗೆ ಸಂಬಂಧಿಸಿ ಸಭೆ ನಡೆದಿತ್ತು. ಮುಂದೆ ಬಳ್ಳಕ್ಕ ಪ್ರದೇಶದ ಯುವಕರ ತಂಡದ ಸಭೆಯೂ ನಡೆಯಲಿದೆ. ಊರಿನ ಎಲ್ಲಾ ಸಾರ್ವಜನಿಕ ಬೇಡಿಕೆ ಈಡೇರಿಕೆಗೆ ಪಕ್ಷಾತೀತವಾಗಿ ದ್ವನಿ ಎತ್ತಲು ಯುವಕರ ತಂಡ ನಿರ್ಧರಿಸಿದೆ.
ಸಭೆಯಲ್ಲಿ ಊರಿನ ಪ್ರಮುಖರಾದ ಕಾರ್ಯಪ್ಪ ಗೌಡ ಚಿಕ್ಮುಳಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಯಾವುದೇ ರಾಜಕೀಯವಿಲ್ಲದೆ ಇಂದು ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಗಂಗಾಧರ ಭಟ್ ಪುಚ್ಚಪ್ಪಾಡಿ ಮಾತನಾಡಿ ಪಕ್ಷಾತೀತವಾಗಿ ನಡೆಸುವ ಹೋರಾಟದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಸಭೆಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಮಹೇಶ್ ಪುಚ್ಚಪ್ಪಾಡಿ, ಸುಧಾಕರ ಮಲ್ಕಜೆ, ಜೀವನ್ ಮಲ್ಕಜೆ, ಧನಂಜಯ ಮಲ್ಕಜೆ, ಬಿಟ್ಟಿ ಬಿ ನೆಡುನೀಲಂ, ಅಚ್ಚುತ ಮಲ್ಕಜೆ, ವಸಂತ ಮೊಗ್ರ, ವಿಶ್ವನಾಥ ಕೇಂಬ್ರೋಳಿ, ಮೊದಲಾದವರಿದ್ದರು.
ಬುಧವಾರ ನಡೆದ ಸಭೆಯಲ್ಲಿ ವಿದ್ಯುತ್ ಕಡಿತ ಉಂಟಾದಾಗ ಗ್ರಾಮಸ್ಥರೆಲ್ಲರ ಮೊಬೈಲ್ ಬೆಳಕು ನೀಡಿದಾಗ ಆ ದೃಶ್ಯ ಕಂಡುಬಂದದ್ದು ಹೀಗೆ
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…